ಟಿ ಆರ್ ಪಿ ಬೆನ್ನು ಹತ್ತಿ..

lakshman-370x315

ಡಾ.ಲಕ್ಷ್ಮಣ. ವಿ. ಎ

ವಿದ್ಯುನ್ಮಾನ ಮಾಧ್ಯಮ, ಮೈ ಮನ ಉನ್ಮಾದಗೊಳಿಸುವ ಮಾಧ್ಯಮ. ಸುದ್ದಿಯಾಗಬೇಕಿರುವುದು ಇಲ್ಲಿ ಸುದ್ದಿಯಾಗುವುದಿಲ್ಲ, ನ್ಯಾಯಾಂಗದ ತೀರ್ಪು ಬರುವ ಮುಂಚೆಯೇ ಇಲ್ಲಿ ಆರೋಪಿಗೆ ಸುದ್ದಿ ಮಾಧ್ಯಮಗಳು ಶಿಕ್ಷೆ ಕೊಟ್ಟಿರುತ್ತವೆ. ಸತ್ಯಾಸತ್ಯತೆಗಳು ಬಯಲಾಗುವ ಹೊತ್ತಿನಲ್ಲಿಯೇ ಎಷ್ಟೆಲ್ಲಾ ಆವಾಂತರಗಳು ಸೃಷ್ಟಿಯಾಗಿರುತ್ತವೆ. ಇದು ಆಧುನಿಕ ಮಾಧ್ಯಮ.

ಸುಮಾರು ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ಬಾಂಬ್ ಸ್ಫೋಟದ ಆರೋಪದ ಮೇಲೆ ಯುವಕನೊಬ್ಬ ಬಂಧಿತನಾದಾಗ ಈ ಮಾಧ್ಯಮಗಳು ಅಲ್ಲೋಲ ಕಲ್ಲೋಲ ಸೃಷ್ಟಿಸಿದವು, ಅವನು ಕೆಲಸ ಕಳೆದುಕೊಂಡ ಶಾಂತಿಯಿಂದ ಬದುಕು ಸವೆಸುತಿದ್ದ ಕುಟಂಬದ ಮಾನ ಬೀದಿ ಪಾಲಾಯಿತು. ಆತನ ವೃದ್ದ ತಂದೆ ತಾಯಿ ಮಾಧ್ಯಮದೆದುರು ನನ್ನ ಮಗ ನಿರಪರಾಧಿ ಎಂದು ಕೈ ಮುಗಿದು ಬೇಡಿಕೊಂಡರೂ ವಿಷಯ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಯಿತು. ಮುಂದೆ ದೀರ್ಘ ಕಾಲದ ವಿಚಾರಣೆಯಿಂದ ಅವನು ನಿರಪರಾಧಿಯಾದ.

tv controlಆ ಸುದ್ದಿ ಮಾಧ್ಯಮದ ಕಿವಿಗೆ ಬೀಳಲಿಲ್ಲ. ಬಿದ್ದರೂ ಅದೊಂದು ಸುದ್ದಿಯಾಗದ ಸುದ್ದಿ. ಆರೋಪ ಸಾಬೀತು ಪಡಿಸುವ ಕುರುಡು ಧಾವಂತದಲ್ಲಿ ಹೀಗೊಂದು ಕುಟುಂಬದ ಮಾನ ಹರಾಜಾಯಿತು. ಕಳೆದುಕೊಂಡ ತನ್ನ ಮಾನ, ಕೆಲಸ, ಜೈಲಿನಲ್ಲಿ ಕಳೆದ ಅಮೂಲ್ಯವಾದ ತನ್ನ ದಿನಗಳನ್ನು ಮರಳಿ ಪಡೆಯಲು ಯಾರಲ್ಲಿ ಮೊರೆಯಿಡುವುದು ?.

ಎರಡು ತಿಂಗಳ ಹಿಂದೆ ದೆಹಲಿಯಲ್ಲಿ ಒಂದು ಪ್ರತಿಭಟನೆ ನಡೆದಿತ್ತು. ಅಲ್ಲಿ ದೇಶದ ನೂರಾ ಇಪ್ಪತ್ತೈದು ಕುಟುಂಬಗಳ,  ತಲೆಯ ಮೇಲೆ ಮಲಹೊರುವ ಮತ್ತು ಆ ಅವಘಡಗಳಲ್ಲಿ ಮಡಿದ ಕುಟುಂಬದವರು ತಮಗೆ ಪರ್ಯಾಯ ಉದ್ಯೋಗ ಕಲ್ಪಿಸಿ, ಪುನವರ್ಸತಿ ಒದಗಿಸಬೇಕೆಂಬ ಬೇಡಿಕೆಯನಿಟ್ಟು ಬೀದಿಗಿಳಿದಿದ್ದರು.

ವಿಶೇಷವೆಂದರೆ ಈ ಎಲ್ಲ ಕುಟುಂಬಗಳು ದೇಶಾದ್ಯಂತ ಯಾತ್ರೆಯ ಮೂಲಕ ದೆಹಲಿಗೆ ಬಂದಿದ್ದರು. ಸಾಮಾಜಿಕ ಪ್ರಜ್ಞೆಯ ಸಂವೇದನಾಶೀಲ ಸಮಾಜ ಇದೊಂದು ಮನುಕುಲದ ದೊಡ್ಡ ಕಂಟಕವೆನ್ನುವಂತೆ ಪ್ರತಿಭಟನೆಯ ದೊಡ್ಡ ಅಭಿಯಾನವನ್ನೇ ಮಾಡಿ ಪ್ರಭುತ್ವದ ಗಮನ ಸೆಳೆಯಬಹುದಾಗಿತ್ತು. ಇಲ್ಲೂ ಕೂಡ ಸಮಾಜ ಮಾಧ್ಯಮ ಎರಡೂ ಕುರುಡಾದವು.

ಒಂದು ವಿಷಯ ನೆನಪಿರಲಿ ಪ್ರಪಂಚದ ಯಾವ ಮೂಲೆಯಲ್ಲೂ ತಲೆ ಮೇಲೆ ಮಲ ಹೊರುವ ಪದ್ಧತಿಯಿಲ್ಲ. ಆದರೆ ಅದು ಸುದ್ದಿಯಾಗಲಿಲ್ಲ ಏಕೆಂದರೆ ಅಲ್ಲಿದ್ದವರು ನಿರ್ಗತಿಕರು, ಅನಕ್ಷರಸ್ಥರು ತಮ್ಮ ಹಕ್ಕುಗಳು ಏನೆಂಬುದು ಅವರಿಗೇ ಅರಿಯದ ಅಮಾಯಕರು ಮುಖ್ಯವಾಗಿ ಈ ಸುದ್ದಿಯಿಂದ ಮಾಧ್ಯಮಗಳಿಗೆ ಚಿಕ್ಕಾಸಿನ ಲಾಭವೂ ಬರಲಾರದೆಂಬ ವ್ಯಾಪಾರೀ ತಂತ್ರ.

ಸುದ್ದಿ ಮಾಧ್ಯಮಗಳ ಸ್ಪರ್ಧೆಯು ಹೆಚ್ಚಾದಂತೆಲ್ಲ ಅವುಗಳ ಗುಣಮಟ್ಟತೆಯೂ ಕಳಪೆಯಾಗತೊಡಗಿ ದಶಕಗಳೇ ಕಳೆದಿವೆ. ಇಲ್ಲಿ ಸುದ್ದಿಯಾಗಬೇಕಾಗಿರುವುದು ಸುದ್ದಿಯಾಗುವುದಿಲ್ಲ, ಅತಿರಂಜಿತ ರೋಚಕ ಸುದ್ದಿಗಳ ರಕ್ತದ ರುಚಿ ತೋರಿಸಿದ್ದು ವಿದ್ಯುನ್ಮಾನ ಮಾದ್ಯಮಗಳೆಂದು ಬೇರೆ ಹೇಳಬೇಕಿಲ್ಲ. ಸಮಾಜದ ದಾರಿ ದೀಪವಾಗಬೇಕಿದ್ದ ಈ ಆಧುನಿಕ ಮಾಧ್ಯಮಗಳು ಕೀಳು ಅಭಿರುಚಿಯ ಸರಣಿಗಳನ್ನೇ ತಮ್ಮ ಆದಾಯದ ಮೂಲಗಳೆಂದು ಪರಿಗಣಿಸಿದ್ದು ಈ ದೇಶದ ದುರಂತವೇ ಸರಿ.

ಕಳೆದ ತಿಂಗಳು ಬೆಂಗಳೂರಿನ  ಕಾರ್ಯಕ್ರಮವೊಂದರಲ್ಲಿ  ಮಾಧ್ಯಮ ಲೋಕದ ಭಿನ್ನ ಪಯಣಿಗರೆಂದೇ ಗುರುತಿಸಿಕೊಂಡಿರುವ ಪಿ.ಸಾಯಿನಾಥರು, ಆಧುನಿಕ ಮಾಧ್ಯಮ ಸಾಗುತ್ತಿರುವ ದಾರಿಯನ್ನು ಅಂಕಿ ಸಂಖ್ಯೆ ಗಳ ಸಮೇತ ಮಂಡಿಸುತಿದ್ದಾಗ ಒಂದು ಬಗೆಯ ವಿಷಾದ ಕಾಡಿತು. ಅವರು ಮಾಡಿದ ಅಧ್ಯಯನದ ಪ್ರಕಾರ ದೇಶದ ನಾಲ್ಕು ರಾಷ್ಟ್ರೀಯ ಮಟ್ಟದ ಸುದ್ದಿ ವಾಹಿನಿಗಳು ಕೇವಲ ದೆಹಲಿ ನಗರವೊಂದಕ್ಕೆ ಪ್ರತಿಶತ 51 ರಷ್ಟು ಪ್ರಾಮುಖ್ಯತೆಯನ್ನು ನೀಡುತ್ತವೆ.  ನಂತರದ ಸ್ಥಾನ ಮುಂಬೈ, ಕಲಕತ್ತಾ, ಚೆನ್ನೈನ ಪಾಲು  ಪ್ರತಿಶತ 5 ರಷ್ಟು ಮಾತ್ರ. ಬಾಲಿವುಡ್, ಕ್ರಿಕೆಟ್ ಪ್ರತಿಶತ 4 ರಷ್ಟು.

ಇನ್ನು ಕೃಷಿ, ಶಿಕ್ಷಣ, ಆರೋಗ್ಯದ ಪಾಲು ಶೋಚನೀಯ. ಹಳ್ಳಿಗಳು ನೆನಪಾಗುವುದು ಓಡಿಷಾದ ಕಾಳಹಂಡಿಯಲ್ಲಿ ಶವ ಹೊತ್ತು ಹತ್ತು ಕಿ.ಮಿ. ಸಾಗಿದ ವ್ಯಕ್ತಿಯಂತಹ ದಾರುಣ ಘಟನೆಗಳು ನಡೆದಾಗ ಮಾತ್ರ.

ಜಾಗತೀಕರಣಗೊಂಡೆಂತೆಲ್ಲಾ ಪತ್ರಿಕಾರಂಗದ ಸ್ವರೂಪ ಬದಲಾಗಿ ಪತ್ರಿಕೋದ್ಯಮವಾಯಿತು. ಹಣ ಬಾಚುವ ಬೃಹತ್ ಉದ್ಯಮವಾಯಿತು. ಬಂಡವಾಳುದಾರರು ದೇಶದ ಪ್ರಮುಖ ಚಾನೆಲ್ ಗಳ ಒಡೆಯರಾದರು ಸುದ್ದಿಯ ವೇಷದಲ್ಲಿ ಕಳಪೆ ರಂಜನೆ, ಅತಿರೋಚಕತೆ, ವಿಜೃಂಭಿಸತೊಡಗಿತು. ಟಿ.ಆರ್.ಪಿ ಗೋಸ್ಕರ ಸಿದ್ಧಾಂತಗಳು ಅಪಮೌಲ್ಯಗೊಂಡವು. ಚಾನೆಲ್ ಗಳು ಆಯಾ ರಾಜಕೀಯ ನೇತಾರರ ಮುಖವಾಡಗಳಾಗಿ ಬದಲಾದವು. “ಪೇಯ್ಡ್ ನ್ಯೂಸ್”ಎಂಬ ವೈರಸ್ ಹುಟ್ಟಿಕೊಂಡಿತು. ರೈತರ ಆತ್ಮಹತ್ಯೆಯಂತಹ ಸಂವೇದನಾಶೀಲ ಸಂಗತಿಗಳು ತಮ್ಮ ರೇಟಿಂಗ್ ಹೆಚ್ಚಿಸಿಕೊಳ್ಳುವ ಸಾಧನವಾಗಿ ಬಳಸಿಕೊಂಡವೇ ಹೊರತು ಅದರ ಮೂಲಕಾರಣಗಳನ್ನು ಹುಡುಕಿ ಅದಕ್ಕೊಂದು ಪರಿಹಾರ ಸೂಚಿಸುವ ಜವಾಬ್ದಾರಿ ಹೊರಲಿಲ್ಲ. ಹೀಗಾಗಿ ಜನರ ದನಿಯಾಗಬೇಕಿದ್ದ ಚಾನೆಲ್ ಗಳು ಸಮಾಜದ ವಿಶ್ವಾಸವನ್ನು ಕಳೆದುಕೊಂಡಿರುವುದರಲ್ಲಿ ಅಚ್ಚರಿಯೇನಲ್ಲಾ.

trpಮೊನ್ನೆ ಬೆಂಗಳೂರಿನ ಪೂಜಿತಾ ಎಂಬ ಮಗು ಮನೆಬಿಟ್ಟು ಹೋದಾಗ ಅವಳನ್ನು ಪತ್ತೆ ಹಚ್ಚಲು ಮಾಧ್ಯಮಗಳ ಮಾಡಿದ ಪ್ರಯತ್ನವನ್ನು ಮುಕ್ತ ಮನಸ್ಸಿನಿಂದ ಹೊಗಳಲೇಬೇಕು. ಆದರೆ ತದನಂತರದ ಬೆಳವಣಿಗೆಯಲ್ಲಿ ಎಂದಿನಂತೆ ಮಾಧ್ಯಮಗಳು ಎಡವಿದವು.

ಪ್ರಸ್ತುತದಲ್ಲಿ ಶಿಕ್ಷಣದ, ಸಿಲೇಬಸ್ ನಿಂದಾಗಿ ಮುಗ್ಧ ಕಂದಮ್ಮಗಳ ಮೇಲಾಗುತ್ತಿರುವ ಒತ್ತಡ, ಪೋಷಕರ ಅತಿಯಾದ ನಿರೀಕ್ಷೆಗಳು ಇಲ್ಲಿ ಚರ್ಚೆಯಾಗಬೇಕಿತ್ತು. ಆದರೆ ಆದದ್ದೇ ಬೇರೆ ಮನೆ ಬಿಟ್ಟು ಹೋದ ಮಗುವಿನ ಪ್ರಯಾಣವನ್ನು ಟಿ.ವಿ ಚಾನೆಲ್ ನವರು  ಅತಿರಂಜಿತವಾಗಿ ವೈಭವೀಕರಿಸಿ ಅವಳನ್ನು ಒಬ್ಬ ನಾಯಕಿಯೆಂಬಂತೆ ಬಿಂಬಿಸುವ ಸ್ಪರ್ಧೆಗೆ ಬಿದ್ದವು. ಇದರಲ್ಲಿ ಆ ಮಗುವಿನ ಪೋಷಕರದೂ ತಪ್ಪಿದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಇಲ್ಲಿ ಪೂಜಿತಾ ಎಂಬ ಮಗು ಕೇವಲ ಸಾಂಕೇತಿಕ ಮಾತ್ರ ಅವಳು ಇಡೀ ದೇಶದ ಶಿಕ್ಷಣದ ಅವ್ಯವಸ್ಥೆ ಯನ್ನು ಪ್ರತಿನಿಧಿಸುವ ರಾಯಭಾರಿಯಾಗಿ ನಮ್ಮ ಕಣ್ಣೆದುರಿಗೆ ಇದ್ದಾಳೆ.

ಇನ್ನು ಬಾಲಿವುಡ್ ಜೋಡಿಗಳ ರೋಮ್ಯಾನ್ಸ್, ಅವರ ಮದುವೆ, ವಿಚ್ಛೇದನೆಯ ವಿಷಯಗಳು ಬಂದರಂತೂ ಮುಗಿದೇ ಹೋಯಿತು. ಅರಮನೆ ಮೈದಾನದ ಮದುವೆ ವಿಚಾರ ನೇರ ಪ್ರಸಾರ ಮಾಡುವಂತಹ  ದರ್ದು ಏನಿದೆ ?

ದೇಶದ ಭದ್ರತೆಯಂತಹ ಸೂಕ್ಷ್ಮ ವಿಚಾರದಲ್ಲೂ ಈ ವಿದ್ಯುನ್ಮಾನ ಮಾಧ್ಯಮದ ನಡೆ ಪ್ರಶ್ನಾರ್ಹವಾಗಿದೆ. ಮುಂಬೈ ತಾಜ್ ಹೊಟೇಲ್ ನ  ದಾಳಿಯ ಸಂದರ್ಭದಲ್ಲಿ ಟಿ.ವಿ ಯಲ್ಲಿ ಬರುತಿರುವ ನೇರ ಪ್ರಸಾರ ನೋಡುತ್ತ ಪಾಕಿಸ್ತಾನದಲ್ಲಿ ಕುಳಿತು ನೋಡುತಿದ್ದ ಉಗ್ರಗಾಮಿ ನಾಯಕನೊಬ್ಬ ಅಲ್ಲಿಂದಲೇ ಆ ಹೊಟೇಲಿನಲ್ಲಿ ಅಡುಗಿ ಕುಳಿತಿರುವ ನಾಗರಿಕರನ್ನು ಗುರುತಿಸಿ ಅವರನ್ನು ಕೊಲ್ಲಲು ಉಗ್ರಗಾಮಿಗಳಿಗೆ ಸಂದೇಶ ನೀಡುತ್ತಿದ್ದ. ಹೀಗೆ ವಿಶ್ವ ಸಮುದಾಯದ ಮುಂದೆ ದೇಶದ ಮಾನ ಹೋಗುವುದು ಒತ್ತಟ್ಟಿಗಿರಲಿ ಅಮಾಯಕರ ಜೀವ ತೆಗೆದದ್ದು ಈ ಟಿ.ಆರ್.ಪಿ ಯೆಂಬ ಭೂತ.

ಮೇಲಿನ ಘಟನೆಗಳು ತಕ್ಷಣಕ್ಕೆ ನೆನಪಿಗೆ ಬಂದಂತಹ ವಿವರಗಳು. ಏಕೆಂದರೆ ಪ್ರತಿ ಕ್ಷಣ, ಪ್ರತಿ ನಿಮಿಷ ಮಾಧ್ಯಮಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಲಾಗುತ್ತಿದೆ.

ಭಾರತವೆಂದರೆ ಕೇವಲ ದೆಹಲಿ, ಮುಂಬೈ, ಕಲಕತ್ತಾ, ಚೆನ್ನೈ ಅಲ್ಲ. ಕೇವಲ ಬಾಲಿವುಡ್, ಕ್ರಿಕೆಟ್, ಬಿಗ್ ಬಾಸ್, ಮನೆಯೊಂದು ಮೂರು ಬಾಗಿಲು ಮನೆ ಮುರಿಯುವ ಧಾರಾವಾಹಿ ಅಲ್ಲ.

ಇಲ್ಲೊಂದು ಪ್ರಶ್ನೆಯಿದೆ ಈ ಟಿ.ಆರ್.ಪಿ ಯನ್ನು ತಂದುಕೊಡುವ ಬಂಡವಾಳದಾರರು ಯಾರು ?

ನಾವೇ ಅಲ್ಲ ವೇ ? ಆದರೆ ನರಮಾಂಸದ ಚಟ ಅಂಟಿಕೊಂಡವರಿಗೆ ಅದರಿಂದ ಬಿಡುಗಡೆ ಅಷ್ಟು ಸುಲಭ ಸಾಧ್ಯವೇ ? ಇಲ್ಲಿ ಯಾರನ್ನು ದೂರುವುದು ಅದು ಕೂಡ ಪ್ರಶ್ನೆಯಾಗಿಯೇ ಇದೆ.

ಪ್ರಜಾಪ್ರಭುತ್ವದ ಅಸ್ತಿತ್ವಕ್ಕೆ ಮಾಧ್ಯಮಗಳು ಬಹಳ ಪ್ರಮುಖ ನಿಜ ಆದರೆ ಮಾಧ್ಯಮದಲ್ಲಿ ಪ್ರಜಾಪ್ರಭುತ್ವ ತರುವವರು ಯಾರು ? ಎಂಬ ಸಾಯಿನಾಥರ ಪ್ರಶ್ನೆಗೆ ನವಮಾದ್ಯಮಗಳು ತಮ್ಮ  ಆತ್ಮವಿಮರ್ಶೆ ಮಾಡಿಕೊಳ್ಳಲು ಇದು ಸಕಾಲ.

‍ಲೇಖಕರು Admin

September 13, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಯಾವ ‘ಮೋಹನ’ ಮುರಲಿ ಕರೆಯಿತೋ…

ಯಾವ ‘ಮೋಹನ’ ಮುರಲಿ ಕರೆಯಿತೋ…

ಸಂಗೀತ ರವಿರಾಜ್ ನನ್ನನ್ನು ಅತಿಯಾಗಿ ಕಾಡಿದ ಅಗಲಿಕೆಗಳಲ್ಲಿ ಇದೂ ಒಂದು. ನಿರಂತರ ಒಡನಾಟದಲ್ಲಿ, ಮಾತುಕತೆಯಲ್ಲಿ ಇಲ್ಲದೆ ಇದ್ದರು ಕೆಲವುಸಾವು...

ನರೇಂದ್ರ ಪೈ ಅವರ “ಕನಸುಗಳು ಖಾಸಗಿ”

ನರೇಂದ್ರ ಪೈ ಅವರ “ಕನಸುಗಳು ಖಾಸಗಿ”

ಕಮಲಾಕರ ಕಡವೆ ಕತೆಯಿರುವುದು ಕಣ್ಣಲ್ಲಿ. ಕತೆಗಾರರ ಕಣ್ಣು ಕಾಣಲು ನಿರ್ಧರಿಸುವ ಜಗತ್ತು ಅವರ ಸುತ್ತಲಿನದೋ, ಒಳಗಿನದೋ, ಹಿಂದೆಂದಿನದೋ,...

ಅಂದಿನಿಂದಿಂದಿಗೆ

ಅಂದಿನಿಂದಿಂದಿಗೆ

ಶ್ಯಾಮಲಾ ಮಾಧವ ಮೊರೆಯುವ ಕಡಲು. ವಿಶಾಲ ಮರಳ ಹಾಸು. ಗಾಳಿಯಲೆಯಾಡುವ ಸುವಿಶಾಲ ಚಬುಕಿನ ತೋಪು. ಅದರ ನಡುವೆ ವೃತ್ತಾಕಾರದ, ಕಟ್ಟೆಯಿರದ, ಇಳಿಯಲು...

9 ಪ್ರತಿಕ್ರಿಯೆಗಳು

 1. ಮಮತಾ ಅರಸೀಕೆರೆ

  ಬಹಳ ಒಳ್ಳೆಯ ಬರಹ
  ತೀವ್ರವಾಗಿ ತಟ್ಟಿತು .ಮಾಧ್ಯಮಗಳಲ್ಲಿ ಪ್ರಜಾಪ್ರಭುತ್ವ ತರುವವರಾರು ?

  ಪ್ರತಿಕ್ರಿಯೆ
 2. Sarojini Padasalagi

  ತುಂಬಾ ಪರಿಣಾಮಕಾರಿ ಲೇಖನ .ತೋರಿಸಿದ್ದನ್ನೇ ತೋರಿಸುತ್ತ ,ಅತಿ ರಂಜಿತ ಸುದ್ದಿ ಸೃಷ್ಟಿ ಮಾಡುವದನ್ನು ಮಾಧ್ಯಮಗಳು ಸ್ವಲ್ಪ ಕಡಿಮೆ ಮಾಡಿದರೆ ಒಳಿತು .ಜನರೂ ಈಬಗ್ಗೆ ಎಚ್ಚೆತ್ತುಕೊಳ್ಳಲು ಇದು ಸಕಾಲ .ಇಂಥ ಲೇಖನಗಳು ಈ ನಿಟ್ಟಿನಲ್ಲಿ ಸಹಾಯ ಮಾಡೀತಾ ಅಂತ ಒಂದಾಸೆ
  ಸರೋಜಿನಿ

  ಪ್ರತಿಕ್ರಿಯೆ
 3. Anonymous

  Now you see how our TV and print media showing about the Cauvery issue they are blaming congress high command( is it funny ) instead of calling PM intervation to pacify the both state s out of court order No they are not .seems afraid to modi or pleasing him

  ಪ್ರತಿಕ್ರಿಯೆ
 4. ಚಲಂ

  ಒಳೆಯ ಲೇಖನ…ಸಾಯಿನಾಥ್ ಮಾದರಿ ತೀವ್ರವಾಗಿ ಅಳವಡಿಸಿಕೊಳ್ಳೋ ಅನಿವಾರ್ಯತೆಯಿದೆ

  ಪ್ರತಿಕ್ರಿಯೆ
 5. Gubbachchi Sathish

  Better to teach everyone to switch off the TV. It’s really bloody!

  ಪ್ರತಿಕ್ರಿಯೆ
 6. kvtirumalesh

  ಮಾಧ್ಯಮಗಳನ್ನು ವಿಮರ್ಶಿಸಿ, ಇತರ ಎಲ್ಲಾ ಕ್ಷೇತ್ರಗಳನ್ನು ವಿಮರ್ಶಿಸುವಂತೆ. ಆದರೆ ಒಂದು ವಿಷಯವನ್ನು ಮರೆಯಬೇಡಿ: ಮಾಧ್ಯಮಗಳಿಲ್ಲದೆ ಇರುತ್ತಿದ್ದರೆ ನಾವಿನ್ನೂ ಅಂಧ ಯುಗದಲ್ಲಿ ಇರುತ್ತಿದ್ದೆವು. ಮನುಷ್ಯ ಜನಾಂಗ ದೀರ್ಘ ಕಾಲದ ಕತ್ತಲೆಯಿಂದ ಬೆಳಕಿನ ಕಡೆಗೆ ಬರುತ್ತಿದೆ. (ಮಾಧ್ಯಮ ಯುಗ ಸುರುವಾಗಿ ಇನ್ನೂ ಶತಮಾನ ಕಳೆದಿಲ್ಲ!) ಈಗಾಗಲೇ ಹಲವು ಪತ್ರಿಕೆಗಳು ಬದುಕಿರಲು ಒದ್ದಾಡುತ್ತಿವೆ. ಇನ್ನು ಟೀವಿ ಚಾನೆಲುಗಳ ಸಮಸ್ಯೆಯೇನೋ ತಿಳಿಯದು; ಅವಕ್ಕೂ ಸರ್ವೈವಲ್ ಸಮಸ್ಯೆ ಇರಬಹುದು ಅನಿಸುತ್ತದೆ. ಅವೀಗ ಕೇವಲ ಸುದ್ದಿವಾಹಿನಿಗಳಾಗಿ ಉಳಿದಿಲ್ದ; ರೋಚಕತೆಯನ್ನು ಹರಡುವ, ಅಭಿಪ್ರಾಯ ತಿದ್ದುವ, ರಾಜಕೀಯ ಹಸ್ತಕ್ಷೇಪ ಮಾಡುವ ಮಾಧ್ಯಮಗಳಾಗಿ ಕಾಣಿಸುತ್ತವೆ. ಆದರ್ಶ ಚಾನೆಲ್ ಎಂಬುದೇ ಇಲ್ಲ. ಹೀಗಿರುತ್ತ ವೀಕ್ಷಕರು ಸಹಾ ವಿಮರ್ಶಾ ಪ್ರಜ್ಞೆ ಬೆಳೆಸಿಕೊಳ್ಳುವುದು ಅಗತ್ಯ. ಈ ಲೇಖನ ಈ ನಿಟ್ಟಿನಲ್ಲಿ ಇದೆ ನಿಜ. ಆದರೆ ವಿಮರ್ಶಕನೂ ವಿಮರ್ಶೆಗೆ ಒಳಗಾಗಬೇಕಾಗಿದೆ. ಉದಾಹರಣೆಗೆ, ಒಬ್ಬ ಆರೋಪಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿತು ಎಂದ ತಕ್ಷಣ ಆತ ‘ನಿರಪರಾಧಿ’ ಎಂದು ಅರ್ಥವಲ್ಲ. ಅಪರಾಧ ಮಾಡಿದ ಎ‍ಷ್ಟೋ ಮಂದಿ (ಕೊಲೆಗಡುಕರು, ರೇಪಿಸ್ಟುಗಳು ಸೇರಿದಂತೆ) ಕಾನೂನಿಂದ ತಪ್ಪಿಸಿಕೊಂಡು ಸಭ್ಯರಂತೆ ಓಡಾಡುತ್ತಿದ್ದಾರೆ.

  ಇಂತಹ ಸಂದರ್ಭದಲ್ಲಿ ಮಾಧ್ಯಮಗಳ ಹೊಣೆಗಾರಿಕೆಯೇನು ಎನ್ನುವುದು ಸಮಸ್ಯಾತ್ಮಕ ಸಂಗತಿ. ಈ ಕುರಿತು ವಿಚಾರ ಸಂಕಿರಣಗಳು ನಡೆಯಬೇಕು. ಯಾಕೆಂದರೆ ಇದು ಒಂದೆರಡು ವಾಕ್ಯಗಳಲ್ಲಿ ಹೇಳಿ ಮುಗಿಸುವ ವಿಚಾರವಲ್ಲ. ದುರದೃಷ್ಟಕರ ಸಂಗತಿಯೆಂದರೆ ನಮಗೆ ಸರಿಯಾಗಿ ಸಂವಾದ ನಡೆಸುವುದಕ್ಕೂ ಬರುವುದಿಲ್ಲ!
  ಏನೇ ಇದ್ದರೂ ಮಿಂದ ನೀರಿನೊಂದಿಗೆ ಮಗುವನ್ನೂ ಚೆಲ್ಲುವುದು ಬೇಡ. ಹಲವು ಕಾರಣಗಳಿಗೋಸ್ಕರ ನಾವು ಮಾಧ್ಯಮಗಳಿಗೆ ಋಣಿಯಾಗಿರಬೇಕು–ಸದ್ಯಕ್ಕೆ ಅವು ಎಷ್ಟೇ ಕೊರತೆಗಳಿಂದ ತುಂಬಿದ್ದರೂ. ಎಲ್ಲಾ ಮಾಧ್ಯಮಗಳನ್ನೂ ಒಂದು ವಾರ ಮುಚ್ಚಿ ನೋಡಿ. ಆಗ ಗೊತ್ತಾಗುತ್ತದೆ.
  ಕೆ.ವಿ.ತಿರುಮಲೇಶ್

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: