ಡಿಯರ್ ರೂಹಿ..

ದಾದಾಪೀರ್ ಜೈಮನ್

ಡಿಯರ್ ರೂಹಿ,
ನೀನೇನೆಂದು ನನಗೆ ಗೊತ್ತು
ಬೆಳಗು ಜಾವಕ್ಕೆ ನಿನಗೆ ಬಿಸಿಬಿಸಿ
ಹಬೆಯಾಡುವ ಚಹಾ ಬೇಕು
ಸ್ನಾನಕ್ಕೆ ಹಬೆಯಾಡುವ ನೀರು
ಉಗುರುಬೆಚ್ಚಗಿನದು ನಿನಗೆ ರುಚಿಸುವುದಿಲ್ಲ
ಚರ್ಮ ಸುಟ್ಟುಹೋದೀತೆಂದರೆ
ನೀನು ಕಿವಿಗೆ ಹಾಕಿಕೊಳ್ಳುವುದಿಲ್ಲ
ಪರವಾಗಿಲ್ಲ ಎನ್ನುತ್ತಿ;
ಉತ್ಕಟತೆ ಮತ್ತು ಉನ್ಮಾದ ನಿನ್ನ ಮೂಲಧಾತು
ಎದುರಾಗುವ ಇತರರಲ್ಲಿ ಪ್ರತಿಬಾರಿ
ಚೂರೇ ಚೂರು ಪ್ರೀತಿಗಾಗಿ ಹಂಬಲಿಸುತ್ತಿ
ಅದಕ್ಕೆ ಇರಬೇಕು
ಆತ್ಮೀಯರು ಸಿಕ್ಕಾಗ ನೀನಾಡುವ ಮಾತುಗಳಲ್ಲಿ
ನೀನು ಕೊಡುವ ಹಸ್ತಲಾಘವಗಳಲ್ಲಿ
ಅಪ್ಪುಗೆಗಳಲ್ಲಿನ ಬಿಸುಪನ್ನು ಎಲ್ಲರೂ ಹಾಡಿಹೊಗಳುತ್ತಾರೆ

ಸುಖದಲ್ಲಿ ಸುಖದ ದುಃಖದಲ್ಲಿ ದುಃಖದ
ಹಾಡುಗಳನ್ನೇ ಮತ್ತೆ ಮತ್ತೆ ಕೇಳುತ್ತಿ
ಮನೆಗೆಲಸ ಮುಗಿಸಿ ರಾತ್ರಿ ತಾರಸಿಯ
ಮೇಲೆ ಕುಳಿತು ಎಷ್ಟೋ ಹೊತ್ತು
ಮುಗಿಲನ್ನೇ ದಿಟ್ಟಿಸುತ್ತಾ ಕೂತುಬಿಡುತ್ತಿ
ಚುಕ್ಕಿ ಚಂದ್ರಮರ ಹೊಳಪನ್ನು ಕಣ್ಣಿಗಿಳಿಸಿಕೊಳ್ಳುತ್ತಿ
ಮರುದಿನ ಶಾಲೆಯಲ್ಲಿ ‘ನಕ್ಷತ್ರಗಳು ಹೊಳೆಯುವುದಿಲ್ಲ;
ಹೊಳೆದಂತೆ ಭಾಸವಾಗುತ್ತದಷ್ಟೆ’ ಎಂದು
ವಿಜ್ಞಾನೋಪದೇಶ ಮಾಡಿಬರುತ್ತಿ
ಗ್ರಂಥಾಲಯದೊಳಗಿನ ಕಪಾಟಿನಲ್ಲಿ ಹೆಕ್ಕಿತೆಗೆವ ಪುಸ್ತಕಗಳ
ಓದುವ ಮುಂಚೆ ಹಾಳೆಯ ಮೈಮೂಸುವುದನ್ನು ಮರೆಯುವುದಿಲ್ಲ
ದೇವರನ್ನು ನಂಬದಿದ್ದರೂ ಹೊರಗೆ ಕುಳಿತು
ಬೇಡುವವರಿಗೆ ಒಂದಾಣೆಯನ್ನು ಹೆಚ್ಚೇ ಒಯ್ದುಬಿಡುತ್ತಿ
ಈಗಲೂ ನಿನ್ನ ಹಳೆಯ ಸಂಗಾತಿಗಳೆಲ್ಲ
ಆಗಾಗ ನೆನೆಸಿಕೊಂಡು ಫೋನಾಯಿಸುತ್ತಿರುತ್ತಾರಂತೆ?
ಈಗಲೂ ಮಳೆಯಲ್ಲಿ ನೆನೆಯುವುದು ಚಳಿಗೆ ನಡುಗುವುದು
ನಿನಗಿಷ್ಟವಾ ಎಂದು ಕೇಳುತ್ತಿರುತ್ತಾರಂತೆ?
ಆಗ ನೀನು ಮೊದಲು ಮಳೆ ಸುರಿಸಿರಿ ಎಂದು ನಗಾಡಿಬಿಡುತ್ತಿಯಂತೆ?!
ಹೀಗಿರುತ್ತಿದ್ದ ಡಿಯರ್ ರೂಹಿ; ನಿನ್ನ ಇನ್ನೊಂದು ಮುಖವೂ ನನಗೆ ಗೊತ್ತು

ಚಿಕ್ಕಂದರಲ್ಲಿ ನಿನಗೆ
ಉದುರು ಉಪ್ಪಿಟ್ಟು ಅಳುಕು ಉಪ್ಪಿಟ್ಟು
ರಕ್ತವರ್ಣದ ಬೀಟ್ರೂಟ್ ಪಲ್ಯ
ಕೋಳಿಮಾಂಸದ ತುಂಡುಗಳಲ್ಲಿನ ಖಲೀಜಾ
ಯಾವುದೂ ಇಷ್ಟವಾಗುತ್ತಿರಲಿಲ್ಲ
ದೇವರಿಗೆ ಹರಕೆ ಕಟ್ಟುತ್ತಿದ್ದ ಅಮ್ಮನನ್ನು
ನೋಡಿ ನಗುತ್ತಿದ್ದೆ
ಈಗ ಅವೆಲ್ಲವೂ ಅಭ್ಯಾಸವಾದವರಂತೆ ಆಡುತ್ತಿ
ಸಂಜೆ ಪಾರ್ಕಿನಲ್ಲಿ ಒಂದೆರಡು ರೌಂಡು ಜಾಸ್ತಿಯಾಗಿದೆಯಂತೆ
ಆಗಾಗ ವೈನ್ ಮತ್ತು ಕವಿತೆಗಳನ್ನು ಗುಟ್ಟಾಗಿ ಇಷ್ಟಪಡುತ್ತಿಯಂತೆ!
ಆಫೀಸಿಗೆ ಈಗೀಗ ಕಾಯಿಸಿ ಆರಿಸಿದ ನೀರನ್ನೇ ಒಯ್ಯುತ್ತಿಯಂತೆ
ಆಗಾಗ ಕವಿತೆ ಬರೆಯುವುದ ಪ್ರಯತ್ನಿಸಿ ಸೋಲುವಾಗ
ಕಣ್ಣಲ್ಲಿ ನೀರು ತುಂಬಿಕೊಂಡಿರುತ್ತದಂತೆ?

ಆಗಾಗ ಅಂದುಕೊಳ್ಳುತ್ತಿಯಂತೆ;
‘ಸಾಕಾಗಿ ಹೋಗಿದೆ ಎಲ್ಲಾದರೂ ಸುಮ್ಮನೆ ನಡೆದುಹೋಗಿಬಿಡಬೇಕು’
ಕನ್ನಡಿಯ ಮುಂದೆ ಕುಳಿತು ಏನನ್ನೋ
ಹುಡುಕುತ್ತಿರುತ್ತಿಯಂತೆ?
ಚಿಂತೆ ಬೇಡ ರೂಹಿ
ಈ ಬದುಕಿನ ಸುಸ್ತೇ ಅಂತಹುದು
ಬೇಯುವುದು ಅಂದರೆ ಬೇರೇನಲ್ಲ
ಹೀಗೆಯೇ!
ಕುದಿವ ನೀರು ತಳದಲ್ಲಿ ಕೂರಲಾರದೆ
ಸಿಡಿದು ಬೀಳುವ ಜಾಗ ಮಾತ್ರ ನಿನ್ನದು
ಹಾಯಾಗಿ ಮಲಗು
ನಿನ್ನ ನಡುರಾತ್ರಿ ನಿದ್ದೆಯ ಕನಸುಗಳಲ್ಲಿ
ನೀನು ಬರೆಯಬೇಕಾದ ಕವಿತೆ ಬೆಳೆಯುತ್ತಿರುತ್ತದೆ

ನಿನಗೇ ಗೊತ್ತಿರುವಂತೆ
ಕಾಯುವುದು, ಬೇಯುವುದು ಮಾತ್ರ ನಿಜದ ಹಿತ
ಮುಂದೊಮ್ಮೆ ಇದೆ ತರಹದ ಕವಿತೆ ಸಿಕ್ಕಿಬಿಟ್ಟರೆ
ಬೇಸರಿಸಿಕೊಳ್ಳಬೇಡ
ಎಲ್ಲರ ಪ್ರಯಾಣಗಳೂ ಹೆಚ್ಚುಕಡಿಮೆ ಇಷ್ಟೇ ಆಗಿರುತ್ತವೆ
ನಡೆಯುವುದನ್ನು ಮಾತ್ರ ಬಿಡಬೇಡ
ನಮ್ಮ ದಾರಿಗಳನ್ನು ನಾವೇ ಸವೆಸಬೇಕು
ಇಲ್ಲವೆಂದರೆ ದಾರಿಗಳೇ ನಮ್ಮನ್ನು ಸವೆಸಿಬಿಡುತ್ತವೆ

‍ಲೇಖಕರು Avadhi

February 6, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನೆನಪೇ ನೀನದೆಷ್ಟು ಸುಂದರ

ನೆನಪೇ ನೀನದೆಷ್ಟು ಸುಂದರ

ಸರೋಜಿನಿ ಪಡಸಲಗಿ ತಲೆ ತುಂಬ ಗೋಜಲು ಗೊಂದಲಎದೆ ತುಂಬ ನೆನಪುಗಳ ನೆರವಿ||ಕಣ್ಣಂಚಲಿ ಕಂಡೂ ಕಾಣದ ತೇವುತುಟಿಯಂಚಲೊಂದು ಹೂ ನಗು||ಮನದಿ ಮೌನ ರಾಗದ...

ನಾಗರಾಜ್ ಹರಪನಹಳ್ಳಿ ಹೊಸ ಕವಿತೆಗಳು- ಧ್ಯಾನ ಮತ್ತು ಪ್ರೀತಿ

ನಾಗರಾಜ್ ಹರಪನಹಳ್ಳಿ ಹೊಸ ಕವಿತೆಗಳು- ಧ್ಯಾನ ಮತ್ತು ಪ್ರೀತಿ

ನಾಗರಾಜ್ ಹರಪನಹಳ್ಳಿ ೧ ಧ್ಯಾನ ಧ್ಯಾನಿಸುವುದು ಎಂದರೆಅದು ನಿನ್ನೆದುರು ಕುಳಿತಂತೆ ಮುಗಿಲ ಕಡೆ ದಿಟ್ಟಿ ನೆಡುವುದೆಂದರೆಅದು ನಿನ್ನೆದೆಯ...

ಹಳೆಯ ಮೌನ…

ಹಳೆಯ ಮೌನ…

ಸೌಜನ್ಯ ನಾಯಕ ಅಮ್ಮ, ಉಪ್ಪಿಟ್ಟು ಬೇಕುಎಂದು ಆಕೆ ಕೇಳಿದಾಗಲೆಲ್ಲನಿನ್ನದೆ ನೆನಪಾದರೂಉಣ ಬಡಿಸುತ್ತೇನೆ ಖುಷಿಯಿಂದಲೇಅವಳು ಇಷ್ಟಪಟ್ಟಿದೆಲ್ಲವನ್ನು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This