ಟೀನಾಗೆ ಮಳೆಯ ಗುಂಗು..

-ಟೀನಾ

Tinazone

ಹೊರಗೆ ಮಳೆ ಸುರಿಯುತ್ತಿರೋವಾಗ ಸುಡುಸುಡು ಕಾಫಿ ಹೀರುತ್ತ ಕಿಟಕಿ ಬದಿಯಲ್ಲಿ ಕುಳಿತುಕೊಂಡು ಮಳೆಹನಿಗಳು ನೆಲಕ್ಕೆ ಬೀಳೋದನ್ನೇ ದಿಟ್ಟಿಸಿಕೊಂಡು ಕೂತಿರುತ್ತಿದ್ದೆ. ಅಮ್ಮ ಅದೇನು ತಂದ್ರಾವಸ್ಥೆಯಲ್ಲಿ ಅಲುಗಾಡದೆ ಕೂತ್ಕೊಂಡಿರ್ತೀಯೋ ಕಾಣೆ!! ಎಂದು ಗೊಣಗುವುದೂ ಕೇಳುತ್ತ ಇರಲಿಲ್ಲ.

ಜೀರುಂಡೆಗಳ ಜಿರಿಜಿರಿ ಸದ್ದು, ಮನೆಯ ಉಣಗಲ್ಲಿನ ಮುಂದೆ ಇದ್ದ ಮಳೆನೀರಿನ ಚರಂಡಿಯಲ್ಲಿ ಹರಿಯುವ ನೀರಿನ ಬುಳುಬುಳು, ತೆಂಗಿನಗರಿಗಳ ಮೇಲೆ ಬೀಳುವ ಮಳೆಹನಿಗಳ ಟಪಟಪ ಗಲಾಟೆ, ಮಿಂಚು-ಗುಡುಗುಗಳ ‘ನೀನಾದಮೇಲೆ ನಾನು’ ಜಗಳ, ದೂರದಲ್ಲೆಲ್ಲೋ ಮನೆಯೊಂದರ ಚಿಮಣಿಯಿಂದ ಸುರುಳಿಯಾಗೇಳುವ ಹೊಗೆ, ಅಡಿಗೆಮನೆಯಿಂದ ತೇಲಿಬರುವ ಸಾರಿನ ಒಗ್ಗರಣೆಯ ಘಮಲು…ಎಲ್ಲವೂ ಸೇರಿಕೊಂಡು ನನ್ನನ್ನ ಒಂದುರೀತಿಯ ವಿಚಿತ್ರ ಅಸಹಾಯಕ ಸ್ಥಿತಿಗೆ ತಳ್ಳುತ್ತಿದ್ದವು. ಆ ಸ್ಥಿತಿಯಲ್ಲಿ ಸುಮ್ಮನೆ ಹೊರಗೆ ದಿಟ್ಟಿಸಿಕೊಂಡು ಕುಳಿತುಕೊಳ್ಳುವುದಲ್ಲದೆ ಇನ್ನೇನೂ ಮಾಡಲು ಸಾಧ್ಯವಾಗುತ್ತಿರಲಿಲ್ಲ.

ಚಿತ್ರ: ಬಾಲು ಮಂದರ್ತಿ

ಅಮ್ಮ ಫೋನು ಮಾಡಿದಾಗ ’ಈಗೆಲ್ಲ ಮೊದಲಿನ ಹಾಗೆ ಮಳೆ ಇಲ್ಲ ಕಣೆ’ ಅನ್ನುತ್ತಾರೆ. ಮಲೆನಾಡಿನಲ್ಲಿ ಹೆಚ್ಚೂಕಡಮೆ ವರ್ಷದ ಆರೇಳು ತಿಂಗಳೂ ಮಳೆ ಸುರಿಯುವುದನ್ನೆ ನೋಡುತ್ತ ಕಳೆಯುತ್ತಿದ್ದ ನನಗೆ ಹಳಹಳಿ. ಮಳೆ ಅಂದರೆ… ನಮ್ಮ ಪಾಲಿಗೆ ರೈನ್ ಕೋಟು, ರೈನ್ ಬೂಟು ತೊಟ್ಟು, ಪುಟ್ಟ ಕೊಡೆ ಹಿಡಿದು ಸ್ಲೇಟಿನಲ್ಲಿ ಬರೆದಿದ್ದ ಮನೆಪಾಠ ಅಳಿಸಿಹೋಗದಂತೆ ಎಚ್ಚರವಹಿಸುತ್ತ ಶಾಲೆಗೆ ಹೋಗುವುದು. ಸ್ಲೇಟು ಅಳಿಸಲು ದಾರಿಬದಿಯಲ್ಲಿ ಹೇರಳವಾಗಿ ಬೆಳೆಯುತ್ತಿದ್ದ ಕಾಂಡ ಚಿವುಟಿದರೆ ನೀರು ಒಸರುವ ‘ನೀರುಗಿಡ’ಗಳನ್ನು ಕಿತ್ತು ಚಿನ್ನದಷ್ಟು ಜೋಪಾನವಾಗಿಟ್ಟುಕೊಳ್ಳುವುದು.

ನಮ್ಮ ಮುಂದೆ ನಡೆದುಹೋಗುವ ಗೆಳತಿಯರ ಯೂನಿಫಾರಂ ಲಂಗಗಳಿಗೆ ಕೆಸರು ಸಿಡಿಸಿ ಕೂಗಾಡುವುದು. ಶಾಲೆ ಬಿಡುವ ವೇಳೆಗೆ ಸರಿಯಾಗಿ ಹೇಳಿಕಳಿಸಿದಂತೆ ಬಂದು ಸುರಿಯುವ ಮಳೆಯನ್ನು ಶಪಿಸುತ್ತ ಇಷ್ಟವಿರದಿದ್ದರೂ ವಿಧಿಯಿಲ್ಲದೆ ರೈನ್ ಕೋಟು, ಬೂಟು ಹಾಕಿಕೊಂಡು ಜಾರಿಬೀಳದ ಹಾಗೆ ಮೆಲ್ಲನೆ ನಡೆಯುವುದು. ಆಗೀಗ ನಮ್ಮ ಅದೃಷ್ಟಕ್ಕೆ ದೊಡ್ಡ ಮಳೆ ಬಂದ ಕೂಡಲೆ ಸ್ಕೂಲಿನಲ್ಲಿ ‘ಮಳೆರಜ’ ಘೋಷಿಸಲಾಗುತ್ತಿತ್ತು. ಆಗಂತೂ ನಮ್ಮ ಸಂತೋಷಕ್ಕೆ ಸೀಮೆಯೇ ಇಲ್ಲ!!! ’ಹೋಓಓಓಓಓಓ’ ಎಂದು ಗಂಟಲು ಹರಿಯುವಂತೆ ಕೂಗುತ್ತ ದೊಡ್ಡಮೈದಾನದ ಕಡೆ ಓಟ. ಮಳೆ ಬಂದಾಗೆಲ್ಲ ಕೆರೆಯಂತೆ ಕೆಂಪುನೀರು ತುಂಬಿಸಿಕೊಳ್ಳುವ ಊರ ಮೈದಾನ ನಮಗೆ ದೊಡ್ಡ ಸಮುದ್ರದಂತೆ ಕಾಣುತ್ತಿತ್ತು. ಊರಮಧ್ಯ ಹರಿಯುವ ಭದ್ರಾನದಿಯಲ್ಲಿ ನೆರೆ ಬಂದರೆ ಕೇಳುವುದೇ ಬೇಡ! ಅಪ್ಪನ ಕೈಹಿಡಿದುಕೊಂಡು ಸೇತುವೆಗೆ ಹೋಗಿ ಭದ್ರೆಯ ರೌದ್ರಾವತಾರವನ್ನ ನೋಡಿಬರುವುದೇ ಒಂದು ದೊಡ್ಡ ಸಾಹಸಯಾನ.

ಮನೆಯೊಳಗೆ ನುಗ್ಗಿದರೆ ಕೆಸರುತುಂಬಿದ ಕೈಕಾಲುಮುಖಾದಿಗಳನ್ನು ಸೋಪು, ಪ್ಲಾಸ್ಟಿಕ್ ಗುಂಜು ಹಾಕಿ ಉಜ್ಜಿ ತೊಳೆದು, ಸ್ವೆಟರು-ಕಾಲುಚೀಲಗಳೊಳಗೆ ನಮ್ಮನ್ನು ತುಂಬಿಸುವ ಅಮ್ಮನ ‘ಪ್ರೀತಿ’ ಭಯಹುಟ್ಟಿಸುತ್ತಿತ್ತು. ’ಯೇನೂ ಬೇಡಾ!!!’ ಎಂದು ಕೂಗಾಡಲು ತೆಗೆಯುವ ನಮ್ಮ ಬಾಯಿಗಳನ್ನು ಅಮ್ಮ ದೊಡ್ಡ ಅಲ್ಯೂಮಿನಿಯಂ ಡಬ್ಬಗಳಲ್ಲಿ ತುಂಬಿಸಿಡುತ್ತಿದ್ದ ತಿಂಡಿಗಳನ್ನು ಉಪಯೋಗಿಸಿ ಭದ್ರವಾಗಿ ಮುಚ್ಚಿಬಿಡುತ್ತಿದ್ದರು. ರವೆಯುಂಡೆ, ಪುರಿಯುಂಡೆ, ನುಚ್ಚಿನುಂಡೆ, ಕರ್ಜಿಕಾಯಿ, ಬೇಸನ್ ಲಾಡು, ಕಾಯಿಬರ್ಫಿ, ಚಕ್ಕುಲಿ, ಕೋಡುಬಳೆ, ಶಂಕ್ರಪೊಳೆ – ಮುಂತಾದ ತಿಂಡಿಗಳು ಮನೆಯ ತುಂಟಪೋರರನ್ನು ಮಣಿಸಲು ಸದಾ ಸಿದ್ಧವಿರುತ್ತಿದ್ದವು. ಜತೆಗೆ ಹಪ್ಪಳ ಸಂಡಿಗೆಗಳ ಸಡಗರ ಬೇರೆ. ಮಳೆಯಲ್ಲಿ ನೆನೆದು ಶೀತವಾದರೆ ಕುಡಿಯಲು ಕೊಡುತ್ತಿದ್ದ ಕರಿಮೆಣಸಿನ ಸಾರು, ಕಷಾಯಗಳನ್ನು ನೆನೆಸಿದರೆ ಇವತ್ತಿಗೂ ಬೆವರುತ್ತೇನೆ. ನಿಲ್ಲದಲೆ ಲೀಕಾಗುವ ಆಕಾಶ ನೋಡುತ್ತ ಕಿಟಕಿಯ ಬಳಿ ಕೂತು ನಾವು ಮಕ್ಕಳು ಹಾಡುತ್ತಿದ್ದ ’ಮಳೆ ಬಂತು ಗಿಳಿ ಫೋ ಪೋ ಪೋ’ ಹಾಡು ಮಳೆಯ ಸದ್ದಿನ ಜತೆ ಪೈಪೋಟಿ ನಡೆಸುತ್ತಿತ್ತು.
ಹತ್ತಿರ ಹತ್ತಿರ ಎಪ್ಪತ್ತು-ಎಂಭತ್ತು ವರ್ಷದ ನಮ್ಮ ಮನೆಯ ಹೆಂಚುಗಳು ಮಳೆಯೊಡನೆ ಯುದ್ಧನಡೆಸಿ ಸುಸ್ತಾದಾಗ ಸಣ್ಣ ಬಿರುಕುಗಳೆಡೆಯಿಂದ ಮನೆಯೊಳಗೆ ಮಳೆ ತೊಟ್ಟಿಕ್ಕಲಾರಂಭಿಸುತ್ತಿತ್ತು. ಆಗೆಲ್ಲ ನಾನೇ ಇನ್ಚಾರ್ಝ್. ಕೈಗೆ ದೊರಕಿದ ಪಾತ್ರೆಗಳನ್ನು ಹಿಡಿದುಕೊಂಡು ಮಳೆನೀರು ಬೀಳುವಲ್ಲೆಲ್ಲ ಇಡಬೇಕಿತ್ತು. ಪಾತ್ರೆಗಳ ಸಂಖ್ಯೆ ಹೆಚ್ಚಾದಂತೆ ಅಪ್ಪನಿಗೆ ಸುದ್ದಿ ಹೋಗುತ್ತಿತ್ತು. ಅರ್ಥಾತ್ ಮುಂದಿನ ಚಳಿಗಾಲದಲ್ಲಿ ಮನೆಗೆ ಹೊಸ ಮಾಡು ಬರುತ್ತಿತ್ತು. ಇದೆಲ್ಲ ಮುಗಿಯಿತು ಅಂದರೆ ಮರ ಬೀಳುವ ಯೋಚನೆ. ನಮ್ಮ ಮನೆಯ ಮುಂದೆ ಒಂದು ಮಾವಿನ ತೋಪು. ಅದರಲ್ಲಿ ಮಾವಿನ ಮರಗಳ ಜೊತೆಗೇ ಹಲಸು, ಸಿಲ್ವರ್, ದೇವದಾರು, ಗೇರು ಮರಗಳೂ ಹೇರಳವಾಗಿದ್ದವು. ಮಳೆಯ ಪ್ರಕೋಪಕ್ಕೆ ಸಿಲುಕಿ ಪ್ರತಿ ವರುಷವೂ ಒಂದಲ್ಲ ಒಂದು ಮರ ಬೀಳುವುದು ನಡೆಯುತ್ತಿತ್ತು. ಮನೆಯ ಮೇಲೇ ಬೀಳುವಂತೆ ಬೆಳೆದು ನಿಂತಿದ್ದ ಆ ಬೃಹತ್ ಮರಗಳ ಬಗೆಗೆ ಅಮ್ಮನಿಗೆ ವಿಪರೀತ ಭಯ. ಜೋರು ಮಳೆಗಾಳಿಗೆ ಆ ಮರಗಳು ತಾರಾಮಾರಾ ತೂಗಾಡುವುದನ್ನು ನೋಡಿ ಭಯಬೀಳದವರು ನಿಜವಾಗಿ ಶೂರರೇ ಸರಿ! ಗುಡುಗು ಮಿಂಚು ಜೋರಾದ ಹಾಗೆ ಅಮ್ಮ ಕಿಟಕಿ-ಬಾಗಿಲು ಮುಚ್ಚಿ, ನಮ್ಮನ್ನೆಲ್ಲ ಮನೆಯ ಮಲಗುವ ಕೋಣೆಗೆ ಸೇರಿಸಿಬಿಡುತ್ತಿದ್ದರು. ಅಲ್ಲಿ ಮಂಚದ ಮೇಲೆ ಬೆಚ್ಚಗೆ ಕಂಬಳಿ ಹೊದ್ದುಕೊಂಡು ಮಂಕಿಕ್ಯಾಪ್ ಹಾಕಿಕೊಂಡು ಕೂತ ನಮಗೆ ‘ಮರ ಬಿದ್ದು ಮನೆ ಎರಡು ಪೀಸಾದರೆ’ ಎಂದು ಒಳೊಳಗೇ ಕಾಡುತ್ತಿದ್ದ ಆತಂಕ ಅಮ್ಮ ಹೇಳುತ್ತಿದ್ದ ರಸವತ್ತಾದ ಕತೆಗಳ ನಡುವೆಯೆಲ್ಲೋ ಕಳೆದುಹೋಗಿಬಿಡುತ್ತಿತ್ತು.

ಏಳನೆ ಕ್ಲಾಸು ಮುಗಿದ ನಂತರ ರೈನ್ ಕೋಟುಗಳು ಹೋಗಿ ಕೈಗೆ ಛತ್ರಿಗಳು ಎಟುಕಿದವು. ಆಹಹ.. ಅದೇನು ಸಂತಸ ನಮಗೆ!! ನಾವು ಇದ್ದಕ್ಕಿದ್ದಂತೆ ಆರಡಿ ಬೆಳೆದಷ್ಟು ಹೆಮ್ಮೆ. ನಡಿಗೆಯಲ್ಲಿ ಅದೇನೋ ಡೌಲು. ಮಳೆಯಲ್ಲಿ ಛತ್ರಿ ಗರಗರನೆ ತಿರುಗಿಸಿ ಪಕ್ಕದಲ್ಲಿ ನಡೆಯುವವರ ಮೇಲೆ ನೀರು ಹಾರಿಸುವುದೇನು, ಛತ್ರಿಯೊಳಗೆ ಗೆಳತಿಗೆ ಕೊಡಲು ತಿಂಡಿ ಬಚ್ಚಿಟ್ಟುಕೊಂಡು ಹೋಗುವುದೇನು, ‘ಛತ್ರಿಜಗಳ’ ಎಂಬ ವಿಶೇಷ ಕದನವನ್ನು ನಮಗಾಗದವರೊಂದಿಗೆ ನಡೆಸುವುದೇನು, ಮಳೆಯಲ್ಲಿ ನೆನೆದುಕೊಂಡು ಹೋಗುವ ಗೆಳತಿಯರಿಗೆ ‘ಛತ್ರಿಲಿಫ್ಟ್’ ನೀಡುವುದೇನು… ಛತ್ರಿ ಕಳೆದುಹಾಕಿಕೊಂಡು ಮನೆಯಲ್ಲಿ ಬೈಯಿಸಿಕೊಳ್ಳುವುದೇನು…ಹೀಗೆಲ್ಲ ತರಲೆ ನಡೆಸುತ್ತ ಯಾವಾಗ ಕಾಲೇಜಿಗೆ, ಹಾಸ್ಟಲ್ ಜೀವನಕ್ಕೆ ಬಡ್ತಿ ಪಡೆದೆನೋ ತಿಳಿಯಲೇ ಇಲ್ಲ.

ಹಾಸ್ಟೆಲ್ಲಿನ ಒಂಟಿತನ. ಜತೆಯಲ್ಲಿ ಇದ್ದಕ್ಕಿದ್ದಂತೆ ಧಾರಾಕಾರವಾಗಿ ಸುರಿದು ಮಂಗಮಾಯವಾಗುವ ದಕ್ಷಿಣ ಕನ್ನಡದ ಮಳೆ. ಅಂಥ ಮಳೆಯಲ್ಲೂ ತಡೆಯಲಾರದ ಸೆಖೆ. ಮಲೆನಾಡಿನ ಹಳ್ಳಿಯಿಂದ ಬಂದ ನನಗೆ ಅಯೋಮಯ. ಬೇಸರ ಕಳೆಯಲು ತರತರಹದ ತರಲೆ. ನಮ್ಮ ‘ಸೀಕ್ರೆಟ್ ಮಿಶನ್’ ಎಂದರೆ ವಾಚ್ಮನ್ ರಾಜಣ್ಣನ ಕಣ್ಣು ತಪ್ಪಿಸಿ ಬೆಳಜಾವ ಐದುಗಂಟೆಗೆಲ್ಲ ಎದ್ದು ಹಾಸ್ಟೆಲ್ಲಿನ ಕಾಂಪೌಂಡಿನಲ್ಲಿ ಮಳೆಯೇಟಿಗೆ ಬಿದ್ದ ಕಾಟುಮಾವಿನಹಣ್ಣುಗಳನ್ನು ಆಯಲು ಛತ್ರಿ, ಟಾರ್ಚಿ ಹಿಡಿದು ಹೋಗುವುದು. ವೀಕೆಂಡ್ ಶಾಪಿಂಗ್ ಸಮಯದಲ್ಲಿ ಹೊರಗೆ ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೆ ಹೋಟೆಲೊಂದಕ್ಕೆ ನುಗ್ಗಿ ಐಸ್ಕ್ರೀಂ ಆರ್ಡರ್ ಮಾಡಿದಾಗ ವೆಯಿಟರನ ಮುಖ ಹುಳ್ಳಗಾದದ್ದು ನೋಡಿ ಗೆಳತಿಯರೊಡನೆ ನಕ್ಕಿದ್ದುಂಟು. ಕಾಲೇಜಿನಲ್ಲಿ ಎಲ್ಲರೊಡನೆ ಲವಲವಿಕೆಯಿಂದ ಬೆರೆಯುತ್ತ ಚಟುವಟಿಕೆಯಿಂದಿದ್ದ ಹುಡುಗನೊಬ್ಬ ಅದೇ ವರ್ಷ ಸಿಡಿಲು ಬಡಿದು ಕರಕಾದಾಗ ಮಳೆಗಾಲದ ಮೊದಲ ಕಹಿ ಅನುಭವ.

ನನ್ನ ಆಪ್ತಸ್ನೇಹಿತೆ ನಿಶಾಳ ಪರಿಚಯವಾದದ್ದೂ ಮಳೆಯಿಂದಲೇ. ಶಿವಮೊಗ್ಗೆಯಲ್ಲಿ ಡಿಗ್ರಿ ಕಾಲೇಜು ಸೇರಿದ ಮೊದಲ ದಿನ. ಹಾಸ್ಟಲ್ಲಿಗೆ ಹೊರಡಲೆಂದು ಹೊರಹೋದರೆ ಜೋರಾಗಿ ಮಳೆ ಸುರಿಯಲು ಶುರುವಾಗಬೇಕೆ? ಸುಮ್ಮನೆ ನಿಂತಿದ್ದೆ. ಕ್ಲಾಸಿನಲ್ಲಿ ನನ್ನ ಮುಂದಿನ ಬೆಂಚಿನಲ್ಲಿ ಕುಳಿತಿದ್ದ ಹುಡುಗಿಯೊಬ್ಬಳು ಬಳಿಬಂದು, ’ಛತ್ರಿ ಇಲ್ವಾ? ಬಾ. ನಿನ್ ಹಾಸ್ಟೆಲ್ ಜಯನಗರದಲ್ಲಲ್ವಾ? ಬೆಳಿಗ್ಗೆ ಬರೋವಾಗ ನೋಡ್ದೆ. ನಾನೂ ಆಕಡೇನೇ ಹೋಗೋದು’ ಎಂದಳು. ಇಬ್ಬರೂ ಮಳೆಯಲ್ಲಿ ಅರ್ಧ ನೆನೆದುಕೊಂಡು ನಮ್ಮನಮ್ಮ ಗೂಡು ತಲುಪುವಷ್ಟರಲ್ಲಿ ಎಷ್ಟೋ ವರುಷಗಳ ಪರಿಚಯವೇನೋ ಎನಿಸುವಷ್ಟು ಆತ್ಮೀಯತೆ ಬೆಳೆದುಬಿಟ್ಟಿತ್ತು. ನಾವು ಹಾಸ್ಟೆಲ್ಲಿನ ಗೆಳತಿಯರು ಕೂಡಿ ಜೋಗಕ್ಕೆ ಹೋದಾಗ ಶರಾವತಿಯ ದಂಡೆಯಲ್ಲಿ ಸುರಿಯುವ ಮಳೆಯಲ್ಲಿ ಕುಣಿದು ಕುಪ್ಪಳಿಸಿದ್ದು ನೆನೆದು ನಗು ಉಕ್ಕುತ್ತದೆ.

…ಇಲ್ಲೀಗ ಕುಳಿತು ಇವತ್ತಿನ ಮಳೆ ಯಾವಾಗ ಬಂದೀತೋ ಎಂದು ಕಾಯುತ್ತಿದ್ದೇನೆ. ಮಗಳಿಗೆ ಈ ವೀಕೆಂಡು ಪೇಪರ್ ದೋಣಿ ಮಾಡಿಕೊಡಬೇಕು. ಮನೆಯೆದುರು ಹರಿವ ನೀರಲ್ಲಿ ತೇಲಿಸಿ ಅವಳು ಕುಣಿವುದ ಮನಸಾರೆ ನೋಡಬೇಕು..

ಅಷ್ಟು ವರ್ಷ ಮಳೆ ಸುಮ್ಮನೆ ನೆಲದ ಮೇಲಷ್ಟೆ ಸುರಿಯಲಿಲ್ಲ. ಮನದೊಳಗೂ ಸುರಿದಿರಬೇಕು

‍ಲೇಖಕರು avadhi

April 29, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: