ಡಬ್ಬಿಂಗ್ : ಸಮಸ್ಯೆಯ ಆಯಾಮಗಳು….. – ಮನು ಚಕ್ರವರ್ತಿ

ಡಬ್ಬಿಂಗ್ : ಸಮಸ್ಯೆಯ ಆಯಾಮಗಳು, ವಿರೋಧಾಭಾಸಗಳು, ವಿಪರ್ಯಾಸಗಳು

– ಎನ್. ಮನು ಚಕ್ರವರ್ತಿ

(ಕೃಪೆ ದ ಸ೦ಡೆ ಇ೦ಡಿಯನ್) ಸಾಹಿತ್ಯ ಕ್ಷೇತ್ರದಲ್ಲಿ ಅನುವಾದಕ್ಕೆ ಬೆಲೆ, ಗೌರವ, ಮನ್ನಣೆ ಅಪಾರವಾಗಿ, ನಿವರ್ಿವಾದವಾಗಿ ದೊರೆತಿದೆ. ಅನುವಾದ ಕ್ರಿಯೆಯನ್ನು ಸೃಜನಶೀಲ ಕ್ರಿಯೆಯಾಗಿಯೇ ಗುರುತಿಸಲಾಗಿದೆ. ಒಂದು ಸಮುದಾಯಕ್ಕೆ ಅನ್ಯ ಭಾಷೆಯ ಕೃತಿಗಳು ಅನುವಾದಗಳ ಮೂಲಕ ಬಂದಾಗ ಅವುಗಳನ್ನು ದೊಡ್ಡ ಕೊಡುಗೆಯಾಗಿ ಎಲ್ಲರೂ ಮುಕ್ತವಾಗಿ ಸ್ವೀಕರಿಸುತ್ತಾರೆ. ತಮ್ಮ ಭಾಷೆಗಳಿಗೆ, ಸಂಸ್ಕೃತಿಗಳಿಗೆ ಅನ್ಯಭಾಷಾ ಕೃತಿಗಳು ಮಾರಕ, ಅಪಾಯ ಎಂದು ಯಾರೂ ಆರೋಪ ಹೊರೆಸುವುದಿಲ್ಲ. ಸ್ಥಳೀಯ ಸಂಸ್ಕೃತಿಗೆ ಅನ್ಯ ಸಂಸ್ಕೃತಿಗಳ ಕೃತಿಗಳು ಬಂದಾಗ ಅವುಗಳನ್ನು ಒಂದು ಸಾಂಸ್ಕೃತಿಕ ಅನುಸಂಧಾನವನ್ನಾಗಿ ಸ್ವೀಕರಿಸಲಾಗುತ್ತದೆ. ಸ್ಥಳೀಯತೆಗೆ ಮತ್ತೊಂದು ಸಾಂಸ್ಕೃತಿಕ ನೆಲೆ ದಕ್ಕಿದಂತೆ ಈ ಪ್ರಕ್ರಿಯೆಯನ್ನು ವ್ಯಾಖ್ಯಾನಿಸಲಾಗುತ್ತದೆ. ಸಿನೆಮಾ ಜಗತ್ತಿಗೆ ಬಂದಾಗ ನೇರವಾಗಿ ಮತ್ತೊಂದು ಭಾಷೆಯಲ್ಲೇ ಚಿತ್ರಗಳು ಸ್ಥಳೀಯವಾಗಿ ಬಿಡುಗಡೆಯಾದಾಗ ಅದನ್ನು ಯಾರೂ, ಎಂದೂ ದೊಡ್ಡ ಅಪಾಯವೆಂದು ಪರಿಗಣಿಸುವುದಿಲ್ಲ. ಚಿತ್ರಗಳು ಯಾವ ಭಾಷೆ, ಸಂಸ್ಕೃತಿಯಿಂದ ಬಂದರೂ ಅವುಗಳನ್ನು ಸಹಜವಾಗಿಯೇ ಸ್ವೀಕರಿಸುವ ರೀತಿಯನ್ನು ಎಲ್ಲರೂ ಗಮನಿಸಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಬೇರೆ ಭಾಷೆಗಳ ಚಿತ್ತಗಳು ಡಬ್ ಆದಾಗ (ಇದನ್ನು ಮೌಖಿಕ ಅನುವಾದ ಎಂದು ಕರೆಯೋಣ) ಅನೇಕ ಬಗೆಯ ವಿರೋಧಗಳು ಎದ್ದು ಬರುವುದನ್ನು ಕಂಡಿದ್ದೇವೆ. ಕನರ್ಾಟಕದಲ್ಲಿ ಡಬ್ ಆದ ಚಿತ್ರಗಳ ವಿರುದ್ಧ ದೊಡ್ಡ ಆಂದೋಲನವೇ ಪ್ರಾರಂಭವಾಗಿದೆ. ಕೇವಲ ಚಿತ್ರರಂಗದ ಒಳಗಿರುವವರು ಮಾತ್ರ ಈ ವಿರೋಧವನ್ನು ವ್ಯಕ್ತಪಡಿಸುತ್ತಿಲ್ಲ. ಬದಲಾಗಿ ಸಾಂಸ್ಕೃತಿಕ ಕ್ಷೇತ್ರದ ಅನೇಕರು ಡಬ್ ಆದ ಬೇರೆ ಭಾಷೆಯ ಚಿತ್ರಗಳನ್ನು ಕನ್ನಡಕ್ಕೆ ಒದಗಿ ಬಂದಿರುವ ದೊಡ್ಡ ಶತ್ರುವೆಂದೇ ಕಾಣುತ್ತಿರುವ ಸಂಗತಿಯನ್ನು ನಾವು ಗಮನಿಸಬಹುದು. ಕನ್ನಡ ಭಾಷೆಗೆ, ಸಂಸ್ಕೃತಿಗೆ, ಕನ್ನಡ ಜನರ ಸಂವೇದನೆಗೆ ಡಬ್ ಆದ ಚಿತ್ರಗಳು (ಅದರಲ್ಲೂ ಕೆಳದಜರ್ೆಯ ಹಾಲಿವುಡ್ನ ಚಿತ್ರಗಳು ಮತ್ತು ಹಿಂದಿ, ತಮಿಳು, ತೆಲುಗು ಚಿತ್ರಗಳು) ದೊಡ್ಡ ರೀತಿಯಲ್ಲಿ ಹಾನಿಯನ್ನುಂಟುಮಾಡುವುದರಲ್ಲಿ ಸಂದೇಹವಿಲ್ಲ ಎಂಬ ಆಲೋಚನೆ ಈ ವಾದದ ಹಿಂದೆ ಇದೆ. ಇದನ್ನು ಸಾಂಸ್ಕೃತಿಕ ದುರಂತವೆಂದು ಬಣ್ಣಿಸಲಾಗುತ್ತಿದೆ. ಒಂದು ಸಮುದಾಯದ ಸದಭಿರುಚಿಯನ್ನು ನಾಶಮಾಡುವ ಶಕ್ತಿಯಾಗಿ ಡಬ್ ಆದ ಚಿತ್ರಗಳನ್ನು ಕಾಣಲಾಗುತ್ತಿದೆ. ಅಷ್ಟೇ ಅಲ್ಲದೆ ವ್ಯಾವಹಾರಿಕ ದೃಷ್ಟಿಯಿಂದಲೂ ಡಬ್ ಆದ ಚಿತ್ರಗಳನ್ನು ಕನ್ನಡ ಚಿತ್ರೋದ್ಯಮದ ಮಹಾ ದೊಡ್ಡ ಶತ್ರುವೆಂದೇ ಪರಿಗಣಿಸಲಾಗುತ್ತಿದೆ. ಬೇರೆ ಭಾಷೆಗಳ ಚಿತ್ರಗಳ ರಾಕ್ಷಸಾಕಾರದ ಬಂಡವಾಳದ ಎದುರು ಕನ್ನಡ ಚಿತ್ರಗಳು ಕೊಚ್ಚಿಹೋಗುತ್ತವೆ, ಅವುಗಳಿಗೆ ಮಾರುಕಟ್ಟೆಯಲ್ಲಿ ಯಾವ ಸ್ಥಾನವೂ ದಕ್ಕುವುದಿಲ್ಲ ಎಂಬ ವಾದ ಈ ನಿದರ್ಿಷ್ಟ ವಿರೋಧದಲ್ಲಿದೆ. ಅಂದರೆ ಡಬ್ಬಿಂಗ್ಗೆ ಇರುವ ವಿರೋಧಗಳು ಎರಡು ಬಗೆಯವು. ಮೊದಲನೆಯದು ಸಾರ್ವತ್ರಿಕವಾದ, ಸಾರ್ವಜನಿಕವಾದ ಸಾಂಸ್ಕೃತಿಕ ವಿರೋಧ. ಎರಡನೆಯದು ನಿದರ್ಿಷ್ಟವಾದ ಚಿತ್ರರಂಗದ ಆಂತರಿಕ ವಿರೋಧ. ಒಂದಕ್ಕೆ ತಾತ್ವಿಕ ಆಯಾಮಗಳಿವೆ, ಮತ್ತೊಂದಕ್ಕೆ ವ್ಯಾವಹಾರಿಕ ಗುಣವಿದೆ. 2 – ಡಬ್ಬಿಂಗ್ ವಿರೋಧಕ್ಕೆ ವಿರೋಧ ಹುಟ್ಟಿರುವ ಸಂಗತಿಯನ್ನು ಸರಿಯಾಗಿ ಅಥರ್ೈಸಬೇಕು. ಡಬ್ಬಿಂಗ್ ಪರವಾಗಿ ವಾದಮಾಡುತ್ತಿರುವವರ ನಿಲುವನ್ನು ಪೂವರ್ಾಗ್ರಹಗಳಿಲ್ಲದೆ ಅರಿಯಬೇಕು. ಅಲ್ಲದೆ ಡಬ್ಬಿಂಗ್ ಸಮಸ್ಯೆಯನ್ನು ಬೇಕು-ಬೇಡಗಳ ಗಡಿಯನ್ನು ದಾಟಿ ಸರಿಯಾಗಿ ಅರಿತುಕೊಳ್ಳಬೇಕು. ಇದು ಎಲ್ಲರ ಮೂಲಭೂತ ಕರ್ತವ್ಯ. ಡಬ್ಬಿಂಗ್ ಪರವಾಗಿ ವಾದ ಮಾಡುತ್ತಿರುವವರು ಸಾಮಾಜಿಕ ನ್ಯಾಯದ ವಾದವನ್ನು ಹೂಡುತ್ತಿದ್ದಾರೆ. ಬೇರೆ ಭಾಷೆಗಳಲ್ಲಿರುವ ಅತ್ಯುತ್ತಮ ಚಿತ್ರಗಳನ್ನು ಕೇವಲ ಒಂದು ವರ್ಗ ಮಾತ್ರ ನೋಡಲು ಈ ಸಮಾಜದಲ್ಲಿ ಅವಕಾಶವಿರಬೇಕೇ ಎಂದು ಈ ಪಂಥದವರು ಕೇಳುತ್ತಿರುವುದನ್ನು ಗಂಭೀರವಾಗಿ ಅರ್ಥಮಾಡಿಕೊಳ್ಳಬೇಕು. ಭಾರತದ ಅನೇಕ ಭಾಷೆಗಳಲ್ಲಿ ಮತ್ತು ಹೊರ ದೇಶಗಳ ಅನೇಕ ಭಾಷೆಗಳಲ್ಲಿ ಸೃಷ್ಟಿಸಲ್ಪಡುವ ಅತ್ಯುತ್ತಮ ಚಲನಚಿತ್ರಗಳನ್ನು ನಮ್ಮ ಸಾಮಾನ್ಯರು, ಅಂತ್ಯಜರು ಕನ್ನಡದಲ್ಲೇ ಡಬ್ಬಿಂಗ್ ಮೂಲಕ ಯಾವ ಕಾರಣಕ್ಕೆ ನೋಡಬಾರದೆಂಬುದೇ ಅವರ ಪ್ರಶ್ನೆ. ಅತ್ಯುತ್ತಮ ಚಿತ್ರಗಳು ಎಲ್ಲರಿಗೂ ದಕ್ಕಬಾರದೇಕೆ ಎಂಬುದು ಇವರ ತೀಕ್ಷ್ಣವಾದ ಸವಾಲು. ಸಂಸ್ಕೃತಿ, ವ್ಯವಹಾರದ ಹೆಸರಿನಲ್ಲಿ ಪಟ್ಟಭದ್ರ ಹಿತಾಸಕ್ತಿಗಳ ಹುನ್ನಾರ ಇದು ಎಂಬುದೇ ಇವರ ಆರೋಪ. ಸಾಮಾಜಿಕ ನ್ಯಾಯವೆಂಬ ಪರಿಕಲ್ಪನೆಯನ್ನು ಇಟ್ಟುಕೊಂಡೇ ಡಬ್ಬಿಂಗ್ ಪರವಾಗಿ ವಾದಮಾಡುವವರು ತಮ್ಮ ಸಿದ್ಧಾಂತವನ್ನು ಹೀಗೆ ಅಭಿವ್ಯಕ್ತಿಗೊಳಿಸುತ್ತಿರುವುದನ್ನು ನಾವು ಕಡೆಗಣಿಸುವಂತಿಲ್ಲ. ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು ಸಾಂಸ್ಕೃತಿಕ ವಲಯಗಳಿಂದ ದೂರ ಉಳಿಯಬೇಕಾಗಿ ಬರುವುದು ಒಂದು ಸಾಮಾಜಿಕ ದುರಂತವೆಂದು ಗಟ್ಟಿಯಾಗಿ ಸಾರುತ್ತ, ಡಬ್ಬಿಂಗ್ಅನ್ನು ಸ್ವಾಗತಿಸಿ, ಒಪ್ಪಿಕೊಳ್ಳಬೇಕು ಎಂಬುದು ಡಬ್ಬಿಂಗ್ೆ ಪರವಾಗಿ ವಾದ ಮಾಡುವವರ ನಿಲುವಾಗಿದೆ. ಡಬ್ಬಿಂಗ್ಗೆ ಬರುವ ವಿರೋಧವು ಉಳ್ಳವರ ತಂತ್ರ ಮತ್ತು ಇದೊಂದು ಬಗೆಯ ಬೌದ್ಧಿಕ ಶೋಷಣೆ ಎಂಬುದೇ ಡಬ್ಬಿಂಗ್ೆ ಪರವಾಗಿ ವಾದಮಾಡುತ್ತಿರುವವರ ಖಚಿತ ಸೈದ್ಧಾಂತಿಕ ನಿಲುವಾಗಿದೆ. ಮುಕ್ತ ಸಮಾಜದಲ್ಲಿ ಈ ರೀತಿಯ ನಿಷೇಧಗಳು ಇರಬಾರದೆಂಬುದು ಇವರ ಮತ್ತೊಂದು ವಾದ. ಸಮುದಾಯದಲ್ಲಿ ಜನರಿಗೆ ಆಯ್ಕೆಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಯಾರೂ ಕಿತ್ತುಕೊಳ್ಳುವ ಹಾಗಿಲ್ಲ, ಆ ರೀತಿಯ ಅಧಿಕಾರವನ್ನು ಯಾರೂ ಯಾರಿಗೂ ಪ್ರಜಾಪ್ರಭುತ್ವದಲ್ಲಿ ಕೊಟ್ಟಿಲ್ಲ, ಕೊಡಬಾರದೆಂಬುದೇ ಇವರ ರಾಜಕೀಯ ಸಿದ್ಧಾಂತವೂ ಹೌದು. ಈ ಎರಡೂ ವಾದಗಳಲ್ಲಿ ಸತ್ಯವಿದೆ. ಎರಡು ಪಂಥಗಳ ವಿಚಾರಗಳಲ್ಲಿ ನಿಜವಾಗಲೂ ಒಪ್ಪಿಕೊಳ್ಳಲೇಬೇಕಾದ ಸಂಗತಿಗಳಿವೆ. ಹಾಗಾದರೆ ಈ ಡಬ್ಬಿಂಗ್ ಪರ/ವಿರೋಧ ನೆಲೆಗಳ ನಡುವೆ ಯಾವ ರೀತಿಯ ಅನುಸಂಧಾನವನ್ನು ಕಟ್ಟಲು ಸಾಧ್ಯ? ಈ ಎರಡೂ ಬಣಗಳನ್ನು ಒಟ್ಟುಮಾಡಬಹುದಾದ ಬುನಾದಿ ಯಾವುದು? ಕನರ್ಾಟಕದಲ್ಲಿ ಚಲನಚಿತ್ರೋದ್ಯಮವನ್ನು ಕಾಪಾಡುತ್ತಲೇ ನಮ್ಮ ಅಲ್ಪಸಂಖ್ಯಾತರಿಗೆ, ಬಹುಜನರಿಗೆ ಅತ್ಯುತ್ತಮವಾದ ಚಲನಚಿತ್ರಗಳನ್ನು ವೀಕ್ಷಿಸುವ ಸೌಲಭ್ಯವನ್ನು ಒದಗಿಸಿಕೊಡುವ ಸಾಧ್ಯತೆಗಳಿವೆಯೆ? ಡಬ್ಬಿಂಗ್ೆ ಪರ/ವಿರೋಧ ಇರುವವರಿಬ್ಬರಲ್ಲೂ ಸತ್ಯಾಂಶಗಳಿವೆ ಎಂಬ ವಿಪಯರ್ಾಸವನ್ನು ಬಗೆಹರಿಸುವುದಾದರೂ ಹೇಗೆ? ಕನರ್ಾಟಕದ ಸಮುದಾಯಗಳು ಈ ವಿಷಯದ ಬಗ್ಗೆ ಇನ್ನಾದರೂ ಬಹಳ ಗಂಭೀರವಾಗಿ ಯೋಚನೆ ಮಾಡಿ ಪರಿಹಾರವನ್ನು ಹುಡುಕಬೇಕು. ಇದು ಇಂದಿನ ಅಗತ್ಯ ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ.   3 – ಡಬ್ಬಿಂಗ್ ವಿಷಯದಲ್ಲಿ ಪರ/ವಿರೋಧಗಳ ನಡುವೆ ಅನುಸಂಧಾನಗಳಿಗೆ ಅನೇಕ ಸಮಾನ ಅಂಶಗಳಿರುವುದನ್ನು ಗಣನೆಗೆ ತೆಗೆದುಕೊಳ್ಳುವುದು ಮುಖ್ಯ. ವ್ಯಾವಹಾರಿಕ ದೃಷ್ಟಿಯಿಂದ ಡಬ್ಬಿಂಗ್ ವಿರೋಧಿಸುತ್ತಿರುವವರಿಗೂ ಕನ್ನಡ ಚಲನಚಿತ್ರಗಳು ಮಾರುಕಟ್ಟೆಯಲ್ಲಿ ಚೆನ್ನಾಗಿ ನಡೆಯಬೇಕು, ಒಳ್ಳೆಯ ಗುಣಮಟ್ಟವನ್ನು ಹೊಂದಿರಬೇಕೆಂಬ ಕಾಳಜಿ ಕೂಡ ಇದೆ. ಈಗ ಕನ್ನಡದ ಜನಪ್ರಿಯ ಚಲನಚಿತ್ರಗಳಿಗೆ ಹೇಳಿಕೊಳ್ಳುವಂತಹ ಗುಣಮಟ್ಟವಿಲ್ಲ ಎಂದು ಜನಪ್ರಿಯ ಸಿನೆಮಾ ಮಾಡುವವರಲ್ಲಿ ಅನೇಕರು ಮುಕ್ತವಾಗಿ ಒಪ್ಪಿಕೊಳ್ಳುತ್ತಾರೆ. ಸದಭಿರುಚಿಯ ಚಿತ್ರಗಳು ಕನ್ನಡ ಸಂಸ್ಕೃತಿಯಲ್ಲಿ ಉಳಿಯಬೇಕು ಎಂದು ವಾದ ಮಾಡುವವರು ವ್ಯಾವಹಾರಿಕವಾಗಿಯೂ ಕನ್ನಡ ಚಲನಚಿತ್ರಗಳು ಯಶಸ್ಸನ್ನು ಕಾಣಬೇಕೆಂದು ಬಯಸುವವರೇ. ಕಲಾತ್ಮಕ ಚಿತ್ರಗಳೆಂದುಕೊಂಡು ಅವುಗಳು ಮಾರುಕಟ್ಟೆಯಲ್ಲಿ ಸಂಪೂರ್ಣವಾಗಿ ಸೋತರೂ ಪರವಾಗಿಲ್ಲ ಎಂದು ಹೇಳುವವರಲ್ಲ ಇವರು. ಆದ್ದರಿಂದ ಡಬ್ಬಿಂಗ್ ವಿರೋಧಿ ನೆಲೆಯಲ್ಲಿ ಒಂದು ತೆರೆದ ಮನಸ್ಸಿರುವುದನ್ನು ನಾವು ಕಡೆಗಣಿಸುವಂತಿಲ್ಲ. ಹಾಗೆಯೆ ಡಬ್ಬಿಂಗ್ೆ ಪರ ಇರುವವರು ಕನ್ನಡ ಚಿತ್ರಗಳು ಯಶಸ್ಸನ್ನು ಕಾಣಬೇಕು, ವೀಕ್ಷಕರಲ್ಲಿ ಒಳ್ಳೆಯ ಸಂವೇದನೆಯನ್ನು ಹುಟ್ಟುಹಾಕಬೇಕೆಂಬ ಕಾಳಜಿ ಇರುವವರೇ. ಬೇರೆ ಸಂಸ್ಕೃತಿಗಳಿಂದ, ಭಾಷೆಗಳಿಂದ ಒಳ್ಳೆಯ ಚಲನಚಿತ್ರಗಳು ನಮಗೆ ಲಭ್ಯವಾಗಬೇಕೆಂದ ತಕ್ಷಣ ಕನ್ನಡ ಚಲನಚಿತ್ರಗಳ ಸೋಲನ್ನು ಇವರುಗಳು ಬಯಸುತ್ತಿರುವವರೆಂದು ಯಾರೂ ಹೇಳುವಹಾಗಿಲ್ಲ. ಹಾಗಾದರೆ ಸಮಸ್ಯೆ ಇರುವುದಾದರೂ ಎಲ್ಲಿ? ನನ್ನ ಪ್ರಕಾರ ಎರಡು ಗುಂಪಿನವರೂ ಅರಿಯಬೇಕಾದ ಒಂದು ಸಂಗತಿಯಿದೆ. ಅದೇನೆಂದರೆ ತಾವು ಪರಸ್ಪರ ವಿರೋಧಿಗಳೆಂದುಕೊಂಡು ತಮ್ಮ ನಡುವೆ ವಾದ-ವಿವಾದಗಳನ್ನು ಹೆಚ್ಚಿಸಿಕೊಳ್ಳದೆ ಡಬ್ಬಿಂಗ್ ವಿಷಯದಲ್ಲಿ ಸಕರ್ಾರ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿಗಳ ಕಾಳಜಿ, ಜವಾಬ್ದಾರಿಗಳ ಬಗ್ಗೆ ಎಲ್ಲರ ಗಮನವನ್ನೂ ಸೆಳೆಯಬೇಕು. ಕನ್ನಡದ ಕಲಾತ್ಮಕ ಚಿತ್ರಗಳನ್ನು ಕಡೆಗಣಿಸಿ ಅವುಗಳಿಗೆ ಎಲ್ಲೂ ಅವಕಾಶವಿಲ್ಲದಿರುವ ಪರಿಸ್ಥಿತಿ ಬಂದಿರುವುದು ಶೋಚನೀಯ (ಈ ರೀತಿಯ ಚಿತ್ರಗಳ ಬಿಡುಗಡೆಗೆ ಚಿತ್ರ ಮಂದಿರ ದಕ್ಕುವಂತೆ ಮಾಡುವುದು ತಮ್ಮ ಮೂಲಭೂತ ಜವಾಬ್ದಾರಿ ಎಂದು ಸಕರ್ಾರವಾಗಲಿ, ಚಲನಚಿತ್ರ ವಾಣಿಜ್ಯ ಮಂಡಳಿಯಾಗಲಿ ಇದುವರೆಗೂ ಮನಗಂಡಿಲ್ಲವೆಂಬುದೇ ದುರಂತದ ಸಂಗತಿ). ಹಾಗೆಯೇ, ಜನಪ್ರಿಯ ಸಿನೆಮಾಗಳು ಮತ್ತು ಕಲಾತ್ಮಕ ಸಿನೆಮಾಗಳು ಒಂದಕ್ಕೊಂದು ವಿರೋಧಿ ಎಂಬ ಪ್ರಜ್ಞೆಯು ಎರಡು ಗುಂಪುಗಳನ್ನು ಸೃಷ್ಟಿಸಿರುವುದು ಅನಗತ್ಯವಾದ ಸಾಂಸ್ಕೃತಿಕ ಸಂಗತಿ ಆಗಿಬಿಟ್ಟಿದೆ. ಈ ವಿರೋಧವನ್ನು ಸಕರ್ಾರ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿ ತಮ್ಮ ಅಸಡ್ಡೆಯಿಂದ ನೇರವಾಗಿ, ಪರೋಕ್ಷವಾಗಿ ಪೋಷಿಸಿವೆ. ಆದ್ದರಿಂದ ಡಬ್ಬಿಂಗ್ ಪರ/ವಿರೋಧಗಳು ತಮ್ಮ ನಿಜವಾದ ಎದುರಾಳಿಗಳನ್ನು ಕಾಣಬೇಕಾದದ್ದು ಸಕರ್ಾರದ ನೀತಿಗಳಲ್ಲಿ, ಚಲನಚಿತ್ರ ವಾಣಿಜ್ಯ ಮಂಡಳಿಯ ಧೋರಣೆಯಲ್ಲಿ. ಜನಪ್ರಿಯ ಸಿನೆಮಾದ ಗುಣಮಟ್ಟ, ಡಬ್ಬಿಂಗ್ ಚಿತ್ರಗಳ ಸಾಂಸ್ಕೃತಿಕ ಗುಣ, ಕಲಾತ್ಮಕ ಚಿತ್ರಗಳ ಯಶಸ್ಸು ಸಕರ್ಾರದ ನೀತಿಗಳಿಗೆ, ಚಲನಚಿತ್ರ ವಾಣಿಜ್ಯ ಮಂಡಳಿಯ ಧೋರಣೆಗೆ ನೇರವಾಗಿ ಸಂಬಂಧಪಟ್ಟ ವಿಷಯಗಳೆಂದು ಅರಿತು ಒಂದು ಆಂದೋಲನವನ್ನು ಒಟ್ಟಿಗೆ ನಡೆಸಬೇಕು. ಆಗ ಡಬ್ಬಿಂಗ್ ಆಗುವ ಚಲನಚಿತ್ರಗಳ ಗುಣವನ್ನು, ಕಲಾತ್ಮಕ ಚಿತ್ರಗಳ ಉಳಿವನ್ನು, ಕನ್ನಡ ಜನಪ್ರಿಯ ಸಿನೆಮಾದ ಒಳಿತನ್ನು ಏಕಕಾಲದಲ್ಲಿ ಕಾಯ್ದುಕೊಳ್ಳಬಹುದು. ಒಂದು ಇನ್ನೊಂದಕ್ಕೆ ವಿರೋಧಿಯಲ್ಲ ಎಂಬ ಪ್ರಾಥಮಿಕ ಸತ್ಯ ಎಲ್ಲರ ಅರಿವಿಗೆ ಬರಬೇಕು. ಅಲ್ಲದೆ, ಒಂದರ ಏಳಿಗೆಯೇ ಇನ್ನೊಂದರ ಏಳಿಗೆಯನ್ನು ಕಾಯುತ್ತದೆ ಎಂಬ ಸತ್ಯ ಮನದಟ್ಟಾಗುತ್ತದೆ. ಈ ಪ್ರಜ್ಞೆ ಎಲ್ಲರಲ್ಲೂ ಜಾಗೃತಗೊಂಡರೆ ಕನರ್ಾಟಕ ಚಲನಚಿತ್ರ ಸಂಸ್ಕೃತಿಯ ಅನೇಕ ದುರಂತಗಳನ್ನು ತಡೆಯಬಹುದು. ಸರ್ಕಾರದ ಸಾಂಸ್ಕೃತಿಕ ನೀತಿ (Cultural Policy) ರೂಪಿತವಾಗಬೇಕು. ಇದು ಎಲ್ಲರ ಸಂಘರ್ಷ. ಕೇವಲ ಎರಡು ಬಣಗಳ, ಪಂಗಡಗಳ, ಗುಂಪುಗಳ ಸಂಘರ್ಷ ಅಲ್ಲ. ಸರ್ಕಾರದ ಸಾಂಸ್ಕೃತಿ ನೀತಿಯಿಂದ ಮಾತ್ರ ಕನ್ನಡದಲ್ಲಿ ಉತ್ತಮ ಚಿತ್ರಗಳು ಬರಲು ಸಾಧ್ಯ ಮತ್ತು ಉತ್ತಮ ಚಿತ್ರಗಳು ಮಾತ್ರ ಡಬ್ ಆಗಿ ಕನ್ನಡಕ್ಕೆ ಬರಲು ಸಾಧ್ಯ. ಈ ವಿವೇಚನೆ ಇಂದು ಮೂಡಿಬರಬೇಕು. ಡಬ್ಬಿಂಗ್ನಿಂದ ಉತ್ತಮ ಕಾಣ್ಕೆಗಳು ನಮ್ಮ ಸಮುದಾಯಕ್ಕೆ ದಕ್ಕಬೇಕಾದರೆ ಅದಕ್ಕೆ ಅಗತ್ಯವಾಗಿ ಪೂರಕವಾದದ್ದು ಸರ್ಕಾರದ ನೀತಿ. ಹಾಗೆಯೆ, ಕನ್ನಡದ ಉತ್ತಮ ಚಿತ್ರಗಳಿಗೆ ಮನ್ನಣೆ ಬರಬೇಕಿದ್ದರೆ (ಅವು ಜನಪ್ರಿಯ ಸಿನೆಮಾಗಳಾಗಲಿ ಕಲಾತ್ಮಕ ಚಿತ್ರಗಳಾಗಲಿ) ಅದಕ್ಕೆ ಅಗತ್ಯವಾದದ್ದು ಸರ್ಕಾರದ ಉತ್ತಮ ನೀತಿ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿಯ ವಿವೇಚನಾಯುಕ್ತ ಸಂಹಿತೆ. ಡಬ್ಬಿಂಗ್ ವಿರೋಧ/ಪರ ಗುಂಪುಗಳು ತಮ್ಮ ತಮ್ಮ ಕಾಳಜಿಗಳನ್ನು ಎತ್ತಿಹಿಡಿಯಲು ತಮ್ಮ ಒಟ್ಟೂ ನಿಲುವುಗಳನ್ನು ವಿರೋಧಿ ನೆಲೆಯಲ್ಲಿಟ್ಟು ನೋಡದೆ ಒಂದೇ ಕಾಳಜಿಯ ಎರಡು ವಿಭಿನ್ನ ಆದರೆ ಪೂರಕವಾದ ಆಯಾಮಗಳನ್ನಾಗಿ ನೋಡಲು ಕಲಿಯಬೇಕು. ಆದ್ದರಿಂದ ಒಂದು ಸಾಮಾಜಿಕ/ಸಾಂಸ್ಕೃತಿಕ ಆಂದೋಲನವನ್ನು ಒಟ್ಟಿಗೆ ಕೈಗೊಂಡು ಸರ್ಕಾರದ ಸಾಂಸ್ಕೃತಿಕ ನೀತಿಯು ಉಂಟಾಗುವಂತೆ ಪ್ರಯತ್ನಿಸಬೇಕು. ಜೊತೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಧೋರಣೆಯನ್ನು ಬದಲಿಸಲು ಪ್ರಯತ್ನಿಸಬೇಕು. ಹೀಗಾಗದಿದ್ದಲ್ಲಿ ಅಸಹ್ಯದ ಚಿತ್ರಗಳು ಮಾತ್ರ ಕನ್ನಡಕ್ಕೆ ಡಬ್ ಆಗಿ ಬರುತ್ತವೆ. ಅಲ್ಲದೆ ಕನ್ನಡ ಚಲನಚಿತ್ರ ಸಂಸ್ಕೃತಿ ತನ್ನ ಗುಣಮಟ್ಟವನ್ನು ಏರಿಸಿಕೊಳ್ಳುವುದೂ ಅಸಾಧ್ಯವಾಗುತ್ತದೆ. ಕಳಪೆ ಚಿತ್ರಗಳು ಡಬ್ ಆಗಿ ಬಂದಾಗ ಸ್ಪರ್ಧೆಯಿ೦ದಾಗಿ ಕನ್ನಡದ ಜನಪ್ರಿಯ ಸಿನೆಮಾ ಇನ್ನೂ ಕೆಳಮಟ್ಟಕ್ಕೆ ಇಳಿಯುವುದರಲ್ಲಿ ಯಾವ ಅನುಮಾನವೂ ಇಲ್ಲ. ಹಾಗೆಯೇ ಈಗಲೇ ಮೂಲೆಗುಂಪಾಗಿರುವ ಕಲಾತ್ಮಕ ಚಿತ್ರಗಳೂ ಸಂಪೂರ್ಣವಾಗಿ ವಿನಾಶದ ಅಂಚಿಗೆ ತಳ್ಳಲ್ಪಡುತ್ತವೆ. ಇದು ಎಲ್ಲರ ಸಾಮೂಹಿಕ ದುರಂತವೇ ಸರಿ.  ]]>

‍ಲೇಖಕರು G

May 28, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಡಿ ಎಸ್ ರಾಮಸ್ವಾಮಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂದೂ ಕರೆಯುವುದು ವಾಡಿಕೆ. ಕನ್ನಡ ಭಾಷೆಯು ಕೊಡ ಮಾಡಿದ...

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ವಿ ಎಲ್‌ ನರಸಿಂಹಮೂರ್ತಿ ನಮ್ಮ ಘನತೆವೆತ್ತ ರಾಜ್ಯ ಸರ್ಕಾರ ಒಂದಾದ ಮೇಲೊಂದರಂತೆ ಜಾತಿಗೊಂದು, ಸಮುದಾಯಕ್ಕೊಂದು ಅಭಿವೃದ್ಧಿ ನಿಗಮ ಸ್ಥಾಪನೆ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This