ಜೋಗಿ ಹೊಸ ಕಥೆ: ತಥಾಸ್ತು

jogi221 ಜೋಗಿ

ದಿನೇದಿನೇ ಬೋಳಾಗುತ್ತಿರುವ ತಲೆಯಅಕಾಲದಲ್ಲಿ ಬೆಳ್ಳಗಾಗುತ್ತಿದ್ದ ಮೀಸೆಯಪರಮಸಾಲಗಾರನಾದದಿನಕರ ಉಪಾಧ್ಯಾಯನ ಶಿವಭಕ್ತಿ ನಶಿಸುತ್ತಿದ್ದ ದಿನಗಳಲ್ಲಿ ಪದ್ಮುಂಜಕ್ಕೆ ಹರಿಕಥಾ ಶಿರೋಮಣಿ ವೇದವ್ಯಾಸರ ಆಗಮನವಾಯಿತು. ಅವರ ಹರಿಕಥಾ ಪ್ರಸಂಗವನ್ನು ಕೇಳಿದರೆ ಸರ್ವ ಪಾಪಗಳೂ ಪರಿಹಾರ ಆಗುವುದೆಂದೂಆಹೋರಾತ್ರಿ ಹರಿಕತೆ ಮಾಡುತ್ತಾ ಅವರು ತಮ್ಮನ್ನೇ ಮರೆಯುತ್ತಾರೆಂದೂಕೇಳುಗರಿಗೂ ಇಹದ ಪರಿವೆ ಮರೆಯುವಂತೆ ಮಾಡುತ್ತಾರೆಂದೂ ದಿನಕರನ ಅಪ್ಪ ಸೂರ್ಯನಾರಾಯಣ ಉಪಾಧ್ಯಾಯರು ಬದುಕಿದ್ದಾಗ ಪದೇ ಪದೇ ಹೇಳುತ್ತಿದ್ದರು. ಹೀಗಾಗಿ ಅವರ ಬಗ್ಗೆ ಎಳವೆಯಲ್ಲೇ ದಿನಕರ ಅಪಾರ ಕುತೂಹಲ ಬೆಳೆಸಿಕೊಂಡಿದ್ದ.

ಅಪ್ಪ ತೀರಿಕೊಂಡ ಮೇಲೆ ಸುರುಳಿ ಲಿಂಗೇಶ್ವರ ದೇವಸ್ಥಾನದ ಪೂಜೆ ದಿನಕರನ ಪಾಲಿಗೆ ಬಂತು. ಬೆಳಗಾಗೆದ್ದು ತಿಂಡಿ ತಿನ್ನದೇಕಾಫಿಯನ್ನೂ ಕುಡಿಯದೇ ಆರು ಗಂಟೆಗೆ ದೇವಾಲಯಕ್ಕೆ ಹೋಗಿ ಅಂಗಳ ಗುಡಿಸಿನಂತರ ಸ್ನಾನ ಮಾಡಿ ಲಕ್ಷ ಗಾಯತ್ರಿ ಜಪ ಮಾಡಿಹತ್ತೂವರೆಯ ಹೊತ್ತಿಗೆ ದೇವಾಲಯ ಹೋಗಿಅಲ್ಲಿಗೆ ಬರುವವರಿಗೆ ಶಾಸ್ತ್ರ ಹೇಳಿನವಜಾತ ಮಕ್ಕಳಿಗೆ ಹೆಸರುಜಾತಕ ದಯಪಾಲಿಸಿಸಂಕಷ್ಟದಲ್ಲಿದ್ದವರಿಗೆ ತಾಯಿತಿ ಮಂತ್ರಿಸಿಕೊಟ್ಟುಅವರು ಹೇಳುವ ಕತೆಗಳನ್ನು ಸಾವಧಾನದಿಂದ ಕೇಳುತ್ತಾ ಮಾತಲ್ಲೇ ಅವರ ಸಂಕಟಗಳಿಗೆ ಸಮಾಧಾನ ನೀಡುತ್ತಿದ್ದ ಉಪಾಧ್ಯಾಯರುಮಗನೂ ಅದೇ ವೃತ್ತಿಯಲ್ಲಿ ಮುಂದುವರಿಯಬೇಕೆಂದು ಆಶೆಪಟ್ಟಿದ್ದರು. ಅದಕ್ಕೆ ಸರಿಯಾಗಿ ದಿನಕರನಿಗೆ ವಿದ್ಯೆ ಹತ್ತಲಿಲ್ಲ. ಆರನೇ ಕ್ಲಾಸಿನಲ್ಲಿ ಅವನು ಎರಡು ವರ್ಷ ಕಳೆದು ನಂತರ ಅಪ್ಪನೊಂದಿಗೆ ಗುಡಿಗೆ ಹೋಗುವುದಕ್ಕೆ ಶುರುಮಾಡಿದ್ದ.

sketch9

ಆ ದಿನಗಳು ದಿನಕರನ ಪಾಲಿಗೆ ಆಹ್ಲಾದಕರವಾಗಿದ್ದವು. ಅಪ್ಪನೊಟ್ಟಿಗೆ ದೇವಸ್ಥಾನಕ್ಕೆ ಹೋಗುತ್ತಿದ್ದ ಅವನನ್ನು ಅಲ್ಲಿಗೆ ಬಂದ ಭಕ್ತಾದಿಗಳು ಗೌರವದಿಂದ ಕಾಣುತ್ತಿದ್ದರು. ಅವನಿಗೂ ಆಗಾಗ ಕಾಣಿಕೆ ಕೊಡುತ್ತಿದ್ದರು. ಕ್ರಮೇಣ ಅಪ್ಪನಿಗೆ ಗೊತ್ತಾಗದ ಹಾಗೆ ಆ ಕಾಣಿಕೆ ದುಡ್ಡನ್ನು ಲಂಗೋಟಿಯೊಳಗೆ ಸಿಕ್ಕಿಸಿಕೊಂಡು ತನಗೆ ಬೇಕಾದ್ದನ್ನು ಕೊಂಡುತಿನ್ನುವುದೂ ಅವನಿಗೆ ರೂಢಿಯಾಯಿತು. ಆ ಆಕರ್ಷಣೆಯೇ ಅವನನ್ನು ಮರಳಿ ಸ್ಕೂಲಿನ ಕಡೆ ತಲೆಹಾಕಿ ಮಲಗದಂತೆ ಮಾಡಿದ್ದು.

ಆರನೇ ಕ್ಲಾಸಿನಲ್ಲಿ ಎರಡು ವರ್ಷ ಕಳೆದ ಅವನನ್ನು ಮತ್ತೆ ಸ್ಕೂಲಿಗೆ ಕಳುಹಿಸಿಕೊಡಿ ಎಂದು ಹೆಡ್ಮಾಸ್ಟರ್ ಬಸವೇಗೌಡರು ಇನ್ನಿಲ್ಲದಂತೆ ಕೇಳಿಕೊಂಡಿದ್ದರು. ದಿನಕರ ಅದನ್ನು ಖಡಾಖಂಡಿತವಾಗಿ ನಿರಾಕರಿಸಿದ್ದ. ಸೂರ್ಯನಾರಾಯಣ ಉಪಾಧ್ಯಾಯರಿಗೆ ಆಗಷ್ಟೇ ಮಂಡಿ ನೋವು ಶುರುವಾಗಿತ್ತು. ಕೆರೆಯಿಂದ ನೀರು ತರುವುದಕ್ಕೆ ಅವರ ಕೈಲಿ ಆಗುತ್ತಿರಲಿಲ್ಲ. ಹೀಗಾಗಿ ಅವರೂ ದಿನಕರನನ್ನು ಶಾಲೆಗೆ ಅಟ್ಟುವುದಕ್ಕೆ ಮನಸ್ಸು ಮಾಡಲಿಲ್ಲ.

ದಿನಕರ ಹದಿನೆಂಟು ವರ್ಷದವನಿದ್ದಾಗ ದೊಡ್ಡ ಉಪಾಧ್ಯಾಯರು ತೀರಿಕೊಂಡರು. ಸೂತಕ ಕಳೆದು ಮೂರನೇ ದಿನಕ್ಕೆ ದೇವಸ್ಥಾನದ ಪೂಜೆಗೆಂದು ಪಕ್ಕದ ಹಳ್ಳಿಯಿಂದ ಬಂದಿದ್ದ  ರಾಘವಾಚಾರ್ಯರು ಹೊರಟುನಿಂತರು. ಶಿವದೇವಾಲಯಕ್ಕೆ ಪೂಜೆಗೆ ಬರಲು ರಾಘವಾಚಾರ್ಯರಿಗೆ ಒಂದಿಷ್ಟೂ ಮನಸ್ಸಿರಲಿಲ್ಲ. ಅವರ ಮೂರನೆಯ ಮಗಳಿಗೆ ಸೂರ್ಯನಾರಾಯಣ ಉಪಾಧ್ಯಾಯರು ಮದುವೆ ಕುದುರಿಸಿಕೊಟ್ಟಿದ್ದರೆಂಬ ಏಕೈಕ ದಾಕ್ಷಿಣ್ಯ ಅವರನ್ನು ಅಲ್ಲೀ ತನಕ ಕರೆತಂದಿತ್ತು. ಹೀಗಾಗಿ ಸೂತಕ ಮುಗಿಯುತ್ತಿದ್ದಂತೆ ದೇವಸ್ಥಾನದ ಬೀಗದ ಕೈಯನ್ನು ದಿನಕರನ ಕೈಗೆ ಕೊಟ್ಟು ಆಚಾರ್ಯರು ತಮ್ಮೂರಿಗೆ ಮರಳಿದರು.

ಅಷ್ಟು ಬೇಗ ಸಾಯುತ್ತೇನೆ ಎಂದು ಸೂರ್ಯನಾರಾಯಣ ಉಪಾಧ್ಯಾಯರಿಗೆ ಗೊತ್ತಿರಲಿಲ್ಲವಾಗಿಅವರು ದೇವಪೂಜಾ ವಿಧಾನವನ್ನು ದಿನಕರನಿಗೆ ಹೇಳಿಕೊಟ್ಟಿರಲಿಲ್ಲ. ಅಪ್ಪ ಪೂಜೆ ಮಾಡುವುದನ್ನು ಅವನು ಒಂದೆರಡು ಸಾರಿ ನೋಡಿದ್ದ. ಹನ್ನೊಂದು ಗಂಟೆಗೆ ಅವರು ಗರ್ಭಗುಡಿಯೊಳಗೆ ಹೊಕ್ಕರೆಮತ್ತೆ ಹೊರಬರುತ್ತಿದ್ದದ್ದು ಒಂದೂವರೆ ಗಂಟೆಗೆ.

ಅಷ್ಟು ಹೊತ್ತಿಗೆಲ್ಲ ದಿನಕರ ಮನೆಗೆ ಹೋಗಿ ನೈವೇದ್ಯ ತಂದಿರುತ್ತಿದ್ದ. ಗರ್ಭಗುಡಿ ಬಾಗಿಲಿನ ಪರದೆ ಸರಿಸಿಕೊಂಡು ದೊಡ್ಡ ಉಪಾಧ್ಯಾಯರು ಒಳಗೇನು ಮಾಡುತ್ತಿದ್ದರು ಅನ್ನುವುದು ಅವನಿಗೂ ಗೊತ್ತಿರಲಿಲ್ಲ. ಈಗ ಇದ್ದಕ್ಕಿದ್ದಂತೆ ಪೂಜೆಯ ಕೈಂಕರ್ಯ ತನ್ನ ಪಾಲಿಗೆ ಬಂದಾಗ ದಿನಕರ ಕಂಗಾಲಾಗಿಹೋದ.

 

ಅವನನ್ನು ಎಲ್ಲದಕ್ಕಿಂತ ಕಾಡಿದ್ದು ಅಪ್ಪ ಎರಡೂವರೆ ಗಂಟೆ ಗರ್ಭಗುಡಿಯೊಳಗೆ ಏನು ಮಾಡುತ್ತಿದ್ದರು ಎಂಬ ಪ್ರಶ್ನೆ. ಎಷ್ಟೇ ಅಭಿಷೇಕ ಮಾಡಿದರೂಎಷ್ಟೇ ಅಲಂಕಾರ ಮಾಡಿದರೂ ಎಲ್ಲವೂ ಅರ್ಧ ಗಂಟೆಯಲ್ಲಿ ಮುಗಿದು ಹೋಗುತ್ತಿತ್ತು. ಆಮೇಲೆ ಅಲ್ಲಿ ಉಳಿಯುತ್ತಿದ್ದದ್ದು ಗಂಧಚಂದನ ಲೇಪಿತ ಸುರುಳಿ ಲಿಂಗೇಶ್ವರವಿವಿಧ ಅಭಿಷೇಕಗಳಿಂದಾಗಿ ಅಲ್ಲಿ ನೆಲೆಗೊಂಡಿದ್ದ ಕಮಟು ವಾಸನೆ ಮತ್ತು ನೀಲಾಂಜನದ ಮಸುಕು ಬೆಳಕಲ್ಲಿ ಸುಂಡಿಲಿಯಂತೆ ಸುಳಿದಾಡುತ್ತಿದ್ದ ಅಪರಿಚಿತ ನೆರಳು.

ದಿನಕರನಿಗೆ ಗರ್ಭಗುಡಿಯೊಳಗೆ ಹೊತ್ತೇ ಹೋಗುತ್ತಿರಲಿಲ್ಲ. ಒಳಗೆ ಹೋಗಿ ಸ್ವಲ್ಪ ಹೊತ್ತಿಗೆಲ್ಲ ತಾನು ಅಲ್ಲಿಗೆ ಬಂದು ಎಷ್ಟು ಹೊತ್ತಾಯಿತು ಅನ್ನುವುದೂ ಮರೆತುಹೋಗುತ್ತಿತ್ತು. ದೇವಾಲಯದ ಮೊಕ್ತೇಸರರಾದ ಕೇಶವ ಹೆಗಡೆ ಮೊದಲ ದಿನವೇ ಎಲ್ಲಾ ಪಾಂಗಿತವಾಗಿ ನಡೆಯಬೇಕು. ನಿಮ್ಮಪ್ಪ ಮಾಡುತ್ತಿದ್ದ ಪೂಜೆಗೆ ವ್ಯತ್ಯಯ ಬರಬಾರದು. ಅವರು ಮಾಡುತ್ತಿದ್ದ ಎಲ್ಲಾ ಕೆಲಸವನ್ನೂ ಅಷ್ಟೇ ಶ್ರದ್ಧೆಯಿಂದ ಮಾಡಬೇಕು ಎಂದು ಹೇಳಿಬಿಟ್ಟರು. ಮೊದಲನೇ ದಿನ ಹನ್ನೆರಡೂವರೆಗೆಲ್ಲ ದಿನಕರ ಹೊರಬಂದಾಗಇದೇನು ಇಷ್ಟು ಬೇಗ ಮುಗೀತೇಮಹಾಮಂಗಳಾರತಿ ಒಂದೂವರೆಗೆ. ಅದಕ್ಕಿಂತ ಮುಂಚೆ ನೀವು  ಹೊರಗೆ ಬರುವಂತಿಲ್ಲ ಎಂದು ಎಚ್ಚರಿಸಿದ್ದರು.

ಹೀಗೂ ಹಾಗೂ ಒಂದು ವಾರದೊಳಗೆ ಗರ್ಭಗುಡಿಯ ಒಳಗಿನ ಕತ್ತಲಲ್ಲಿ ಎರಡೂವರೆ ಕಳೆಯುವುದನ್ನು ದಿನಕರ ಅಭ್ಯಾಸ ಮಾಡಿಕೊಂಡ. ಕೆಲವೊಮ್ಮೆ ಅವನಿಗೆ ಸಣ್ಣಗೆ ನಿದ್ದೆ ಬರುತ್ತಿತ್ತು. ನಿದ್ದೆಯಿಂದ ಎಚ್ಚರವಾದಾಗ ಹೆದರಿಕೆಯಾಗುತ್ತಿತ್ತು.   ಆ ಕತ್ತಲಲ್ಲಿ ಲಿಂಗದ ಹಿಂದೆ ಹಾವು ಸೇರಿಕೊಂಡಿದೆ ಎನ್ನಿಸುತ್ತಿತ್ತು. ಅದು ಕಾರಣಿಕದ ದೇವಸ್ಥಾನ. ಅಪಚಾರವಾದರೆ ಅಪಾಯ ಖಂಡಿತ ಎಂದು ಭಕ್ತಾದಿಗಳು ಮಾತಾಡಿಕೊಳ್ಳುತ್ತಿದ್ದರು. ಅದು ನಿಜವೋ ಸುಳ್ಳೋ ಎಂಬ ಬಗ್ಗೆ ದಿನಕರನಿಗೇ ಅನುಮಾನಗಳಿದ್ದವು. ಎಲ್ಲಾ ಸುಳ್ಳು ಎಂದು ಹೊರಗಿದ್ದಾಗ ಅನ್ನಿಸಿದರೂಗರ್ಭಗುಡಿಯ ಕತ್ತಲಲ್ಲಿ ಅದು ನಿಜ ಎಂದೇ ಭಾಸವಾಗುತ್ತಿತ್ತು.  ಪ್ರತಿದಿನ ಗರ್ಭಗುಡಿಗೆ ಕಾಲಿಡುವ ಹೊತ್ತಿಗೆ ಎದೆ ಡವಗುಡುತ್ತಿತ್ತು.

ಕ್ರಮೇಣ ಅಭ್ಯಾಸವಾಗುತ್ತದೆ. ಎರಡೂವರೆ ಗಂಟೆ ಕಳೆಯುವುದು ಕಷ್ಟವಾಗಲಿಕ್ಕಿಲ್ಲ ಎಂದು ದಿನಕರ ನಂಬಿದ್ದ. ಆದರೆ ದಿನ ಕಳೆದಂತೆ ಪೂಜೆಯ ಅವಧಿ ಹಿಂಸೆಯಾಗುತ್ತಲೇ ಹೋಯಿತು. ಅಲಂಕಾರ ಮುಗಿಸಿಅಭಿಷೇಕ ಮುಗಿಸಿನೈವೇದ್ಯವನ್ನು ಶಿವನಿಗೆ ಅರ್ಪಿಸಿ ಅದಕ್ಕೆ ಬಿಲ್ವಪತ್ರ ಹಾಕಿಲಿಂಗಾಷ್ಟಕ ಜಪಿಸಿದರೂ ಮತ್ತಷ್ಟು ಹೊತ್ತು ಮಿಗುತ್ತಿತ್ತು.

ಈ ಮಧ್ಯೆ ರಾಘವ ಆಚಾರ್ಯರು ದಿನಕರನಿಗೆ ಮದುವೆ ಗೊತ್ತು ಮಾಡಿದರು. ತನ್ನ ಮಗಳಿಗೆ ದಿನಕರನ ಅಪ್ಪ ಗಂಡು ಹುಡುಕಿಕೊಟ್ಟು ಮದುವೆ ಕುದುರಿಸಿದ ಋಣವನ್ನಿನ್ನೂ ಅವರು ಮರೆತಿರಲಿಲ್ಲ. ಅವರೇ ಖುದ್ದಾಗಿ ಓಡಾಡಿ,ದೇವಕಿಯೆಂಬ ಹುಡುಗಿಯನ್ನು ಮದುವೆಗೆ ಒಪ್ಪಿಸಿ ತಾಳಿಕಟ್ಟಿಸಿಯೇ ಬಿಟ್ಟರು. ಮೂರನೆಯ ಸಂಜೆ ಪ್ರಸ್ತವೂ ಮುಗಿದುಹೋಯಿತು.

ಆಮೇಲಿನ ದಿನಗಳು ದಿನಕರನ ಪಾಲಿಗೆ ಮತ್ತಷ್ಟು ತ್ರಾಸದಾಯಕವಾದವು. ಒಬ್ಬಂಟಿ ಗರ್ಭಗುಡಿಯಲ್ಲಿ ಕುಳಿತಾಗೆಲ್ಲ ದೇವಕಿ ನೆನಪಾಗುತ್ತಿದ್ದಳು.  ಮಂತ್ರ ಮರೆತುಹೋಗುತ್ತಿತ್ತು. ಎಷ್ಟೇ ಕಷ್ಟಪಟ್ಟು ಮನಸ್ಸನ್ನು ಸ್ಥಿಮಿತಕ್ಕೆ ತಂದುಕೊಳ್ಳಲು ಯತ್ನಿಸಿದರೂ ದೇವಕಿಯ ಅಂಗಾಂಗಗಳು ಕಣ್ಮುಂದೆ ಹಾಯುತ್ತಿದ್ದವು.  ಮೈ ಬೆಚ್ಚಗಾಗುತ್ತಿತ್ತು. ತಾನುಟ್ಟುಕೊಂಡ ಕುಂಬು ಧೋತ್ರ ಮತ್ತು ಹಳೆಯ ಲಂಗೋಟಿಗೆ ತನ್ನೊಳಗಿನ ವಿಕಾರಗಳನ್ನು ಅದುಮಿಡುವ ಶಕ್ತಿಯಿಲ್ಲ ಎಂದು ಅವನಿಗೆ ಯಾವತ್ತೋ ಗೊತ್ತಾಗಿ ಹೋಗಿತ್ತು.  ಸೂಕ್ಷ್ಮವಾಗಿ ನೋಡಿದವರಿಗೆ ದಿನಕರ ಶಿಕ್ಷೆಯಿಂದ ಪಾರಾಗಲು ಹವಣಿಸುತ್ತಿದ್ದ ಅಪರಾಧಿಯ ಹಾಗೆ

ಕಾಣಿಸುತ್ತಿದ್ದ.

ಅಲ್ಲೀವರೆಗೆ ಹೆಣ್ಣಿನ ಕುರಿತು ಅವನಿಗೆ ಯಾವ ಭಾವನೆಗಳೂ ಇರಲಿಲ್ಲ. ದೇವಸ್ಥಾನಕ್ಕೆ ಬರುತ್ತಿದ್ದ ಹೆಣ್ಣುಮಕ್ಕಳನ್ನು ನೋಡಿದಾಗಲೂ ಅವನಿಗೆ ಏನೂ ಅನ್ನಿಸುತ್ತಿರಲಿಲ್ಲ. ಮದುವೆಯಾದದ್ದೇ ತಡ ಅವನ ಮನಸ್ಸು ಬೇರೆ ಹೆಣ್ಣುಮಕ್ಕಳ ಜೊತೆ ದೇವಕಿಯನ್ನು ಹೋಲಿಸಿ ನೋಡಲು ಆರಂಭಿಸಿತು. ಅವರ ನಗುಬಳೆಗಳ ಸದ್ದುಪಿಸುಮಾತು ಅವನ ಗಮನವನ್ನು ಬೇರೆಡೆ ಸೆಳೆಯತೊಡಗಿದವು. ಏಕಾಗ್ರತೆ ಹತ್ತಿರವೂ ಸುಳಿಯುತ್ತಿರಲಿಲ್ಲ.

ಇದೇ ಸ್ಥಿತಿಯಲ್ಲಿ ಆರೆಂಟು ವರ್ಷಗಳಾದರೂ ಸಂದಿರಬೇಕು.  ಒಂದು ದಿನ ಅವನು ಮೋಹಿನಿ ಭಸ್ಮಾಸುರ ಯಕ್ಷಗಾನ ಪ್ರಸಂಗ ನೋಡುವುದಕ್ಕೆ ದೇವಕಿಯ ಜೊತೆ ಹೋಗಿದ್ದ. ಹೋಗಬೇಕು ಅಂತ ಹಠಹಿಡಿದದ್ದು ಅವಳೇ. ನಮ್ಮೂರಿನ ಪ್ರಮೋದ ಹೆಗಡೆ ಮೋಹಿನಿ ಪಾತ್ರ ಮಾಡಿದ್ದಾನಂತೆ. ಥೇಟ್ ಹೆಣ್ಣಿನ ಹಾಗೇ ಕಾಣ್ತಾನಂತೆ.. ನೋಡಲೇಬೇಕು ನಾನು ಎಂದು ದೇವಕಿ ಪಟ್ಟು ಹಿಡಿದು ದಿನಕರನನ್ನು ಯಕ್ಷಗಾನದ ಬಯಲಿಗೆ ಕರೆದುಕೊಂಡು ಹೋಗಿಯೇ ಬಿಟ್ಟಳು. ನಿದ್ದೆಗಣ್ಣಿನಲ್ಲಿ ಭಸ್ಮಾಸುರ ಆಟಾಟೋಪಗಳನ್ನು ದೇವತೆಗಳ ಸಂಕಷ್ಟವನ್ನೂ ನೋಡುತ್ತಾ ಕುಳಿತ ದಿನಕರನಿಗೆ ಯಕ್ಷಗಾನ ರುಚಿಸಲಿಲ್ಲ. ನಡುರಾತ್ರಿ ಕಳೆದು ಸ್ವಲ್ಪ ಹೊತ್ತಿಗೆಲ್ಲ ಮೋಹಿನಿಯ ಪ್ರವೇಶವಾಯಿತು. ಬಳುಕುತ್ತಾ ಬಂದ ಮೋಹಿನಿ ಭಸ್ಮಾಸುರನ ಜೊತೆ ನರ್ತಿಸತೊಡಗಿದಳು.

ಅವಳನ್ನು ನೋಡಿದ್ದೇ ದಿನಕರ ಬೆಚ್ಚಿಬಿದ್ದ. ಅಂಥ ಸುಂದರಿಯನ್ನು ಅವನು ನೋಡಿರಲೇ ಇಲ್ಲ. ಆ ರೂಪದ ಮುಂದೆ ದೇವಕಿ ಸಪ್ಪೆಯಾಗಿ ಕಾಣಿಸಿದಳು. ತನ್ಮಯನಾಗಿ ಯಕ್ಷಗಾನ ನೋಡುತ್ತಾ ಕೂತ ದಿನಕರಮೋಹಿನಿಯಿಂದ ಎಷ್ಟು ಪ್ರಭಾವಿತನಾದ ಎಂದರೆ ಮಾರನೆಯ ದಿನ ಪಕ್ಕದ ಹಳ್ಳಿಗೂ ಹೋಗಿ ಮೋಹಿನಿ ಭಸ್ಮಾಸುರ ನೋಡಿಬಂದ. ಆಮೇಲಾಮೇಲೆಆ ಮೇಳದ ಮೋಹಿನಿ ಭಸ್ಮಾಸುರ ಯಕ್ಷಗಾನ ಪ್ರಸಂಗ ಎಲ್ಲಿ ನಡೆದರೂ ಹೋಗಿ ಬರುತ್ತಿದ್ದ. ಮೋಹಿನಿಯ ರೂಪ ಮನಸ್ಸನ್ನು ಆವರಿಸುತ್ತಿದ್ದ ಹಾಗೇದೇವಕಿಯನ್ನು ಮುಟ್ಟುವುದಕ್ಕೂ ಅವನಿಗೆ ಮನಸ್ಸಾಗುತ್ತಿರಲಿಲ್ಲ. ಉಪಾಧ್ಯಾಯರಿಗೆ ಯಕ್ಷಗಾನದ ಹುಚ್ಚು ಹಿಡಿಯಿತು ಎಂದು ಜನ ಮಾತಾಡಿಕೊಂಡರು. ಅದೆಷ್ಟು ಯಕ್ಷಗಾನ ನೋಡ್ತೀರಪ್ಪಾ ಎಂದು ಕೇಶವ ಹೆಗಡೆಯವರೂ ಅವನನ್ನು ತರಾಟೆಗೆ ತೆಗೆದುಕೊಂಡರು. ಆದರೂ ದಿನಕರನ ಹುಚ್ಚು ಬಿಡಲಿಲ್ಲ.

ಒಂದು ದಿನ ಗರ್ಭಗುಡಿ ಸೇರಿ ಎಂದಿನಂತೆ ಸುರುಳಿ ಲಿಂಗೇಶ್ವರನಿಗೆ ಅಭಿಷೇಕ ಮಾಡುತ್ತಿರುವ ಹೊತ್ತಿಗೆಮೋಹಿನಿ ಕಣ್ಮುಂದೆ ಸುಳಿದಳು. ಮೈಬಿಸಿಯಾಗಿ ಬೆವರಿ ತತ್ತರಿಸಿಹೋದ ದಿನಕರ. ಗರ್ಭಗುಡಿಯೊಳಗೆ ಅಂಥ ಸ್ಥಿತಿಯಲ್ಲಿ ತಾನಿರುವುದು ಸರಿಯಲ್ಲ ಎಂದೆನ್ನಿಸಿ ಭಯವಾಗತೊಡಗಿತು. ಆವತ್ತು ಹನ್ನೆರಡು ಗಂಟೆಗೆಲ್ಲ ಪೂಜೆ ಮುಗಿಸಿ ದಿನಕರ ಜಾಗ ಖಾಲಿ ಮಾಡಿದ.

ಹಾಗೆ ಹೋದ ದಿನಕರ ಮತ್ತೆ ಕಾಣಿಸಿಕೊಂಡದ್ದು ಒಂಬತ್ತು ದಿನ ಕಳೆದ ಮೇಲೆ. ದೇವಸ್ಥಾನದಿಂದ ಹೊರಬಿದ್ದವನು ರಾಘವ ಆಚಾರ್ಯರ ಮನೆಗೆ ಹೋಗಿ ಒಂದು ವಾರ ಪೂಜೆ ಮಾಡುವಂತೆ ಅವರನ್ನು ಒಪ್ಪಿಸಿ, .ಕಿನ್ನಿಗೋಳಿಯ ಬಸ್ಸು ಹತ್ತಿ ಆವತ್ತು ರಾತ್ರಿ ಮೋಹಿನಿ ಭಸ್ಮಾಸುರ ನೋಡಿದ. ಯಕ್ಷಗಾನ ಮುಗಿದ ನಂತರ ಚೌಕಿಮನೆಗೆ ನುಗ್ಗಲು ಹೋದ. ಮೇಳದವರು ದಿನಕರನನ್ನು ಒಳಗೆ ಸೇರಿಸಲಿಲ್ಲ. ಮೇಳದ ಯಜಮಾನನನ್ನು ಕಂಡು ಮೋಹಿನಿಯ ಜೊತೆ ಮಾತಾಡಬೇಕು ಎಂದು ಕೇಳಿಕೊಂಡ. ಅವರು ಅದಕ್ಕೆ ಒಪ್ಪಲಿಲ್ಲ.

ಎಂಟನೇ ದಿನ ಸತತವಾಗಿ ಯಕ್ಷಗಾನ ನೋಡಿದ ಮೇಲೆ ಅವನ ಮೇಲೆ ಮೇಳದ ಯಜಮಾನನಿಗೆ ಕರುಣೆ ಬಂತು. ಕಾರ್ಕಳದಲ್ಲಿ ಯಕ್ಷಗಾನ ನಡೆಯುತ್ತಿದ್ದಾಗ ಅವರೇ ದಿನಕರನ ಬಳಿಗೆ ಬಂದು ಇವತ್ತು ಯಕ್ಷಗಾನ ಮುಗಿದ ಮೇಲೆ ಚೌಕಿಗೆ ಬನ್ನಿ ಎಂದು ಒಪ್ಪಿಗೆ ಕೊಟ್ಟಿದ್ದರು.

೨-

ಹರಿಕಥಾ ಶಿರೋಮಣಿ ವೇದವ್ಯಾಸರು ಧ್ರುವನ ಪ್ರಸಂಗದಿಂದ ಎತ್ತಿಕೊಂಡು ಅಜಮಿಳನ ತನಕ ಹರಿಭಕ್ತರ ಬಗ್ಗೆ ಅದ್ಭುತವಾಗಿ ಮಾತಾಡಿದರು. ಅದನ್ನು ಕೇಳುತ್ತಾ ಕೇಳುತ್ತಾ ದಿನಕರ ತನ್ಮಯನಾದ ಎಂತೆಂಥಾ ಪಾಪಿಷ್ಠರನ್ನೂ ಶ್ರೀಮನ್ನಾರಾಯಣ ಕ್ಷಮಿಸಿ ಕರುಣಿಸಿ ಸಾಯುಜ್ಯ ಪದವಿಯನ್ನು ನೀಡಿದ್ದಾನೆ ಎಂದು ವರ್ಣಿಸಿದರು. ಒಂದೇ ನಾಮವು ಸಾಲದೇಗೋವಿಂದನ.. ಎಂದು ಹಾಡಿದರು. ನೀನ್ಯಾಕೋ ನಿನ್ನ ಹಂಗ್ಯಾಕೋ ಎಂದು ಬೈಯುತ್ತಲೇ ನಿನ್ನ ನಾಮದ ಬಲವೊಂದಿದ್ದರೆ ಸಾಕೋ ಎಂದು ಕೊಂಡಾಡಿದರು. ಹರಿಯ ಲೀಲೆಗಳನ್ನು ವರ್ಣಿಸಿದರು. ನಾವೆಲ್ಲರೂ ಪಾಪಿಷ್ಠರೇ. ಅರಿಷಡ್ವರ್ಗಗಳು ನಮ್ಮನ್ನು ದಿಕ್ಕು ದಿಕ್ಕಿಗೆ ಸೆಳೆಯುತ್ತವೆ. ಏಕಾಗ್ರತೆಯನ್ನು ಭಂಗಗೊಳಿಸುತ್ತವೆ. ಆದರೆ ಅಂತಿಮವಾಗಿ ಹರಿನಾಮ ನಮ್ಮ ಸಹಾಯಕ್ಕೆ ಬರುತ್ತದೆ ಎಂದು ಪಾಪಿಷ್ಠರಿಗೆ ದಿವ್ಯಮಂತ್ರ ಬೋಧಿಸಿದರು. ವಿಷ್ಣು ಮೋಹಿನಿ ರೂಪದಲ್ಲಿ ಬಂದು ದೇವತೆಗಳಿಗೆ ಅಮೃತ ಹಂಚಿದ ಕತೆ ಹೇಳಿದರು. ಮೋಹಿನಿ ಎಂಥಾ ಸುಂದರಿ ಎಂದು ವರ್ಣಿಸಿದರು. ಶಿವನೂ ಅವಳ ರೂಪಿಗೆ ಮರುಳಾಗಿದ್ದರ ಫಲ ಸ್ವಾಮಿ ಅಯ್ಯಪ್ಪ ಎಂದರು. ಭಸ್ಮಾಸುರನನ್ನು ಮರುಳುಮಾಡಿ ತನ್ನ ತಲೆಯ ಮೇಲೆ ತಾನು ಕೈಯಿಟ್ಟು ನಾಶವಾಗುವಂತೆ ಮಾಡಿದ್ದನ್ನು ವಿವರಿಸಿದರು.

ಮಾರನೆ ದಿನ ಕೇಶವ ಹೆಗಡೆಯವರ ಕೈಲಿಹೇಳದೇ ಕೇಳದೇ ಊರುಬಿಟ್ಟು ಹೋಗಿದ್ದಕ್ಕೆಬೈಸಿಕೊಂಡು ಪೂಜೆಗೆ ಕುಳಿತ ದಿನಕರನ ಕಣ್ಮುಂದೆ ಮೋಹಿನಿ ಮತ್ತೆ ಸುಳಿದಾಡಿದಳು. ಚೌಕಿಗೆ ಹೋಗಿ ಮೋಹಿನಿಯನ್ನು ತಬ್ಬಿಕೊಂಡದ್ದು ನೆನಪಾಯಿತು. ಅವಳ ಕೈಗೆ ನೂರರ ಐದು ನೋಟು.ತುರುಕಿದಾಗ ಅವಳ ಕಂಗಳಲ್ಲಿ ಮಿನುಗಿದ ಕಾಂತಿ ಕಣ್ಮುಂದೆ ಬಂತು. ಅವಳನ್ನು ಮುಟ್ಟಿದಾಗ ತನಗಾದ ರೋಮಾಂಚ ಮತ್ತೆ ಮೈತುಂಬ ಹರಿದಾಡಿತು.

ದಿನಕರನಿಗೆ ತಾನು ತಪ್ಪು ಮಾಡುತ್ತಿದ್ದೇನೆ ಅಂತ ಅನ್ನಿಸಲೇ ಇಲ್ಲ. ಯಾಂತ್ರಿಕವಾಗಿ ಪೂಜಾವಿಧಿಗಳನ್ನು ಪೂರೈಸುತ್ತಲೇ ವಿಚಿತ್ರ ರೋಮಾಂಚದಲ್ಲಿ ದಿನಕರ ತುಯ್ದಾಡಿದ. ಪೂಜೆಯ ಹೊತ್ತಿಗೆ ಪಟ ಸರಿಸಿದಾಗ ಹೊರಗಿನ ಮುಖಗಳನ್ನು ಕಂಡು ದಿನಕರನಿಗೆ ಸಿಟ್ಟು ಬಂತು. ಮತ್ತಷ್ಟು ಹೊತ್ತು ಗರ್ಭಗುಡಿಯಲ್ಲೇ ಕಳೆಯಬಹುದಿತ್ತು ಅನ್ನಿಸಿತು.

ಆವತ್ತು ರಾತ್ರಿ ತನ್ನನ್ನು ತಬ್ಬಿಕೊಂಡ ದೇವಕಿಯನ್ನು ದೂರ ತಳ್ಳಿದಿನಕರ ಸುರುಳಿ ಲಿಂಗೇಶ್ವರ ದೇವಸ್ಥಾನಕ್ಕೆ ಬಂದ. ಗರ್ಭಗುಡಿಯ ಬಾಗಿಲು ತೆಗೆದು ಒಳಗೆ ಕಾಲಿಟ್ಟ. ಬಾಗಿಲು ಮುಚ್ಚಿಕೊಂಡು ಕಾಳಗತ್ತಲಲ್ಲಿ ಕುಳಿತ.

ಕಣ್ಮುಂದೆ ಮೋಹಿನಿ ಪ್ರತ್ಯಕ್ಷವಾದಳು. ಅವಳ ಕುಣಿತಜಿಗಿತವಯ್ಯಾರಗಳು ಸುಳಿದಾಡಿದವು. ಚೌಕಿಮನೆಯಲ್ಲಿ ತಬ್ಬಿಕೊಂಡ ಮೋಹಿನಿಯ ನೆನಪಾಗಿ ಮೈ ಜುಮ್ಮೆಂದಿತು. ಅವಳನ್ನು ತಬ್ಬಿಕೊಂಡಾಗ ಅವಳ ಎದೆ ತನ್ನೆದೆಗೆ ಅವಚಿಕೊಂಡ ಗಳಿಗೆ ಸುಳಿದಾಡಿ ದಿನಕರ ಕಣ್ಮುಚ್ಚಿಕೊಂಡ.

ನೋಡನೋಡುತ್ತಿದ್ದಂತೆ ಮೋಹಿನಿ ವೇಷ ಕಳಚತೊಡಗಿದಳು. ವಾಲೆಜುಮುಕಿ ತೆಗೆದಿದ್ದಳುಮುಂದಲೆ ಬೊಟ್ಟು ತೆಗೆದಳುಬಳೆ ತೆಗೆದಿಟ್ಟಳು,. ಹೆರಳು ಬಿಚ್ಚಿಟ್ಟಳುರೇಷ್ಮೆ ಸೀರೆ ಕಳಚಿದಳು. ರವಕೆ ತೆಗೆದಳು,ಮೊಲೆಗಟ್ಟು ಕಳಚಿ ಪಕ್ಕಕ್ಕಿಟ್ಟಳು. ಮೋಹಿನಿ ಕಣ್ಮರೆಯಾಗಿ ಪ್ರಮೋದ ಹೆಗಡೆ ಅವತರಿಸಿದ.

ದಿನಕರ ಅವನನ್ನು ಹಠಾತ್ತನೆ ತಬ್ಬಿಕೊಂಡು ಅವನ ಕೆನ್ನೆಗಳನ್ನು ಚುಂಬಿಸಿದ. ಅವನನ್ನು ತನ್ನೆದೆಗೆ ಒತ್ತಿಕೊಂಡು ಅವನ ಕಿವಿಗಳ ಹತ್ತಿರ ಪಿಸುಗುಟ್ಟಿದ. ನೀನು ಯಾರೇ ಆಗಿರುನನ್ನ ಪಾಲಿಗೆ ಮಾತ್ರ ಮೋಹಿನಿಯೇ ಆಗಿರು.

ಕತ್ತಲೊಳಗಿಂದ ಅಪರಿಚಿತ ದನಿಯೊಂದು ತಥಾಸ್ತು ಎಂದಂತೆ ದಿನಕರನಿಗೆ ಭಾಸವಾಯಿತು.

 

‍ಲೇಖಕರು avadhi

February 16, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ ಫೋಟೋ ಆಲ್ಬಂ

'ಜೋಗಿ ಸರ್ಕಲ್' ಫೋಟೋ ಆಲ್ಬಂ

'ಅವಧಿ ಲೈವ್' ಕಾರ್ಯಕ್ರಮದ ಈ ಬಾರಿಯ ಅತಿಥಿ ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ 'ಜೋಗಿ ಸರ್ಕಲ್' ಕಾರ್ಯಕ್ರಮದಲ್ಲಿ ಅವರು...

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

‘ಜೋಗಿ ಸರ್ಕಲ್’ನಲ್ಲಿ ಗುರುಪ್ರಸಾದ್ ಕಾಗಿನೆಲೆ ಫೋಟೋ ಆಲ್ಬಂ

'ಅವಧಿ ಲೈವ್'ನ 'ಜೋಗಿ ಸರ್ಕಲ್'ನಲ್ಲಿ ಇಂದು ಕಂಡದ್ದು ಖ್ಯಾತ ಕಾದಂಬರಿಕಾರ ಗುರುಪ್ರಸಾದ್ ಕಾಗಿನೆಲೆ  ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ...

4 ಪ್ರತಿಕ್ರಿಯೆಗಳು

 1. nagathihalliramesh

  jogi sar thammannu nana sir ennuvudilla avva kareyuvanthe ‘;avvanni’jogi yendu kareyuve avvanni yendare anna avvanaguvudu ninnya barahagalli taythanavi de athukolluva anthahkaranavide.na kandanthe yeshtondu dikku deseyillada janara badhuku-baravanigeya kurithu baredu aajanara suduva baalige moodibanda modada maleyade. neenu jogi jogiye aagi munde aa jogiyuoo aguve.preeyhiyinda -nagathihalliramesh

  ಪ್ರತಿಕ್ರಿಯೆ
 2. santhosh

  ನಮ್ಮ ನಡುವೆ ನಡೆಯುವ ಇಂತಹ ಘಟನೆಗಳು ನಮಗೆ ಕಾಣಿಸುವುದಿಲ್ಲ…!!!?? ಆದರೆ ನಿಮ್ಮ ಒಳಗಣ್ಣಿಗೆ ಕಾಣುವ ಬಗೆ ಇದೆಯಲ್ಲಾ ಅದು ನಿಜಕ್ಕೂ ರೋಮಾಂಚನ… ಆ ಕಣ್ಣು ಅದೆಷ್ಟು ತೀಕ್ಷ್ಣವಾಗಿದೆ…!
  ಹೀಗೆ ಬರೆಯುತ್ತಿರಿ…..ಮಾನಸಕ್ಕೆ ಒಂದಷ್ಟು ಮುದವನ್ನು ಕೊಡುತ್ತೀರಿ…ಧನ್ಯವಾದ.
  — ಸಂತೋಷ್ ಅನಂತಪುರ

  ಪ್ರತಿಕ್ರಿಯೆ
 3. ಸುಪ್ತದೀಪ್ತಿ

  ಏನ್ ಸ್ವಾಮೀ, ಸ್ಯಾನ್ ಫ್ರಾನ್ಸಿಸ್ಕೋಗೆ ಹತ್ತಿರದ ಕಥೆ ಬರೆದಿದ್ದೀರ?

  ಕಥೆ ಚೆನ್ನಾಗಿದೆ; ಧನ್ಯವಾದಗಳು. ದಿನಕರನ ಮನದೊಳಗಿನ ಮೋಹ ಮೋಹಿನಿಯ ರೂಪದಲ್ಲಿ ಮೈದಾಳುತ್ತಾ, ಹರ-ಹರಿಯ ಗೊಂದಲದಲ್ಲಿ ಗಟ್ಟಿಯಾಗಿ, ಕೊನೆಗೆ ಹರನ ಗುಡಿಯಲ್ಲಿ ಮೂರ್ತಗೊಳ್ಳುವದನ್ನು ಬರೆಯುವ ಪರಿ ನಿಮಗಷ್ಟೇ ದಕ್ಕಬಲ್ಲದು. ಎಲ್ಲವನ್ನೂ ಕಳಚಿಕೊಂಡು ಭಕ್ತ ದೇವರನ್ನು ಸೇರುವ ರೀತಿ ಇದಕ್ಕಿಂತ ಎಷ್ಟು ಭಿನ್ನ?

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: