'ಜ್ವಾಳದ್ ರೊಟ್ಟಿ ಹೊಟ್ಟಿಗಿ ತಂಪಲೇ ಮಗನಾ….'

-ಸುಘೋಷ್ ಎಸ್ ನಿಗಳೆ
ಕಾಶಿಯಸ್ ಮೈಂಡ್
ಹುಡುಕಾಟದ ಶ್ರೀಗಣೇಶಾಯನಮಃ ಆರಂಭಾಗಿದ್ದು ಬೈಕ್ ನಿಲ್ಲಿಸಲು ಪಾರ್ಕಿಂಗ್ ಸ್ಥಳ ಹುಡುಕಲು ಸಿಟಿ ಮಾರ್ಕೆಟ್ಟಿನ ಎರಡು ಮೂರು ಪ್ರದಕ್ಷಿಣೆ ಹಾಕುವ ಮೂಲಕ. ಕೊನೆಗೂ ಹೇಗೋ ಮಾಡಿ ಸಿಟಿ ಮಾರ್ಕೆಟ್ ನಿಂದ ದೂರ ಸಾಗಿ ಕಲಾಸಿ ಪಾಳ್ಯದ ಖಾಸಗಿ ಬಸ್ ಸ್ಟ್ಯಾಂಡ್ ಸಮೀಪ್ ನನ್ನ ನಾಯಕ ಹೊಂಡವನ್ನು (ಹಿರೋ ಹೊಂಡ) ವನ್ನು ಪಾರ್ಕ್ ಮಾಡುವ ವೇಳೆಗೆ ಮೂಗಿನ ತುದಿಯಲ್ಲಿ ಬೆವರು ಟಿಸಿಲೊಡೆದಿತ್ತು.
recipes-indian-bread-jowar-bhajra-paratha
ಸಿಟಿ ಮಾರ್ಕೆಟ್ ಗೆ ಹೋಗುವ ದರ್ದಿಗೆ ‘ಮೂಲ’ ಕಾರಣವೆಂದರೆ ಚಪಾತಿ ತಿಂದು ತಿಂದು ಹೀಟಾಗಿ, ಬೆಳಿಗ್ಗೆಯೆದ್ದು ಪ್ರಾತರ್ವಿಧಿ ಸಾಫ್ಟ್ ಆಗದೆ ಲೇಟಾಗಿ, ಬೈಕ್ ನಡೆಸುವಾಗ ಪರಮಹಿಂಸೆಯಾಗುತ್ತಿತ್ತು. ಚಪಾತಿ, ಆಲೂಗಡ್ಡೆ, ಕಾಫಿ, ಟೀ, ಸಿಗರೇಟು, ಬದನೆಕಾಯಿ, ಕರಿದ ತಿಂಡಿ ಪದಾರ್ಥ, ಉಪ್ಪಿನಕಾಯಿ, ಮಸಾಲೆ ಆಹಾರ ಕಡಿಮೆ ಮಾಡಿ ಎಂದು ತೀರ್ಥಹಳ್ಳಿಯ ಆಯುರ್ವೇದಿಕ್ ವೈದ್ಯರು ಮೋಡಿ ಅಕ್ಷರಗಳಂತೆ ಕಾಣುವ ಬರಹದಲ್ಲಿ ಆರ್ ಎಕ್ಸ್ ಬರೆದು ಹತ್ತು ವರ್ಷಗಳಾಗುತ್ತ ಬಂದಿದ್ದರೂ, ಈ ಎಲ್ಲ ಪಥ್ಯವನ್ನು ನಾನು ಚಾಚೂ ತಪ್ಪದೆ ಪಾಲಿಸಿರಲಿಲ್ಲ. “ಜ್ವಾಳದ್ ರೊಟ್ಟಿ ಹೊಟ್ಟಿಗಿ ತಂಪಲೇ ಮಗನಾ….ಮತ್ತ್ ಏಕ್ ದಂ ಪವರ್ ಬರ್ತೈತ್ ಲೇ” ಎಂಬ ದೂರದ ಬೆಳಗಾವಿಯ ಸಮೀಪದ ಮಿತ್ರನೊಬ್ಬನ ಸಲಹೆಯ ಮೇರೆಗೆ ‘ಜ್ವಾಳದ ರೊಟ್ಟಿ’ಯನ್ನು ನನ್ನ ಊಟದ ಮೆನುವಿನಲ್ಲಿ ಸೇರಿಸಲು ನಿರ್ಧರಿಸಿದೆ. ಆದರೆ, ಬಿಗ್ ಬಝಾರ್-ಸ್ಮಾಲ್ ಬಝಾರ್, ಮೋರ್-ಲೆಸ್, ಟೋಟಲ್-ಪಾರ್ಷಿಯಲ್, ನೀಲಗಿರೀಸ್-ಬಿಳಿಗಿರಿಸ್ ಎಲ್ಲ ಸುತ್ತಾಡಿದರೂ ಜ್ವಾಳ ಸಿಗಲಿಲ್ಲ. ಟೋಟಲ್ ನಲ್ಲಂತೂ ಜೋಳ ಕೇಳಿದ್ದಕ್ಕೆ ಮೆಕ್ಕೆ ಜೋಳ ಪ್ಯಾಕ್ ಮಾಡಿಕೊಡಲು ಅಲ್ಲಿನ ಬಡಕಲು ದೇಹದ ಸೊಟ್ಟ ಮೂತಿಯ ಸೇಲ್ಸ್ ಎಕ್ಸಿಕ್ಯೂಟಿವ್ ಸನ್ನದ್ಧಳಾಗಿದ್ದಳು.
ಅಂತೂ ಸರ್ವದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ ಎಂಬಹಾಗೆ, ಸರ್ವ ವಸ್ತುಗಳಿಗೆ ಒಂದೇ ಕಟ್ಟೆಯಾಗಿರುವ ನಮ್ಮ ಕೆ ಆರ್ ಮಾರುಕಟ್ಟೆಗೆ ಹೋದೆ. ಬೈಕ್ ನಿಲ್ಲಿಸಿದ ಬಳಿಕ ಕಲಾಸಿಪಾಳ್ಯದಲ್ಲಿ ಯಮರಾಯನ ಆಸ್ಥಾನದ ಗೌರವಾನ್ವಿತ ಖಾಯಂ ಸದಸ್ಯರಾಗಿರುವ ಖಾಸಗಿ ಬಸ್ ಗಳಿಂದ ತಪ್ಪಿಸಿಕೊಂಡು ಅಂಗಡಿ ಸಾಲುಗಳ ಮಧ್ಯೆ ನಡೆಯತೊಡಗಿದೆ. ಪ್ರಾಣಿಗಳು ಸತ್ತಾಗ, ಹರಿಯುವ ನೀರಿನಲ್ಲಿ ಬಯೋಕಾನ್ ನ ವೇಸ್ಟ್ ಸೇರಿದಾಗ ಬರುವಂತಹ ವಾಸನೆಯನ್ನು ತಡೆದುಕೊಂಡು ಬಾಬಾ ರಾಮದೇವರ ಕಪಾಲಭಾತಿ ಪ್ರಾಣಾಯಾಮ ಮಾಡುತ್ತ ಸಿಟಿ ಮಾರ್ಕೆಟ್ಟು ಸೇರಿ, ದೀರ್ಘವಾಗಿ ಅನುಲೋಮ-ವಿಲೋಮ ಮಾಡಿದೆ. ಈ ಮಧ್ಯೆ ‘ಎಕ್ಸೈಟಿಂಗ್ ಗರ್ಲ್ಸ್’ ಹಾಗೂ ‘ಗೆಸ್ಟ್ ಹೌಸ್’ ಚಿತ್ರಗಳ ಪೋಸ್ಟರ್ ದರ್ಶನದಿಂದ ಈ ಪ್ರಕ್ರಿಯೆಯಲ್ಲಿ ಕೊಂಚ ತೊಂದರೆಯುಂಟಾಯಿತು. “ಏ ಇದು ಮರ್ಯಾದಸ್ಥರು ಹೋಗುವ ಸಿನಿಮಾ ಕಣ್ ಬ್ರದರ್, ಬಾ ನಾವು ‘ಸವಾರಿ’ ನೋಡೋಣ” ಎಂದು ಕಾಲೇಜ್ ಹುಡುಗನೊಬ್ಬ ಮತ್ತೊಬ್ಬನನ್ನು ಅಲ್ಲಿಂದ ಎಳೆದುಕೊಂಡು ಹೋದದ್ದು ನೋಡಿ, ಆ ಬ್ರದರ್ ಬಗ್ಗೆ ಕೆಡುಕೆನಿಸಿತು.
ಸಿಟಿ ಮಾರ್ಕೆಟ್ ಸೇರಿದ ಮೇಲೆ ಶುರುವಾಯಿತು ನನ್ನ ಜ್ವಾಳದ ಬೇಟೆ. ಹಾರ್ಟ್ ಆಫ್ ದಿ ಸಿಟಿ ಮಾರ್ಕೆಟ್ ಸೇರಿದಂತೆ ಅದರ ಜಠರ, ಧಮನಿ, ಹೊಟ್ಟೆ, ತೊಡೆ, ಶೀರ್ಷ, ಪುಪ್ಪುಸ, ಠಸ್ ಪುಸ ಎಲ್ಲವನ್ನೂ ಸುತ್ತಿದರೂ ಜೋಳದ ಪತ್ತೆಯಿಲ್ಲ. ನನ್ನನ್ನು ನೋಡಿ “ಯೇssssಸ್ ಏನ್ ಬೇಕ್ ಸಾರ್..”ಎಂದು ಕೇಳಿದ್ದ ಬೇರೆ ಬೇರೆ ಅಂಗಡಿಯ ಹುಡುಗರೆಲ್ಲ ನಾನು ಹಾದಿ-ಬೀದಿ ತಪ್ಪಿ ಮತ್ತೆ ಅದೇ ಅದೇ ಅಂಗಡಿಗಳ ಮುಂದೆ ಸುಳಿದಾಡಲು ತೊಡಗಿದಾಗ ದೀರ್ಘವಾಗಿ ಆಕಳಿಸಿ ಬೇಸರ ವ್ಯಕ್ತಪಡಿಸಿದರು. ಎಷ್ಟು ಸುತ್ತಿದರೂ ಜೋಳದ ಪತ್ತೆಯಿಲ್ಲ. ಜೋಳ ಬಿಟ್ಟು ಜಗತ್ತಿನಲ್ಲಿರುವ ಎಲ್ಲ ವಸ್ತುಗಳನನ್ನು ನಾನು ಸಿಟಿ ಮಾರ್ಕೆಟ್ಟಿನಲ್ಲಿ ನೋಡಿಯಾಗಿತ್ತು. ಅಂತೂ ಇಂತೂ ಕೊನೆಗೆ ಧಾನ್ಯಗಳ ಅಂಗಡಿಯೊಂದನ್ನು ನಾನು ಪತ್ತೆ ಹಚ್ಚುವ ವೇಳೆಗೆ, ನನ್ನ ಜೀನ್ಸ್ ಪ್ಯಾಂಟ್ ಪಾದದ ಬಳಿ ಭಯಂಕರ ಒದ್ದೆಯಾಗಿ, ಟೀಶರ್ಟ್ ಮುದ್ದೆಯಾಗಿ, ಕನ್ನಡಕದ ಮೇಲೆ ಮಿಲಿಯಾಂತರ ಧೂಳಿನ ಕಣಗಳ ಶೇಖರಣೆಯಾಗಿ, ತಲೆ ಹೀಟಾಗಿತ್ತು. ಆದರೆ ಹೊಟ್ಟೆಗೆ ಬೇಕಾದದ್ದು ಸಿಕ್ಕದ್ದರಿಂದ ಈ ಎಲ್ಲ ತೊಂದರೆಗಳನ್ನು ಮರೆತು ಅಂಗಡಿ ಮುಂದೆ ನಿಂತೆ. ಬಹುಶಃ ದೇವರು ಬಂದಿದ್ದರೂ ಆ ತಮಿಳು ಅಂಗಡಿಯವ ಅಷ್ಟು ಖುಶಿಯಾಗುತ್ತಿದ್ದನೋ ಇಲ್ಲವೋ, ಆದರೆ ಮುಂದೆ ನಿಂತ ಗಿರಾಕಿಯನ್ನು ನೋಡಿ ಪೋಲಿಸ್ ಪೇದೆಯೊಬ್ಬ ಐಪಿಎಸ್ ಗೆ ನೀಡುವಷ್ಟೇ ಗೌರವವನ್ನು ನೀಡಿದ.
“ಜೋಳ ಇದ್ಯಾ” ಕೇಳಿದೆ.
“ಇದೆ… ಇದೆ” ಎಂದ.
“ಹೇಗೆ ಕೇಜಿ”
“ಎಷ್ಟು ಬೇಕು”
“ಹೇಗೆ ಕೇಜಿ ಎಂದು ತಿಳಿಸಿದರೆ ಹೇಳಬಹುದು”
“ಒನ್ ಟ್ವೆಂಟಿ ರುಪಿಸ್ ಕೆಜಿ”
ರೇಟು ಕೇಳಿ, ಮನಮೋಹನ್ ಸಿಂಗ್ ಹಾಗೂ ಪ್ರಣಬ್ ಮೇಲೆ ಭಯಂಕರ ಕೋಪ ಬಂತು. ಬಡವರ ಆಹಾರವಾಗಿರುವ ಜೋಳ 120 ರೂಪಾಯಿ ಕೆಜಿಯೇ ಎಂದು ಅಚ್ಚರಿಯಾಯಿತು. ಆದರೆ ಎಲ್ಲೋ ಯಡವಟ್ಟಾಗಿದೆ ಅನ್ನಿಸಿ “ತೋರಿಸಿ ನೋಡೋಣ“ ಎಂದೆ. ನೀಟಾಗಿ ಪ್ಯಾಕ್ ಮಾಡಲಾಗಿದ್ದ ಪ್ರಿಂಟೆಡ್ ಪ್ಲಾಸ್ಟಿಕ್ ಚೀಲವೊಂದರಿಂದ ಮುಷ್ಟಿ ತುಂಬ ಜೋಳ ತೆಗೆದು ನನ್ನ ಕೈಗೆ ನೀಡಿದ. ಅಂಗಡಿಯವನ ಯಡವಟ್ಟು ಬಯಲಾಯಿತು. ಆಸಾಮಿ, ಬಿಗ್ ಬಝಾರ್ ನ ಹುಡುಗಿಯ ಹಾಗೆ ಮೆಕ್ಕೆ ಜೋಳ ತೆಗೆದು ಕೊಟ್ಟಿದ್ದ.
“ಏ..ಈ ಜೋಳ ಅಲ್ಲ. ರೊಟ್ಟಿ ಮಾಡ್ತಾರಲ್ಲ….ಜೋಳ..ಅದು” ಎಂದೆ. ಆತನಿಗೆ ಅರ್ಥವಾಗಲಿಲ್ಲ.
“ಬಿಳಿಬಿಳಿಯಾಗಿರುತ್ತೆ,..ಗುಂಡಗಿರುತ್ತೆ…ಗುಂಡಗಿದ್ದರೂ ಅದಕ್ಕೆ ಒಂದು ಕಡೆ ಚೊಚ್ಚಿನ ಥರ ಇರುತ್ತೆ” ಅಂದೆ.
ಹೀಗೆ ಹೇಳುತ್ತಲೇ, ನಾನು ಡಬಲ್ ಮೀನಿಂಗ್ ಥರದ್ದು ಏನಾದರೂ ಮಾತನಾಡಿದೆನೆ ಎಂಬ ಸಂಶಯ ಬಂತು. ಅಷ್ಟರಲ್ಲಿ ಅಂಗಡಿಯವ ನನ್ನ ವಿವರಣೆಯನ್ನು ಕೇಳಿ ಪೋಲಿ ನಗೆ ನಕ್ಕು, “ಏ ಅದು ಇಲ್ಲ ನಮ್ಮಲ್ಲಿ” ಎಂದ.
ನಾನು ಪೆಚ್ಚು ಮೋರೆ ಹಾಕಿಕೊಂಡು ಅಂಗಡಿಯಿಂದ ಹೊರಬಿದ್ದೆ. ಹಾಗೇ ಅಂಗಡಿಯ ಬೋರ್ಡ್ ಕಡೆ ನೋಡಿದಾಗ ಗೊತ್ತಾಗಿದ್ದು, ಅದು ಬಿತ್ತುವ ಬೀಜಗಳನ್ನು ಮಾರುವ ಅಂಗಡಿ ಎಂದು.
ಮತ್ತೆ ಹಟ ಬಿಡದ ದೇವೇಗೌಡರಂತೆ ಜ್ವಾಳದ ಬೇಟೆಗೆ ತೊಡಗಿದೆ. ಕೊನೆಗೂ ನಾನು ಯುರೇಕಾ ಯುರೇಕಾ ಎಂದು ಬಟ್ಟೆ ಹಾಕಿಕೊಂಡು ಕೂಗಾಡುವಾಗ ಸುಮಾರು ಎರಡು ಗಂಟೆ ಕಳೆದಿತ್ತು. ಈ ಅಂಗಡಿಯವ ಮಾತ್ರ ಪರಮ ನಿರ್ಲಿಪ್ತತೆಯಿಂದ ದೊಡ್ಡದಾಗಿ ಆಕಳಿಸಿ ತನ್ನ ಸಹಾಯಕನಿಂದ ಸುಮಾರು 10 ಚೀಲಗಳನ್ನು ಕೆಳಗಿಳಿಸಿ ಅದರೆ ಕೆಳಗೆ ಭಯಾನಕ ನಿರ್ಲಕ್ಷ್ಯತನದಿಂದ ಇಡಲಾಗಿದ್ದ ಜೋಳವನ್ನು ತೂಗಿಸಿ ಕೊಟ್ಟ. ಅದನ್ನು ಹಿಡಿದುಕೊಂಡು ಬೈಕ್ ಏರಿ ಸೀದಾ ಮನೆಗೆ ಬಂದರೆ, ಜೋಳ ನೋಡಿ ನನ್ನ ಅರ್ಧಾಂಗಿ, “ಅಷ್ಟೂ ಗೊತ್ತಾಗೋದಿಲ್ವೇನ್ರೀ ನಿಮ್ಗೆ, ಜೋಳ ಮುಗ್ಗಾಗಿರೋದು ಕಣ್ಣಿಗೆ ಅಷ್ಟು ಚೆನ್ನಾಗಿ ಕಾಣ್ತಿರೋವಾಗ ಯಾಕ್ರೀ ತರಕ್ ಹೋದ್ರೀ” ಎಂದು ಚಪಾತಿ ಮಾಡಲು ಗೋಧಿ ಹಿಟ್ಟು ಕಲೆಸಲಾರಂಭಿಸಿದಳು

‍ಲೇಖಕರು avadhi

October 9, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

6 ಪ್ರತಿಕ್ರಿಯೆಗಳು

 1. ಎಂ. ಎಸ್. ಪ್ರಭಾಕರ

  ಬೆಂಗಳೂರಿನ ಹೈ ಗ್ರೌಂಡ್ಸ್ ನ ಶಿವಾನಂದ ಸ್ಟೋರ್ಸ್ ನಲ್ಲಿ ಚೆನ್ನಾಗಿ ಸಫಾ ಮಾಡಿದ ಜೋಳಾನೂ ಸಿಗುತ್ತೆ, ಅಷ್ಟೇ ಒಳ್ಳೆ ಜೋಳದ ಹಿಟ್ಟೂ ಸಿಗುತ್ತೆ. ಮುಗ್ಗಾಗಿರೋ ಜೋಳ ಅಲ್ಲ. ಎರಡೂವರೆ ವರುಷ ಧಾರವಾಡದಲ್ಲಿ ವಾಸಿಸಿ ಅಲ್ಲಿನ ಊಟ, ಅದರಲ್ಲೂ ಆ ದಿನಗಳ (೧೯೫೯-೬೧) ಬಸಪ್ಪನ ಖಾನಾವಳಿ ಊಟ ತಿಂದು ಚಪ್ಪರಿಸಿದವನಿಗೆ ನಿಮ್ಮ ಬರಣಿಗೆ ಅಷ್ಟೇ ಪಸಂದಾಯಿತು.

  ಪ್ರತಿಕ್ರಿಯೆ
  • usdesai

   ಯಾಕ್ ಅಲ್ಲಿ ಇಲ್ಲಿ ಹೋಗ್ತೀರಿ ನಮ್ಮ ಮನಿಗೆ ಬರ್ರಿ ಹಾಂ ಬರೂಕಿಂತಾ ಮೊದಲ ತಿಳಸ್ರಿ…

   ಪ್ರತಿಕ್ರಿಯೆ
 2. guru

  ನಮಸ್ಕಾರ,
  “ಬೆಂಗಳೂರಿನಲ್ಲಿ ಜೋಳ ಕೊಂಡು ತಂದು, ಅದನ್ನು ಗಿರಣಿಗೆ ಹಾಕಿಸಿ, ಆ ಹಿಟ್ಟಿನಿಂದ ಹೆಂಡತಿಯ ಕೈಯಲ್ಲಿ ರೊಟ್ಟಿ ಮಾಡಿಸಿ” ತಿನ್ನುವುದು ಅಂದರೆ ಮಿಷನ್ ಇಂಪಾಸಿಬಲ್ಲೇ ಸರಿ.
  ಮೊದಲನೆಯದಾಗಿ ನಿಮಗೆ ಒಳ್ಳೆಯ ಜೋಳ ಸಿಗುವುದು ಕಷ್ಟ – ಅಫ್ ಕೋರ್ಸ್ ನೀವು ಹೇಳಿದ ಹಾಗೆ ಜನಕ್ಕೆ ಜೋಳ ಅಂದರೆ ಏನು ಅಂತ ತಿಳಿಸುವುದು ಕಡಿಮೆ ಕಷ್ಟದ ಕೆಲಸವಲ್ಲ. ಇನ್ನು ಜೋಳದಲ್ಲಿ ಬಿಳಿಜೋಳ ಸಿಗುವುದು ಇನ್ನೂ ಕಷ್ಟ.
  ಗಿರಣಿಯಲ್ಲಿ ನಿಮಗಿಂತ ಮುಂಚೆ ಯಾರಾದರೂ ಬೇರೆ ಧಾನ್ಯ ಹಾಕಿಸಿದ್ದರೆ ನಿಮ್ಮ ಜೋಳದ ಹಿಟ್ಟು ಮಟಾಷ್ !
  ನಿಮ್ಮ ದೈವ ಚೆನ್ನಾಗಿದ್ದು, ನಿಮಗೆ ಒಳ್ಳೆಯ ಹಿಟ್ಟು ಸಿಕ್ಕರೂ ನಿಮ್ಮ ಅರ್ಧಾಂಗಿಗೆ ಹಿಟ್ಟಿಗೆ ಸರಿಯಾಗಿ ಎಸರು ಹಾಕಿ, ಎರಡೂ ಕೈಲೀ ರಪರಪ ರೊಟ್ಟಿ ಬಡದು, ಅದನ್ನು ಹರಿಯದಂತೆ ಹಂಚಿನ ಮೇಲೆ ಹೊತ್ತದಂತೆ ಬೇಯಸಿ ಹಾಕುವುದರ ಸಾಧ್ಯತೆ ಇನ್ನೂ ಕಡಿಮೆ.
  ಅದಕ್ಕೆ ನನ್ನ ಬ್ಲಾಗಿನಲ್ಲಿ ರೊಟ್ಟಿ ಅಂಗಡಿಗಳ ಪಟ್ಟಿ ಕೊಟ್ಟಿದ್ದೇನೆ. ಅಲ್ಲಿ ಹೋಗಿ ರೊಟ್ಟಿ ತಿಂದು ಗಟ್ಟಿಯಾಗಿ !!
  -ಗುರು

  ಪ್ರತಿಕ್ರಿಯೆ
 3. Berlinder

  ಲೇಖನದ ಒಳಾಂಶ ನಿರೂಪಣೆ ಚೆಲುವಾಗಿದೆ.
  ನಿಮ್ಮ ಮೂತಿಭಾಷೆಯ ಪ್ರೀತಿ = ಆಡುಮಾತಿನ ವರಸೆ
  (ಅಥವ ಇನ್ನಾವ ಮಾತು) ಸರಿ ಎನ್ನುತ್ತೀರಿ? ಸಲಿಸಿದೆ;
  ತಮ್ಮಿಷ್ಟ ನಯವೊ ಅನ್ಯಾಯವೊ ನಿಮಗದು ಒಲಿಸೆ!
  ಓದಲು ನನಗೆ ಕ್ಲಿಷ್ಟ, ’ಕೈಲಾಅಂ’ ಸಮಾನರಿಗೆ? ಇಷ್ಟ.
  ಕನ್ನಡದಜೊತೆಗೆ ನಿಮ್ಮ ಇಂಗ್ಲಿಷ್ ಅಥವ ಕಂಗ್ಲಿಷ್ ಅನಿಷ್ಟ.
  ಅಂದರೆ ಆ ಲೇಖನ ರೈತರಿಗೆಲ್ಲ, ಅಹಿತವೆನಿಸುದಲ್ಲ,
  ಜೊತೆಗೆ ಅನಿಸುವುದು ನಿಮ್ಮ ಕನ್ನಡ ಜ್ಞಾನ ಸಾಕಷ್ಟಿಲ್ಲ.
  ಬೇವಾರ್ಸಿ ಬೆಂಗಳೂರಲ್ಲದು ನಡೆಯುತ್ತೆ ಚಿಂತೆಯಿಲ್ಲ,
  ಯಾರೇನಾದರು ಮಾತಾಡಬಹುದು ಪರವಾಯಿಲ್ಲ,
  ಕನ್ನಡ ನಾಡಿನಲಿ ಅಚ್ಚ ಕನ್ನಡಿಗರ ಅವನತಿ, ಕೀಳಾಂಶ,
  ಮುನ್ನಡೆದು ಹೆಚ್ಚುತಿದೆ, ದುರ್ಮತಿ ನಿಮಗದು ಗಮನ ನಾಶ!
  ಆದರೆ ನಿಮ್ಮಜೊತೆಗೆ ಕೂಡಿರುವರು ೯೯ ಅಂತರ್ಜಾಲಿಕರು,
  ಪ್ರಕ್ಯಾತರು, ಪ್ರಗಲ್ಭರು, ಪ್ರತಿಭಾವಂತರು, ಕನ್ನಡಕರ್ತರು,
  ಅಂತವರ ಪುರಸ್ಕಾರ, ಬೆಂಬಲ ನಿಮಗೆ ಖಚಿತ, ಪ್ರಚಲಿತ,
  ಕುವೆಂಪು, ಗೋರಾ, ಅವವರೂ ಸ್ವಚ್ಛ ಬರೆದರು ಪ್ರಕ್ಯಾತ.
  ವಿಜಯಶೀಲ, ಬೆರ್ಲಿನ್, ೧೧.೧೦.೦೯

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: