ಟೈಮ್ ಪಾಸ್ ಕಡ್ಲೆಕಾಯ್ : ಎಲ್ಲರೂ ಮಾಡುವುದು…..!

ಎಲ್ಲರೂ ಮಾಡುವುದು…!

ಎಸ್.ಜಿ.ಶಿವಶಂಕರ್

ಎರಡು ಸಲ ಬಾಗಿಲನ್ನು ಅರೆಬರೆ ತಳ್ಳಿ, ತಲೆ ತೂರಿಸಿ ತಕ್ಷಣ ಹಿಂದೆ ಎಳೆದುಕೊಂಡಿದ್ದ ಎಳೆನಿಂಬೆಯ ತಲೆ ಮೂರನೆಯ ಸಲ ಒಳಗೆ ತೂರಿದಾಗ ವಿಶ್ವನ ಸಹನೆ ಮೀರಿತು.

`ಎಸ್..?’ ಮೇಲಧಿಕಾರಿಯ ದರ್ಪ ಹೊರಬಿತ್ತು

`ಮೇ ಐ ಕಮಿನ್ ಸಾರ್’ ಎಳೆನಿಂಬೆಯ ಹೆದರಿದ ಎಳೆಯ ದನಿ!

`ಎಸ್ ಯೂ ಕೆನ್ ಕೆಮ್ ಅಂಡ್ ಇನ್’ ಎಂದು ವಿಶ್ವ ಮೇಜಿನ ಮೇಲಿನ ತನ್ನ ಕಡತವನ್ನು ಪರಿಶೀಲಿಸತೊಡಗಿದ; ಅರ್ಧ ಗಮನ ಒಳಗೆ ಪ್ರವೇಶಿಸಿದ ತನ್ನ ಕಿರಿಯ ಸಹೋದ್ಯೋಗಿ ವಿನಯನ ಮೇಲಿತ್ತು.

`ಸಾ..ಸಾ…ಸಾರ್’ ತೊದಲುತ್ತ ವಿನಯ ಗಮನ ಸೆಳೆಯಲೆತ್ನಿಸಿದ.

`ಏನ್ರೀ..ಅದು ಸಾ..ಸಾ ಅಂತ ಸಾವೇರಿ ರಾಗ ?’ ಒರಟಾಗಿತ್ತು ವಿಶ್ವನ ದನಿ! ಕಿರಿಯ ನಿಂತಲ್ಲಿ ಹಲ್ಲು ಕಿರಿದ.

`ನನ್ನ ಲೀವ್ ಲೆಟರು ಸಾರ್..’ ಕೈಯ್ಯಲ್ಲಿದ್ದ ಪತ್ರ ಮುಂದೆ ಚಾಚಿದ.

ಇನ್ನು ಹೆದರಿಸಬಾರದೆಂಬ ಉದ್ದೇಶದಿಂದ ಪತ್ರ ಕೈಗೆ ತೆಗೆದುಕೊಂಡ ವಿಶ್ವ!

`ಅಲ್ರೀ..ಫ್ಯಾಕ್ಟರಿ ಸೇರಿ ಇನ್ನೂ ಎರಡು ತಿಂಗಳಾಗಿಲ್ಲ..ಆಗಲೇ ಲೀವ್ ಹಾಕಿದ್ದೀರಲ್ಲ..? ನಿಮ್ಮ ಕೆರೀರ್ ಗತಿ ಏನು?’

`….ತುಂಬಾ ಎಮರ್ಜನ್ಸಿ ಸಾರ್!’

`ಮೊದಲೇ ಹೇಳಬಾರದೆ..? ಸರಿ ಹೋಗಿ’

`ತ್ಯಾಂಕ್ಯು ಸಾರ್’ ವಿನಯದಿಂದ ಎದ್ದು ಹೊರಡಲನುವಾದಾಗ ಕುತೂಹಲಕ್ಕೆ ವಿಶ್ವ ಅಂತಾ ಎಮರ್ಜನ್ಸಿ ಏನೆಂದು ಕೇಳಿದ.

`ನನ್ನ ವೈಫು ಊರಿಗೆ ಹೋಗ್ತಾ ಇದ್ದಾಳೆ ಸಾರ್’

`ಅದೆಂತಾ ಎಮರ್ಜನ್ಸಿ..? ಎಲ್ಲರ ಹೆಂಡತಿಯರೂ ಊರಿಗೆ ಹೋಗ್ತಾರೆ ಅದನ್ನ ಯಾರೂ ಎಮರ್ಜನ್ಸಿ ಅಂತ ಅನ್ನೋದಿಲ್ಲವಲ್ಲ ?’ ವಿಶ್ವನಿಗೆ ಆಶ್ಚರ್ಯವಾಗಿತ್ತು!

`ಹಾಗಲ್ಲ ಸಾರ್, ಅವಳ ತಮ್ಮನ ಮದುವೆ…’

`ನಾನ್ಸೆನ್ಸ್! ಮದುವೆ ಎಮರ್ಜನ್ಸೀನೆ ?’

`ಅಯ್ಯೋ..ಹಾಗಲ್ಲ ಸಾರ್..ಮದುವೆ ಎಮರ್ಜನ್ಸಿ ಅಲ್ಲ! ಆದರೆ..ಮದುವೆ ಸೀರೆಗೆ ಒಂದು ಮ್ಯಾಚಿಂಗ್ ಬ್ಲೌಸುಬಟ್ಟೆ ಸಿಗ್ತಿಲ್ಲ..!’

ತಕ್ಷಣವೇ ವಿಶ್ವನಿಗೆ ಅರ್ಥವಾಯಿತು! ಈ ಎಳೆನಿಂಬೆ, ಮಡದಿಯ ವಿಷಯದಲ್ಲಿ ಎಂತದ್ದೋ ಎಡವಟ್ಟಿಗೆ ಸಿಕ್ಕಿಕೊಂಡಿದ್ದಾನೆ! ಎಷ್ಟಾದರೂ ವಿಶ್ವ ಮದುವೆ ವಿಷಯದಲ್ಲಿ ಇಪ್ಪತ್ತೈದು ವರ್ಷದ ಚಾಂಪಿಯನ್! ಮತ್ತೆ ಅವನನ್ನು ಕೂರಿಸಿ ವಿವರಿಸುವಂತೆ ಕೇಳಿದ ವಿಶ್ವ!

ಐದು ನಿಮಿಷದಲ್ಲಿ ವಿನಯನ ವಿರಾಟ್ ಸಮಸ್ಯೆ ವಿಶ್ವನಿಗೆ ಅರ್ಥವಾಗಿತ್ತು! ವಿನಯನ ಹೊಸ ಮಡದಿ (ಹಳೆಯ ಮಡದಿ ಬೇರೆ ಇರುವಳೆ ಎಂಬ ಅನುಮಾನಕ್ಕೆ ಅವಶ್ಯಕತೆಯಿಲ್ಲ!) ತನ್ನ ತಮ್ಮನ ಮದುವೆಗೆ ಹೊರಟಿದ್ದಳು. ಆಕೆ ಧಾರೆಗೆ ಉಡಲಿರುವ ರೇಷ್ಮೆ ಸೀರೆಗೆ ಮ್ಯಾಚಿಂಗು ಬ್ಲೌಸಿನ ಬಟ್ಟೆಯನ್ನು ವಿನಯ ಕೊಡಿಸಬೇಕಾಗಿತ್ತು! ಕಳೆದೆರಡು ದಿನಗಳಿಂದಲೂ ಹದ್ದಿನ ಕಾಟದಿಂದ ಆತ ಬೇಗನೆ ಮನೆಗೆ ಹೋಗಲಾಗಿರಲಿಲ್ಲ! ಹದ್ದಿನ ಕಾಟ ಎಂದರೆ ನಿಜವಾದ ಹದ್ದಿನ ಕಾಟವಲ್ಲ! ಹದ್ದಿನ ದೃಷ್ಟಿಯಿಂದ ಬೇಗನೆ ಮನೆಗೆ ಹೋಗಲು ಹವಣಿಸುತ್ತಿರುವವರ ಮೇಲೆ ಎರಗುವ ವಿಶ್ವನ ಮೇಲಧಿಕಾರಿ, ಜನರಲ್ ಮ್ಯಾನೇಜರ್ ಮೆಹತಾನ ಕಾಟ! ಅವನ ಉಕ್ಕಿನ ಹಿಡಿತದಿಂದ ತಪ್ಪಿಸಿಕೊಳ್ಳಲಾರದೆ ಕಳೆದೆರಡು ದಿನವೂ ರಾತ್ರಿ ಏಳು ಗಂಟೆಗೆ ಮನೆಗೆ ಹೋಗಿದ್ದ ವಿನಯ. ಹೆಂಡತಿಯನ್ನು ಅಂಗಡಿಗೆ ಕರೆದುಕೊಂಡು ಹೋಗುವುದರಲ್ಲಿ ಏಳೂ ಮುಕ್ಕಾಲು! ಒಂಬತ್ತಕ್ಕೆಲ್ಲಾ ಅಂಗಡಿಗಳು ಮುಚ್ಚುತ್ತಿದವು. ಎರಡು ಅಂಗಡಿಗಳಲ್ಲಿ ಹುಡುಕುವುದರಲ್ಲಿ ಅಂಗಡಿ ಬಾಗಿಲೆಳೆಯುತ್ತಿದ್ಡವು. ಮ್ಯಾಚಿಂಗ್ ಬಟ್ಟೆಯ ಕತೆ ಗೊತ್ತಲ್ಲ?! `ಇದು ಸ್ವಲ್ಪ ತಿಳಿಯಾಯಿತು, ಇದರೆ ಶೇಡೇ ಬೇರೆ..! ಈ ಕಲರಿಗೂ ಸೀರೆಯ ಕಲರಿಗೂ ಏನೂ ಸಂಬಂಧವಿಲ್ಲ!’ ಬಿಬಿಸಿಯ ಬಿಸಿ ವಾತರ್ೆಯಂತೆ ಬಿತ್ತರವಾಗುವ ಮಡದಿಯ ಮಾತೆಲ್ಲ ಕೇಳುತ್ತಾ..ಗಂಡಂದಿರು ಅಂಗಡಿ ಸುತ್ತಲೇಬೇಕು!

ವಿನಯ ವಿಚಿತ್ರ ಪರಿಸ್ಥಿತಿಯಲ್ಲಿದ್ದ. ಮ್ಯಾಚಿಂಗ್ ಬಟ್ಟೆ ಸಿಗದೆ ಬ್ಲೌಸ್ ಇಲ್ಲ! ಬ್ಲೌಸ್ ಇಲ್ಲದೆ ಮದುವೆ ಇಲ್ಲ! ಹೆಂಡತಿ ಮದುವೆಗೆ ಹೋಗಲಾಗದಿದ್ದರೆ ವಿನಯನ ಗತಿ ದೇವರೇ ಬಲ್ಲ! ಹೆಂಡತಿಯ ಆಸೆ ಈಡೇರಿಸದೆ ಜಗತ್ತಿನಲ್ಲಿ ಗಂಡನೆಂಬ ಪ್ರಾಣಿ ನೆಮ್ಮದಿಯಿರಲು ಸಾಧ್ಯವೆ? ಅದರಲ್ಲಿಯೂ ಹೊಸ ಹೆಂಡತಿ! ಹೆಂಡತಿಯ ಬ್ಲೌಸಿಗೆ ಮ್ಯಾಚಿಂಗ್ ಬಟ್ಟೆ ಸಿಗಬೇಕಾದರೆ ಕನಿಷ್ಠ ಒಂದು ಹತ್ತು ಅಂಗಡಿಗಾದರೂ ಹೋಗಲೇಬೇಕು! ಅದಕ್ಕೆ ಸಮಯ ವಿನಯನಿಗೆ ಸಿಗುತ್ತಿಲ್ಲ- ಹದ್ಡಿನ ಕಾಟದಿಂದ! ಕೊನೆಗೆ ಬೇರೆ ದಾರಿಯೇ ಇಲ್ಲದೆ ರಜ ಹಾಕಿ ಮ್ಯಾಚಿಂಗ್ ಬ್ಲೌಸು ಕೊಡಿಸುವ ಯೋಜನೆ ವಿನಯ ಹಾಕಿಕೊಂಡು ತನ್ನ ಬಾಸ್ ವಿಶ್ವನ ಮುಂದೆ ನಿಂತಿದ್ದ ಅಂದುಕೊಳ್ಳಬಹುದು! ಏಕೆಂದರೆ ಸಾಮಾನ್ಯವಾಗಿ ಯೋಜನೆ ರೂಪಿಸುವವರು ಹೆಂಡತಿಯರೇ! ಗಂಡಸರು ಅದನ್ನು ಪಾಲಿಸಬೇಕು ಅಷ್ಟೆ.

ವಿಶ್ವನಿಗೆ ಕಿರಿಯನ ಪರಿಸ್ಥಿತಿ ಅರ್ಥವಾಗಿಹೋಗಿತ್ತು! ಎಷ್ಟಾದರೂ ವಿಶ್ವ ಈ ಕ್ಷೇತ್ರದಲ್ಲಿ ಹಳಬ. ಇಪ್ಪತ್ತೈದು ವರ್ಷದ ಮ್ಯಾರಿಯೇಜ್ ಅನಿವರ್ಸರಿ (ಇಷ್ಟವಿಲ್ಲದಿದ್ದರೂ) ಆಚರಿಸಿಯಾಗಿದೆ! ವಿಶಾಲೂಗೆ ನೆಕ್ಲೇಸ್ ಕೊಡಿಸಿ `ಹಾಕ್ಕೊಳ್ಳೋ ವಯಸ್ಸಲ್ಲಿ ಕೊಡಿಸದೆ ಈಗ ಕೊಡಿಸಿದ್ದೀರಿ’ ಎಂದು ಅನ್ನಿಸಿಕೊಂಡೂ ಆಗಿದೆ!

`ಅಂದರೆ ಈಗ ಈ ಲೀವು ನಿನ್ನ ಹೆಂಡತಿ ಮದುವೆಗೆ ಉಡಲಿರುವ ಸೀರೆಗೆ ಮ್ಯಾಚಿಂಗ್ ಬ್ಲೌಸು ಬಟ್ಟೆ ಕೊಡಿಸಲು ಅಲ್ಲವೆ ? ‘ ವಿಶ್ವನಿಗೆ ತನ್ನ ಮನಸ್ಸಿನಲ್ಲಿ ಮೂಡಿದ್ದನ್ನು ಖಾತ್ರಿ ಮಾಡಿಕೊಳ್ಳಬೇಕಾಗಿತ್ತು!

`ಏನು ಬ್ರಿಲಿಯಂಟು ಸಾರ್ ನೀವು! ಎಷ್ಟು ಬೇಗ ಎಲ್ಲ ಅರ್ಥ ಮಾಡಿಕೊಂಡಿಬಿಟ್ರಿ?’ ವಿನಯ ತನ್ನ ಬಾಸಿನ ಕಲ್ಪನಾಶಕ್ತಿಗೆ ಆಶ್ಚರ್ಯಚಕಿತನಾಗಿದ್ದ!

`ಇಲ್ಲಿ ಬ್ರಿಲಿಯಂಸಿ ಏನು ಬಂತು ಮಣ್ಣು? ಕತ್ತೆಗಾದ ಹಾಗೆ ವಯಸ್ಸಾದರೆ ಎಲ್ಲರಿಗೂ ಅರ್ಥವಾಗುತ್ತೆ! ಅಲ್ಲಯ್ಯಾ…ಇಂತಾ ಕೆಲಸಾನ ಎಮರ್ಜನ್ಸಿ ಅಂತ ಹೇಳ್ತಿದ್ದೀಯಲ್ಲ? ಎಷ್ಟು ಧೈರ್ಯ! ಇದೇನಾದರೂ ಹದ್ದಿಗೆ ಐ ಮೀನ್ ಮೆಹತಾನಿಗೆ ಗೊತ್ತಾದರೆ ನಾನು ಗೋತಾ!-ನಿನಗೆ ಲೀವ್ ಕೊಟ್ಟಿದ್ಡಕ್ಕೆ! ಇದರ ಮೇಲೆ ನಿನ್ನ ಕೆಲಸದ ಗತಿ ಏನು ? ನಾನಾಗೋ ಹೊತ್ತಿಗೆ ಸರಿ! ಇನ್ಯಾರ ಕಿವಿಗೆ ಬಿದ್ದರೆ ತುಂಬಾ ಅನಾಹುತವಾಗುತ್ತೆ!’

`ಅದೇನೋ ಸರಿ ಸಾರ್… ಯಕಶ್ಚಿತ್ ಬ್ಲೌಸ್ ಬಟ್ಟೆಗಾಗಿ ಒಂದು ದಿನ ಲೀವ್ ಹಾಕೋದು ಅನ್ಯಾಯ. ಅದರೆ ಈ ಪರಿಸ್ಥಿತೀನ ಹ್ಯಾಗೆ ಮ್ಯಾನೇಜ್ ಮಾಡೋದು ?’

ವಿನಯನ ಮುಖವೇ ಪ್ರಶ್ನೆಯಾಗಿತ್ತು! ಆಕಾಶ ತಲೆ ಮೇಲೆ ಕಳಚಿಬಿದ್ದಿತ್ತು!

`ನೋಡು ಒಂದೆರಡು ಕಿವಿ ಮಾತು! ಅದೂ ನೀನು ನನ್ನ ಹೆಂಡತಿ ಕಡೆ ದೂರದ ಸಂಬಂಧಿ ಅನ್ನೋದನ್ನ ಗಮನದಲ್ಲಿಟ್ಟುಕೊಂಡು ಹೇಳ್ತಿದ್ದೀನಿ! ಇಂತಾ ಕೆಲಸಕ್ಕೆಲ್ಲಾ ರಜ ಹಾಕಿದರೆ ಗಂಡಸಿನ ಘನತೆ, ಗೌರವಗಳ ಗತಿ ಏನು ? ಈ ವಿಷಯ ಒಂದುವೇಳೆ ಆ ಮುದಿ ಹದ್ದಿಗೆ ಗೊತ್ತಾದ್ರೆ ನನ್ನ-ನಿನ್ನ ಕೆಲಸದ ಗತಿ ಏನಯ್ಯಾ ? ಇಂತದ್ದಕ್ಕೆಲ್ಲಾ ಲೀವ್ ಇಲ್ಲ!’

`ಸಾರ್..ನೀವೇ ಹೀಗೆ ಹೇಳಿದ್ರೆ ಹೇಗೆ ಸಾರ್…? ನನಗೆ ಮೆಹತಾನ ಹೆದರಿಕೆ ಇಲ್ಲಾ ಸಾರ್..ಅದರೆ..’

`ಹೂ ಹೇಳಯ್ಯಾ..ಅದರಲ್ಲಿ ಮುಚ್ಚು ಮರೆ ಏನು? ನೀನು ನಿನ್ನ ಬಾಸಿಗೆ ಹೆದರೊಲ್ಲ ಆದ್ರೆ ಹೆಂಡತಿಗೆ ಹೆದರುತ್ತೀಯಾ! ಅಷ್ಟೆ ತಾನೆ? ಇದಕ್ಯಾಕೆ ನಾಚಿಕೆ ? ಹೆಂಡತಿಗೆ ಹೆದರುವವರೇ ಜಗತ್ತಿನ ತುಂಬಾ ತುಂಬಿದ್ದಾರೆ! ಆದರೆ ನೀನು ಆ ಪಟ್ಟಿಯಲ್ಲಿ ಸೇರಬಾರದು. ಅದಕ್ಕೇ ಲೀವ್ ಸಿಗಲಿಲ್ಲ ಅಂತ ಮಿಸೆಸ್ಗೆ ಹೇಳು!’

`ಸಾರ್ ಹೇಳೋದು ಸುಲಭ! ನೀವು ಯಾವತ್ತಾದ್ರೂ ನಿಮ್ಮ ಮಿಸೆಸ್ಗ್ ಹೀಗೆ ಹೇಳಿದ್ದೀರಾ..?’ ವಿನಯ ಛಾಲೆಂಜ್ ಮಾಡಿಬಿಟ್ಟ!

`ನನ್ನನ್ನ ನೋಡಿದ್ರೆ ನಿನಗೆ ಹೇಗನ್ನಿಸುತ್ತೆ? ನನ್ನ ವಿಷಯ ನಿನಗಿನ್ನೂ ಗೊತ್ತಿಲ್ಲ ವಿನಯ! ಆಫೀಸಲ್ಲಿ ಕೆಳಗಿನವರಿಗೆ ಸ್ವಲ್ಪ ಸಲುಗೆ ಕೊಟ್ಟಿದ್ದೇನೆ..ಆದ್ರೆ ಮನೇಲಿ ಮಾತ್ರ ಭಾರೀ ಸ್ಟ್ರಿಕ್ಟ್! ನೀನೂ ಹೀಗಿರಬೇಕು ಅಂತ ನನ್ನ ಆಸೆ! ಹೊಸದಾಗಿ ಮದುವೆ ಆಗಿದ್ದೀಯಾ…ಈಗಲೇ ಜುಟ್ಟು ಹೆಂಡತಿ ಕೈಲಿ ಕೊಡಬೇಡ’

`ಅದಕ್ಕೇ ಅಲ್ವಾ ಸಾರ್ .. ಈ ಮಿಲಿಟರಿ ಕಟ್ಟು!’ ತಲೆ ಸವರಿಕೊಂಡು ನಕ್ಕ ವಿನಯ.

`ಗುಡ್! ಯಾವುದಕ್ಕೂ ಸಲುಗೆ ಕೊಡಬೇಡ! ಸ್ವಲ್ಪ ಸಲುಗೆ ಕೊಟ್ಟರೆ ತಲೇನೇ ಹತ್ತಿ ಕೂತ್ಬಿಡ್ತಾರೆ! ಶಿವನ ತಲೆ ಮೇಲೆ ಗಂಗೆ ನೋಡಿದ್ದೀಯಲ್ಲಾ..? ದೇವರುಗಳು ಕೂಡ ಎಚ್ಚರ ಇಲ್ಲದೆ ಇಂತಾ ಕೆಲಸ ಮಾಡ್ಕೊಂಡುಬಿಟ್ಟಿದ್ದಾರೆ ನೋಡು! ಆದ್ರೆ ನೀನು ಹುಷಾರಾಗಿರು!’

ವಿಶ್ವ ಹಿತನುಡಿಗಳನ್ನಾಡಿದ.

`ಸಾರ್, ಮತ್ತೆ ಲೀವ್..ವಿಷಯ..’

`ರಾತ್ರಿ ರಾಮಾಯಣ ಕೇಳಿ ಬೆಳಿಗ್ಗೆ ರಾಮ-ಸೀತೆಯರ ಸಂಬಂಧ ಕೇಳಿದ ಹಾಗಾಯ್ತು! ನಾನು ಒಂದ್ಸಲ ಇಲ್ಲಾಂದ್ರೆ ಅದು ಯಾವತ್ತಿಗೂ ಇಲ್ಲಾನೇ..ಯೂ ಕೆನ್ ಗೋ..ಬಿ ಬೋಲ್ಡ್’

ವಿನಯ ಹೋದ ನಂತರ ವಿಶ್ವನಲ್ಲಿನ ಆತ್ಮ ವಿಶ್ವಾಸ ಒಮ್ಮೆಲೇ ಬ್ರಹ್ಮಾಂಡದಷ್ಟು ಬೆಳೆದುಬಿಟ್ಟಿತ್ತು! ತಾನು ಇಷ್ಟು ಪರಿಣಾಮಕಾರಿಯಾಗಿ ಯುವಕರಲ್ಲಿ ವಿಶ್ವಾಸ ತುಂಬಬಲ್ಲೆ ಎನ್ನುವುದು ಅರಿವಾಗಿ ಆನಂದವಾಗಿತ್ತು!

ಈ ಮೂಡಿನಲ್ಲಿರುವಾಗಲೇ ಮೀಟಿಂಗ್ ಒಂದರಲ್ಲಿ ಭಾಗವಹಿಸಿ, ಅವಕಾಶ ಸಿಕ್ಕಿದಾಗ ಸಿಕ್ಕಿದವರನ್ನು ಅಡಕೆ ಕತ್ತರಿಯಲ್ಲಿ ಸಿಕ್ಕುವಂತೆ ಮಾಡಿ, ಧೈರ್ಯದಿಂದ ಒಂದಿಬ್ಬರನ್ನು ಹಂಗಿಸಿ ಬ್ರಹ್ಮಾಂಡವಾಗಿದ್ದ ವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಿಕೊಂಡಿದ್ದ ವಿಶ್ವ! `ಈಗೇನಾದರೂ ಆ ಹದ್ದು ಮೆಹತಾ ಬಂದು ಬೈದರೆ ಒದ್ದೇಬಿಡ್ತೀನಿ’ ಎಂದು ವಿಶ್ವನ ಮನಸ್ಸು ಮಧಿಸಿದ ಗೂಳಿಯಂತೆ ಗುಟುರು ಹಾಕಿತಿತ್ತು!

ಬಲೂನಿನಂತೆ ಹಾರುತ್ತಿರುವಾಗ ಫೋನು ರಿಂಗಾಯಿತು.

`ಸಾರ್..ಫೋನು..’ ಆಪ್ತ ಕಾರ್ಯದಶರ್ಿ ಮಣಿಯ ದನಿ.

`ಯಾರಂತೆ..?’ ವಿಶ್ವನ ದನಿಯಲ್ಲಿ ಜಗತ್ತನ್ನೇ ಎತ್ತಿ ಒಗೆವ ವಿಶ್ವಾಸ!

`ಸಾರ್..ಬಾಸು..’

`ನೋ ಲಾಸ್! ಪ್ಲೀಸ್ ಕನೆಕ್ಟ್’ ತನ್ನ ಜೋಕಿಗೆ ತಾನೇ ನಕ್ಕ ವಿಶ್ವ.

ಫೋನಿನಲ್ಲಿ ಕೇಳಿದ ದನಿ ಮಡದಿ ವಿಶಾಲೂದು! ಎಲಾ…`ಬಾಸ್’ ಅಂದಳಲ್ಲ ಮಣಿ! ಎಂತಾ ಕಿಡಿಗೇಡಿ! ಮೆಹತಾನ ಫೋನು ಎಂದುಕೊಂಡಿದ್ದರೆ ಲೈನಿನಲ್ಲಿ ವಿಶಾಲೂ ಬಂದಿದ್ದಳು.ಇಷ್ಟು ಸಲುಗೆ ತೆಗೆದುಕೊಂಡಿರುವಳೆ..ಮಣಿ? ಆಮೇಲೆ ದಭಾಯಿಸಬೇಕು ಎಂದುಕೊಂಡ ವಿಶ್ವ.

`ಹಲೋ..ಏನು ವಿಶಾಲೂ..? ಏನು ಫೋನು ಮಾಡಿದ್ದು? ಸಂಜೆಗೆ ಬತರ್ಾ ಏನಾದ್ರೂ ತರಬೇಕೆ ..? ಇಲ್ಲಾ..ಮನೇಗೆ ಯಾರಾದರೂ ನೆಂಟರು ಬಂದರೇನು ?’

`ನಿಮಗೆ ಯಾಕ್ರೀ ನೆಂಟರು ಇಷ್ಟರು..? ಪಕ್ಕದಲ್ಲೇ ಇರೋ ನೆಂಟರನ್ನೇ ಸರಿಯಾಗಿ ಮಾತಾಡಿಸಿದ ನಿಮ್ಮ ಮನೆಗೆ ಇನ್ಯಾವ ನೆಂಟರು ಬತರ್ಾರೆ..?’

ವಿಶಾಲೂ ದನಿ ಗಡುಸಾಗಿತ್ತು!

ವಿಶ್ವನಿಗೆ ಅಚ್ಚರಿಯಾಗಿತ್ತು! ಪಕ್ಕದಲ್ಲೇ ಇರೋ ನೆಂಟರು ಅಂದರೆ ಯಾರು ? ತನ್ನ ಕಾರ್ಯದಶರ್ಿ ನಾಗಮಣೀನೇ ನೆಂಟರು ಅಂತಾ ವಿಶಾಲೂ ಹೇಳ್ತಿದ್ದಾಳಾ..? ನಾಗಮಣಿ ತನಗೂ ಯಾವ ನೆಂಟಸ್ತಿಕೆಯೂ ಇಲ್ಲವಲ್ಲ? ವಿಶ್ವ ಗೊಂದಲದಲ್ಲಿ ಸಿಕ್ಕಿಬಿದ್ದ.

`ಯಾಕ್ರೀ..? ಉಸಿರೇ ಬತರ್ಿಲ್ಲ..?’

`ಯಾವ ನೆಂಟರ ವಿಷಯ ನೀನು ಹೇಳ್ತಿರೋದು..? ಫ್ಯಾಕ್ಟರೀಲಿ ಎಂತಾ ನೆಂಟರೇ..? ದಂಡಿನಲ್ಲಿ ಸೋದರ ಮಾವನೆ? ವಿಶ್ವ ತನ್ನ ವಾಕ್ಚಾತುರ್ಯ ಉಪಯೋಗಿಸಿದ’

`ಅಲ್ರೀ…ನಮ್ಮ ದೊಡ್ಡಮ್ಮನ ಭಾವನ ಮಗ ವಿನಯನಿಗೆ ಒಂದು ದಿನ ಲೀವ್ ಕೊಡಲಾಗದ ನಿಮಗೆ ಇನ್ಯಾವ ನೆಂಟಸ್ತನಾ ಉಳಿಯುತ್ತೆ..? ಮಕ್ಕಳು ಮದುವೆಗೆ ಬತರ್ಿದ್ದಾರೆ…ಈಗಲಾದರೂ ನೆಂಟರು ಇಷ್ಟರ ಕಡೆ ಗಮನ ಕೊಡಬಾರದೆ? ಹೀಗೆ ಮಾಡಿದರೆ ನಮ್ಮ ಮಕ್ಕಳ ಮದ್ವೆಗೆ ಯಾರು ಬತರ್ಾರೆ…? ಜುಜುಬಿ ಒಂದು ದಿನದ ಲೀವು! ಲೀವ್ ಕೊಟ್ರೆ ನೀವೇನಾದ್ರೂ ಕಳಕೊಳ್ಳೋದು ಇದೆಯೆ..?’

ಬ್ರಹ್ಮಾಂಡದಂತ ಆತ್ಮ ವಿಶ್ವಾಸದ ಬಲೂನು ಟುಸ್ಸೆಂದಿತು!

`ಅಲ್ಲಾ ವಿಶಾಲೂ…ಫ್ಯಾಕ್ಟರಿ ವಿಷಯ ನಿನಗೆ ಗೊತ್ತಿಲ್ಲ..’

`ನನಗೆ ಗೊತ್ತಿಲ್ಲದೆ ಇರೋ ಫ್ಯಾಕ್ಟರಿ ವಿಷಯ ನಿಮಗೆ ಗೊತ್ತೆ ? ಮೆಹತಾ ಹೆಂಡತೀನ ಕಿಟ್ಟಿ ಪಾಟರ್ಿಲಿ ವಾರಕ್ಕೊಂದು ದಿನ ಮೀಟ್ ಮಾಡ್ತೀನಿ!’

ವಿಶಾಲೂ ಬ್ರಹ್ಮಾಸ್ತ್ರಕ್ಕೆ ಸರಿಗಟ್ಟುವ ಪ್ರತ್ಯಸ್ತ್ರಕ್ಕಾಗಿ ವಿಶ್ವ ಪರದಾಡಿದ! ಬತ್ತಳಿಕೆಯೆಲ್ಲಾ ಖಾಲಿ!

`ಯಾಕೆ ಸುಮ್ಮನಾಗಿಬಿಟ್ರೀ…ವಿನಯನ ಲೀವ್ ನೀವೇ ಸ್ಯಾಕ್ಷನ್ ಮಾಡ್ತೀರೋ..ಇಲ್ಲಾ ಮೆಹತಾನಿಗೆ ಹೇಳಿಸಲೋ..?’

ವಿಶ್ವನ ಮೌನವನ್ನು ಅಳೆದಿದ್ದಳು ವಿಶಾಲೂ!

`ನಾನೇ ಸ್ಯಾಂಕ್ಷನ್ ಮಾಡ್ತೀನಿ…’ ವಿಶ್ವ ಸೋತಿದ್ದ.

`ಒಂದು ದಿನ ಅಲ್ಲ..ಎರಡು ದಿನ..’

`ಅವನು ಕೇಳಿದ್ದು ಒಂದೇ ದಿನ…’

`ನಾನು ಎರಡು ದಿನ ಹೇಳ್ತಿದ್ದೀನಿ..ಸರಿನಾ..? ಇಲ್ಲಾ ಏನಾದರೂ ಅನುಮಾನವಾ..?’

`ಏನೂ ಅನುಮಾನ ಇಲ್ಲ!’

`ಸಂಜೆಗೆ ಬೇಗ ಬನ್ನಿ ವಿನಯ ಮತ್ತು ಅವನ ಹೆಂಡತೀನ ಡಿನ್ನರ್ಗೆ ಕರೆದಿದ್ದೀನಿ..’

ಮರುಮಾತಿಲ್ಲದೆ ವಿಶ್ವ ಫೋನಿಟ್ಟು ತನ್ನ ರೂಮಿನಲ್ಲಿ ಶತಪಥ ಓಡಾಡಿದ. `ಛೆ..ಈ ವಿನಯ ನೋಡೋಕೆ ಮಳ್ಳನ ಹಾಗಿದ್ದಾನೆ ಆದರೂ ಎಷ್ಟೆಲ್ಲಾ ಮಾಡಿದ್ದಾನೆ..? ಕರೆದು ಬೆಂಡೆತ್ತಲೇ..? ಅದು ಮತ್ತೆ ವಿಶಾಲೂಗೆ ವರದಿಯಾದರೆ..? ಥೂ..ಹಾಳಾಗಲೀ..ಈ ವಿನಯ! ಇವನ ಸಹವಾಸ ಸಾಕು’

`ಮಣೀ..ವಿನಯ್ನ ಬರೋಕೆ ಹೇಳು’

ಬೋನಿನಲ್ಲಿ ಸಿಕ್ಕಿಕೊಂಡ ಸಿಂಹದಂತೆ ಓಡಾಡುವುದನ್ನು ನಿಲ್ಲಿಸಿ ಫೋನಾಯಿಸಿದ ವಿಶ್ವ.

`ಅವರಾಗಲೇ ಇಲ್ಲಿದಾರೆ…ಒಳಗೆ ಕಳಿಸಲೆ..?’

`ಹೂ..’ ಬೇರಿನ್ನೇನು ಹೇಳಲು ಸಾಧ್ಯ?

ಈ ವಿನಯ ಬಲು ಅಪಾಯಕಾರಿ! ಸ್ವಲ್ಪ ಹುಷಾರಾಗಿರಬೇಕು! ವಿಶ್ವ ತನ್ನನ್ನು ಎಚ್ಚರಿಸಿಕೊಂಡ.

`ಮೇ..ಐ ಕಮಿನ್ ಸಾರ್..?’

`ಎಸ್ ಯೂ ಕೆನ್ ಕೆಮ್ ಇನ್! ಅಲ್ಲಯ್ಯಾ…ಒಂದು ದಿವಸ ಲೀವ್ಗೆ ಇಷ್ಟೆಲ್ಲಾ ಮಾಡೋದೆ..?’

`ಒಂದು ದಿನ ಅಲ್ಲ ಸಾರ್…ಎರಡು ದಿನ’

`ಓ.ಕೆ. ಎರಡು ದಿನ..ಅದಕ್ಕೆ ನನ್ನ ಹೆಂಡತಿಯಿಂದಲೇ ಶಿಫಾರಸ್ಸೇನಯ್ಯಾ..? ಹೋಗಲೀ..ನೆಂಟ ಅಂತ ಲೀವ್ ಸ್ಯಾಂಕ್ಷನ್ ಮಾಡಿದ್ದೀನಿ..ಅದೂ ಹೆಂಡತಿಯ ಮೊದಲನೆಯ ಖಾಸಗೀ ಕೆಲಸ ಅಲ್ಲವೆ ? ಶುಭವಾಗಲೀ..ಹೋಗಿ ಬಾ..ಬೇಕಾದ್ರೆ ಇನ್ನೂ ಒಂದು ದಿವಸ ಹೆಚ್ಚಿಗೆ ರಜ ತಗೋ.ನಾನು ಬೇಕಾದ್ರೆ ಮೆಹತನಿಗೆ ಹೇಳ್ತೀನಿ’

ವಿಶ್ವನ ಮಾತಿಗೆ ವಿನಯ ಹಿರಿಹಿರಿ ಹಿಗ್ಗಿದ. ಇಂತ ಬಾಸು ಅಲ್ಲಾ…ಬಾಸಿನ ಹೆಂಡತಿಗೆ ತನಗೆ ದೂರದ ಸಂಬಂಧಿಯಾಗಿರುವುದು ಎಂತಾ ಪುಣ್ಯ ಎಂದು ಹಿರಿಹಿರಿ ಹಿಗ್ಗಿದ!

`ನಿಮ್ಮ ಈ ಉಪಕಾರಾನಾ..ಏಳೇಳು ಜನ್ಮದಲ್ಲೂ ಮರೆಯೊಲ್ಲ!’

`ಉಪಕಾರದ ಮಾತೇನೂ ಬೇಡ…ಈ ಫ್ಯಾಕ್ಟರಿಯಲ್ಲಿ ಇರೋತನಕಾ ಉಪ್ಪುಕಾರ ಹಾಕಬೇಡ ಆಷ್ಟೇ!’

`ಛೆ….ಎಂತಾ ಮಾತು..ನಾನು ನಿಮ್ಮ ನೆಂಟ ಸಾರ್..ನಾವು ಒಬ್ಬರಿಗೊಬ್ಬರು ಅಗದೆ ಇರೋಕಾಗುತ್ತೆಯೇ ..ಬತರ್ಿನಿ ಸಾರ್?’

ವಿಶ್ವ ತೀವ್ರ ಜಿಗುಪ್ಸೆಯಿಂದ ವಿನಯ ಮುಚ್ಚಿ ಹೋದ ಬಾಗಿಲನ್ನು ನೋಡುತ್ತಾ `ಸಂಜೆ ಬೇರೆ ಮನೇಲಿ ಊಟಕ್ಕೆ ವಕ್ಕರಿಸುತ್ತಾನಲ್ಲ..? ಹೇಗೆ ಮ್ಯಾನೇಜ್ ಮಾಡಲಿ..? ಹೆಂಡತಿಗಾಗಿ ಇನ್ನೂ ಏನೇನು ಮಾಡಬೇಕೋ..? ಎಂಬ ಗಾಢ ಚಿಂತೆಯಲ್ಲಿ ಮುಳುಗಿದ ವಿಶ್ವನಿಗೆ ವಿಶ್ವದಲ್ಲಿ ತಾನೊಬ್ಬನೇ ಹೆಂಡತಿಗೆ ಹೆದರುತ್ತಿಲ್ಲ! ಬಹುತೇಕ ಎಲ್ಲ ಗಂಡಸರೂ ತನ್ನಂತೆಯೇ ಎಂಬುದರಿವಾಗಿ ಸ್ವಲ್ಪ ಸಮಾಧಾನವಾಯಿತು. ಮುಖದ ಮೇಲೆ ಕಿರುನಗೆ ಮೂಡಿತು. `ಎಲ್ಲಾರೂ ಮಾಡುವುದು ತಮ್ಮತಮ್ಮ ಹೆಂಡತಿಯರಿಗಾಗಿ’ ದಾಸರ ಪದವನ್ನು ಮಾರ್ಪಡಿಸಿಕೊಂಡು ಗುಣುಗುಣಿಸಿ ಕೆಲಸದಲ್ಲಿ ತೊಡಗಿಸಿಕೊಂಡ!

 

 

‍ಲೇಖಕರು G

October 2, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬಿರಿಯಾನಿಯಿಂದ ಫಿರ್ನಿವರೆಗೆ..

ಬಿರಿಯಾನಿಯಿಂದ ಫಿರ್ನಿವರೆಗೆ..

ಕೆ ಮುದ್ದುಕೃಷ್ಣ  ಮೈಸೂರಿಗರಿಗೆ ಒಂದು ಸಿಹಿ ಸುದ್ದಿ. ಬಹಳ ವರ್ಷಗಳಿಂದ ದೊಡ್ಡ ಚರ್ಚ್ ಬಳಿ ಮಾತ್ರವೇ ಇದ್ದ ಪ್ರಸಿದ್ದ “ನಶೇಮನ್” ಹೋಟೆಲ್ ಈಗ...

ಪೂಜೆ!!

ಪೂಜೆ!!

ಎಸ್.ಜಿ.ಶಿವಶಂಕರ್ ನನ್ನ ಚಡ್ಡಿ ಫ್ರೆಂಡು ಸುಬ್ಬು ಯಾನೆ ಸುಭಾಶ್ ಲಂಚ್‍ಗೆ ಮುಂಚೆ ಮನೆಗೆ ಹೋಗಿದ್ದು ತಿಳಿದು ಆತಂಕಗೊಂಡೆ. ಕಾರಣ...

ಇದು ನನ್ನ ಸವಾಲ್..

ಇದು ನನ್ನ ಸವಾಲ್..

ನಾಗೇಂದ್ರ ಶಾ  ಹೀಗೊಂದು ಹೋಟ್ಲು ರಾಜರಾಜೇಶ್ವರಿ ನಗರದಲ್ಲಿ. ಹೆಸರಿಗೂ ಒಳಗಿನ ಊಟ, ತಿಂಡಿಗೂ ಸಂಬಂಧವಿಲ್ಲ. ಒಳ ಹೊಕ್ಕರೆ ಅಪ್ಪಟ ದೇಸಿ ಊಟ....

4 ಪ್ರತಿಕ್ರಿಯೆಗಳು

  1. vimala

    ಪತ್ನಿಯರು ಅಷ್ಟು ಪವರ್‌ಪುಲ್ಲೇ..? ತುಂಬಾ ಚೆನ್ನಾಗಿ ಬರೆದಿದ್ದೀರಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: