ಟಿವಿಯ ರಿಮೋಟು ಟೀಪಾಯ್ ಮೇಲೆ ಅನಾಥವಾಗಿತ್ತು! ಸದಾ ಹೆಂಗಸರ ಕೈಯಲ್ಲಿರುತ್ತಿದ್ದ ರಿಮೋಟಿನ ಅನಾಥ ಸ್ಥಿತಿ ಅಪರೂಪದ ದೃಶ್ಯವೆನಿಸಿತು. ನೂರಾರು ದೇಶೀ ವಿದೇಶೀ ಛಾನಲ್ಲುಗಳು ಬಿತ್ತರಿಸುವ ಮೆಗಾ ಸೀರಿಯಲ್ಲುಗಳಿಂದ ಟಿವಿ ಮುಕ್ತವಾಗಿತ್ತು! ಜೊತೆಗೆ ರಿಮೋಟು ಕೂಡ ವಿಶ್ರಾಂತಿ ಪಡೆಯುತ್ತಿದೆಯೇನೋ ಎಂಬ ವಿಚಿತ್ರ ಯೋಚನೆ ಮನಸ್ಸಿನಲ್ಲಿ! ನನಗೆ ಟಿವಿ ಮೇಲಿನ ಯಜಮಾನಿಕೆ ಸಿಗುವುದು ಅಪರೂಪ! ಸಿಕ್ಕ ಇಂತಾ ಅವಕಾಶವನ್ನು ಉಪಯೋಗಿಸಬಹುದಲ್ಲ ಎನಿಸಿ ಸ್ಥಳೀಯ ಸುದ್ದಿ ನೋಡೋಣವೆಂದು ರಿಮೋಟಿನ ಗುಂಡಿ ಒತ್ತಿದೆ.
ನಗರದಲ್ಲಿ ಬೆಳಿಗ್ಗೆ ನಡೆದ ಪತ್ರಿಕಾ ಗೋಷ್ಟಿಯೊಂದರ ಸುದ್ದಿಯ ತುಣುಕು ಪ್ರಸಾರವಾಗುತ್ತಿತ್ತು. ವರದಿಗಾರರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವ್ಯಕ್ತಿಯನ್ನು ಎಲ್ಲೋ ನೋಡಿದ್ದೇನೆನಿಸಿತು. ಸುದ್ದಿಯಾಗಲೆ ಕೊನೆಯ ಹಂತದಲ್ಲಿತ್ತು. ಆ ವ್ಯಕ್ತಿ ಯಾರು ಎಂದು ಮನಸ್ಸಿನಲ್ಲಿ ಲೆಕ್ಕಾಚಾರ ನಡೆಯಿತು. ಈ ಯೋಚನೆ ಶುರುವಾಗುತ್ತಿದ್ದಂತೆ ಸುದ್ದಿ ಬದಲಾಯಿತು. ಆ ವ್ಯಕ್ತಿ ಯಾರು ಎಂದು ತಿಳಿಯಲಿಲ್ಲ. ಹೇಗೋ ಸುದ್ದಿ ಗಂಟೆಗೊಮ್ಮೆ ಪ್ರಸಾರವಾಗುವುದರಿಂದ ಮತ್ತೆ ಒಂದು ಗಂಟೆಯ ನಂತರ ನೋಡಿದರಾಯಿತು ಎಂದು ಸುಮ್ಮನಾದೆ. ಆದರೆ ಆ ವಿಷಯ ನಂತರ ಮರೆತು ಹೋಯಿತು.
ಮೂರು ದಿನಗಳ ನಂತರೆ ಕಾಲೇಜಿನಲ್ಲಿ ಅದೇ ವ್ಯಕ್ತಿ ಪ್ರತ್ಯಕ್ಷನಾಗಬೇಕೆ!!? ಅದೂ ನನ್ನ ಚೇಂಬರಿಗೇ ಬಂದು ವಿನಯದಿಂದ ಎರಡೂ ಕೈಜೋಡಿಸಿ ನಗುಮೊಗದೊಂದಿಗೆ ‘ನಮಸ್ಕಾರ ಸಾರ್’ ಎಂದರೆ ನನ್ನ ಸ್ಥಿತಿ ಹೇಗಾಗಿರಬಹುದು ಊಹಿಸಿ. ಆತ ಯಾರಿರಬಹುದೆಂದು ನೆನಪಿನ ಚಕ್ರ ತಿರುಗುತ್ತಿತ್ತು! ಕುರುಚಲು ಗಡ್ಡ, ಹಣೆಯಲ್ಲಿ ತಮಿಳರಂತೆ ವಿಭೂತಿ, ಕೆಳಗೆ ಕುಂಕುಮ ಜೊತೆಗೆ ಅಡ್ಡಾದಿಡ್ಡಿ ಹರಡಿಕೊಂಡ ಕೆದರಿದ ತಲೆಗೂದಲು! ಇಂತಾ ಕೇಶ ಶೈಲಿ ಇಂದಿನ ಫ್ಯಾಷನ್ ಅಂತೆ! ನಮ್ಮ ಕಾಲೇಜಿನ ವಿಧ್ಯಾಥರ್ಿಗಳೂ ಅಂತದ್ದೇ ಕೇಶ ಶೈಲಿಯನ್ನು ಪ್ರದಶರ್ಿಸುತ್ತಾರೆ. ಅದಕ್ಕಾಗಿ ಬೆಲೆಬಾಳುವ ಕ್ರೀಮುಗಳನ್ನು ಬಳಸುತ್ತಾರಂತೆ! ಎದುರಿನ ವ್ಯಕ್ತಿಯ ಕೊರಳಲ್ಲಿ ದಪ್ಪನೆಯ ಚೈನು, ಕೈಯಲ್ಲಿ ಬ್ರೇಸ್ಲೆಟ್ಟು ಮತ್ತು ಮೊಬೈಲು! ಧರಿಸಿದ್ದ ಬಟ್ಟೆ- ಜೀನ್ಸು!
‘ಯಾಕ್ಸಾರ್ ಮರ್ತ್ಬಿಟ್ರಾ ? ನಾನು ಸಾರ್ ಕಲ್ಲೇಶಿ!’
ನನ್ನ ಮುಖದಲ್ಲಿದ್ದ ಪ್ರಶ್ನಾರ್ಥಕ ಚಿನ್ಹೆಯನ್ನು ಓದಿದವನಂತೆ ಹೇಳಿದ.
‘ನಿಮ್ಮ ಹಳೇ ವಿದ್ಯಾರ್ಥಿ ಕಲ್ಲೇಶಿ ಸಾರ್!’ ಎಂದು ಮತ್ತೆ ಹೇಳಿದ ಕಲ್ಲೇಶಿ. ಆ ಮಾತಿನೊಳಗೆ ‘ನೀವೆಂತಾ ಟ್ಯೂಬ್ ಲೈಟು ಸಾರ್’ ಎಂಬ ಮಾತೂ ಅಡಗಿದಂತಿತ್ತು!
‘ಗುರ್ತೇ ಸಿಗಲಿಲ್ಲವಲ್ಲೋ ಮಾರಾಯ? ಹೂ..ಈಗ ನೆನಪಾಯಿತು ನೋಡು..ಮೊನ್ನೆ ಟಿವೀಲಿ ನಿನ್ನ ನೋಡ್ದೆ’
ಎಂದು ಉದ್ಗರಿಸಿದೆ.
‘ಓ..ಅದಾ..? ನನ್ನ ಹೊಸಾ ಸಿನೀಮಾ ರಿಲೀಸ್ ಆಗ್ತೇ ಇದೆ ಸಾರ್, ಅದಕ್ಕೇ ಒಂದು ಪತ್ರಿಕಾಗೋಷ್ಠಿ ಕರೆದಿದ್ದೆ! ಅದರದ್ದು ನ್ಯೂಸ್ ಕವರೇಜ್ ಇತ್ತು ಸಾರ್..ಅದನ್ನೇ ನೀವು ನೋಡಿರೋದು’
ಕಲ್ಲೇಶಿ ವಿವರಣೆ ನೀಡಿದ.
ನನಗೋ ಆಶ್ಚರ್ಯದ ಮೇಲೆ ಆಶ್ಚರ್ಯ! ಕಲೆಯ ಗಂಧವೇ ಇಲ್ಲದ ಕಲ್ಲೇಶಿ ಈಗ ಸಿನಿಮಾ ನಿರ್ಮಾಪಕನೋ ಇಲ್ಲಾ ನಿರ್ದೇಶಕನೋ ಅಗಿರೋದು ನಂಬಲಸಾಧ್ಯವಾದ ಮಾತು!
‘ಏನು…? ನೀನು..? ಸಿನಿಮಾನ..? ಅದ್ಯಾವಗಯ್ಯಾ ಮಾಡಿದೆ! ಎರಡು ವರ್ಷದ ಕೆಳಗೆ ಕ್ಲಾಸುಗಳಿಗೆ ಚಕ್ಕರ್ ಹಾಕಿ, ಪರೀಕ್ಷೆ ಹತ್ತಿರ ಬಂದಾಗ ಅಟೆಂಡೆನ್ಸು ಮತ್ತು ಇಂಟರ್ನಲ್ ಮಾರ್ಕ್ಸ್ ಅಂತ ಗೋಗರಿತಿದ್ದೆ!’
‘ಸಿನೀಮಾ ಮುಗಿಸಿ ಒಂದು ತಿಂಗಳಾಯ್ತು ಸಾರ್…ಮೂರೇ ಶೆಡ್ಯೂಲ್ನಲ್ಲಿ ಮುಗಿಸಿಬಿಟ್ಟೆ! ನೀವು ಕಲಿಸಿದ ಪ್ರಾಜೆಕ್ಟ್ ಮ್ಯಾನೇಜ್ಮೆಂಟು ತುಂಬಾ ಸಹಾಯಕ್ಕೆ ಬಂತು ಸಾರ್! ಎಲ್ಲಾ ನಿಮ್ಮ ಅಶೀರ್ವಾದ ಸಾರ್!’
‘ನೀನು ಸಿನೀಮಾ ಮಾಡೋದು ಹೆಚ್ಚೋ? ನಾನು ಆಶೀರ್ವಾದ ಹೆಚ್ಚೋ..? ಕೂತ್ಕೊಳ್ಳಯ್ಯಾ ನಿಂತೇ ಇದ್ದೀಯಲ್ಲ?’
‘ಕಾಲೇಜಲ್ಲಿ ಇರೋಗಂಟಾ ಒಂದು ದಿನವಾದ್ರೂ ಕೂತ್ಕೋ ಅಂತ ಹೇಳ್ಲಿಲ್ಲವಲ್ಲಾ ಸಾರ್…?’
ಅವನ ಮಾತಿನಲ್ಲಿ ಅಕ್ಷೇಪಣೆಯಿತ್ತು!
‘ಆಗ ನೀನು ವಿಧ್ಯಾರ್ಥಿ… ಆ ಶಿಸ್ತು ಬೇಕಾಗಿತ್ತು! ಈಗ ನೀನು ಫಿಲ್ಮ್ ಮೇಕರ್! ಕಲೆಯ ಆರಾಧಕ, ಪೋಷಕ! ನಿನಗೆ ಈ ಮರ್ಯಾದೆ ಕೊಡದಿದ್ದರೆ ನನ್ನದು ತಪ್ಪಾಗುತ್ತೆ!’
‘ನಿಮಾರ್ಣದ ಜೊತೆಗೆ ಸಿನೀಮಾ ನಿರ್ದೇಶನಾನೂ ನಂದೇ ಸಾರ್ ಜೊತೆಗೆ ಕಥೆ ಕೂಡಾ ನಂದೇ!’
‘ಭಲೇ..ಭಲೇ!’
ಅಟೆಂಡರ್ ಮುತ್ತು ಟೀ ಮತ್ತು ಬಿಸ್ಕೆಟ್ ತಂದಿಟ್ಟ!
‘ನಾನೆಲ್ಲಿ ಹೇಳಿದ್ದೆ ಮುತ್ತು?’ ಅಚ್ಚರಿಯಿಂದ ಕೇಳಿದೆ.
‘ಸಾರು ಸೊಲ್ಲಿ ಕಾಸು ಕೊಟ್ಟಿತ್ತು!’ ತಮಿಳು ಮಿಶ್ರಿತ ಕನ್ನಡದಲ್ಲಿ ಹೇಳಿ ಕಲ್ಲೇಶಿ ಕಡೆ ಕೈ ತೋರಿಸಿದ ಮುತ್ತು.
ನನ್ನ ವಿದ್ಯಾರ್ಥಿ ಕಲ್ಲೇಶಿಯ ಬಗ್ಗೆ ಅಭಿಮಾನ ಮೂಡಿತು! ಅದರಲ್ಲಿಯೂ ನಾನು ಕಲಿಸಿದ ವಿಷಯದ ಬಗೆಗೆ ಬೇರೆ ಹೇಳಿದ್ದ! ಎದೆಯುಬ್ಬಿತು.
‘ಸರಿ ನಿನ್ನ ಸಿನಿಮಾ ಬಗ್ಗೆ ಹೇಳು ಕಲ್ಲೇಶಿ! ಈ ಫೀಲ್ಡಿಗೆ ಹೇಗೆ ಬಂದೆ? ಸಿನೀಮಾ ಮಾಡೋದಕ್ಕೆ ಪ್ರೇರಣೆ ಹೇಗೆ ಬಂತು? ದುಡ್ಡೆಲ್ಲಿಂದ ತಂದೆ..?’
‘ನಮ್ಮಪ್ಪ ದೇವ್ನಳ್ಳಿ ಹತ್ರ ಹತ್ತೆಕ್ರೆ ಜಮೀನು ಮಾರಿದ ಸಾರ್. ಬಂದಿದ್ದ ದುಡ್ಡಲ್ಲಿ ತಗೋ ಮಜಾ ಮಾಡು ಅಂತ ಒಂದು ಕೋಟಿ ನನ್ನ ಕೈಗಾಕಿದ! ಅದಕ್ಕೇ ನಾನು ನನ್ನ ಜೀವಮಾನದ ಆಸೆ ತೀರಿಸಿಕ್ಕೊಳ್ಳೋಣ ಮತ್ತು ಕನ್ನಡ ತಾಯಿಯ ಋಣ ತೀರಿಸೋಣ ಅಂತ ಮಚ್ಚು ಲಾಂಗು ಫಿಲ್ಮ್ಸ್ ಬ್ಯಾನರ್ನಲ್ಲಿ ಸಿನೀಮಾ ಶುರು ಮಾಡಿದೀನಿ’
ಕಲ್ಲೇಶಿ ಮಾತು ಕೇಳಿ ಗರ ಬಡಿದಂತಾಯಿತು! ದೇವ್ನಳ್ಳಿ ಹತ್ರ ಜಮೀನು ಮಾರಿದ ಕಲ್ಲೇಶಿ ತಂದೆ ಮಜಾ ಮಾಡು ಅಂತ ಅವನ ಕೈಗೆ ಒಂದು ಕೋಟಿ ಹಾಕಿರಬೇಕಾದರೆ ಜಮೀನು ಎಷ್ಟು ಕೋಟಿಗೆ ಮಾರಿರಬಹುದು? ಸಿನೀಮಾದ ಯಾವ ಪೂರ್ವ ಜ್ಞಾನವೂ ಇಲ್ಲದ ಕಲ್ಲೇಶಿ ಆ ಹಣದಲ್ಲಿ ಸಿನಿಮಾ ಮಾಡೋದೆ? ಅದೂ ಎಂತಾ ಬ್ಯಾನರ್!?
‘ಅಲ್ಲಾ ಕಲ್ಲೇಶಿ ಸಿನೀಮಾ ಮಾಡೋದು ಎಷ್ಟು ಕಷ್ಟ…ಅಂತಾದ್ರಲ್ಲಿ ನೀನು..?’
ಕಲ್ಲೇಶಿ ಒಂಥರಾ ನಕ್ಕ! ಆ ನಗುವಿನ ಹಿಂದೆ ನನ್ನ ಅಲ್ಪ ಜ್ನಾನದ ಬಗೆಗೆ ಕನಿಕರವಿದ್ದಂತಿತ್ತು.
‘ಸಿನೀಮಾ ಮಾಡೋದು ಏನ್ಮಹಾ ಸಾರ್! ದುಡ್ಡು ಒಂದಿದ್ದರೆ ಸಾಕು..! ಎಲ್ಲ ನಿಂತಿರೋದೆ ದುಡ್ಮುಂದೆ ಸಾರ್..ಸಾಕಷ್ಟು ದುಡ್ಡಿತ್ತು ಸರಿ ಮಚ್ಚು ಲಾಂಗು ಫಿಲಂಸ್ ಬ್ಯಾನರಲ್ಲಿ ಮೊದಲನೆ ಸಿನಿಮಾ.. ‘ಹಿಡಿ ಬಡಿ ಕೊಚ್ಚು’ ಅಂತ ಮಾಡಿದೀನಿ ಸಾರ್’
‘ಇದೆಂತಾ ಸಿನೀಮಾ… ಇದೆಂತಾ ಟೈಟಲ್ಲು ಕಲ್ಲೇಶಿ?!’ ಆಕ್ಷೇಪಿಸಿದೆ.
‘ಸಾರ್ ಇವತ್ತು ಜನ ಲೈಕ್ ಮಾಡ್ತಿರೋದೇ ಇಂತಾ ಸಿನೀಮಾ! ಮೆಂಟಲ್ ಮಂಜ, ಬದ್ಮಾಶ್ ಬಸವ, ಮಚ್ಚು ಮಾದ, ಕತರ್ನಾಕ್ ಕೆಂಚ, ಬಿರ್ಯಾನಿ ಬೀರ-ಇಂತಾವೇ ಈಗ ಜನಪ್ರಿಯ ಟೈಟಲ್ಗಳು ಸಾರ್! ನಾನು ಸಿನಿಮಾ ಮಾಡೋಕೆ ಮುಂಚೆ ಮಾಕರ್ೆಟ್ ಸವರ್ೆ ಮಾಡಿ ಆಮೇಲೆ ಡಿಸೈಡ್ ಮಾಡಿದ್ದು ಸಾರ್! ಕನ್ನಡ ಸಿನೀಮಾ ಫೀಲ್ಡಲ್ಲಿ ತಿಂಗಳಿಗೆ ಐದು ರೌಡಿಸಂ ಸಿನೀಮಾ ರಿಲೀಸ್ ಆಗ್ತಿದ್ದಾವೆ ಸಾರ್! ಎಲ್ಲಾ ಸಖತ್ತಾಗಿ ಕಾಸು ಮಾಡ್ತಿದ್ದಾವೆ! ನಾವೂ ಕೊನೇ ವರ್ಷದಲ್ಲಿ ಸ್ಟೇಜ್ ಮೇಲೆ ಮಚ್ಚು ಹಿಡ್ಕಂಡು ಡ್ಯಾನ್ಸ್ ಮಾಡಿ ನಿಮ್ಕೈಲಿ ಉಗಿಸ್ಕೊಂಡ್ವಲ್ಲ ಸಾರ್!’
ಕಲ್ಲೇಶಿಯ ಮಾತು ಕೇಳುತ್ತಾ ಮೂಕನಾಗಿದ್ದೆ. ಬಾಯಿಂದ ಒಂದೇ ಒಂದು ಮಾತು ಬಾರದ ಶಬ್ದಮುಗ್ಧ ಸ್ಥಿತಿಯಲ್ಲಿದ್ದೆ!
‘ಟೀ ಕುಡೀರಿ ಸಾರ್, ತಣ್ಣಗಾಗ್ತಿದೆ’ ಕಲ್ಲೇಶಿ ಎಚ್ಚರಿಸಿದ.
ಸಾವರಿಸಿಕೊಂಡು ಟಿ ಕಪ್ಪನ್ನು ಕೈಗೆತ್ತಿಕೊಂಡೆ.
‘ಸ್ಟೋರಿ ಕೇಳ್ಲೇ ಇಲ್ಲವಲ್ಲ ಸಾರ್?’
‘ಸ್ಟೋರಿ ನಾನೇ ಹೇಳ್ತೀನಿ ಕೇಳು. ಹೀರೋ ಹಳ್ಳಿಯಿಂದ ಕೆಲ್ಸ ಹುಡುಕಿಕೊಂಡು ಬೆಂಗ್ಳೂರಿಗೆ ಬರ್ತಾನೆ. ಮೈಮುರಿದು ದುಡಿಯೋಕೆ ಶುರು ಮಾಡ್ತಾನೆ! ರಸ್ತೇಲಿ ಯಾವನೋ ಒಬ್ಬನ್ನ ರೌಡಿಗಳು ಮಚ್ಚು ಲಾಂಗು ಹಿಡ್ಕೊಂಡು ಅಟ್ಯಾಕ್ ಮಾಡ್ತಾರೆ! ಹೀರೋ ರೌಡಿಗಳ ಕೈಕಾಲು ಮುರೀತಾನೆ. ಬಚಾವಾದವನು ಹೀರೋನ ರೌಡಿಸಂಗೆ ಇಳಿಸ್ತಾನೆ! ಅವರವ್ವ ಅವನ್ನ ಹುಡಿಕಿಕೊಂಡು ಬೆಂಗ್ಳೂರಿಗೆ ಬರ್ತಾಳೆ! ಸೆಂಟಿಮೆಂಟ್ಸು..ಮೆಲೋಡ್ರಾಮಾ..! ಹೀರೋ ಆಗರ್ಭ ಶ್ರೀಮಂತನ ಮಗಳನ್ನ ಲೌ ಮಾಡ್ತಾನೆ..ಸಾರಿ..ಇಲ್ಲ ಆಗರ್ಭ ಶ್ರೀಮಂತನ ಮಗಳು ರೌಡೀನ ಯಾನೆ ಹೀರೋನ ಲೌ ಮಾಡ್ತಾಳೆ… ಸಿನೀಮಾದಲ್ಲಿ ಯಾವಾಗಲೂ ಹೀರೋಗಳೇ ಅಲ್ಲವೇ ಲೌ ಮಾಡಿಸಿಕ್ಕೊಳ್ಳೋರು!’
‘ವಾಹ್..ವಾಹ್..ಸಖತ್ತಾಗಿ ಹೇಳೀಬಿಟ್ರಲ್ಲ ಸಾರ್..! ನಿಮಗೆ ಹೆಂಗೆ ಗೊತ್ತಾಯ್ತು ಸಾರ್..ನನ್ನ ಸಿನೀಮಾ ಕಥೆ?’
‘ರೌಡಿಸಂ ಸಿನಿಮಾ ಕಥೆಗಳೆಲ್ಲಾ ಹೀಗೇ ಅಲ್ವಾ ಕಲ್ಲೇಶಿ’
‘ನಾಡಿದ್ದು ಸಿನೀಮಾ ರಿಲೀಜು ಸಾರ್. ಫಸ್ಟ್ ಶೋ ಪ್ರೆಸ್ ಮತ್ತು ಅಹ್ವಾನಿತರಿಗೆ..ತಾವೂ ಬರ್ಬೇಕು ಸಾರ್! ಅದೂ ಇದೂ ಹೇಳಿ ತಪ್ಪಿಸ್ಕೋಬೇಡಿ ಸಾರ್..!’
‘ಕಲ್ಲೇಶಿ, ನಿಂಗೇ ಗೊತ್ತು, ಕ್ಲಾಸಿದ್ರೆ ನಾನೆಲ್ಲಿಗೂ ಬರೊಲ್ಲಾಂತ!’
‘ಸಾರ್..ನೀವು ಛೇಂಜೇ ಅಗೊಲ್ಲವಾ ಸಾರ್..? ಹೋಗ್ಲಿ ಆಶೀರ್ವಾದ ಮಾಡಿ ಸಾರ್’
ಕಲ್ಲೇಶಿ ತಲೆ ತಗ್ಗಿಸಿ ನಿಂತ.
ಕನ್ನಡ ಚಿತ್ರರಂಗದ ಗತಿ ನೆನೆಸಿ ಗಂಟಲುಬ್ಬಿ ಬಂತು! ರಾಷ್ಟ್ರಪ್ರಶಸ್ತಿ ತಗೋತಾ ಇದ್ದ ಕನ್ನಡ ಸಿನಿಮಾರಂಗ ಈ ದುಸ್ಥಿತಿಗೆ ಏಕೆ ಬಂತು? ಇದರಿಂದ ಈಚೆ ಯಾವಾಗ ಬಂದೀತು?
ಕಲ್ಲೇಶಿಯ ತಲೆಯ ಮೇಲಿಡಲು ಹೋದ ಕೈ ಅಲ್ಲೇ ನಿಂತಿತು!
‘ನಾನಿನ್ನು ಬರ್ತೀನಿ ಸಾರ್..ಇನ್ನೂ ಬಾಳಾ ಕೆಲಸ ಇದೆ!’
ಕಲ್ಲೇಶಿ ತುರಾತುರಿಯಲ್ಲಿ ಹೊರಟ.
‘ಕಲ್ಲೇಶಿ’
ಕರೆದೆ.
‘ಸಾರ್..’ ಹಿಂದೆ ತಿರುಗಿದ ಕಲ್ಲೇಶಿ.
‘ಇದೇ ನಿನ್ನ ಕೊನೇ ಸಿನೀಮಾ ಆಗಲಿ..ಮತ್ತೆ ಇಂತಾ ಕೆಲಸ ಮಾಡಾಬೇಡ’ ಎಂದು ಹೇಳಬೇಕೆನಿಸಿತು. ಒಬ್ಬ ಕಲ್ಲೇಶಿಗೇನೋ ಈ ಮಾತು ಹೇಳಬಹುದು..ಆದರೆ ಹತ್ತಾರು ಕಲ್ಲೇಶಿಗಳಿಗೆ ಹೇಗೆ ಹೇಳಲಿ? ಈ ವಿವೇಚನೆ ಬಂದಾಗ ಮಾತುಗಳು ಗಂಟಲಲ್ಲೇ ಉಳೀದವು.
‘ಏನಿಲ್ಲ ಕಲ್ಲೇಶಿ’
ಕಲ್ಲೇಶಿ ಮರೆಯಾದ.
‘ಹಿಡಿ ಬಡಿ ಕೊಚ್ಚು’ ನಾಡಿದ್ದು ರಿಲೀಸು ಸಾರ್!’ ಕಲ್ಲೇಶಿಯ ಮಾತು ಕಿವಿಯಲ್ಲಿ ಗುಂಯ್ಗುಟ್ಟಿತು!
]]>
navirada chati etu nammma cinema mandige
hasyavoo idhe, vyangyavoo idhe olle mesagoo ide
tumba chennagide
ನಮ್ಮ ಕನ್ನಡ ಚಿತ್ರರಂಗದ ಇಂದಿನ ಅವಸ್ಥೆ ಇದು.. ಚೆನ್ನಾಗಿದೆ ಸರ್ ನಿಮ್ಮ ಬರಹ..
nimma lekhana Odhidare nachi tale thaggisbEku namma cinemadavaru!
tumba chennagidhe