ಡಾ ಜ್ಯೋತಿ ಕಂಡ ಸಾವಿತ್ರಿಬಾಯಿ ಫುಲೆ

ಡಾ. ಜ್ಯೋತಿ

“ಸ್ವಾವಲಂಬಿಯಾಗಿ, ಶ್ರಮವಹಿಸಿ ದುಡಿಯಿರಿ,
ಜ್ಞಾನ ಮತ್ತು ಸಂಪತ್ತನ್ನು ಪಡೆಯಿರಿ,
ಬುದ್ಧಿಶಕ್ತಿ ಇಲ್ಲದಿದ್ದರೆ ಎಲ್ಲಾ ಕಳೆದುಕೊಳ್ಳುತ್ತೀರಿ,
ಜನ ನಿಮ್ಮನ್ನು ಪ್ರಾಣಿಗಳಂತೆ ಕಾಣುತ್ತಾರೆ,
ಇನ್ನು ಸುಮ್ಮನೆ ಕುಳಿತುಕೊಳ್ಳಬೇಡಿ, ಬನ್ನಿ, ಶಿಕ್ಷಣ ಪಡೆಯಿರಿ,
ದಮನಿತರ ಕಣ್ಣೀರನ್ನು ಕೊನೆಗೊಳಿಸಿ,
ವಿದ್ಯೆ ಕಲಿಯಲು ನಿಮಗಿದು ಸುವರ್ಣಾವಕಾಶ,
ಆದ್ದರಿಂದ ಕಲಿಯಿರಿ, ಜಾತಿಯ ಸಂಕೋಲೆಗಳನ್ನು ಮುರಿದು ಹಾಕಿ,
ಬ್ರಾಹ್ಮಣರ ಧರ್ಮಗ್ರಂಥಗಳನ್ನು ಕಿತ್ತು ಎಸೆಯಿರಿ.”

ಇದು, ೧೮೯೨ರಲ್ಲಿ ಸಾವಿತ್ರಿಬಾಯಿ ಫುಲೆ ರಚಿಸಿದ “ಬನ್ನಿ, ಶಿಕ್ಷಣ ಪಡೆಯಿರಿ…” ಪ್ರಗತಿಪರ ಗೀತೆಯ ಸಾಲುಗಳು. ಇದು ಕ್ರಾಂತಿಗೀತೆಯಾಗಿ ಪಸರಿಸಿ, ಹಿಂದುಳಿದ ಜಾತಿಯ ಮಕ್ಕಳು ಮತ್ತು ಮಹಿಳೆಯರಲ್ಲಿ ಜಾಗೃತಿ ಮೂಡಿಸಿ, ಸಾಮಾಜಿಕ ಅಡೆತಡೆಗಳ ಮೀರಿ ಶಾಲೆಗೆ ಕರೆದು ತಂದಿತು.   

ಜನವರಿ ೩, ೧೮೩೧ರಲ್ಲಿ ಮಹಾರಾಷ್ಟ್ರದ ನೈಗಾಂವ್ ಹಳ್ಳಿಯಲ್ಲಿ ಹುಟ್ಟಿದ ಸಾವಿತ್ರಿಬಾಯಿ ಫುಲೆ, ಭಾರತದ ‘ಮೊದಲ ಮಹಿಳಾ ಶಿಕ್ಷಕಿ’ಯೆಂದು ಗುರುತಿಸಲ್ಪಟ್ಟಿದ್ದಾರೆ. ಮಹಿಳಾ ಹಕ್ಕಿನ ಗಂಧಗಾಳಿಯಿಲ್ಲದ ಆ ಕಾಲದಲ್ಲಿ, ಸಮಾಜ ಸುಧಾರಕ ಪತಿ ಜ್ಯೋತಿರಾವ್ ಫುಲೆ (ಜ್ಯೋತಿಬಾ) ಅವರೊಂದಿಗೆ ಕೈಜೋಡಿಸಿ, ಮಹಿಳೆಯರ ಸ್ಥಿತಿಗತಿಯನ್ನು ಸುಧಾರಿಸುವಲ್ಲಿ ಸಾವಿತ್ರಿಬಾಯಿ ಪ್ರಮುಖ ಪಾತ್ರವಹಿಸಿದ್ದಾರೆ.

ಹಿಂದುಳಿದ ಮಾಲಿ ಸಮುದಾಯದ ರೈತ ಕುಟುಂಬದಲ್ಲಿ ಜನಿಸಿದ ಸಾವಿತ್ರಿಬಾಯಿ, ೯ನೇ ವಯಸ್ಸಿನಲ್ಲಿ ೧೩ ವರ್ಷದ ಜ್ಯೋತಿಬಾರನ್ನು ವಿವಾಹವಾದಾಗ, ಸ್ವತಃ ಅನಕ್ಷರಸ್ಥರಾಗಿದ್ದರು. ಆದರೆ, ವಿದ್ಯಾವಂತರಾಗಿದ್ದ ಜ್ಯೋತಿಬಾ, ಶಿಕ್ಷಣದ ಮೂಲಕ ಸಾಮಾಜಿಕ ಅಸಮಾನತೆ ತೊಡೆದುಹಾಕಲು ಸಾಧ್ಯವೆಂದು ಬಲವಾಗಿ ನಂಬಿದ್ದರು. ವಿಶೇಷವಾಗಿ, ಮಹಿಳೆಯರು ಮತ್ತು ದಲಿತರ ಏಳ್ಗೆಗೆ ಪಣತೊಟ್ಟಿದ್ದರು. ಇದರ ಆರಂಭ ತನ್ನ ಪತ್ನಿಯಿಂದಲೇ ಆಗಬೇಕೆಂದು ಸಂಕಲ್ಪಿಸಿದ ಜ್ಯೋತಿಬಾ, ಮನೆಯವರ ವಿರೋಧದ ನಡುವೆಯೂ, ಹೊಲದಲ್ಲಿ ಕೆಲಸಮಾಡುವಾಗ ಊಟ ಕೊಡಲು ಬರುತ್ತಿದ್ದ ಪತ್ನಿಗೆ, ಅಲ್ಲಿಯೇ ವಿದ್ಯಾಭ್ಯಾಸ ಮಾಡಿಸಿದರು. ಇದನ್ನು ತಿಳಿದ ಅವರ ತಂದೆ ಮನೆಯಿಂದ ಹೊರಗೆ ಹಾಕುವ ಬೆದರಿಕೆ ಹಾಕಿದರು.

ಈ ಬೆದರಿಕೆಗಳಿಗೆ ಬಗ್ಗದ ಜ್ಯೋತಿಬಾ ವಿದ್ಯಾಭ್ಯಾಸ ಮುಂದುವರಿಸಿ, ಪತ್ನಿಯನ್ನು ಪುಣೆಯಲ್ಲಿನ ಶಿಕ್ಷಕ ತರಬೇತಿ ಸಂಸ್ಥೆಗೆ ಸೇರಿಸಿದರು. ತರಬೇತಿ ಪಡೆದ ಸಾವಿತ್ರಿಬಾಯಿ ನಂತರ ಪುಣೆಯ ಮಹರವಾಢದಲ್ಲಿ, ಜೋತಿಬಾರವರ ಮಾರ್ಗದರ್ಶಕರಾಗಿದ್ದ ಹಾಗು ಸ್ತ್ರಿಸಮಾನತೆಯಲ್ಲಿ ವಿಶೇಷ ಕಾಳಜಿ ಹೊಂದಿದ್ದ ಅವರ ಚಿಕ್ಕಮ್ಮ ಸಗುಣಾಬಾಯಿಯೊಂದಿಗೆ ಜೊತೆಗೂಡಿ ಮನೆಯಲ್ಲಿಯೇ ಹೆಣ್ಣುಮಕ್ಕಳ ಶಿಕ್ಷಣ ಆರಂಭಿಸಿದರು. ಕೇವಲ ೯ ಹೆಣ್ಣುಮಕ್ಕಳಿಂದ ಆರಂಭವಾದ ಇವರ ಪಾಠಶಾಲೆಯಲ್ಲಿ, ವಿದ್ಯಾರ್ಥಿನಿಯರ ಸಂಖ್ಯೆ ನಿಧಾನವಾಗಿ ೨೫ಕ್ಕೆ ಏರಿತು. ನಂತರ, ೧೮೪೮ರಲ್ಲಿ ಈ ದಂಪತಿಗಳು ಸಗುಣಾಬಾಯಿ ಜೊತೆಗೂಡಿ, ಭೀಡೆವಾಡದಲ್ಲಿ ಭಾರತದ ಪ್ರಥಮ ಬಾಲಕಿಯರ ಶಾಲೆಯನ್ನು ಸ್ಥಾಪಿಸಿದರು. ತರುವಾಯ, ಬಾಲಕಿಯರಿಗಾಗಿ ಪುಣೆಯಲ್ಲಿ ಮೂರು ಶಾಲೆಗಳನ್ನು ತೆರೆದರು. ಆರಂಭದಲ್ಲಿ, ಸುಮಾರು ೧೫೦ ವಿದ್ಯಾರ್ಥಿನಿಯರು ಈ ಶಾಲೆಗಳಲ್ಲಿ ದಾಖಲಾಗಿದ್ದರು.   

ಇವರ ಶಾಲೆಗಳಲ್ಲಿ ಪಠ್ಯ ಮತ್ತು ಬೋಧನಾ ಕ್ರಮ, ಬೇರೆ ಸರಕಾರಿ ಶಾಲೆಗಳಿಗಿಂತ ವಿಭಿನ್ನವಾಗಿತ್ತು. ಶಾಲೆಗೆ ಹಾಜರಾಗಲು ಪ್ರೇರಣೆಯಾಗಲೆಂದು ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲು ಆರಂಭಿಸಿದರು. ಶಿಕ್ಷಣದ ಮಹತ್ವದ ಬಗ್ಗೆ ಪೋಷಕರಲ್ಲಿ ಜಾಗೃತಿ ಮೂಡಿಸಲು ಪೋಷಕ-ಶಿಕ್ಷಕರ ಸಭೆಗಳನ್ನು ನಡೆಸಿದರು. ಪಠ್ಯೇತರ ಚಟುವಟಿಕೆಗಳು ಮತ್ತು ಇಂಗ್ಲಿಷ್ ಭಾಷೆಯನ್ನು ಕಲಿಸುವುದಕ್ಕೆ ಹೆಚ್ಚಿನ ಒತ್ತು ನೀಡಲಾಗಿತ್ತು. ಈ ಕ್ರಮಗಳಿಂದ, ಇವರ ಶಾಲೆಗಳಲ್ಲಿ ಹುಡುಗಿಯರ ಸಂಖ್ಯೆ, ಪುಣೆಯ ಸರ್ಕಾರಿ ಶಾಲೆಗಳಲ್ಲಿ ದಾಖಲಾದ ಹುಡುಗರಿಗಿಂತ ಹೆಚ್ಚಾಗಿತ್ತು. ಜೊತೆಗೆ, ಅಸ್ಪ್ರಶ್ಯರೆಂದು ಪರಿಗಣಿಸಲ್ಪಟ್ಟ ಮಾಂಗ್ ಮತ್ತು ಮಹರ್ ಜಾತಿಯ ಮಹಿಳೆಯರು ಮತ್ತು ಮಕ್ಕಳನ್ನು ಶಾಲೆಗೆ ಸೇರಿಸಿಕೊಂಡರು.

ವಿಶೇಷವಾಗಿ, ಮಹಿಳೆಯರು ಮತ್ತು ಕೆಳಜಾತಿಯವರಿಗೆ ಅರಿವು ಮೂಡಿಸುವ ಇವರ ಪ್ರಯತ್ನಗಳು ಸ್ಥಳೀಯ ಸಾಂಪ್ರದಾಯಿಕ ಮನಸ್ಥಿತಿಗಳ ಕೆಂಗಣ್ಣಿಗೆ ಗುರಿಯಾಯಿತು. ಸಮಾಜ ಬದಲಾಯಿಸಬಹುದಾದ ಇವರ ಕಾರ್ಯವೈಖರಿಗೆ ಬೆಚ್ಚಿದ ಸುತ್ತಲಿನ ಜನರು ಇವರ ಬಗ್ಗೆ ಅಪಪ್ರಚಾರ ಮಾಡಿದರು; ‘ಸಾವಿತ್ರಿಬಾಯಿ ವಿದ್ಯಾ ಕಲಿತಿದ್ದರಿಂದ ಅವಳ ಗಂಡ ಅಕಾಲಿಕ ಮರಣ ಹೊಂದುತ್ತಾನೆ, ಮಾಡಿದ ಪಾಪದಿಂದಾಗಿ ಅವಳು ತಿನ್ನುವ ಅನ್ನ ಹುಳುಗಳಾಗಿ ಮಾರ್ಪಡುತ್ತಿವೆ, ವಿದ್ಯಾವಂತ ಮಹಿಳೆಯರು ಎಲ್ಲರಿಗೂ ಪತ್ರ ಬರೆಯಲು ಆರಂಭಿಸಿ ಮನೆಯವರ ಕೈಗೆ ಸಿಗುವುದಿಲ್ಲ, ಇತ್ಯಾದಿ…’ ಈ ಬೆದರಿಕೆಗಳಿಗೆ ಮಣಿಯದ ಸಾವಿತ್ರಿಬಾಯಿ ದೈಹಿಕ ಹಲ್ಲೆ ಮತ್ತು ಅಶ್ಲೀಲ ಮಾತುಗಳನ್ನೂ ಎದುರಿಸಬೇಕಾಯಿತು.

ಈ ಸಂದರ್ಭದಲ್ಲಿ, ಅವರಿಗೆ ಮಾನಸಿಕ ಸ್ಥೈರ್ಯ ತುಂಬಿದ, ಜ್ಯೋತಿಬಾ ಪತ್ನಿಗೆ ಶಾಲೆಗೆ ಹೋಗುವಾಗ ಬ್ಯಾಗಿನಲ್ಲಿ ಒಂದು ಹೆಚ್ಚುವರಿ ಸೀರೆಯನ್ನು ಒಯ್ಯುವಂತೆ ಸಲಹೆ ನೀಡಿದರು. ಏಕೆಂದರೆ, ದಾರಿಯಲ್ಲಿ ಮೇಲ್ಜಾತಿಯ ಸಂಪ್ರದಾಯವಾದಿಗಳು ಅವರ ಮೇಲೆ ಸೆಗಣಿ, ಮೊಟ್ಟೆ, ಟೊಮ್ಯಾಟೋ ಮತ್ತು ಕಲ್ಲುಗಳನ್ನು ಎಸೆದು ಅಪಹಾಸ್ಯ ಮಾಡುತ್ತಿದ್ದರು. ಆದ್ದರಿಂದ, ಸಾವಿತ್ರಿಬಾಯಿ ಶಾಲೆಗೆ ಹೋಗಿ ಸೀರೆ ಬದಲಾಯಿಸಿ ಪಾಠ ಮಾಡುತ್ತಿದ್ದರು.

ಕ್ರಮೇಣ, ತನ್ನನ್ನು ಅವಮಾನಿಸುತ್ತಿದ್ದವರಿಗೆ ಸಾವಿತ್ರಿಬಾಯಿ ಪ್ರತಿಕ್ರಿಯೆ ಕೊಡಲಾರಂಭಿಸಿದರು, “ನೀವು ಮಾಡುತ್ತಿರುವುದು ನನಗೆ ಇನ್ನಷ್ಟು ಸ್ಫೂರ್ತಿ ತುಂಬುತ್ತಿದೆ. ದೇವರು ನಿಮಗೆ ಒಳ್ಳೆಯದನ್ನು ಮಾಡಲಿ.” ಹೀಗೆ ತೊಂದರೆ ಕೊಟ್ಟವನೊಬ್ಬನಿಗೆ ಒಂದು ದಿನ ಸಾವಿತ್ರಿಬಾಯಿ ಕಪಾಳಮೋಕ್ಷ ಮಾಡಿದ ಮೇಲೆ, ಪುಣೆಯಾದ್ಯಂತ ಇದೊಂದು ಮಹಾನ್ ಸುದ್ದಿಯಾಗಿ, ದಾರಿಯಲ್ಲಿ ತೊಂದರೆ ಕೊಡುವುದಂತೂ ನಿಂತಿತು. 

ಆದರೆ, ಈ ಸಂಪ್ರದಾಯವಾದಿಗಳು ಜ್ಯೋತಿಬಾ ತಂದೆಯ ಮೇಲೆ ಒತ್ತಡ ಹಾಕಿ, ಅವರು ಈ ದಂಪತಿಗಳನ್ನು ಮನೆಯಿಂದ ಹೊರಗೆ ಹಾಕುವಂತೆ ಮಾಡಿದರು. ಯಾಕೆಂದರೆ, ಶಾಸ್ತ್ರಗಳ ಪ್ರಕಾರ ಅವರು ಮಾಡುತ್ತಿರುವ ಕೆಲಸ ಮಹಾ ಪಾಪವಾಗಿತ್ತು. ಹೀಗೆ ಮನೆಯಿಂದ ಹೊರತಳ್ಳಲ್ಪಟ್ಟ ದಂಪತಿಗಳಿಗೆ ಆಶ್ರಯ ನೀಡಿದವರು, ಸ್ನೇಹಿತರಾದ ಉಸ್ಮಾನ್ ಶೇಕ್ ಕುಟುಂಬ. ಅವರ ಸಹೋದರಿ ಫಾತಿಮಾ ಬೇಗಂ ಶೇಕ್ ಗೆ ಓದು ಬರಹ ಸ್ವಲ್ಪ ತಿಳಿದಿತ್ತು. ಅಣ್ಣನ ಪ್ರೋತ್ಸಾಹದಿಂದ, ಫಾತಿಮಾ ಕೂಡ ಸಾವಿತ್ರಿಬಾಯಿಯೊಂದಿಗೆ ಶಿಕ್ಷಕ ತರಬೇತಿಗೆ ಸೇರಿಕೊಂಡು, ಇಬ್ಬರೂ ಒಟ್ಟಿಗೆ ಪದವಿ ಪಡೆದರು. ಈ ರೀತಿ, ಫಾತಿಮಾ ‘ಭಾರತದ ಮೊದಲ ಮುಸ್ಲಿಂ ಮಹಿಳಾ ಶಿಕ್ಷಕಿ’ಯೆಂಬ ಹೆಗ್ಗಳಿಕೆ ಪಡೆದರು. ಇಬ್ಬರೂ ಕೂಡಿ, ಉಸ್ಮಾನ್ ಶೇಕ್ ಮನೆಯಲ್ಲಿಯೇ ಶಾಲೆಯನ್ನು ಆರಂಭಿಸಿದರು.

ಇದು ಮುಂದುವರಿದು, ೧೮೪೮ರಿಂದ ೧೮೫೨ರವರೆಗೆ ಫುಲೆ ದಂಪತಿಗಳು ಮಹಿಳೆಯರಿಗಾಗಿ ಒಟ್ಟು ೧೮ ಶಾಲೆಗಳನ್ನು ತೆರೆದರು. ಇದನ್ನು ಗುರುತಿಸಿದ ಆಗಿನ ಬ್ರಿಟಿಷ್ ಸರಕಾರವು ೧೮೫೨ರಲ್ಲಿ ಶಿಕ್ಷಣಕ್ಕೆ ಇವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಗೌರವಿಸಿತು ಮತ್ತು ಸಾವಿತ್ರಿಬಾಯಿಯನ್ನು ಅತ್ಯುತ್ತಮ ಶಿಕ್ಷಕಿಯೆಂದು ಶ್ಲಾಘಿಸಿತು. ಮುಂದೆ, ಫುಲೆ ದಂಪತಿಗಳು ಹಗಲು ಹೊತ್ತಿನಲ್ಲಿ ದುಡಿಯುವ ಕೃಷಿಕ ಮತ್ತು ಕಾರ್ಮಿಕ ವರ್ಗದ ಮಹಿಳೆಯರು ಮತ್ತು ಮಕ್ಕಳಿಗಾಗಿ ೧೮೫೫ರಲ್ಲಿ ರಾತ್ರಿ ಶಾಲೆಯನ್ನು ತೆರೆದರು. ಜೊತೆಗೆ, ಶಿಕ್ಷಣಕ್ಕೆ ಉತ್ತೇಜನ ನೀಡುವ ಸಲುವಾಗಿ ಮಹಾರಾಷ್ಟ್ರದಾದ್ಯಂತ ವಿದ್ಯಾರ್ಥಿಗಳಿಗಾಗಿ ಒಟ್ಟು ೫೨ ಉಚಿತ ವಸತಿನಿಲಯಗಳನ್ನು ಸ್ಥಾಪಿಸಿದರು.

ಶಿಕ್ಷಣದೊಂದಿಗೆ, ಸಾಮಾಜಿಕ ಪರಿವರ್ತನೆಯಲ್ಲಿ ಸಕ್ರಿಯವಾಗಿ ಕಾರ್ಯನಿರತರಾಗಿದ್ದ ಫುಲೆ ದಂಪತಿಗಳು ಹಲವಾರು ವಿನೂತನ ಯೋಜನೆಗಳಿಗೆ ಕಾರಣೀಭೂತರಾಗಿದ್ದಾರೆ. ಸೆಪ್ಟೆಂಬರ್ ೨೪, ೧೮೭೩ರಲ್ಲಿ ‘ಸತ್ಯಶೋಧಕ ಸಮಾಜ’ವೆಂಬ ಸಂಸ್ಥೆ ಆರಂಭಿಸಿದ ಫುಲೆ ದಂಪತಿಗಳು, ಎಲ್ಲ ಜಾತಿ, ಧರ್ಮ ಮತ್ತು ವರ್ಗದವರನ್ನು ಸದಸ್ಯರನ್ನಾಗಿಸಿ, ಸಮಾಜ ಸುಧಾರಣೆಗೆ ನಾಂದಿ ಹಾಡಿದರು.

ಇದರ ಅಂಗವಾಗಿ, ‘ಸತ್ಯಶೋಧಕ ಮದುವೆ’ ಆರಂಭಿಸಿ, ಮದುವೆಯಾಗುವ ದಂಪತಿಗಳು ಶಿಕ್ಷಣ ಮತ್ತು ಸಮಾನತೆಯ ಪ್ರತಿಜ್ಞೆ ತೆಗೆದುಕೊಳ್ಳುವುದನ್ನು ಕಡ್ಡಾಯ ಮಾಡಿದರು. ವಿರೋಧಗಳ ನಡುವೆಯೂ, ಪುರೋಹಿತರ ಸಾರಥ್ಯವಿಲ್ಲದೆ ವಿಧವೆಯರ ವಿವಾಹವನ್ನು ಆಯೋಜಿಸಿದರು. ಈ ವೇದಿಕೆಯಲ್ಲಿ, ವರದಕ್ಷಿಣೆ ವಿರೋಧಿ ಸರಳ ವಿವಾಹಕ್ಕೆ ಪ್ರೇರೇಪಿಸಿದರು. ಆ ಕಾಲದಲ್ಲಿ ಅಸ್ಪ್ರಶ್ಯರಿಗೆ ಸಾರ್ವಜನಿಕ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದನ್ನು ಮನಗಂಡು ೧೮೬೮ರಲ್ಲಿ, ತಮ್ಮ ಮನೆಯಂಗಳದಲ್ಲಿಯೇ ಬಾವಿ ತೋಡಿ ಅವರಿಗೆ ನೀರಿನ ವ್ಯವಸ್ಥೆ ಕಲ್ಪಿಸಿದರು.

ಅಪ್ಪಟ ಸ್ತ್ರಿವಾದಿಯಾಗಿದ್ದ ಸಾವಿತ್ರಿಬಾಯಿ, ಮಹಿಳೆಯರಲ್ಲಿ ಜಾಗ್ರತಿ ಮೂಡಿಸಲು ಮಹಿಳಾ ಸೇವಾ ಮಂಡಳಿಗಳನ್ನು ಸ್ಥಾಪಿಸಿದರು. ಈ ವೇದಿಕೆಯ ಮೂಲಕ, ಬಾಲ್ಯವಿವಾಹ, ಹೆಣ್ಣು ಭ್ರೂಣಹತ್ಯೆ ಮತ್ತು ಸತಿಪದ್ದತಿ ವಿರುದ್ಧ ಜಾಗೃತಿ ಅಭಿಯಾನ ಸಂಘಟಿಸಿದರು. ಆ ಕಾಲದಲ್ಲಿ, ವಿಧವೆಯರು ಸಾಮಾನ್ಯವಾಗಿ ಲೈಂಗಿಕವಾಗಿ ಶೋಷಣೆಗೊಳಗಾಗುತ್ತಿದ್ದರು. ಅಲ್ಲದೆ, ಈ ಶೋಷಣೆಯ ಪರಿಣಾಮವಾಗಿ ಗರ್ಭಿಣಿಯಾದರೆ ಇನ್ನಷ್ಟು ದೈಹಿಕ ಮತ್ತು ಮಾನಸಿಕ ಕಿರುಕುಳವನ್ನು ಅನುಭವಿಸುತ್ತಿದ್ದರು. ಈ ಸಮಸ್ಯೆ ಪರಿಹರಿಸಲು ಜ್ಯೋತಿಬಾ ದಂಪತಿಗಳು, ೧೮೬೩ರಲ್ಲಿ ‘ಬಾಲ್ಯತಾ ಪ್ರತಿಬಂದಕ್ ಗೃಹ’ವೆಂಬ ಶಿಶುಕೇಂದ್ರವನ್ನು ಗರ್ಭಿಣಿ ವಿಧವೆಯರ ಮತ್ತು ಅತ್ಯಾಚಾರಕ್ಕೆ ಒಳಗಾದವರ ಸುರಕ್ಷತೆಗಾಗಿ ಸ್ಥಾಪಿಸಿದ್ದರು.

ವಿಧವೆಯರ ಮಕ್ಕಳನ್ನು ದತ್ತು ಪಡೆಯುವುದನ್ನು ಪ್ರೋತ್ಸಾಹಿಸುವುದರೊಂದಿಗೆ, ಅವರ ಪುನರ್ ವಿವಾಹಕ್ಕೆ ಬೆಂಬಲ ಕೊಟ್ಟರು. ವಿಧವೆಯರಿಗೆ ಮತ್ತು ಅನಾಥ ಮಕ್ಕಳಿಗಾಗಿ ಆಶ್ರಮ ತೆರೆದರು. 1860ರ ದಶಕದಲ್ಲಿ, ಸಾವಿತ್ರಿಬಾಯಿ ವಿಧವೆಯರ ತಲೆ ಬೋಳಿಸುವ ಸಂಪ್ರದಾಯದ ವಿರುದ್ಧ ಕ್ಷೌರಿಕರಿಂದ ಬಹಿಷ್ಕಾರವನ್ನು ಸಂಘಟಿಸಿದರು.

ಮಹಿಳೆಯರಿಗೆ ಜಾತಿವ್ಯವಸ್ಥೆಯಿಂದ ಹೊರಬರಲು ಕರೆಕೊಟ್ಟ ಸಾವಿತ್ರಿಬಾಯಿ, ತಮ್ಮ ಸಭೆಗಳಲ್ಲಿ ಎಲ್ಲ ಜಾತಿಯ ಮಹಿಳೆಯರನ್ನು ಒಟ್ಟಿಗೆ ಕೂರಲು ಹೇಳುತ್ತಿದ್ದರು. ಮಕ್ಕಳಿಲ್ಲದ ಜ್ಯೋತಿಬಾ ದಂಪತಿಗಳು ಒಬ್ಬ ವಿಧವೆಗೆ ಜನಿಸಿದ ಯಶವಂತ ರಾವ್ ನನ್ನು ದತ್ತು ಪಡೆದು, ಅವನನ್ನು ಓದಿಸಿ ವೈದ್ಯನನ್ನಾಗಿಸಿದರು. ಅವನೂ ಕೂಡ ಸತ್ಯಶೋಧಕ ಸಂಪ್ರದಾಯದಂತೆ ಅಂತರ್ಜಾತಿಯ ಮದುವೆಯಾಗುತ್ತಾನೆ.  

೧೮೯೦ರಲ್ಲಿ ಜ್ಯೋತಿಬಾ ನಿಧನರಾದಾಗ, ಎಲ್ಲರ ವಿರೋಧದ ನಡುವೆ ಗಂಡನ ಚಿತೆಗೆ ಸ್ವತಃ ತಾನೇ ಅಗ್ನಿಸ್ಪರ್ಶ ಮಾಡಿ, ಒಂದು ಅಪರೂಪದ ನಿದರ್ಶನವಾದರು. ಗಂಡನ ಮರಣಾನಂತರ ಸತ್ಯಶೋಧಕ ಸಮಾಜದ ಸಂಪೂರ್ಣ ಮೇಲ್ವಿಚಾರಣೆಯನ್ನು ಸಾವಿತ್ರಿಬಾಯಿ ವಹಿಸಿಕೊಂಡರು.

ಸ್ವತಃ ಕವಯಿತ್ರಿಯಾಗಿದ್ದ ಸಾವಿತ್ರಿಬಾಯಿ ಫುಲೆ, ‘ಕಾವ್ಯ ಫುಲೆ’ ಮತ್ತು ‘ಭವನ್ ಕಾಶಿ ಸುಭೋದ್ ರತ್ನಾಕರ್’ ಎಂಬ ಎರಡು ಕಾವ್ಯಸಂಗ್ರಹವನ್ನು ಪ್ರಕಟಿಸಿದ್ದರು. ಇದರೊಂದಿಗೆ, ಜ್ಯೋತಿಬಾ ಅವರ ಭಾಷಣಗಳ ಸಂಗ್ರಹವನ್ನು ಸಂಪಾದಿಸಿ 1856ರಲ್ಲಿ ಪ್ರಕಟಿಸಿದರು.

೧೮೯೭ರಲ್ಲಿ ಮಹಾರಾಷ್ಟ್ರ ಪ್ಲೇಗ್ ನಿಂದ ತತ್ತರಿಸಿದಾಗ ತಕ್ಷಣ ಸ್ಪಂದಿಸಿ, ವೈದ್ಯ ಮಗನೊಂದಿಗೆ ಒಂದು ಆಸ್ಪತ್ರೆ ಪ್ರಾರಂಭಿಸಿ, ತನ್ನನ್ನು ಸಂಪೂರ್ಣವಾಗಿ ರೋಗಿಗಳ ಆರೈಕೆಗೆ ತೊಡಗಿಸಿಕೊಂಡರು. ಅದರೊಂದಿಗೆ, ರೋಗಿಗಳ ಕುಟುಂಬದ ಸುಮಾರು ಎರಡು ಸಾವಿರ ಮಕ್ಕಳಿಗೆ ಪ್ರತಿದಿನ ಊಟದ ವ್ಯವಸ್ಥೆ ಮಾಡಿಸಿದ್ದರು. ಒಂದು ದಿನ, ೧೦ ವರ್ಷದ ಪ್ಲೇಗ್ ಪೀಡಿತ ಮಗುವನ್ನು ಆಸ್ಪತ್ರೆಗೆ ಎತ್ತಿಕೊಂಡು ಹೋಗುವಾಗ ತಾನೂ ಸೋಂಕಿಗೆ ಒಳಗಾದರು. ಪರಿಣಾಮವಾಗಿ, ಅದೇ ವರ್ಷ ಮಾರ್ಚ್ ೧೦ರಂದು ಸಾವಿತ್ರಿಬಾಯಿ ನಿಧನರಾದರು.

೨೦೧೫ರಲ್ಲಿ ಸಾವಿತ್ರಿಬಾಯಿ ಫುಲೆ ಸ್ಮರಣಾರ್ಥ ಪುಣೆ ವಿಶ್ವವಿದ್ಯಾಲಯವನ್ನು ‘ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯ’ವೆಂದು ಮರುನಾಮಕರಣ ಮಾಡಲಾಯಿತು. ಮಹಾರಾಷ್ಟ್ರದಲ್ಲಿ, ಪ್ರತಿವರ್ಷ ಜನವರಿ ೩ನ್ನು ‘ಬಾಲಿಕಾ ದಿನ್’ ಎಂದು ಆಚರಿಸುತ್ತಾರೆ. ಕೊನೆಯದಾಗಿ, ಮಹಿಳಾ ಸಬಲೀಕರಣವೆನ್ನುವುದು ಇಂದಿಗೂ ಪರಿಪೂರ್ಣತೆ ಸಾಧಿಸದ ಕನಸಾಗಿಯೇ ಉಳಿದಿದೆ.

ಆದರೆ, ದೇಶದ ಮಹಿಳೆಯರು ಈ ಹಂತ ತಲುಪುವಲ್ಲಿ ಸಾವಿತ್ರಿಬಾಯಿ ಫುಲೆ ಕೊಡುಗೆ ಸ್ಮರಣೀಯ. ಈ ನಿಟ್ಟಿನಲ್ಲಿ, ಮಹಿಳೆಯರ ಅಕ್ಷರ ಕ್ರಾಂತಿಗೆ ಮುನ್ನುಡಿ ಬರೆದ ಸಾವಿತ್ರಿಬಾಯಿ ಫುಲೆ ಮತ್ತು ಅವರ ಬೆಂಬಲಕ್ಕೆ ನಿಂತ ಪತಿ ಜ್ಯೋತಿಬಾ, ಫಾತಿಮಾ ಬೇಗಂ ಶೇಕ್ ಮತ್ತು ಸಗುಣಾಬಾಯಿಯನ್ನು ನಾವಿಂದು ಸ್ಮರಿಸಬೇಕಿದೆ.

‍ಲೇಖಕರು Avadhi

January 6, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಕಥೆಗಳನ್ನು ಹುಡುಕಿಕೊಂಡು ಹೀಗೆ ಸಾಗುವುದು ಇತ್ತೀಚಿಗೆ ನನ್ನ ರೂಢಿಯೇ ಆಗಿ ಹೋಗಿದೆ. ಕಥೆಯ ಹುಡುಕಾಟವೆಂದರೆ ಅದು ಬದುಕಿನ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This