ಟು ಸರ್ ವಿತ್…

ಅಕ್ಷತಾ ಕೆ

ak11

ದಣಪೆಯಾಚೆ…

ನಾನು ನಗ್ತಿದ್ದೆ… ಬಹಳ ಬಹಳ ನಗ್ತಿದ್ದೆ. ಅದು ಎದುರಿಗಿರುವವರನ್ನು ತಲುಪಿ ಅವರಿಗೂ ನಗುವಿನ ಸಾಂಕ್ರಾಮಿಕ ಕಾಯಿಲೆ ಹತ್ತಿ ಬಿಡಬೇಕು ಹಾಗೆ ನಗ್ತಿದ್ದೆ. ಮತ್ತೆ ಮಾತಾಡ್ತಿದ್ದೆ. ತುಂಬಾ ತುಂಬಾ ಮಾತು. ಹುಡುಗ. ಹುಡುಗಿಯರೆಂಬ ಭೇದವಿಲ್ಲದೆ ಎಲ್ಲರ ಜೊತೆ ಬೆರೆತು ಮಾತು-ನಗೆ, ನಗೆ-ಮಾತು. ನನ್ನ ಕಂಠವೂ ಸ್ವಲ್ಪ ದೊಡ್ಡದೆ, ಮೈಕ್ ಇಲ್ಲದಿದ್ದಾಗ ಭಾಷಣ ಮಾಡಲು ಉಪಯೋಗಕ್ಕೆ ಬರುವಂತದ್ದು. ಗಲಗಲ ಮಾತು ಮತ್ತು ನಗುವಿನಿಂದಾಗಿ ನಾನು ಎಲ್ಲರ ಹಿತವಚನ ಕೇಳ್ಬೇಕಾಗಿತ್ತು. ಪ್ರೈಮರಿ ಶಾಲೆಯಲ್ಲಿದ್ದಾಗ ಈ ಬಗ್ಗೆ ಯಾರ ಆಬ್ಜೆಕ್ಷನ್ನೂ ಇರಲಿಲ್ಲ. ಎಲ್ಲವೂ ಸಹಜವಾಗಿತ್ತು.

ಹೈಸ್ಕೂಲಿಗೆ ಬಂದ ಕೂಡಲೇ ನನ್ನ ಮಾತು, ನಗೆ ಎರಡನ್ನೂ ನಿಲ್ಲಿಸಬೇಕು ಎಂದು ನನ್ನ ಜಗತ್ತಿನ ಅಪ್ಪಣೆಯಾಯಿತು. ಯಾಕೆ ನಿಲ್ಲಿಸಬೇಕು ಎಂಬ ಪ್ರಶ್ನೆಗೆ ಉತ್ತರವಿಷ್ಟೆ; ಹೆಣ್ಣುಮಕ್ಕಳು ಕಡಿಮೆ ನಗ್ಬೇಕು, ಕಡಿಮೆ ಮಾತಾಡ್ಬೇಕು; ಅಷ್ಟೆ ಅಲ್ಲ ನಗು ಮತ್ತು ಮಾತು ಎರಡೂ ಮೆಲುದನಿಯಲ್ಲಿರಬೇಕು. `ಜೋರಾಗಿ ನಗಾಡೋಳು, ಮಾತಾಡೋಳು ಹೆಣ್ಣೆ ಅಲ್ಲ’. ಹುಡುಗಿ ಹೆಣ್ಣಾಗುವ ಆ ಸಂದರ್ಭದಲ್ಲೆ ಗಲಗಲ ಎನ್ನುವಂತಹ ನಗು ಮತ್ತು ಮಾತಿನಿಂದಾಗಿ ನನ್ನಲ್ಲೆ ನನ್ನ ಹೆಣ್ತನದ ಬಗ್ಗೆ ಶಂಕೆ ಹುಟ್ಟಿದ್ದೂ ಇದೆ. ಆಗೆಲ್ಲ ತಪ್ಪಿತಸ್ಥ ಭಾವನೆ ಅನುಭವಿಸಿದ್ದೇನೆ. ನಗು ಮತ್ತು ಮಾತು ಎರಡನ್ನೂ ಅಪರಾಧವೆಂದು ಪರಿಗಣಿಸಿ `ಪರಿಪೂರ್ಣ ಹೆಣ್ಣಾಗುವ’ ನಿಟ್ಟಿನಲ್ಲಿ ನಾನು ನಾಲ್ಕು ಹೊತ್ತು ಬಿಗಿದುಕೊಂಡೆ ಇರಲು ಪ್ರಯತ್ನಿಸುತ್ತಿದ್ದೆ-ಮುಖವನ್ನು ಅಷ್ಟೆ ಅಲ್ಲ ಮನಸ್ಸನ್ನು. ಜೊತೆಗೆ ಮತ್ತೊಂದಿಷ್ಟು ಬಿಗಿದುಕೊಳ್ಳುವ ವಿಷಯಗಳಿದ್ದವು; ಜಡೆ ಹೆಣೆದುಕೋ, ಕೂದಲು ಬಿಟ್ಕಂಡು ಅಲೀಬೇಡ, ಎಲ್ಲೇ ಹೋಗ್ಬೇಕಿದ್ರೂ ನಮ್ಮ ಒಪ್ಪಿಗೆ ಪಡೆದೇ ಹೊರಗೆ ಕಾಲಿಡಬೇಕು. ಲಕ್ಷಣವಾಗಿ ಹೂ ಮುಡಿದುಕೊಂಡು ಕುಂಕುಮ ಹಚ್ಕೊ, ಮಣ್ಣಿನ ಬಳೆ ಒಡೆಯುತ್ತದೆ; ಒಡೆದು ಹೋಗುವಂತ ಆಟ ಆಡ್ಬೇಡ. `ಹುಡುಗರ ಜೊತೆ ಏನು ಮಾತು? ಅವರಿಗ್ಯಾಕೆ ನೀನು ನೋಟ್ಸ್ ಕೊಡೋದು? ಮೊದಲಿಗೆ ಪ್ರಾರಂಭ ಆಗೋದು ಹೀಗೆ…’?

a-11

`ಏನು ಪ್ರಾರಂಭ ಆಗೋದು?’ `ಅದೆಲ್ಲ ಗೊತ್ತಿಲ್ವ, ಒಳ್ಳೆ ಮಳ್ಳಿ ತರ ಆಡ್ಬೇಡ’. `ಹೂಂ ಗೊತ್ತಾಯ್ತು, ಹುಡುಗರ ಜೊತೆ ಮಾತಾಡೋದು ತಪ್ಪು, ಅದಕ್ಕಿಂತ ದೊಡ್ಡ ತಪ್ಪು ಮಾತಾಡೋದ್ರಿಂದ ಆಗೋ ಪರಿಣಾಮ ಏನು ಅಂತ ಕೇಳೋದು’. ಆಯ್ತು ಆಯ್ತು ಎಲ್ಲದಕ್ಕೂ ತಲೆ ಆಡಿಸ್ತಿದ್ದೆ. ಅವರು ವಿಧಿಸಿದ ನಿಯಮಗಳನ್ನೆಲ್ಲ ಅವರು ಹೇಳಿದ್ದಕ್ಕಿಂತ ಕಠೋರ ರೀತಿಯಲ್ಲಿ ಅಳವಡಿಸಿಕೊಳ್ಳಲು ಯತ್ನಿಸುತ್ತಿದ್ದೆ. ಅದೆಷ್ಟೇ ಕಷ್ಟವಾದ್ರೂ. ಹೂವು, ಕುಂಕುಮ ಮರೆತು ಹೋಗಿ, ನನ್ನ ಮರೆಗುಳಿ ಗುಣದ ಬಗ್ಗೆಯೇ ದುಃಖಿತಳಾದೆ. ಹುಡುಗರ ಜೊತೆ ಮಾತಾಡೋದಿರ್ಲಿ ಅವರ ಮುಖ ನೋಡುವುದನ್ನು ತಪ್ಪಿಸತೊಡಗಿದೆ. ಹಾಗೊಮ್ಮೆ ಮಾತಾಡಿಸಿದ್ರೂ ಯಾರಾದ್ರೂ ನನ್ನನ್ನ ಗಮನಿಸ್ತಿದ್ದಾರ ಎಂಬ ಎಚ್ಚರಿಕೆಯ ಕಣ್ಣಿಟ್ಟಿರುತ್ತಿದ್ದೆ. ಯಾರಿಗೂ ಗೊತ್ತಾಗದಂತೆ ಕದ್ದು ಕನ್ನಡಿಯ ಮುಂದೆ ನಿಂತು ಕೂದಲು ಬಿಚ್ಚಿ ಹರವಿಕೊಂಡು, ವಿವಿಧ ಭಂಗಿಗಳಲ್ಲಿ ನನ್ನ ನಾ ಪ್ರಸೆಂಟ್ ಮಾಡಿಕೊಳ್ತಾ ನೋಡಿಕೊಳ್ತಿದ್ದೆ. ಇಂತಹ ಕದ್ದು ಮುಚ್ಚಿದ ಚಟುವಟಿಕೆಗಳು ಜೊತೆಗೆ ಪ್ರಜ್ಞಾಪೂರ್ವಕವಾಗಿ ಕಟ್ಟಿ ಹಾಕಿದಷ್ಟೂ ಅಪ್ರಜ್ಞಾಪೂರ್ವಕವಾಗಿ ಪುಟಿದು ಬರುತ್ತಿದ್ದ ಮಾತು ಮತ್ತು ನಗೆ ನನ್ನಲ್ಲಿ ಅಪರಾಧಿ ಭಾವ ಮೂಡಿಸಿ ಗೊಂದಲಕ್ಕೀಡು ಮಾಡೋದು.

ಹೆಣ್ಣಿಗಿರಬೇಕಾದ ಗುಣ ನಡತೆ ಅಂತ ಇವರೆಲ್ಲ ಏನು ಹೇಳ್ತಿದ್ದಾರೊ ಅವ್ಯಾವು ನನ್ನಲ್ಲಿಲ್ಲ. ಅವನ್ನು ನನ್ನೊಳಗೆ ತಗೊಳೋಕೆ ಹೋದಷ್ಟು ನಾನು ಖಾಲಿ ಖಾಲಿ ಆದಂತೆನಿಸೋದು. ನಾನು ಹೆಣ್ಣೇ ಅಲ್ವಾ ಹಾಗಾದ್ರೆ? ಅಂತ ತಳಮಳಿಸೋ ಸಂದರ್ಭದಲ್ಲಿ… ಸರ್ ಅಲ್ಲಿ ನೀವಿದ್ರಿ. ತಳಮಳದ ಮನಸ್ಸಿಗೆ ಧೈರ್ಯ ತುಂಬಲು. `ನೀನು ಹೆಣ್ಣೇ, ಈ ಮಾತು, ನಗೆ ಎಲ್ಲ ಕಂಟ್ರೋಲ್ ಮಾಡ್ಲಿಕ್ಕೆ ನಿನ್ನ ಕೈಲಿ ಸಾಧ್ಯವಿದೆ’ ಎಂಬ ಆಶಾವಾದದ ಯಾವ ಮಾತನ್ನೂ ನೀವು ಆಡಿ ತೋರಿಸಲಿಲ್ಲ. ಬದಲಿಗೆ ಆ ಬಗ್ಗೆ ಯೋಚಿಸಿ ಹಣ್ಣಾಗುವುದಕ್ಕೆ, ನನ್ನೊಳಗೆ ನಾನು ಖೊಟ್ಟಿಯಾಗುವುದಕ್ಕೆ ಅವಕಾಶ ಕೊಡದಂತೆ ಕಾದಿರಿ.

ಏಳೆಂಟು ವಿದ್ಯಾರ್ಥಿಗಳಿದ್ದ ಸಂಸ್ಕೃತದ ತರಗತಿಯದು. ನೀವು ನಮಗೆ ಮೇಷ್ಟ್ರು. ನಿಮ್ಮ ಜೊತೆ ನಮಗೆ ನೇರ ಸಂಭಾಷಣೆ ಸಾಧ್ಯವಾಗ್ತಿತ್ತು. ಸಂಸ್ಕೃತ ನಮಗೆಲ್ಲ ಹೊಸ ಭಾಷೆ. ಅದರಲ್ಲೂ ಶೂದ್ರರ ಮನೆಯ ಹುಡುಗಿಯಾದ ನನಗೆ ಸಂಪೂರ್ಣ ಅಪರಿಚಿತವಾದ ಭಾಷೆ. ಆದರೆ ಆ ಬಗ್ಗೆ ಆತಂಕ ಪಡಲು ಅವಕಾಶವೇ ಇಲ್ಲದಂತೆ ನೀವು ಹೆಚ್ಚಾಗಿ ಕನ್ನಡದಲ್ಲೇ ಮಾತಾಡ್ತಿದ್ರಿ. ಸಂಸ್ಕೃತವನ್ನು ಓದಿ ಕನ್ನಡದಲ್ಲಿ ವಿವರಿಸ್ತಿದ್ರಿ. ಕನ್ನಡ ಭಾಷೆಯ ಸ್ಪರ್ಷ, ಸೊಗಡು, ಗಂಧ ದೊರಕಿದ್ದು ನಿಮ್ಮ ಸಂಸ್ಕೃತದ ತರಗತಿಯಲ್ಲಿ.

ಒಂದು ದಿನ ನಿಮ್ಮ ತರಗತಿಯಲ್ಲಿ ಏನೋ ಚರ್ಚೆ ನಡೆಯುತ್ತಿತ್ತು. ನಾನು ಜೋರು ಜೋರಾಗಿ ಮಾತಾಡ್ತಿದ್ದೆ. ನೀವು ಎಂದಿನ ನಿಮ್ಮ ಮಂದಸ್ಮಿತ ನಿಲುವಿನೊಂದಿಗೆ ಆಲಿಸ್ತಿದ್ದಿರಿ. ಜೊತೆಗೆ ಉಳಿದ ವಿದ್ಯಾರ್ಥಿಗಳು ಮಾತಿಗೆ ಸೇರಿಕೊಂಡು ಚರ್ಚೆ ಸ್ವಾರಸ್ಯಮಯ ಘಟ್ಟಕ್ಕೆ ತಲುಪಿದಾಗ ಬೆಲ್ ಆಯಿತು. ನೀವು ಕ್ಲಾಸಿಂದ ಹೊರ ಹೋಗೋಕೆ ಬಾಗಿಲು ದಾಟ್ತಿದ್ದಂತೆ, ತರಗತಿಯಲ್ಲಿ ಅದುವರೆಗೆ ಸುಮ್ಮನೆ ಸುಭಗಿಯಂತೆ ಕೂತಿದ್ದ ಸಹಪಾಠಿಯೊಬ್ಬಳು ನನ್ನನ್ನು ಉದ್ದೇಶಿಸಿ, `ಗಟ್ಟಿ ಧ್ವನಿಯಲ್ಲಿ ಎಷ್ಟೊಂದು ಮಾತಾಡ್ತೀಯಪ್ಪಾ’ ಎಂದು ತನ್ನ ವೈರಾಗ್ಯ ಪ್ರಕಟಿಸಿದಳು. ನೀವು ಬಾಗಿಲನ್ನು ಇನ್ನೇನು ದಾಟಬೇಕಿದ್ದವರು ಮತ್ತೆ ಮರಳಿಬಂದು ನನ್ನ ಸಹಪಾಠಿಯ ಎದುರಿಗೆ ನಿಂತು `ಮಿಣ್ಣಗಿರುವವರ ಬಣ್ಣ ಬೇರೆ’ ಅನ್ನೋ ಒಂದೆ ಒಂದು ವಾಕ್ಯ ಹೇಳಿ ಹೊರಟೋದ್ರಿ. ಮೊದಲಬಾರಿಗೆ ನನಗನ್ನಿಸಿದ್ದನ್ನು ಹೇಳಿಕೊಳ್ಳುವ ಬಗ್ಗೆ ಯಾವುದೇ ತಪ್ಪಿತಸ್ಥ ಭಾವನೆ ನನ್ನೊಳಗೆ ಮೂಡದೇ ಇರುವಂತೆ ನೋಡಿಕೊಂಡ್ರಿ.

ನನ್ನ ನಗೆ ಮತ್ತು ಮಾತನ್ನು ಕಡಿಮೆ ಮಾಡಲು ಕಾರಣಕರ್ತರು ನೀವೇ. ನಮ್ಮ ಹೈಸ್ಕೂಲ್ ನಲ್ಲಿ ಅಗಾಧವಾದ ಪುಸ್ತಕ ಸಂಗ್ರಹವಿತ್ತು. ದೊಡ್ಡ ದೊಡ್ಡ ಕಪಾಟುಗಳಲ್ಲಿ ಪುಸ್ತಕಗಳನ್ನು ತುಂಬಿಟ್ಟಿದ್ದರು. ಯಾರಿಗೂ ಕೊಡುತ್ತಿರಲಿಲ್ಲ. ತರಗತಿ ಪುಸ್ತಕದಿಂದ ವಿಚಲಿತರಾಗಿ ಕಥೆ ಪುಸ್ತಕದತ್ತ ಆಕರ್ಷಿತರಾಗಿಬಿಟ್ಟರೆ ಎಂಬ ಎಚ್ಚರಿಕೆ. ಆದರೆ ನೀವು ಉಳಿದವರ ಅಡ್ಡಿ, ಆತಂಕಗಳನ್ನೆಲ್ಲ ಎದುರಿಸಿ, ಬದಿಗೊತ್ತಿ, ಪುಸ್ತಕಗಳ ಧೂಳು ಕೊಡವಿ ನಮಗೆ ಓದಲು ಕೊಟ್ರಿ, ಓದಿಸಿದ್ರಿ, ಚರ್ಚಿಸಿದ್ರಿ. ಹೆಚ್ಚು ಹೆಚ್ಚು ಓದಿದಷ್ಟೂ ಮತ್ತಷ್ಟು ಮಗದಷ್ಟು ಪುಸ್ತಕ ಕೊಟ್ಟು ಓದುವಂತೆ ಮಾಡಿದ್ರಿ. ಪುಸ್ತಕಗಳ ಒಡನಾಟದಲ್ಲಿ ನನ್ನ ಮಾತು ಆದಷ್ಟು ಕಳೆದೇ ಹೋಯ್ತು. ನಗು ಮನಸ್ಸಿನ ಆನಂದವಾಗಿ ಪರಿವರ್ತನೆಯಾಯ್ತು. ಮತ್ತು ಹೀಗೆಲ್ಲ ಯಾವುದೇ ಒತ್ತಡವಿಲ್ಲದೆ ಅಪ್ರಜ್ಞಾಪೂರ್ವಕವಾಗಿ ನಡೆಯಿತು. ನೀವು ನಮಗೆಂದೂ ಉಳಿದ ಮೇಷ್ಟ್ರುಗಳಂತೆ ಅಲ್ಲಿಗೆ ಹೋಗ್ಬೇಡಿ ಇಲ್ಲಿಗೆ ಹೋಗ್ಬೇಡಿ ಎಂದು ಕಟ್ಟುನಿಟ್ಟು ಮಾಡ್ಲಿಲ್ಲ. ಬದಲಿಗೆ ಕಾಡು ಸುತ್ತುವ ಆಶೆಯನ್ನು, ವಿವಿಧ ಹಣ್ಣು, ಹೂವು, ಪ್ರಾಣಿ, ಪಕ್ಷಿಗಳ ಪ್ರಪಂಚದ ಬಗ್ಗೆ ಕುತೂಹಲವನ್ನು ನಮ್ಮಲ್ಲಿ ಹುಟ್ಟಿಸಿದ್ರಿ. ಆದ್ದರಿಂದ ಎಲ್ಲಿಗೆ ಹೋಗೋದಾದ್ರೂ ನಿಮಗೆ ಹೇಳಿಯೇ ಹೋಗೋಣ ಅಂತ ನನಗೆ ಅನ್ನಿಸೋದು.

ನೀವು ಕುಂಕುಮ ಹಚ್ಚಿಕೊಂಡು ಬರ್ತಿದ್ರಿ. ಆದರೆ ಆ ಬಗ್ಗೆ ನಮಗ್ಯಾರಿಗೂ ಕಟ್ಟುನಿಟ್ಟು ಮಾಡ್ತಿರಲಿಲ್ಲ. `ನಾವು ಮಕ್ಕಳು, ನಾವು ಎಳೆಯರು. ನಾವು ಹೇಗಿದ್ದರೂ ಚೆಂದ ಎಂಬುದನ್ನು ನಮಗೆ ಮನದಟ್ಟು ಮಾಡಿಸಿದ್ರಿ. ಆದ್ರಿಂದ ಕನ್ನಡಿ ಮುಂದೆ ಗಂಟೆ ಗಟ್ಟಲೆ ಕಳೆಯುವ, ಹುಡುಗರನ್ನು ನೋಡದೇ ಮುಖ ಮರೆಸಿಕೊಳ್ಳುವಂತ ಅಸಹಜ ವರ್ತನೆಗಳು ಬಹಳ ದಿನ ನಡೆಯಲಿಲ್ಲ.

ಯಾವತ್ತೂ ಹೊಡೆದು, ಬೈದು ಮಾಡದ ನೀವು ಬಲಪ್ರಯೋಗದಿಂದ ಏನನ್ನೂ ಕಲಿಸೋಕೆ ಸಾಧ್ಯವೇ ಇಲ್ಲ ಅಂತ ನಂಬಿದ್ರಿ. ಕೈಯಲ್ಲಿ ಸದಾ ಕಾಲ ಕೋಲನ್ನು ಹಿಡಿದೇ ಇರುವ, ತಾವೇ ತಪ್ಪು ಮಾಡಿದಾಗಲೂ ಅದನ್ನು ಮರೆಸುವುದಕ್ಕೆ ಹುಡುಗರ ಮೇಲೆ ಬಲಪ್ರಯೋಗ ಮಾಡ್ತಿದ್ದ ಮೇಷ್ಟ್ರುಗಳಿಂದ ಕಲಿಸಲಾಗದೇ ಇರುವುದನ್ನು ಒಂದು ದಿನಕ್ಕೂ ಹೊಡೆಯದೆ ಬಡಿಯದೆ ನೀವು ಕಲಿಸಿದ್ರಿ. ಇಪ್ಪತೈದು, ಇಪ್ಪತ್ತಾರು ವರ್ಷದ ನೀವು ಹಿರಿಯ ಗೆಳೆಯನಂತೆ ಕಾಣಿಸ್ತಿದ್ರಿ. ಜಗತ್ತಿನ ಜ್ಞಾನ ಶಾಖೆಗಳನ್ನೆಲ್ಲ ಅರೆದು ಕುಡಿದಂತಹ ಆದರೆ ಆ ಬಗ್ಗೆ ಕಿಂಚಿತ್ ಅಹಂಕಾರವಿಲ್ಲದ, ಪಾಂಡಿತ್ಯ ಪ್ರದರ್ಶಿಸದ ನಮ್ಮೊಡನೆ ನಮ್ಮಂತೆ ಬೆರೆತು ಒಂದಾಗುವ ಜೊತೆಗೆ ನಮ್ಮ ಅನಿಸಿಕೆಗಳನ್ನು ಹೇಳಲು ಪ್ರೇರೇಪಿಸುವ, ಕೇಳಿಸಿಕೊಳ್ಳುವ ಕಾತರ ತೋರುವ ಹಿರಿಯ ಗೆಳೆಯ. ನೀವು ಕಲಿಸಿದ ಪಾಠ ಅಗಾಧವಾದದ್ದು, ಟೆಕ್ಸ್ಟ್ ಬುಕ್ ಗಳ ಸೀಮಿತತೆಗೆ ನಿಲುಕದೆ ಹೋದಂತದ್ದು, ಸರ್ ನೀವು ಯಾವಾಗ್ಲೂ ತಾಳ್ಮೆಯಿಂದ ಇರ್ತಾ ಇದ್ರಿ. ನಮಗೂ ಅದನ್ನೆ ಕಲಿಸಿಕೊಟ್ರಿ. ಎಷ್ಟೋ ಕಠಿಣ ಸಂದರ್ಭದಲ್ಲಿ ನೀವು ಅಂದು ಹಚ್ಚಿಕೊಟ್ಟ ತಾಳ್ಮೆ ಎಂಬ ದೀಪ ಬೆಳಕು ತೋರಿಸಿದೆ. ಬುಧವಾರ ನಮಗೆ ನಿಮ್ಮ ಕ್ಲಾಸಿರ್ತಾ ಇರಲಿಲ್ಲ. ಆವತ್ತಿಡಿ ದಿನ ಏನನ್ನೋ ಕಳೆದುಕೊಂಡ ಹಾಗಾಗೋದು. ನಿಮ್ಮನ್ನ ಆವತ್ತು ತುಂಬಾ ತುಂಬಾ ನೆನಪಿಸಿಕೊಳ್ತಿದ್ದೆ.

ಒಂದೆ ಒಂದು ವರ್ಷ ನೀವು ನಮಗೆ ಪಾಠ ಹೇಳಿದ್ದು. ಮುಂದೆ ನಮ್ಮ ಶಾಲೆಯನ್ನೆ ಬಿಟ್ಟು ಹೊರಟು ಹೋದ್ರಿ. ನೀವು ಹೋದ ದಿನದಿಂದ ಎಲ್ಲ ವಾರಗಳು ಖಾಲಿ ಖಾಲಿ ಬುಧವಾರಗಳೇ. ಆವತ್ತಿಂದ ಇವತ್ತಿನವರೆಗೂ ನಿಮ್ಮನ್ನ, ನಿಮ್ಮ ತರಗತಿಯನ್ನ ನಿಮ್ಮ ಪಾಠವನ್ನು, ನಿಮ್ಮ ಸ್ನೇಹಮಯಿ ವರ್ತನೆಯನ್ನು ತುಂಬಾ ತುಂಬಾ ನೆನಪಿಸಿಕೊಳ್ಳುತ್ತೇನೆ ಮಾಧವ ಹೊಳ್ಳ ಸರ್.

‍ಲೇಖಕರು avadhi

January 17, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮೋಹನ ಮುರುಳಿಯ ಸೆಳೆತ.

ಮೋಹನ ಮುರುಳಿಯ ಸೆಳೆತ.

ಕಳೆದು ಹೋಗುವುದು ಎಚ್.ಆರ್. ರಮೇಶ ಇರುವುದರ ಮಹತ್ವವ ತಿಳಿಯದೆ ಇಲ್ಲದುದರ, ಕಳೆದು ಹೋದುದರ ಬಗ್ಗೆನೇ ಕೊರಗುತ್ತೇವೆ. ಕಳೆದು ಹೋದುದು ನಮ್ಮ...

ಅವರು ಮನಮೋಹನ್ ಅಂಕಲ್..

ಅವರು ಮನಮೋಹನ್ ಅಂಕಲ್..

ಶ್ಯಾಮಲಾ ಮಾಧವ ಮೊನ್ನೆ 'ಬಹುರೂಪಿ' ಜಂಗಲ್ ಡೈರಿ ಕೃತಿ ಪ್ರಕಟಿಸಿದೆ ಎಂದು ಗೊತ್ತಾಯಿತು. ಪತ್ರಕರ್ತ ವಿನೋದಕುಮಾರ್ ನಾಯ್ಕ್ ಬರೆದ ಪುಸ್ತಕವನ್ನು...

ಅವರು ಮನಮೋಹನ್ ಅಂಕಲ್..

ಅವರು ಮನಮೋಹನ್ ಅಂಕಲ್..

ಶ್ಯಾಮಲಾ ಮಾಧವ ಮೊನ್ನೆ 'ಬಹುರೂಪಿ' ಜಂಗಲ್ ಡೈರಿ ಕೃತಿ ಪ್ರಕಟಿಸಿದೆ ಎಂದು ಗೊತ್ತಾಯಿತು. ಪತ್ರಕರ್ತ ವಿನೋದಕುಮಾರ್ ನಾಯ್ಕ್ ಬರೆದ ಪುಸ್ತಕವನ್ನು...

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: