ಟೈಮ್ ಪಾಸ್ ಕಡ್ಲೆಕಾಯ್ : ಸ್ವರ್ಗದ ರುಚಿ

ಸ್ವರ್ಗದ ರುಚಿ

ಎಸ್.ಜಿ.ಶಿವಶಂಕರ್

  “ಬಾ..ಇಲ್ಲೇ ಕೂತ್ಕೋ..ಪಕ್ಕದಲ್ಲಿ ಬೇಡ ಎದುರು ಕುರ್ಚೀಲಿ ಕೂತ್ಕೋ..ಮಾತಾಡೋಕೆ ಅನುಕೂಲ” ಫ್ಯಾಕ್ಟರಿಯ ಕ್ಯಾಂಟೀನಿನಲ್ಲಿ ವಿಶ್ವ ಕರೆದ. ಅವನ ಮಾತಿಗೆ ಕೊಂಚ ಅಚ್ಚರಿ, ಕೊಂಚ ಗಾಬರಿಯೂ ಆಯಿತು. ಸದಾ ಹಂಗಿಸುತ್ತಾ, ವ್ಯಂಗ್ಯವಾಗಿ ಮಾತಿನಲ್ಲೇ ತಿವಿಯುತ್ತಿದ್ದ ನನ್ನ ಚಡ್ಡಿ ದೋಸ್ತ್ ಮತ್ತು ಕಲೀಗ್ ವಿಶ್ವನ ಮಾತು ಮಾಮೂಲಾಗಿರಲಿಲ್ಲ. ಕವುಚಿ ಹಾಕಿದ್ದ ಊಟದ ತಟ್ಟೆಯನ್ನು ತಿರುಗಿಸಿ ಮುಂದಿಟ್ಟುಕೊಂಡು ಇದೇನು ನಿನ್ನ ಮಾತಿನ ವರಸೆ ಎಂಬ ಪ್ರಶ್ನೆಯನ್ನು ಮುಖದ ಮೇಲೆ ಪ್ರದರ್ಶಿಸಿದೆ. ಡೈನಿಂಗ್ ಹಾಲಿನ ಮೂಲೆ ಟೇಬಲ್ಲನ್ನು ವಿಶ್ವ ಆರಿಸಿಕೊಂಡಿದ್ದರ ಉದ್ದೇಶ ಸ್ಪಷ್ಟವಾಗಿತ್ತು; ಯಾರ ಮೇಲಾದ್ರೂ ಸ್ಕೆಚ್ ಹಾಕಬೇಕಾಗಿದ್ರೆ ವಿಶ್ವ ಮಾಡುತ್ತಿದ್ದುದೇ ಹೀಗೆ. “ಏನು ವಿಷಯ..? ಬಾಲ್ಡಿ ಬಿಶ್ವಾಸ್ ಮೇಲೆ ಸ್ಕೆಚ್ ಹಾಕಬೇಕಾ..? ಚಾಡಿಕೋರ ಪಳನಿ ಪ್ರಾಬ್ಲಮ್ ಕೊಟ್ನಾ..?” ಕುತೂಹಲದಿಂದ ಕೇಳಿದೆ. “ಬಿಶ್ವಾಸ್ಗೆ ಮೂರು ದಿವಸದಿಂದ ಹಿಂದೆ ಬಿಸಿ ಮುಟ್ಟಿಸಿದೀನಿ, ಅದು ಆರೋದಕ್ಕೆ ಇನ್ನೂ ವಾರ ಬೇಕು. ಪಳನಿ ವಿಷಯ ಬಿಡು: ಚೆನ್ನೈಗೆ ಟ್ರಾನ್ಸ್ಫರ್ ಆಗುತ್ತೇಂತ ರೂಮರ್ ಬಿಟ್ಟು ಅವನ ತಲೆ ಬಿಸಿ ಮಾಡಿದೀನಿ” “ಚೆನ್ನೈಗೆ ಟ್ರಾನ್ಸ್ಫರ್ ಅಂದ್ರೆ ಅವನಿಗೆ ಖುಷಿಯಾಗಿರುತ್ತೆ! ತಲೆ ಯಾಕೆ ಬಿಸಿ ಮಾಡ್ಕೋತಾನೆ..?” “ಪೆದ್ದಾ..? ಹತ್ತ್ವರ್ಷದಿಂದ ಕಾವೇರಿ ನೀರು ಕುಡಿದು, ಕನ್ನಡ ಜನರ ಈ ಔದಾರ್ಯದಲ್ಲಿ ತಂಪಾಗಿರೋವಾಗ ಈ ಊರು ಬಿಟ್ಟು ಚೆನ್ನೈಗೆ ಹೋಗ್ತಾನೋ..? ಅವನಿಗೆ ನಿಜವಾಗ್ಲೂ ತಲೆ ಬಿಸಿಯಾಗಿರುತ್ತೆ” “ಮತ್ತೆ ಈ ಟೇಬಲ್ಲು..?” ವಿಶ್ವ ಮತ್ತೊಂದು ಚಪಾತಿಯನ್ನು ತಟ್ಟೆಗೆ ಹಾಕ್ಕೊಂಡ. ದೀರ್ಘ ಮೌನವಹಿಸಿದ. ನಾನೂ ಅತುರ ತೋರದೆ ತಟ್ಟೆಗೆ ಚಪಾತಿ ಮತ್ತು ಪಲ್ಯ ಬಡಿಸಿಕೊಂಡು ಹೊಟ್ಟೆಗಿಳಿಸುವ ಪ್ರಕ್ರಿಯೆಯಲ್ಲಿ ತೊಡಗಿದೆ. “ನಾನು ಬಹಳ ದಿವಸದಿಂದ ಯೋಚ್ನೆ ಮಾಡ್ತಿದ್ದೀನಿ..” ವಿಶ್ವ ತುಟಿ ಬಿಚ್ಚಿದ. ಕೇಳಿಸಿದರೂ ಕೇಳಿಸದಂತೆ ಆಹಾರ ಭಕ್ಷಣೆ ಮುಂದುವರಿಸಿದ್ದೆ. “ಏನೂಂತ ಕೇಳೊಲ್ಲವಾ..?” ವಿಶ್ವನ ಮಾತಿನಲ್ಲಿ ಕೋಪ ಕಂಡಿತ್ತು. ನಾನು ಪ್ರತಿಕ್ರಿಯಿಸದೆ ಇದ್ದರೂ ಅವನ ಮಾತು ಮುಂದುವರಿಯಿತು. “ಯಾರ್ಯಾರೋ..ಹೇಗೆಹೇಗೋ ಹೆಸರು ಹಣ ಎಲ್ಲಾ ಮಾಡ್ತಿದ್ದಾರೆ, ನಾವು ಐದು ವರ್ಷ ಇಂಜಿನಿಯರಿಂಗ್ ಓದಿ, ಆ ಎಂ.ಪಿನಾ ಶ್ರೀಮಂತನನ್ನ ಮಾಡಿ, ಕಣ್ಣಿಗೆ ಎಣ್ಣೆ ಹಚ್ಕೊಂಡು ಓದಿ, ವರ್ಕ್ಷಾಮಪಲ್ಲಿ ವೋರ್ನ್ಔಯಟ್ ಆಗಿ, ಸತ್ತು ಸುಣ್ಣವಾಗಿ ಈಗ ಈ ಫ್ಯಾಕ್ಟ್ರೀಲಿ ಗ್ರಿಸು ಅಯಿಲ್ಲು ಹಚ್ಕೊಂಡು ಹುಚ್ಚರ ತರಾ ಕೆಲ್ಸ ಮಾಡ್ತಿದ್ದೀವಿ, ದಿನಾ ಪ್ರೊಡಕ್ಷನ್ ರಿವ್ಯೂ ಮೀಟಿಂಗು, ಶಾರ್ಟೇಜು, ಟಾರ್ಗೆಟ್ಟೂಂತ ಜೀವನದ ಅಮೂಲ್ಯವಾದ ಸಮಯವನ್ನ ವೇಸ್ಟ್ ಮಾಡ್ಕೋತಾ ಇದ್ದೀವಿ! ಹೀಗೆ ನಿಂಗೆ ಯಾವತ್ತೂ ಅನ್ನಿಸಿಲ್ಲವಾ..?” “ಇದು ಬಿಟ್ಟು ಬೇರೆ ದಾರಿ ಯಾವುದಿದೆ..?” “ಇವತ್ತು ಅಡಿಗೆ ಮಾಡೋರು ಟಿವಿ ಛಾನಲ್ಲುಗಳಲ್ಲಿ ಮೆರೀತಾರೆ! ಬುಕ್ ಬರೀತಾರೆ! ಲಾಂಗು ಮಚ್ಚು ಹಿಡ್ಕೊಂಡೋರು ಲಕ್ಷಾಂತರ ದುಡ್ಡು ಮಾಡ್ತಾರೆ, ಫೈವ್ ಸ್ಟಾರ್ ಹೋಟೆಲಿನ ಬಾಣಸಿಗನ ಸಂಬಳ ಎಷ್ಟು ಗೊತ್ತಾ..? ಒಂದೂವರೆ ಲಕ್ಷ!” “ವರ್ಷಕ್ಕಾ..?” “ಹುಚ್ಚಾ! ತಿಂಗಳಿಗೆ! ನೀನು ರಿಟೈರ್ ಆಗೋವರೆಗೂ ಸರ್ವೀಸು ಮಾಡಿದರೂ ತಿಂಗಳಿಗೆ ಒಂದೂವರೆ ಲಕ್ಷ ಎಣಿಸೋಕಾಗೊಲ್ಲ!” ವಿಶ್ವನ ತಲೆ ತಿರುಗುತ್ತಿತ್ತು; ಇದ್ದಕ್ಕಿದ್ದಂತೆ ಸ್ಫೂರ್ತಿ ಬಂದಿತ್ತು! ವಿಶ್ವನಿಗೆ ಅಗಾಗ್ಗೆ ಇಂತಾ ಯೋಚನೆಗಳು, ಸ್ಫೂರ್ತಿಗಳು ದಿಢೀರನೆ ಬರುತ್ತಿದ್ದವು. ಹಿಂದೊಮ್ಮೆ ವಾಸ್ತು ತಜ್ಞನಾಗುವ ಹಂಬಲದಿಂದ ಜೈಲು ಕಂಡಿದ್ದ! ನನ್ನ ಮೇಲಿನ ಈರ್ಷೆಗೆ ಕವಿಯಾಗ್ತೀನೀಂತ ಸಿಕ್ಕಾಪಟ್ಟೆ ಬರೆದು ಸಿಕ್ಕವರ ತಲೆ ತಿಂದಿದ್ದ! ಸಮಾಜ ಸೇವೆಯ ಹುಚ್ಚು ಹತ್ತಿಸ್ಕೊಂಡು ಮಡದಿಯ ಕೆಂಗಣ್ಣಿಗೆ ಗುರಿಯಾಗಿದ್ದ. ಇಂತಾ ಹುಚ್ಚುಗಳಿಗೆ ವಿಶ್ವ ಆಗಾಗ್ಗೆ ಬಲಿಯಾಗ್ತಿದ್ದ. ಇದೆಲ್ಲಾ ಗೊತ್ತಿದ್ದರಿಂದ ನನಗೆ ಅವನ ಈಗಿನ ವರಸೆಯಿಂದ ಅಚ್ಚರಿಯಾಗಲಿಲ್ಲ. “ಹಾಗಾದ್ರೆ ಈ ಕೆಲಸಕ್ಕೆ ರಿಸೈನ್ ಮಾಡಿ ಯಾವುದಾದ್ರೂ ಫೈವ್ ಸ್ಟಾರ್ ಹೋಟೆಲಿನಲ್ಲಿ ಚೆಫ್ ಕೆಲಸ ಹುಡುಕ್ತೀಯಾ..?” “ಪೆಕರನ ತರಾ ಮಾತಾಡಬೇಡ! ಬದುಕಿನಲ್ಲಿರೋ ಅವಕಾಶಗಳ ಬಗ್ಗೆ ಮಾತಾಡ್ತಿದ್ದೀನಿ. ಸಂಜೀವ ಕಪೂರ್ ಅನ್ನೋ ಬಾಣಸಿಗ ಬರೆದಿರೋ ಪುಸ್ತಕಗಳು, ಸಿಡಿಗಳು, ಅವನ ಹೆಸರಲ್ಲಿ ಮಿಕ್ಸರ್ಗನಳು ಲಕ್ಷಗಟ್ಟಲೆ ಮಾರಾಟವಾಗ್ತಿವೆ ಗೊತ್ತಾ?” ರೇಗಿದ ವಿಶ್ವ. ವಿಶ್ವನ ಮಾತಿಗೆ ಎದುರಾಡಿದರೆ ಆತ ಸಹಿಸೊಲ್ಲ! ಅವನ ಮಾತು ನನಗೆ ಸಹಿಸೋಕಾಗ್ತಿಲ್ಲ! ಜೊತೆಗೆ ಲಂಚ್ ಮುಗಿದ ತಕ್ಷಣ ರಿವ್ಯೂ ಮೀಟಿಂಗಿದೆ ಎಂದು ಬಾಸ್ ಬುಸ್ಸೆಂದಿತ್ತು! ಬಾಸಿನ ಮಾತು ಕಿವಿಯಲ್ಲಿ ನಗಾರಿ ಬಾರಿಸುತ್ತಿತ್ತು! “ಸರಿ ಬೇಕಾದಷ್ಟು ಅವಕಾಶಗಳಿವೆ, ಉಪಯೋಗಿಸಿಕ್ಕೊಳ್ಳೋಕೆ ಆ ಪರಿಣತಿ ಇರಬೇಕಲ್ಲ..? ಸರಿಯಾಗಿ ಒಂದು ಕಪ್ ಟೀ ಮಾಡ್ಕೊಳ್ಳೊಕೆ ಬರ್ದೆ ಇರೋರು ಚೆಫ್ ಆಗೋದಾದ್ರೂ ಹೇಗೆ?” ನಾನು ವಿಶ್ವನ ಬಾಯಿ ಮುಚ್ಚಿಸಬೇಕಾಗಿತ್ತು. ಮಾತಿನ ಭರದಲ್ಲಿ ವಿಶ್ವ ಮೂರನೆ ಚಪಾತಿಯನ್ನು ಪಲ್ಯ ಇಲ್ಲದೇ ತಿನ್ನುತ್ತಿದ್ದ. ನಾನು ಚಪಾತಿ ಮುಗಿಸಿ ಅನ್ನ-ಸಾಂಬಾರ್ ಮುಗಿಸಿ, ಮೊಸರನ್ನದಲ್ಲಿದ್ದೆ. “ಆಡಿಗೆ ಮಾಡೋಕೆ ಪರಿಣತಿ ಬೇಕಾ? ಏನು ತರ್ಮೋಡೈನಮಿಕ್ಸ್ ಓದಬೇಕಾ..? ಹೈಡ್ರಾಲಿಕ್ಸ್ ಅನ್ನೋ ಕಠಿಣವಾದ ವಿಷಯ ಪಾಸು ಮಾಡಬೇಕಾ..? ಸ್ಟ್ರಕ್ಚರಲ್ ಇಂಜಿನಿಯರಿಂಗ್ ಓದಬೇಕಾ..? ಉಪ್ಪು, ಹುಳಿ, ಕಾರ ಸರಿಯಾಗಿ ಹಾಕಿದ್ರಾಯ್ತು! ಅದೇನು ಭ್ರಹ್ಮ ವಿಧ್ಯೇನಾ..? ಹುಚ್ಚ!” ಹಂಗಿಸಿದ ವಿಶ್ವ. “ಸರಿ ಯಾವಾಗ ಶುರು ಮಾಡ್ತೀಯಾ..?” “ಏನನ್ನ..?” ವಿಶ್ವ ಅಚ್ಚರಿಯಿಂದ ಕೇಳಿದ. “ಸೌಟು ಹಿಡಿಯೋದನ್ನ..?” “ನಾನು ಅಂತಾ ದಡ್ಡ ಅಂದ್ಕೊಂಡಿದ್ದೀಯಾ..? ವಿಶಾಲೂ ಹತ್ರ ಎಲ್ಲಾ ರೆಸಿಪಿ ಕೇಳಿಸ್ಕೊಂಡು ಪುಸ್ತಕ ಬರೀತೀನಿ! ಟಿವಿ ಚಾನಲ್ಲುಗಳಲ್ಲಿ ಪ್ರೋಗ್ರಾಮು ಮಾಡ್ತೀನಿ!” “ಬೆಸ್ಟ್ ಆಫ್ ಲಕ್..ನಾನು ಹೊರಡ್ಲಾ..? ಆದ್ರೂ ಒಂದ್ಮಾತು, ಸ್ವಾನುಭವ ಇಲ್ಲದಿದ್ರೆ ಪುಸ್ತಕ ಬರೆಯೋಕಾಗೊಲ್ಲ! ಸಾರಿ ರಿವ್ಯೂ ಮೀಟಿಂಗಿದೆ ಇನ್ನು ಹತ್ತು ನಿಮಿಷಕ್ಕೆ, ಲೇಟಾದ್ರೆ ಕಿಂಗ್ ಕೋಬ್ರಾ ಬುಸ್ಸನ್ನುತ್ತೆ” ಅವಸರಿಸಿ ಎದ್ದು ವಿಶ್ವನ ಪ್ರತಿಕ್ರಿಯೆಗೆ ಕಾಯದೆ ಕೈತೊಳೆಯಲು ಹೊರಟೆ. “ಯೂ ಆರ್ ಅ ಹೋಪ್ಲೆಸ್ ಕೇಸ್” ವಿಶ್ವ ಲೊಚಗುಟ್ಟಿದ.  

* * * * * * * *

ಅದಾದ ಸುಮಾರು ಎರಡು ದಿನಕ್ಕೆ ಮಧ್ಯಾನ್ಹ ಹನ್ನೊಂದು ಗಂಟೆಗೆ ಯಾವುದೋ ಕಳೆದ ತಿಂಗಳಲ್ಲಿ ನನ್ನ ಇಲಾಖೆಯ ಮೆಷಿನುಗಳ ಉಪಯೋಗ ಹೇಗಾಗಿದೆ ಎಂಬ ಸ್ಟೇಟ್ಮೆಂಟಿನಲ್ಲಿ ತಲೆ ಬಿಸಿ ಮಾಡಿಕೊಂಡಿದ್ದಾಗ ಫೋನು ರಿಂಗಾಯಿತು! ಶುರುವಾಯಿತು ರಾಮಾಯಣ ಎಂದು ಪೋನೆತ್ತಿದೆ! ಪುಣ್ಯ ಅದು ಬಾಸಾಗಿರಲಿಲ್ಲ! ಬದಲಿಗೆ ವಿಶ್ವನ ದನಿ. “ಮಧ್ಯಾನ್ಹ ಆ ದರಿದ್ರ ಕ್ಯಾಂಟೀನಿಗೆ ಹೋಗಬೇಡ” “ಮತ್ತೆ ನನ್ನ ಹೊಟ್ಟೆ ಗತಿ?” “ಆ ದರಿದ್ರ ಕ್ಯಾಂಟೀನಿನಲ್ಲಿ ಐದು ವರ್ಷದಿಂದ ಅದೇ ರುಚಿ! ಅದೇ ಮೆನು!” “ಮತ್ತೆ ಊಟಕ್ಕೇನು ಮಾಡಲಿ..?” “ಮನೆಯಿಂದ ಸ್ಪೆಷಲ್ ತಂದಿದ್ದೀನಿ! ನನ್ನ ಚೇಂಬರಿಗೇ ಬಂದುಬಿಡು” ವಿಶ್ವನ ಮಾತಿನಲ್ಲಿ ಹೆಮ್ಮೆಯಿತ್ತು, ಅಚಲವಾದ ವಿಶ್ವಾಸವಿತ್ತು! ಲಂಚ್ ಟೈಮಿನಲ್ಲಿ ವಿಶ್ವನ ಚೇಂಬರನ್ನು ಪ್ರವೇಶಿಸಿದಾಗ ಅವನ ಟೇಬಲ್ಲಿನ ಸುತ್ತ ಅವನ ಸಹೋದ್ಯೋಗಿಗಳಾಗಲೇ ಕುಳಿತಿದ್ದರು. ಏನೋ ಸೆಲಿಬರೇಟ್ ಮಾಡ್ತಿರಬಹುದು ಎಂದು ಖಾಲಿಯಿದ್ದ ಕುರ್ಚಿಯಲ್ಲಿ ಕೂತೆ. ವಿಶ್ವ ಸಂಭ್ರಮದಲ್ಲಿದ್ದ. ನನ್ನ ಕೈಕುಲಿಕಿ ಸ್ವಾಗತಿಸಿದ. ಅವನ ಪರವಾಗಿ ಅವನ ಡಿಪಾರ್ಟ್ಮೆಂಟಿನ ಇಬ್ಬರು ಎಲ್ಲರಿಗೂ ಪ್ಲೇಟ್ ಕೊಟ್ಟು, ಕ್ಯಾರಿಯರಿನಿಂದ ಪುಳಿಯೋಗರೆ, ಕೇಸರೀಬಾತು, ಅಲೂಬೋಂಡ ಮತ್ತೆ ಮೊಸರನ್ನ ಬಡಿಸಿದರು. “ಎಲ್ಲ ನಿಧಾನವಾಗಿ ಊಟ ಮಾಡಿ. ಆಮೇಲೆ ಹೇಳಿ ಹೇಗಿತ್ತೂಂತ! ಅತುರ ಬೇಡ” ವಿಶ್ವನ ಉಪಚಾರಕ್ಕೆ ಅವನ ಸಹೋದ್ಯೋಗಿಗಳು ಉಬ್ಬಿ ಹೋಗಿದ್ದರು. ನನಗೆ ಮಾತ್ರ ಅವನ ಮಾತು, ಅವನ ಕ್ಯಾರಿಯರ್ರಿನ ಊಟ ಎಲ್ಲಾ ಅವನು ಯಾವುದೋ ಸ್ಕೆಚ್ಚಿನಂತೆ ಕಂಡಿತು! ಮಾರಮ್ಮನಿಗೆ ಬಲಿ ಕೊಡಲು ಎಳೆದುಕೊಂಡು ಹೋಗುವ ಕುರಿಯ ನೆನಪಾಯಿತು. ಮೊನ್ನೆ ಕ್ಯಾಂಟೀನಿನಲ್ಲಿ ಮಾತಾಡಿದ್ದಕ್ಕೂ ಇದಕ್ಕೂ ಏನೋ ಸಂಬಂಧ ಇದೆಯೆಂಬ ಗುಮಾನಿಯಾಯಿತು. ಮೊದಲು ತುತ್ತು ಒಳಗಿಳಿಸಿದವರು ತುಂಬಾ ಚೆನ್ನಾಗಿದೆ ಎಂದು ಹೊಗಳಿದರೂ ಅವರ ಮಾತಿಗೂ ಮುಖದ ಮೇಲಿದ್ದ ಭಾವಕ್ಕೂ ತಾಳೆಯೇ ಆಗಿರಲಿಲ್ಲ. ನನ್ನ ನಾಲಿಗೆ ಕೂಡ ಆ ತಿನಿಸುಗಳನ್ನು ಒಪ್ಪಲಿಲ್ಲ. “ಹಲೋ ಬುದ್ದಿ ಜೀವಿ, ನೀನೇನೂ ಹೇಳಲಿಲ್ಲ..?” ವಿಶ್ವ ನನ್ನತ್ತ ನೋಡಿದ. “ಚೆನ್ನಾಗಿದೆ” ಎಂದೆ! ತಿನಿಸುಗಳೆಲ್ಲಾ ಶುಚಿಯಾಗಿದ್ದವು ಆದರೆ ರುಚಿ ಅಡ್ಡಾದಿಡ್ಡಿ! ಪುಳಿಯೋಗರೆಯಲ್ಲಿ ಬರೀ ಹುಳಿ ಇತ್ತು, ಉಪ್ಪು ಮತ್ತು ಖಾರ ಲೆಸ್ಸಾಗಿತ್ತು, ಎಣ್ಣೆ ಹೆಚ್ಚಾಗಿತ್ತು! ಕೇಸರೀ ಬಾತಲ್ಲಿ ಬರೀ ಬಣ್ಣವಿತ್ತು! ಸಕ್ಕರೆ ಲೆಸ್ ಮತ್ತು ಫೆವಿಕಾಲ್ ತರಾ ಅಂಟಂಟಾಗಿತ್ತು! ಅಲೂ ಬೋಂಡ ಕರಕರ ಎನ್ನುತ್ತಿತ್ತು. ಒಳಗಿನ ಅಲೂಗಡ್ಡೆ ಬೆಂದಂತಿರಲಿಲ್ಲ! ಯಾರೋ ಜೀವನದಲ್ಲಿ ಮೂದಲ ಬಾರಿಗೆ ಸೌಟು ಮಾಡಿದಂತಿತ್ತು! ಅದು ವಿಶ್ವನೇ ಎಂಬ ಗುಮಾನಿ ನನ್ನದಾಗಿತ್ತು! ಅಲ್ಲಿದ್ದ ಎಲ್ಲರೂ ವಿಶ್ವನ ಕೈಕೆಳಗೆ ಕೆಲಸ ಮಾಡುವವರೇ! ಚೆನ್ನಾಗಿಲ್ಲ ಎನ್ನಲು ಹೆದರಿಕೆ ಮತ್ತು ಬಾಸು ಎಂಬ ಮುಲಾಜಿಗೆ ಬಿದ್ದಿದ್ದರು. “ತ್ಯಾಂಕ್ಸ್! ಸಾವಕಾಶವಾಗಿ ತಿನ್ನಿ” ಮತ್ತೆ ಉಪಚರಿಸಿದ. “ಏನು ವಿಶೇಷ ಸಾರ್..? ಯಾರು ಮಾಡಿದ್ದು ಇದೆಲ್ಲಾ..?” “ಗೆಸ್ ಮಾಡಿ? ಆಮೇಲೆ ವಿಷ್ ಮಾಡಿ” ತನ್ನ ಪ್ರಾಸಕ್ಕೆ ವಿಶ್ವ ತಾನೇ ನಕ್ಕ! “ಕ್ಯಾಂಟೀನಲೆ ಒರು ಪೈಯ್ಯ ವೇಲೆ ಪಂಡ್ರ!” ಅಡ್ಡಾತಿಡ್ಡಾ ಮಾತೋಡೇಕೆ ಹೆಸರಾದ ಅರ್ಮುಗಂ ಹೇಳಿಬಿಟ್ಟ! “ತುರೀಮಣೆ ನಾಗಾನ..? ಅವನು ಇಂತಾ ಅಡಿಗೆ ಕೆಲಸಾನ ಒಪ್ಪಿಕೋತಾನಂತೆ, ಆದ್ರೆ ರುಚಿ ಮಾತ್ರ ಅಷ್ಟಕ್ಕಷ್ಟೆ”ಆರ್ಮುಗಂ ಮಾತನ್ನ ಹಿರಿಯರಾದ ಗೋಪೀನಾಥ್ ಮುಂದುವರಿಸಿದರು. “ನಾನ್ಸೆನ್ಸ್! ಆ ನಾಗ ತನ್ನ ಜನ್ಮದಲ್ಲಿ ಇಂತಾ ರುಚಿಯಾದ್ದು ಮಾಡಿರೊಲ್ಲ! ಓ.ಕೆ ನಾನೇ ಹೇಳ್ತೀನಿ! ಇದೆಲ್ಲಾ ಮಾಡಿದ್ದು ನಾನೇ!” “ಅಲ್ಲಾ ಸಾರ್..ನೀವು..? ಯಾಕೆ” ಅವನ ಕೆಳಗೆ ಕೆಲಸ ಮಾಡುವವರು ಅಚ್ಚರಿಯಿಂದ ಕೇಳಿದರು. ಅವರ ಮಾತಿನಲ್ಲಿ ’ನಿಮಗೆ ಬೇರೆ ಕೆಲ್ಸ ಇಲ್ಲವೆ?’ ಎಂಬ ಪ್ರಶ್ನೆ ಅಡಕವಾಗಿತ್ತು! “ಡಿಯರ್ ಕಲೀಗ್ಸ್, ನಿಮಗೆಲ್ಲಾ ಒಂದು ಸಿಹಿ ಸುದ್ದಿ! ಇನ್ನೂ ಹಲವಾರು ದಿವಸ ಇಂತಾ ರುಚಿಕಟ್ಟಾದ ಊಟ ನಿಮಗೆ ಮುಫತ್ತಾಗಿ ಸಿಗುತ್ತೆ! ಇದಕ್ಕೆ ಕಾರಣಾನೂ ಇದೆ! ನಾನು ಒಂದು ಪುಸ್ತಕ ಬರೀತಾ ಇದ್ದೀನಿ. ಅದು ’ಸ್ವರ್ಗದ ರುಚಿ’ ಅಂತ! ಅದರಲ್ಲಿ ನಾನು ಮಾಡೋ ಅಡುಗೆಗೆಳನ್ನೆಲ್ಲಾ ಬರೀತೀನಿ! ಟಿವಿ ಷೋ ಕೂಡ ಮಾಡೋಕೆ ಯೋಚಿಸ್ತಾ ಇದ್ದೀನಿ. ಇನ್ನು ಸಿಡಿಗಳು ಕೂಡ ತಯಾರಾಗ್ತವೆ! ನಿಮಗೆಲ್ಲಾ ಅಂದ್ರೆ ನನಗೆ ಕ್ಲೋಸ್ ಆಗಿರೋರಿಗೆಲ್ಲಾ ಇವ್ನೆಲ್ಲಾ ಫ್ರೀಯಾಗಿ ಕೊಡ್ತೀನಿ. ಈ ಲೈನು ಕ್ಲಿಕ್ ಆದ್ರೆ ಈ ದರಿದ್ರ ಕೆಲಸಕ್ಕೆ ಗುಡ್ಬೈಲ ಹೇಳ್ತೀನಿ!” ವಿಶ್ವನ ಮಾತಿಗೆ ಎಲ್ಲರೂ ಕಕ್ಕಾಬಿಕ್ಕಿಯಾಗಿದ್ದರು! ಪರಸ್ಪರ ಮುಖ ನೋಡಿಕೊಂಡರು-ವಿಶ್ವನಿಗೆ ಕಾಣದ ಹಾಗೆ! ಅವನ ಅಡಿಗೆಯನ್ನು ಈಗ ಹಾಲಿ ಪ್ಲೇಟಿನಲ್ಲಿರುವುದಲ್ಲದೆ ಇನ್ನೂ ಹಲವಾರು ದಿನ ತಿನ್ನಬೇಕಲ್ಲ ಎಂಬ ಗಾಬರಿ ಎಲ್ಲರ ಮುಖದಲ್ಲಿ ಕಂಡಿತು! ಅದಕ್ಕಿಂತಲೂ ಹೆಚ್ಚಾಗಿ ಈಗ ಪ್ಲೇಟಿನಲ್ಲಿದ್ದುದನ್ನು ಹೇಗೆ ಖಾಲಿ ಮಾಡುವುದು ಎನ್ನುವ ಚಿಂತೆಯೂ ಅವರನ್ನು ಕಾಡಿದಂತೆ ಕಂಡಿತು! ನಾನೂ ಅದೇ ಸ್ಥಿತಿಯಲ್ಲಿದ್ದೆ. ಅತ್ತ ವಿಶ್ವ ಇತ್ತ ಪ್ಲೇಟಿನಲ್ಲಿ ಅವನ ಕೈಯಲ್ಲಿ ತಯಾರಾದ ಖಾದ್ಯ! ಅತ್ತ ದರಿ ಇತ್ತ ಪುಲಿ! “ಕ್ಯಾರಿಯರ್ರಲ್ಲಿ ಇರೋದೆಲ್ಲಾ ಖಾಲಿ ಮಾಡಬೇಕು!” ವಿಶ್ವ ಆಗ್ರಹಿಸಿದ. “ಸಾರ್, ಉಂಗಳದ್ದು..” ಕ್ಯಾರಿಯರ್ರಿನಲ್ಲಿರೋದು ವಿಶ್ವನೂ ತಿನ್ನಲಿ ಎಂಬ ಭಂಡ ದೈರ್ಯ ಮಾಡಿ ಆರ್ಮುಗಂ ಕೇಳಿಬಿಟ್ಟ. “ಮೊದಲು ನೀವು! ನನಗೆ ನಿಮ್ಮ ಫೀಡ್ ಬ್ಯಾಕ್ ಮುಖ್ಯ! ಅಮೇಲೆ ನಾನು-ನೀವು ಉಳಿಸಿದರೆ” ವಿಶ್ವ ತನ್ನ ಜೋಕಿಗೆ ತಾನೇ ನಕ್ಕ! ಎಲ್ಲರೂ ನನ್ನತ್ತ ನೋಡುತ್ತಿದ್ದರು. ಕಣ್ಸನ್ನೆಯಲ್ಲಿ ಏನಾದರೂ ಮಾಡಿ ಎನ್ನುತ್ತಿದ್ದರು. ನಾನು ನನ್ನನ್ನೂ ಮತ್ತು ಅಲ್ಲಿದ್ದವರನ್ನೆಲ್ಲಾ ವಿಶ್ವನ ನಳಪಾಕದಿಂದ ಬಚಾವು ಮಾಡಿಕ್ಕೊಳ್ಳಬೇಕಾಗಿತ್ತು! “ವಿಶ್ವ ಐಯಾಮ್ ಸಾರಿ, ಇಲ್ಲಿಗೆ ಬರೋಕ್ಮುಂಚೆ ಬಾಸು, ನಮ್ಮ ಕಿಂಗ್ ಕೋಬ್ರಾ ನಿನ್ನನ್ನ ಅರ್ಜೆಂಟಾಗಿ ಕಳಿಸಿ ಅಂದಿದ್ದರು! ನಾನು ಮರೆತೇ ಬಿಟ್ಟೆ!” ಮುಖದಲ್ಲಿ ಗಾಬರಿ ತೋರಿಸುತ್ತಾ ಹೇಳಿದೆ. “ಥೂ..ನೀನೂ..ನಿನ್ನ ಬಾಸೂ..ಈ ಫ್ಯಾಕ್ಟರಿ ಇವುಗಳ ಹಣೇ ಬರಾನೇ ಇಷ್ಟು! ಸಾಯೋಕೂ ನೆಮ್ಮದಿ ಕೊಡೋದಿಲ್ಲ! ನೀವೆಲ್ಲಾ ತಿನ್ತಾ ಇರಿ..ಕ್ಯಾರಿಯರ್ರಲ್ಲಿ ಇನ್ನೂ ಬೇಕಾದಷ್ಟಿದೆ ಎಲ್ಲಾ ನಿಮಗೇ ತಂದಿರೋದು, ನಾನು ಹೋಗಿ ಆ ಸುಟ್ಟ ಬಾಸಿಗೆ ಬೆಂಡೆತ್ತಿ ಬರ್ತೀನಿ” ವಿಶ್ವ ಚೇಂಬರಿಂದಾಚೆ ಹೋಗಿದ್ದೇ ತಡ ಅಲ್ಲಿದ್ದವರೆಲ್ಲಾ ಚುರುಕಾಗಿಬಿಟ್ಟರು. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ವಿಶ್ವನ ನಳಪಾಕವನ್ನು ವರ್ಣಿಸತೊಡಗಿದರು. “ಇದು ತಿಂದರೆ ನಮಗೆ ದೇವ್ರೇ ಗತಿ! ರುಚೀನೂ ಇಲ್ಲ..ತಿಂದ್ರೆ ಹೊಟ್ಟೆ ಗಬ್ಬೆದ್ದು ಹೋಗುತ್ತೆ!” “ಪುಳಿಯೋಗ್ರೆಲಿರೋ ಎಣ್ಣೆ ನೋಡಿ ಸಾರ್! ಈ ಕೇಸರಿ ಬಾತ್ ತಿಂದ್ರೆ ಅದು ಖಂಡಿತಾ ಹೊಟ್ಟೆಯ ಲೈನಿಂಗಿಗೇ ಕಚ್ಕೊಂಡ್ಬಿಡುತ್ತೆ!” “ಆಮೇಲೆ ಆಪರೇಷನ್ನೇ ಆಗ್ಬೇಕಾಗುತ್ತೆ” ಕೇಶವಲು ಅಲವತ್ತುಗೊಳ್ಳುತ್ತಾ ಹೇಳಿದ. “ವಿಶ್ವ ಅವರನ್ನ ಆಚೆ ಕಳಿಸಿದ್ದಕ್ಕೆ ತುಂಬಾ ತ್ಯಾಂಕ್ಸ್ ಸಾರ್! ನಮಗೆ ನಂಬಿಕೆಯಿತ್ತು ನೀವು ನಮ್ಮನ್ನ ಹೇಗಾದ್ರೂ ಬಚಾವು ಮಾಡ್ತೀರಾಂತ. ಎಲ್ಲರೂ ಪ್ಲೇಟಿನಲ್ಲಿರೋದ್ನೆಲ್ಲಾ ವೇಸ್ಟ್ ಡಬ್ಬಕ್ಕೆ ಹಾಕಿ ಅದನ್ನ ಸಾಲ್ವೇಜ್ ಟ್ರ್ಯಾಕ್ಟರ್ನ ಲ್ಲಿ ಸುರಿದು ಬರೋಣ” ಗೋಪೀನಾಥ್ ಎಲ್ಲರ ತಲೆಯಲ್ಲಿದ್ದುದನ್ನೇ ಹೇಳಿದರು. ಅಲ್ಲಿದ್ದವರೆಲ್ಲಾ ಒಮ್ಮೆಲೇ ಅದಕ್ಕೆ ಒಪ್ಪಿದರು. ಯಾರೋ ವೇಸ್ಟ್ ಡಬ್ಬಾ ತರಲು ಓಡಿದರು. “ಬೇಗ, ವಿಶ್ವ ಸಾರ್ ಬರೋದ್ರಲ್ಲಿ ಇವೆಲ್ಲಾ ಮಾಡಬೇಕು” ಎಲ್ಲ ಅವಸರ ಮಾಡುತ್ತಿದ್ದರು. “ಸಾರ್, ಕಾರಣ ಇಲ್ಲದೆ ಹೋದ್ರೆ ಬಾಸು ವಿಶ್ವ ಅವರನ್ನ ಏನೂ ಅನ್ನೊಲ್ಲವಾ..?” ವಿಶ್ವನ ಪಿಎ ಪಿಳ್ಳೆ ಕೇಳಿದ. “ಬಾಸಿಗೆ ಯಾರನ್ನ ಕರೆದೆ ಯಾರನ್ನ ಕರೀಲಿಲ್ಲಾ ಅನ್ನೋದು ನೆನಪಿರೊಲ್ಲ!” ಖಾಲಿ ಡಬ್ಬಾ ಬರುತ್ತಲೇ ಎಲ್ಲರೂ ತಮ್ಮ ಪ್ಲೇಟಿನಲ್ಲಿದುದನ್ನು ಅದರಲ್ಲಿ ಸುರಿದರು! ಡಬ್ಬಾ ತುಂಬಿತು! ಮನಸ್ಸಿಗೆ ಕೊಂಚ ಕಸಿವಿಸಿಯಾಯಿತು. ಎಷ್ಟೊಂದು ಆಹಾರ ವೇಸ್ಟ್ ಆಯಿತಲ್ಲಾ ಅಂತ. ಆದರೆ ತಿನ್ನಲು ಸಾಧ್ಯವಿಲ್ಲವಲ್ಲ? ಎಂದು ಮನಸ್ಸಿಗೆ ಸಮಾಧಾನ ಹೇಳಿದೆ. ಇಬ್ಬರು ಡಬ್ಬಾ ಎತ್ತಿಕೊಂಡು ಆಚೆ ಹೋದರು. ಅಲ್ಲಿಗೆ ವಿಶ್ವನ ’ಸ್ವರ್ಗದ ರುಚಿ’ಯಿಂದ ತಕ್ಷಣಕ್ಕೆ ಬಚಾವಾಗಿದ್ದೊ! ಆದರೆ ಸುಮಾರು ದಿನ ಇಂತಾ ಆಡಿಗೆ ತಿನ್ನಬೇಕಲ್ಲ ಎಂಬ ಹೆದರಿಕೆ ಇನ್ನೂ ಹೋಗಿರಲಿಲ್ಲ! “ಹತ್ತು ಊಟ ತೆಗೆದಿಟ್ಟಿರಿ.. ಮೀಟಿಂಗ್ ಇತ್ತು ಮುಗಿಸಿ ಬರ್ತಾ ಇದ್ದೀವಿ” ಪಿಳ್ಳೆ ಕ್ಯಾಂಟೀನಿಗೆ ಫೋನು ಮಾಡಿ ಹೇಳಿದ. “ಸಾರ್..ಈ ಕ್ಯಾರಿಯರ್ರಿನಲ್ಲಿರೋದನ್ನ ಏನು ಮಾಡೋದು..?” ಕೇಶವಲು ಗಾಬರಿಯಿಂದ ಕೇಳಿದ. “ಅದು ವಿಶ್ವನಿಗೇ ಇರಲಿ..ನಡೀರಿ ನಾವು ಕ್ಯಾಂಟೀನಿಗೆ ಹೋಗೋಣ” “ವಿಶ್ವ ಸಾರು ಬಂದ್ರೆ..?” “ಬಾಸು ಅವನನ್ನ ಅರ್ಧ ಗಂಟೆಗೆ ಮುಂಚೆ ಬಿಡೊಲ್ಲ! ಆಷ್ಟರಲ್ಲಿ ನಾವು ಕ್ಯಾಂಟೀನಿನಲ್ಲಿ ಊಟ ಮುಗಿಸಿ ಡಿಪಾರ್ಟ್ಮೆಂಟಿಗೆ ವಾಪಸ್ಸು ಹೋಗಬಹುದು. ವಿಶ್ವನಿಗೆ ಅನುಮಾನ ಬರೊಲ್ಲ!” ಅವರಿಗೆ ಧೈರ್ಯ ಹೇಳಿದೆ. “ಬೀಸೋ ದೊಣ್ಣೆ ತಪ್ಪಿದರೆ ಸಾವರ ವರ್ಷ ಆಯುಸ್ಸಂತೆ, ದೇವರು ದೊಡ್ಡವನು” ಮುಂದಿನ ವರ್ಷ ರಿಟೈರ್ ಆಗಲಿದ್ದ ರಂಗನಾಥ್ ನಿಟ್ಟುಸಿರುಬಿಡುತ್ತಾ ಹೇಳಿದರು! ಎಲ್ಲರೂ ಕ್ಯಾಂಟೀನಿನತ್ತ ವೇಗವಾಗಿ ನಡೆದೆವು! ವಿಶ್ವನ ಆಡಿಗೆಯನ್ನು ಲೇವಡಿ ಮಾಡುತ್ತ ಸಾವಕಾಶವಾಗಿ ಊಟ ಮುಗಿಸಿ ಈಚೆ ಬರುವಾಗ ಭೂತ ಕಂಡಂತೆ ಬೆಚ್ಚಿ ನಿಂತೆವು! ವಿಶ್ವ ಬಾಗಿಲಲ್ಲಿ ಎದುರಿಗೆ ನಿಂತಿದ್ದ! ನಮ್ಮೆಲ್ಲರನ್ನೂ ಅನುಮಾನದಿಂದ ನೋಡುತ್ತಿದ್ದ! “ಅದೂ..ವಿಶ್ವ ನಿನ್ನ ಕ್ಯಾರಿಯರ್ರು..?” ತಡವರಿಸಿದೆ. “ಕ್ಯಾರಿಯರ್ ಸಮೇತ ಆಫೀಸ್ ಹೆಲ್ಪರ್ ಗೋವಿಂದನಿಗೆ ಕೊಟ್ಟೆ! ಅದ್ಸರಿ ನೀವು..?” ಅನುಮಾನಿಸಿದ ವಿಶ್ವ. “ಓ..ಅದಾ..? ಇನ್ನು ಮೂರು ದಿವಸಕ್ಕೆ ಕ್ವಾಲಿಟಿ ಡೇ ಇದೆಯಲ್ಲ, ಅದಕ್ಕೆ ಮೆನು ಮಾತಾಡೋದಕ್ಕೆ ಬಂದಿದ್ದೊ! ಬಾಸು ಅದರ ಹೊಣೆಗಾರಿಕೆ ನನಗೇ ಕೊಟ್ಟಿದಾರೆ..” ಪುಣ್ಯಕ್ಕೆ ಸರಾಗವಾಗಿ ಸುಳ್ಳು ಬಾಯಿಗೆ ಬಂತು! “ಹೌದು, ಹೌದು..” ಎಲ್ಲ ಸುಳ್ಳರೂ ಅದು ಸತ್ಯವೆಂಬಂತೆ ಅತ್ಯುತ್ಸಾಹದಿಂದ ಹೇಳಿದರು. ವಿಶ್ವ ಬಡಪೆಟ್ಟಿಗೆ ಇದೆಲ್ಲಾ ನಂಬುವುದಿಲ್ಲ ಎಂದು ಗೊತ್ತಿದ್ದರೂ ಹೇಳಿ ಅಲ್ಲಿಂದ ಜಾರಿಕೊಂಡು ನಮ್ಮ ಡಿಪಾರ್ಟ್ಮೆಂಟುಗಳನ್ನು ಸೇರಿಕೊಂಡೆವು-ಸೇಫಾಗಿ! ಮಾರನೆಯ ದಿನ ಬೆಳಿಗ್ಗೆ ನನ್ನ ಚೇಂಬರನ್ನು ಪ್ರವೇಶಿಸುತ್ತಲೇ ಫೋನು ರಿಂಗಾಯಿತು. ಶುರುವಾಯಿತು ರಾಮಾಯಣ ಮತ್ತು ಮಹಾಭಾರತ ಎನ್ನುತ್ತಾ ಪೋನು ಕೈಗೆತ್ತಿಕೊಂಡೆ! “ಇಷ್ಟು ದಿವಸ ನಿನ್ನನ್ನ ಮಿತ್ರ ಎಂದುಕೊಂಡಿದ್ದೆ! ಆದರೆ ನೀನು ನನ್ನ ಶತೃ! ಬಗಲ್ ಮೇ ದುಷಮನ್” ಎಷ್ಟು ಕಹಿಯಾಗಿ ಹೇಳಲು ಸಾಧ್ಯವೋ ಅಷ್ಟು ಕಹಿಯಾಗಿತ್ತು ವಿಶ್ವನ ಮಾತು! ೪೨೦ ವೋಲ್ ವಿದ್ಯುತ್ ಷಾಕ್ ಹೊಡೆದಂತಾಯಿತು! ಹಿಂದಿನ ನಡೆದುದೆಲ್ಲವನ್ನೂ ವಿಶ್ವ ಗ್ರಹಿಸಿದ್ದ! ನಾನು ಕ್ಷಮೆ ಕೇಳುವ ಮುಂಚೆಯೇ ವಿಶ್ವ ಪೋನು ಕುಕ್ಕಿದ್ದ! ವಿಶ್ವದ ಅಗ್ರಮಾನ್ಯ ಬಾಣಸಿಗನಾಗುವ ಆಸೆಯನ್ನು ವಿಶ್ವ ಖಂಡಿತವಾಗಿಯೂ ಬಿಟ್ಟಿರುತ್ತಾನೆ ಎನಿಸಿದರೂ ಅವನ ಪ್ರಯತ್ನಕ್ಕೆ ಕಲ್ಲುಹಾಕಿದ ರೀತಿಗೆ ಮಾತ್ರ ಕಸಿವಿಸಿಯಾಯಿತು! ಆದರೆ ಕಾರ್ಖಾನೆಯ ಜನರನ್ನು ಅವನ ಸ್ವರ್ಗದ ರುಚಿಯಿಂದ ಬಚಾವು ಮಾಡಿ ಉಪಕಾರ ಮಾಡಿರುವೆ ಎನಿಸಿ ಮನಸ್ಸಿಗೆ ಕೊಂಚ ನೆಮ್ಮದಿಯಾಯಿತು!  ]]>

‍ಲೇಖಕರು G

July 21, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬಿರಿಯಾನಿಯಿಂದ ಫಿರ್ನಿವರೆಗೆ..

ಬಿರಿಯಾನಿಯಿಂದ ಫಿರ್ನಿವರೆಗೆ..

ಕೆ ಮುದ್ದುಕೃಷ್ಣ  ಮೈಸೂರಿಗರಿಗೆ ಒಂದು ಸಿಹಿ ಸುದ್ದಿ. ಬಹಳ ವರ್ಷಗಳಿಂದ ದೊಡ್ಡ ಚರ್ಚ್ ಬಳಿ ಮಾತ್ರವೇ ಇದ್ದ ಪ್ರಸಿದ್ದ “ನಶೇಮನ್” ಹೋಟೆಲ್ ಈಗ...

ಪೂಜೆ!!

ಪೂಜೆ!!

ಎಸ್.ಜಿ.ಶಿವಶಂಕರ್ ನನ್ನ ಚಡ್ಡಿ ಫ್ರೆಂಡು ಸುಬ್ಬು ಯಾನೆ ಸುಭಾಶ್ ಲಂಚ್‍ಗೆ ಮುಂಚೆ ಮನೆಗೆ ಹೋಗಿದ್ದು ತಿಳಿದು ಆತಂಕಗೊಂಡೆ. ಕಾರಣ...

ಇದು ನನ್ನ ಸವಾಲ್..

ಇದು ನನ್ನ ಸವಾಲ್..

ನಾಗೇಂದ್ರ ಶಾ  ಹೀಗೊಂದು ಹೋಟ್ಲು ರಾಜರಾಜೇಶ್ವರಿ ನಗರದಲ್ಲಿ. ಹೆಸರಿಗೂ ಒಳಗಿನ ಊಟ, ತಿಂಡಿಗೂ ಸಂಬಂಧವಿಲ್ಲ. ಒಳ ಹೊಕ್ಕರೆ ಅಪ್ಪಟ ದೇಸಿ ಊಟ....

2 ಪ್ರತಿಕ್ರಿಯೆಗಳು

  1. vishveswar

    ಸ್ವರ್ಗದ ರುಚಿಯಿಂದ ಬಚಾವು ಮಾಡಿದ ಮೆಥೆಡ್ ಚೆನ್ನಾಗಿದೆ!
    ಐ ಲೈಕ್ ಇಟ್
    ವಿಶ್ವೇಶ್ವರ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: