ಜ೦ಬೆ ಎಂಬ ಜಟ್ಟಿ..

ಘಟಾನುಘಟಿಗಳಲ್ಲಿ ಒಬ್ಬರು….

– ಅಮಾಸ

27 ಮಾರ್ಚ್,  ವಿಶ್ವರಂಗಭೂಮಿ ದಿನ. ಧ್ಯಾನಕ್ಕೆ ಸಿಗುವ ಒಂದಷ್ಟು ವ್ಯಕ್ತಿತ್ವಗಳ ಮಾದರಿಯನ್ನು ಅನುಸರಿಸಿ ರಂಗಕಾಯಕ ಮಾಡುವ ಹೊತ್ತಲ್ಲಿ – ಬಸು, ಅಕ್ಷರ, ಪ್ರಸನ್ನ, ಇಕ್ಬಾಲ್ ಅಹ್ಮದ್, ರಘುನಂದನ, ಪ್ರಕಾಶ ಗರೂಡ, ಜಂಬೆ- ಎಲ್ಲ ನೆನಪಾಗುತ್ತಾರೆ. ಅವರೊಂದಿಗೆ ಕಳೆದ ಕ್ಷಣಗಳು ನೆನಪಾಗುತ್ತವೆ. ಬೆನ್ನು ತಟ್ಟಿ ಪ್ರೋತ್ಸಾಹಿಸಿದ, ತಪ್ಪಿದಲ್ಲಿ ಕಾಲೆಳೆದು ಕಿಚಾಯಿಸಿದ ಅಲ್ಲದೆ ಹೊಸ ಓದು,ಹೊಸ ನೋಟದ ಹೊಸ ಕಾಣ್ಕೆಗಳನ್ನು ಹಾಕಿಕೊಟ್ಟು ಹೊಸದಾಗಿ ರಂಗಭೂಮಿಗೆ ಬರುತ್ತಿರುವ ಯುವ ಮಿತ್ರರೊಂದಿಗೆ ಇಂದಿಗೂ ಅದೇ ಉತ್ಸಾಹದಲ್ಲಿ ಕೆಲಸ ಮಾಡುವ ಅವರ ಬದ್ಧತೆ ಕೊಂಚ ಧೈರ್ಯ ಕೊಡುತ್ತದೆ. ಯಾವದೋ ಕ್ಷಣದಲ್ಲಿ ಸಾಕಪ್ಪ ಈ ರಂಗಭೂಮಿ ಸಹವಾಸ ಅಂದುಕೊಳ್ಳುವಾಗ ರಂಗಭೂಮಿಯನ್ನೇ ಉಸಿರಾಗಿಸಿಕೊಂಡವರು ಥಟ್ಟನೆ ನೆನಪಾಗುತ್ತಾರೆ….. ಇವತ್ತು ಈಗ ನೆನಪಾದವರು ಚಿದಂಬರರಾವ್ ಜಂಬೆ…. ಮೂವತ್ತು ವರ್ಷಗಳ ಕಾಲ ರಂಗಶಿಕ್ಷಣ ನೀಡಿದ, ಕನ್ನಡ ರಂಗಭೂಮಿಯಲ್ಲಿ ಬಹಳಷ್ಟು ನಟ-ನಟಿಯರಿಗೆ,   ನಿರ್ದೇಶಕರುಗಳಿಗೆ, ರಂಗತಂತ್ರಜ್ಞರುಗಳಿಗೆ ಪಾಠ ಮಾಡಿದ, ರಂಗದೀಕ್ಷೆ ನೀಡಿದ ಮಹಾನ್ ವ್ಯಕ್ತಿತ್ವ ಶ್ರೀ ಚಿದಂಬರರಾವ್ ಜಂಬೆ ಅವರದ್ದು. ಆಧುನಿಕ ಕನ್ನಡ ರಂಗಭೂಮಿಯಲ್ಲಿ ನಾಟಕ ಕಲಿಸುವ, ಕಲಿಯುವ, ನೋಡುವ ಪರಂಪರೆಯನ್ನು ಬೆಳೆಸಿದ ಕೆಲವೇ ನಿರ್ದೇಶಕರುಗಳಲ್ಲಿ ಜಂಬೆ ಅವರ ವ್ಯಕ್ತಿತ್ವ ಗುರುವಿನ ಸ್ಥಾನದ್ದು. ಅವರು ನನಗೆ ಗುರುಗಳಲ್ಲ ಆದರೂ ಅವರ ನಿರ್ದೇಶನದ ನಾಟಕಗಳಿಂದ ನಾನು ಕಲಿತಿದ್ದೇನೆ, ಅವರ ಒಡನಾಟದಿಂದ ನಾಟಕ ಕಟ್ಟುವ, ಸಾಹಿತ್ಯ ಕೃತಿಯೊಳಗಿನ ನಾಟಕೀಯ ಭಾವಗಳನ್ನು ಅರ್ಥೈಸಿಕೊಳ್ಳುವ, ಅಲ್ಲದ್ದನ್ನೂ ನಾಜೂಕಾಗಿ ಕ್ರಿಯಾಶೀಲಗೊಳಿಸುವ, ನವಶಾಸ್ತ್ರೀಯ ಕಲಾ ಮಾರ್ಗಗಳನ್ನು ಆಧುನಿಕವಾಗಿ ಒಳಗೊಳ್ಳುವ…. ಹೀಗೆ ಅವರಿಂದ ಏನೆಲ್ಲ ಕಲಿತಿದ್ದೇನೆ.

 

ಆ ವ್ಯಕ್ತಿತ್ವ ಅಖಾಡಾದ ಮುಂದೆ ಕುರ್ಚಿ ಹಾಕಿಕೊಂಡು ಕೂತಿದ್ದರೆ ಸಾಕು ನಾಟಕದ ತಾಲೀಮಿಗೊಂದು ತೂಕ ತನ್ನತಾನೇ ಬಂದುಬಿಡುತ್ತದೆ. ಇದು ಉತ್ಪ್ರೇಕ್ಷೆ ಮಾತಲ್ಲ ಅವರನ್ನು ಹತ್ತಿರದಿಂದ ಬಲ್ಲ ಎಲ್ಲರೂ ಒಪ್ಪಿಕೊಳ್ಳುತ್ತಾರೆ. ನಾಟಕ ಹೀಗೇ ಮಾಡಬೇಕೆಂದು, ಅಭಿನಯ ಅಂದರೆ ಇದು ಎಂದು ತಮಗೆ ತಿಳಿದ ಸತ್ಯವನ್ನು ಬಲವಂತವಾಗಿ ನಟರ ಮೇಲೆ ಹೇರುವ ಅದೆಷ್ಟೋ ನಿರ್ದೇಶಕರ ಬಗ್ಗೆ ನಟ-ನಟಿಯರು ಮಾತಾಡಿಕೊಳ್ಳುವುದನ್ನು ಕೇಳಿದ್ದಿದೆ. ಆದರೆ ಕಲಿಸುವ ಸೂಕ್ಷ್ಮತೆಯನ್ನು ಉಳಿಸಿಕೊಂಡು ನಟರ ಅಂತಃಸ್ಪೂರ್ತಿಗೆ ಇಂಬು ಕೊಡುವ ದೃಷ್ಟಿಯುಳ್ಳ ಕೆಲವು ನಿರ್ದೇಶಕರಲ್ಲಿ ಶ್ರಿ ಚಿದಂಬರರಾವ್ ಜಂಬೆ ಅವರು ಒಬ್ಬರು. ಸೌಂದರ್ಯ ಪ್ರಜ್ಞೆ ಮತ್ತು ನಟರ ಭಾವಪ್ರಪಂಚ ಎರಡು ಒಟ್ಟೊಟ್ಟಿಗೆ ಅವರ ನಾಟಕಗಳಲ್ಲಿ ಕಾಣುತ್ತದೆ. ಯಾವ ನಾಟಕವೇ ಆಗಲಿ ರಂಗಕೃತಿಯ ಸಂಕಲನದಲ್ಲಿಯೇ ಅವರು ಗೆದ್ದು ಬಿಟ್ಟಿರುತ್ತಾರೆ. ರಂಗಸಾಧ್ಯತೆಯನ್ನು ಕಲಾತ್ಮಕವಾಗಿ ಆಗು ಮಾಡುವ ಆ ವಿಧಾನದಲ್ಲಿ ಸಹನೆ ಮತ್ತು ನಾಟಕದ ಒಟ್ಟು ವಿನ್ಯಾಸವನ್ನು ಜತನದಲ್ಲಿಟ್ಟುಕೊಂಡು ಕೃತಿಯ ಆಶಯವನ್ನು ವಿಸ್ತಾರವಾಗಿ ಪದರು ಪದರು ಬಿಡಿಸಿಡುವ ಕ್ರಮ ಅವರ ಶಿಸ್ತಿನೊಂದಿಗೆ ನಾಟಕಕ್ಕೂ ಬಂದು ಬಿಡುತ್ತದೆ. ತಾಲೀಮು ಹಂತದಲ್ಲಿ ನಟರೊಂದಿಗೆ ಒಡನಾಡುವುದು, ನೇಪಥ್ಯವನ್ನು ಜೀವಂತ ಪಾತ್ರವೆಂದು ಕಾಣುವುದು, ಹಲವಾರು ತಂತ್ರಜ್ಞರನ್ನೂ ಕೂಡಿಸಿಕೊಂಡು ಒಂದು ಮಾದರಿಯ ಕುಸುರಿ ಕೆಲಸವನ್ನು ನಾಟಕದಲ್ಲಿ ಪಾಕಗೊಳಿಸುವ ಅವರ ರಂಗಭೂಮಿ ಪ್ರೀತಿ ಎಂಥವರನ್ನು ಉತ್ಸಾಹಿತರನ್ನಾಗಿಸುತ್ತದೆ. ಸಂಘಟಿಸುವ ಚಾತುರ್ಯದಿಂದ ದೂರ ಉಳಿದು ಎಲ್ಲವನ್ನೂ ನಾನೇ ಮಾಡುತ್ತೇನೆಂದು ಹೊರಡುವ ಈ ದಿನಮಾನದಲ್ಲಿ ಹೀಗೆ ರಂಗಬಳಗವನ್ನು ನಾಟಕದ ನೆಪದಲ್ಲಿ ಒಟ್ಟಾಗಿಸುತ್ತಿರುವುದು ಮತ್ತು ಯುವ ರಂಗಕರ್ಮಿಗಳಿಗೆ ಆದ್ಯತೆ ನಿಡುತ್ತಿರುವುದು ನಿಜಕ್ಕೂ ಸಂತೋಷದ ಸಂಗತಿ. ಕನ್ನಡದ ಎರಡು ಪ್ರಸಿದ್ಧ ರಂಗಶಾಲೆಗಳಲ್ಲಿ ಆಚಾರ್ಯ ಪುರುಷರಾಗಿ ಕೆಲಸ ಮಾಡಿ, ರಂಗಾಯಣದ ನಿರ್ದೇಶಕರಾಗಿ, ರಾಷ್ಟ್ರೀಯ ನಾಟಕ ಶಾಲೆಯ ಬೆಂಗಳೂರು ಚಾಪ್ಟರ್ ತೆರೆದು ಶಿಬಿರಗಳನ್ನು ನಡೆಸಿಯೂ ಎಳೆಮಗುವಿನಂತೆ ಹೊಸ ಹುಡುಗರೊಂದಿಗೆ ಕೈ ಜೋಡಿಸಿ ಸಂಘಟನೆ ಕಟ್ಟುವ ಉತ್ಸಾಹದಲ್ಲಿರುವ ಅವರ ಬದ್ಧತೆ ನಮಗೆ ಮಾದರಿಯಾಗಿದೆ.  ]]>

‍ಲೇಖಕರು G

March 28, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮಾಯಾ ಏಂಜೆಲೊ

ಮಾಯಾ ಏಂಜೆಲೊ

ಆರ್ ವಿಜಯರಾಘವನ್ ಮಾಯಾ ಏಂಜೆಲೊ ತಮ್ಮ 86ನೇ ವಯಸ್ಸಿನಲ್ಲಿ ತೀರಿಕೊಂಡರು. ತನ್ನ ಕ್ಯಾನ್ಸರ್ ಕುರಿತು ಆಕೆ ಹೇಳಿಕೊಂಡಿದ್ದು ತನ್ನ ನಲವತ್ತು...

೧ ಪ್ರತಿಕ್ರಿಯೆ

  1. Kiran Niranthara

    Yes…He is class apart. I have worked with Jambe Sir in the play “Shivarathri” which was directed to “Niranthara” Theater team…In my experience, Jambe Sir is great theater brilliance and very unique personality. One should be very lucky to work with Jambe Sir. Its a celebration to work with Jambe Sir 🙂

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: