ಟೈಮ್ ಪಾಸ್ ಕಡ್ಲೆಕಾಯ್ : ಮದುವೆ ಮಾಡಿನೋಡು

ಮದುವೆ ಮಾಡಿ ನೋಡು!  

– ಎಸ್.ಜಿ.ಶಿವಶಂಕರ್

  ಬಿ.ಪಿ ಸ್ವಲ್ಪ ಹೆಚ್ಚಾಗಿತ್ತೇನೋ…ನನಗಲ್ಲ ಮಾರಾಯ್ರೆ, ನನ್ನ ಬಾಸಿಗೆ! ಇದ್ದಕ್ಕಿದ್ದಂತೆ ಕವಕ್ಕನೆ ರೇಗಿದರು. ಎಂದೂ ರೇಗದ, ಕೂಗದ, ಸಿಕ್ಕಾಪಟ್ಟೆ ಮಾಗಿದ, ಮೂವತ್ತು ವರ್ಷ ಸರ್ವೀಸಿನಲ್ಲಿ ಮುವತ್ತಕ್ಕೂ ಹೆಚ್ಚು ಚಿತ್ರವಿಚಿತ್ರ ಬಾಸುಗಳನ್ನೂ, ಅವರ ತಿಕ್ಕಲುತನ, ಒಕ್ಕಲುತನ, ಪುಕ್ಕಲುತನಗಳನ್ನೆಲ್ಲಾ ಸಹಿಸಿದ್ದ ನನಗೆ ಅದೇನಾಗಿತ್ತೋ ಗೊತ್ತಿಲ್ಲ! ಬೇಟೆ ನಾಯಿಯಂತೆ ಬಾಸಿನ ಮೇಲೆರಗಿದೆ! ಏರಿದ ದನಿಯಲ್ಲಿ ಭಯಂಕರ ವಾಗ್ವಾದ! ವಾದ-ಅಪವಾದಗಳ ಸುರಿಮಳೆ! ಬಬ್ರುವಾಹನ ಸಿನಿಮಾದಲ್ಲಿ ಬಾಣಗಳು ಆಕಾಶದಲ್ಲಿ ಹಾರಾಡಿದಂತೆ ಷಾಪಿನಲ್ಲಿ ವಾಗ್ಝರಿಗಳು ಹರಿದವು! ಆರೋಪ-ಪ್ರತ್ಯಾರೋಪಗಳ ಗುಡುಗು-ಸಿಡಿಲುಗಳು! ನನ್ನ ವರ್ಕ್ಷಾಲಪಿನಲ್ಲಿದ್ದ ಸುಮಾರು ಎಪ್ಪತ್ತು ಜನ ಕೆಲಸಗಾರರು ನನ್ನ ಕೋಪವನ್ನು ಬೆಕ್ಕಸಬೆರಗಾಗಿ ನೋಡುತ್ತಿದ್ದರು! ಅವರೆಲ್ಲರ ಬಾಸಾಗಿ ಎಂದೂ ಅವರ ಮೇಲೆ ಈ ರೀತಿ ಎಗರಾಡಿರಲಿಲ್ಲ! “ಟು ಹೆಲ್ ವಿತ್ ಯೂ! ಐ ಕರ್ಸ್ ಯೂ..” ಎಂದು ತಾರಕಾಸುರನಂತೆ ತಾರಕ ಸ್ವರದಲ್ಲಿ ಕಿರುಚಿ ದುರ್ದಾನ ತೆಗೆದುಕೊಂಡವರಂತೆ ಬಾಸು ಬಿರಬಿರನೆ ಅಚೆ ಹೋಗುವಾಗ “ ಐ ವಿಷ್ ಯೂ ದಿ ಸೇಮ್” ಎಂದು ಬೆಂಕಿಗೆ ತುಪ್ಪ ಸುರಿದೆ! ಗಕ್ಕನೆ ಹಿಂದೆ ತಿರುಗಿ, ದೂರ್ವಾಸನಂತೆ ಗುರಾಯಿಸಿ ಶರವೇಗದಲ್ಲಿ ದೌಡಾಯಿಸಿತು ಬಾಸು! “ಯಾಕೆ ಸಾರ್ ಹಾಗೆ ರೇಗಿದಿರಿ..?” ಸುತ್ತ ಘೇರಾಯಿಸಿದ್ದ ಷಾಪಿನ ಕೆಲಸಗಾರರು ನನ್ನನ್ನು ಸಂತೈಸಲು ಬಂದರು. “ದಿನಾ ಸಾಯೋರಿಗೆ ಅಳೋರು ಯಾರು..? ಸುಮ್ನೆ ನಿಮ್ಮನಿಮ್ಮ ಕೆಲಸ ನೋಡಿ ಹೋಗಿ” ಈ ವಿಷಯದಲ್ಲಿ ಮಾತು ಬೇಕಿಲ್ಲ ಅನ್ನುವುದನ್ನು ಸೂಚ್ಯವಾಗಿ ತಿಳಿಸಿದೆ. ಅವರೆಲ್ಲರೂ ತಮ್ಮ ಮೆಷಿನುಗಳತ್ತ ನಡೆದರು. ಇದು ನಡೆದದ್ದು ಒಂದು ಕಾರ್ಖಾನೆಯಲ್ಲಿ, ಅಲ್ಲೊಂದು ವರ್ಕ್ಷಾಪಿನ ಮುಖ್ಯಸ್ಥ ನಾನು ಎಂಬ ವಿವರ ಮೇಲಿನ ಘಟನೆಯಿಂದ ನಿಮಗಾಗಲೇ ತಿಳಿದಿದೆ ಎಂದು ನಂಬುವೆ. ಕೋಪದ ಪರಿಣಾಮ ನನ್ನ ಮೇಲೂ ಆಗಿತ್ತು. ಎರಡು ಕೈಸೇರಿದರೆ ತಾನೆ ಚಪ್ಪಾಳೆ..? ಮುಖ ಮೈಯೆಲ್ಲ ಉರಿಯುತ್ತಿತ್ತು. ಚೇಂಬರಿಗೆ ಹೋಗಿ ಒಂದು ಹೂಜಿ ತುಂಬಾ ನೀರು ಕುಡಿದೆ. ಏನು ಮಾಡಬೇಕೆಂದು ಆಗಲೇ ನಿರ್ಧರಿಸಿದ್ದೆ. ಬೆಲ್ಲು ರಿಂಗಣಿಸಿ, ಪಿ.ಎ ಕರೆದೆ. “ನಾನು ಮನೇಗೆ ಹೋಗ್ತಿದ್ದೇನೆ. ಬಾಸೇನಾದ್ರೂ ಬುಸುಗುಟ್ಟಿದರೆ ’ನನಗೆ ಗೊತ್ತಿಲ್ಲ. ಎಲ್ಲೋ ಹೋದರು, ನನ್ಗೇನೂ ಹೇಳಿಲ್ಲ’ ಎಂದಷ್ಟೇ ಹೇಳು. ಹಾಗೇ ರಮೇಶ್ಗೆ ಷಾಪು ಮ್ಯಾನೇಜ್ ಮಾಡ್ಬೇಕಂತೆ ಅಂತ ಹೇಳು. ನಾನಿವತ್ತು ಇನ್ನು ಬರೊಲ್ಲ ಅಂತ ಹೇಳು’ ಎಂದು ಹೇಳಿ ಮನೆಗೆ ಹೊರಟುಬಿಟ್ಟೆ! ಆದದ್ದು ಆಗಲಿ ಅದೇನು ಆಕ್ಷನ್ ತಗೋತಾರೋ ನೇಡೋಣ ಎಂದೆಲ್ಲಾ ಮನಸ್ಸಿನಲ್ಲಿ ಸಂಭಾಷಣೆ ನಡೆಯುತ್ತಿತ್ತು-ಮನೆ ತಲುಪುವ ತನಕ! ಮನೆಗೆ ಬಂದೊಡನೆಯೇ ಮೊಬೈಲು ಸ್ವಿಚ್ ಆಫ್ ಮಾಡಿದೆ. ಲ್ಯಾಂಡ್ಲೈಣನ್ ರಿಸೀವರ್ ಎತ್ತಿಟ್ಟೆ. ನನಗೆ ಗೊತ್ತಿತ್ತು. ಒಂದು ಗಂಟೆಯ ನಂತರ ಫ್ಯಾಕ್ಟರಿಯಿಂದ ಒಂದೇ ಸಮನೆ ಫೋನುಗಳು ಬರುತ್ತವೆ ಎಂದು. “ಯಾಕ್ರೀ..? ಏನಾಯ್ತು..?” ಮಡದಿಯ ಕುತೂಹಲಭರಿತ ಪ್ರಶ್ನೆಗಳಿಗೆ ಸಮಂಜಸ ಉತ್ತರಗಳನ್ನು ನೀಡಿ ನ್ಯೂಸ್ ಪೇಪರ್ ಹಿಡಿದು ಸೋಫಾದಲ್ಲಿ ಮೈಚೆಲ್ಲಿದೆ. ಫ್ಯಾಕ್ಟ್ರಿಯಲ್ಲಿ ಪ್ರತಿ ದಿನವೂ ಹನ್ನೊಂದು ಗಂಟೆಗೂ ಮೀರುವ ಸಮಯದಲ್ಲಿ ಯುದ್ಧಭೂಮಿಯಲ್ಲಿ ಕತ್ತಿ ಹಿರಿದು ಹೋರಾಡುವಂತೆ ಕೆಲಸ ಮಾಡುವವರಿಗೆ ಮನೆಯ ನೀರವ ವಾತಾವರಣ ಹಿಡಿಸೀತೆ..? ಎಲ್ಲಾ ಹೆಂಗಸರಂತೆ ನನ್ನವಳೂ ಯಾವುದೋ ಮೆಗಾ ಸೀರಿಯಲ್ಲಿನಲ್ಲಿ ಮಗ್ನಳಾಗಿದ್ದಳೂ. ಪೇಪರಿನ ಒಂದು ಸಾಲೂ ಓದಲಾಗಲಿಲ್ಲ! ಫ್ಯಾಕ್ಟರಿಯಲ್ಲಿ ನಡೆದದ್ದೇ ಮನಸ್ಸಿನಲ್ಲಿ ಟಿವಿ ಚಾನಲ್ಲಿನವರು ಹತ್ತು ಸೆಕೆಂಡಿನ ಲೈವ್ ಕವರೇಜನ್ನು ಮತ್ತೆಮತ್ತೆ ಟೆಲಿಕ್ಯಾಸ್ಟ್ ಮಾಡುವಂತೆ ಸುತ್ತುತ್ತಿತ್ತು. ಮನೆಯಲ್ಲಿ ಸುಮ್ಮನೆ ಕುಳಿತುಕ್ಕೊಳ್ಳುವುದು ಅಸಹನೀಯವೆನಿಸಿತು. ಮೈ ಪರಚಿಕೊಳ್ಳುವಂತಾಯಿತು. ಒಮ್ಮೆಲೇ ವಿಶ್ವನ ನೆನಪಾಯಿತು. ಮಗಳ ಮದುವೆಗೆಂದು ಹದಿನೈದು ದಿನ ರಜ ಹಾಕಿದ್ದ. ಮಗಳ ಮದುವೆ ಮುಗಿದು ನಾಲ್ಕು ದಿನ ಕಳೆದಿತ್ತು. ಈಗ ಬಿಡುವಾಗಿರಬಹುದೆನ್ನಿಸಿ, ಫೋನಾಯಿಸಿದೆ, ಮನೆಯಲ್ಲೇ ಇದ್ದ. ಇಲ್ಲಿ ಕುಳಿತು ಒದ್ದಾಡುವುದಕ್ಕಿಂತ ಚೆಡ್ಡಿ ದೋಸ್ತ್ ಮತ್ತು ಸಹೋದ್ಯೋಗಿ, ವಿಶ್ವನ ಜೊತೆ ಸ್ವಲ್ಪ ಹೊತ್ತು ಮಾತಾಡಿ ಬರೋಣವೆಂದು ಹೊರಟೆ. ಎಂದಿನಂತೆ ವಿಶ್ವನ ನಾಯಿ ಸೀಜರ್ ಹುಚ್ಚು ಹಿಡಿದಂತೆ ಎಗರುತ್ತಾ ಬೊಗಳಲಿಲ್ಲ! ಹುಚ್ಚು ಹಿಡಿದಂತೇನೂ, ಅದು ಬೊಗಳಲೇ ಇಲ್ಲ! ಅದರ ಗೂಡಿನ ಹೊರಗೆ ಕೊರಡಿನಂತೆ ಬಿದ್ದಿತ್ತು! ಕಣ್ತೆರೆದು ಕೂಡ ನನ್ನನ್ನು ನೋಡಲಿಲ್ಲ. ಗೇಟು ತೆರೆದರೂ ಅದರ ಪ್ರತಿಕ್ರಿಯೆ ಇಲ್ಲ! ಕಾಲಿಂಗ್ ಬೆಲ್ ಒತ್ತಿದರೂ ಎಚ್ಚರವಾಗದೆ ಗಡದ್ದು ನಿದ್ರೆಯಲ್ಲಿದ್ದಂತೆ ಕಂಡಿತು! ಏನಾದರೂ ’ಗೊಟಕ್’ ಎಂದಿತೋ?’ ಪಕ್ಕನೆ ಅನುಮಾನವಾಯಿತು. ವಿಶ್ವನೇ ಮನೆ ಬಾಗಿಲು ತೆರೆದ. ’ಬಾರೋ….ಅಂತೂ ಫ್ಯಾಕ್ಟರಿ ಬಿಟ್ಟೇ ಬಂದುಬಿಟ್ಟಿದ್ದೀಯಲ್ಲ? ಫ್ಯಾಕ್ಟರಿ ಗತಿ ಏನೋ..? ನೀನಿಲ್ಲದೆ ಎಲ್ಲಾ ಕೆಲಸ ನಿಂತುಬಿಡೊಲ್ಲವೆ?” ಕುಟುಕು ನುಡಿಯೊಂದಿಗೆ ಸ್ವಾಗತಿಸಿದ. ಅವನ ವ್ಯಂಗ್ಯ, ಕಟೋಕ್ತಿಗಳತ್ತ ನನ್ನ ಮನಸ್ಸು ಹೋಗಲಿಲ್ಲ. ಕಾರಣ ಆಚೆ ’ಸತ್ತು’ ಬಿದ್ದಿದ್ದ ನಾಯಿ ಸೀಜರ್. ಅವನಿಗೆ ಈ ಕೆಟ್ಟ ಸುದ್ದಿ ಹೇಳಬೇಕಲ್ಲ ಎಂಬ ಅಧೀರತೆ! ಆದರೆ ಹೇಳದೆ ಬೇರೆ ದಾರಿಯಿರಲಿಲ್ಲ. “ವಿಶ್ವ ಸೀಜರ್ ಸತ್ತಿರೋ ಹಾಗಿದೆ..?” ಅನುಮಾನದಿಂದ ದನಿ ಸಣ್ಣದು ಮಾಡಿ ಕೇಳಿದೆ. “ಓ..ಅದಾ..?” ವಿಶ್ವ ರಾಗ ಎಳೆದಾಗ ನನಗೆ ಆತಂಕ ಹೆಚ್ಚಾಯಿತು! ಎಲಾ ಸಾಕಿದ ನಾಯಿ ಸತ್ತಿದೆ ಎಂದರೆ ಇಷ್ಟು ಆರಾಮವಾಗಿ ರಾಗ ಎಳೆಯುತ್ತಿದ್ದಾನಲ್ಲ ಎಂದು ಕಸಿವಿಸಿಯಾಯಿತು. “ಮದುವೇಲಿ ಬಂದು ಹೋಗೋರ ಮೇಲೆ ಗಲಾಟೆ ಮಾಡುತ್ತೇಂತ ಮಂಪರು ಇಂಜೆಕ್ಷನ್ ಕೊಡಿಸಿದ್ದೊ..ಅದರ ಎಫೆಕ್ಟ್ ಇನ್ನೂ ಇಳಿದಿಲ್ಲ ಅಷ್ಟೆ” ವಿಶ್ವನ ಮಾತಿಂದ ನಿರಾಳವಾಯಿತು. ಅಲ್ಲಿಯವರೆಗೂ ಸೀಜರ್ ಸತ್ತಿದೇ ಎಂದು ಭಾವಿಸಿದ್ದೆ. “ಮಗಳು-ಅಳಿಯ?” ಸಹಜ ಮಾತಿಗಿಳಿದೆ. “ನೆನ್ನೆ ಹನಿಮೂನಿಗೇಂತ ಗಾಡಿಬಿಟ್ಟರು. ಅದ್ಸರಿ ..ನೀನೇನು ಗಂಗೆಯನ್ನು ತಲೇಲಿ ಹೊತ್ತ ಶಿವನ ಹಾಗೆ ಸದಾ ಫ್ಯಾಕ್ಟರಿಯನ್ನ ತಲೆ ಮೇಲಿ ಹೊತ್ತುಕೊಂಡಿದ್ದವನು ಇವತ್ತು ಕುಕ್ಕನಹಳ್ಳಿ ಕೆರೇಲಿ ಮುಳುಗಿಸಿ ಬಂದಿರೋ ಹಾಗಿದ್ದೀಯ..?” ವಿಶ್ವ ಅಣಕಿಸಿದ. “ವಿಶ್ವ, ಫ್ಯಾಕ್ಟರಿ ವಿಷಯ ಇದ್ದದ್ದೇ..ಅದು ಬಿಟ್ಟು ಬೇರೆ ಮಾತಾಡೋ” ವಿನಂತಿಸಿದೆ. ಫ್ಯಾಕ್ಟರಿಯಲ್ಲಿ ನಡೆದದ್ದನ್ನ ಮತ್ತೆ ನೆನಪಿಸಿಕ್ಕೊಳ್ಳುವ ಇಚ್ಛೆ ನನಗಿರಲಿಲ್ಲ. “ಮದ್ವೆ ಮಾಡಿ ಸುಧಾರಿಸ್ಕೋತಾ ಇದ್ದೀನಿ, ಏನು ಹೇಳ್ಲಿ ? ಹೇಳಿದರೆ ನಾಲ್ಕು ಹಾಸ್ಯ ಲೇಖನ ಕೊರೀತೀಯ!” ವಿಶ್ವನ ಬತ್ತಳಿಕೆ ಅಕ್ಷಯ! ಅವನ ವಾಗ್ಬಾಣಗಳಿಗೆ ಕೊರತೆಯೇ ಇರುವುದಿಲ್ಲ! “ಮಂತ್ರಕ್ಕಿಂತ ಉಗುಳೇ ಜಾಸ್ತಿ ಅನ್ನೋ ಹಾಗೆ ನಿನ್ನ ಮಾತಿನಲ್ಲಿ ವಿಷಯಕ್ಕಿಂತ ವ್ಯಂಗ್ಯವೇ ಜಾಸ್ತಿ” ನಾನೂ ಹಂಗಿಸಿದೆ! ನನ್ನ ಮಾತು ಮುಗಿಯುವ ಹೊತ್ತಿಗೆ ವಿಶ್ವನ ಸಹಧರ್ಮಿಣಿ ವಿಶಾಲೂ ದೊಡ್ಡ ತಟ್ಟೆ ತುಂಬಾ ಚಕ್ಕುಲಿ, ಕೋಡುಬಳೆ, ಅವಲಕ್ಕಿ, ಎರಡು ಸಿಹಿ ತಿನಿಸು ಮತ್ತೆ ಎರಡು ಬಾಳೆಹಣ್ಣನ್ನು ನನ್ನ ಮುಂದೆ ತಂದಿಟ್ಟರು. “ಏನಿದೆಲ್ಲಾ..?” ಅಚ್ಚರಿ ವ್ಯಕ್ತಪಡಿಸಿದೆ. “ತಟ್ಟೇಲಿರೋ ಎಲ್ಲಾ ಐಟಂಗಳೂ ನಿನಗೆ ಗೊತ್ತು. ನೀನೇನು ಬೇರೆ ದೇಶದವನೇನು? ಇದೆಲ್ಲಾ ಏನು ಅಂತ ಕೇಳೋಕೆ..? ಸುಮ್ಮನೆ ಬಾಯ್ಮುಚ್ಕೊಂಡು ತಿನ್ನು” ಗದರಿದ ವಿಶ್ವ. “ಬಾಯ್ಮುಚ್ಕೊಂಡು ಹೇಗ್ರೀ ತಿನ್ತಾರೆ..? “ ವಿಶಾಲೂ ಆಕ್ಷೇಪಿಸಿದಳು. “ಅದು ಅವನ ಹಣೆಬರಹ. ನಿಂಗೆ ಯಾಕೆ..?” ವಿಶ್ವ ಹೆಂಡತಿ ಮೇಲೂ ಗುರುಗುಟ್ಟಿದ. “ವಿಶ್ವ, ನಿನ್ನ ಮೂಡು ಸರಿ ಇದ್ದ ಹಾಗಿಲ್ಲ, ಇನ್ನೊಂದ್ಸಲ ಬರ್ತೀನಿ” ಎಂದು ಎದ್ದೆ. “ತಲೆಮೇಲೆ ಮೊಟಕಿಬಿಡ್ತೀನಿ ನೋಡು! ತಟ್ಟೇಲಿರೋದನೆಲ್ಲಾ ಮರ್ಯಾದೆಯಾಗಿ ತಿಂದು, ಆ ಮೂಲೇಲಿರೋದ್ನೆಲ್ಲಾ ಎತ್ಕೊಂಡು ಹೋಗು! ಬೇಡ ಅಂದ್ರೆ ತದುಕಿಬಿಡ್ತೀನಿ” ವಿಶ್ವ ಯಾಕೋ ಗರಂ ಆಗಿದ್ದ! ದೂರ್ವಾಸ ಮುನಿಯ ನೆನಪು ಮಾಡಿದ. ಆವನು ಹೇಳಿದ ಮೂಲೆಯತ್ತ ನೋಡಿದೆ. ಅಲ್ಲಿ ಒಂದು ಎಣ್ಣೆ ಕ್ಯಾನು, ಭಾರೀ ಸೈಜಿನ ನಾಲ್ಕು ಬೂದುಗುಂಬಳ, ಪಾಲಿಥೀನ್ ಬ್ಯಾಗಿನಲ್ಲಿ ಒಂದೆರಡು ಕೆಜಿಯಷ್ಟು ಹಸಿ ಮೆಣ್ಸಿನ ಕಾಯಿ, ನಾಲ್ಕೈದು ಚಿಪ್ಪು ಬಾಳೆಹಣ್ಣು ಎಲ್ಲಾ ಪೇರಿಸಿದ್ದವು! “ಅವರ ಮೇಲೆ ಯಾಕ್ರೀ ಹಾಗೆ ರೇಗ್ತೀರ..? ಅತ್ತೆ ಮೇಲಿನ ಕೋಪ ಕೊತ್ತಿ ಮೇಲೆ ಅನ್ನೋ ಹಾಗೆ?” ವಿಶಾಲೂ ಆಕ್ಷೇಪಿಸಿದಳು. “ಬಡಪಾಯಿ ನನ್ನ ಮೇಲೆ ಯಾಕೋ ರೇಗ್ತಿದ್ದೀಯಾ..?” ನಾನೂ ಕಂಗಾಲಾಗಿದ್ದೆ. ವಿಶ್ವ ಒಂದು ಗ್ಲಾಸು ನೀರು ಗಟಗಟನೆ ಕುಡಿದ. ಪಿತ್ತ ನೆತ್ತಿಯಿಂದಿಳಿದಂತೆ ಕಂಡಿತು. ಸಾವರಿಸಿಕೊಂಡು ಮಾತಾಡಿದ. “ಹೌದು, ನಿನ್ನ ಮೇಲೆ ರೇಗಿ ಏನು ಪ್ರಯೋಜನ? ಆ ಅಡಿಗೆಯವನು ಬರಲಿ ಅವನನ್ನ ಕೊಚ್ಚಿ ಪೀಸ್ಪೀಸಸ್ ಮಾಡಿ ಎಸೀತೀನಿ!” ವಿಶ್ವನ ರೌದ್ರಾವತಾರ ನೋಡಿ ಪುಂಖಾನುಪುಂಖವಾಗಿ ತಯಾರಾಗುತ್ತಿರುವ ಕನ್ನಡದ ರೌಡಿಸಂ ಸಿನಿಮಾಗಳ ನೆನೆಪಾಯಿತು. “ಇಷ್ಟೊಂದು ತಿನಿಸುಗಳನ್ನ ಇಟ್ಟುಬಿಟ್ಟೀದ್ದೀರಲ್ಲ..? ರಾತ್ರಿ ಊಟ ಸೇರೊಲ್ಲ” ಮೆಲುದನಿಯಲ್ಲಿ ಸ್ವಗತ ಹೇಳಿಕೊಂಡು ತಟ್ಟೆಯನ್ನು ಎತ್ತಿಕೊಂಡೆ. “ಅದರಲ್ಲಿರೋದು ಒಂದೂ ಬಿಡೋ ಹಾಗಿಲ್ಲ! ಮತ್ತೆ ಆ ಮೂಲೇಲಿರೋ ಸಾಮನೆಲ್ಲಾ ದಯವಿಟ್ಟು ಮನೆಗೆ ತಗೊಂಡು ಹೋಗಿ ಪ್ಲೀಸ್” ವಿಶಾಲೂ ಅಂಗಲಾಚಿದ್ದು ಪರಮಾಶ್ಚರ್ಯವಾಗಿ ಕಂಡಿತು. “ನನಗಿನ್ನೂ ಅರ್ಥವಾಗ್ತಿಲ್ಲ..ಇದೆಲ್ಲಾ ಏನೂಂತ?” ಕಂಗಲಾಗಿ ಕೇಳಿದೆ. “ಹೇಳ್ತೀನಿ ಹೇಳ್ತೀನಿ, ನಿನ್ನ ಟ್ಯೂಬ್ಲೈಾಟ್ ತಲೆಗೆ ಎಲ್ಲಾ ತಿಳಿಯೋ ಹಾಗೆ ಹೇಳ್ತೀನಿ” ವಿಶ್ವ ಸುತ್ತು ಬಳಸು ಬಿಟ್ಟು ನೇರ ಹಾದಿಗೆ ಬಂದುದರಿಂದ ಸಮಾಧಾನವಾಯಿತು. ಒಂದು ಕೋಡುಬಳೆಯನ್ನು ಕಡಿದೆ. “ನೀನು ನಿನ್ನ ಅಣ್ಣನ ಮಗಳ ಮದುವೆಗೆ ಹೋಗಿದ್ದೆ, ನನ್ನ ಮಗಳ ಮದುವೇಲಿ ಇರಲಿಲ್ಲ” “ಎರಡು ಮದುವೇನೂ ಒಂದೇ ದಿನ ಇತ್ತಲ್ಲೊ, ಅದು ನಿನಗೂ ಗೊತ್ತಿತ್ತು” ನಾನು ಸಮಜಾಯಿಸಿ ಹೇಳಿಕೊಂಡೆ. “ನಾನು ನಿನ್ನ ವಿವರಣೆ ಕೇಳಲಿಲ್ಲ” ಮಾತಿಗೊಮ್ಮೆ ಆಕ್ಷೇಪಿಸುತ್ತಿದ್ದರಿಂದ ಮಾತು ನಿಲ್ಲಿಸಿ, ತಟ್ಟೆಯಲ್ಲಿದ್ದ ತಿನುಸುಗಳ ಭಕ್ಷಣೆ ಕಾರ್ಯದಲ್ಲಿ ಗಂಭೀರನಾಗಿ ತೊಡಗಿ, ವಿಶ್ವನ ಮಾತಿಗೆ ಕಿವಿಗೊಟ್ಟೆ. “ಮೂಲೇಲಿ ಇಟ್ಟಿರೋ ಕುಂಬಳಕಾಯಿ, ಮೆಣಸಿನಕಾಯಿ, ಎಣ್ಣೆ ಟಿನ್ನು ಅವಲ್ಲಾ ಏನಂದುಕೊಂಡಿದ್ದೀಯ..?” ವಿಶ್ವನ ಮಾತಿಗೆ ಉತ್ತರಿಸಲು ಬಾಯಲ್ಲಿ ತುಂಬಿದ್ದ ರವೆಉಂಡೆ ಅಡ್ಡ ಬಂತು. “ಅವೆಲ್ಲಾ ಮದುವೇಲಿ ಉಳಿದ ಸಾಮಾನುಗಳು! ಈಗಾಗಲೇ ಹದಿನೈದು ಜನರಿಗೆ ಹಂಚಿದ್ದೀವಿ-ಇನ್ನೂ ಮುಗಿದಿಲ್ಲ. ಆ ಟಿನ್ನಿನಲ್ಲಿರೋದು ಕಂಟು ಎಣ್ಣೆ, ಒಂದು ಸಲ ತಿಂಡಿ ಕರಿಯೋದಕ್ಕೆ ಉಪಯೋಗಿಸಿರೋದು. ಅದನ್ನ ದೀಪಕ್ಕೆ ಉಪಯೋಗಿಸು. ಮತ್ತೆ ಅಡಿಗೆಯವನು ನಲವತ್ತು ಕುಂಬಳಕಾಯಿ ಲಿಸ್ಟಿನಲ್ಲಿ ಬರೆದಿದ್ದ. ದಮ್ರೋಟು ಮೆನುನಲ್ಲಿತ್ತು. ಅವನು ಉಪಯೋಗಿಸಿದ್ದು ಕೇವಲ ಎರಡು ಕುಂಬಳಕಾಯಿ ಮಾತ್ರ! ಉಳಿದ ಮುವತ್ತೆಂಟನ್ನು ನನು ಹೇಗೆ ಖರ್ಚು ಮಾಡಲಿ? ಆ ಪಾಪಿ ಎದುರಿಗೆ ಬಂದ್ರೆ ಎ.ಕೆ-೪೭ ತಗೊಂಡು ಷೂಟ್ ಮಾಡುಬುಡ್ತೀನಿ! ಲಾಂಗ್ನುಲ್ಲಿ ಕೊಚ್ಚಿ ಹಾಕ್ತೀನಿ” ವಿಶ್ವನ ಕೋಪ ನನಗೀಗ ಅರ್ಥವಾಯಿತು. ಮದುವೆ ಮನೆಯಲ್ಲಿ ಅಡಿಗೆಯವನು ಅದ್ವಾನ ಮಾಡಿದ್ದಾನೆ ಎನ್ನುವುದು ಅರ್ಥವಾಗಿತ್ತು. ಅಡಿಗೆಯವನ ಅದ್ವಾನಕ್ಕೆ ಬಲಿಪಶುವಾಗಿದ್ದ ವಿಶ್ವನನ್ನು ಕಂಡು ಅಯ್ಯೋ ಎನಿಸಿತು. ಆದರೆ ಮದುವೆಗೆ ಹೋಗಿದ್ದವರೆಲ್ಲಾ ಅಡಿಗೆ ಚೆನ್ನಾಗಿತ್ತು ಎಂದಿದ್ದು ನೆನೆಪಾಯಿತು. “ಅಲ್ಲಾ ವಿಶ್ವ, ಮದುವೇಲಿ ಅಡುಗೆ ಚೆನ್ನಾಗಿತ್ತು ಅಂತ ಎಲ್ಲರೂ ಹೊಗಳುತಿದಾರೆ, ನೀನು ನೋಡಿದ್ರೆ..?” ಅನುಮಾನದಿಂದ ಮಾತೆಳೆದೆ. “ಅಡಿಗೆಯೇನೋ ಚೆನ್ನಾಗಿ ಮಾಡಿದ್ದ. ಬಂದವರೆಲ್ಲಾ ಎರಡೆರಡು ಸಲ ಹಾಕಿಸಿಕೊಂಡು ಚೆನ್ನಾಗೇ ತಿಂದು ಹೋದರು! ಆದರೆ ಅವನು ಮಾಡಿದ ಅಡಾವುಡಿ ನೋಡಬೇಕಿತ್ತು! ಅದನ್ನ ನಾನು ಏಳು ಜನ್ಮ ಕಳೆದರೂ ಮರಿಯೋದಿಲ್ಲ” “ಅಂತಾದ್ದು ಏನಾಯ್ತೋ..?” “ಏನಾಯ್ತಾ..? ಕೇಳು, ಡೀಟೈಲ್ಸ್ ಹೇಳ್ತೀನಿ. ರುಚಿಯಾಗಿರಲೀಂತ ಮೆಣಸಿನ ಕಾಯಿ ಬೋಂಡಕ್ಕೆ ಬೆಂಗ್ಳೂರಿಂದ ಸ್ಪೆಷಲ್ಲಾಗಿ ಮೆಣಸಿನ ಕಾಯಿ ತರಿಸಿದ್ದರೆ ಅದನ್ನು ಹೆಚ್ಚಿ ಇನ್ಯಾವುದೋ ಅಡಿಗೆಗೆ ಹಾಕಿದ! ನಲವತ್ತು ದೊಡ್ಡ ಸೈಜಿನ ಕುಂಬಳ ಕಾಯಿ ತರಿಸಿ ಎರಡು ಮಾತ್ರ ಉಪಯೋಗಿಸಿ ಮೂವತ್ತೆಂಟನ್ನು ಉಳಿಸಿ ತಲನೋವು ಮಾಡಿದ! ವೆಜಿಟಬಲ್ ಪಲಾವಿಗೆ ತರಿಸಿದ್ದ ಎಳೆ ಹುರುಳೀಕಾಯೀನ ಮೆನೂನಲ್ಲಿಲ್ಲದ ವೆಜಿಟಬಲ್ ಬೋಂಡ ಮಾಡಿಬಿಟ್ಟ! ರಿಸಿಪ್ಷನ್ನೆಲ್ಲಿ ಸಾವಿರ ಜನಕ್ಕೆ ಮಾಡಿಸಿದ್ದನ್ನ ಏಳುನೂರು ಜನಕ್ಕೆ ಮುಗಿಸಿಬಿಟ್ಟ! ಕೊನೆಯವರಿಗೆ ಸೆಟ್ ದೋಸೆ, ಕುಲ್ಚಾ ಯಾವುದೂ ಇಲ್ಲದೆ ಬರೀ ಅನ್ನ ಸಾರು ಹಾಕೋ ಹಾಗೆ ಮಾಡಿದ. ಬೀಗರಿಗೆ ಮತ್ತೆ ನಮ್ಮ ಮನೆಯವರಿಗೆ ಸಿಕ್ಕಿದ್ದು ಅನ್ನ, ಸಾರು ಮತ್ತು ಮೊಸರನ್ನ! ಊಟಕ್ಕೆ ಬಾಳೆಹಣ್ಣು ತರಿಸಿದ್ದರೆ ಅದನ್ನ ನೋಡದೆ ಎಲ್ಲಾ ಹಾಗೇ ಉಳಿಸಿಬಿಟ್ಟ! ರಾತ್ರಿ ಹನ್ನೊಂದು ಗಂಟೇಲಿ ಇಪ್ಪತ್ತು ಕೆ.ಜಿ ಉದ್ದಿನ ಬೇಳೆ ಕೇಳಿದ. ಯಾರೋ ಒಬ್ಬ ಅಂಗಡಿಯವನ ಮನೆ ಗೊತ್ತಿತ್ತು ಪುಣ್ಯಕ್ಕೆ! ಅವನ್ನ ಎಬ್ಬಿಸಿ ಉದ್ದಿನ ಬೇಳೆ ತಂದಿದ್ದಾಯ್ತು! ಸಿಕ್ಕಾಪಟ್ಟೆ ಸಾಮನು ಉಳಿಸಿಬಿಟ್ಟ! ದಿನಸಿ ಸಾಮಾನೇನೊ ಅಂಗಡಿಗೆ ವಾಪಸ್ಸು ಮಾಡಿದೋ..ಉಳಿದ ಸಾಮಾನು..?” ವಿಶ್ವನ ಮಾತು ಕೇಳಿ ಅನುಮಾನ ಬಂತು. “ಮದುವೇಲಿ ನೀನು ಇರಲಿಲ್ಲವೇನೋ..? ನೀನಿದ್ದೂ ಹೀಗೆಲ್ಲಾ ಆಯಿತೂಂದ್ರೆ..?” “ಎಂತಾ ಪೆಕರನೋ ನೀನು? ನನ್ನ ಮಗಳ ಮದುವೇಲಿ ನಾನಿಲ್ಲದೆ ಇರೋದಕ್ಕೆ ಸಾಧ್ಯವೇನೋ?” “ಮತ್ತೀ ಅಧ್ವಾನವೆಲ್ಲಾ ಹೇಗಾಯ್ತು..?” “ಹೇಗಾಯ್ತಾ..? ನಾನು ಪೂಜೆ ಪುನಸ್ಕಾರಗಳಲ್ಲಿದ್ದೆ. ನನ್ನ ತಮ್ಮ ಅಡಿಗೆ ಉಸ್ತುವಾರಿ ನೋಡ್ಕೋತಿದ್ದ. ಅವನಿಗೆ ಮೆನು ಗೊತ್ತಿರಲಿಲ್ಲ” “ಬೆಳ್ಳಂ ಬೆಳಿಗ್ಗೆ ಎಪ್ಪತ್ತು ಕಟ್ಟು ಪಾಲಕ್ ಸೊಪ್ಪು ಕೇಳಿದನಲ್ಲ ಅದ್ನೂ ಹೇಳ್ರೀ” ವಿಶಾಲೂ ನೆನಪಿಸಿಕೊಂಡು ಹೇಳಿದಳು. “ನೋಡಿದೆಯಾ..? ಮನುನಲ್ಲಿದ್ದ ಪಾಲಕ್ ಪನ್ನೀರ್ನ ಮಟರ್ ಪನ್ನೀರಿಗೆ ಬದಲಾಯಿಸಿದ್ದರೂ ಪಾಲಕ್ ಸೊಪ್ಪು ತನ್ನೀಂತ ಗಲಾಟೆ ಮಾಡಿದನಂತೆ! ಅವನು ಮಾಡಿದ ಅನಾಹುತಗಳು ಒಂದಾ ಎರಡಾ..? ನೆನಸಿಕೊಂಡರೆ ಮೈಯೆಲ್ಲಾ ಉರಿಯುತ್ತೆ॒! ಅದರ ಜೊತೆಗೆ ಉಳಿದಿರೋ ಸಾಮಾನು ನೋಡು. ಮೂವತ್ತೆಂಟು ಬೂದುಗುಂಬಳ, ಇಪ್ಪತ್ತು ಕೆಜಿ ಹಸಿರು ಮೆಣಸಿನ ಕಾಯಿ! ನೆಂಟರಿಸ್ಟರಿಗೆಲ್ಲಾ ಕೊಟ್ಟರೂ ಮುಗಿದಿಲ್ಲ” “ಯಾವುದಾದರು ಅಂಗಡಿಗೆ ಕೊಟ್ಟು ಬಿಡಬೇಕಿತ್ತು” ಸಲಹೆ ನೀಡಿದೆ. “ಮೂವತ್ತೆಂಟು ದೊಡ್ಡ ಸೈಜಿನ ಬೂದುಗುಂಬಳ! ಯಾವ ಅಂಗಡಿಯವನು ತಗೋತಾನೆ ಹೇಳು! ಆದಕ್ಕೆ ಅವನು ಜಾಗ ಎಲ್ಲಿ ಹೊಂಚುತ್ತಾನೆ..? ಇನ್ನು ಬೀದೀಲಿಟ್ಕೊಂಡು ಮಾರು ಅಂತ ಸಲಹೆ ಕೊಡಬೇಡ! ಕಾಲು ಮುರಿದು ಕೈಗೆ ಕೊಟ್ಬಿಡ್ತೀನಿ” ಬೆದರಿಸಿದ ವಿಶ್ವ. “ಅಂತ ಸಲಹೆ ಕೊಡ್ತೀನೇನೋ..? ಅದೂ ನನ್ನ ಚಡ್ಡಿ ಸ್ನೇಹಿತನಿಗೆ?” “ಅದಕ್ಕೇ ಮರ್ಯಾದೆಯಿಂದ ಅಲ್ಲಿಟ್ಟಿರೋ ಎರಡು ಕುಂಬಳ, ಕ್ಯಾನು ಎಣ್ಣೆ, ಮೆಣಸಿನಕಾಯಿ, ಬಾಳೆಹಣ್ಣು-ಎಲ್ಲಾ ತಗೊಂಡು ಹೋಗು. ದಯವಿಟ್ಟು ಮದುವೆಗೆ ಬರದಿದ್ದರೂ ಇಷ್ಟು ಸಹಾಯವನ್ನಾದರೂ ಮಾಡು” ವಿನಯ, ದರ್ಪ ಎರಡನ್ನೂ ಮಾತುಮಾತಿಗೆ ಬದಲಿಸುತ್ತಾ ವಿಚಿತ್ರ ರೀತಿಯಲ್ಲಿ ಹೇಳಿದ ವಿಶ್ವ! “ಆಯ್ತಪ್ಪ ನೀನಿಷ್ಟು ಹೇಳಿದಮೇಲೆ ಮಾಡದೆ ಇರುತ್ತೇನೇನು? ಅದ್ಸರಿ, ಇಷ್ಟೆಲ್ಲಾ ಮಾಡಿದ ಆ ಆಡಿಗೆಯವನ್ನ ತರಾಟೆಗೆ ತಗೊಳ್ಳಲಿಲ್ಲವಾ..?” “ಬಿಡ್ತೀನಾ? ತರಾಟೆ, ಕರಾಟೆ ಎಲ್ಲಾ ಆಯ್ತು! ಅವನು ಬಹಳ ಜಾಣ! ಅಡಿಗೆ ಏನಾದ್ರೂ ಕೆಟ್ಟಿತ್ತಾಂತ ಚಾಲೆಂಜ್ ಮಾಡಿದ! ಮದುವೇಲಿ ಇವೆಲ್ಲಾ ಮಾಮೂಲು ಸಾರ್ ಅಂತ ನನಗೇ ಸಮಾಧಾನ ಹೇಳಿ ನಾಜೂಕಾಗಿ ಬರಬೇಕಾದ ದುಡ್ಡನ್ನ ಎಳ್ಕೊಂಡು ಹೋದ” “ವಿಶ್ವ, ನಾನು ಕೇಳಿದೀನಿ..ಮದ್ವೇಲಿ ಇವೆಲ್ಲಾ ಮಾಮೂಲಂತೆ!” ನನ್ನ ಮಾತಿಗೆ ವಿಶ್ವ ಒಮ್ಮೆಲೇ ಆಕಾಶಕ್ಕೆ ಎಗರಿದ! “ಅಂತೆ ಕಂತೆಯಲ್ಲ॒ ನಾನೇ ನನ್ನ ಕಣ್ಣಾರೆ ಕಂಡಿದ್ದೀನಿ! ನೀನಿನ್ನೂ ಅಂತೆಕಂತೆ ಅಂತ ಮಾತಾಡ್ತಿದ್ದೀಯ ಕತ್ತೆ!” ವಿಶ್ವನ ಕೋಪ ಮುಗಿಲು ಮುಟ್ಟಿತ್ತು! “ಅವರ ಮೇಲೆ ಯಾಕ್ರೀ ರೇಗ್ತೀರ?” ವಿಶಾಲೂ ಸಮಾಧಾನ ಮಾಡಿದಳು. ವಿಶ್ವನ ಕೋಪ ಬೇಗನೆ ಇಳಿಯುವುದಿಲ್ಲ. ಬೇಗ ಎದ್ದು ಹೋಗೋಣ ಎಂದರೆ ತಟ್ಟೆಯಲ್ಲಿದ್ದ ತಿಂಡಿ ಇನ್ನೂ ಮುಗಿದಿರಲಿಲ್ಲ! ’ಅತ್ತ ದರಿ ಇತ್ತ ಪುಲಿ’ ಎನ್ನುವಂತಾಗಿತ್ತು ನನ್ನ ಸ್ಥಿತಿ! ಇದ್ದಕ್ಕಿದ್ದಂತೆ ಮುಖ ಕಿವುಚಿಕೊಂಡು, ಹೊಟ್ಟೆ ಹಿಡಿದುಕೊಂಡು ವಿಶ್ವ ವೇಗವಾಗಿ ಒಳಗೆ ಹೋದ. “ಯಾಕೆ..?”ಅರ್ಥವಾಗದೆ ವಿಶಾಲೂನ ಕೇಳಿದೆ. “ಬಾಳೆಹಣ್ಣು ಉಳಿದುಬಿಟ್ಟಿದ್ದವಲ್ಲ? ಮದುವೆ ಮುಗಿದಾಗಿನಿಂದ ಮನೇಲೆ ಬಾಳೆಹಣ್ಣಿಂದೇ ಅಡಿಗೆ! ಬೆಳಿಗ್ಗೆ ಚಪಾತಿ ಮತ್ತು ಬಾಳೆಹಣ್ಣಿನ ಸೀಕರಣೆ! ಮನೆಮಂಡಿಯೆಲ್ಲಾ ನಾಲ್ಕುನಾಲ್ಕು ಸಲ ಟಾಯ್ಲೆಟ್ಟಿಗೆ ಹೋಗ್ತಿದ್ದೀವಿ! ಕಾನ್ಸ್ಟಿಪೇಷನ್ ಎಲ್ಲರಿಗೂ ಸಾಲ್ವ್ ಆಗಿಬಿಟ್ಟಿದೆ. ನಿಮಗೂ ಒಂದು ನೂರು ಬಾಳೆಹಣ್ಣು ಕಳಿಸಲೆ?” ಎಂದು ಗೆಳೆಯನ ಮಡದಿ ಹೇಳಿದಾಗ ಸಣ್ಣಗೆ ಬೆವರಿದೆ. ಬಹುಶಃ ದುರ್ಯೋಧನನೂ ವೈಶಂಪಾಯನ ಸರೋವರದಲ್ಲಿದ್ದು ಹೀಗೇ ಬೆವರಿರಬಹುದೆ? ಇಲ್ಲಾ ಮಾಹಾಕವಿ ಪಂಪನಿಗೂ ನನಗಾದ ಅನುಭವವೇ ಆಗಿರಬಹುದೆ?” ವಿಶ್ವನ ಮನೆಯಲ್ಲಿರುವ ಪ್ರತಿ ನಿಮಿಷವೂ ಅಪಾಯಕ್ಕೆ ಆಹ್ವಾನ ಎನ್ನಿಸಿತು. ಇಲ್ಲಿಂದ ಹೇಗೆ ಶೀಘ್ರವಾಗಿ ಜಾಗ ಖಾಲಿ ಮಾಡುವುದು ಎಂಬ ಯೋಜನೆಯನ್ನು ತಯಾರಿಸಿತೊಡಗಿದೆ. ಪುಣ್ಯಕ್ಕೆ ಮಡದಿ ಫೋನಾಯಿಸಿದ್ದಳು! ಆಹಾ ನನ್ನ ಪುಣ್ಯವೆ ಎಂದು ಆನಂದತುಂದಿಲನಾದೆ ! ಅರ್ಜೆಂಟು ಕೆಲಸ ಎಂದು ಸಬೂಬು ಹೇಳಿ ಗಡಿಬಿಡಿಯಿಂದ ತಟ್ಟೆಯನ್ನು ಖಾಲಿ ಮಾಡಿ ಕುಂಬಳಕಾಯಿ, ಹಸಿರುಮೆಣಸಿನಕಾಯಿ, ಟಿನ್ನು ಎಣ್ಣೆ ಮತ್ತು ಬಾಳೆಹಣ್ಣಿನ ಸಮೇತ ಮನೆಯಿಂದ ಹೊರಬಿದ್ದೆ!  ]]>

‍ಲೇಖಕರು G

August 23, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬಿರಿಯಾನಿಯಿಂದ ಫಿರ್ನಿವರೆಗೆ..

ಬಿರಿಯಾನಿಯಿಂದ ಫಿರ್ನಿವರೆಗೆ..

ಕೆ ಮುದ್ದುಕೃಷ್ಣ  ಮೈಸೂರಿಗರಿಗೆ ಒಂದು ಸಿಹಿ ಸುದ್ದಿ. ಬಹಳ ವರ್ಷಗಳಿಂದ ದೊಡ್ಡ ಚರ್ಚ್ ಬಳಿ ಮಾತ್ರವೇ ಇದ್ದ ಪ್ರಸಿದ್ದ “ನಶೇಮನ್” ಹೋಟೆಲ್ ಈಗ...

ಪೂಜೆ!!

ಪೂಜೆ!!

ಎಸ್.ಜಿ.ಶಿವಶಂಕರ್ ನನ್ನ ಚಡ್ಡಿ ಫ್ರೆಂಡು ಸುಬ್ಬು ಯಾನೆ ಸುಭಾಶ್ ಲಂಚ್‍ಗೆ ಮುಂಚೆ ಮನೆಗೆ ಹೋಗಿದ್ದು ತಿಳಿದು ಆತಂಕಗೊಂಡೆ. ಕಾರಣ...

ಇದು ನನ್ನ ಸವಾಲ್..

ಇದು ನನ್ನ ಸವಾಲ್..

ನಾಗೇಂದ್ರ ಶಾ  ಹೀಗೊಂದು ಹೋಟ್ಲು ರಾಜರಾಜೇಶ್ವರಿ ನಗರದಲ್ಲಿ. ಹೆಸರಿಗೂ ಒಳಗಿನ ಊಟ, ತಿಂಡಿಗೂ ಸಂಬಂಧವಿಲ್ಲ. ಒಳ ಹೊಕ್ಕರೆ ಅಪ್ಪಟ ದೇಸಿ ಊಟ....

3 ಪ್ರತಿಕ್ರಿಯೆಗಳು

  1. Sushma

    ನಕ್ಕು ನಕ್ಕು ಸುಸ್ತು…!!!
    ವಿಶ್ವನ ಮನೆಗೆ ಬಂದಾಗಿನಿಂದ ಲೇಖಕರ ಪೇಚಾಟ ಮೋಜಿನ ಸಂಗತಿಯಾಗಿ ರಂಜಿಸುತ್ತದೆ….
    ಚಂದದ ಲೇಖನ…..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: