ಡಬ್ಬಿ೦ಗ್ ಬೇಕು ಎನ್ನುವ ಗೆಳೆಯರು ಕೆಲವು ತಪ್ಪು ಅಭಿಪ್ರಾಯಗಳನ್ನು ಇಟ್ಟುಕೊ೦ಡಿದ್ದಾರೆ ಅನ್ನಿಸುತ್ತೆ..ಟಿ ಎನ್ ಸೀತಾರಾ೦

– ಟಿ ಎನ್ ಸೀತಾರಾ೦

ಕನ್ನಡಕ್ಕೆ ಡಬ್ ಆಗುವ ಎಲ್ಲಾ ಕಾರ್ಯಕ್ರಮಗಳು ಉತ್ತಮವಾಗಿದೆ ಎ೦ದು ಭಾವಿಸಿದ್ದಾರೆ ಅನ್ನಿಸುತ್ತೆ. ಎಲ್ಲಾ ಭಾಷೆಗಳಲ್ಲೂ ಕನ್ನಡದಲ್ಲಿ ಬರುವ೦ತೆ ಕಳಪೆ ಕಾರ್ಯಕ್ರಮಗಳೇ ಜಾಸ್ತಿ… ಉಳಿದ ಕೆಲವೇ ಕೆಲವು ಅ೦ದರೆ ಸುಮಾರು ಶೇಕಡ ೧೦ ರಷ್ಟು ಕಾರ್ಯಕ್ರಮಗಳು ನಮ್ಮ ಗಮನಕ್ಕೆ ಬರುತ್ತವೆ.. ಅವನ್ನು ಮಾತ್ರ ನಾವು ಮೆಚ್ಚುತ್ತೇವೆ.. ಆ ಉತ್ತಮ ಕಾರ್ಯಕ್ರಮಗಳು ಮಾತ್ರ ಕನ್ನದಕ್ಕೆ ಡಬ್ ಆಗುವುದಿಲ್ಲ, ಉಳಿದ ಶೇಕಡ ೯೦ ಡಬ್ ಆಗುತ್ತವೆ. ಉಳಿದ ೯೦ ರಷ್ಟು ಕಳಪೆ ಕಾರ್ಯಕ್ರಮಗಳನ್ನು ನಾವು ನೋಡಬೇಕಾಗುತ್ತದೆ. ಉತ್ತಮವಾದ ಕಾರ್ಯಕ್ರಮಗಳನ್ನೆ ಡಬ್ ಮಾಡುತ್ತಾರೆ ಎ೦ದು ಹೇಗೆ ಗೊತ್ತು? ನ್ಯೂಸ್ ಮತ್ತು ನ್ಯೂಸ್ ಸ೦ಬ೦ಧಿ ಕಾರ್ಯಕ್ರಮಗಳನ್ನು ಡಬ್ ಮಾಡಲು ಸಾಧ್ಯವಿಲ್ಲ. ಸ೦ಗೀತ ಮತ್ತು ಸ೦ಗೀತಕ್ಕೆ ಸ೦ಬ೦ಧಿಸಿದ ಕಾರ್ಯಕ್ರಮ ಡಬ್ ಮಾಡಲು ಸಾಧ್ಯವಿಲ್ಲ. ಕ್ರೀಡಾ ಕಾರ್ಯಕ್ರಮಗಳನ್ನು ಡಬ್ ಮಾಡಲು ಸಾಧ್ಯವಿಲ್ಲ. ಅವರು ಡಬ್ ಮಾದಲು ಸಾಧ್ಯ ಇರುವುದು ತಮಿಳ್ ಮತ್ತು ಹಿ೦ದಿ ಧಾರಾವಾಹಿಗಳನ್ನು ಮಾತ್ರ. ಕನ್ನಡ ಧಾರಾವಾಹಿಗಳ ಜಾಗದಲ್ಲಿ ಅವು ಬರುತ್ತವೆ. ಅದೇ ವ್ಯಾ೦ಪ್ ಗಳು, ಅದೇ ವಿವಾಹದ ಹೊರಗಿನ ಸ೦ಬ೦ಧಗಳು, ಅದೇ ಅತಿ ಅಲ೦ಕಾರದ ಕೃತಕ ಹೆಣ್ಣುಗಳು, ಅದೇ ದೆವ್ವಗಳು, ಮಾಟ ಮ೦ತ್ರಗಳು, ಮೂಢನ೦ಬಿಕೆಗಳು…. ಕನ್ನಡ ಕಳಪೆ ಎ೦ದು ನೀವು ಕನ್ನಡ ಭಾಷೆಯಲ್ಲಿ ನಿಮ್ಮ ಮಕ್ಕಳಿಗೆ ಮತ್ತು ತಾಯ೦ದಿರಿಗೆ ತೋರಿಸಲು ಸಾಧ್ಯವಾಗುವುದು ಇ೦ತಹ ಧಾರಾವಾಹಿಗಳನ್ನು ಮಾತ್ರ ತಾನೆ? ಕನ್ನಡ, ಮಲಯಾಳ೦ ಮತ್ತು ಬೆ೦ಗಾಲಿ ಧಾರಾವಾಹಿಗಳು ಭಾರತದಲ್ಲಿಯೇ ಮೇಲು ಮಟ್ಟದವು ಎನ್ನುವುದು ಎಲ್ಲರ ಅಭಿಪ್ರಾಯ. ಹೀಗಿರುವಾಗ ಕನ್ನಡದ ಧಾರಾವಾಹಿಗಳನ್ನು ಡಬ್ಬಿ೦ಗ್ ಹೆಸರಿನಲ್ಲಿ ನಾಶ ಮಾಡುವುದು ಸರಿಯೆ? ನೀವು ಇಷ್ಟ ಪಡುವ ಕಾರ್ಯಕ್ರಮಗಳನ್ನು ಕನ್ನಡಕ್ಕೆ ಡಬ್ ಮಾಡಿ ಎ೦ದು ಹೇಳುವ ಅಧಿಕಾರ ಮತ್ತು ಹಕ್ಕು ಎರಡೂ ನಿಮಗೆ ಇರುವುದಿಲ್ಲ. ಡಿಸ್ಕವರಿ, ಹಿಸ್ಟರಿ, ಅನಿಮಲ್ ಪ್ಲಾನೆಟ್, ಸತ್ಯಮೇವ ಜಯತೆ….. ನೋಡಲೇಬೇಕಾದ್ದು ಇನ್ನೆಷ್ಟು? ಆಷ್ಟು ಬಿಟ್ಟರೆ ಬೆರೆ ಇಲ್ಲ, ಅವನ್ನು ಡಬ್ ಮಾಡುವುದಕ್ಕೆ ಖ೦ಡಿತಾ ವಿರೋಧ ಇಲ್ಲ. ಆದರೆ ಡಬ್ಬಿ೦ಗ್ ಗೆ ತಾತ್ವಿಕ ಒಪ್ಪಿಗೆ ಜನ ಕೊಟ್ಟ ತಕ್ಷಣ ಪ್ರವಾಹದ೦ತೆ ನುಗ್ಗುವುದು ಕನ್ನಡಕ್ಕಿ೦ತ ಕಳಪೆ ಕಾರ್ಯಕ್ರಮಗಳು! ಹೇಗೆ ತಡೆಯುತ್ತೀರಿ ಅದನ್ನು? ಅನೇಕ ಕನ್ನಡ ಚಾನಲ್ ಗಳ ಮಾಲೀಕರು ಹಿ೦ದಿ ಮತ್ತು ತಮಿಳಿನವರು ಮಾತ್ರ, ಕಡಿಮೆ ಖರ್ಚಿನಲ್ಲಿ ಅವರ ಧಾರಾವಾಹಿ ಡಬ್ ಮಾಡಿ ಕನ್ನಡದ ಜಾಗದಲ್ಲಿ ನುಗ್ಗಿಸುತ್ತಾರೆ, ಇದರಿ೦ದ ಕನ್ನಡ ಉಳಿಯುತ್ತೆ ಅ೦ತೀರಿ, ಉಳಿಯುತ್ತಾ? ಸಿನೆಮಾಗಳ ಬಗ್ಗೆ ಡಬ್ಬಿ೦ಗ್ ಪ್ರಿಯರ ಮಾತು ಸ್ವಲ್ಪ ನಿಜ ಇರಬಹುದು, ಆದರೆ ಪೂರ್ತಿ ಅಲ್ಲ. ಹಾಲಿವುಡ ನಲ್ಲಿ ವರ್ಷಕ್ಕೆ ಸುಮಾರು ೯೦೦ ಚಿತ್ರಗಳು ತಯಾರಾದರೆ, ೮೮೦ ಸಿ ಗ್ರೇಡ್ ಮತ್ತು ಬಿ ಗ್ರೇಡ್ ಚಿತ್ರಗಳು. ಮಿಕ್ಕ ೨೦ ಮಾತ್ರ ಎಲ್ಲಾ ಕಡೆ ಬಿಡುಗಡೆ ಆಗುತ್ತದೆ. ಹಾಗೆಯೇ ಬಾಲಿವುಡ್ ಚಿತ್ರಗಳು ಕೂಡ.. ಕನ್ನಡಕ್ಕಿ೦ತ ಮಹಾ ಎಷ್ಟು ಪರ್ಸೆ೦ಟ್ ಭಿನ್ನ ಅವು? ಈಗ ನೀವೆಲ್ಲ ಕಳಪೆ ಎ೦ದು ಹೇಳುವ ಚಿತ್ರಗಳೆಲ್ಲಾ ಬೇರೆ ಭಾಷೆಯಲ್ಲಿ ಹಿಟ್ ಆದ ಚಿತ್ರಗಳ ರೀಮೇಕ್ ಮಾತ್ರ, ಕಣ್ಣಡವನ್ನು ಮಾತ್ರ ಏಕೆ ಡೀಗ್ರೇಡ್ ಮಾಡುತ್ತೀರಿ? ನಾವು ಇಷ್ಟಪಡುವುದನ್ನು ನೋಡಲು ಸ್ವತ೦ತ್ರ ಕೊಡಿ ಅನ್ನುತ್ತೀರಿ, ನೀವು ಏನು ನೋಡಬೇಕು ಎ೦ದು ಹೇಳುವ ಸ್ವಾತ೦ತ್ರ್ಯ ಇರುವುದು ನಿಮಗಲ್ಲ, ನಮ್ಮ ಚಾನಲ್ ಗಳನ್ನು ನಡೆಸುತ್ತಿರುವ ಬೇರೆ ಭಾಷೆಯ ಚಾನಲ್ ನವರಿಗೆ! ನೀವು ಇಷ್ಟ ಪಟ್ಟಿದ್ದು ಸಿಗುವುದಿಲ್ಲ.. ಇನ್ನೂ ಹತ್ತಾರು ವಿಚಾರವಿದೆ, ಆದರೆ ಆಗಲೆ ತು೦ಬಾ ಉದ್ದವಾಗಿದೆ, ನನ್ನ ಧಾರಾವಾಹಿಯ೦ತೆ!]]>

‍ಲೇಖಕರು G

May 23, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಡಿ ಎಸ್ ರಾಮಸ್ವಾಮಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂದೂ ಕರೆಯುವುದು ವಾಡಿಕೆ. ಕನ್ನಡ ಭಾಷೆಯು ಕೊಡ ಮಾಡಿದ...

54 ಪ್ರತಿಕ್ರಿಯೆಗಳು

 1. Anil

  Seetaraam Sir,
  Much needed timely writeup which should catalyse our thought process in correct direction. The direction which inspires kannada creative minds to come up with genuine , earthly and rooted works.
  Thanks a ton !!
  Anil

  ಪ್ರತಿಕ್ರಿಯೆ
 2. K.V. Tirumalesh

  THOU SHLT NOT DUB INTO KANNADA!
  (The 11th commandment of Moses)
  kvtirumalesh

  ಪ್ರತಿಕ್ರಿಯೆ
 3. jogi

  ಸರ್, ಸರಿಯಾಗಿ ಹೇಳಿದ್ದೀರಿ. ಇಷ್ಟನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾದರೆ ಯಾವ ಕನ್ನಡಿಗನೂ ಡಬ್ಬಿಂಗು ಬೇಕು ಎಂದು ಹೇಳಲಾರ. ಮೊನ್ನೆ ರೇಡಿಯೋ ಕಾರ್ಯಕ್ರಮವೊಂದರಲ್ಲಿ ಡಬ್ಬಿಂಗ್ ಬೇಕೋ ಬೇಡವೋ ಅಂತ ಶ್ರೋತೃಗಳಿಗೆ ಪ್ರಶ್ನೆ ಹಾಕಿದ್ದರು. ಒಂದು ಗಂಟೆಯಲ್ಲಿ ಬಂದ ಕರೆಗಳ ಪೈಕಿ ಒಬ್ಬನೇ ಒಬ್ಬ ಮಾತ್ರ ಡಬ್ಬಿಂಗ್ ಬೇಕು ಅಂದಿದ್ದ. ಉಳಿದವರೆಲ್ಲ ಡಬ್ಬಿಂಗು ಸಿನಿಮಾ ನೋಡಕ್ಕಾಗಲ್ಲ, ಡಬ್ಬಿಂಗು ಧಾರಾವಾಹಿ ಬೇಕಾಗಿಲ್ಲ ಅಂತ ಮಾತಾಡಿದರು. ಇವತ್ತು ಡಬ್ಬಿಂಗು ಬೇಕಾಗಿರುವುದು ಪರಭಾಷೆಯ ಮಾಲಿಕರು ನಡೆಸುತ್ತಿರುವ ಚಾನಲ್ಲುಗಳ ಮಾಲೀಕರಿಗೆ ಮತ್ತು ಅವರ ಕೃಪಾಪೋಷಿತ ಹೋರಾಟಗಾರರಿಗೆ ಮತ್ತು ಮೂರುಕಾಸಿಗೆ ಹಳೇ ತಮಿಳು ತೆಲುಗು ಸಿನಿಮಾಗಳ ಡಬ್ಬಿಂಗ್ ಹಕ್ಕುಗಳನ್ನು ಖರೀದಿ ಮಾಡಿಟ್ಟುಕೊಂಡ ಒಂದಷ್ಟು ನಿರ್ಮಾಪಕರಿಗೆ ಮಾತ್ರ. ಕನ್ನಡವನ್ನು ಉಳಿಸೋದಕ್ಕೆ ಅಮೀರ್ ಖಾನ್ ಬರಬೇಕು ಅನ್ನುವವರು ಮೊನ್ನೆ ಕಮಲ್ ಹಾಸನ್ ಆಡಿದ ಸ್ವಾಭಿಮಾನದ ಮಾತುಗಳನ್ನು ಕೇಳಬೇಕಾಗಿತ್ತು. (http://www.youtube.com/watch?v=x0vK71BDOCM) ಹಾಗೆ ನೋಡಿದರೆ ಸತ್ಯಮೇವ ಜಯತೆ-ಯಂಥ ಕಾರ್ಯಕ್ರಮ ಝೀ ಟೀವಿಯಲ್ಲಿ ಎಂದೋ ಪ್ರಸಾರವಾಗಿದೆ. ಶಿವರಾಜ್ ಕುಮಾರ್ ಅದನ್ನು ನಡೆಸಿಕೊಟ್ಟಿದ್ದಾರೆ. ಕನ್ನಡದಲ್ಲಿ ಕಳಪೆ ಸಿನಿಮಾಗಳು ಬರುತ್ತಿವೆ ಅನ್ನುವ ಭಾವನೆಯನ್ನು ಮೊದಲು ಬಿಡಬೇಕು. ಕನ್ನಡವೇ ಕಳಪೆ ಅಂತ ಅನ್ನಿಸುವುದು ಇತ್ತೀಚಿನ ಷೋಕಿ ಸರ್.

  ಪ್ರತಿಕ್ರಿಯೆ
  • ಅರುಣ್

   ಜೋಗಿಯವರೆ, ಡಬ್ಬಿಂಗ್ ಬೇಕು ಎನ್ನುವವರನ್ನು ಚಾನಲ್ಲುಗಳ ಕೃಪಾಪೋಷಿತ ಹೋರಾಟಗಾರು ಎಂದಿದ್ದೀರ ತಾವು ಇಲ್ಲಿ ಕಮೆಂಟ್ ಬರೆಯುವುದಕ್ಕೆ ಮುಂಚೆ ತಮ್ಮ ಕಮೆಂಟ್ ಗೆ ಬೆಂಬಲಿಸುವ ಮಾಹಿತಿಯನ್ನು ಕಲೆ ಹಾಕೆ ಬರೆದಿದ್ದೀರೆ? ದಯವಿಟ್ಟು ಹೇಗೆ ಡಬ್ಬಿಂಗ್ ಬೇಕು ಎನ್ನುವವರು ಚಾನೆಲ್ ಗಳ ಕೃಪಾಪೋಶಿತರು ಎನ್ನುವುದನ್ನು ತಿಳಿಸಿ. ಇಲ್ಲವಾಗಿದ್ದಲ್ಲಿ ಮೇಲಿನ ಕಮೆಂಟ್ ಅನ್ನು ತೆಗೆದುಹಾಕಿ… ಡಬ್ಬಿಂಗ್ ಬೇಕು ಎನ್ನುವವರನ್ನು ಚಾನೆಲ್ ಗಳ ಕೃಪಾಪೋಶಿತರು ಎನ್ನುವ ಶೋಕಿಯನ್ನು ನಿಲ್ಲಿಸಿ

   ಪ್ರತಿಕ್ರಿಯೆ
 4. Dinesh Kumar S.C.

  ಟಿ.ಎನ್.ಸೀತಾರಾಮ್ ಅವರೇ,
  ಅಪಾರ ಗೌರವಗಳೊಂದಿಗೆ ನಿಮ್ಮ ಅಭಿಪ್ರಾಯ ಕುರಿತಂತೆ ನನ್ನದೂ ಕೆಲವು ಮಾತುಗಳನ್ನು ಹಂಚಿಕೊಳ್ಳುತ್ತಿದ್ದೇನೆ.
  ಕನ್ನಡಕ್ಕೆ ಡಬ್ ಆಗುವ ಎಲ್ಲ ಕಾರ್ಯಕ್ರಮಗಳು ಉತ್ತಮವಾಗಿರುತ್ತವೆ ಎಂದು ಡಬ್ಬಿಂಗ್ ಪರವಾಗಿ ಮಾತನಾಡುವವರು ಭಾವಿಸಿದ್ದಾರೆ ಎಂದು ನೀವು ನಿಮ್ಮ ಲೇಖನ ಶುರು ಮಾಡುತ್ತೀರಿ. ನಿಮ್ಮ ಗ್ರಹಿಕೆ ಸರಿಯಲ್ಲ. ಡಬ್ಬಿಂಗ್ ಕಾರ್ಯಕ್ರಮಗಳೆಲ್ಲವೂ ಉತ್ತಮವಾಗಿರುತ್ತವೆ ಎಂದು ನಾವ್ಯಾರೂ ಹೇಳುತ್ತಲೇ ಇಲ್ಲ, ಮುಂದೆಯೂ ಹೇಳೋದೂ ಇಲ್ಲ. ನಮ್ಮನ್ನು ನಂಬಿ ಪ್ಲೀಸ್! ಇನ್ನೊಮ್ಮೆ ಡಬ್ಬಿಂಗ್ ವಿಷಯ ಮಾತಾಡುವಾಗ ಈ ತಪ್ಪುಗ್ರಹಿಕೆಯನ್ನು ಬಿಟ್ಟುಕೊಟ್ಟೇ ಮಾತಾಡಿ.
  ಡಬ್ಬಿಂಗ್ ಶುರುವಾದರೆ ಒಳ್ಳೆಯ ಗುಣಮಟ್ಟದ ಶೇ.೧೦ರಷ್ಟು ಕಾರ್ಯಕ್ರಮಗಳು ಡಬ್ ಆಗೋದಿಲ್ಲ ಎನ್ನುತ್ತಿದ್ದೀರಿ. ಹೇಗೆ ಈ ತೀರ್ಮಾನಕ್ಕೆ ಬಂದಿರಿ? ಅದಕ್ಕೆ ಏನು ಆಧಾರ? ಏನಾದರೂ ಸಮೀಕ್ಷೆ ಮಾಡಿದ್ದೀರಾ? ಕನ್ನಡದಲ್ಲಿ ಡಬ್ಬಿಂಗ್ ನಿಂತು ದಶಕಗಳೇ ಕಳೆದಿವೆ. ಡಬ್ಬಿಂಗ್ ಶುರುವಾದರೆ ಒಳ್ಳೆಯದು ಬರೋದೇ ಇಲ್ಲ ಎಂದು ಕಣ್ಣುಮುಚ್ಚಿಕೊಂಡು ಹೇಗೆ ಹೇಳುತ್ತೀರಿ? ನಾವಂತೂ ತ್ರಿಕಾಲ ಜ್ಞಾನಿಗಳಲ್ಲ. ಡಬ್ಬಿಂಗ್ ಆಗುವುದರಿಂದ ತಡೆಯಲಾದ ರಾಮಾಯಣ-ಮಹಾಭಾರತ-ಸ್ವೋರ‍್ಡ್ ಆಫ್ ಟಿಪ್ಪು ಸುಲ್ತಾನ್-ಮಾಲ್ಗುಡಿ ಡೇಸ್- ಸತ್ಯಮೇವ ಜಯತೆ ಇತ್ಯಾದಿಗಳು ಕಳಪೆ ಎಂದು ನಮಗೆ ಅನಿಸಿಲ್ಲ.
  ನೀವು ಬರೆಯುತ್ತೀರಿ: ಅವರು ಡಬ್ ಮಾದಲು ಸಾಧ್ಯ ಇರುವುದು ತಮಿಳ್ ಮತ್ತು ಹಿಂದಿ ಧಾರಾವಾಹಿಗಳನ್ನು ಮಾತ್ರ. ಕನ್ನಡ ಧಾರಾವಾಹಿಗಳ ಜಾಗದಲ್ಲಿ ಅವು ಬರುತ್ತವೆ. ಅದೇ ವ್ಯಾಂಪ್‌ಗಳು, ಅದೇ ವಿವಾಹದ ಹೊರಗಿನ ಸ೦ಬಂಧಗಳು, ಅದೇ ಅತಿ ಅಲಂಕಾರದ ಕೃತಕ ಹೆಣ್ಣುಗಳು, ಅದೇ ದೆವ್ವಗಳು, ಮಾಟ ಮಂತ್ರಗಳು, ಮೂಢನಂಬಿಕೆಗಳು, ಕನ್ನಡ ಕಳಪೆ ಎಂದು ನೀವು ಕನ್ನಡ ಭಾಷೆಯಲ್ಲಿ ನಿಮ್ಮ ಮಕ್ಕಳಿಗೆ ಮತ್ತು ತಾಯಂದಿರಿಗೆ ತೋರಿಸಲು ಸಾಧ್ಯವಾಗುವುದು ಇಂತಹ ಧಾರಾವಾಹಿಗಳನ್ನು ಮಾತ್ರ ತಾನೆ?…
  ಹೌದು ಸರ್, ನೀವ್ ಹೇಳೋದು ನಿಜ. ಆದರೆ ಕನ್ನಡದ ಟಾಪ್ ಟೆನ್ ಧಾರಾವಾಹಿಗಳು ಇಂಥದ್ದೇ ಕಾರ್ಯಕ್ರಮಗಳ ರೀಮೇಕು ಅನ್ನೋದನ್ನು ಬರೆಯಲು ಯಾಕೆ ಪ್ರಜ್ಞಾಪೂರ್ವಕವಾಗಿ ಮರೆಯುತ್ತೀರಿ? ಅದೇ ಅನೈತಿಕ ಸಂಬಂಧಗಳು, ಅದೇ ಕೃತಕ ಅಲಂಕಾರದ ಹೆಣ್ಣುಗಳು, ಅದೇ ಮಾಟಮಂತ್ರ-ಮೌಢ್ಯ ರೀಮೇಕ್, ಸ್ವಮೇಕ್ ಗಳಲ್ಲಿ ಕಾಣಿಸಿಕೊಂಡಿಲ್ಲವೇ? ಇದೆಲ್ಲ ಗೊತ್ತಿದ್ದೂ ಕನ್ನಡದ ಧಾರಾವಾಹಿಗಳನ್ನು ಡಬ್ಬಿಂಗ್ ಹೆಸರಿನಲ್ಲಿ ನಾಶ ಮಾಡುವುದು ಸರಿಯೆ ಎಂದೇಕೆ ಪ್ರಶ್ನಿಸುತ್ತೀರಿ? ಅಷ್ಟಕ್ಕೂ ಕನ್ನಡ ಧಾರಾವಾಹಿಗಳು ನಾಶವಾಗುತ್ತವೆ ಎಂಬ ಭೀತಿ, ಅಂಜುಬುರುಕುತನ ನಿಮಗೇಕೆ? ಏನೇ ಡಬ್ಬಿಂಗ್ ಧಾರಾವಾಹಿಗಳು ಬಂದರೂ ನಿಮ್ಮಂಥವರು ಮುಕ್ತ ಮುಕ್ತದಂಥ ಧಾರಾವಾಹಿಗಳು ಮಾಡಿದರೆ ಜನ ನೋಡಲ್ಲ ಅಂತೀರಾ? ಜನರ ಅಭಿರುಚಿಯ ಮೇಲೆ ಅಷ್ಟೊಂದು ಗುಮಾನಿನಾ ನಿಮಗೆ?
  ಒಂದು ವಿಷಯ ನಿಮಗೆ ಹೇಳಬೇಕು, ಹಿಂದೆ ಕರ್ನಾಟಕದ ಹೆಣ್ಣುಮಕ್ಕಳು ಕಾದಂಬರಿಗಳನ್ನು ಓದುತ್ತಾ ಇದ್ದರು. ನಾನೂ ಸಹ ಲೈಬ್ರರಿಗೆ ಹೋಗಿ ತ್ರಿವೇಣಿ, ಸಾಯಿಸುತೆಯವರ ಕಾದಂಬರಿಗಳನ್ನು ತಂದು ನನ್ನ ಮನೆಗೆ ತಗೊಂಡು ಹೋಗುತ್ತಿದೆ. ನಿಮ್ಮ ಧಾರಾವಾಹಿಗಳು ಬಂದ ನಂತರ ಹೆಣ್ಣುಮಕ್ಕಳು ಕಾದಂಬರಿ ಓದೋದನ್ನೇ ಬಿಟ್ಟರು. ಹಾಗಂತ ಕಾದಂಬರಿಕಾರರು ಸೀರಿಯಲ್ ಗಳನ್ನು ನಿಷೇಧಿಸಿ ಅಂತ ಚಳವಳಿ ಮಾಡಿದರಾ? ಸೀರಿಯಲ್ ಗಳನ್ನು ನೋಡಕೂಡದು ಅಂತ ಫತ್ವಾ ಹೊರಡಿಸಿದ್ದರಾ? ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಯಥಾವತ್ತು ಇಂಗ್ಲಿಷ್ ಆವೃತ್ತಿಯನ್ನು ಕನ್ನಡಕ್ಕೆ ಅನುವಾದ ಮಾಡಿ (ಡಬ್ಬಿಂಗ್) ಟೈಮ್ಸ್ ಆಫ್ ಇಂಡಿಯಾ ಕನ್ನಡ ಪತ್ರಿಕೆಯನ್ನು ಬಿಡುಗಡೆ ಮಾಡಿದರು. ಪತ್ರಿಕೆ ನಿಲ್ಲಿಸಿ ಎಂದು ಇತರ ಪತ್ರಿಕೆಗಳ ಪತ್ರಕರ್ತರು ಟೈಮ್ಸ್ ಕಚೇರಿ ಮುಂದೆ ಧರಣಿ ಕೂತಿದ್ದರಾ?
  ಡಬ್ಬಿಂಗ್ ತಾತ್ವಿಕ ಒಪ್ಪಿಗೆ ಕೊಟ್ಟ ತಕ್ಷಣ…. ಅಂತೇನೋ ಬರೀತೀರಿ? ಯಾರು ಈ ತಾತ್ವಿಕ ಒಪ್ಪಿಗೆ ಕೊಡುವವರು? ಒಪ್ಪಿಗೆ ಕೊಡುವ ತಿರಸ್ಕರಿಸುವ ಅಧಿಕಾರವನ್ನು ಕನ್ನಡ ವೀಕ್ಷಕನೇನಾದರೂ ಇವರಿಗೆ ಕೊಟ್ಟಿದ್ದಾನೆಯೇ? ಅಷ್ಟಕ್ಕೂ ಡಬ್ಬಿಂಗ್ ಕಾರ್ಯಕ್ರಮ ಅನ್ನೋದು ಸಮಾಜಬಾಹಿರ, ಸಂವಿಧಾನಬಾಹಿರ, ಅನೈತಿಕ ಉತ್ಪನ್ನವೇ?
  ಕಳಪೆ ಯಾವುದು, ಗುಣಮಟ್ಟದ್ದು ಯಾವುದು ಅನ್ನೋದನ್ನು ನಿರ್ಧರಿಸುವವನು ಪ್ರೇಕ್ಷಕ, ಅದು ನಿಮಗೂ ಗೊತ್ತಿದೆ. ಕನ್ನಡದಲ್ಲಿ ವರ್ಷಕ್ಕೆ ಬಿಡುಗಡೆಯಾಗುವ ೧೩೦ರ ಆಜುಬಾಜಿನ ಸಿನಿಮಾಗಳಲ್ಲಿ ಎಷ್ಟನ್ನು ಗೆಲ್ಲಿಸಿದ್ದಾನೆ ಕನ್ನಡ ಪ್ರೇಕ್ಷಕ? ಇಷ್ಟವಾಗದ್ದನ್ನು ತಿಪ್ಪೆಗೆಸೆದಿದ್ದಾನಲ್ಲವೇ? ಹಾಗೆಯೇ ಡಬ್ಬಿಂಗ್ ನಿಂದ ಬರುವ ಕಾರ್ಯಕ್ರಮ, ಸಿನಿಮಗಳು ಕಳಪೆಯಾಗಿದ್ದರೆ ಅವುಗಳನ್ನೂ ತಿರಸ್ಕರಿಸುತ್ತಾನೆ. ನಿಮಗೇಕೆ ಧಾವಂತ?
  ನೀವು ಏನು ನೋಡಬೇಕು ಎಂದು ಹೇಳುವ ಸ್ವಾತಂತ್ರ್ಯ ಇರುವುದು ಚಾನಲ್ ಗಳನ್ನು ನಡೆಸುತ್ತಿರುವ ಬೇರೆ ಭಾಷೆಯ ಚಾನಲ್‌ನವರಿಗೆ ಎನ್ನುತ್ತೀರಿ. ಹಾಗೆಲ್ಲ ನಾವು ಏನನ್ನು ನೋಡಬೇಕು ಎನ್ನುವುದನ್ನು ಚಾನಲ್‌ಗಳೂ ಹೇಳುವಂತಿಲ್ಲ, ಸಿನಿಮಾಮಂದಿಯೂ ಹೇಳುವಂತಿಲ್ಲ, ಸಿನಿಮ-ಟಿವಿ ಕ್ಷೇತ್ರದ ಪಂಡಿತರೂ ಹೇಳುವಂತಿಲ್ಲ. ಅವರವರ ಆಯ್ಕೆ ಅವರವರಿಗೆ ಇರುತ್ತದೆ. ಜೀವನಪರ್ಯಂತ ಒಂದೂ ಸಿನಿಮಾ ನೋಡದೇ ಇರೋರು ಕೂಡ ಈ ಜಗತ್ತಿನಲ್ಲಿ ಜೀವಿಸಿದ್ದಾರೆ ಅನ್ನೋದನ್ನು ಮರೆಯಬೇಡಿ.
  ಅಷ್ಟಕ್ಕೂ ಡಬ್ಬಿಂಗ್ ಬೇಡ ಎನ್ನುತ್ತಿರುವ ಸಿನಿಮಾ-ಟಿವಿ ಮಂದಿ ಯಾಕಿಷ್ಟು ರಕ್ಷಣೆಯನ್ನು ಬಯಸುತ್ತಾರೆ? ಹಾಗೆ ರಕ್ಷಣೆ ಬಯಸಲು ಅವರಿಗೆ ಇರುವ/ಇರಬಹುದಾದ ವಿಶೇಷ ಅರ್ಹತೆಗಳಾದರೂ ಏನು?
  ನಾನು ಏನನ್ನು ನೋಡಬೇಕು ಎಂಬುದನ್ನು ನಿರ್ಧರಿಸುವ ಸಾಂಸ್ಕೃತಿಕ ಯಜಮಾನಿಕೆಯನ್ನು ಶಿವರಾಜಕುಮಾರ್ ಅವರಿಗಾಗಲಿ, ಟಿ.ಎನ್.ಸೀತಾರಾಂ ಅವರಿಗಾಗಲೀ, ಬಿ.ಸುರೇಶ ಅವರಿಗಾಗಲಿ, ಮತ್ಯಾರಿಗಾಗಲೀ ನಾನು ನೀಡಿಲ್ಲ. ಅಂಥ ಸಾಂಸ್ಕೃತಿಕ-ಸಾಮಾಜಿಕ ಹೊಣೆಗಾರಿಕೆಯನ್ನು ಸುಖಾಸುಮ್ಮನೆ ನಿಮ್ಮಗಳ ಹೆಗಲ ಮೇಲೆ ಯಾಕೆ ಹೊತ್ತುಕೊಂಡು ಓಡಾಡುತ್ತೀರಿ? ನಿಮ್ಮ ಲಾಭ-ನಷ್ಟದ ವಿಷಯಗಳನ್ನು ಮಾತನಾಡಿ, ನಮ್ಮ ಅಭಿರುಚಿಗಳ ಬಗ್ಗೆ ನಿಮ್ಮ ಪ್ರೌಢಪ್ರಬಂಧಗಳನ್ನೇಕೆ ಹೇರುವಿರಿ? ಕನ್ನಡ ಪ್ರೇಕ್ಷಕನನ್ನು ನೀವು ಅಷ್ಟೊಂದು ಅಂಡರ್ ಎಸ್ಟಿಮೇಟ್ ಮಾಡಿರುವಿರಾ?
  ನಾವು ತಿರುಗಿ ಬಿದ್ದರೆ ಡಬ್ಬಿಂಗ್ ಬೇಕು ಅನ್ನೋರೆಲ್ಲ ಇಲ್ಲದಂತಾಗುತ್ತಾರೆ ಎಂದು ಶಿವರಾಜ ಕುಮಾರ್ ಅಂಥವರು ಬಹಿರಂಗವಾಗೇ ಬೆದರಿಕೆ ಒಡ್ಡುತ್ತಾರೆ. ನನ್ನ ಇಷ್ಟದನ್ನು ನಾನು ಬೇಕು ಅಂದರೆ ನಮ್ಮನ್ನು ಮುಗಿಸಿಯಾದರೂ ಅದನ್ನು ತಡೆಯುತ್ತೇವೆ ಎನ್ನುವವರಿಗೆ ಇವತ್ತಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಏನೆಂದು ಕರೆಯಬಹುದು? ಚಿತ್ರರಂಗದ ಪರವಾಗಿ ಬಡಿದಾಡಲು ಗೂಂಡಾಗಿರಿಯ ಭಾಷೆ-ಕ್ರಿಯೆ ಅನಿವಾರ್ಯವಾಗಿದೆಯೇ? ಅಥವಾ ಸೀತಾರಾಂ ಅಂಥವರ ಜಾಣತರ್ಕ- ವೀಕ್ಷಕನನ್ನು ತನಗಿಂತ ಕೆಳಗೆ ಇಟ್ಟು ನೋಡುವ ಅಹಂಕಾರದ ಭಾಷೆ ಅನಿವಾರ್ಯವೇ?
  ಇನ್ನೂ ಹತ್ತಾರು ವಿಷಯಗಳಿವೆ. ಆಗಲೇ ಉದ್ದವಾಗಿದೆ, ನಿಮ್ಮ ಧಾರಾವಾಹಿಗಳಂತೆ!
  ನಮಸ್ಕಾರ.

  ಪ್ರತಿಕ್ರಿಯೆ
 5. Hariprasad Holla

  1. ಚಿತ್ರೋಧ್ಯಮದಲ್ಲಿ ಹಲವಾರು ಸೃಜನಶೀಲತೆ-ರಹಿತ/ಪುಕ್ಕಲು ಕಲಾವಿದರಿದ್ದಾರೆ ಎಂಬು ತಿಳಿದ ವಿಷಯ (ಇದಕ್ಕೆ ಆಧಾರ, ನಮ್ಮಲ್ಲಿ ಮೂಡಿ ಬರು ಬಹುತೇಕ ಕಳಪೆ ಕಾರ್ಯಗಳು). ಆದರೆ ನಿಮ್ಮಂತ ವಿಭಿನ್ನ ಹಾಗು ಸೃಜನಶೀಲ ಕಲಾವಿದರಿಗೆ ಏಕೆ ಇಂತಾ ಭೀತಿ?
  2. “ಡಬ್ಬಿಂಗ್ ನಿಷೇಧ ಕಾನೂನು ಬಾಹಿರ”ವೆಂಬುದು ನಿಮ್ಮಂಥ ನುರಿತ ವಕೀಲರಿಗೆ ತಿಳಿದಿದ್ದೂ ಅದನ್ನು ಸಮರ್ಥಿಸುತ್ತೀರಿ ಅಂದರೆ ಈ ನಿಲುವಿನ ಹಿಂದಿರುವ ನಿಮ್ಮ ಉದ್ದೇಶ ಏನು?

  ಪ್ರತಿಕ್ರಿಯೆ
 6. Kannadiga

  “ಡಿಸ್ಕವರಿ, ಹಿಸ್ಟರಿ, ಅನಿಮಲ್ ಪ್ಲಾನೆಟ್, ಸತ್ಯಮೇವ ಜಯತೆ….. ನೋಡಲೇಬೇಕಾದ್ದು ಇನ್ನೆಷ್ಟು? ಆಷ್ಟು ಬಿಟ್ಟರೆ ಬೆರೆ ಇಲ್ಲ, ಅವನ್ನು ಡಬ್ ಮಾಡುವುದಕ್ಕೆ ಖ೦ಡಿತಾ ವಿರೋಧ ಇಲ್ಲ”
  Nobody is saying not to monitor what should be allowed and what should not be allowed.
  Like now, authorities can monitor what all is being dubbed to Kannada. Seems they dont want to take the burden of monitoring!!
  But we Kannadigas are suffering due to bunch of ignorants, Why cant we see knowledge programs in Kannada, why this barriage to the growth of Kannada?
  Hope this curse ends soon and Good content is allowed to be dubbed in Kannada soon.

  ಪ್ರತಿಕ್ರಿಯೆ
 7. Ajay

  ಚಾನಲ್ ಮಾಲೀಕರು ಕೆಟ್ಟದಾದ ಡಬ್ ಮಾಡಿದ ಧಾರಾವಾಹಿಗಳನ್ನು ಪ್ರಸಾರ ಮಾಡಲು ಶುರುಮಾಡಿದರೆ ಕನ್ನಡದ ಜನ ಖಂಡಿತಾ ಅದನ್ನು ನೋಡುವುದಿಲ್ಲ. ಚೆನ್ನಾಗಿಲ್ಲದ ಕನ್ನಡ ಸ್ವಮೇಕ್ ಧಾರಾವಾಹಿಗಳನ್ನೇ ಸಾರಾಸಗಟಾಗಿ ತಳ್ಳಿಹಾಕುವವ ಕನ್ನಡಿಗರು ಹಿಂದಿ ತಮಿಳಿನ ಡಬ್ ಧಾರಾವಾಹಿಯನ್ನೂ ತಿರಸ್ಕರಿಸುತ್ತಾರೆ. ಹಾಗಾಗಿ ಕೇವಲ ಒಳ್ಳೆಯ ಪ್ರೋಗ್ರಾಮುಗಳಷ್ಟೇ ಡಬ್ ಆಗುತ್ತವೆ. ಅಂದಹಾಗೆ ನಾನು ಏನು ನೋಡಬೇಕು ಎಂಬುದನ್ನು ನಿರ್ಧರಿಸುವ ಹಕ್ಕು ನನಗೆ ಮಾತ್ರವೇ ಇರುವುದು! ಸೀತಾರಾಂ ಅವರಿಗೂ ಅಲ್ಲ, ಶಿವರಾಜ್ ಕುಮಾರಿಗೂ ಅಲ್ಲ.!! ಹೀಗೆ ಡಬ್ಬಿಂಗ್ ಬೇಡ ಎನ್ನುವ ನಟ ನಿರ್ದೇಶಕರನ್ನು ಕಂಡಾಗಲೆಲ್ಲಾ ಇವರು ಸ್ಪರ್ಧೆಗೆ ಹೆದರುವ ಅಸಮರ್ಥರು ಅನ್ನಿಸುತ್ತದೆ.

  ಪ್ರತಿಕ್ರಿಯೆ
  • hema

   dubbing beda anta vakalattu vahisuvavaru,remake kooda beda anbeku…
   adre duradrustavashath kannada T.V channelgalaali baruthiruva 75% dharavahigalu remake gondavu.adakintha durantha andre adunna jana vidi illade nodi oppikollthirodu.
   illi dubbing madudre thamage kelasa illa anno bhaya eddu kannuthidde.ade winena bere bottle ge bhaggisi kododu matra(remake) nadithide…
   thamma creativity,talentgalanna hechhisikondu compete madbeke horathu,laabha nastada bagge mathadabaradu…
   illa andre remakenu bann madbeku

   ಪ್ರತಿಕ್ರಿಯೆ
 8. ರಾಘವೇಂದ್ರ ತೆಕ್ಕಾರ್

  ಜೋಗಿ ಕಮೆಂಟು ಹಾಕುತ್ತಾ… ಇವತ್ತು ಡಬ್ಬಿಂಗು ಬೇಕಾಗಿರುವುದು ಪರಭಾಷೆಯ ಮಾಲಿಕರು ನಡೆಸುತ್ತಿರುವ ಚಾನಲ್ಲುಗಳ ಮಾಲೀಕರಿಗೆ ಮತ್ತು ಅವರ ಕೃಪಾಪೋಷಿತ ಹೋರಾಟಗಾರರಿಗೆ ಮತ್ತು ಮೂರುಕಾಸಿಗೆ ಹಳೇ ತಮಿಳು ತೆಲುಗು ಸಿನಿಮಾಗಳ ಡಬ್ಬಿಂಗ್ ಹಕ್ಕುಗಳನ್ನು ಖರೀದಿ ಮಾಡಿಟ್ಟುಕೊಂಡ ಒಂದಷ್ಟು ನಿರ್ಮಾಪಕರಿಗೆ ಮಾತ್ರ ಎಂದು ಹೇಳಿದ್ದಾರೆ. ನಾನು ಚಾನಲ್ ಮಾಲೀಕನೂ ಅಲ್ಲ, ಅವರ ಕೃಪಾಪೋಷಿತ ಹೋರಾಟಗಾರನೂ ಅಲ್ಲ, ಡಬ್ಬಿಂಗ್ ರೈಟ್ಸ್ ಕೊಂಡಿಟ್ಟುಕೊಂಡಿರೋ ನಿರ್ಮಾಪಕನೂ ಅಲ್ಲ. ಆದರೂ ನನಗೆ ಡಬ್ಬಿಂಗ್ ಬೇಕು. ಜೋಗಿ ಹೇಳೋ ಶೈಲಿಯಲ್ಲೇ ಹೇಳೋದಾದ್ರೆ ಡಬ್ಬಿಂಗ್ ಬೇಡ ಅಂತಿರೋರು ಮಚ್ಚು-ಮಚ್ಚಾ ಸಂಸ್ಕೃತಿಯ ಸಿನಿಮಾ ತಯಾರಕರು, ನಿರ್ದೇಶಕರು, ಅನೈತಿಕ ಸಂಬಂಧಗಳ ಪಾಪಕೂಪಗಳ ಧಾರಾವಾಹಿ ನಿರ್ಮಾಪಕರು ಹಾಗು ಇವರುಗಳ ಛೇಲಾಗಳು, ಈ ಪಟ್ಟಭದ್ರ ಹಿತಾಸಕ್ತಿಗಳು ಹೋರಾಟದ ಕಣಕ್ಕೆ ಇಳಿಸಿರುವ ಬಾಡಿಗೆ ಸಂಸ್ಕೃತಿ ರಕ್ಷಕರು.

  ಪ್ರತಿಕ್ರಿಯೆ
 9. Priyank

  ಸತ್ಯಮೇವ ಜಯತೆ ಕಾರ್ಯಕ್ರಮ ಡಬ್ ಮಾಡಲು ವಿರೋಧವಿಲ್ಲ ಎನ್ನುತ್ತೀರಿ.
  ಆದರೆ, ಕಾರ್ಯಕ್ರಮ ಡಬ್ ಆಗಿದ್ದರೂ ಕನ್ನಡಿಗರಿಗೆ ಸಿಗದಂತೆ ನೋಡಿಕೊಳ್ಳಲಾಗಿದೆ.
  ಒಳ್ಳೆಯ ಧಾರಾವಾಹಿಗಳು ಮೂಡಿ ಬರುವುದೇ ಕನ್ನಡದಲ್ಲಿ ಎಂದಿದೀರಿ.
  ಹಾಗಿದ್ದ ಮೇಲೆ, ಡಬ್ಬಿಂಗ್-ನಿಂದ ಹುಟ್ಟಿಕೊಳ್ಳುವ ಎದುರಾಳಿಗಳನ್ನು ಎದುರಿಸುವ ಶಕ್ತಿ ಕನ್ನಡ ಧಾರಾವಾಹಿಗಳಿಗಿದೆ ಎಂದಾಯ್ತು.
  ಕಳಪೆ ಕಾರ್ಯಕ್ರಮಗಳು ಬರುತ್ತವೆ ಎಂದಿದೀರಿ. ಬರಲಿ.
  ಜನರು ಕಳಪೆ ಕಾರ್ಯಕ್ರಮಗಳನ್ನು ನೋಡುವಷ್ಟು ದಡ್ಡರಲ್ಲ. ಒಂದು ಪಕ್ಷ ನೀವು ಹಾಗಂದುಕೊಂಡಿದ್ದರೆ, ಅದು ನಿಮ್ಮ ಅನಿಸಿಕೆ ಮಾತ್ರ.
  ಕಳಪೆ ಕಾರ್ಯಕ್ರಮಗಳನ್ನು ಜನರು ತಿರಸ್ಕರಿಸಿದ ಮೇಲೂ, ಅದನ್ನೇ ಹಾಕುತ್ತೇವೆ ಎಂದು ಚಾನಲ್ಲಿನವರು ನಿಂತರೆ, ಹಾಕಲಿ ಬಿಡಿ.
  “ಹಣ ತುಂಬಾ ಇದೆ, ಸ್ವಲ್ಪ ವೇಸ್ಟ್ ಮಾಡ್ತೀವಿ” ಅನ್ನೋರನ್ನ ಹೇಗೆ ತಾನೇ ತಡೆಯೋಕಾಗುತ್ತೆ? ಹಣ ಕಾಲಿ ಆದ್ಮೇಲೆ, ಅವರೇ ನಿಲ್ಲಿಸ್ತಾರೆ ಕಳಪೆ ಕಾರ್ಯಕ್ರಮಗಳನ್ನು.
  ಆದರೆ, ಜನರಿಗೆ ಇಷ್ಟವಾಗುವ ಕಾರ್ಯಕ್ರಮಗಳನ್ನು ಮಾತ್ರ ತೋರಿಸಿ ಮಾರುಕಟ್ಟೆ ಗೆಲ್ಲುವವರು ಇದ್ದೆ ಇರುತ್ತಾರೆ. ಅವರಿಗೆ ಮಾರುಕಟ್ಟೆಯಲ್ಲಿ ಆಡಲು ತಕ್ಕ ವಾತಾವರಣ ಇರಬೇಕಷ್ಟೇ.
  ಹಾಲಿವುಡ್ಡಿನಲ್ಲಿ ಬರುವ ೨೦ ಒಳ್ಳೆಯ ಸಿನೆಮಾ ನೋಡಕ್ಕೂ ಅವಕಾಶ ಇಲ್ವಲ್ಲ. ೨೦ ಒಳ್ಳೆಯ ಹಾಲಿವುಡ್ ಸಿನೆಮಾ ನೋಡಕ್ಕೆ ಕನ್ನಡಿಗರು ಇಂಗ್ಲೀಷು/ಹಿಂದಿ/ತೆಲುಗು ಬಾಷೆಯನ್ನ ಅವಲಂಬಿಸುವಂತೆ ಮಾಡಿರುವುದು ‘ಡಬ್ಬಿಂಗ್ ನಿಷೇಧ’.

  ಪ್ರತಿಕ್ರಿಯೆ
 10. Ganesh

  It has become a fashion to brand those who are asking for dubbed content as agents of aamir khan, agents of tv channels and other labels. People get to this level of mud-slinging & rumour mongering when they have got nothing substantial to put forward. They know that their position will not stand in the court of law. They also realize they are losing their vice-like grip on banning dubbed content because common people now understand the need for having an open mind on dubbing. Desperate attempts to throw muck on common people and subjugate their voice.

  ಪ್ರತಿಕ್ರಿಯೆ
 11. Dhananjaya Kulkarni

  ಡಬ್ಬಿಂಗ್ ಬೇಡ ಎನ್ನುವವರು ಯಾವುದೇ ತರ್ಕವಿಲ್ಲದೇ ಮಾತನಾಡುತ್ತಿದ್ದಾರೆ…ನಿಮ್ಮ ಕ್ರಿಯೇಟಿವಿಟಿಯ ಬಗ್ಗೆ, ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೆ ವಿಶ್ವಾಸವಿಲ್ಲದಿದ್ದಾಗ ಇಂತಹ ಹುಂಬುತನದ ವಾದಗಳು ಹುಟ್ಟಿಕೊಳ್ಳುತ್ತವೆ. ಕನ್ನಡಕ್ಕೆ ಇತರೆ ಭಾಷೆಯ ಸಿನೆಮಾಗಳು, ದಾರಾವಾಹಿಗಳು ಡಬ್ ಆಗಬಾರದು ಎಂತಾದರೆ, ನೀವು ಪರಭಾಷಾ ಕಲಾವಿದರಿಗೆ ಏಕೆ ಮಣೆ ಹಾಕುತ್ತಿದ್ದೀರಿ? ಕನ್ನಡದ ಪ್ರತಿಭೆಗಳನ್ನು ಬೆಳೆಸುತ್ತಿಲ್ಲ ಏಕೆ? ಕನ್ನಡದ ಹಾಡುಗಳನ್ನು ಹಾಡಲು ಸೋನು ನಿಗಮ್, ಶ್ರೇಯಾ ಘೋಶಲ್ ಅವರೇ ಬೇಕಾ? ಕನ್ನಡದಲ್ಲಿ ಗಾಯಕರು ಯಾರೂ ಇಲ್ಲವೇ? ಕನ್ನಡದಲ್ಲಿ ನೀವು ಸರಿಯಾಗಿ ಅವಕಾಶ ನೀಡುತ್ತಿಲ್ಲ ಎಂದು ಅನೇಕ ಕಲಾವಿದರು ಬೇರೆ ರಾಜ್ಯಗಳಿಗೆ ವಲಸೆ ಹೋಗಿದ್ದಾರೆ. ಅವರನ್ನ ಮತೆ ಕನ್ನಡದ ಸೇವೆ ಮಾಡಲು ನೀವು ಯಾವ ಪ್ರಯತ್ನ ಮಾಡಿದ್ದೀರಿ? ಸುಮ್ಮನೇ ಸ್ಟಾರ್ ಕಲಾವಿದರೆನಿಸಿಕೊಂಡವರನ್ನ ಮುಂದಿಟ್ಟುಕೊಂಡು ಮೊಂಡುವಾದ ಮಾಡದೇ ವಾಸ್ತವಕ್ಕೆ ಹತ್ತಿರವಾಗುವಂತೆ ಮಾತನಾಡಿ….

  ಪ್ರತಿಕ್ರಿಯೆ
 12. harsha

  @ TN Seetharam avare,
  we are not saying we will watch everything which is dubbed, all we are saying is with dubbing we get more option. At the end its the audience who decides what he/she wants to watch!
  Some content producers want the benefits of capitalism but consumers are not eligible anno thara matu adutare.. they feel that consumers are fit to live in restrictive environment enforced by committee n control..
  The general pool of film makers/ films in Kannada film industry is below par when compared to other language movies released in Karnataka. Even the average movies are usually copied from other languages which were released in Karnataka few week/month/years ago.. so, when a person has watched the movie in original, why would he watch the remake in Kannada? instead of rolling out remakes, let the movie be dubbed into Kannada.. Then no producer would care to invest on remakes unless there can be something substantial is seen in a remake..
  this would ensure that local nativity would get highlighted and our movies will reflect the social, economic n political situations (just like the award winning movies which run in single show, single screen).. also, the imaginative popcorn movie for a Kannada audience wont be determined by the success of tht concept in tamil n telugu industry..
  @ Jogi,
  I also listened to that radio show and there were many other people who were trying to air their opinions! that show looked like fixed and carried opinions of pro-dubbing camp.
  Also, I have read your articles in Udayavani which are totally one-sided and looks more like an opinion column of the pro-dubbing group.

  ಪ್ರತಿಕ್ರಿಯೆ
 13. ಅರುಣ್

  ಜೋಗಿಯವರೆ, ಡಬ್ಬಿಂಗ್ ಬೇಕು ಎನ್ನುವವರನ್ನು ಚಾನಲ್ಲುಗಳ ಕೃಪಾಪೋಷಿತ ಹೋರಾಟಗಾರು ಎಂದಿದ್ದೀರ ತಾವು ಇಲ್ಲಿ ಕಮೆಂಟ್ ಬರೆಯುವುದಕ್ಕೆ ಮುಂಚೆ ತಮ್ಮ ಕಮೆಂಟ್ ಗೆ ಬೆಂಬಲಿಸುವ ಮಾಹಿತಿಯನ್ನು ಕಲೆ ಹಾಕೆ ಬರೆದಿದ್ದೀರೆ? ದಯವಿಟ್ಟು ಹೇಗೆ ಡಬ್ಬಿಂಗ್ ಬೇಕು ಎನ್ನುವವರು ಚಾನೆಲ್ ಗಳ ಕೃಪಾಪೋಶಿತರು ಎನ್ನುವುದನ್ನು ತಿಳಿಸಿ.

  ಪ್ರತಿಕ್ರಿಯೆ
 14. ಅರುಣ್

  ಸೀತಾರಾಮ್ ರವರೆ, ತಾವು ಹೇಳೋದು ನಿಜವೇ ಆಗಿದ್ದಲ್ಲಿ ಜಗತ್ತಿನಲ್ಲಿ ಡಬ್ಬಿಂಗ್ ಅನ್ನೋದೆ ಇರುತ್ತಿರಲಿಲ್ಲ.
  <> ಅಂತ ಕೇಳಿದ್ದೀರ ಯಾವುದು ಉತ್ತಮ ಯಾವುದು ಉತ್ತಮವಲ್ಲ ಅನ್ನೊದನ್ನು ನಿರ್ದರಿಸೋದು ಯಾರು ಸ್ವಾಮಿ. ಇದು ಸಂವಿದಾನ ಬದ್ದವಾದ ಸೆಂಸ್ಸಾರ್ ಮಂಡಳಿ ಓಕೆ ಎಂದ ಚಿತ್ರಗಳು ಉತ್ತಮವೇ ಉತ್ತಮವಲ್ಲವೇ ಎನ್ನೋದನ್ನು ನಿರ್ದರಿಸೋದು ನೋಡುಗರು.

  ಪ್ರತಿಕ್ರಿಯೆ
 15. ಟಿ.ಕೆ. ದಯಾನಂದ

  ಜೋಗಿಯವರ ವಾದ ಅವರ ಪಾಲಿಗೆ ಸಮಂಜಸವೇ, ಕನ್ನಡಪ್ರಭ ಮತ್ತು ಉದಯವಾಣಿಯಂತಹ ಚಲನಚಿತ್ರ ಜಾಹಿರಾತುಗಳನ್ನು ನಂಬಿ ಬದುಕುವ ಪತ್ರಿಕೆಗಳಲ್ಲಿ ಕೆಲಸ ನಿರ್ವಹಿಸಿದ್ದರ ಪರಿಣಾಮವೋ ಏನೋ, “ಚಿತ್ರರಂಗದ ವಿರುದ್ಧ ಸುದ್ದಿ ಪ್ರಕಟಿಸಿದರೆ ಅಥವ ನಿಲುವು ತಳೆದರೆ ಜಾಹಿರಾತು ನಷ್ಟವುಂಟಾಗುವ ಭಯ”ವನ್ನು ಪತ್ರಿಕಾ ಮಾಲೀಕರು ಚಲನಚಿತ್ರ ಪತ್ರಕರ್ತರೂ ಆಗಿರುವ ಜೋಗಿಯವರ ಹೆಗಲಿಗೆ ದಾಟಿಸಿದಂತಿದೆ. ಮೂರುಕಾಸಿನ ಹಳೇ ತಮಿಳು ತೆಲುಗು ಚಿತ್ರಗಳ ಬಗ್ಗೆ ಹರಿಹಾಯುವ ಜೋಗಿಯವರಿಗೆ ನಮ್ಮದೇ ಕನ್ನಡ ಚಿತ್ರರಂಗ ಇನ್ನಾದರೂ ಒಂದೂವರೆ ಕಾಸಿನಷ್ಟಾದರೂ ಏಕೆ ಬಾಳುತ್ತಿಲ್ಲವೆಂಬ ಅರಿವಿಲ್ಲದೆಯೇನೂ ಇಲ್ಲ. ಅಮೀರ್ ಖಾನ್ ಕನ್ನಡಕ್ಕೆ ಬಂದು ಕನ್ನಡವನ್ನು ಉಳಿಸಿಬಿಡುತ್ತಾರೆ ಯಾರಂದರು ಸ್ವಾಮಿ? ಅಮೀರ್ ಖಾನ್ ಎತ್ತಿ ಹಿಡಿಯುತ್ತಿರುವ ಸಾಮಾಜಿಕ ಅನಿಷ್ಟಗಳ ವಿರುದ್ಧದೆಡೆಗಿನ ಕಾಳಜಿಯನ್ನು ಕನ್ನಡಕ್ಕೆ ಕರೆತರಲು ಯಾರದ್ದೇನು ಅಡ್ಡಿ. ಶಿವರಾಜಕುಮಾರ್ ಸುವರ್ಣಟೀವಿಯ ಕಾರ್ಯಕ್ರಮದಲ್ಲಿ ಬಿಚ್ಚಿಟ್ಟದ್ದು ನೊಂದ ಜನರ ವೈಯುಕ್ತಿಕ ಸಂಕಷ್ಟಗಳನ್ನು, ದೇಶವೊಂದನ್ನು ಸಾಮೂಹಿಕವಾಗಿ ಪೀಡಿಸುತ್ತಿರುವ ಸಾಮಾಜಿಕ ಬವಣೆಗಳನ್ನಲ್ಲ. ಆ ಕಾರ್ಯಕ್ರಮವೂ ಒಳ್ಳೆಯದಿತ್ತು ಇಲ್ಲವೆಂದವರು ಯಾರು? ಈ ಥರಹದ್ದೊಂದು ಕಾರ್ಯಕ್ರಮವನ್ನು ಮುನ್ಸೂಚನೆಯನ್ನೂ ಕೊಡದೆ ಸುವರ್ಣಟೀವಿಯವರು ಸ್ಥಗಿತಗೊಳಿಸಿದ್ದೂ ಜೋಗಿಯವರಿಗೆ ನೆನಪಿರಬೇಕು. ಆ ಪ್ರೋಗ್ರಾಂ ನಿಂತಿದ್ದಾರೂ ಏಕೆ ಎಂಬುದನ್ನು ಆ ಕಾರ್ಯಕ್ರಮದ ನಿರ್ಮಾಪಕರಲ್ಲೊಬ್ಬರನ್ನು ಕರೆದು ಕೇಳಿದರೆ ಇರುವ ವಾಸ್ತವ ಜೋಗಿಯವರಿಗೆ ಅರಿವಾದೀತೇನೋ. ಸ್ವಾಭಿಮಾನದ ಉದಾಹರಣೆಯನ್ನು ಕೊಡಲಿಕ್ಕೂ ತಮಿಳಿನ ಕಮಲಹಾಸನ್ ಮೊರೆ ಹೋಗುವ ಅವಶ್ಯಕತೆಯಿರಲಿಲ್ಲ. ಪ್ರಾದೇಶಿಕ ಸ್ವಾಭಿಮಾನಿಗಳಿಗೆ ಇನ್ನೂ ಅಂತಹ ಬರ ಬಂದಿಲ್ಲ ಜೋಗಿಯವರೇ. ಕಮಲಹಾಸನರ ಬಿರುದಾದರೂ ಏನೆಂದಿದೆ.. “ಉಲಗ ನಾಯಗನ್ – ಯೂನಿವರ್ಸಲ್ ಹೀರೋ” ಆತ ತಮಿಳಿನವನು ಮಾತ್ರವಲ್ಲ ವಿಶ್ವದ ಕಲಾವಿದ ಎಂಬರ್ಥದ ಬಿರುದದು. ಕನ್ನಡ ಬೇರೆ ಕನ್ನಡ ಚಲನಚಿತ್ರಗಳು ಬೇರೆಯಾಗಿ ನೋಡಬೇಕಿರುವ ಟೈಮಿನಲ್ಲಿ ನಾವಿದ್ದೇವೆ. ಕನ್ನಡದ ಪರಿಮಳ ಅಂತಃಸತ್ವವನ್ನ ಒಂದೂವರೆ ಕಾಸಿನ ಕಳಪೆ ಚಿತ್ರರಗಳು ಕೊಲ್ಲುತ್ತಿರುವುದರಿಂದಲೇ ಕನ್ನಡ ಚಿತ್ರಗಳನ್ನು ಕೆಟ್ಟ ಚಿತ್ರಗಳೆಂದು ನಟೋರಿಟಿ ಪಡೆದಿವೆಯೇ ಹೊರತು ಕೆಟ್ಟ ಕನ್ನಡ ಚಿತ್ರಗಳಿಂದ ಕನ್ನಡವೆಂದೂ ಕೆಟ್ಟದ್ದು-ಕಳಪೆ ಎಂದು ಬ್ರಾಂಡ್ ಆಗಿಲ್ಲ. ಇಲ್ಲಿ ಕನ್ನಡವೇ ಬೇರೆ ಕನ್ನಡಚಿತ್ರಗಳೇ ಬೇರೆ. ಶಬ್ದಮಣಿದರ್ಪಣವೆಲ್ಲಿ, ಕೆಂಚಾಲೋ ಮಂಚಾಲೋ ಕರ್ಕಶತೆಯೆಲ್ಲಿ? ತಪ್ಪು ಕೆಂಚಾಲೋ ಮಂಚಾಲೋ ಶೈಲಿಯದ್ದು ಶಬ್ದಮಣಿದರ್ಪಣದ್ದಲ್ಲ. ಜೋಗಿಯವರ ಕೊನೆಯ ಸಾಲಿನ ಅನುಮಾನವೇ ಹಾಸ್ಯಾಸ್ಪದವಾಗಿದೆ. ಇತ್ತೀಚೆಗೆ ಕೋಡಿಹಳ್ಳಿಯವರಿಗೆ ಬಿಟಿ ಬದನೆ ಬೆಳೆಯಲು ಪ್ರತಿಭಟಿಸುವ ನೀವು ಡಬ್ಬಿಂಗ್ ಪರ ಏಕೆ ನಿಂತಿದ್ದೀರಿ ಬಿಟಿಬದನೆಯನ್ನು ಒಳಬರಲು ಬಿಡಿ ಎಂಬ ಪ್ರಶ್ನೆ ಕೇಳಿದ್ದರು. ನಿಜವೇ. ಆದರೆ ನಾವು ಕೇಳುತ್ತಿರುವುದು ಆರೋಗ್ಯಕರ ಬದನೆಯನ್ನು ಕನ್ನಡ ಚಿತ್ರರಂಗ ಕೊಡುತ್ತಿರುವುದು ಕೊಳೆತ ಬದನೆಯನ್ನು ಎಂಬುದೂ ಕೂಡ ಚರ್ಚಾರ್ಹವೇ ಅಲ್ಲವೇ ಜೋಗಿಯವರೇ?

  ಪ್ರತಿಕ್ರಿಯೆ
 16. Kannadiga

  ನಾನು ಏನನ್ನು ನೋಡಬೇಕು ಎಂಬುದನ್ನು ನಿರ್ಧರಿಸುವ ಸಾಂಸ್ಕೃತಿಕ ಯಜಮಾನಿಕೆಯನ್ನು ಶಿವರಾಜಕುಮಾರ್ ಅವರಿಗಾಗಲಿ, ಟಿ.ಎನ್.ಸೀತಾರಾಂ ಅವರಿಗಾಗಲೀ, ಬಿ.ಸುರೇಶ ಅವರಿಗಾಗಲಿ, ಮತ್ಯಾರಿಗಾಗಲೀ ನಾನು ನೀಡಿಲ್ಲ. ಅಂಥ ಸಾಂಸ್ಕೃತಿಕ-ಸಾಮಾಜಿಕ ಹೊಣೆಗಾರಿಕೆಯನ್ನು ಸುಖಾಸುಮ್ಮನೆ ನಿಮ್ಮಗಳ ಹೆಗಲ ಮೇಲೆ ಯಾಕೆ ಹೊತ್ತುಕೊಂಡು ಓಡಾಡುತ್ತೀರಿ? ನಿಮ್ಮ ಲಾಭ-ನಷ್ಟದ ವಿಷಯಗಳನ್ನು ಮಾತನಾಡಿ, ನಮ್ಮ ಅಭಿರುಚಿಗಳ ಬಗ್ಗೆ ನಿಮ್ಮ ಪ್ರೌಢಪ್ರಬಂಧಗಳನ್ನೇಕೆ ಹೇರುವಿರಿ? ಕನ್ನಡ ಪ್ರೇಕ್ಷಕನನ್ನು ನೀವು ಅಷ್ಟೊಂದು ಅಂಡರ್ ಎಸ್ಟಿಮೇಟ್ ಮಾಡಿರುವಿರಾ?

  ಪ್ರತಿಕ್ರಿಯೆ
 17. ಜಯಂತ

  ಅಲ್ಲ Jogi ಮಹಷೆಯರೇ, ಕನ್ನಡವನ್ನು ಉಳಿಸೋದಕ್ಕೆ ಅಮೀರ್ ಖಾನ್ ಬರಬೇಕು ಬಿಡಬೇಕೋ ಅನ್ನೋದರ ಬಗ್ಗೆ ಆಮೇಲೆ ಮಾತಾಡಣ..ಮೊದ್ಲು ಡಬ್ಬಿಂಗ್ ಬೇಡ ಅನ್ನೋ ನಮ್ಮ ಸಿನಿಮ ಜೋಗಿ “ಕರ್ನಾಟಕದ 13 ಚಿತ್ರಮಂದಿರಗಳಲ್ಲಿ ಮಗಧೀರ ಅರ್ಧ ಶತಕ ಪೂರೈಸಿರುವುದು ಖುಷಿ ಕೊಟ್ಟಿದೆ” http://www.youtube.com/watch?v=MxWctRXFtZk ಅಂತ ಹೇಳ್ತಾರಲ್ಲ ಅದು ಕನ್ನಡ ಪರನ ..?? ತಾವು ಮತ್ತು ಡಬ್ಬಿಂಗ್ ವಿರೋದಿಗಳು ಪರಭಾಷೆಯ ಸಿನಿಮಾ ನೋಡ್ತಾರೆ ಬೇಡ ಅನ್ನೋಕ್ಕೆ ನನಗೆ ಅಥವಾ ಡಬ್ಬಿಂಗ್ ಪರ ಇರೋರಿಗೆ ಅದಿಕಾರ ಇಲ್ಲ ಆದ್ರೆ ನಾನು ಮತ್ತು ಅದೇ ಜನ ಮಗದಿರ ಸಿನೆಮಾನ ಕನ್ನಡದಲ್ಲಿ ನೋಡಿದ್ರೆ ಯಾಕೆ ತಪ್ಪು ಆಗುತ್ತೆ ?

  ಪ್ರತಿಕ್ರಿಯೆ
 18. Jayaprakash

  ಸೀತಾರಾಂ ಅವರೆ,
  ನೀವು ಅಷ್ಟೊಂದು ಬುದ್ಧಿವಂತಿಕೆಯಿಂದ ತಮ್ಮ ಧಾರಾವಾಹಿ ತೆಗೆದಮಾತ್ರಕ್ಕೆ, ತಮ್ಮ ನೋಡುಗರನ್ನೆಲ್ಲ ಬರೀ ದಡ್ದರು ಎಂದು ಹೇಗೆ ತೀರ್ಮಾನಕ್ಕೆ ಬಂದಿರಿ? ಅಷ್ಟೊಂದು ತಾತ್ಸರವೆ ನಿಮ್ಮ ಅಭಿಮಾನಿಗಳ ಮೇಲೆ? ಅಥವಾ ಅಲ್ಲಿ ಡೈಲಾಗ್ ಹೊಡೆದಾಗೆ ನಿಜಜೀವನದಲ್ಲೂ ಡೈಲಾಗ್ ಹೊಡೆಯುವ ಚಟವೆ? ಅಲ್ಲ ಸ್ವಾಮಿ, ಡಬ್ಬಿಂಗ್ ನಿಂದಾದರು ಬರಲಿ, ಸ್ವಮೇಕ್ ಆದ್ರೋ ಆಗಲಿ, ರಿಮೇಕ್ ಆದ್ರು ಆಗಲಿ, ಯಾವುದು ಒಳ್ಳೆ ಕಾರ್ಯಕ್ರಮ, ಯಾವುದು ಕೆಟ್ಟದ್ದು ಎಂಬ ಕಲ್ಪನೆ ಪ್ರತಿ ನೋಡುಗನಿಗೂ ಇರುತ್ತದೆ. ಇಲ್ಲವಾಗಿದ್ದಲ್ಲಿ, ನಿಮ್ಮ ಮುಕ್ತಮುಕ್ತ ದಂತ ಕಾರ್ಯಕ್ರಮದ ವೇಳೆ, ಇನ್ನಾರೋ ಯಾವುದೋ ಡಬ್ಬ ಕಾರ್ಯಕ್ರಮವನ್ನು ಹಾಕಿದ್ದರೂ ಜನ ನಿಮ್ಮ ಧಾರವಾಹಿಯನ್ನೇ ನೋಡುತ್ತಿರುಲಿಲ್ಲ. ನಿಮ್ಮನ್ನು ಗೆಲ್ಲಿಸುತ್ತಿರುಲಿಲ್ಲ. ನಿಮ್ಮ ಧಾರವಾಹಿಲೂ ಕೂಡ ಕೆಲವು ಸಲ ಟೈಮ್ ಪಾಸಿಕೆ ಕೆಲವು ಸೀನ್ ಗಳನ್ನು ಎಳೆದು ಎಳೆದೂ ತೋರಿಸ್ತಿರಿ. ಅಂಥ ಸಮಯದಲ್ಲಿ ನಾನು ಬೇರೆ ಚಾನೆಲ ನೋಡುತ್ತೇನೆ. ನಿಮ್ಮ ಧಾರವಾಹಿಗೇ ಈ ಗತಿ ಆದಮೇಲೆ, ಡಬ್ಬಿಂಗ್ ನಿಂದ ಒಂದು ವೇಳೆ ಡಬ್ಬಾ ಕಾರ್ಯಕ್ರಮ ಬಂದರೆ, ಸುಮ್ನೆ ನೋಡುವ ಡಬ್ಬಾಗಳಂತು ಕನ್ನಡಿಗರಲ್ಲ. ಈ ಬಗ್ಗೆ ನಿಮ್ಮ ತಿಳುವಳಿಕೆ ಹೆಚ್ಚಿಸಿಕೊಳ್ಳಿ. ಒಂದು ವೇಳೆ ಗೊತ್ತಿದ್ದೂ ನಾಟಕ ಆಡುತಿದ್ದರೆ, ತಮ್ಮ ಬಂಡವಾಳ ಬಯಲಾಗುತ್ತೆ ಬಿಡಿ!
  ಒಟ್ಟಿನಲ್ಲಿ, ತಮ್ಮ ಬಗ್ಗೆ ಇನ್ನೂ ಉಳಿದಿರುವ ಗೌರವದಿಂದ ಹೇಳುತಿದ್ದೇನೆ.. ಬೇರೆಯವರ ನೋಡುವ ಸ್ವಾತಂತ್ರ ಕೀಳಲು ನೀವು ಸಹಕಾರ ಕೊಡಬೇಡಿ. ನಿಮ್ಮ ಅಂದಾಜುಗಳನ್ನೇ ಕನ್ನಡಿಗರ ಅಭಿರುಚಿ ಎಂದು ಮುಕ್ತಮುಕ್ತ ಸ್ಟೈಲ್ ನಲ್ಲಿ ಜೆನರಲೈಜ಼್ ಮಾಡಬೇಡಿ. ಇದು ಪ್ರಜಾಪ್ರಭುತ್ವ, ಮರೆಯದಿರಿ.
  -ನಮಸ್ಕಾರ.

  ಪ್ರತಿಕ್ರಿಯೆ
 19. jogi

  @ಅರುಣ್ : ಡಬ್ಬಿಂಗ್ ಬೇಕು ಅನ್ನುವ ವಾದ ಶುರುವಾಗಿದ್ದು ಸುಮಾರು ವರ್ಷಗಳ ಹಿಂದೆ. ಅದನ್ನು ಶುರುಮಾಡಿದ್ದು ಚಾನಲ್ಲುಗಳೇ. ಇವತ್ತೂ ಡಬ್ಬಿಂಗು ಮಾಡುವ ಅವಕಾಶ ಸಿಕ್ಕರೆ ಚಾನಲ್ಲುಗಳಿಗೇ ಲಾಭ. ಅದು ಹೇಗೆ ಅಂತ ಮತ್ತೆ ವಿವರಿಸಬೇಕಾಗಿಲ್ಲ. ಹೀಗಾಗಿ ಆ ಚಾನಲ್ಲುಗಳಿಗೆ ಸಂಬಂಧಪಟ್ಟವರು, ಅದರೊಳಗಿರುವವ ಕೃಪಾಪೋಷಿತರೇ ಆ ಹುಯಿಲೆಬ್ಬಿಸಿದ್ದು.ಇತ್ತೀಚಿನ ಪ್ರಯತ್ನಗಳೂ ಅಂಥವೇ.
  @ All friends:
  ಹೀಗೆ ಮಾತಾಡುತ್ತಿರುವ ಹೊತ್ತಿಗೆ ಇವತ್ತು ಬೆಳಗ್ಗೆ ನನ್ನ ಮಗಳು ಪೋಗೋ ಚಾನಲ್ಲು ಹಾಕಿದಳು. ಅಲ್ಲಿ ನಿನ್ನೆಯ ತನಕ ಇಂಗ್ಲಿಷಿನಲ್ಲಿ ಬರುತ್ತಿದ್ದ ಛೋಟಾ ಭೀಮ್ ಇವತ್ತು ತಮಿಳಿನಲ್ಲಿ ಬಂತು. ಯಾಕೋ ತುಂಬ ಬೇಸರ ಆಯ್ತು. ನನ್ನ ಮಗಳು ಅದು ಯಾವ ಭಾಷೆ ಅಂತ ಕೇಳಿ ಒಂದೆರಡು ನಿಮಿಷ ನೋಡಿ ಚಾನಲ್ ಬದಲಾಯಿಸಿದಳು. ಕೇಬಲ್ ಆಪರೇಟರಿಗೆ ಕೇಳಿದರೆ ಇಂಗ್ಲಿಷ್ ವರ್ಷನ್ ಬರುತ್ತಿಲ್ಲ ಅಂದ. ನಮಗೆ ಬೇಕಾದದ್ದೇ ಬರುತ್ತದೆ ಅಂತೇನಿಲ್ಲ. ಬೇಡದ್ದೂ ಬರುತ್ತದೆ.
  ಡಬ್ಬಿಂಗ್ ಬೇಕು ಅನ್ನುವವರೂ ಬೇಡ ಅನ್ನುವವರೂ ಇಬ್ಬರೂ ಕನ್ನಡಿಗರೇ. ನನ್ನ ನಿಲುವು ಡಬ್ಬಿಂಗ್ ಬೇಡ ಅನ್ನುವುದು. ಬೇಕು ಅನ್ನುವವರ ನಿಲುವನ್ನು ಪ್ರಶ್ನಿಸುವ ಅಧಿಕಾರ ನನಗಿಲ್ಲ ಎಂಬುದನ್ನೂ ನಾನು ಬಲ್ಲೆ. ಹಾಗೇ ಬೇಡ ಅನ್ನುವ ನನ್ನ ವೈಯಕ್ತಿಕ ನಿಲುವನ್ನೂ ಯಾರೂ ಪ್ರಶ್ನಿಸುವ ಹಾಗಿಲ್ಲ. ನಾನು ಡಬ್ಬಿಂಗ್ ಕಾರ್ಯಕ್ರಮಗಳನ್ನು ನೋಡುವುದಿಲ್ಲ ಎಂದು ಕೂತುಬಿಟ್ಟರೆ, ನನ್ನಂಥವರು ತುಂಬ ಸಂಖ್ಯೆಯಲ್ಲಿದ್ದರೆ ಡಬ್ಬಿಂಗ್ ತಾನೇ ತಾನಾಗಿ ಬಿದ್ದು ಹೋಗುತ್ತದೆ. ಆ ನ್ಯಾಚುರಲ್ ಡೆತ್ ಸಂಭವಿಸುವುದಕ್ಕೆ ಒಂದು ತಲೆಮಾರು ಹಿಡಿಯಬಹುದು, ಎರಡು ಶತಮಾನ ಬೇಕಾಗಬಹುದು, ಯಾರಿಗೆ ಗೊತ್ತು.
  ಇವತ್ತು ನಮ್ಮ ಪರವಾಗಿ ಯೋಚಿಸುವುದಕ್ಕೆ ಯಾರೂ ಬೇಕಾಗಿಲ್ಲ ಅನ್ನುವ ತೀರ್ಮಾನಕ್ಕೆ ಬಹುತೇಕರು ಬಂದಿದ್ದೇವೆ. ನಾಯಕತ್ವದ ಅಗತ್ಯ ಕಾಣಿಸುತ್ತಿಲ್ಲ. ಹೀಗಾಗಿ ಸೀತಾರಾಮ್ ಸರ್ ಹೇಳಿದ್ದಾಗಲೀ, ಸುರೇಶ್ ಹೇಳುತ್ತಿರುವುದಾಗಲೀ, ಶಿವರಾಜ್ ಮಾತಾಡುತ್ತಿರುವುದಾಗಲೀ, ಅನಕೃ, ರಾಮಮೂರ್ತಿ, ರಾಜ್ ಕುಮಾರ್ ಸೇರಿ ಮಾಡಿದ್ದಾಗಲೀ, ಅವರ ಅನುಭವದ ಆಧಾರದ ಮೇಲೆ. ಒಂದು ಸಮಸ್ಯೆಯ ಎರಡೂ ಮಗ್ಗಲನ್ನು ನೋಡಿ ತೆಗೆದುಕೊಂಡ ನಿರ್ಧಾರ. ಅದನ್ನು ಸುಮ್ಮನೆ ಬೆಂಬಲಿಸಬೇಕು ಎಂಬ ಐಕಮತ್ಯ ಕಾಣಿಸುತ್ತಿಲ್ಲ. ಚಿಂತನೆ ಕೂಡ ವಿಕೇಂದ್ರೀಕರಣಗೊಂಡಿದೆ. ನಾವು ಕಾನೂನನ್ನು ನಂಬುತ್ತೇವೆ. ಧರ್ಮದ ಸ್ಥಾನಕ್ಕೆ ಕಾನೂನು, ಕಟ್ಟಳೆಯ ಸ್ಥಾನಕ್ಕೆ ನ್ಯಾಯಾಲಯ ಬಂದುಕೂತಿದೆ.
  ಇಂಥ ಹೊತ್ತಲ್ಲಿ ಹೊರಗಿನಿಂದ ನೋಡುವವರಿಗೆ ನಾವು ಕಿತ್ತಾಡುತ್ತಿದ್ದೇವೇನೋ ಎಂಬ ಭಾವನೆ ಬರುವಂತಿದೆ. ಇದು ಯಾವುದೇ ಭಾಷೆಗೂ ಸೊಗಸಲ್ಲ.
  ಒಂದು ಸ್ಪಷ್ಟೀಕರಣವನ್ನಂತೂ ನೀಡಲೇಬೇಕಾಗಿದೆ. ನನ್ನ ನಿಲುವು ಕೇವಲ ನನ್ನದು. ಇದರಲ್ಲಿ ನಾನು ಕೆಲಸ ಮಾಡುವ ಪತ್ರಿಕೆಯ ಒತ್ತಾಯವಾಗಲಿ, ಒತ್ತಡವಾಗಲೀ ಇಲ್ಲ. ಅಷ್ಟಕ್ಕೂ ಡಬ್ಬಿಂಗ್ ಬಂದರೂ ಜಾಹೀರಾತು ಬಂದೇ ಬರುತ್ತದೆ.ಸಿನಿಮಾ ಯಾವುದೇ ಆದರೂ ಪ್ರಚಾರ ಬೇಕೇ ಬೇಕು.
  ಒಂದೇ ವಿಚಾರವನ್ನಿಟ್ಟುಕೊಂಡು ತುಂಬ ಮಾತಾಡಿದರೆ, ಮತ್ತೆ ಮತ್ತೆ ಅದನ್ನೇ ಹೇಳುತ್ತಿರುತ್ತೇವೆ. ಹೀಗಾಗಿ ನನ್ನ ನಿಲುವಿಗೆ ಬದ್ಧನಾಗಿದ್ದುಕೊಂಡು, ನಾನು ಚರ್ಚೆಯಿಂದ ಹಿಂದೆ ಸರಿಯುತ್ತಿದ್ದೇನೆ. ಒಂದಂತೂ ನಿಜ. ಕಳೆದ ನಲವತ್ತು ಚಿಲ್ಲರೆ ವರ್ಷಗಳಲ್ಲಿ ನಾನು ಐದೋ ಆರೋ ತಮಿಳು ಸಿನಿಮಾಗಳನ್ನು, ಒಂದೆರಡು ತೆಲುಗು ಸಿನಿಮಾಗಳನ್ನು, ಹತ್ತಿಪ್ಪತ್ತು ಹಿಂದಿ ಸಿನಿಮಾಗಳನ್ನು ನೋಡಿರಬಹುದು. ಆದರೆ, ಸಾವಿರಕ್ಕೂ ಹೆಚ್ಚು ಕನ್ನಡ ಸಿನಿಮಾಗಳನ್ನು ನೋಡಿದ್ದೇನೆ. ಅದು ನನಗೆ ಸಂತೋಷ ಕೊಟ್ಟಿದೆ. ಜಗತ್ತಿನ ಮಾಹಿತಿಯನ್ನೆಲ್ಲ ತಂದು ಕಲೆಹಾಕುವ, ಅತ್ಯುತ್ತಮವಾದದ್ದನ್ನು ನಾನು ಎಲ್ಲಿದ್ದರೂ, ನನ್ನ ಭಾಷೆಯನ್ನು ಬಲಿಕೊಟ್ಟಾದರೂ, ನೋಡಬೇಕೆನ್ನುವ ಆಸೆ ನನಗಂತೂ ಖಂಡಿತಾ ಇಲ್ಲ.
  ನಮ್ಮಮ್ಮನಿಗೆ ಇಂಗ್ಲಿಷ್ ಬರುವುದಿಲ್ಲ, ಹಾಗಂತ ಕೊರಗಲಾರೆ. ನನ್ನ ಮಗಳು ಇಂಗ್ಲಿಷಲ್ಲೇ ಮಾತಾಡುತ್ತಾಳೆ. ಅದನ್ನೂ ತಡೆಯಲಾರೆ. ನಾನು ಕನ್ನಡ ಮಾತಾಡುತ್ತೇನೆ ಎನ್ನುವ ನಿರ್ಧಾರವಷ್ಟೇ ನನ್ನದು. ಇದೂ ಹಾಗೆಯೇ.
  ಸದ್ಯಕ್ಕಂತೂ, ಹತ್ತು ವರ್ಷಗಳ ನಂತರ ಇಡೀ ಚಿತ್ರಣ ಹೇಗಿರಬಹುದು ಎಂಬ ಊಹೆಯಲ್ಲಿ ವಿರಮಿಸುತ್ತಿದ್ದೇನೆ. ನಮಸ್ಕಾರ.

  ಪ್ರತಿಕ್ರಿಯೆ
  • ಅರುಣ್

   ಜೋಗಿ, ತಾವು ಸೇರಿದಂತೆ ಇನ್ನಿತರೇ ಕೆಲವೇ ಕೆಲವು ಜನ ಡಬ್ಬಿಂಗ್ ಬೇಡ ಎನ್ನುತ್ತಿರುವುದು… ಡಬ್ಬಿಂಗ್ ಬೇಡ ಎನ್ನುವುದಕ್ಕೆ ನಿಮಗೆ ಸೀತಾರಾಮ್, ಸುರೇಶ, ಶಿವರಾಜಕುಮಾರ್ ಎಲ್ಲರಿಗೂ ಅದಿಕಾರವಿದೆ. ಆದರೆ ಡಬ್ಬಿಂಗ್ ಬಿಡೋದೇ ಇಲ್ಲ ಅನ್ನೊಕ್ಕೆ ಯಾರು ಅದಿಕಾರ ಕೊಟ್ಟವರು? ನೀವೇ ಹೇಳಿದಂತೆ ನೀವು ಸೀತಾರಾಮ್ ಸುರೇಶ್, ಶಿವರಾಜಕುಮಾರ್ ಸೇರಿದಂತೆ ಇನ್ನಿತರ ಡಬ್ಬಿಂಗ್ ಗೆ ವಿರೋದವಿರುವವರು ಡಬ್ ಆದ ಸಿನೆಮಾ ನೋಡಬೇಡಿ ನಿಮ್ಮನ್ಯಾರು ನೋಡಿ ನೋಡಿ… ಅಂತ ಬಲವಂತ ಮಾಡಲ್ಲ…. ನೋಡೋರಿಗಾದ್ರು ಬಿಡಿ ಅದನ್ಯಾಕೆ ತಡೆಯುತ್ತಿರ. ನಿಮಗೆ ತಮಿಳು, ತೆಲುಗು, ಹಿಂದಿ ನಿಮ್ಮ ಮಕ್ಕಳಿಗೆ ಇಂಗ್ಲೀಶ್ ಬರುತ್ತೆ ನೀವು ನಿಮ್ಮ ಮಕ್ಕಳು ತಮಗೆ ಬೇಕಾದ ತಮಿಳು ತೆಲುಗು ಹಿಂದಿ ಸಿನೆಮಾ ನೋಡ್ತೀರ ಬೇರೆ ಬಾಶೆ ಬರದಿರದ ನನ್ನ ತರದವರು ಏನ್ ಮಾಡಬೇಕು ಸ್ವಾಮಿ? ನಾನು ಕನ್ನಡದಲ್ಲೇ ಎಲ್ಲವನ್ನು ಪಡೆಯಬೇಕೆಂಬ ನಿರ್ದಾರ ನನ್ನದು..

   ಪ್ರತಿಕ್ರಿಯೆ
 20. Harsha

  ಶಿವರಾಜ್ ಕುಮಾರ್ ಝೀ ಟಿವಿಯಲ್ಲಿ ನಡೆಸಿಕೊಟ್ಟ ಕಾರ್ಯಕ್ರಮಕ್ಕೂ ಸತ್ಯ ಮೇವ ಜಯತೆಗೂ ಬಹಳ ವ್ಯತ್ಯಾಸವಿದೆ ಸರ್. ಅದು ವ್ಯಕ್ತಿಕೇಂದ್ರಿತವಾದದ್ದು. ಇದು ಸಾಮಾಜಿಕ ಜಾಗೃತಿಯ ಗುರಿ ಹೊಂದಿರುವಂತದ್ದು ಅಲ್ಲದೇ ಸರ್ಕಾರದ ನೀತಿಗಳ ಮೇಲೆ ಒತ್ತಡ ಹೇರುವಂತದ್ದು. ಮೊನ್ನೆ ಅಮೀರ್ ಖಾನ್ 2 ನೇ ಎಪಿಸೋಡ್ ನಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ಈ ದೇಶದಲ್ಲಿ ಒಂದು ಕಾನೂನು ಇಲ್ಲದ್ದರ ನಗ್ಗೆ ಒತ್ತು ಕೊಟ್ಟು ಹೇಳಿದ್ದರು. ನೆನ್ನೆ ಸರ್ಕಾರ ಈ ಕುರಿತು ಮಸೂದೆಯನ್ನು ಪಾಸ್ ಮಾಡಿದೆ. ಗಮನಿಸಿ.

  ಪ್ರತಿಕ್ರಿಯೆ
 21. -ನೀಲಾಂಜನ್

  ಮಾನ್ಯ ಹರ್ಷರವರೆ ನಿಮ್ಮ ಮಾತಿಗೆ ನನ್ನದೊಂದು ಲೈಕು.
  ಅಮೀರ್ ಖಾನರು ಚಲನ ಚಿತ್ರದ ಮೂಲಕ ಹಮ್ಮಿಕೊಂಡ ದೇಶದ ಸಾಮಾಜಿಕ ಕಳಕಳಿಯ ಜಾಗೃತಿ ಮೂಡಿಸುವ೦ತಹ ಚಳವಳಿ , ಡಬ್ಬಿಂಗು ಬೇಡ ಅಂತ ಪ್ರೇಕ್ಷಕರ ಸ್ವಾತಂತ್ರ್ಯವನ್ನ , ಜ್ಜಾನದ ಅಭಿಲಾಷೆಯನ್ನ ಗುತ್ತಿಗೆ ತೆಗೆದುಕೊಂಡ ಕನ್ನಡ ಚಲಚಿತ್ರ ಮಾಧ್ಯಮದಿಂದ ಸಾಧ್ಯಾನಾ ? ಸಾಧ್ಯವಾದರೆ ನಾವು ಡಬ್ಬಿಂಗ್ ಬೇಡ ಅನ್ನುತ್ತೇವೆ. ದೇಶವೇ “ಸತ್ಯ ಮೇವ ಜಯತೆ” ಯ ಒಂದು ಚಿತ್ರದಿಂದ ಎಚ್ಚೆತ್ತು ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಒಂದು ಕಾನೂನು ಜಾರಿ ಮಾಡಬೇಕಾದರೆ ಅದರ ಪರಿಣಾಮವೇನು ಅಂತ ಆಲೋಚಿಸಬೇಕು.ಇದು ಸುಮಾರು 1200 ಕೋಟಿ ಜನರಿಗೆ ಸಂಬಂಧಿಸಿದ್ದು. ಇದನ್ನು ಸುಮಾರು 10 ಕೋಟಿ ಜನ ಸಂಖ್ಯೆ ಇರುವ ಕನ್ನಡಿಗರಿಗೆ 5000 ಸಾವಿರ ಮಂದಿ ನಂಬಿಕೊಂಡಿರುವ ಕನ್ನಡ ಚಲನ ಚಿತ್ರ ಮಾಧ್ಯಮದಿಂದ ಸಾಧ್ಯಾನಾ ?

  ಪ್ರತಿಕ್ರಿಯೆ
 22. ಹಂಸ

  ಜೋಗಿಯವರೆ, ಕನ್ನಡಕ್ಕೆ ಡಬ್ಬಿಂಗ್ ಬೇಕು ಎನ್ನೊರನ್ನು ಕನ್ನಡ ವಿರೋದಿಗಳು ಕನ್ನಡ ಚಿತ್ರವನ್ನು ನೋಡದವರು….ಕನ್ನಡವೇ ಕೀಳು ಎನ್ನುವವರು ಎಂದು ಟ್ಯಾಗ್ ಮಾಡುವ ಶೋಕಿಯಿಂದ ಆಚೆ ಬನ್ನಿ. ಡಬ್ಬಿಂಗ್ ಹೇಗೆ ಕನ್ನಡಕ್ಕೆ ಮಾರಕ ಎನ್ನುವುದನ್ನು ತಿಳಿಸಿ. ನೀವೆಷ್ಟು ಕನ್ನಡವನ್ನು ಪ್ರೀತಿಸುವಿರೋ ಅಷ್ಟೇ ನಾನು ಪ್ರೀತಿಸುತ್ತೇನೆ. ನನ್ನ ಮನೆಭಾಷೆ ತಮಿಳಾದರೂ ಕನ್ನಡವೇ ನನ್ನ ಮನದ ಮಾತಾಗಿದೆ, ನಾನು ಕನ್ನಡ ಮಾದ್ಯಮದಲ್ಲೇ ಓದಿ ಬಂದಿದ್ದೇನೆ, ನನ್ನ ಮಗುವನ್ನು ಕನ್ನಡ ಮಾದ್ಯಮದಲ್ಲೇ ಓದಿಸುತ್ತೇನೆ. ಕನ್ನಡ ಪ್ರೇಮದ ಬಗ್ಗೆ ತಮ್ಮಿಂದ ಟ್ಯಾಗ್ ಮಾಡಿಸಿಕೊಳ್ಳುವ ಅವಶ್ಯಕತೆ ನನಗೆ ಇಲ್ಲ. ನಿಮ್ಮಂತೆಯೇ ನಾನೂ ಸೇರಿದಂತೆ ಡಬ್ಬಿಂಗ್ ಬೇಕು ಎನ್ನುವವರೂ ಸಹ ನಿಮ್ಮನ್ನು ಬೇರೆ ಬೇರೆ ರೀತಿಯಲ್ಲಿ ಟ್ಯಾಗ್ ಮಾಡಬಹುದು. ಆದರೆ ನನಗೆ ಅಥವಾ ಡಬ್ಬಿಂಗ್ ಬೇಕು ಎನ್ನುವರಿಗೆ ಬೇಕಾಗಿದ್ದು ಡಬ್ಬಿಂಗ್ ಬೇಡ ಎನ್ನುವವರನ್ನು ಟ್ಯಾಗ್ ಮಾಡುವ ಶೋಕಿಯಲ್ಲ.

  ಪ್ರತಿಕ್ರಿಯೆ
 23. ಅರುಣ್

  ಇವತ್ತು ಡಬ್ಬಿಂಗು ಬೇಕಾಗಿರುವುದು ಪರಭಾಷೆಯ ಮಾಲಿಕರು ನಡೆಸುತ್ತಿರುವ ಚಾನಲ್ಲುಗಳ ಮಾಲೀಕರಿಗೆ ಮತ್ತು ಅವರ ಕೃಪಾಪೋಷಿತ ಹೋರಾಟಗಾರರಿಗೆ ಮತ್ತು ಮೂರುಕಾಸಿಗೆ ಹಳೇ ತಮಿಳು ತೆಲುಗು ಸಿನಿಮಾಗಳ ಡಬ್ಬಿಂಗ್ ಹಕ್ಕುಗಳನ್ನು ಖರೀದಿ ಮಾಡಿಟ್ಟುಕೊಂಡ ಒಂದಷ್ಟು ನಿರ್ಮಾಪಕರಿಗೆ ಮಾತ್ರ.
  ಹಾಗಾದರೆ ತಮಗೇಕೆ ಆತಂಕ? ಬೇಕಾಗಿರುವುದು ಕೆಲವೇ ಜನರಿಗೆ ಅಲ್ಲವೇ? ತಮ್ಮ ಪ್ರಕಾರ ಜನರಿಗೆ ಡಬ್ಬಿಂಗ್ ಬೇಡವಾಗಿದ್ದಲ್ಲಿ ಡಬ್ಬಿಂಗ್ ಸಿನೆಮಾ ಬರೋದೇ ಇಲ್ವಲ್ಲ.

  ಪ್ರತಿಕ್ರಿಯೆ
 24. ಮಹೇಶ

  ಮುಕ್ತ ಮುಕ್ತ ದಾರಾವಾಹಿ
  ಕಳಪೆನೋ ಅಥವಾ ಉತ್ತಮನೋ ಅಂತ ನಿರ್ದಾರ ಮಾಡಿದವರು ನಾವು ಪ್ರೇಕ್ಷಕರು. ಡಬ್ಬಿಂಗ್ ಕಾರ್ಯಕ್ರಮಗಳಿಗೂ ಇದು ಅನ್ವಯಿಸುತ್ತೆ. ಅನೇಕ ನಿರ್ಮಾಪಕರು ತಮಿಳು ಹಿಂದಿಯವರು ಅಂತ ಸಿಕ್ಕ ಸಿಕ್ಕದ್ದನ್ನೆಲ್ಲ ಅಲ್ಲಿಂದ ತಂದು ಡಬ್ ಮಾಡಿದ್ರೆ ನೋಡೊರ್ಯಾರು.? ಜನ ನೋಡುವುದಿಲ್ಲ ಎಂದ ಮೇಲೆ ಕಳಪೆ ಕಾರ್ಯಕ್ರಮಗಳು ಡಬ್ ಆಗುವುದನ್ನು ತಾನಾಗೇ ನಿಲ್ಲುತ್ತವೆ. ಕನ್ನಡ ಕಾರ್ಯಕ್ರಮಗಳು ಗೆಲ್ಲುವುದು ಸೋಲುವುದನ್ನು ಹೇಗೆ ಮಾರುಕಟ್ಟೆ ನಿರ್ದರಿಸುತ್ತದೆಯೇ, ಡಬ್ಬಿಂಗ್ ಕಾರ್ಯಕ್ರಮಗಳನ್ನೂ ಜನರು ನಿರ್ದರಿಸುತ್ತಾರೆ. ಟಿವಿಯಲ್ಲಿ ಬರೋದನ್ನೆಲ್ಲ ನೋಡೊಕೆ ಜನರೇನು ಮೂರ್ಖರಾ.? ಜನ ತಮಗೆ ಏನು ಬೇಕೋ ಅದನ್ನು ಆರಿಸಿಕೊಳ್ತಾರೆ. ಡಬ್ ಆಗುವ ಕಾರ್ಯಕ್ರಮಗಳು ಕಳಪೆ ಅಂತ ಅನ್ನಿಸಿದರೆ ಎಲ್ಲವೂ ತಿರಸ್ಕಾರಗೊಳ್ಳುತ್ತವೆ. ಹಾಗಾಗುತ್ತೆ, ಹೀಗಾಗುತ್ತೆ ಎಂಬ ಬುಡವಿಲ್ಲದ ತರ್ಕಗಳನ್ನು ಮುಂದೆ ಮಾಡಿ ಪ್ರೊಟೆಕ್ಟ್ ಮಾಡಿಕೊಳ್ಳುವುದು ಚಿತ್ರರಂಗಕ್ಖೂ ಮತ್ತು ಕನ್ನಡ ಪ್ರೇಕ್ಷಕರಿಗೂ ಒಳ್ಳೆಯದಲ್ಲ.

  ಪ್ರತಿಕ್ರಿಯೆ
 25. harsha

  ತಮ್ಮ ಮಕ್ಕಳಿಗೆ ಕನ್ನಡದಲ್ಲಿ, ಏನು ಅಂತ ಮನೋರಂಜನೆ ಕೊಡಕೆ ಅಗತೆ?
  ಅದೇ ಅತ್ತೆ ಸೊಸೆ ಜಗಳ, ವಾಸ್ತು ಜ್ಯೋತಿಷ , crime , ಭೂತ ಮಾತ ಮಂತ್ರ .. ಅದು ಬಿಟ್ರೆ ಸ್ವಲ್ಪ ಅಡುಗೆ, ಕೈ ನೋವು , ತಲೆ ನೋವು ಬಗೆ ವಿಮರ್ಶೆ..
  ಇವತ್ತು ನಾವು ಕನ್ನಡ ಚಾನೆಲ್ ನೋಡಿದ್ರೆ, ಸ್ವಲ್ಪ ಕೂಡ ಬುದ್ದಿ ಜಾಸ್ತಿ ಆಗೋಲ್ಲ .. ಇರೋದು ಕೂಡ ಕಮ್ಮಿ ಅಗತೆ.
  ಹೋಗ್ಲಿ, ಬೇರೆ ಅವರು ಮಾಡಿದ ಒಳ್ಳೆ ಮಾಹಿತಿ ಕಾರ್ಯಕ್ರಮ ನಮ್ಮ ಭಾಷೆ ನಲ್ಲಿ ಪ್ರಸಾರ ಮಾಡಿ ಅಂದ್ರೆ ; ೧೯೬೦ ಕತೆ ಹೇಳಕೆ ಶುರು ಮಾಡ್ತಾರೆ.
  ರೀ ಸ್ವಾಮಿ, ಇದು ೨೦೧೨ .. ಇನ್ನು ೧೯೬೦ ಶತಮಾನ ದಲ್ಲಿ ಇದ್ರೆ , ನಾವು ಏನು ಮಾಡಕೆ ಅಗತೆ! ಇವತಿನ ಪರಿಸ್ಹಿತಿ ಸರಿ ಹೊಂದುವ ಕೆಲಸ ಮಾಡಿ.
  ಸುಮ್ನೆ ಯಾವೋದು ಕಂತೆ ಪುರಾಣ ಹೇಳಿದ್ರೆ !!
  ಎಸ್ಟೋ ಮನೆನಲ್ಲಿ ಕನ್ನಡದಲ್ಲಿ ಬಾರೋ ಚಿಂಟು TV ನೋಡೋಲ್ಲ.. ಅದಕೆ ನಾವು ಚಿಂಟು TV ಜೊತೆ ಕಾರ್ಟೂನ್ ನೆಟ್ವರ್ಕ್ ಕೂಡ ಕನ್ನಡದಲ್ಲಿ ಪ್ರಸಾರ ಮಾಡಿ ಅಂದ್ರೆ, ಆಗ ಚಿಂಟು TV ಇದೆ ಅಲ್ವಾ ಅಂತ ಹೇಳ್ತಾರೆ.. 😀
  ಈಗಿನ ಯುವಕರ ಮೇಲೆ ನಂಬಿಕೆ ಇದೆ, ನಮಗೆ ಕನ್ನಡ ಬಗ್ಗೆ ಕಾಳಜಿ ಇದೆ.. ಅದಕೆ ಎಲ್ಲ ಕನ್ನಡದಲ್ಲಿ ಬೇಕು ಅಂತ ಕೇಳ್ತಾ ಇರೋದು..

  ಪ್ರತಿಕ್ರಿಯೆ
 26. Madhu bhat

  ಜೋಗಿ,
  ಕೃಪಾಪೋಷಿತಾ ಅನ್ನುವ ಪದ ನೀವು ಬಳಸುವದೇ ಆದರೆ, ನಿಮ್ಮ ಪತ್ರಿಕೆ ಕನ್ನಡ ಸಿನೆಮಾ ಜಾಹೀರಾತಿನ ಕೃಪಾಪೋಷಿತ ಪತ್ರಿಕೆ ಅಲ್ಲವೇ.ಡಬ್ಬಿಂಗ್ ವಿರುದ್ಧ ನಿಮ್ಮ ಲೇಖನ ಸರಣಿಯೋ ಇಲ್ಲ ಜಾಹೀರಾತೋ ತಿಳಿಯುತ್ತಿಲ್ಲ. ಇನ್ನು ಮುಂದೆ ಹೋಗಿ, ಮುಕ್ತಾನಲ್ಲಿ ಸಿ.ಎಸ್.ಪಿ ವಾದ ಕೇಳಿ ಜನ ಅವರನ್ನು ಐಕನ್ ಅಂದುಕೊಂಡಿಲ್ಲ, ಇಲ್ಲ ನಿಮ್ಮ ಶಿವಣ್ಣ ಮಚ್ಚು/ಲಾಂಗಗಳಿಗೆ ಹೆದರಿಯೂ ಅವರನ್ನು ಐಕನ್ ಅಂದುಕೊಂಡಿಲ್ಲ. ನೀವೆ ನೋಡಿ , ಬೇಕಿದ್ದರೆ ನಿಮ್ಮ ಪತ್ರಿಕೆಯಲ್ಲೇ ಕಳೆದ ೫ ವರುಷಗಳಿಂದ ಇವರಿಂದ ನಮ್ಮ ಕನ್ನಡ-ಕನ್ನಡಿಗ-ಕರ್ನಾಟಕ ಬಗ್ಗೆ ಎನು ಹೇಳಿಕೆ ಬಂದಿವೆ, ಪ್ರೇಕ್ಷಕನಿಗೂ ಗೊತ್ತು, ಯಾರನ್ನು ಎಲ್ಲಿ ಇಡಬೇಕು ಎಂದು. ನೀವು ಸುಮ್ಮನೆ ಇವರನ್ನು ದೊಡ್ಡದಾಗಿ ತೋರಿಸಿದ ಮಾತ್ರಕ್ಕೆ ಇವರು ಅ.ನ.ಕೃ ಮಾದರಿಗೆ ನಾಯಕರು ಆಗುವದಿಲ್ಲ. ಅಷ್ಟಕ್ಕೂ ೧೯೬೦ ಕಾಲವೇ ಬೇರೆ, ಆಗ ಡಬ್ಬಿಂಗ್ ಬೇಡ ಎಂದಿದ್ದ ಜನರಿಗೆ ೨೦೧೨ ನಲ್ಲಿ ಫೇಸಬುಕ್ ಕಲ್ಪನೆ ಇತ್ತಾ, ಮೊದೊಂದು ದಿನ ಟಿವಿ ಚಾನೆಲ್ ಬರುತ್ತದೆ ಎನ್ನುವ ಕಲ್ಪನೆ ಇತ್ತ, ಇಲ್ಲ ನಮ್ಮ ಕನ್ನಡ ಸಿನೆಮಾಗಳು ಮಚ್ಚು ಲಾಂಗ್ ಚಿತ್ರ ಮಾಡುತ್ತದೆ ಎಂದು ಕನಸು ಬಿದ್ದಿತ್ತಾ. ಅದ್ದರಿಂದ ಆ ಕಾಲಘಟ್ಟದ ಆಚೆ ಬಂದು ಚರ್ಚೆ ಮಾಡಿ.
  ಹಾಗೂ ಡಬ್ಬಿಂಗ್ ಬಂದರೆ, ನಿಮ್ಮ ಟಿವಿಯಲ್ಲಿ ಆ ಚಿತ್ರ ಎದುರಾದರೆ ನೋಡಿ, ನಿಮಗೆ ಬೇಡ ಎನಿಸಿದರೆ, ಕೈ ನಲ್ಲಿ ರಿಮೋಟ್ ಇದೆ, ಆಫ್ ಬಟನ್ ಎಲ್ಲಿದೆ ಅಂತ ಎಂದು ಗೊತ್ತಿದೆ ಅಲ್ವಾ …

  ಪ್ರತಿಕ್ರಿಯೆ
 27. ಮಲ್ಲೇಶ

  ಟಿ.ಎನ್. ಸೀತಾರಾಂ, ಬಿ.ಸುರೇಶ್‌, ಶಿವರಾಜಕುಮಾರ್ ರಂಥ ಕೆಲವು ಸ್ವಾರ್ಥಿಗಳು ತಮ್ಮ ಹಿತಾಸಕ್ತಿಗಾಗಿ ಡಬ್ಬಿಂಗ್ ವಿರೋಧಿಸುತ್ತಿದ್ದಾರೆ.
  ಡಬ್ ಆಗುವ ಕಳಪೆ ಕಾರ್ಯಕ್ರಮಗಳು ಜನರಿಗೆ ಇಷ್ಟ ಇಲ್ಲ ಅಂದ್ರೆ ಜನರೆ ಅದನ್ನ ತಿರಸ್ಕರಿಸ್ತಾರೆ. ಕಾರ್ಯಕ್ರಮಗಳು ಜನರಿಗೆ ಇಷ್ಟ ಆದರೆ ಅದನ್ನ ನೋಡ್ತಾರೆ. ಡಬ್ ಕಾರ್ಯಕ್ರಮಗಳನ್ನ ತಿರಸ್ಕರಿಸೋದು ಅಥವಾ ಒಪ್ಪಿಕೊಳ್ಳೋದು ಜನರಿಗೆ ಬಿಟ್ಟಿದ್ದು. ನಾವು ಏನು ನೋಡಬೇಕು-ಬೇಡ ಅನ್ನೋದನ್ನ ನಾಲ್ಕು ಮಂದಿ ಸ್ವಾರ್ಥಿಗಳು ನಿರ್ಧರಿಸೋದು ಬೇಡ. ಜಗತ್ತಿನಲ್ಲಿರುವ ಒಳ್ಳೆಯ ವಿಶಯ, ಜ್ನಾನ-ವಿಜ್ನಾನ ಇತ್ಯಾದಿಯನ್ನು ತನ್ನ ತಾಯ್ನುಡಿಯಲ್ಲಿ ಪಡೆಯುವ ಹಂಬಲ ಇರುವವರು ಕನ್ನಡ ವಿರೋಧಿಗಳೆ? ಇವೆಲ್ಲವನ್ನು ಆಯಾ ಭಾಶೆಯಲ್ಲೆ ನೋಡಬೇಕು ಅನ್ನೋದು ಕನ್ನಡಪರನಾ ? ಡಬ್ಬಿಂಗ್ ವಿರೋಧಿಸಿ ಕನ್ನಡಿಗರನ್ನ ಕನ್ನಡದಿಂದ ದೂರ ಮಾಡುವ ನಿಮ್ಮ ಕನ್ನಡ ವಿರೋಧಿತನಕ್ಕೆ ಧಿಕ್ಕಾರ.

  ಪ್ರತಿಕ್ರಿಯೆ
 28. Sunil

  “ನನ್ನ ಮಗಳು ಪೋಗೋ ಚಾನಲ್ಲು ಹಾಕಿದಳು. ಅಲ್ಲಿ ನಿನ್ನೆಯ ತನಕ ಇಂಗ್ಲಿಷಿನಲ್ಲಿ ಬರುತ್ತಿದ್ದ ಛೋಟಾ ಭೀಮ್ ಇವತ್ತು ತಮಿಳಿನಲ್ಲಿ ಬಂತು. ಯಾಕೋ ತುಂಬ ಬೇಸರ ಆಯ್ತು. ನನ್ನ ಮಗಳು ಅದು ಯಾವ ಭಾಷೆ ಅಂತ ಕೇಳಿ ಒಂದೆರಡು ನಿಮಿಷ ನೋಡಿ ಚಾನಲ್ ಬದಲಾಯಿಸಿದಳು. ಕೇಬಲ್ ಆಪರೇಟರಿಗೆ ಕೇಳಿದರೆ ಇಂಗ್ಲಿಷ್ ವರ್ಷನ್ ಬರುತ್ತಿಲ್ಲ ಅಂದ”
  @ಜೋಗಿ ಸರ್
  ಇವಾಗ ನಿಮ್ಮ ಮಗಳು ತಮಿಳು ಕಲಿಯಬೇಕು ಪೋಗೋ ನೋಡಲು 🙂 , ಆ ಒಂದು ಚಾನೆಲ್ ನೋಡಲು ಆ ಭಾಷೆ ಕಲಿಯೋ ಪರಿಸ್ಥಿತಿ ಬಂದಿದೆ..
  ಅದೇ ಚಾನೆಲ್ ನಮ್ಮ ಕನ್ನಡದಲಿ ಇದ್ದರೆ ನಿಮ್ಮ ಮಗಳು ಖುಷಿ ಪಡುತ್ತಿದಳು ಅಲ್ಲವೇ?

  ಪ್ರತಿಕ್ರಿಯೆ
 29. Pramod Chandrashekhariah

  ಒಳ್ಳೆ ಧಾರಾವಾಹಿಗಳು ಡಬ್ ಆದರೆ ನಿಮ್ಮ court scenes ಯಾರು ನೋಡಲ್ಲ ಅಂತ ಭಯಾನಾ ಸಾರ್? 🙂 (pun intended) ಬೇರೆ ಭಾಷೆಯವರು channel owners ಆಗಿದಾರೆ ಅಂತಿದೀರಿ ಅದು ನಿಜಾನೆ. ಆದರೆ ನಿಮ್ಮನ್ನು channels open ಮಾಡಬೇಡಿ ಎಂದು ban ಮಾಡಿದವರು ಯಾರು? ನಿಮ್ ನಿಮ್ಮಲ್ಲೇ ಪಾಳೆಗಾರರ ಥರ ಕಿತ್ತಾಡ್ಕೊಂಡು ಇದ್ರೆ ಒಳ್ಳೆ channel, studio, film city ಎಲ್ಲ ಎಲ್ಲಿಂದ ಬರತ್ತೆ. ಮೊದಲು ನಿರ್ಮಾಪಕ ನಿರ್ದೇಶಕರಿಗೆ ನಾಡಿನ ಏಳಿಗೆಯ ಮೇಲೆ ಕಿಂಚಿತ್ತು ಗಮನ ಇರಲಿ. ಆಮೇಲೆ ಜನರನ್ನು ದೂಷಿಸಿ. ಕನ್ನಡದ ಸತ್ಯಮೇವ ಜಯತೆ youtube ನಲ್ಲಿ ಎರಡೇ ದಿನಕ್ಕೆ 50,000 views reach ಆಗಿತ್ತು. ಅದನ್ನು ಷಡ್ಯಂತ್ರ ಮಾಡಿ ತೆಗೆಯುವ ಉದ್ದೇಶವೇನಿತ್ತು? ಅದು ಕಳಪೆ ಪ್ರೊಗ್ರಾಮ್ ಅಂತಾನೆ ಅಥವಾ ಜನಕ್ಕೆ ಬುದ್ಧಿ ಇಲ್ಲ ನೋಡ್ತಾರೆ ಅಂತಾನೆ? In 80s and 90s kannada viewership was pretty high. You people then misused all your powers by providing them bad products which eventually compelled them to detest kannada products completely (i am not talking about your serials. they were far better of others). Kannada industry could not even come up with innovative market strategies to sustain kannada audience. Dubbing could have been one such strategy. Dubbing can affect your serials and movies momentarily but remember that it will increase kannada viewership and avoid remaining kannadigas to get drifted away to other languages permanently ….

  ಪ್ರತಿಕ್ರಿಯೆ
 30. Praveen

  @ಟೀ ಏನ್ ಸೀತಾರಾಂ: ಈಗಿನ ನಮ್ಮ ದೇಶದ ವಾಸ್ತವ ಸ್ಥಿತಿಯಲ್ಲಿ ಎಲ್ಲ ನಿರ್ಧಾರವಾಗುವುದು ಮಾರುಕಟ್ಟೆಯಿಂದ. ಒಳ್ಳೆಯ ಕಾರ್ಯಕ್ರಮ ಬಂದರೆ ಜನರು ಅದನ್ನು ಮನೋರಂಜನೆಯ ಮಾರುಕಟ್ಟೆಯಲ್ಲಿ ಗೆಲ್ಲಿಸುತ್ತಾರೆ, ಕೆಟ್ಟದು ಇದ್ದರೆ ಅದನ್ನು ಸೋಲಿಸುತ್ತಾರೆ. ಯಾವುದೇ ಕಾರಣದಿಂದ ನಿಮ್ಮ ಅಭಿಪ್ರಾಯವನ್ನು ಜನರ ಮೇಲೆ ಹೇರಿ ಅವರ ಆಯಿಕೆ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವುದು ಪ್ರಜಾಪ್ರಭುತ್ವ ವ್ಯವಸ್ತೆಗೆ ಮಾರಕ. ಒಂದು ಕಾನೂನು ಬಾಹಿರ ನಿರ್ಭಂದವನ್ನು ಸಮರ್ಥಿಸುವ ಮುನ್ನ ನೀವು ಆ ನಿರ್ಭಂದವು ಕಾನೂನುಬಾಹಿರ ಎಂದು ತಿಳಿಸಿ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದರೆ ಅದು ಒಂದು ಒಪಿನಿಒನ್ ಎಂದು ಪರಿಗನಿಸಬಹುದಿತ್ತು. ಆದರೆ Dubbing ವಿಚಾರದಲ್ಲಿ, ಅದರ ಕೆಟ್ಟ ವಿಷಯಗಳನ್ನು ಮಾತ್ರ ಎತ್ತಿಹಿಡಿದು ಇನ್ನುಳಿದ್ದನೆಲ್ಲ ಕಡೆಗಣಿಸುವುದು ನೋಡಿದರೆ ನಿಮ್ಮ ಲೇಖನ ದಲ್ಲಿ ಪಟ್ಟಭದ್ರರ ಮಾತು ಕೂಡ ದನಿಗೂಡಿರುವ ಹಾಗಿದೆ. ನಿಮ್ಮ “ಮತದಾನ” ದಂತಹ ಚಿತ್ರ ಮತ್ತೆ ಮುಕ್ತ ಮುಖ್ತ ಅಂತಹ ಧಾರಾವಾಹಿಗಳು ಹೇಗೆ ಇಷ್ಟುದಿನ ಒಂದು ನಿಶ್ audience ಹುಡುಕಿದೆಯೋ ಹಾಗೆ ಮುಂದೆ ಕೂಡ ನಿಮಗೆ ಒಂದು ನೋಡುಗರ ನಿಶ್ ಗುಂಪು ಸಿಗುವುದರಲ್ಲಿ ಅನುಮಾನಾನೇ ಇಲ್ಲ. Dubbing ನಿಂದ ಆ ಗುಂಪು ಕೈ ತಪ್ಪಿಹೊಗುತ್ತೆ ಎಂದುಕೊಂಡಿದ್ದರೆ ಅದು ನಿಮ್ಮ ಮಯೋಪಿಯ ಎಂದರೆ ಅತಿಶೋಕ್ತಿಯಾಗದು. Dubbing ಬರುವದರಿಂದ ನಿಮ್ಮ ಸೃಜನಶೀಲತೆ ಕಮ್ಮಿಆಗುತ್ತೆ ಎಂದು ಭಯ ಇದ್ದು ಅದನ್ನು ಮರೆಹಾಕುವದಕ್ಕೆ ಇಂತಹ ಲೇಖನ ಪ್ರಕಟ ಮಾಡಿದ್ದರೆ ನಿಮ್ಮ ಸಂಕಟ ನೂರಕ್ಕೆ ನೂರರಷ್ಟು ಅರ್ಥವಾಗುತ್ತೆ!!

  ಪ್ರತಿಕ್ರಿಯೆ
 31. ನೀಲಾಂಜನ್

  ಭಾಷೆ ಗೊತ್ತಿಲ್ಲದ ಸತ್ಯವನ್ನು “ಡಬ್ಬಿಂಗ್” ಮಾಡಲು ಸಾಧ್ಯವಿಲ್ಲವೇ?!
  ಮನಸ್ಸಿಗೊಂದು ಭಾಷೆ ಇದೆಯಾ? ನೋಡುವ ಕುತೂಹಲಕ್ಕೆ ಭಾಷೆಗೆ ಕಲಿಸಬಲ್ಲೀರಾ? ಕಲಿಯವ ಕೌತುಕಗಳಿಗೆ ಹಣೆಪಟ್ಟಿ ಕಟ್ಟಬಲ್ಲೀರಾ ” ಡಬ್ಬಿಂಗ್” ವಿರೋಧಿಗಳಾ? ಈ ಸಮಾಜದಲ್ಲಿ ತಂದೆ ಒಂದು ಜಾತಿ, ತಾಯಿ ಒಂದು ಜಾತಿ. ಹುಟ್ಟಿದ ಮಕ್ಕಳು ಯಾವ ಜಾತಿ? ಮನು ಸೃಷ್ಟಿಸಿದ ಪುರುಷ ಪ್ರಧಾನ ಸಮಾಜದಲ್ಲಿ ತಂದೆಯ ಜಾತಿ ಆಗುವುದಾದರೆ, ಕುಡಿದ ಮೊಲೆ ಹಾಲಿಗೆ ಜಾತಿ ಯಾವುದಯ್ಯಾ?
  ಅಂತೂ ಯಾವುದೋ ಕೈವಾಡಕ್ಕೆ ಬಲಿಪಶುವಾದಂತೆ ಕಾಣುತ್ತಿದೆ.ಉದಾತ್ತವಾಗಿ ಆಲೋಚಿಸುವವರು ಯಾವತ್ತಿಗೂ ಆತ್ಮಸಾಕ್ಷಿಗೆ ದ್ರೋಹ ಬಗೆಯುವುದಿಲ್ಲ ಅಂತ ನಾಣ್ಣುಡಿ. ಆದ್ದರಿಂದಲೇ ಅವರಿಂದ ಉತ್ತಮವಾದುದನ್ನು ಪಡೆದಾಗ , ಉತ್ತಮ ಹೆಸರುಗಳೇ ಅನಾವರಣಗೊಳ್ಳುತ್ತವೆ.ಗೌರವ ಪಡೆದುಕೊಂಡವರು ಗೌರವ ಕಳೆದುಕೊಳ್ಳುವುದೇಕೆ? ಅಥವಾ ತನ್ನಿಂತಾನೆ ಬೀದಿಗೆ ಬರುವುದೇಕೆ? ಒಂದು ಅಂದಾಜಿನಂತೆ, ಯಾವುದೋ ಹದ್ದು, ರಣಹದ್ದಿನ ಆಣತಿಗೆ ಹೆಣಗಳ ಮೇಲೆ ಸವಾರಿ ಮಾಡಿದಂತಿದೆ. ಸತ್ಯವನ್ನು ಡಬ್ಬಿಂಗ್ ಮಾಡಲು ಸಾಧ್ಯವೇ?. ಸುಳ್ಳಿನ ಜಾಗಟೆಯಲ್ಲಿ ಸತ್ಯದ ಸದ್ದಿಲ್ಲದ ರಾಗ….! ಎಲ್ಲರೂ ಕುರುಡರಾದಾಗ ನಡೆಸುವವರು ಯಾರು?
  ಇದೀಗ ಓದಿದ ಸುದ್ದಿ,ಅವಳ್ಯಾವಳೋ ದುಬೈಯಲ್ಲಿ ಒಂದು ತಿಂಗಳ ಮಗುವನ್ನು 9ನೇ ಮಹಡಿಯಿಂದ ಕಸದ ತೊಟ್ಟಿಗೆ ಎಸೆದು ಬಿಟ್ಟಳಂತ..! ಅಮೀರ್ ಖಾನರು ಈ ಸುದ್ದಿ ನಡೆಯುವುದಕ್ಕೆ ಮುನ್ನ ” ಸತ್ಯಮೇವ ಜಯತೆ”ಯಲ್ಲಿ ಹೇಳಿದ್ದೇನು? ನಾಳೆ ಇನ್ನೊಂದು ನಡೆಯುತ್ತದೆ.. ಇದನ್ನು ” ಮೂಠಾ ಮೇಸ್ತ್ರಿ” ಅಂತ ತೆಲುಗು ಚಲನಚಿತ್ರದ ಡಬ್ಬಿಂಗ್ ಮಾಡುವ ಮಸಾಲೆ ತಲೆಗಳ ಕನ್ನಡ ಚಲನ ಚಿತ್ರ ಮಾಧ್ಯಮಕ್ಕೆ ” ತರ್ಲೆ ನನ್ ಮಗಾ” ಅನ್ನೋ ಅಸೃಜನಶೀಲ ಶೀರ್ಷಿಕೆ ಬೇಕಿತ್ತಾ?
  ಬೀಡಿ ಸೇದುವವನು ಸಿಗರೇಟು ಸೇದುವ ಕಾಲವಿದು. ಸಮಾಜೋದ್ಧಾಕರಾಗಿದ್ದರೆ, ಅವನನ್ನೂ ಸಿಗರೇಟು ಸೇದದಂತೆ ಮಾಡಿ. ಎಲ್ಲರಿಗೂ ಗೊತ್ತು ಮೈ ತುಂಬಾ ಬಟ್ಟೆ ಇದ್ದರೆ ಶೋಭೆ ಅಂತ. ತುಂಡು ಬಟ್ಟೆ ತೊಟ್ಟು ಬೀದಿಯಲ್ಲಿ ನಾಯಿಗಳಿಗೆ ಜೊಲ್ಲು ಸುರಿಸುವಂತೆ ಮಾಡಿದವರು ಇವತ್ತು ” ಅತ್ಯಾಚಾರ” ಮಿತಿ ಮೀರುತ್ತಿದೆ ಅಂತ ಮಹಿಳಾ ಸಂಘಗಳ ವೇದಿಕೆಯಲ್ಲಿ ಭಾಷಣ ಬಿಗಿಯುತ್ತಿದ್ದಾರೆ. ಅತ್ಯಾಚಾರ ಅನ್ನೋದು ಕಣ್ಣಿಗೆ ಬೆತ್ತಲೆ ಕೊಡದಿದ್ದರೆ ಬರುತ್ತಾ?
  ಡಬ್ಬಿಂಗ್ ಬೇಡ ಅಂದರೂ ಚಿಂತಿಲ್ಲ… ಪ್ರೇಕ್ಷಕನನ್ನು ಕಣ್ಣಿದ್ದು ಕಣ್ಣಿಲ್ಲದಂತೆ ಮಾಡುವುದು ನಿಜ ಚಿತ್ರದ ವೀಕ್ಷಣೆಯಿಂದ ಕುರುಡನನ್ನಾಗಿ ಮಾಡುವುದು ಎಂದು ಅರ್ಥ.
  ಅದೆಲ್ಲಾ ಹೋಗಲಿ.. ಅಣ್ಣಾ ಹಜಾರೆಯ ಭೃಷ್ಠಾಚಾರದ ಬಗ್ಗೆ ಸೊಲ್ಲೆತ್ತುವ ಜನ ಈಗ ಮಾಡುತ್ತಿರುವುದೇನು? ಟೇಬಲ್ಲಿನ ಕೆಳಗೆ ಪಡೆದ ಹಣಕ್ಕೆ ಕನ್ನಡದ ಹೆಸರಿದೆಯೇ? ಅಲ್ಲಿ ಪಡೆದ ಭಿಕಾರಿ ನೋಟುಗಳಲ್ಲಿ ಎಷ್ಟು ಭಾಷೆಯ ಹೆಸರಿದೆ? ಕನ್ನಡದ ಕಲಾವಿದರಿಗೆ ಕನ್ನಡದಲ್ಲಿ ಜಾಗ ಸಿಗಲಿಲ್ಲ ಎಂದರೆ ಬೇರೆ ಭಾಷೆ ಇದೆ. ಅಪ್ಪಟ ಕಲೆಗೆ ಇಡೀ ವಿಶ್ವವೇ ತೆರೆದು ನಿಂತಿದೆ. ಹಾಗಂತ ಕನ್ನಡವನ್ನು ಹರಾಜಿಗಿಡಬೇಡಿ ಮಹನೀಯರುಗಳೇ. ಪ್ರಶಸ್ತಿ ಬಂದಾಗ ಕನ್ನಡದ ಮಣ್ಣಿನ ಮಗ ಅಂತ ಹಲ್ಕಿರಿಯುವವರು ನಾವೇ. ಯಾಕೆ ಅವರಿಗೆ ಇಲ್ಲಿ , ಕನ್ನಡದಲ್ಲಿ ಪ್ರಶಸ್ತಿ ಕೊಡಿಸುವ ಚಿತ್ರ ಮಾಡಲಿಲ್ಲ?
  ಸ್ವಲ್ಪ ಹೆಚ್ಚಾಯಿತು ಅನ್ನಿಸುತ್ತದೆ… ಇದಂತೂ ಧಾರಾವಾಹಿ ಅಲ್ಲ….
  ಯಾಕೋ.. ವಿಷ್ಣುವರ್ಧನರ ಹಾಡು ನೆನಪಿಗೆ ಬಂತು..” ಇದ್ದದ್ದು ಇದ್ದಂಗೆ ಹೇಳಿದ್ರೆ ನೀವೆಲ್ಲಾ… ಕೆಂಡ್ತಂತ ಕೋಪಾ ಮಾಡ್‍ ಬ್ಯಾಡಿ.. ಎದ್ದು ಬಂದು ಎದೆಗೆ ಒದಿಬ್ಯಾಡಿ..”

  ಪ್ರತಿಕ್ರಿಯೆ
 32. harsha

  ಶಿವರಾಜ ಕುಮಾರ್ ಅವರು , ಫೇಸ್ ಬುಕ್ ನಲ್ಲಿ ಇರೋ ಜನ ಮಾತ್ರ ; ಡಬ್ಬಿಂಗ್ ಬಗೆ ಮಾತು ಆಡ್ತಾರೆ ಅಂತ ಹೇಳಿದರೆ.
  ಅರಬ್ ದೇಶಗಳ ಚಳುವಳಿ ಶುರು ಅಗಿದು ಫೇಸ್ ಬುಕ್ ನಲ್ಲಿ, ಅದು ದೊಡ್ಡ ಪ್ರಮಾಣ ಹೋರಾಟ ಅಗಿದು ಫೇಸ್ ಬುಕ್ ಇಂದ …
  http://www.fastcompany.com/1727466/exactly-what-role-did-social-media-play-in-the-egyptian-revolution
  ಇಂಥ ತಾಣಗಳಿಂದ ಹುಟ್ಟುವ ಮಾಹಿತಿ ಮತ್ತೆ ಅಭಿಪ್ರಾಯ , ಜನರ ಅಭಿಪ್ರಾಯ ಹೊರೆತು ; ಕಂಪ್ಯೂಟರ್ ಗಳ ಅಭಿಪ್ರಾಯ ಅಲ್ಲ..
  ಕನ್ನಡಿಗರ ಕನ್ನಡ ಬೇಕು ಅಂತ ಮನವಿ ; ಕನ್ನಡಿಗರೇ ತಿರಸ್ಕಾರ ಮಾಡಿದರೆ , ಬೇರೆ ಭಾಷೆ ಅವರು ನಮ್ಮ ಭಾಷೆ ಯಾಕೆ ಕಲಿತರೆ ?
  ತಮ್ಮ ಭಾಷೆ ಸಿನಿಮಾ ತೋರಸಿ, ನಮಗೆ ಅವರ ಭಾಷೆ ಹೇಳಿ ಕೊಟ್ಟಿದಾರೆ ಇಷ್ಟು ವರ್ಷ ಇಂದ.
  ಬೆಂಗಳೂರು ನಲ್ಲಿ ಬೇರೆ ಭಾಷೆ ಸಿನಿಮಾ function ಗೆ ಹೋಗಿ, ತಮ್ಮ ಸಿನಿಮಾ function ನಲ್ಲಿ ಬೇರೆ ಭಾಷೆ ನ ಕನ್ನಡಿಗರಿಗೆ ಪರಿಚಯಿಸಿದರೆ

  ಕೊನೆಯಲ್ಲಿ , ಎಲ್ಲ ಡಬ್ಬಿಂಗ್ ವಿರೋಧಿಗಳಿಗೆ ಒಂದು ಚಿಕ್ಕ ವೀಡಿಯೊ.. ನೋಡಿ ಆನಂದಿಸಿ

  ಪ್ರತಿಕ್ರಿಯೆ
 33. Bheemashankar

  ಟೀ ಏನ್ ಸೀತಾರಾಂ ಸರ್,
  “ಡಬ್ಬಿಂಗ್ ನಿಷೇಧ ಕಾನೂನು ಬಾಹಿರ”ವೆಂಬುದು ನಿಮ್ಮಂಥ ನುರಿತ ವಕೀಲರಿಗೆ ತಿಳಿದಿದ್ದೂ ಅದನ್ನು ಸಮರ್ಥಿಸುತ್ತೀರಿ ಅಂದರೆ ಈ ನಿಲುವಿನ ಹಿಂದಿರುವ ನಿಮ್ಮ ಉದ್ದೇಶ ಏನು?

  ಪ್ರತಿಕ್ರಿಯೆ
 34. Ravi

  “ನನ್ನ ಮಗಳು ಪೋಗೋ ಚಾನಲ್ಲು ಹಾಕಿದಳು. ಅಲ್ಲಿ ನಿನ್ನೆಯ ತನಕ ಇಂಗ್ಲಿಷಿನಲ್ಲಿ ಬರುತ್ತಿದ್ದ ಛೋಟಾ ಭೀಮ್ ಇವತ್ತು ತಮಿಳಿನಲ್ಲಿ ಬಂತು. ಯಾಕೋ ತುಂಬ ಬೇಸರ ಆಯ್ತು. ನನ್ನ ಮಗಳು ಅದು ಯಾವ ಭಾಷೆ ಅಂತ ಕೇಳಿ ಒಂದೆರಡು ನಿಮಿಷ ನೋಡಿ ಚಾನಲ್ ಬದಲಾಯಿಸಿದಳು. ಕೇಬಲ್ ಆಪರೇಟರಿಗೆ ಕೇಳಿದರೆ ಇಂಗ್ಲಿಷ್ ವರ್ಷನ್ ಬರುತ್ತಿಲ್ಲ ಅಂದ”
  @ಜೋಗಿ ಸರ್
  ಇವಾಗ ನಿಮ್ಮ ಮಗಳು ತಮಿಳು ಕಲಿಯಬೇಕು ಪೋಗೋ ನೋಡಲು 🙂 , ಆ ಒಂದು ಚಾನೆಲ್ ನೋಡಲು ಆ ಭಾಷೆ ಕಲಿಯೋ ಪರಿಸ್ಥಿತಿ ಬಂದಿದೆ..
  ಅದೇ ಚಾನೆಲ್ ನಮ್ಮ ಕನ್ನಡದಲಿ ಇದ್ದರೆ ನಿಮ್ಮ ಮಗಳು ಖುಷಿ ಪಡುತ್ತಿದಳು ಅಲ್ಲವೇ?
  FYI, Cartoon channels are allowed to dub. Seetharam alla, even Shivarajkumar can not stop dubbing of these channels. This applies to other channels like Discovery/NGC/History etc. We have seen few programmes in ETV and other channels which telecasted dubbed content of some of these programmes. Pro-dubbing people – why don’t you first ask concerned people to bring dubbed version of these channels? what can Seetharam sir do if Discovery channel is not ready to start “Discovery Kannada”?
  Btw, Good write up Seetharam sir and Jogi…Bari Kannada kalape anno manasthithi alla, Kannadigaru enu maadidru adhu kalape anno manasthithi idhe…

  ಪ್ರತಿಕ್ರಿಯೆ
 35. Ravi

  “ಮೂರುಕಾಸಿನ ಹಳೇ ತಮಿಳು ತೆಲುಗು ಚಿತ್ರಗಳ ಬಗ್ಗೆ ಹರಿಹಾಯುವ ಜೋಗಿಯವರಿಗೆ ನಮ್ಮದೇ ಕನ್ನಡ ಚಿತ್ರರಂಗ ಇನ್ನಾದರೂ ಒಂದೂವರೆ ಕಾಸಿನಷ್ಟಾದರೂ ಏಕೆ ಬಾಳುತ್ತಿಲ್ಲವೆಂಬ ಅರಿವಿಲ್ಲದೆಯೇನೂ ಇಲ್ಲ.”
  ನಿಮ್ಮ ಪಾಲಿಗೆ ಕನ್ನಡ ಚಿತ್ರರಂಗ ಒಂದು ವರೆ ಕಾಸಿಗೆ ಬಾಳಧೆ ಇರಬಹುದು, ಆಧರೆ ಕನ್ನಡ ಚಿತ್ರರಂಗಧ ಮಾರುಕಟ್ಟೆ ಗಮನಿಸಿಧರೆ ಅದು ಕೊಡುತಿರೋ ಚಿತ್ರಗಳು ಶ್ಲಾಗನಿಯ…ಹೆಚ್ಚು ಎಂಧರೆ ೧೫೦ ಚಿತ್ರಮಂದಿರದಲ್ಲಿ ಬಿಡುಗಡೆ ಅಗೋ ಸಿನೆಮಾಗೆ ನಮ್ಮ ನಿರ್ಮಾಪಕರು ೧೦ ಕೋಟಿ ವರೆಗೂ ವೆಚ್ಚ ಮಾಡುತಾರೆ…ಅಧೆ ೨೦೦೦ ಚಿತ್ರಮಂದಿರದಲ್ಲಿ ಬಿಡುಗಡೆ ಅಗೋ ತೆಲುಗು/ತಮಿಳ್ ಸಿನೆಮಾಗಳ budget ೨೫-೩೦ ಕೋಟಿ. ಡಬ್ಬಿಂಗ್ ಬೇಕು ಅನ್ನೋ ಬರದಲ್ಲಿ ಕನ್ನಡವನ್ನು , ಕನ್ನಡ ಚಿತ್ರರಂಗವನ್ನು ಹಿಯಳಿಸೋಧು ಕಡಿಮೆಯಾಗಲಿ…

  ಪ್ರತಿಕ್ರಿಯೆ
 36. M.Ramesh

  ಡಬ್ಬಿಂಗ್ ಬಗ್ಗೆ “ಅವಧಿ” ಯಲ್ಲಿ ಶ್ರೀ ಟಿ.ಎನ್. ಸೀತಾರಾಮ್ ರವರಿಂದ ಪ್ರಾರಂಭವಾದ ಚರ್ಚೆಯನ್ನು ಗಮನಿಸಿದಾಗ ನಮ್ಮ ಚಿತ್ರರಂಗದ ಜನ ತಮ್ಮ ಸ್ವಂತ ಹಿತಕ್ಕಾಗಿ ಜನರ ಅಭಿಪ್ರಾಯವನ್ನೂ ವಿರೋಧಿಸುವ ಕೆಲಸ ಮಾಡುತ್ತಿದ್ದಾರಲ್ಲ ಎಂಬ ವಿಷಾಧವಾಯಿತು. ನಟ ಶ್ರೀ ಶಿವರಾಜ್ ಕುಮಾರ್ ರಂಥವರಿಗೆ ಅದು ಅಸ್ಥಿತ್ವದ ಪ್ರಶ್ನೆಯಿರಬಹುದು, ಆದರೆ ಶ್ರೀ ಟಿ. ಎನ್. ಸೀತಾರಾಮ್, ಶ್ರೀ ಬಿ ಸುರೇಶ್ ರಂಥವರು ಯಾಕೆ ಡಬ್ಬಿಂಗ್ ವಿರೋಧಿಸುತ್ತಿದ್ದಾರೆಂದು ಅರ್ಥವಾಗುವುದಿಲ್ಲ. ಏಕೆಂದರೆ ಅವರು ಸ್ವಂತ ಯೋಗ್ಯತೆಯುಳ್ಳವರು ಮತ್ತು ಯಾರೇ ಹೆಮ್ಮೆ ಪಡುವಂಥ ಚಿತ್ರಗಳನ್ನು ನಿರ್ಮಿಸಬಲ್ಲವರು. ಹಿರಿಯ ನಟ ಶ್ರೀ ಅನಂತ್ ನಾಗ್ ರವರು ಡಬ್ಬಿಂಗ್ ಪರವಾಗಿ ನೀಡಿರುವ ಹೇಳಿಕೆಯನ್ನು ಎಲ್ಲರೂ ಗಮನಿಸಬೇಕು. ಈಗಿನ ಹೆಚ್ಚಿನ ಕನ್ನಡ ಚಲನಚಿತ್ರಗಳು ಬೇರೆ ಭಾಷೆಗಳ ಚಿತ್ರಗಳ ಕೆಟ್ಟ ನಕಲು. ಇಷ್ಟಾಗಿಯೂ ಡಬ್ಬಿಂಗ್ ಬೇಡ ಎನ್ನುವುದಿದ್ದರೆ ಎಲ್ಲಾ ಕನ್ನಡಿಗರೂ ಪ್ರತಿ ವರ್ಷ ಒಂದು ನಿರ್ಧಿಷ್ಟ ಸಂಖ್ಯೆಯ ಚಿತ್ರಗಳನ್ನು ನೋಡಲೇಬೇಕೆಂದು ಕಾನೂನು ಮಾಡಲಿ . ಅದರಿಂದಾದರೂ ನಮ್ಮ ಕನ್ನಡ ಚಲನ ಚಿತ್ರಗಳ ಏಳಿಗೆ ಯಾಗಲಿ.

  ಪ್ರತಿಕ್ರಿಯೆ
 37. Ravi

  ಮಲ್ಲೇಶ says:
  ಟಿ.ಎನ್. ಸೀತಾರಾಂ, ಬಿ.ಸುರೇಶ್‌, ಶಿವರಾಜಕುಮಾರ್ ರಂಥ ಕೆಲವು ಸ್ವಾರ್ಥಿಗಳು ತಮ್ಮ ಹಿತಾಸಕ್ತಿಗಾಗಿ ಡಬ್ಬಿಂಗ್ ವಿರೋಧಿಸುತ್ತಿದ್ದಾರೆ.
  ಡಬ್ ಆಗುವ ಕಳಪೆ ಕಾರ್ಯಕ್ರಮಗಳು ಜನರಿಗೆ ಇಷ್ಟ ಇಲ್ಲ ಅಂದ್ರೆ ಜನರೆ ಅದನ್ನ ತಿರಸ್ಕರಿಸ್ತಾರೆ. ಕಾರ್ಯಕ್ರಮಗಳು ಜನರಿಗೆ ಇಷ್ಟ ಆದರೆ ಅದನ್ನ ನೋಡ್ತಾರೆ. ಡಬ್ ಕಾರ್ಯಕ್ರಮಗಳನ್ನ ತಿರಸ್ಕರಿಸೋದು ಅಥವಾ ಒಪ್ಪಿಕೊಳ್ಳೋದು ಜನರಿಗೆ ಬಿಟ್ಟಿದ್ದು. ನಾವು ಏನು ನೋಡಬೇಕು-ಬೇಡ ಅನ್ನೋದನ್ನ ನಾಲ್ಕು ಮಂದಿ ಸ್ವಾರ್ಥಿಗಳು ನಿರ್ಧರಿಸೋದು ಬೇಡ. ಜಗತ್ತಿನಲ್ಲಿರುವ ಒಳ್ಳೆಯ ವಿಶಯ, ಜ್ನಾನ-ವಿಜ್ನಾನ ಇತ್ಯಾದಿಯನ್ನು ತನ್ನ ತಾಯ್ನುಡಿಯಲ್ಲಿ ಪಡೆಯುವ ಹಂಬಲ ಇರುವವರು ಕನ್ನಡ ವಿರೋಧಿಗಳೆ? ಇವೆಲ್ಲವನ್ನು ಆಯಾ ಭಾಶೆಯಲ್ಲೆ ನೋಡಬೇಕು ಅನ್ನೋದು ಕನ್ನಡಪರನಾ ? ಡಬ್ಬಿಂಗ್ ವಿರೋಧಿಸಿ ಕನ್ನಡಿಗರನ್ನ ಕನ್ನಡದಿಂದ ದೂರ ಮಾಡುವ ನಿಮ್ಮ ಕನ್ನಡ ವಿರೋಧಿತನಕ್ಕೆ ಧಿಕ್ಕಾರ.
  ———————————————————–
  ತಮಿಳು, ತೆಲುಗು, ಹಿಂದಿ ಚಿತ್ರಗಳು ಹಾಗು ದಾರವಹಿಗಳಿಂದ ಜಗತ್ತಿನಲ್ಲಿರುವ ಒಳ್ಳೆಯ ವಿಶಯ, ಜ್ನಾನ-ವಿಜ್ನಾನ ಇತ್ಯಾದಿಯನ್ನು ಪದೆಯುವುಧಾಧರೆ ಡಬ್ ಆಗಲೇ ಬಿಡ್ಲಿ…ಅಂಧ ಹಾಗೆ, there is absolutely no restriction to bring science and cartoon channels in kannada. They are just voice overs, they can not be termed as dubbing

  ಪ್ರತಿಕ್ರಿಯೆ
 38. Ravi

  ರಮೇಶ್ ಅವರೇ – ನಟ ಶಿವರಾಜ್ಕುಮಾರ್ ಅವರಿಗೆ ಇದು ಅಸ್ಥಿಥ್ವಧ ಪ್ರಶ್ನೆ ಅಲ್ಲ…ಮೊದಲಿಗೆ ಅವರು ರಿಮೇಕ್ ಚಿತ್ರಗಳಲ್ಲಿ ಅಭಿನಯಿಸುತಿಲ್ಲ, ೩೦ ವರ್ಷಧಿಂಧ ಚಿತ್ರರಂಗದಲ್ಲಿ ಇದ್ದಾರೆ, ಅವರ ಸ್ವಂತ ಯೋಗ್ಯತೆ ಇಂದ ಮಾತ್ರ ಇದು ಸಾಧ್ಯ, ಅವರ ಕೈನಲ್ಲಿ ೧೦ ಕ್ಕೂ ಹೆಚ್ಚು ಚಿತ್ರಗಳಿವೆ…ನಿಮ್ಮ ಅಭಿಪ್ರಾಯ ಈಗಿನ ರಿಮೇಕ್ ನಟರಿಗೆ ಸರಿ ಹೋಗುತ್ತೆ.
  ಎಲ್ಲ ಬಾಷೆಯಲ್ಲಿ ರಿಮೇಕ್ ಇದ್ದೆ ಇರುತ್ತೆ, ಕನ್ನಡದಲ್ಲಿ ಸ್ವಲ್ಪ ಮಟ್ಟಿಗೆ ಜಾಸ್ತಿ ಇರಬಹುದು. ಆಧರೆ, ಇತ್ತೀಚಿಗೆ ರಿಮೇಕ್ ಚಿತ್ರಗಳು ಕಡಿಮೆ ಅಗ್ಥಿಧೆ…Thanks to our audince…ಕನ್ನಡ ಚಿತ್ರರಂಗವನ್ನು ಕೇವಲ ಲಾಂಗ್-ಮಚ್ಚು ಅಂತ ಬೊಗಳೆ ಬಿಡೋ ಡೋಂಗಿ ಜನಗಳು, ತಮಿಳ್/ತೆಲುಗು ಚಿತ್ರರಂಗಧ ಪಾಳೆಗರಿಕೆಯಾ/ಕಣ್ಣು ಬಿಟ್ಟರೆ ಮನುಷ್ಯರೇ ಸುಟ್ಟಿ ಹೋಗುವ/ತೊಡೆ ತಟ್ಟಿದರೆ ನಿಂತಿರೋ ರೈಲು ಚಲಿಸುವ/ಟಾಟಾ ಸುಮೋಗಳು ಎರ್ರ ಬಿರ್ರಿ ಆಕಾಶದಲ್ಲಿ ಹಾರಾಡುವ/ಸಿನಿಮಾ ಪೂರ ಕ್ರೌರ್ಯವೆ ತುಂಬಿರುವ ಹಾಗು ಹಿಂದಿ ಚಿತ್ರ ರಂಗಧ soft porn ಚಿತ್ರಗಳನ್ನು quality ಸಿನಿಮಾಗಳು ಅಂತ ಬಿಂಬಿಸಿ ಡಬ್ ಮಾದಬೇಕೆನ್ಧು ಕೇಳೋಧು ನೋಡಿದ್ರೆ ಬೇಸರ ಆಗುತ್ತೆ…ನಮ್ಮ ಚಿತ್ರ ಕೊಳೆತ ಬದನೇಕಾಯಿ ಆಧರೆ ಅವು ಕೊಳೆತ ಹೆಗ್ಗಣಗಳು. ಶಿವಣ್ಣ ನ ಬರಿ ಲಾಂಗ್ ಹೀರೋ ಅಂತ ಹೇಳೋರು ಅವರ ಚಿಗುರಿಧ ಕನಸು, ತಮಸ್ಸು, ಭೂಮಿ ತಾಯಿಯ ಚೊಚ್ಚಲ ಮಗ,ಇನ್ನು ಹಲವಾರು ಒಳ್ಳೆ ಸಿನಿಮಾಗಳು ಅವರ ಕಾಮಾಲೆ ಕಣ್ಣಿಗೆ ಕಾಣೋದಿಲ್ಲ ಅನ್ಸುತ್ತೆ…

  ಪ್ರತಿಕ್ರಿಯೆ
 39. Jogayya

  ಜೋಗಿ ಚಿತ್ರ ಬಂದಮೇಲೆ ಲಾಂಗು ಮಚ್ಚು ಚಿತ್ರಗಳಿಗೆ ಹೊಸ ರೂಪ ತಂದುಕೊಟ್ಟರು ಶಿವಣ್ಣಾವ್ರು.
  ಜೋಗಿಯಲ್ಲಿ ಹಿಡಿದ ಲಾಂಗು ಅಶೋಕ, ಸಂತ, ಸತ್ಯ ಇನ್ ಲವ್, ಮಾದೇಶ, ನಂದ, ಒಡಿಮಗ, ಮೈಲಾರಿ, ಜೋಗಯ್ಯ ಗು ಮುಂದಿವರೆಯಿತು. ಸುಗ್ರೀವ ತಮಸ್ಸು ನಲ್ಲಿ ಲಾಂಗ್ ಇಲ್ಲ, ಬರಿ ಗನ್ನು ಇರೋದು.
  ಇದೀಗ ಶಿವ ಚಿತ್ರಕ್ಕೂ ಅಣ್ಣ ಲಾಂಗ್ ಇಡ್ಕೊಂಡವ್ರೆ. ಯಾರ್ ಏನ್ ಹೇಳ್ಕೊಂಡ್ರು ಅಣ್ಣ ಲಾಂಗು-ಮಚ್ಚು ಚಿತ್ರ ಮಾಡಿ ಗೆದ್ದೆ ಗೆಲ್ತಾರೆ.
  ಹೇಗೆ ಡಬ್ಬಿಂಗ್ ಬೇಕು ಅನ್ನೋವ್ರು ಆಯ್ಕೆಯ ಸ್ವಾತಂತ್ರ, ಪ್ರಜಾಪ್ರಭುತ್ವ ಅಂತಾರೋ, ಅದೇ ರೀತಿ ಶಿವಣ್ಣನಿಗೂ ಆಯ್ಕೆಯ ಸ್ವಾತಂತ್ರ ಇದೆ. ಅವರು ಲಾಂಗಾದ್ರು ಹಿಡ್ಕೊಳ್ತಾರೆ, ಮಚ್ಚಾದ್ರು ಹಿಡ್ಕೊಳ್ತಾರೆ.
  ಚಿತ್ರ ಸೋತರು ಸರಿ, ಗೆದ್ದರು ಸರಿ. ಅದು ಅವರ ಆಯ್ಕೆಯ ಸ್ವಾತಂತ್ರ. ಅವರನ್ನ ಸುಮ್ಮನೆ ಪ್ರಶ್ನೆ ಮಾಡಬಾರದು.
  ರವಿ ಅವರು ಹೇಳಿದ ಹಾಗೆ ಶಿವು ಗೆ ಅಸ್ತಿತ್ವದ ಪ್ರಶ್ನೆ ಖನ್ಡಿತ ಇಲ್ಲ.

  ಪ್ರತಿಕ್ರಿಯೆ
  • Ravi

   Glad that you know many Shivanna movies…out of his 100 movies, some of the above movies you mentioned belong to “long” category. Satya In Love, Mylari, Jogayya is not a long movie…i”m sure you haven’t see those. Ondh scenenalli kainalli machchu hididre, that doesn’t mean it belongs to that category…so, let’s take 10 movies are “long” movies..what about rest 90 movies ??

   ಪ್ರತಿಕ್ರಿಯೆ
 40. Amar

  ಟಿ.ಎನ್.ಸೀತಾರಾಂ ಅವರು ಇಷ್ಟೊಂದು ತಲೆ ಕೆಡಿಸಿಕೊಂಡಿರುವುದು ನೋಡಿ ನಿಜಕ್ಕೂ ಆಶ್ಚರ್ಯವಾಯಿತು.
  ಸೀತಾರಾಂ ಸಾರ್ – ನೀವು ಮಾಡಿದ ಮಾಯಾಮೃಗ, ಕಾಲೇಜು ತರಂಗ, ಮನ್ವಂತರ ,ಮುಕ್ತ, ಮುಕ್ತ ಮುಕ್ತ ಮುಂತಾದ ಹಲವಾರು ಸೀರಿಯಲ್ಲುಗಳನ್ನು ನಾವು ಮನಸಾರೆ ಮೆಚ್ಚಿ ನೋಡಿ ಅದನ್ನು ಗೆಲ್ಲಿಸಿದ್ದೆವು.
  ಅದೇ ರೀತಿ ನಿಮ್ಮ ಮತದಾನ ಚಿತ್ರವನ್ನು ಮೆಚ್ಚಿದ್ದೆವು. ಅದಕ್ಕೆ ಹತ್ತು ಹಲವಾರು ಪ್ರಶಸ್ತಿಗಳೂ ಬಂದವು.
  ನೀವು ಇತ್ತೀಚಿಗೆ ಮಾಡಿದ ಮೀರ ಮಾಧವ ರಾಘವ ಚಿತ್ರವನ್ನ ನಾನು ಅದು ತಮ್ಮ ನಿರ್ದೇಶನ ಅನ್ನುವ ಒಂದೇ ಕಾರಣಕ್ಕೆ ಚಿತ್ರಮಂದಿರಕ್ಕೆ ಹೋಗಿ ನೋಡಿದ್ದೆ. ಆದರೆ ದುರದೃಷ್ಟವಶಾತ್ ಅದು ಗಲ್ಲಾ ಪೆಟ್ಟಿಗೆಯಲ್ಲಿ ಸೋಲನುಭವಿಸಿತು. ಅಂದ್ರೆ ಯಾವುದು ಗೆಲ್ಲುವುದಕ್ಕೆ ಅರ್ಹವಾಗಿರುತ್ತದೋ ಅದನ್ನು ಪ್ರೇಕ್ಷಕ ಗೆಲ್ಲಿಸಿಯೇ ತೀರುತ್ತಾನೆ. ಕಳಪೆ ಸರಕನ್ನು ಸಹ ಸೋಲಿಸಿಯೇ ತೀರುತ್ತಾನೆ
  ಒಟ್ಟಾರೆಯಾಗಿ ಇದರಿಂದ ಅರ್ಥವಾಗೋದು ಏನು ಅಂದ್ರೆ, ಪ್ರೇಕ್ಷಕ ಮಹಾಪ್ರಭುವಿಗಿಂತ ಒಳ್ಳೆಯ ಜಡ್ಜ್ ಮತ್ತೊಬ್ಬನ್ನಿಲ್ಲ. ಒಳ್ಳೆಯ ಸರಕು ಅದು ಸ್ವಂತವಾದದ್ದು ಆದರು ಸರಿ, ರೀಮೇಕ್ ಆದರೂ ಸರಿ, ಡಬ್ಬ್ ಆದರೂ ಸರಿ ಜನ ಒಪ್ಪುತ್ತಾರೆ.
  ಒಂದು ಪಕ್ಷ ಕಾರ್ಯಕ್ರಮಗಳು ಕಳಪೆ ಆಗಿದ್ದು ಅದರ ಟಿ.ಆರ್.ಪಿ ಕೆಟ್ಟದಾಗಿದ್ದರೆ, ಆಯಾ ಚಾನಲ್ಲುಗಳೇ ಜಾಗ ಖಾಲಿ ಮಾಡಿ ಅಂತ ಹೇಳುತ್ತಾರೆ.
  ಆರು ಕೋಟಿ ಕನ್ನಡಿಗರ ಆಯ್ಕೆಯ ಸ್ವಾತಂತ್ರವನ್ನು ಕಸಿದುಕೊಳ್ಳುವಷ್ಟು ದೊಡ್ಡವರಲ್ಲ ನೀವು, ನಾನಂತು ಅಲ್ಲವೇ ಅಲ್ಲ.

  ಪ್ರತಿಕ್ರಿಯೆ
 41. ರಾಜೇಶ ಗೌಡ

  ಡಬ್ಬಿಂಗ್ ಬೇಕು ಅನ್ನುವವರು ಚಾನಲ್ ಅವರ ಕೃಪಾ ಪೋಶಿತರು ಅನ್ನುವ ಚಿಲ್ಲರೆ ವಾದಕ್ಕೆ ನನ್ನ ಧಿಕಾರವಿದೆ. ತಾಕತ್ತಿದ್ದರೆ ಅದನ್ನು ನಿರೂಪಿಸಲಿ.
  ಇಲ್ಲಿ ಮುಖ್ಯವಾಗಿ ಡಬ್ಬಿಂಗ್ ವಿರುದ್ಧ ದನಿ ಎತ್ತುತಿರುವವರು ಕೆಲವು ನಿರ್ದೇಶಕರು, ನಿರ್ಮಾಪಕರು ಮತ್ತು ನಟರು. ಅವರುಗಳೆಲ್ಲರೂ ತಮ್ಮ ಅಸ್ತಿತ್ವಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಕೆಲವು ನಿರ್ದೇಶಕರು ತಮ್ಮ ಚಿತ್ರಗಳು ಹಾಕಿದ ಬಂಡವಾಳವನ್ನು ತರಲು ಕಷ್ಟ ಪಡುತ್ತಿದ್ದರೆ, ಇನ್ನು ಕೆಲವು ನಟರ ಕಳಪೆ ಚಿತ್ರಗಳು ೩-೪ ವಾರಗಳಿಗೆ ಎತ್ತಂಗಡಿ ಆಗುತ್ತಿದೆ. ಸುಮ್ಮನೆ ಜನರನ್ನು ಬಯ್ದು ಜನಸಾಮಾನ್ಯರ ಕಣ್ಣಿನಲ್ಲಿ ಕೀಳಾಗಿ ಕಾಣಿಸಿಕೊಳ್ಳುವ ಬದಲು ಸರಿಯಾಗಿ ಚಿತ್ರಗಳನ್ನು ಮಾಡಲಿ.
  ಇನ್ನು ಆ ಕೆಲವು ನಟರಿಗೆ ತಮ್ಮ ಕೆಲವು ಸಾಕಿಕೊಂಡಿರುವ ಭಟ್ಟಂಗಿಗಳು “ನಮ್ಮ ಅಣ್ಣ ಡಬ್ಬಿಂಗ್ ವಿರುದ್ಧ ಗುಡುಗಿದ್ದಾರೆ, ನಾವು ಅಣ್ಣನ ತಾಳಕ್ಕೆ ಕುಣೀಬೇಕು” ಅನ್ನೋ ಅವಿವೇಕದಿಂದ ಹೊರಗೆ ಬಂದು ತಮ್ಮದೇ ಆದ ಸ್ವಂತ ಆಲೋಚನೆಯನ್ನು ರೂಪಿಸಿಕೊಳ್ಳಬೇಕು.

  ಪ್ರತಿಕ್ರಿಯೆ
 42. Sunil

  @Ravi.. ತಮಿಳು, ತೆಲುಗು, ಹಿಂದಿ ಚಿತ್ರಗಳು ಹಾಗು ದಾರವಹಿಗಳಿಂದ ಜಗತ್ತಿನಲ್ಲಿರುವ ಒಳ್ಳೆಯ ವಿಶಯ, ಜ್ನಾನ-ವಿಜ್ನಾನ ಇತ್ಯಾದಿಯನ್ನು ಪದೆಯುವುಧಾಧರೆ ಡಬ್ ಆಗಲೇ ಬಿಡ್ಲಿ…ಅಂಧ ಹಾಗೆ, there is absolutely no restriction to bring science and cartoon channels in kannada. They are just voice overs, they can not be termed as dubbing
  _ _ _ _ _ _
  People are asking the same voice over for “Sathyameva Jayathe”

  ಪ್ರತಿಕ್ರಿಯೆ
  • Ravi

   DEFINITION OF DUBBING:
   Any lip movement overlapped with sound generated by others lip movement.
   Documentaries, Cartoons, Travelogue are all voice overs and not dubbing.
   Sir, I agree SMJ is a noble program…why not Suvarna take initiative to make this program in kannada with local stars. Our concern is for 1 SMJ, there will be 10 Ekta kapoor series. We will be left with no choice as the channels are not headed by our people.

   ಪ್ರತಿಕ್ರಿಯೆ
 43. ಅರ್ಕ

  ಈ ಡಬ್ಬಿಂಗ್ ಬೇಡ ಎನ್ನುವವರು ಯಾರು ಎಂದು ಮೊದಲು ನೋಡೋಣ. ಬರಿ ಧಾರವಾಹಿ ಮತ್ತು ಸಿನಿಮಾಗಳನ್ನು ಮಾಡುವವರು.. ಇದು ಸಿಂಪಲ್.. ತಮ್ಮ ಹೊಟ್ಟೆಪಾಡಿಗೆ ಎಲ್ಲಿ ಕುತ್ತು ಬರುವುದೋ ಎಂಬ ಭಯ ಅಷ್ಟೇ.. ಒಬ್ಬನೇ ಒಬ್ಬ ಜನಸಾಮಾನ್ಯ ಡಬ್ಬಿಂಗ್ ಬೇಡ ಅನ್ನಲಿ ನೋಡೋಣ.. ನಮಗೆ ಒಳ್ಳೆ ಕಾರ್ಯಕ್ರಮ ಬೇಕು ಸ್ವಾಮಿ.. ಬೇರೆ ಭಾಷೆಯಲ್ಲಿ ಒಳ್ಳೆ ಕಾರ್ಯಕ್ರಮ ಅಥವಾ ಚಿತ್ರ ಬಂದರೆ ನಾವು ಅದೇ ಭಾಷೆ ನೋಡ್ತೀವಿ ಮತ್ತು ಆ ಭಾಷೆ ಕಲಿತೀವಿ ಅಷ್ಟೇ.. ಅದರಿನ ಕನ್ನಡಕ್ಕೆ ತಾನೇ ಕುತ್ತು? ನಿಮ್ಮ “ಕನ್ನಡ ಪ್ರೀತಿ” ಏನು ಮಾಡುತ್ತದೆ ಆವಾಗ? ಇನ್ನು ಕಾರ್ಯಕ್ರಮಗಳ ಕ್ವಾಲಿಟಿ ಬಗ್ಗೆ ಬಂದರೆ, ಒಳ್ಳೆ ಕಾರ್ಯಕ್ರಮ ತಾನಾಗಿಯೇ ಉಳಿದುಕೊಳ್ಳುತ್ತದೆ, ಜೊಳ್ಳು ಉಳಿಯುವುದಿಲ್ಲ ಅಷ್ಟೇ.. ಸಾಮನ್ಯ ಜನಕ್ಕೆ ಕೆಲಸ ಮಾಡಿ ಮನೆಗೆ ಬಂದು ಒಂದೆರಡು ಒಳ್ಳೆ ಕಾರ್ಯಕ್ರಮ ನೋಡುವುದಷ್ಟೇ ಮುಖ್ಯ.. ಕನ್ನಡಿಗರು ಈಗ ಕನ್ನಡದಲ್ಲಿ ಬರುತ್ತಿರುವ ಕಾರ್ಯಕ್ರಮವನ್ನಷ್ಟೇ ನೋಡಬೇಕು ಅಂದರೆ ಅಪ್ಪ ನೆಟ್ಟಿದ ಆಲದ ಮರ ಅದಕ್ಕೆ ನೇಣು ಹಾಕ್ಕೋಬೇಕು ಅಂದಂಗಾಯ್ತು.. Grow up friends, try to think rationally..

  ಪ್ರತಿಕ್ರಿಯೆ
 44. ರಾಜೇಶ ಗೌಡ

  ಅರ್ಕ ಅವರೇ,
  ನೀವು ಹೇಳ್ತಾ ಇರೋದು ನೂರಕ್ಕೆ ನೂರು ಸತ್ಯ. ಡಬ್ಬಿಂಗ್ ಬಗ್ಗೆ ಉಗ್ರವಾಗಿ ಮಾತಾಡ್ತಾ ಇರೋವ್ರು ಹೆಚ್ಚು ಅಂದ್ರೆ, ಸಿನಿಮಾ ಸೀರಿಯಲ್ ಗಳನ್ನ ತಯಾರು ಮಾಡೋವ್ರು ಅತ್ವ ಅಲ್ಲಿ ಕೆಲಸ ಮಾಡೋವ್ರು.
  ಇನ್ನು ಆ ಸೊ ಕಾಲ್ಡ್ ಸೆಲೆಬ್ರಿಟಿಗಳ ತಾಳಕ್ಕೆ ಕುಣಿದು ಅವರನ್ನ ತಲೆ ಮೇಲೆ ಕೂಡಿಸಿಕೊಂಡು ಕುಣೀತ ಇರೋ ಅವರ ಅಭಿಮಾನಿ ಸಂಘಗಳು. ಈ ರೀತಿ ಕನ್ನಡಿಗರು ಸ್ವಂತಿಕೆ ಬಿಟ್ಟು ಒಳ್ಳೆ ಭಟ್ಟಂಗಿಗಳ ತರ ಆಡೋದು ಯಾವಾಗ ನಿಲ್ಲಿಸುತ್ತಾರೋ ಗೊತಿಲ್ಲ.
  ಒಬ್ಬ ನಟ ಅಥವಾ ನಿರ್ದೇಶಕನ ಮೇಲೆ ಅಭಿಮಾನ ಇರಬೇಕು ನಿಜ, ಆದರೆ ಅದು ಅವರ ಚಿಂತನೆ, ಆಲೋಚನೆಗಳನ್ನೂ ಒಪ್ಪಲೇ ಬೇಕು ಅನ್ನುವ ಶರತ್ತು ಹಾಕಿದರೆ, ಅದು ಬಾಲಿಶವಾಗುತ್ತದೆ.

  ಪ್ರತಿಕ್ರಿಯೆ
 45. har.sri.ga

  ಜೋಗಿ ಸಾರ್ ,
  ನಿಮ್ಮ ಗಮನಕ್ಕೆ , ಕೆನಡಾ ಮೂಲದ ನೀಲಿ ಚಿತ್ರ actor ಕನ್ನಡ ದಲ್ಲಿ ಐಟಂ ಹಾಡು ನಲ್ಲಿ ನೃತ್ಯ ಮಾಡ್ತಾಳೆ ಅಂತ ಸುದ್ದಿ .
  http://entertainment.in.msn.com/southcinema/sunny-days-ahead-for-sandalwood
  ನಿಮ್ಮ ಮನೆ TV ನಲ್ಲಿ ಕನ್ನಡ ಚಾನೆಲ್ ನಲ್ಲಿ , ಪೋರ್ನ್ ಸ್ಟಾರ್ ಗಳು ಬರಬಾರದು ಅಂದ್ರೆ .. KILL DUBBING ಅನ್ನೋ ಬದಲು , KILL OUTSIDE ARTISTS ಅಂತ ಹೇಳಿ..
  http://entertainment.in.msn.com/southcinema/article.aspx?cp-documentid=250074747

  ಪ್ರತಿಕ್ರಿಯೆ
 46. K.Srinath

  ಪ್ರಿಯ ಸೀತಾರಮ್ ಮತ್ತು ಇತರ ಕನ್ನಡ ಧಾರವಾಹಿ ನಿರ್ಮಾಪಕರಿಗೆ
  ನಮ್ಮಲ್ಲಿಯೆ ಹುಟ್ಟಿದ ಬೆಳದ ಕನ್ನಡದ ಸೊಗಡನ್ನು ಮ್ಯಗೂಡಿಸಿಕೊ೦ಡ ಧಾರಾವಹಿಗಳು ಎಷ್ಟೇಕೆಟ್ಟದಾಗಿ ಮೂಡಿಬ೦ದರೂ ನಮ್ಮದೆನ್ನುವ ಹೆಮ್ಮೆ ನಮ್ಮೆಲ್ಲರಿಗೂ ತ್ರುಪ್ತಿ ತ೦ದು ಕೊಡುತ್ತದೆ.ಒ೦ದು ಧಾರವಾಹಿ ಮೂಡಿಬರಬೇಕಾದರೆ ಅದರ ಹಿ೦ದೆ ನೂರಾರು ಜನಗಳ ಬೆವರು ಸುರಿದಿರುತ್ತದೆ.ಅವರೆಲ್ಲರ ಬದುಕಿಗೆ ಒ೦ದು ದಾರಿಯಾಗಿರಿತ್ತದೆ.ಡಬ್ಬಿ೦ಗ ನಿ೦ದ ಈ ಧಾರವಾಹಿ ಗಳನ್ನೆ ನ೦ಬಿ ಕೊ೦ಡು ಬದುಕುತ್ತಿರುವ ಜನಗಳ ಹೊಟ್ಟೆಯ ಮೇಲೆ ಹೊಡೇದ೦ತ್ತಾಗುತ್ತದೆ. ಪರಭಾಷೆಯ ಎ೦ಜಲು ಎಲೆಯಲ್ಲಿ ಕನ್ನಡಿಗರಿಗೆ ಊಟ ಬಡಿಸೌವ ಬದಲು ನಮ್ಮ ಧಾರವಾಹಿಗಳ ಗುಣ ಮಟ್ಟ ಹೆಚ್ಹಿಸಲು ಕೆಲವು ಪ್ರಯತ್ನ ಗಳನ್ನು ಮಾಡಾ ಬಹುದು.ಇದಕ್ಕೆ ಅನುಕೂಲ ವಾಗುವ೦ತೆ ನಿರ೦ತರ ತರಬೇತಿ ಕಾರ್ಯಕ್ರಮಗಳನ್ನು ಹಾಕಿ ಕೊ೦ಡು ಗುಣಮಟ್ಟವನ್ನು ಹೆಚ್ಹಿಸಿ ಕೊಳ್ಳಲು ಪ್ರಯತ್ನಿಸಬೇಕು.ಅದರ ಬದಲು ತೊಟ್ಟಿಯಲ್ಲಿ ಬಿದ್ದಿರುವ ಎ೦ಜಲು ಎಲೆಯನ್ನು ನೆಕ್ಕುವ ಪ್ರಯತ್ನ ಬೇಡ.

  ಪ್ರತಿಕ್ರಿಯೆ
 47. Jogayya

  ಮೊದಲಿಗೆ ಕನ್ನಡದಲ್ಲಿ ಬರುವುದೆಲ್ಲವೂ ಕಳಪೆ ಅನ್ನುವುದು ಸುಳ್ಳು. ಹಾಗೆಯೇ ಪರಭಾಷೆಯಲ್ಲಿ ಬರೋದೆಲ್ಲವೂ ಉತ್ತಮ ಗುಣಮಟ್ಟದ್ದೂ ಅನ್ನೋದು ಸುಳ್ಳು. ಆದರೆ ನಾವುಗಳು ಸುಮ್ಮನೆ ಥಿಯೊರಿ ಮಾತಾಡೊ ಬದಲು ಅದರ ಪರೀಕ್ಷೆಯನ್ನು ಮಾರುಕಟ್ಟೆಯಲ್ಲಿ ಪ್ರೇಕ್ಷಕ ಮಹಾಪ್ರಭು ಮಾಡುತ್ತಾನೆ ಅನ್ನೋದನ್ನ ಒಪ್ಪಲೇ ಬೇಕು. ಎಷ್ಟೋ ಸ್ವಂತವಾಗಿ ಮಾಡಿದ ಚಿತ್ರಗಳು, ಧಾರಾವಾಹಿಗಳು ನೆಲ ಕಚ್ಚಿವೆ. ಹಾಗೆಯೇ ಎಷ್ಟೋ ರೀಮೇಕುಗಳು ಬೊಂಬಾಟ್ ಆಗಿ ಓಡಿವೆ. ಅದೇ ರೀತಿ ಡಬ್ಬಿಂಗ್ ಬಂದಾಗಲೂ ಸಹ ಗುಣಮಟ್ಟ ಇರೋದು ಹಿಟ್ ಆಗತ್ತೆ, ಮಿಕ್ಕಿದ್ದು ಮುಗ್ಗರಿಸಿ ಬೀಳುತ್ತೆ.
  ಯಾವುದೇ ಕಾರ್ಯಕ್ರಮವಾಗಲೀ, ಅದನ್ನು ಕನ್ನಡದಲ್ಲಿ ನೋಡುತ್ತೀವಿ ಅನ್ನೋವ್ರನ್ನ ಕನ್ನಡ ದ್ರೋಹಿಗಳು ಅಂತ ಬಿಂಬಿಸುವುದು ಸರಿಯಲ್ಲ.

  ಪ್ರತಿಕ್ರಿಯೆ
 48. Ajay

  ಟಿ.ಎನ್. ಸೀತಾರಾಂ, ಜೋಗಿಯಂತಹ ಪ್ರತಿಭಾವಂತರೂ ಕೂಡ ಹೀಗೆ ಯಾಕೆ ಹೆದರಿಕೊಳ್ಳುತ್ತಿದ್ದಾರೆ ಅಂತ ಅರ್ಥಾಗುತ್ತಿಲ್ಲ!! ಇಂಡಸ್ಟ್ರಿಯಲ್ಲಿನ ಜನರನ್ನು ಮೆಚ್ಚಿಸಲು ಹೀಗೆ ನಡೆದುಕೊಳ್ಳುತ್ತಿದ್ದಾರಾ ಎಂಬ ಅನುಮಾನವೂ ಬರುತ್ತಿದೆ.
  ಏಕೆಂದರೆ ಜೋಗಿ ಕೊಡುತ್ತಿರುವ ಸಮರ್ಥನೆಗಳನ್ನೇ ನೋಡಿ, ಅವು ಒಂದಂಕ್ಕೊಂದು ಸಂಬಂಧವೇ ಇಲ್ಲ.! ಅಮ್ಮನಿಗೆ ಇಂಗ್ಲಿಷು ಬರುವುದಿಲ್ಲ, ಮಗಳು ಇಂಗ್ಲೀಷು ಮಾತಾಡುತ್ತಾಳೆ, ಪೋಗೋ ತಮಿಳಿನಲ್ಲಿ ಬಂತು, ಇತ್ಯಾದಿ ಇತ್ಯಾದಿ.
  ಕೇಬಲ್ಲಿನಲ್ಲಿ ಬೇಡದ್ದೂ ಬರುತ್ತದೆ ಅಂತಾರೆ. ಹೌದು, ಬೇಡದ್ದು ಬಂದರೆ ನೋಡಬೇಡಿ ಅಷ್ಟೆ. ನಾವು ಕನ್ನಡ ಡಿಸ್ಕವರಿ ನೋಡುತ್ತೇವೆ. ನಿಮಗೆ ಬೇಡವಾದರೆ ಇಂಗ್ಲೀಷಲ್ಲೇ ನೋಡಿ. ನಿಮಗೆ ನೋಡಲು ಇಷ್ಟ ಇಲ್ಲ ಎಂಬ ಕಾರಣಕ್ಕೆ ಕನ್ನಡದಲ್ಲಿ ಬರಲೇಬಾರದು ಎಂದು ಯಾಕೆ ಬಯಸುತ್ತೀರಿ?
  ನನ್ನ ತಂದೆತಾಯಿಗೆ ಇಂಗ್ಲೀಷ್ ಬರುತ್ತದೆ, ಆದರೆ ಅವರು ನನ್ನನ್ನು ಕನ್ನಡದಿಂದ ದೂರ ಮಾಡಿಲ್ಲ. ನನಗೂ ಇಂಗ್ಲೀಷ್ ಬರುತ್ತದೆ, ಆದರೆ ನನಗೆ ಇಂಗ್ಲೀಷಿಗಿಂತ ಕನ್ನಡದ ಮೂಲಕ ಎಲ್ಲಾ ಜ್ನಾನ ಪಡೆಯುವುದು ಬಹಳ ಇಷ್ಟ ಮತ್ತು ಅನುಕೂಲಕರ. ನನ್ನ ಮಕ್ಕಳು ಕನ್ನಡದಲ್ಲಿ ಏನೂ ಸಿಗದೇ ಚೋಟಾ ಭೀಮ್ ನೋಡಿ ಹಿಂದಿ ಕಲಿಯುವುದು, ಸೈನ್ಸ್ ಕಾರ್ಯಕ್ರಮ ನೋಡಲು ಇಂಗ್ಲೀಷ್ ಮೇಲೇ ಅವಲಂಬಿತವಾಗುವುದು, ಸಿನೆಮಾ ನೋಡಿ ಹಿಂದಿ ತೆಲಗು ತಮಿಳು ಕಲಿಯುವುದು ಇದೆಲ್ಲಾ ಬೇಕಾಗಿಲ್ಲ. ಜೊತೆಗೆ ಕನ್ನಡ ಅನ್ನುವುದು ಮನೆಯ ಭಾಷೆ, ಅದೊಂದು ನಿಷ್ಪ್ರಯೋಜಕ ಭಾಷೆ ಅಂತ ಭಾವನೆ ಬೆಳೆಸಿಕೊಂಡು ಬದುಕುವುದೂ ಇಷ್ಟವಿಲ್ಲ. ಆದ್ದರಿಂದ ಎಲ್ಲಾ ಕಾರ್ಯಕ್ರಮಗಳೂ ಕನ್ನಡದಲ್ಲೇ ಬೇಕು. ನೀವು ನೂರು ಕನ್ನಡ ಚಿತ್ರ ನೋಡಿದ್ದರೆ ಸಂತೋಷ. ನಾವೂ ನೂರಾರು ನೋಡಿದ್ದೇವೆ, ನೋಡುತ್ತೇವೆ. ನಿಮಗೆ ಪರಭಾಷೆ ಚಿತ್ರಗಳು ಅದೇ ಭಾಷೆಯಲ್ಲಿ ಬೇಕಾದರೆ ನೋಡಿ,ಯಾರೂ ತಡೆಯುವುದಿಲ್ಲ. ಆದರೆ ನಮಗೆ ಕನ್ನಡದಲ್ಲೇ ನೋಡಲು ಅಡ್ಡಗಾಲು ಹಾಕಬೇಡಿ. ಯಾಕಂದರೆ ಕರ್ನಾಟಕದ ಸಾಮಾನ್ಯ ಜನರೆಲ್ಲರೂ ಸಾವಿರ ಕನ್ನಡ ಚಿತ್ರ ನೋಡುವುದಿಲ್ಲ. ತೆಲುಗು ಸಿನೆಮಾ ಕರ್ನಾಟಕದಲ್ಲಿ ೧೫೦ ಟಾಕೀಸಿನಲ್ಲಿ ಬಿಡುಗಡೆಯಾದರೆ ಹೋಗಿ ನೋಡಿಕೊಂಡು ಬಂದು ಕೃತಾರ್ಥರಾಗುತ್ತಾರೆ.
  ಅಂದಹಾಗೆ, ಜೋಗಿಯವರು ಅವರದ್ದು ಕೇವಲ ವೈಯಕ್ತಿಕ ನಿಲುವು ಅನ್ನುತ್ತಾರೆ. ಆದರೆ ಬೇರೆಯವರನ್ನು ಮಾತ್ರ ಯಾವುದೋ ಕೃಪಾಪೋಷಿತರು ಅನ್ನುತ್ತಾರೆ. ಜೋಗಿ ಸರ್, ನಾನು ಸಿನೆಮಾದವನೂ ಅಲ್ಲ, ಚಾನಲ್ಲಿನವನೂ ಅಲ್ಲ, ಯಾವ ಕಾರ್ಪೋರೇಟ್ ಗಳೂ ನನಗೆ ದುಡ್ಡು ಕೊಟ್ಟಿಲ್ಲ, ಪರಿಚಯವೂ ಇಲ್ಲ. ನಾನೊಬ್ಬ ಕರ್ನಾಟಕದ ಸಾಮಾನ್ಯ ಪ್ರಜೆ. ಒಳ್ಳೆಯ ಕಾರ್ಯಕ್ರಮಗಳು, ಡಿಸ್ಕವರಿ ಗಳಂತಹ ಚಾನಲ್ ಗಳು ಕನ್ನಡದಲ್ಲಿ ಬರಬೇಕು ಅಂತ ನನ್ನ ಆಸೆ. ನನಗೆಲ್ಲಿಂದ ಕೃಪೆ ? ಎಲ್ಲಿಂದ ಪೋಷಣೆ? ಹೇಳಿ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: