ಟೈ೦ ಪಾಸ್ ಕಡ್ಲೆ ಕಾಯ್ : ಅನ೦ತಮೂರ್ತಿಯವರಿಗೆ ಶಾಮಣ್ಣ ಕಾರ್ ತೋರಿಸಿದ್ದು

ಸೋಫಾಸೆಟ್ ಬೇಡ ಎಂದ ಮೇಷ್ಟ್ರು!

ಕೆ ಅಕ್ಷತಾ

ಅನಂತಮೂರ್ತಿಯವರು ಇಂಗ್ಲೆಂಡಿಂದ ಬಂದ ನಂತರ ಮೈಸೂರಿನ ವಿ.ವಿ.ಪುರಂ ಪೊಲೀಸ್ಸ್ಟೇಷನ್ ಹತ್ತಿರದ ಔಟ್ಹೌಸ್ ಒಂದರಲ್ಲಿ ಬಾಡಿಗೆಗಿದ್ದರು. ಹೀಗೊಮ್ಮೆ ಅವರ ಮನೆಗೆ ಹೋದಾಗ ಅವರು ಮತ್ತು ಎಸ್ತರ್ ಇಬ್ಬರೂ ‘ಒಂದು ಒಳ್ಳೆಯ ಕಾರು ಎಲ್ಲಾದರೂ ಮಾರಾಟಕ್ಕಿದ್ದರೆ ಹೇಳು. ಸೆಕೆಂಡ್ ಹ್ಯಾಂಡಾದ್ರೂ ಪರವಾಗಿಲ್ಲ, ನಮಗೆ ಕಾರಿನ ಅವಶ್ಯಕತೆ ಬಹಳ ಇದೆ’ ಎಂದರು.

ಹೋಟೆಲ್ನ ಮಾಲೀಕರ ಹತ್ತಿರ ಮಾರೀಸ್ 8 ಕಾರು ಮಾರಾಟಕ್ಕಿದೆ ಎಂದು ತಿಳಿದಾಗ ಮೇಷ್ಟ್ರು ಹೇಳಿದ್ದು ನೆನಪಾಗಿ ಹೋಗಿ ವಿಚಾರಿಸಿದೆ. ನನ್ನ ತಂದೆಯವರ ಬಳಿಯು ಇದೇ ಮಾರಿಸ್ 8 ಕಾರೇ ಇದ್ದಿದ್ದರಿಂದ ಅದನ್ನು ಓಡಿಸಿ ಅಭ್ಯಾಸವಿತ್ತು. ಕಾರಿನ ಮಾಲೀಕರು ಸಣ್ಣ ಪುಟ್ಟ ರಿಪೇರಿ ಇದೆ ಅದನ್ನು ಮಾಡಿಸಿಕೊಡುವುದಾಗಿ ತಿಳಿಸಿದರೂ ಅದನ್ನು ಆಮೇಲೆ ಮಾಡಿಸಿ ನಾನು ಮೊದಲು ಕಾರಿನ ಟ್ರಯಲ್ ತೋರಿಸಿಕೊಂಡು ಬರ್ತೀನಿ ಎಂದು ಕಾರನ್ನು ಗ್ಯಾರೇಜಿಂದ ಹೊರ ತೆಗೆಸಿಕೊಂಡು ಹೊರಟೆ. ಕಾರಿನ ಒಂದು ಬಾಗಿಲು ಕಿತ್ಕಂಡು ಬಂದಿತ್ತು ಅದನ್ನು ಹಗ್ಗ ಬಿಗಿದು ಕಟ್ಟಿದ್ದರು. ಅದೆಲ್ಲ ಆಮೇಲೆ ಸರಿ ಮಾಡಿಸಿದ್ರೆ ಆಯಿತು ಎಂದು ಯೋಚಿಸಿದೆ. ಮೇಷ್ಟ್ರಿಗೆ ಟ್ರಯಲ್ ತೋರಿಸಿ ಈ ಕಾರನ್ನು ಅವರಿಗೆ ಕೂಡಲೆ ಖರೀದಿಗೆ ಕೊಡಿಸಬೇಕೆಂಬ ಆಸೆ ನನ್ನದು. ಮೇಷ್ಟ್ರ ಮನೆಗೆ ಹೋಗಿ ಅವರು ಮತ್ತು ಎಸ್ತರ್ ಇಬ್ಬರನ್ನು ಹಿಂದಿನ ಸೀಟಿನಲ್ಲಿ ಕೂರಿಸಿಕೊಂಡು ಟ್ರಯಲ್ ತೋರಿಸಲು ಸಯ್ಯಾಜಿರಾವ್ ರಸ್ತೆ ಕಡೆಗೆ ಹೊರಟೆ. ಹೀಗೆ ಕರೆದುಕೊಂಡು ಹೊರಟ ಸಂದರ್ಭದಲ್ಲಿ ಫೌಂಟನ್ ವ್ಯೂ ಹೊಟೇಲ್ ಎದರಿನ ಸರ್ಕಲ್ನಲ್ಲಿ ರಾಂಗ್ ಸೈಡಿಂದ ಬಂದ ಎರಡು ಟಾಂಗಾ ಗಾಡಿಗಳು ಒಮ್ಮೆಲೆ ನಮ್ಮ ಕಾರಿಗೆ ಡಿಕ್ಕಿ ಹೊಡೆದವು. ಇದರ ಪರಿಣಾಮವಾಗಿ ಕಾರಿನ ಮುಂಭಾಗದ ಎರಡು ಬಾಗಿಲುಗಳು ಹಾಗೂ ಮಡ್ ಗಾರ್ಡ್ ಕಿತ್ತುಕೊಂಡು ಬಿದ್ದವು. ಬಾಗಿಲಂತೂ ಟಾಂಗಾದ ಕಡಾಣಿಗೆ ಸಿಲುಕಿಕೊಂಡು ಎಳೆದುಕೊಂಡು ಹೋಗ್ತಾ ಇತ್ತು. ಯಾವ ಮುನ್ಸೂಚನೆಯು ಇಲ್ಲದೆ ನಡೆದ ಈ ಅಪಘಾತದಿಂದ ಕಂಗಾಲಾಗಿ ಹೋಗಿದ್ದ ನಾನು ಬೇರೇನೂ ಉಪಾಯ ಹೊಳೀದೆ ಸ್ಟೇರಿಂಗ್ ಗಟ್ಟಿಯಾಗಿ ಹಿಡಿದುಕೊಂಡು ನಡಗುತ್ತಾ ಕೂತಿದ್ದರೆ, ಹಿಂದೆ ಕೂತಿದ್ದ ಎಸ್ತರ್ ಮತ್ತು ಮೇಷ್ಟ್ರು ಇಬ್ಬರೂ ಹಿಂದ್ಗಡೆ ಬಾಗಿಲು ತೆಕ್ಕಂಡು ರಸ್ತೆಗೆ ಜಿಗಿದು ನಿಂತಿದ್ದರು. ಸುತ್ತ ಮುತ್ತಲ ಜನರೆಲ್ಲ ಏನಾಯ್ತೋ ಎಂದು ಗಾಬರಿಯಿಂದ ಓಡಿ ಬಂದು ನಮ್ಮ ಸುತ್ತ ನೆರೆದರು. ಇಷ್ಟೆಲ್ಲಾ ನಡೆದಿದ್ದು ಟಾಂಗಾದವರ ತಪ್ಪಿನಿಂದಲೇ ಆಗಿದ್ದರೂ ಅವರಿಬ್ಬರೂ ಒಂದಾಗಿ ನನ್ನದೇ ತಪ್ಪು ಅಂತ ಜಗಳಕ್ಕೆ ಬಂದರು. ಜೊತೆಗೆ ಸರ್ಕಲ್ನಲ್ಲಿ ನಿಂತಿದ್ದ ಪೊಲೀಸನವನಿಗೆ ನನ್ನ ಬಗ್ಗೆ ದೂರು ನೀಡಿದರು. ನಮ್ಮ ಸುತ್ತ ಗುಜು ಗುಜು ವಾತಾವರಣ ಸೃಷ್ಠಿಯಾಯಿತು. ಅಷ್ಟೊತ್ತಿಗೆ ಫೌಂಟನ್ ವ್ಯೂ ಮಾಲೀಕ ಮೇಷ್ಟ್ರಿಗೆ ಪರಿಚಿತನಾದ ಬೆಳ್ಳಿಯಪ್ಪ, ಜನರ ಗುಂಪಿನಲ್ಲಿದ್ದವರು ಮುಂದೆ ಬಂದು ವಿಚಾರಣೆ ಮಾಡಿ ಟಾಂಗಾದವನಿಗೆ ಬೈದು, ಪೊಲೀಸರಿಂದ ನನ್ನನ್ನು ಬಿಡಿಸಿದರು. ಜೊತೆಗೆ ಬಿದ್ದು ಹೋದ ಬಾಗಿಲುಗಳನ್ನು ಕಾರೊಳಗೆ ಇಟ್ಟುಕೊಂಡು ಮೊದಲು ಇಲ್ಲಿಂದ ಜಾಗ ಖಾಲಿ ಮಾಡಿ ಎಂದು ನನಗೆ ಎಚ್ಚರಿಕೆ ನೀಡಿದರು. ನನ್ನನ್ನು ಮತ್ತು ನಾನು ತಂದ ಕಾರಿನ ಸ್ಥಿತಿಯನ್ನು ನೋಡುತ್ತಾ ನಿಂತಿದ್ದ ಮೇಷ್ಟ್ರು ನಗುತ್ತಾ ‘ಶಾಮಣ್ಣ, ನಾನು ಕಾರು ಬೇಕಂತ ಕೇಳಿದರೆ ನೀನು ಸೋಫಾಸೆಟ್ ತಗಂಬಂದಿದೀಯಲ್ಲ. ತುಂಬಾ ಚೆನ್ನಾಗಿರೋ ಸೋಫಾ ಸೆಟ್ ನಮ್ಮನೇಲೆ ಇದೆ. ಇನ್ನೊಂದು ಇಡಕ್ಕೆ ಜಾಗ ಇಲ್ಲ. ಮೊದಲು ಇದನ್ನು ಇದರ ಮಾಲೀಕರಿಗೆ ವಾಪಾಸ್ ಕೊಟ್ಟು ಬಾ. ನಾನು ಎಸ್ತರ್ ನೀ ಬರೋವರೆಗೆ ಕಾಫಿ ಹೌಸ್ನಲ್ಲಿ ಕಾದಿರ್ತೇವೆ’ ಎಂದರು. ನಾನು ಕಾರಿಂದ ಇಳಿದು ಕಾರನ್ನು ಹತ್ತಿರದಿಂದ ನೋಡಿದಾಗ ಮೇಷ್ಟ್ರು ಹೇಳಿದಂತೆಯೆ ಮಡ್ ಗಾರ್ಡ್ ಮತ್ತು ಬಾಗಿಲುಗಳನ್ನು ಕಳೆದುಕೊಂಡು ಕಾರು ಥೇಟ್ ಸೋಫಾಸೆಟ್ಟಿನಂತಯೇ ರಸ್ತೆಯ ನಡು ಮಧ್ಯದಲ್ಲಿ ನಿಂತಿತ್ತು ಅಲ್ಲ ಕುಳಿತಿತ್ತು.]]>

‍ಲೇಖಕರು G

May 16, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬಿರಿಯಾನಿಯಿಂದ ಫಿರ್ನಿವರೆಗೆ..

ಬಿರಿಯಾನಿಯಿಂದ ಫಿರ್ನಿವರೆಗೆ..

ಕೆ ಮುದ್ದುಕೃಷ್ಣ  ಮೈಸೂರಿಗರಿಗೆ ಒಂದು ಸಿಹಿ ಸುದ್ದಿ. ಬಹಳ ವರ್ಷಗಳಿಂದ ದೊಡ್ಡ ಚರ್ಚ್ ಬಳಿ ಮಾತ್ರವೇ ಇದ್ದ ಪ್ರಸಿದ್ದ “ನಶೇಮನ್” ಹೋಟೆಲ್ ಈಗ...

ಪೂಜೆ!!

ಪೂಜೆ!!

ಎಸ್.ಜಿ.ಶಿವಶಂಕರ್ ನನ್ನ ಚಡ್ಡಿ ಫ್ರೆಂಡು ಸುಬ್ಬು ಯಾನೆ ಸುಭಾಶ್ ಲಂಚ್‍ಗೆ ಮುಂಚೆ ಮನೆಗೆ ಹೋಗಿದ್ದು ತಿಳಿದು ಆತಂಕಗೊಂಡೆ. ಕಾರಣ...

ಇದು ನನ್ನ ಸವಾಲ್..

ಇದು ನನ್ನ ಸವಾಲ್..

ನಾಗೇಂದ್ರ ಶಾ  ಹೀಗೊಂದು ಹೋಟ್ಲು ರಾಜರಾಜೇಶ್ವರಿ ನಗರದಲ್ಲಿ. ಹೆಸರಿಗೂ ಒಳಗಿನ ಊಟ, ತಿಂಡಿಗೂ ಸಂಬಂಧವಿಲ್ಲ. ಒಳ ಹೊಕ್ಕರೆ ಅಪ್ಪಟ ದೇಸಿ ಊಟ....

೧ ಪ್ರತಿಕ್ರಿಯೆ

  1. ಕೆ.ಈ.ಸಿದ್ದಯ್ಯ ಮತ್ತು ರಂಗರಾಜ್

    ಶಾಮಣ್ಣ ಅವರು ಅನಂತಮೂರ್ತಿ ಅವರಿಗೆ ಕಾರು ತೋರಿಸಿದ ಪ್ರಸಂಗ ಓದಿ ಕಣ್ಣಲ್ಲಿ ನೀರು ಬರುವಂತೆ ನಕ್ಕು ಬಿಟ್ಟೆವು. ಗೆಳೆಯ ಪತ್ರಕರ್ತ ಮಿತ್ರ ರಂಗರಾಜ್ ಈಗಲೂ ಆ ಪ್ರಸಂಗವನ್ನು ನೆನಪಿಸಿಕೊಂಡು ನಕ್ಕು ನಮ್ಮೆಲ್ಲ ಒತ್ತಡಗಳನ್ನು ಕ್ಷಣ ಕಾಲ ಮರೆಯುತ್ತೇವೆ. ಬದುಕಿನ ವಾಸ್ತವದ ಚಿತ್ರಣವನ್ನು ರಸವತ್ತಾಗಿ ವಿವರಿಸಿದ ಬಿಳಿ ಗಡ್ಡದ ಹಿರಿಯ ಶಾಮಣ್ಣ ನಗುವ ರೀತಿಯೇ ಅಲೆಗಳನ್ನು ಸೃಸ್ಟಿಸುತ್ತದೆ. ಕಾರು ಸೋಫಾ ಸೆಟ್ ನಂತೆ ಪರಿವರ್ತನೆ ಗೊಂಡ ಪರಿ ವಿಸ್ಮಯ. ಮೈಸೂರಿನ ಆ ಸರ್ಕಲ್ ನಲ್ಲಿ ಟಾಂಗ ಗಾಡಿ ಕಾರಿಗೆ ಗುದ್ದಿ ಇಡಿ ಕಾರಿನ ಬಾಗಿಲು ಕಿತ್ತುಕೊಂಡು ಹೋಗಿ ಸೋಫಾ ಸೆಟ್ಟನ್ನು ಟೈರ್ ಮೇಲೆ ಇಟ್ಟಂತೆ ಕಂಡು ಬರುತ್ತಿದ್ದ ಕಾರನ್ನು ನೋಡಿದರೆ ಎಂತವರಿಗೂ ನಗು ಬರದೆ ಇರದು. ಇದನ್ನು ನೋಡಿದ ಅನಂತ ಮೂರ್ತಿ ಮತ್ತು ಪತ್ನಿ ಎಸ್ತರ್ ಓಡಿ ಹೋಗದೆ ಇನ್ನೇನು ಮಾಡಿಯಾರು!
    ಕೆ.ಈ.ಸಿದ್ದಯ್ಯ ಮತ್ತು ರಂಗರಾಜ್ ತುಮಕೂರು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: