ಟ್ಯಾಗೋರ್, ಬೇಂದ್ರೆ ಹಾಗೂ ನಾನು..

ಹೀಗೊಂದು ನೆನಪಿನ ಮೆಲುಕು… ಗೋಪಾಲ ವಾಜಪೇಯಿ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರಿಯಪ್ಪನವರು ವಿಶ್ವಕವಿ ರವೀಂದ್ರನಾಥ ಟಾಗೋರರ ‘ಜನ್ಮಭೂಮಿ’ ಎಂಬ ಕವನವನ್ನು ಇಂಗ್ಲಿಷಿಗೆ ಅನುವಾದಿಸಿದ್ದು, ಅದು ೧೯೭೨ರಲ್ಲಿ ‘ಭವನ್ಸ್ ಜರ್ನಲ್ ‘ನಲ್ಲಿ ಪ್ರಕಟವಾಗಿತ್ತು. ಅವರು ಬಹುಶಃ ಅದನ್ನು ಮೂಲ ಬಂಗಾಲಿಯಿಂದಲೇ ಅನುವಾದಿಸಿದ್ದಿರಬೇಕು. ನಾನು ಆಗಷ್ಟೇ ಇಪ್ಪತ್ತರ ತರುಣ. ಕತೆ, ಕವಿತೆ ಬರೆಯತೊಡಗಿದ್ದೆ. ಎರಡು ಪುಟಗಳ ಆ ‘ಜನ್ಮಭೂಮಿ’ ಕವಿತೆ ತುಂಬ ಇಷ್ಟವಾಯಿತು. ಕೂಡಲೇ ಅದನ್ನು ಕನ್ನಡಕ್ಕೆ ಅನುವಾದಿಸಿದೆ. ಹುಬ್ಬಳ್ಳಿಯಲ್ಲೇ ಇದ್ದ ‘ಕನ್ನಡದ ರವೀಂದ್ರ’ ಎಂದೇ ಹೆಸರಾದ ಶ್ರೀ ಪ್ರಹ್ಲಾದ ನರೇಗಲ್ ಮಾಸ್ತರರಿಗೆ ತೋರಿಸಿದೆ. ಅವರು ಮೆಚ್ಚಿಕೊಂಡದ್ದಲ್ಲದೆ, ”ಇದನ್ನ ಬೇಂದ್ರೆ ಮಾಸ್ತರ ಕಣ್ಣಿಗೆ ಹಾಕು,” ಎಂದರು. ಬೇಂದ್ರೆ ಮಾಸ್ತರ ಕಣ್ಣಿಗೆ ಹಾಕಬೇಕೆಂದರೆ ಮೊದಲು ನಾನು ಅವರ ಕಣ್ಣಿಗೆ ಬೀಳಬೇಕು. ಒಂದು ಶ್ರಾವಣ ಸೋಮವಾರ ಧಾರವಾಡಕ್ಕೆ ಹೋದೆ. ದಿನವಿಡೀ ಪ್ರಯತ್ನಿಸಿದರೂ ಶ್ರಾವಣದ ಕವಿಯ ದರ್ಶನ ಭಾಗ್ಯ ಸಿಗಲಿಲ್ಲ. ಮತ್ತೆ ಮತ್ತೆ ಯತ್ನಿಸಿದೆ. ಅಂತೂ ಪ್ರಯತ್ನಕ್ಕೆ ಫಲ ಸಿಕ್ಕಿತು. ಆಗ ಸಂಜೆಯಾಗಿತ್ತು. ಜತೆಗೆ ಮಳೆ ಬೇರೆ ಜಿನುಗುತ್ತಿತ್ತು. ಅದನ್ನು ಲೆಕ್ಕಿಸದೆ ಸಾಧನಕೇರಿಯ ‘ಶ್ರೀಮಾತಾ’ದ ಬಾಗಿಲು ತಟ್ಟಿದೆ. ವರಕವಿಗಳು ಕಿಟಕಿಯಲ್ಲಿ ಇಣಿಕಿಕ್ಕಿ ನೋಡಿದರು. ”ಯಾರು?” ಅಂದರು. ”ನರೇಗಲ್ ಮಾಸ್ತರು ನಿಮ್ಮನ್ನ ಭೆಟ್ಟಿ ಆಗಿ ಬಾ ಅಂತ ಹೇಳಿ ಕಳಿಸ್ಯಾರ…” ಅಂದೆ. ”ನರೇಗಲ್ ಕಳಿಸ್ಯಾರs…? ಬಾ ಹತ್ತರ,” ಎಂದರು. ನನ್ನ ನನ್ನ ಊರು, ಹೆಸರು, ಕೆಲಸ ಎಲ್ಲವನ್ನೂ ಕೇಳಿದರು. ನನ್ನ ಊರು ಮತ್ತು ಪೂರ್ವಜರೆಲ್ಲರ ಬಗ್ಗೆ ಎಷ್ಟೋ ವಿಷಯಗಳನ್ನು ಹೇಳಿದರು. ”ಆತು, ಈಗ ಬಂದ ಕಾರಣಾ ಹೇಳು…” ಅಂದರು. ನಾನು ಹಿಂಜರಿಯುತ್ತಲೇ ಅನುವಾದಿಸಿದ್ದ ಕವನವದ ಪ್ರತಿಯನ್ನು ಅವರಿಗೆ ಕೊಟ್ಟೆ. ವರಕವಿಗಳು ಒಮ್ಮೆ ಓದಿ ನನ್ನನ್ನು ನೋಡಿದರು. ಮತ್ತೆ ಕವನ ಓದಿದರು. ಮತ್ತೆ ನನ್ನನ್ನು ನೋಡುತ್ತಲೇ ಕೂತಲ್ಲಿಂದ ಎದ್ದರು. ನನಗೆ ನಡುಕ ಶುರುವಾಯಿತು. ಎದ್ದು ನಿಂತೆ. ಅವರು ನೇರ ನನ್ನ ಬಳಿ ಬಂದವರೇ ಬೆನ್ನು ತಟ್ಟಿ, ”ಭಾಳಾ ಚೊಲೋ ಆಗೇದೋ… ಖರೇನs ಭಾಳ ಚೊಲೋ ಆಗೇದ…” ಎಂದು ಹೇಳುತ್ತಲೇ ಕವನದ ಕೊನೆಯಲ್ಲಿ ‘ಓದಿ ಮೆಚ್ಚಿದ್ದೇನೆ..’ ಎಂದು ಬರೆದು ಸಹಿ ಮಾಡಿದರು. ಆ ನಂತರ ಕೈಗೆ ಸಕ್ಕರೆ ಹಾಕಿದರು. (ಅವರು ಕೈಗೆ ಸಕ್ಕರೆ ಹಾಕಿದರೆಂದರೆ ‘ಹೋಗಿ ಬನ್ನಿ’ ಎಂದು ಹೇಳುತ್ತಿದ್ದಾರೆಂದೇ ಅರ್ಥ.) ಉಬ್ಬಿ ಹೋಗಿದ್ದ ನಾನು ಅವರಿಗೆ ನಮಸ್ಕರಿಸಿ ಹೊರಡಲು ಅನುವಾಗುತ್ತಿದ್ದಂತೆಯೇ, ”ಇದು ನನ್ನ ಹತ್ರನs ಇರ್ಲಿ ಬಿಡು…” ಎಂದು ಪ್ರತಿಯನ್ನು ಎತ್ತಿಟ್ಟುಕೊಂಡರು. ವರಕವಿಗಳು ಓದಿ ಮೆಚ್ಚಿ ಸಹಿ ಹಾಕಿದ ಕವನದ ಪ್ರತಿ ನನ್ನ ಬಳಿ ಇದ್ದರೆ ಒಳ್ಳೆಯದಾಗುತ್ತಿತ್ತಲ್ಲಾ ಎಂದುಕೊಳ್ಳುತ್ತಲೇ ಹುಬ್ಬಳ್ಳಿಗೆ ಮರಳಿದೆ. ಅದಾಗಿ ಒಂದೆರಡು ತಿಂಗಳುಗಳು ಕಳೆದಿರಬೇಕು. ನಾನು ಕೆಲಸ ಮಾಡುತ್ತಿದ್ದ ‘ಕರ್ಮವೀರ’ ಪತ್ರಿಕೆಯ ಕಾರ್ಯಾಲಯಕ್ಕೆ ಒಬ್ಬರು ವೃದ್ಧರು ಬಂದರು. ಬಾಗಿಲಲ್ಲಿದ್ದ ಸಿಪಾಯಿಯನ್ನು ಏನೋ ಕೇಳಿ, ನೇರಬಂದು, ನನ್ನ ಮೇಜಿನೆದುರಿದ್ದ ಕುರ್ಚಿಯಲ್ಲಿ ಕೂತರು. ಯಾರೋ ಲೇಖನ ಕೊಡಲು ಬಂದಿರಬೇಕು ಎಂದುಕೊಂಡೆ. ಉಹ್ಞು, ಅವರು ಬಗಲು ಚೀಲದಿಂದ ‘ಪ್ರದೀಪ’ ಎಂಬ ಒಂದು ವಿಶೇಷಾಂಕವನ್ನು ತೆಗೆದು ನನಗೆ ಕೊಡುತ್ತ, ”ಇದರಾಗ ನಿಮ್ಮ ಕವನ ಪ್ರಕಟ ಆಗೇದ…” ಎಂದವರೇ ಮತ್ತೆ ಚೀಲದಿಂದ ಇನ್ನೊಂದು ಲಕೋಟೆಯನ್ನು ತೆರೆದು ಮುಂದಿಡುತ್ತ, ”ಇದು ನಿಮ್ಮ ಕವನದ ಮೂಲ ಹಸ್ತಪ್ರತಿ,” ಎಂದರು. ಅವರು ಬೆಳಗಾವಕರ್ ರಾಮಚಂದ್ರರಾಯರು. ವಿನಯಮೂರ್ತಿಯಾಗಿದ್ದ ಅವರ ಕಾವ್ಯನಾಮ ‘ವಿನೀತ ರಾಮಚಂದ್ರರಾಯ.’ ಅಪ್ಪಟ ದೇಶಭಕ್ತರಾಗಿದ್ದ ಅವರು ಬಲು ಕಷ್ಟಪಟ್ಟು ‘ಪ್ರದೀಪ’ವೆಂಬ ಆ ರಾಷ್ಟ್ರೀಯ ಆಧ್ಯಾತ್ಮಿಕ ಮಾಸಪತ್ರಿಕೆಯನ್ನು ಸಂಪಾದಿಸಿ ಪ್ರಕಟಿಸುತ್ತಿದ್ದರು. ಅವೊತ್ತು ಅವರು ನನಗಿತ್ತದ್ದು ‘ಸ್ವಾತಂತ್ರ್ಯೋತ್ಸವ ವಿಶೇಷಾಂಕ.’ ವರಕವಿಗಳ ಔದಾರ್ಯದಿಂದ ನನ್ನ ಆರಂಭಿಕ ಅನುವಾದವೊಂದು ಆ ವಿಶೇಷಾಂಕದಲ್ಲಿ ಪ್ರಕಟವಾದದ್ದು ನಾನು ಮರೆಯಲಾರದ ಸಂಗತಿ. ಈಗ ವಿಶ್ವಕವಿಗಳ ೧೫೦ನೆಯ ಜನ್ಮವರ್ಷಾಚರಣೆ… ಫೀಲ್ಡ್ ಮಾರ್ಷಲ್ ಕೆ. ಎಂ. ಕಾರಿಯಪ್ಪನವರ ೧೧೩ನೆಯ ಜನ್ಮವರ್ಷಾಚರಣೆ… ವರಕವಿ ಬೇಂದ್ರೆಯವರ ೧೧೬ನೆಯ ಜನ್ಮವರ್ಷಾಚರಣೆ… ಹೀಗಾಗಿ ಈ ನೆನಪಿನ ಮೆಲುಕು…  ]]>

‍ಲೇಖಕರು G

February 1, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಐದು ದಶಕಗಳ ಹಿಂದೆ

ಐದು ದಶಕಗಳ ಹಿಂದೆ

ಶ್ಯಾಮಲಾ ಮಾಧವ ಕೋವಿಡ್ ಸಂಕಷ್ಟದ ಈ ದುಷ್ಕರ ಕಾಲದಲ್ಲಿ ಐದು ದಶಕಗಳ ಹಿಂದಿನ ದುರ್ಭರ ದಿನಗಳು ನೆನಪಾಗುತ್ತಿವೆ. ರೇಬಿಸ್ ಹಾಗೂ ಟೆಟನಸ್ ಬಗ್ಗೆ...

ಕಲಾಕೃತಿಗೆ ಜೀವವಾಗಿ ಬಂದವಳು…

ಕಲಾಕೃತಿಗೆ ಜೀವವಾಗಿ ಬಂದವಳು…

ರತ್ನರಾಯಮಲ್ಲ ಜೀವನದಲ್ಲಿ ಕೆಲವು ಸುಂದರ ಕ್ಷಣಗಳಾಗಿ ಬಂದವಳು ನೀನುನನ್ನ ನಾಲಿಗೆ ಮೇಲೆ ಹಲವು ಗಜಲ್ಗಳಾಗಿ ಬಂದವಳು ನೀನು  ಕಡು ಬಿಸಿಲಿನ...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: