ಟಿ ಎಸ್ ಗೊರವರ ಅವರ ’ಆಡು ಕಾಯೋ ಹುಡುಗ’

ಮನ ಮುಟ್ಟುವ ಆಡು ಕಾಯೋ ಹುಡುಗ

ಹುಸೇನಪಾಷಾ, ಕೊಪ್ಪಳ

ಕೃಪೆ : ದ ಸ೦ಡೆ ಇ೦ಡಿಯನ್

ಟಿ.ಎಸ್. ಗೊರವರ ಅವರ ‘ಆಡು ಕಾಯೋ ಹುಡುಗನ ದಿನಚರಿ’ ಕೃತಿ ಹೆಸರು ನೋಡುತ್ತಲೇ ಕಥಾಸಂಕಲನ ಇರಬಹುದು, ಅನ್ನಿಸುವುದು ಸಹಜ. ಶೀರ್ಷಿಕೆ ಕೆಳಗಿರುವ ಅನುಭವ ಕಥನ ಎಂಬ ಶಬ್ದಗಳು ಅದನ್ನು ಸುಳ್ಳು ಮಾಡುತ್ತವೆ. ಹಳ್ಳಿಗಾಡಿನ, ಬಡತನದ ಒಟ್ಟಾರೆ ದಟ್ಟ ಅನುಭವನದ ಬರಹ ಆತ್ಮಕಥನ ಆಗಬಹುದು ಎಂದು ಹೇಳುತ್ತೆ ಈ ಕೃತಿ. ವಯಸ್ಸಾದವರು ಮಾತ್ರ ಆತ್ಮಕಥನ ಬರೆದುಕೊಳ್ಳಬೇಕು, ಎನ್ನುವ ಅಘೋಷಿತ ನಿಯಮವನ್ನು ಈ ಕೃತಿ ಸುಳ್ಳಾಗಿಸುತ್ತದೆ. ಗೊರವರ ಓರ್ವ ಭರವಸೆಯ ಕಥೆಗಾರ. ಇಲ್ಲಿ ಗೊರವರ ಅವರ ಸರಳ ಶೈಲಿಯ ಬರವಣಿದೆಯಿದೆ, ಆ ಕಥನ ಶೈಲಿ ಈ ಅನುಭವದಲ್ಲಿರುವುದು ಕೃತಿ ಇಷ್ಟವಾಗಲು ಪ್ರಮುಖ ಕಾರಣ. ಒಬ್ಬ ಬರಹಗಾರ ಅನುಭವ ಕಥನ ಬರೆದುಕೊಳ್ಳುವುದಕ್ಕೂ ಒಬ್ಬ ಪತ್ರಕರ್ತ ಅದನ್ನು ಬರೆದುಕೊಳ್ಳುವುದಕ್ಕೂ ಆಗಾಧ ವ್ಯತ್ಯಾಸವಿದೆ. ಪತ್ರಕರ್ತನ ಅನುಭವ ಅಂದರೆ ಸ್ವಂತದ್ದೇ ತಮಟೆ. ಆದರೆ ಗೊರವರ ಆಡು ಕಾಯೋ ಕೃತಿಯಲ್ಲಿ ಅದಿಲ್ಲ. ಈ ಕೃತಿಯಲ್ಲಿ ೧೬ ಅಧ್ಯಾಯಗಳಿವೆ, ಅವರ ಬಡತನ, ಎಮ್ಮೆ, ಆಡು ಕಾದದ್ದು, ಸಗಣೆ ಬಾಚಿದ್ದು, ಬಳಿದಿದ್ದು, ಆಹ್ವಾನವಿಲ್ಲದ ಔತಣದ ಮನೆಗೆ ನುಗ್ಗಿ ಉಂಡು ಸಂತೃಪ್ತಿ ಕಂಡಿದ್ದು, ಹೊಡೆತ ತಿಂದು ಚಡ್ಡಿಯಲ್ಲಿ ಒಂದಕ್ಕೆ ಮಾಡಿದ್ದು, ಮೊಹರಂ ಹಬ್ಬ ಇತ್ಯಾದಿಗಳಿವೆ ಇಲ್ಲಿ. ಮೊದಲ ಅಧ್ಯಾಯ ‘ಉಡಾಳ ಹುಡುಗನ ದಿನಚರಿ’ ಎಮ್ಮೆ ಕಾಯೋ ಹುಡುಗರ ಪರಿಚಯ ಹರಟೆ ರೂಪದಲ್ಲಿದೆ. ಅದರಲ್ಲಿನ ದನ ಕಾಯುವಾಗ ಜೇನು ಬಿಡಿಸಲು ಹೋಗಿ ಬೋಳಿಸಿಕೊಂಡಿದ್ದ ತಲೆಗೆ ಇಡೀ ಜೇನು ಹುಳುಗಳು ದಾಳಿಯಿಟ್ಟು ಕಡಿದದ್ದು, ಓದಿದಾಗ ಮೈ ಜುಂ ಎನಿಸುತ್ತದೆ. ಎರಡನೇ ಅಧ್ಯಾಯ ‘ಅಪ್ಪನ ಹಣೆಯ ಮ್ಯಾಲೆ’, ೩ನೇ ಅಧ್ಯಾಯ ‘ಕೂಲಿ ಮಾಡುವುದರಲ್ಲಿ ಸುಖ ಕಾಣುವ ಅವ್ವ…’ದಲ್ಲಿ ಅವರ ಕೋಪಿಷ್ಟ, ಆದರೆ ಕರುಣೆ, ಮಮತೆ, ಪ್ರೀತಿಗೆ ಕೊರತೆಯಿಲ್ಲದ ತಂದೆ ಹಾಗೂ ಅಪ್ಪನ ಹೊಡೆತ ತಿನ್ನುತ್ತಾ ನಿತ್ಯದ ಬದುಕಿಗೆ ಹೆಗಲು ಕೊಡುತ್ತಿದ್ದ ತಾಯಿಯ ಪರಿಚಯ ಕಟ್ಟಿ ಕೊಟ್ಟಿರುವ ಶೈಲಿಯೇ ಗೊರವರ ಬರವಣಿಗೆಯ ಸತ್ವಕ್ಕೆ ಸಾಕ್ಷಿ. ಕಣ್ಣೀರು ಕೌದಿ ತೋಯಿಸಿದವು ಎಂಬ ಅಧ್ಯಾಯದಲ್ಲಿ ತಂದೆ-ಮಗನ ಸಿಟ್ಟು, ಜಗಳ, ಪ್ರೀತಿ ಹೇಳುತ್ತದೆ. ತಂದೆಯ ಜೇಬಿನಿಂದ ಹಣ ಕದ್ದು ತೂರು ಬಿಲ್ಲೆ ಆಡುವಾಗ ಅಪ್ಪನ ಕೈಗೆ ಸಿಕ್ಕು ತಪ್ಪಿಸಿಕೊಂಡದ್ದು ಮಜವಾಗಿದೆ. ಆದರೆ ಆವತ್ತು ರಾತ್ರಿ ಹೆದರುತ್ತ ಮನೆಗೆ ಹೋದಾಗ ನೀಲಿಗಿರಿ ಗಿಡಕ್ಕೆ ಕಟ್ಟಿ ಹಗ್ಗದಿಂದ ತಂದೆ ಹೊಡದದ್ದು, ಅವ್ವ ಬಂದು ಹಗ್ಗ ಬಿಚ್ಚಿ ಬಿಡಿಸಿಕೊಂಡ ವಿವರಗಳಿವೆ. ಅವತ್ತು ರಾತ್ರಿ ಮಲಗಿದಾಗ ನಿದ್ದೆ ಬಂದಿರಲ್ಲ, ಆಗ ಅವರಪ್ಪ “ಮುದಿಯಾಗ ಬಾಳ ಬಡದೆ. ಅಂವ ಎಷ್ಟು ಬಡೂದ್ರೂ ಉಡಾಳತನ ಬಿಡುವಲ್ಲ. ನಾನರ ಏನು ಮಾಡ್ಲಿ, ಸಿಟ್ಟಿನ್ಯಾಗ ನುಗ್ಗುಳೆ ಹೊಡೆದೆ. ಅವ್ನ ಮೈ ಮುಟ್ಟಿ ನೋಡು ಜ್ವರ ಗಿರ ಬಂದ್ವೆತನ”. ಈ ಸಾಲುಗಳನ್ನು ಓದುತ್ತಲೇ ಕಣ್ಣಂಚ್ಚಲಿ ಹನಿಗಳು ಬಂದು ಕೂಡುವುದು ನಿಜ. ಉತ್ತರ ಕರ್ನಾಟಕದ ಬಯಲುಸೀಮೆ ಹಳ್ಳಿಗಳ ಬದುಕು ಉಂಡವರಿಗೆ ಮೋಹರಂ ಹಬ್ಬದ ನೆನಪುಗಳು ಬದುಕಿನ ಕೊನೆಗಾಲದವರೆಗೆ ಕಾಡುತ್ತಲೇ ಇರುತ್ತವೆ, ದಕ್ಕದೆ ಹೋದ ಪ್ರೇಯಸಿಯಂತೆ. ಅಲೈ ಹಬ್ಬದ ಅಧ್ಯಾಯದಲ್ಲಿ ಗೊರವರ ನೆನಪುಗಳು ರಸವತ್ತಾಗಿವೆ. ಇಡೀ ಊರು ಜಾತಿ ಬೇಧವಿಲ್ಲದೆ ಆಚರಿಸುವುದು ಮೋಹರಂ. ಹಲಗೆಯ ಜಡ್ಡಿನಕ ಸದ್ದು, ಮೋಳ ಉದ್ದದ ಲಾಟಿಯಿಂದ ಹೆಜ್ಜೆ ಆಡೊದು ಮೋಹರಂ ಆಚರಣೆ, ಹರಕೆ ಹೊತ್ತು ಹುಲಿವೇಷ, ಅಳ್ಳಳ್ಳ ಬಳ್ಳೊಳ್ಳಿ ವೇಷ ಹಾಕೊದು ಇವೆಲ್ಲ ನೆನಪುಗಳನ್ನು ಸಮರ್ಥವಾಗಿ ಅಕ್ಷರಗಳಿಗೆ ಇಳಿಸಿದ್ದಾರೆ ಗೊರವರ. ಎಂಎ ಪತ್ರಿಕೋದ್ಯಮದ ಧಾರವಾಡ ದಿನಗಳೊಂದಿಗೆ ಕೃತಿಯ ಪುಟಗಳು ಮುಕ್ತಾಯಗೊಳ್ಳುತ್ತವೆ. ಮರಾಠಿಗೆ ಹೋಲಿಸಿದರೆ ಕನ್ನಡದಲ್ಲಿ ಆತ್ಮಕಥನಗಳು ಬಹಳ ಕಡಿಮೆಯೇ. ಉತ್ತರ ಕರ್ನಾಟಕದ ಶಬ್ದಗಳು ಕೃತಿಯಲ್ಲಿರುವುದು ಮೆರುಗು ತಂದಿದೆ. ಇಡೀ ಪುಸ್ತಕ ಓದಿದಾಗ ಒಬ್ಬ ಆತ್ಮೀಯ ಗೆಳೆಯ ನಮ್ಮೊಂದಿಗೆ ನಡೆದುಕೊಂಡು ತನ್ನ ಹಳೆಯ ದಿನಗಳನ್ನು ಹೇಳಿಕೊಂಡಂತಹ ಅನುಭವ ನೀಡುತ್ತದೆ ‘ಆಡು ಕಾಯೋ ಹುಡುಗನ ದಿನಚರಿ.’ ಕೃತಿಯ ಪುಟಗಳಿಂದ ಅವತ್ತೊಂದು ದಿನ ಗೌಡ್ರ ಮಾಂತನ ಹಿಂಡಿನೊಂದಿಗೆ ಆಡು ಕೂಡಿಸಿಕೊಂಡು ಹೋಗಿದ್ದೆ. ಮಳೆ ಧೋ ಎಂದು ಜಡಿಯತೊಡಗಿತು. ಸಂಜೆ ಐದಾದರೂ ಬಿಡಲೊಲ್ಲದು. ಮಳೆಯಿಂದಾಗಿ ತಂಪು ಗಾಳಿ ಬೇರೆ. ನಾವು ಮೂಲಿ ಕುಂಚಗಿ ಹೊದ್ದುಕೊಂಡು ಅದರ ಮ್ಯಾಲೆ ಗೊಬ್ಬರ ಹಾಳಿಚೀಲ ಹೊದ್ದು ಕುಳಿತಿದ್ದೆವು. ಯಾವಾಗ ಮಳೆ ನಿಂತಿತೋ ಎಂದು ಅನಿಸತೊಡಗಿತ್ತು. ಅದು ನಾಗರ ಹಾವಿರಬೇಕು. ತುದಿ ಗುಂಡಿಲೆ ಕುಳಿತ ನಮ್ಮೆದುರಿಗೆ ಸರಸರ ಹರಿದು ಹೋಗಿ ಮುಳ್ಳು ಕಂಟಿಯೊಳಗೆ ತಲೆ ಮರೆಸಿಕೊಂಡಿತು. ಇಷ್ಟೂದ್ದ ಇತ್ತು. ಕ್ಷಣ ಹೊತ್ತು ನಮ್ಮೆದೆಯೊಳಗೆ ಭಯ ಹೆಡೆ ಎತ್ತಿತು. ಹಾವು, ಕಪ್ಪೆ, ಇಂತವೆಲ್ಲ ಆಕಾಶದಿಂದ ಮಳೆ ಜೊತೆ ಬೀಳುತ್ತವೆ ಎಂದು ಕೇಳಿದ್ದ ನಾವು ಇದು ಮಳೆ ಜತೆ ಬಿದ್ದ ನಾಗರ ಹಾವೆಂದು ಭಾವಿಸಿ ಅದು ಮರೆಯಾದ ಕಡೆ ಕೈ ಮುಗಿದೆವು.]]>

‍ಲೇಖಕರು G

August 8, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. mahadev

    ವಯಸ್ಸಾದವರು ಮಾತ್ರ ಆತ್ಮಕಥನ ಬರೆದುಕೊಳ್ಳಬೇಕು, ಎನ್ನುವ ಅಘೋಷಿತ ನಿಯಮವನ್ನು ಈ ಕೃತಿ ಸುಳ್ಳಾಗಿಸುತ್ತದೆ. idu atiyaaytu

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: