ಟೂರಿಂಗ್ ಟಾಕೀಸ್ : ’ದೇವ್’

-ಜಯಂತ ಕಾಯ್ಕಿಣಿ
ಪ್ರಿಯ ಗೋವಿಂದ ನಿಹಲಾನಿ,
ದೇವರಿಗಾಗಿ ಕಾದಂತೆ ನಾವೆಲ್ಲ ನಿಮ್ಮ ’ದೇವ್’ಗಾಗಿ ಕಾಯುತ್ತಿದ್ದೆವು. ಏಕೆಂದರೆ ಈ ಕರಣ ಜೋಹರ್, ಯಶ್ ಛೋಪ್ರಾ ಕಂಪನಿಗಳ ಜೇನಿನಲ್ಲಿ ಅದ್ದಿದ ಬಣ್ಣಬಣ್ಣದ ಜಿಲೇಬಿಗಳನ್ನು ತಿನ್ನುವುದಿರಲಿ, ನೋಡಿಯೇ ನಾಲಿಗೆ ಕೆಟ್ಟು ಹೋಗಿದೆ.

ಡಾಲರ್ ಕನಸಿನ ದೇಸೀ ಆವೃತ್ತಿಯನ್ನು ಮಧ್ಯಮ ವರ್ಗದ ಮನೆಗಳಲ್ಲಿ ಬಿತ್ತುತ್ತಿರುವ ಇಂಥ ಹುಸಿ ಆಡಂಬರದ ಫಾರ್ಮ್ಯುಲಾ ಒಂದು ಕಡೆ ಆದರೆ, ಅಪ್ ಮಾರ್ಕೆಟ್, ನಿಶ್ ಮಾರ್ಕೆಟ್ ಎಂದು ಮುಂಬಯಿಯ ಭೂಗತ ಜಗತ್ತು, ಇಂಗ್ಲಿಷ್-ಹಿಂದಿ ಮಿಶ್ರಣ, ಒಂದಿಷ್ಟು ಹಸಿ ಶಕ್ತಿಯ ಕುಲುಕು ಹೊಂದಿರುವ ಅಡ್ನಾಡಿ ಪರದೇಶಿ ಫಾರ್ಮ್ಯುಲಾ ಇನ್ನೊಂದು ಕಡೆ.
ಕಾಲು ಶತಮಾನದ ಹಿಂದೆ ಓಂ ಪುರಿ ಎಂಬ ಅನಾಮಿಕ ನಟನನ್ನು ಒಂದೂ ಮಾತಿಲ್ಲದ ಒಳ ತುಡಿತದ ಪಾತ್ರ ಕೊಟ್ಟು “ಆಕ್ರೋಶ್” ಮೂಲಕ ತೆರೆಗೆ ತಂದವರು ನೀವು. ಆ ಮೊದಲೇ ಶಾಂ ಬೆನಗಲ್, ಗಿರೀಶ್ ಕಾರ್ನಾಡ್, ಸತ್ಯದೇವ್ ದುಬೇ, ವಿಜಯ್ ತೆಂಡೂಲ್ಕರ್ ಗರಡಿಯಲ್ಲಿ ನಿಮ್ಮ ಕಣ್ಣಿನ ಜತೆಗೆ ಸಂವೇದನೆಯನ್ನೂ ಹರಿತ ಮಾಡಿಕೊಂಡವರು.(ಕಾಡು, ಮಂಥನ್, ಭೂಮಿಕಾ, ಅಂಕುರ್, ನಿಶಾಂತ್, ಕಲ್‌ಯುಗ್‌ಗಳ ಛಾಯಾಗ್ರಾಹಕರು ನೀವು.) ಸ್ವತಂತ್ರವಾಗಿ “ಆಕ್ರೋಶ್” ಮಾಡಿದ ನಂತರ “ಅರ್ಧಸತ್ಯ”ದ ಮೂಲಕ ಹೊಸ ಅಲೆಯ ಚಿತ್ರಗಳು ಅದ್ಭುತವಾದ ಎನರ್ಜಿಯನ್ನು ಹೊಂದಬಲ್ಲವು ಎಂಬುದನ್ನು ತೋರಿಸಿ ಕೊಟ್ಟಿರಿ.
ಅವಾರ್ಡ್ ಚಿತ್ರಗಳು ಎಂದರೆ ರಾತ್ರಿ ಕೀಟಗಳ ಜೀರುಂಡೆ ಸದ್ದುಗಳ ನಡುವಿನ ಸುದೀರ್ಘ ಆಕಳಿಕೆ ಎಂಬ ಆಗಿನ ಇನ್‌ಸ್ಟಿಟ್ಯೂಟ್‌ಗಳಿಂದ ಹೊರಬಿದ್ದ ಗಡ್ಡಸಿದ್ದಾಂತಿಗಳ ವರಸೆಯನ್ನು ಮುರಿದಿರಿ. “ತಮಸ್”ನಲ್ಲಂತೂ ಕೋಮು ತಲ್ಲಣದ ಭಯವನ್ನು ನೆತ್ತರಿನಲ್ಲೇ ಉದ್ದೀಪಿಸುವಷ್ಟು ಪರಿಣಾಮಕಾರಿಯಾಗಿ ಬಿಂಬಿಸಿದಿರಿ.”ಗೋವಿಂದ ನಿಹಲಾನಿ ಛಾಯಾಗ್ರಾಹಕ.
ಆದ್ದರಿಂದ he will be obsessed with his frames and images ಕೇವಲ ನೋಡೋಕಷ್ಟೆ ಚೆನ್ನಾಗಿರಬಹುದಾದ ಚಿತ್ರಗಳನ್ನು ತೆಗೀಬಹುದು” ಎಂದು ಅನುಮಾನ ಪಟ್ಟವರೆಲ್ಲ ನಿಮ್ಮ ದೃಶ್ಯಗಳ ಹಿಂದಿನ ವಿವಿಧ ಅರ್ಥಸ್ತರಗಳಿಗೆ ಮಾರು ಹೋದರು. ಅಂದರೆ ಕಾಣುವುದನ್ನು ನಿಚ್ಚಳವಾಗಿ ತೋರಿಸುತ್ತಲೇ-ಅದರ ಜತೆಗೆ ಅಗೋಚರವನ್ನೂ ಉದ್ದೀಪಿಸುವ ಸಿನಿಮಾ ಕಲೆಯನ್ನು ಪಳಗಿಸಿಕೊಂಡಿರಿ.
’ಅರ್ಧಸತ್ಯ’ದಲ್ಲಿ ಓಂಪುರಿ ಸ್ಮಿತಾ ಪಾಟೀಲ್ ಜತೆ ಒಂದು ಸಾರ್ವಜನಿಕ ಕ್ಯಾಂಟೀನಿನಲ್ಲಿ ಚಾ ಕುಡಿಯುತ್ತ ತನ್ನೊಳಗಿನ ಹಿಂಸೆಯನ್ನು ತೋಡಿಕೊಳ್ಳುವ ದೃಶ್ಯ ’ತಮಸ್’ನಲ್ಲಿ ಸ್ವತಃ ಛಾಯಾಗ್ರಾಹಕರಾದ ನೀವು-ನಿಮ್ಮ ಗುರು ವಿ.ಕೆ ಮೂರ್ತಿ ಅವರನ್ನು ಛಾಯಾಗ್ರಾಹಕರಾಗಿ ಬಳಸಿಕೊಂಡು ತೆಗೆದ ಹೊಗೆ ಕವಿದ ಭಯತ್ರಸ್ತ ದಂಗೆಯ ನಿರ್ಜನ ಬೀದಿಗಳ ಚಿತ್ರ; ’ದೃಷ್ಟಿ’ಯಲ್ಲಿ ಶೇಖರ್ ಕಪೂರ್, ಡಿಂಪಲ್ ಕಪಾಡಿಯಾಗೆ ತನ್ನ ’ಪ್ರೇಮದ್ರೋಹ’ಕ್ಕೆ ಸಮಜಾಯಿಷಿ ಕೊಡುತ್ತ “ಅವಳನ್ನು ಕಂಡು ನನಗೆ ೧೫ ವರುಷಗಳ ಹಿಂದಿನ ನಿನ್ನನ್ನು ಕಂಡಂತಾಯಿತು” ಎಂದು ಅಂಗಲಾಚುವ ಮತ್ತು ಮಳೆಗಾಲದ ಕೆಂಪು ಸಮುದ್ರದ ತೀರದಲ್ಲಿ ಇಬ್ಬರೂ ಮಾತಿಲ್ಲದೆ ನಡೆಯುವ ದೃಶ್ಯ… ಎಲ್ಲ ನೆನಪಾಗುತ್ತಿವೆ.
ಯಾಕೆ ಎಂದರೆ ಒಳ್ಳೆಯ ಸಿನಿಮಾ ಎಂದರೆ ಕಾಣಿಸುವುದರ ಜತೆಗೆ ಕಾಣದ ಸ್ವರಗಳನ್ನೂ ಅನುಭವ ವಲಯಗಳನ್ನೂ ನಮ್ಮಲ್ಲಿ ಹುಟ್ಟಿಸುತ್ತದೆ ಎಂಬ ನಂಬಿಕೆಯನ್ನು ಬಲಗೊಳಿಸಿದ ದೃಶ್ಯ ರುವಾರಿ ನೀವು(ಬೆನಗಲ್,ಅಡೂರ್,ಹರಿಹರನ್,ಗೌತಮ್ ಘೋಷ್,ಕೇತನ ಮೆಹ್ತಾ ಇವರೆಲ್ಲರಂತೆ).
ನಿಮ್ಮ ’ತಕ್ಷಕ್’ ನಾನು ನೋಡಲಿಲ್ಲ. ಏನೋ ಹಿಂಜರಿಕೆ. ಅದರ ಹಾಡುಗಳನ್ನು ನೋಡಿ, ಬೇಡ ಅನಿಸಿತು. ’ದೇಹಂ’ ನೋಡಲು ಸಿಗಲಿಲ್ಲ. ಹೀಗಾಗಿ ದೇಶಾದ್ಯಂತ ’ದೇವ್’ ಬಿಡುಗಡೆ ಆಗುತ್ತಿದೆ ಎಂದಾಗ ಉತ್ಕಟನಾಗಿ ಕಾದೆ. ಅದರ ದೊಡ್ಡ ದೊಡ್ಡ ಪೋಸ್ಟರುಗಳು, ಅಮಿತಾಬ್, ಅಡ್ವಾನ್ಸ್ ಬುಕ್ಕಿಂಗ್, ಮೀಡಿಯಾ ಜಾಹೀರಾತು ಎಲ್ಲ ನೋಡಿ ಹೆಮ್ಮೆಪಟ್ಟೆ ನೀವು, ಬೆನಗಲ್ ಎಲ್ಲ ಚಿತ್ರಗಳನ್ನು ಬರೆ ಕ್ಯಾನ್‌ಗಳಲ್ಲಿ ತುಂಬಿ ’ಕಾನ್’ ಉತ್ಸವಗಳಿಗೆ ಮಾತ್ರ ಹೊತ್ತುಕೊಂಡು ಹೋಗುವುದೆ ಎಂದೆಲ್ಲ ಹಿಂದೆ ಬೇಸರಪಟ್ಟ ನನ್ನಂಥ ಅಭಿಮಾನಿಗಳಿಗೆ-ನಿಮ್ಮ ಚಿತ್ರಗಳು ಈಗ ಹೀಗೆ ಅಬ್ಬರದಿಂದ ಆಗಿನ ’ಅಮರ್ ಅಕ್ಬರ್ ಅಂತೋನಿ’ ಚಿತ್ರಗಳಂತೆ ಬಿಡುಗಡೆ ಆಗುವುದು ಅಭಿಮಾನದ ಸಂಗತಿ. ಅದು ನಮ್ಮ ಉದ್ಯಮದ ಶೀಲ ಬೆಳೆದದ್ದರ ಪುರಾವೆ. ಆದರೆ,
ಚಿತ್ರ ನೋಡಿದ್ದೇ ತುಂಬಾ ಸಿಟ್ಟು, ಬೇಸರ ಎಲ್ಲಾ ಬಂದು ಬಿಟ್ಟಿತು. ಕೋಮುಗಲಭೆಯಂಥ ಅತ್ಯಂತ ತೀಕ್ಷ್ಣ ಮತ್ತು ಸೂಕ್ಷ್ಮ ವಸ್ತುವನ್ನು ’ಬಳಸಿ’ಕೊಂಡಂತೆ , ಒಂದು ಚಪ್ಪಟೆಯಾದ, ಯಾವ ರೀತಿಯಿಂದಲೂ ವೀಕ್ಷಕರನ್ನು ಬೆಳೆಸದ, ಯಾವ pseudo secularist ಗಳನ್ನು ಓಂ ಪುರಿ ಚಿತ್ರದಲ್ಲಿ ಬೈಯುತ್ತಾನೋ-ಅಂಥದೇ pseudo ಆದ ಒಂದು, ಪತ್ರಿಕಾ ವರದಿಯ feature ನಂಥ ಚಿತ್ರ ಮಾಡಿಬಿಟ್ಟಿದ್ದೀರಿ.
ನಿಮ್ಮ ಉದ್ದೇಶದ ಪ್ರಾಮಾಣಿಕತೆಯ ಬಗ್ಗೆ ಖಂಡಿತ ನಮಗೆ ಸಂಶಯವಿಲ್ಲ. ಮನುಷ್ಯ ಮನುಷ್ಯನನ್ನು ಜಾತಿ, ಧರ್ಮದ ಆಧಾರದ ಮೇಲೆ ದ್ವೇಷಿಸುವ-ದಳ್ಳುರಿಯನ್ನು ರಾಜಕಾರಣಿಗಳು ಬಳಸುವ ರೀತಿ, ಅದಕ್ಕೆ ಅಮಾಯಕರು ಬಲಿಯಾಗುವ ರೀತಿ… ಇದಕ್ಕೆ ಅತ್ಯಂತ ಸ್ಪಂದನಾಶೀಲವಾಗಿ ನೀವು ಚಿತ್ರ ಮಾಡಲು ಹೊರಟಿರಿ ನಿಜ. ಆದರೆ ಫಲ?
ನಾನು ಬೆಂಗಳೂರಿನಲ್ಲಿ ಚಿತ್ರ ನೋಡಿದ ಟಾಕೀಸಿನಲ್ಲಿ ಚಿತ್ರ ನೋಡುತ್ತಿದ್ದಂತೆ ಜನ ಎರಡು ಭಾಗಗಳಾಗಿ ವಿಂಗಡಿಸಲ್ಪಟ್ಟರು! ಓಂಪುರಿ “ನಾವು ಹಾವಿಗೆ ಹಾಲೆರೆಯುತ್ತಿದ್ದೇವೆ”. ಎಂದು ಹೇಳಿದಾಗ ಕೆಲವರು ಚಪ್ಪಾಳೆ ತಟ್ಟಿದರೆ, ಫರ್‌ದೀನ್ ಖಾನ್ ” ಹಿಂದು ಮುಸ್ಲಿಂ ಬಾಂಧವ್ಯವೆಲ್ಲ ಬೊಗಳೆ.
ಸುಳ್ಳು. ಗೊಡ್ಡು ಆದರ್ಶ” ಎಂದಾಗ ಇಡೀ ಥೇಟರು ಚಪ್ಪಾಳೆ ತಟ್ಟಿತು! ಅಂದರೆ ಚಿತ್ರದುದ್ದಕ್ಕೂ ಕೋಮುದ್ವೇಷವನ್ನು ಬಿಂಬಿಸಲು ನೀವು ಬಳಸಿದ ಎಲ್ಲ ದೃಶ್ಯಗಳೂ ತೀರ ಆಳವಾಗಿ ಪ್ರಭಾವ ಬೀರುತ್ತಿದ್ದವು ಅಂದಾಯಿತು. ಮುಂದೆ? ಮುಂದೇನಾಗಬೇಕು? ಈ ನೆಲೆಯಿಂದ ಚಿತ್ರ ಒಂದು ಮಾನವೀಯವಾಗಿ ವಿಶಾಲವಾದ ವರಪೇಕ್ಷಕ್ಕೆ ನೆಗೆದು-ಈ ಎಲ್ಲ ದ್ವೇಷದ ಅರ್ಥಹೀನತೆಯನ್ನು ಮನಗಾಣಿಸಬೇಕಲ್ಲವೆ? ಕಲೆ ಮಾಡಬೇಕಾದ್ದು ಅದನ್ನಲ್ಲವೆ? ಇಲ್ಲ, ಹಾಗಾಗುವುದಿಲ್ಲ.
ಎರಡು ಗಂಟೆಯುದ್ದಕ್ಕೂ ದ್ವೇಷದ ಬೀಜಗಳನ್ನು ಇಬ್ಬಣದಲ್ಲೂ ಬಿತ್ತುತ್ತ ಹೋಗುವ ಚಿತ್ರ, ಕೊನೆಗೆ ಹಠಾತ್ತನೆ ನಮ್ಮನ್ನು ಆ ಅರೆಸ್ಥಿತಿಯಲ್ಲೇ ಬೀದಿಗೆ ಬಿಟ್ಟು ಬಿಡುತ್ತದೆ. ಅರ್ಧ ಹಿಪ್ನೋಟಿಸಂ ಮಾಡಿ ಜನರನ್ನು ಬೀದಿಗೆ ಬಿಟ್ಟಂತಿದೆ ಅದು! ಅದರಷ್ಟು ಅಪಾಯಕಾರಿ ಸಂಗತಿ ಬೇರಿಲ್ಲ.
ಕಮರ್ಶಿಯಲ್ ಎನ್ನಲಾದ ಚಿತ್ರಗಳ ಮಚ್ಚು ಮಾರಾಮಾರಿ, ಟೊಮೆಟೊ ರಕ್ತ ಕ್ರೌರ್ಯಗಳೆಲ್ಲ ಎಷ್ಟೇ ಗಲೀಜಾಗಿದ್ದರೂ- ಚಂದಮಾಮದ ಕತೆಯಂಥ ಒಂದು ಅವಾಸ್ತವಿಕ ವ್ಯಾಕರಣದಲ್ಲಿ ಪಚನಗೊಂಡುಬಿಡುತ್ತವೆ. ಆದರೆ ಇಲ್ಲಿ ನೀವು ವಾಸ್ತವದ ವಿವರಗಳನ್ನು ಇಟ್ಟು ಕತೆ ಕಟ್ಟಲು ಹೊರಟಿದ್ದೀರಿ.

ಗುಜರಾತ್‌ನ ಹತ್ಯಾಕಾಂಡ, ಹೆಂಗಸರು ಮಕ್ಕಳನ್ನು ಹೊರಗಿನಿಂದ ಬಾಗಿಲಿಗೆ ಚಿಲಕ ಹಾಕಿ ಬೆಂಕಿ ಹಚ್ಚಿದ ಮುಂಬಯಿಯ ಜೋಗೇಶ್ವರಿಯ ರಾಧಾಬಾಯಿ ಚಾಳ್ ಪ್ರಸಂಗ, ಗುಜರಾತ್ ಪೊಲೀಸರ ಕೋಮುಪಕ್ಷಪಾತ, ಬೆಸ್ಟ್ ಬೇಕರಿ ಪ್ರಕರಣದ ಸಾಕ್ಷಿದಾರಳ ಭಯ… ಇವೆಲ್ಲ ನಿಜ ಘಟನೆಗಳ ವರದಿಗಳನ್ನು ಬಳಸಿದ್ದೀರಿ! ಆದರೆ ಅದಕ್ಕೆ ಇನ್ನೊಂದು ಅಗೋಚರ ಆಯಾಮ, ವೀಕ್ಷಕನನ್ನು ಬೆಳೆಸಬಲ್ಲ ಆಯಾಮ, ಅಂತರಂಗ ವಿಕಾಸಕ್ಕೊಂದು ಕಿಟಕಿಯನ್ನು ಕಲ್ಪಿಸುವ ಆಯಾಮ ಇಲ್ಲಿ ಮಾಯವಾಗಿದೆ.
ಅವುಗಳ ಮೂಲಕ ಮೂಡಿ ಬರಬೇಕಾದ ದರ್ಶನ ಬರದೆ, ಪ್ರೇಕ್ಷಕ ಹೊಸ ಪೂರ್ವಾಗ್ರಹಗಳೊಂದಿಗೆ, ದ್ವೇಷದೊಂದಿಗೆ ಹೊರಬರುತ್ತಾನೆ. ಅಂದರೆ ಕೈಲಿರುವ ವರದಿಯ ಚೂರುಗಳನ್ನಿಟ್ಟುಕೊಂಡು ಅವುಗಳನ್ನು ಕೇವಲ ಪುನರ್‌ಸೃಷ್ಟಿಸುವಲ್ಲೇ, ಒಂದು ಕಥೆಯಲ್ಲಿ ಅಡಕಗೊಳಿಸುವುದರಲ್ಲೇ ನಿಮ್ಮ ಶಕ್ತಿ ವ್ಯಯವಾದಂತಿದೆ. ಚಿತ್ರ ಮಾಧ್ಯಮದಲ್ಲಿ ಅಂದುಕೊಂಡ ಹಾಗೆ ಆಗೋದು ಕಷ್ಟ.
ದಿನಕ್ಕೆ ನೂರು ಚಿತ್ರಗಳು ಹೀಗೆ ಹಾಳಾಗುತ್ತವೆ. ಆದರೆ “ಕೋಮುದ್ವೇಷ”ದಂತ ವಸ್ತು ಇಟ್ಟುಕೊಂಡು ಚಿತ್ರದ ಸಮತೋಲನ ಹಾಳಾದರೆ-ಅದು ಇನ್ನೂ ಹೆಚ್ಚಿನ ಕೋಮುದ್ವೇಷಕ್ಕೆ, ಮನಸ್ಸಿನ ಉರಿಗೆ ಕಾರಣವಾದೀತು ಎಂಬುದೇ ನನ್ನ ಭಯ. ಎಂಭತ್ತರ ದಶಕದಲ್ಲಿ ಕೆಲವು ಹಿಂದಿ ಸೀರಿಯಲ್‌ಗಳು 51 ಕಂತುಗಳಲ್ಲಿ ಹಿಂದು-ಸಿಖ್ ದ್ವೇಷ ಬಿಂಬಿಸಿ 52ನೇ ಕಂತಿನಲ್ಲಿ ’ಭಾಯಿ-ಭಾಯಿ’ ಎಂದು ಸುಖಾಂತ್ಯ ಮಾಡುತ್ತಿದ್ದವು. ವೀಕ್ಷಕನ ಮನದಲ್ಲಿ ಶಾಶ್ವತವಾಗಿ ಉಳಿದಿದ್ದು ೫೧ ಕಂತಿನ ದ್ವೇಷವೇ ಹೊರತು, ಒಂದು ಕಂತಿ ಹುಸಿ ರಾಜಿಯಲ್ಲ.
ಇಷ್ಟಾಗಿಯೂ ಅದ್ಭುತವಾಗಿ ಪುನಶ್ಚೇತನಗೊಂಡಿರುವ ನಮ್ಮ ಅಮಿತಾಬ್ ’ದೇವ್’ನಾಗಿ ಚಿತ್ರವನ್ನು ಅಲ್ಲಲ್ಲಿ ಬಚಾವ್ ಮಾಡಿದ್ದಾನೆ. ಭ್ರಷ್ಟ ಆಡಳಿತದ ಅಡಿ ಸಿಕ್ಕಿ ನಲುಗುತ್ತಿರುವ ಅವನ ಪ್ರಾಮಾಣಿಕ ಕಣ್ಣುಗಳ ಆರ್ತತೆಯೇ ಚಿತ್ರದ ಜೀವಾಳ.
“ಒಬ್ಬನು ಅನ್ಯಾಯವನ್ನು ಸುಮ್ಮನೆ ನಿಂತು ಸಹಿಸಿ ನೋಡಿದರೆ ಅವನು ಆ ಕ್ಷಣದಿಂದಲೇ ಸತ್ತಂತೆ. ಮುಂದೆ ಎಷ್ಟು ಬದುಕಿದರೇನು?” ಎನ್ನುವ ನಿಮ್ಮ ಸಾಲುಗಳನ್ನು ಹೇಳುವ “ದೇವ್” ಆಶಾದೀಪದಂತೆ ಕಾಣುತ್ತಾನೆ. ಆದರೆ ಅವನನ್ನೂ ಕೊನೆಯಲ್ಲಿ ಢಮಾರ್ ಮಾಡಿ ನೀವು ನಮ್ಮನ್ನು ಪೂರ್ತಿ ಅನಾಥರನ್ನಾಗಿಸಿಬಿಟ್ಟಿರಿ. ಯುವ ಫರ್ದೀನ್ ಖಾನ್ ಕೋರ್ಟಿನಲ್ಲಿ ಕೇಸ್ ಮುಂದುವರಿಸುತ್ತಾನೆ ಅನ್ನಬೇಡಿ. ಏಕೆಂದರೆ ಅವನು ನೀವೇ ಅಂದಂತೆ ಅದಾಗಲೇ ಎಂದೋ ತೀರಿಕೊಂಡಿರುವ ಪೇಲವ ಸ್ಥೈರ್ಯಹೀನವ್ಯಕ್ತಿ

‍ಲೇಖಕರು avadhi

September 29, 2010

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

2 ಪ್ರತಿಕ್ರಿಯೆಗಳು

  1. ಅಶೋಕವರ್ಧನ ಜಿ.ಎನ್

    ಜಯಂತರ ಕಳಕಳಿ ತುಂಬ ಚೆನ್ನಾಗಿ ಬರಹಕ್ಕಿಳಿದಿದೆ. ನಾನಿನ್ನೂ ದೇವ್ ನೋಡಿಲ್ಲ. ಆದರೆ ಭೈರಪ್ಪನವರ ಆವರಣ, ಕವಲುಗಳಂತೆ, ಪೇಜಾವರಶ್ರೀಗಳ ದಲಿತೋದ್ಧಾರಂತೆ ಎಂದೆಲ್ಲಾ ಜಯಂತರ ಪತ್ರದ ಮೂಲಕ ಅರ್ಥೈಸಿಕೊಂಡು ಖಿನ್ನನ್ನಾದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: