ಜ್ಯೋತಿಷ್ಯ ಫಲ

ಟಿ. ಎಸ್.‌ ಶ್ರವಣ ಕುಮಾರಿ

ಹೊಸಹಳ್ಳಿಯ ಕಂಠೀಜೋಯಿಸರು ಅವರ ಊರಲಲ್ಲದೆ ಸುತ್ತಮುತ್ತಲ ಐವತ್ತು ಮೈಲು ಫಾಸಲೆಯಲ್ಲೇ ಹೆಸರುವಾಸಿ. ಹುಟ್ಟಿದ ಮಗುವಿನ ಜಾತಕ ಬರೆಸುವುದರಿಂದ ಹಿಡಿದು ಸತ್ತ ಘಳಿಗೆಯ ನಕ್ಷತ್ರ ಕೇಳುವವರೆಗೂ ಬಹಳಷ್ಟು ಜನರಿಗೆ ಅವರ ಶಂಖದಿಂದ ಬಂದಾಗಲೇ ತೀರ್ಥ. ಬರೀ ಜಾತಕ, ನಕ್ಷತ್ರಗಳಲ್ಲದೆ ದನ, ಧನ-ಕನಕ ಇಂತಹ ಮೌಲ್ಯಯುತವಾದ ಜೀವ, ನಿರ್ಜೀವ ವಸ್ತುಗಳನ್ನು ಕಳೆದುಕೊಂಡಾಗಲೂ ಪ್ರಶ್ನೆ ಕೇಳಲು ಬರುತ್ತಿದ್ದರು.

ಹಾಗೆಯೇ ಅವರ ಉತ್ತರದಿಂದ ಪ್ರಯೋಜನವಾಯಿತು ಎನ್ನುವುದನ್ನೂ ಒಪ್ಪಿಕೊಂಡಿದ್ದರು. ಮದುವೆ, ಮುಂಜಿ, ಸೀಮಂತ, ನಾಮಕರಣ ಇಂತಹ ಯಾವುದಕ್ಕಾದರೂ ಅವರಿಟ್ಟ ಘಳಿಗೆ ಗಟ್ಟಿ ಮುಹೂರ್ತವೆಂಬ ನಂಬಿಕೆಯು ಜನಜನಿತವಾಗಿತ್ತು.

ಇಷ್ಟೆಲ್ಲಾ ಪ್ರವರಗಳನ್ನು ಅವರ ಬಗ್ಗೆ ಏಕೆ ಹೇಳುತ್ತಿದ್ದೀನೆಂದರೆ ಅದೇ ಊರಿನ ನರಸಿಂಹ ಮೂರ್ತಿಯವರೂ ಜೋಯಿಸರೂ ಪರಮಾಪ್ತರಾಗಿದ್ದು ಇಬ್ಬರ ಮಧ್ಯೆ ಹೋಗೋ ಬಾರೋ ಸಂಬಂಧ. ಹಿಡಿದದ್ದಕ್ಕೂ, ಮುಟ್ಟಿದ್ದಕ್ಕೂ ಅವರಿಗೆ ಜೋಯಿಸರ ಮಾತೇ ಪ್ರಮಾಣ. ಅತಿರೇಕವೆಂದರೆ ಮಕ್ಕಳ ಸ್ಕೂಲು, ಕಾಲೇಜಿನ ಫೀಸನ್ನು ಕಟ್ಟಲು ಕೂಡಾ ಅವರಿಂದ ಮುಹೂರ್ತವನ್ನೂ, ಎಷ್ಟು ಅಂಕಗಳು ಬರಬಹುದೆಂದು ಭವಿಷ್ಯವಾಣಿಯನ್ನೂ ಕೇಳಿಕೊಂಡು ಬರುತ್ತಿದ್ದರು.

ಕಂಠೀ ಜೋಯಿಸರೂ ಮೂರ್ತಿಯವರ ಯಾವ ಪ್ರಶ್ನೆಗೂ ಇಲ್ಲವೆಂದು ಹೇಳದೆ ಪರಿಹಾರ, ಉತ್ತರ ಹೇಳುತ್ತಿದ್ದರು. ಇನ್ನೊಂದು ವಿಷಯವೆಂದರೆ ಜೋಯಿಸರು ಯಾರಿಗೂ ʻಇಂತಹ ಪ್ರಶ್ನೆಗೆ, ಇಷ್ಟು ದಕ್ಷಿಣೆ ಎಂದು ನಿಗದಿ ಪಡಿಸದೆ, ಎಲೆಯಡಿಕೆಯ ಮೇಲೆ ಏನಿಟ್ಟಿದ್ದರೆ ಅದನ್ನು ಕಣ್ಣಿಗೊತ್ತಿಕೊಂಡು ತೆಗೆದುಕೊಳ್ಳುತ್ತಿದ್ದುದರಿಂದ ಜನರಿಗೆ ಒಂದರ್ಥದಲ್ಲಿ ಸದರವಾಗಿಬಿಟ್ಟಿದ್ದರೆʼ ಎನ್ನುವ ಅನುಮಾನವೂ ನನ್ನನ್ನು ಕಾಡಿದ್ದಿದೆ.

ಮೂರ್ತಿಯವರು ಹೀಗೆ ಪದೇ ಪದೇ ಅವರೊಂದಿಗೆ ಸಮಾಲೋಚನೆ ನಡೆಸಿಬರುತ್ತಿದ್ದುದರಿಂದ ಜೋಯಿಸರಿಗೆ ಅವರ ಮನೆಯವರೆಲ್ಲರ ಜಾತಕ ತಲೆಯಲ್ಲೇ ಅಚ್ಚಾಗಿಹೋಗಿತ್ತು. ಜೋಯಿಸರು ಹೇಳಿದ ಭವಿಷ್ಯವೇ ನಿಜವಾಗುತ್ತಿತ್ತೋ, ಮೂರ್ತಿಯವರೇ ಅದನ್ನು ನಿಜಮಾಡಿಕೊಳ್ಳುತ್ತಿದ್ದರೋ ಅದು ಬಿಡಿಸಲಾಗದ ರಹಸ್ಯ ಬಿಡಿ.

ಕಂಠೀ ಜೋಯಿಸರು ಒಳ್ಳೆಯ ಜ್ಯೋತಿಷಿಯಾಗಿದ್ದರು, ನಿಖರವಾದ ಭವಿಷ್ಯವನ್ನೇ ಹೇಳುತ್ತಿದ್ದರು ಎನ್ನುವುದು ಜನಜನಿತವಾದ ನಂಬಿಕೆ; ಅದು ಸುಳ್ಳಾದಂತಹ ಪ್ರಸಂಗವನ್ನು ಇದುವರೆಗೂ ಯಾರೂ ಹೇಳಿಲ್ಲ, ಕೇಳಿಲ್ಲ.

ಮೂರ್ತಿಯವರಿಗೆ ಅರವತ್ತು ವರ್ಷ ದಾಟಿ, ಅವರ ಗಂಡು-ಹೆಣ್ಣು ಮಕ್ಕಳಿಗೆಲ್ಲಾ ಮದುವೆಗಳಾಗಿ ಮನೆ ತುಂಬಾ ಮೊಮ್ಮಕ್ಕಳು ತುಂಬಿಕೊಂಡು ಸಂತೃಪ್ತ ಜೀವನ ನಡೆಸುತ್ತಿರುವ ಕಾಲದಲ್ಲಿ, ಅದೊಂದು ಘಳಿಗೆಯಲ್ಲಿ ಇದ್ದಕ್ಕಿದ್ದಂತೆ ಒಂದು ಪ್ರಶ್ನೆ ತಲೆಹೊಕ್ಕಿಬಿಟ್ಟಿತು. ಬೆಂಗಳೂರಿನಲ್ಲಿ ಯಾವುದೋ ಮದುವೆಗೆ ಹೋಗಿದ್ದಾಗ ಅವರ ಸಮೀಪದ ಬಂಧುಗಳು “ಏನಾದ್ರೂ ನೀವು ಪುಣ್ಯವಂತರು ಬಿಡಿ, ಪಡಕೊಂಡು ಹುಟ್ಟಿದೀರ.

ಒಳ್ಳೇ ಆರೋಗ್ಯ, ಸತಿ, ಸುತ, ಮೊಮ್ಮಕ್ಕಳ ಭಾಗ್ಯ ಎಲ್ಲವನ್ನೂ ಎರಡೂ ಕೈಯಲ್ಲಿ ತುಂಬಿಕೊಂಡು ತಂದುಬಿಟ್ಟಿದೀರಿ” ಎಂದು ಭುಜ ತಟ್ಟಿದಾಗ, ಸ್ವಲ್ಪ ಕಿಲಾಡಿ ಆಸಾಮಿಯೆಂದೇ ಹೆಸರಾಗಿದ್ದ ಆತನಿಗೆ ತನ್ನ ಬಗ್ಗೆ ಇರುವುದು ಮೆಚ್ಚುಗೆಯೋ ಅಥವಾ ಈರ್ಷೆಯೋ ಎನ್ನುವುದನ್ನು ಸ್ವತಃ ಮೂರ್ತಿಯವರಿಗೆ ನಿರ್ಧರಿಸಲಾಗಲಿಲ್ಲ. ʻಅವನ ಕೆಟ್ಟ ಕಣ್ಣು ತನ್ನ ಮೇಲೇಕೆ ಬಿತ್ತೋʼ ಎಂದು ತಮ್ಮಷ್ಟಕ್ಕೆ ತಾವೇ ಪರಿತಪಿಸಿಕೊಂಡರು.

ಆ ಘಳಿಗೆಯಲ್ಲಿ ಇದ್ದಕ್ಕಿದ್ದಂತೆ ಅವರ ಮನಸ್ಸಿಗೆ ತಾನು ಇನ್ನೆಷ್ಟು ಕಾಲ ಬದುಕಬಹುದು ಎನ್ನುವ ಪ್ರಶ್ನೆಯೋ, ಆತಂಕವೋ ಹುಟ್ಟಿಕೊಂಡುಬಿಟ್ಟಿತು. ಊರಲ್ಲಾಗಿದ್ದರೆ ತಕ್ಷಣವೇ ಕಂಠೀ ಜೋಯಿಸರ ಮನೆಗೆ ಎಡತಾಕುತ್ತಿದ್ದರೇನೋ, ಆದರೆ ಅಪರೂಪಕ್ಕೆ ಹೋಗಿದ್ದರಿಂದ, ಹೆಂಡತಿ ಮಕ್ಕಳೆಲ್ಲರೂ ಬೆಂಗಳೂರಿನ ಎಲ್ಲ ಬಂಧು, ಬಾಂಧವರನ್ನು ನೋಡಿಕೊಂಡೇ ಊರಿಗೆ ಹೋಗುವುದು ಎಂದು ಹಟ ಹಿಡಿದಿದ್ದರಿಂದ ವಾಪಸ್ಸಾಗಲು ಒಂದು ವಾರವೇ ಆಗಿಹೋಯಿತು.

ಅಂತೂ ಊರಿಗೆ ಬಂದ ತಕ್ಷಣ ಕಂಠೀ ಜೋಯಿಸರಲ್ಲಿಗೆ ಓಡಿದರು. ಸ್ವಲ್ಪ ಆತಂಕದಲ್ಲೇ ಬಂದವರನ್ನು ನೋಡಿ ಜೋಯಿಸರಿಗೂ ಗಾಭರಿಯಾಯಿತು. ಪ್ರಯಾಣಕ್ಕೆ ತಾವೇ ಇಟ್ಟುಕೊಟ್ಟ ಮುಹೂರ್ತ, ಬೇರೇನೂ ಅವಘಡವಾಗಿರುವ ಸಂಭವವಿಲ್ಲ ಎಂದುಕೊಂಡರೂ, ದುಗುಡಕ್ಕೆ ಕಾರಣವೇನು ಎಂದು ಮೂರ್ತಿಯವರನ್ನು ಸ್ವಲ್ಪ ಕಳಕಳಿಯಿಂದಲೇ ಕೇಳಿದರು. ಸ್ವಲ್ಪ ಹೊತ್ತು ಸುಮ್ಮನಿದ್ದ ಮೂರ್ತಿಯವರು “ಕಂಠಿ, ಬೆಂಗಳೂರಲ್ಲಿ ಯಾರದೋ ಕೆಟ್ಟ ಕಣ್ಣು ನನ್ನ ಮೇಲೆ ಬಿತ್ತು ನೋಡೋ, ಮನಸ್ಸಿನ ಸಮಾಧಾನಾನೇ ಹೊರಟೋಯ್ತು.

ನಾನು ಇನ್ನೆಷ್ಟು ಕಾಲ ಬದುಕಿರ್ತೀನೋ ಅನ್ನೋ ಆತಂಕ ಶುರುವಾಗಿಬಿಟ್ಟಿದೆ ಕಣೋ ಆವಾಗಿಂದ. ಸ್ವಲ್ಪ ನೀನು ನೋಡಿ ಹೇಳ್ತೀಯಾ” ಎಂದು ತಮ್ಮ ಮನದಲ್ಲಿ ಕೊರೆಯುತ್ತಿದ್ದ ವಿಷಯವನ್ನು ಹೊರಹಾಕಿದರು. ಪ್ರಶ್ನೆ ಕೇಳಿದ ಜೋಯಿಸರು ಸ್ವಲ್ಪ ಗಂಭೀರವಾಗಿ “ನೋಡು ಮೂರ್ತಿ, ನಾನು ಯಾವ ಪ್ರಶ್ನೆಗೆ ಬೇಕಾದ್ರೂ ಉತ್ತರ ಹೇಳ್ತೀನಿ. ಆದ್ರೆ ಸಾವಿನ ಪ್ರಶ್ನೆಗೆ ಮಾತ್ರಾ ಇದುವರೆಗೂ ಹೇಳಿಲ್ಲ; ಮುಂದೂ ಹೇಳಲ್ಲ” ಅಂದುಬಿಟ್ಟರು. ಆದರೆ ಮೂರ್ತಿಗಳು ಬಿಡಬೇಕಲ್ಲ. ಹೇಳದಿದ್ದರೆ ಅದೇ ವ್ಯಸನದಲ್ಲೇ ಸತ್ತುಹೋಗ್ತೀನಿ ಎಂದು ಹೆದರಿಸಿ, ಅದು ಹೇಗೋ ಅಂತೂ ಗೆಳೆತನದ ಬಂಡವಾಳದ ಮೇಲೆ ಜೋಯಿಸರನ್ನು ಒಪ್ಪಿಸಿಯೇಬಿಟ್ಟರು.

ಮೂರ್ತಿಗಳ ಜಾತಕವನ್ನು ತಲೆಗೆ ತಂದುಕೊಂಡ ಕಂಠೀಜೋಯಿಸರು ಪಂಚಾಗದ ಪುಟ ತಿರುವಿದರು. ಮುಖ ಗಂಭೀರವಾಯಿತು. “ಬೇಡ ಕಣೋ, ನೀನು ಕೇಳಬೇಡ, ನಾನು ಹೇಳಲ್ಲ” ಎಂದು ಮತ್ತೆ ಅಂದರು. ಆದರೆ ಮೂರ್ತಿಗಳು ಅದೇನೇ ಇದ್ದರೂ ತಿಳಿದುಕೊಳ್ಳಲೇ ಬೇಕು ಎನ್ನುವ ಹಟ ಹಿಡಿದಿದ್ದರಿಂದ ಬೇರೆ ಉಪಾಯವಿಲ್ಲದೆ “ಇಷ್ಟು ಮಾತ್ರ ತಿಳ್ಕೋ.

ಈ ಕಾರ್ತೀಕ ಕಳೆದು, ಮಾರ್ಗಶಿರ ಹುಟ್ಟತ್ತಲ್ಲ, ಆ ಮಾರ್ಗಶಿರ ಶುದ್ಧ ದಶಮಿ ದಿನ, ಸಾಯಂಕಾಲ ಆರೂವರೆಗೆ ನಿನಗೆ ಒಂದು ವಾಹನ, ಲಾರಿ ಅಥವಾ ಬಸ್ಸು ಆಗಬಹುದು ಅದರಿಂದ ಒಂದು ಘೋರ ಕಂಟಕ ಇದೆ, ಅದನ್ನ ದಾಟಿಬಿಟ್ರೆ ಆಮೇಲೆ ಎಂಭತ್ತೇಳು ವರ್ಷದ ತನಕ ಯಮನಿಗೆ ನಿನ್ನ ಮುಟ್ಟಕ್ಕೆ ಸಾಧ್ಯವಿಲ್ಲ. ಆದರೆ… ಅದರಿಂದ ತಪ್ಪಿಸ್ಕೊಳೋದು ಅಷ್ಟು ಸುಲಭವಲ್ಲ” ಎಂದು ಹೇಳಿ ಮೌನವಾಗಿ ಕುಳಿತರು.

ಮೂರ್ತಿಗಳಿಗೆ ಪಕ್ಕದಲ್ಲೇ ಸಿಡಿಲು ಬಡಿದ ಹಾಗಾಯಿತು. ಎಂದೂ ಕೇಳದಿದ್ದವರು “ಇನ್ನೂ ಒಂದ್ಸಲ ಸರಿಯಾಗಿ ನೋಡಿ ಹೇಳ್ತೀಯಾ?” ಅಂತ ಹೆದರಿಕೆಯಿಂದಲೇ ಕೇಳಿದರು. “ಎಷ್ಟು ಸಲ ನೋಡಿದ್ರೂ ಅಷ್ಟೇ” ಎನ್ನುತ್ತಾ ಪಂಚಾಗವನ್ನು ಮಡಿಚಿಡುತ್ತಾ “ಅದಕ್ಕೇ ನಾನು ಯಾರಿಗೂ ಸಾವಿನ ಕುರಿತಾಗಿ ಹೇಳಲ್ಲ ಅನ್ನೋದು. ಇರೋಷ್ಟು ದಿನ ನೆಮ್ಮದಿಯಾಗಿರ್ದೆ ಸಾವನ್ನ ಕಾಯ್ತಾ ಕೂತ್ಕೊಳೋ ಹಾಗಾಗುತ್ತೆ” ಎಂದು ಸುಮ್ಮನೆ ಕುಳಿತರು. ಅಂದರೆ ಇಂದು ಆಶ್ವೀಜ ಬಹುಳ ತದಿಗೆ… ಇನ್ನು ಬರೀ ಐವತ್ತೆರಡು ದಿವಸವಷ್ಟೇ… ಬೇರೇನೂ ತೋಚದೆ ಮೂರ್ತಿಗಳೂ ಚಿಂತೆಯಿಂದ ಭಾರವಾಗಿ ಮನೆಕಡೆಗೆ ಹೆಜ್ಜೆ ಹಾಕಿದರು.

ಅಂದಿನಿಂದ ಅವರ ಮಾತೇ ಕಡಿಮೆಯಾಗಿಹೋಯಿತು. ಮನೆಯವರಿಗೂ ಇವರ ಈ ಪರಿ ಅರ್ಥವಾಗದೆ ಏನೇನು ಕೇಳಿದರೂ ಮೂರ್ತಿಗಳು ಗುಟ್ಟು ಬಿಟ್ಟುಕೊಡಲಿಲ್ಲ. ತನ್ನೊಬ್ಬನ ನೆಮ್ಮದಿ ಹಾಳಾಗಿರೋದು ಸಾಕು, ಮನೆಯವರ ನೆಮ್ಮದಿ ಏಕೆ ಕೆಡಿಸಬೇಕು ಎಂದುಕೊಂಡರೂ ಒಂದೊಂದು ದಿನ ಮುಂದೆ ಹೋಗುತ್ತಿದ್ದ ಹಾಗೂ ಅವರ ಕಲಮಲ ಹೆಚ್ಚುತ್ತಾ ಹೋಯಿತು. ಊಟ ಸೇರದೆ, ನಿದ್ರೆ ಬಾರದೆ ಬಳಲಿಹೋದರು. ಮನೆಯವರೊಂದಿಗೆ ಮಾತೂ ಹೆಚ್ಚುಕಡಿಮೆ ನಿಂತುಹೋಯಿತು.

ದೀಪಾವಳಿಯ ದಿನ “ಇದು ನನ್ನ ಕಡೆಯ ದೀಪಾವಳಿ” ಎನ್ನಿಸಿ ದೀಪದ ಪ್ರಭೆ ಕಾಣಿಸದೆ ಎಲ್ಲೆಲ್ಲೂ ಕತ್ತಲೆಯೇ ತುಂಬಿಕೊಂಡಂತೆ ಭಾಸವಾಯಿತು. ಹಬ್ಬದೂಟ ರುಚಿಸಲಿಲ್ಲ. ಊಟ, ಉಡುಗೆಗಳಲ್ಲಿ ಸದಾ ಆಸಕ್ತಿಯಿದ್ದವರು ಹೀಗೇಕಾಗಿದ್ದಾರೆ ಎಂದು ಮನೆಯವರೆಲ್ಲರಿಗೂ ಆತಂಕವಾಗಿ ಡಾಕ್ಟರ ಹತ್ತಿರ ಹೋಗೋಣ ಎಂದು ಒತ್ತಾಯಿಸಿದರೆ “ನನಗೇನೂ ಆಗಿಲ್ಲ, ನಾನು ಬರುವುದಿಲ್ಲ” ಎಂದು ಹಟಹಿಡಿದು ಬಿಟ್ಟರು. ಮನೆಯವರೆಲ್ಲರಿಗೂ ಇವರ ಯೋಚನೆಯೇ ಶುರುವಾಗಿ ಕಂಠೀ ಜೋಯಿಸರ ಬಳಿಯೂ ಪ್ರಶ್ನೆ ಕೇಳಿಕೊಂಡು ಬಂದರು. ಜೋಯಿಸರು ಏನನ್ನೂ ಬಾಯಿ ಬಿಡಲಿಲ್ಲ.

ಅಂತೂ ಮಾರ್ಗಶಿರ ಮಾಸವೂ ಆರಂಭವಾಯಿತು. ಈಗ ಮೂರ್ತಿಗಳ ಯೋಚನೆ ಇನ್ನೊಂದು ರೀತಿಯಲ್ಲಿ ತಿರುಗಿತು. ಆ ದಿನ ನಾನು ಹೊರಗೇ ಹೋಗದಿದ್ದರೆ?! ಹೋದರೆ ತಾನೇ ಬಸ್ಸೋ, ಲಾರಿಗೋ ಸಿಕ್ಕಿಕೊಳ್ಳುವುದು. ಅಂದು ಸಂಜೆ ಆರೂವರೆಯ ತನಕ ಮನೆಯಿಂದ ಹೊರಗೆ ಹೆಜ್ಜೆಯಿಡದಿದ್ದರೆ ಆಯಿತು. ಜೋಯಿಸರು ಕಷ್ಟ ಸಾಧ್ಯ ಎಂದಿದ್ದಾರೆಯೇ ಹೊರತು ಅಸಾಧ್ಯ ಎಂದೇನೂ ಹೇಳಲಿಲ್ಲವಲ್ಲ.

ಆ ಘಳಿಗೆ ದಾಟಿಬಿಟ್ಟರೆ ಇನ್ನು ಎಂಭತ್ತೇಳು ವರ್ಷದ ತನಕ ಯೋಚನೆಯೇ ಇಲ್ಲವಲ್ಲ ಎನ್ನುವ ಆಲೋಚನೆ ಬಂದು, ಇದ್ದಕ್ಕಿದ್ದಂತೆ ಅಸಾಧ್ಯ ಹುರುಪು ಬಂದು ಮನೆಯವರೊಂದಿಗೆ ಮೊದಲಿನಂತೆಯೇ ಸರಸವಾಗಿ ಕಾಲ ಕಳೆದರು, ಮೊಮ್ಮಕ್ಕಳೊಂದಿಗೆ ಆಟವಾಡಿದರು. ಹೆಂಡತಿಯೊಂದಿಗೆ ಹೇಳಿ ಬೇಕಾದ್ದನ್ನೆಲ್ಲಾ ಮಾಡಿಸಿ ತಿಂದರು. ಮನೆಯವರೂ ಸಧ್ಯ ಮೊದಲಿನಂತಾದರಲ್ಲ ಎಂದು ನಿಶ್ಚಿಂತೆಯಿಂದ ಉಸಿರು ಬಿಟ್ಟರು.

ದಶಮಿಯ ದಿನವೂ ಬಂತು. “ಇವತ್ತು ಯಾರು ನನ್ನನ್ನು ಕೇಳಿಕೊಂಡು ಬಂದರೂ ನಾನು ಮನೆಯಲ್ಲಿಲ್ಲ ಎಂದು ಹೇಳಿಬಿಡಿ. ನಾನಿವತ್ತು ಗುರುಚರಿತ್ರೆ ಓದುವ ಸಂಕಲ್ಪ ಮಾಡಿದ್ದೇನೆ. ಮಹಡಿಯ ಮೇಲೆ ನನ್ನ ಕೋಣೆಯಲ್ಲೇ ಕುಳಿತು ಓದುತ್ತಿರುತ್ತೇನೆ. ಊಟ ಬೇಡ. ಮಧ್ಯಾಹ್ನ ಬಾಳೆಹಣ್ಣು, ಒಂದು ಲೋಟ ಹಾಲು ತಂದು ಕೊಟ್ಟುಬಿಡಿ. ಓದಿ ಮುಗಿದ ಮೇಲೆ ನಾನೇ ಬರುತ್ತೇನೆ.

ಯಾರೂ ಯಾವುದಕ್ಕೂ ನನ್ನನ್ನು ಕರೆಯಬೇಡಿ” ಎಂದು ಬೆಳಗ್ಗೆಯೇ ಮಹಡಿಯನ್ನು ಸೇರಿಬಿಟ್ಟರು. ಮನೆಯವರಿಗೂ ಇದೇನೀ ಪರಿ ಅನ್ನಿಸಿದರೂ ʻಪಾರಾಯಣʼ ತಾನೇ ಮಾಡಿಕೊಳ್ಳಲಿ ಬಿಡು ಎಂದು ಸುಮ್ಮನಾಗಿ ಮಧ್ಯಾಹ್ನ ಮಹಡಿಯ ಮೇಲೆ ಹೋಗಿ ಹಾಲು, ಹಣ್ಣು ಇಟ್ಟರು. ಮೂರ್ತಿಗಳು ಪುಸ್ತಕದಲ್ಲೇ ಮುಳುಗಿದ್ದರು. ಮಿಕ್ಕವರೆಲ್ಲರೂ ಊಟ ಮಾಡಿ ತಂತಮ್ಮ ವ್ಯವಹಾರಗಳಲ್ಲಿ ಮುಳುಗಿಹೋದರು.

ಸಂಜೆ ನಾಲ್ಕು ಗಂಟೆಗೆ ಓದಿದ್ದು ಮುಗಿಯಿತು. ಸ್ವಲ್ಪ ಹೊತ್ತು ನಿದ್ರೆಯನ್ನಾದರೂ ಮಾಡೋಣವೆಂದುಕೊಂಡು ಮಲಗಲು ಯತ್ನಿಸಿದರು. ನಿದ್ರೆ ಹೇಗೆ ಬಂದೀತು? ಇನ್ನು ಎರಡೂವರೆ ಗಂಟೆ ಕಳೆದರೆ, ಗಂಡಾಂತರದಿಂದ ಪಾರು. ಹೇಗೋ ಕಳೆದುಬಿಡಬೇಕು ಎಂದುಕೊಂಡು ಹಾಸಿಗೆಯ ಮೇಲೆ ಹೊರಳಾಡಿದರು. ಕೆಳಗೆ ಮೊಮ್ಮಕ್ಕಳ ಆಟ, ಮನೆಯವರ ಮಾತು ಎಲ್ಲಾ ಕೇಳಿಸುತ್ತಿದೆ. ಸಂಜೆ ಆರೂವರೆ ಕಳೆದುಬಿಟ್ಟರೆ ಮತ್ತೆ ಇದೆಲ್ಲಾ ನನ್ನದೇ…

ಇನ್ನೇನು ಗಂಡಾಂತರದ ಸಮಯ ಮುಗಿಯುತ್ತಾ ಬಂತು ಎಂದುಕೊಳ್ಳುತ್ತಾ ಪಶ್ಚಿಮದ ಕಿಟಕಿಯಿಂದ ಮುಳುಗುತ್ತಿರುವ ಸೂರ್ಯನನ್ನು ನೋಡತೊಡಗಿದರು. ಗಡಿಯಾರದ ಟಿಕ್‌, ಟಿಕ್‌ ಕೇಳುತ್ತಿದ್ದರೂ ಸಮಯ ಮುಂದುವರೆಯುತ್ತಲೇ ಇಲ್ಲ ಅನ್ನಿಸಿಬಿಟ್ಟಿತು. ಕೆಳಗಿನಿಂದ ಮೆಣಸಿನ ಕಾಯಿ ಬೋಂಡವೇನೋ ಗಮ್ಮೆನ್ನುತ್ತಿದೆ ಜೊತೆಗೆ ಕಾಫಿಯ ಸುವಾಸನೆ ಬೇರೆ ಕೆಣಕಿತು… ಬಾಯಿ ನೀರೂರುತ್ತಿದೆ. ಇನ್ನು ಕೇವಲ ಒಂದು ಗಂಟೆ… ಮುಕ್ಕಾಲು ಗಂಟೆ… ಅರ್ಧ ಗಂಟೆ… ಕಾಲು ಗಂಟೆ… ಎದೆಬಡಿತ ಹೆಚ್ಚಾಯಿತು.

ಅಂತೂ ಇಂತೂ ಆರೂ ಇಪ್ಪತ್ತೈದಾಯಿತು… ಇನ್ನು ಐದು ನಿಮಿಷವಷ್ಟೇ ಕೆಳಗಡೆ ಹೋಗಿ ಕೈಕಾಲು ಮುಖ ತೊಳೆದುಕೊಳ್ಳುವುದರೊಳಗೆ ಆರೂವರೆಯಾಗಿಬಿಡುತ್ತದೆ. ʻಅಂತೂ ನಾನು ಗಂಡಾಂತರವನ್ನು ಗೆದ್ದೆʼ ಎನ್ನುವ ಸಂತೋಷದಲ್ಲಿ ಮಹಡಿಯ ಮೆಟ್ಟಿಲನ್ನು ಇಳಿಯತೊಡಗಿದರು. ಎಲ್ಲರೂ ಒಳಗೆ ಸೇರಿಬಿಟ್ಟಿದ್ದಾರೆ.

ಕತ್ತಲಾಗುತ್ತಾ ಬಂದರೂ ಇನ್ನೂ ವರಾಂಡದ ದೀಪವನ್ನು ಹಾಕಿಲ್ಲ ಎಂದುಕೊಳ್ಳುತ್ತಾ ಅಭ್ಯಾಸಬಲದಿಂದ ಮೆಟ್ಟಿಲ ಪಕ್ಕದಲ್ಲಿದ್ದ ಸ್ವಿಚ್ಚನ್ನು ಅದುಮಲು ಕಡೆಯ ಮೆಟ್ಟಿಲನ್ನು ಇಳಿಯುತ್ತಾ ಸ್ವಿಚ್ಚಿನ ಕಡೆಗೆ ಕೈಚಾಚುತ್ತಾ ಗೊತ್ತಿಲ್ಲದೆ ನೆಲದ ಮೇಲೆ ಬಿದ್ದಿದ್ದ ಏನೋ ಆಟಿಕೆಯ ಮೇಲೆ ಕಾಲಿಟ್ಟರು ಅಷ್ಟೇ, ಸ್ಕೇಟಿಂಗ್‌ ಶೂನ ಮೇಲೆ ಕಾಲಿಟ್ಟಂತೆ ಸೀದಾ ಜಾರುತ್ತಾ ಹೋಗಿ ಎದುರಿನ ಕಂಬಕ್ಕೆ ಡಿಕ್ಕಿ ಹೊಡೆದು ಕೆಳಗೆ ಬಿದ್ದರು. ತಲೆಯೊಡೆದು ಗಾಭರಿಗೇ ಪ್ರಾಣ ಹಾರಿಹೋಗಿತ್ತು. ಆಟಿಕೆಯ ಲಾರಿ ಪಕ್ಕದಲ್ಲೇ ಬಿದ್ದಿತ್ತು, ಅದರ ಚಕ್ರಗಳು ಇನ್ನೂ ತಿರುಗುತ್ತಲೇ ಇದ್ದವು…

ಜ್ಯೋತಿಷ್ಯ ವಾಣಿ ನಿಜವಾಯಿತೆ?! ಇನ್ನೈದು ನಿಮಿಷ ಮಹಡಿಯ ಮೇಲೇ ಕಳೆದಿದ್ದರೆ ಬದುಕಿ ಉಳಿದಿರುತ್ತಿದ್ದರೇ??

‍ಲೇಖಕರು Avadhi

October 14, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ವಿಫಲ ಪ್ರೇಮಕ್ಕೆ ಐದು ಉದಾಹರಣೆಗಳು

ವಿಫಲ ಪ್ರೇಮಕ್ಕೆ ಐದು ಉದಾಹರಣೆಗಳು

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ...

2 ಪ್ರತಿಕ್ರಿಯೆಗಳು

  1. T S SHRAVANA KUMARI

    ಧನ್ಯವಾದಗಳು ಅವಧಿ ಟೀಮ್, ಧನ್ಯವಾದಗಳು ಮೋಹನ್ ಸರ್

    ಪ್ರತಿಕ್ರಿಯೆ
  2. ಕ. ರಮೇಶ ಬಾಬು

    ತುಂಬಾ ಕುತೂಹಲಕರ ಬರಹ. ಕೊನೆಯ ಕ್ಷಣದವರೆಗೂ ‘ರಹಸ್ಯ’ ವನ್ನು ಕಾಪಾಡಿಕೊಂಡು ಬಂದಿದ್ದೀರಿ. ಬರಹ ಮೆಚ್ಚುಗೆಯಾಯಿತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: