ಡೀಗೋ ಮರಾಡೋನಾ… ಹೀಗೂ ದೇವರಾಗಬಹುದು!

ರಮಾಕಾಂತ್ ಆರ್ಯನ್

ಅವನು ಕಾಲ ಹೆಬ್ಬರಳ ತುದಿಯಲ್ಲಿ ವಿಶ್ವವನ್ನೇ ಪುಟಿಪುಟಿದು ಕುಣಿಸಿದವನು. ಫುಟ್ಬಾಲ್ ಅಂಗಳದಲ್ಲಿ ಅವನು ಓಡಿದ, ಓಡಾಡಿದ ನೆಲವೆಲ್ಲಾ ಇತಿಹಾಸದ ಭವ್ಯ ಚಿತ್ತಾರ. ಫುಟ್ಬಾಲ್ ಎನ್ನುವ ಅಭಿಮಾನದ ಜಗತ್ತಿಗೆ ಅವನು‌ ಒಲವಿನ‌ ಅರಸ. ಅಂಗಳದಲ್ಲಿ ಶಿಖರ. ಅದರಾಚೆಗೆ ಕೊಕೇನ್, ಕಾಮ, ಕತ್ತಲು, ಬಂದೂಕು ಮತ್ತು ಬದುಕನ್ನೆ ಬೆತ್ತಲು ಮಾಡಿಕೊಂಡ ಪ್ರಪಾತ. ಅವನು ಎಲ್ಲವುಗಳ ವಿಕಾರ ಸಂಗಮ.

ಅರವತ್ತಕ್ಕೇ ಬದುಕಿನ ಎಲ್ಲ ಗೋಲ್ ಗಳನ್ನ ಮುಗಿಸಿ. ಅರ್ಥವೇ ಆಗದ ದೇವರಾಗಿ ಎದ್ದು ಹೋದವನು. ಡಿಯಾಗೋ ಮರಾಡೋನಾ. ಕಾಲ್ಚಳಕ ಜಗತ್ತಿನ ರೋಮಾಂಚನ. ಇಂಗ್ಲೆಂಡ್ ಬಹುಶಃ ಅವನನ್ನ ಯಾವತ್ತಿಗೂ ಕ್ಷಮಿಸಲ್ಲ. 1986 ರ ವಿಶ್ವಕಪ್ ಫುಟ್ಬಾಲ್ ನಲ್ಲಿ ಕೈಯಿಂದ ಗೋಲ್ ಹೊಡೆದ ಮಹಾ ವಂಚಕ. ಆ ಮರಾಮೋಸದ ಗೋಲಿಗೆ ಬಂದ ಹೆಸರು. Hand of God!!!

ನೀವು ಅವನನ್ನ ಒಪ್ಪಿ, ಬಿಡಿ. ಆದರೆ ಫುಟ್ ಬಾಲ್ ಜಗತ್ತಿನಲ್ಲಿ ಅವನನ್ನ ದಾಟಿಕೊಂಡು ಹೋಗಲು ಸಾಧ್ಯವೇ ಇಲ್ಲ. ಹೌದು ಅವನು ವಿವಾದಾತ್ಮಕವಾಗಿ ನಿಮ್ಮವನು. ಕಾಲ್ಚಳಕದ ಪುಳಕದ ಜಗತ್ತಿಗೆ ಕೈಚಳಕ ತೋರಿಸಿ ಗೋಲ್ ಹೊಡೆದವನು. ಇಂಗ್ಲೆಂಡ್ ಯಾವತ್ತೂ ಕ್ಷಮಿಸದವನು. Undoubtedly, magically, controversially…ಅವನು ನಿಮ್ಮವನು. ಅರ್ಜೆಂಟೀನಾದ ಮದಗಜ ಡೀಗೋ ಅರ್ಮಾಂಡೋ ಮರಾಡೋನಾ.

ಕೆಲವರಿಗೆ ಅವನು ಅತೀತನಂತೆ ಆವರಿಸಿಕೊಂಡವನು, ಇನ್ನೂ ಕೆಲವರಿಗೆ ಮೋಸಕ್ಕೆ ಅವನೇ ಅಪರಂಜಿ, ಮತ್ತೆ ಕೆಲವರಿಗೆ ಭೂಗತ ಜಗತ್ತಿನ ವಿಕಾರ ಪಾತಕಿಗಳೊಂದಿಗೆ ಅಪಾರ ನಂಟು ಹೊಂದಿದ್ದ ಒಬ್ಬ ತಿಳಿಗೇಡಿ. ಹಲವರಿಗೆ ಅವನು ಫುಟ್ ಬಾಲ್ ಜಗತ್ತಿಗೆ ಅರ್ಜೆಂಟೀನಾ ಪರಿಚಯಿಸಿದ ರೊಮ್ಯಾಂಟಿಕ್ ಹೀರೋ.

ಕಾರಣಗಳಿಗೂ , ಕಾರಣಗಳಾಚೆಗೂ ಕೆಲವರು ಹೀರೋ ಆಗಿಬಿಡುತ್ತಾರೆ. ಅವರು ಮಾಡಿದ್ದೆಲ್ಲಾ ಸರಿ ಎಂದು ಒಪ್ಪಿಕೊಂಡು ಬಿಡುವ ನಿರ್ವಿಕಾರ ಪ್ರೀತಿ ಮತ್ತು ನಶೆ ಹಾಗೆ ಆವರಿಸಿಕೊಂಡಿರುತ್ತೆ. ಮರಾಡೋನಾ ಅಂತಹ ಮತ್ತು! 1986ರ ಫುಟ್ ಬಾಲ್ ವಿಶ್ವಕಪ್ ನಲ್ಲಿ ಅವನು ಹೊಡೆದ ಗೋಲ್ ಇತ್ತಲ್ಲಾ. ಬೇಕೋ ಬೇಡವೋ ಅದು ಇತಿಹಾಸದ ರೊಮ್ಯಾಂಟಿಕ್ ಪೇಜ್.

England ವಿರುದ್ಧದ ಆ ಕ್ವಾರ್ಟರ್ ಫೈನಲ್ ಮ್ಯಾಚ್ ನಲ್ಲಿ ಮರಾಡೋನಾ ಹಾಗೆ ನುಗ್ಗಿದ್ದ. ಇಂಗ್ಲಂಡ್ ನ ಅಷ್ಟೂ ಆಟಗಾರರು ಅಭೇಧ್ಯ ಕೋಟೆಯಂತೆ ಗೋಲ್ ಪೋಸ್ಟ್ ಎದುರು ನಿಂತಿದ್ದರು. ಎಲ್ಲರನ್ನ ಹಾಗೆ ಯಾಮಾರಿಸಿದ್ದ. ಗೋಲ್ ಕೀಪರ್ ಮತ್ತು ಅಂಪೈರ್ ನಡುವೆ ಆಟಗಾರರ ಸಂತೆಯೇ ನೆರೆಯುವಂತೆ ಮಾಡಿದ್ದ.

ಗೋಲಿಯ ಮೇಲೆ ಜಿಗಿದು ಎಡಗೈ ಬೆರಳ ತುದಿ ಮತ್ತು ಎಡ ಹಣೆಯಿಂದ‌ ಚಿಮ್ಮುವಂತೆ ಕಂಡ ಒಂದು ಗೋಲ್ ಹೊಡೆದು ಕುಪ್ಪಳಿಸಿದ್ದ. ಏನಾಯಿತು ಎಂದು ಅರ್ಥವೇ ಆಗದಿದ್ದರೂ ಅಂಪೈರ್ ಗೋಲ್ ಎಂದು ತೀರ್ಪಿತ್ತಿದ್ದ. ಒಬ್ಬ ಕಮೆಂಟೇಟರ್ ಮಾತ್ರ definitely, looks like Hand ಎಂದಿದ್ದ. ಗೊತ್ತಿರಲಿ ಆ ಗೋಲ್ ಗೆ ಕಟ್ಟಕಡೆಯ ಪಾಸ್ ಕೊಟ್ಟವನು ಇಂಗ್ಲೆಂಡ್ ಆಟಗಾರನೇ. ಅದು ಮರಾಡೋನಾನ ಮರಾಮೋಸದ‌ ಗೋಲ್. ಇಂಗ್ಲೆಂಡ್ physically, mentally ಎಂದೂ ಮರೆಯದ ಗೋಲ್. ಚರಿತ್ರೆಗೆ Hand of God.

ಇದು ಮಾತ್ರ ಡೀಗೋನನ್ನ ದೇವಮಾನವ ಮಾಡಲಿಲ್ಲ. ಈ ಗೋಲ್ ನಂತರದ ಇನ್ನೊಂದು ಗೋಲ್ ಇತ್ತಲ್ಲ. ಅದು ಗೋಲ್ ಎಂದರೆ! ಇಂಗ್ಲೆಂಡ್ ಆಟಗಾರರು ಹ್ಯಾಂಡ್ ಆಫ್ ಗಾಡ್ ಗೋಲ್‌ ಆಘಾತದಿಂದ ಇನ್ನೂ ನಿಟ್ಟುಸಿರು ಬಿಡುತ್ತಿದ್ದರು. ಎಂಥಾ ಮೋಸ ಮಾಡಿಬಿಟ್ಟೆಯೋ ಮರಾಡೋನಾ ಅಂತ ಬೈದುಕೊಂಡೇ ಓಡುತ್ತಿದ್ದರು ಅಥವಾ ಓಡಾಡುತ್ತಿದ್ದರು. ಯಾಮಾರಿ ಮರಾಡೋನಾ ಕೈಗೆ, ಸಾರಿ ಕಾಲ್ ಗೆ ಬಾಲ್ ಕೊಟ್ಟುಬಿಟ್ಟಿದ್ದರು.

60 ಮೀಟರ್ ದೂರದಲ್ಲಿ, ಪುಟ್ ಬಾಲ್ ಮೈದಾನದ ಮಧ್ಯದ ಗೆರೆಗಿಂತ ಸ್ವಲ್ಪ ಹಿಂದೆ ಅವನ Magnetic ಕಾಲಿಗೆ ಕಬ್ಬಿಣದಂತ ಚೆಂಡು ಅಂಟಿಕೊಂಡುಬಿಟ್ಟಿತ್ತು. ನುಗ್ಗಿದ್ದ ನೋಡಿ, ಸಿಡಿಲ ತೊಡೆಗಳ, ಚಿರತೆ ಕಾಲ್ಗಳ, ಹದ್ದಿನ ಕಣ್ಣಿನ ಮದಗಜ ಮರಾಡೋನಾ. ಭರ್ತಿ ಐದು ದೇಹ, ಹತ್ತು ಕಾಲು ಅಡ್ಡಡ್ಡ ಬಂದರೂ, ಎಡಬಲ ನುಗ್ಗುತ್ತಾ ಚೆಂಡನ್ನ ಗೋಲ್ ಪೋಸ್ಟ್ ಗೆ ನುಗ್ಗಿಸಿದ್ದ.

ಸ್ಪೇನ್ ನ ಕಮೆಂಟೇಟರ್ ಗೊಲಾಝೋ ಎಂದು ಎಷ್ಟು ಕಿರುಚಿದ್ದ ಎಂದರೆ ಕನಿಷ್ಠ ಎರಡು ಲೀಟರ್ ನೀರು ಕುಡಿದಿರಬೇಕು. ಹಾಗೆ. ಇಂಗ್ಲೆಂಡ್ ಅಭಿಮಾನಿಗಳಿಗೆ ಹೃದಯಸ್ತಂಭನ. ಅರ್ಜೆಂಟೀನಾದ ಹಸಿ ಹೃದಯಗಳ ಮೇಲೆ ಮರಾಡೋನಾ ಆ ಕ್ಷಣಕ್ಕೆ ಮೆಲ್ಲನೆ ಬರೆದಿದ್ದ. love you All ಅಂತ. ಅದು ಮರಾಡೋನಾ. ಅವನಿಗೇ ಗೊತ್ತಿಲ್ಲದಂತೆ ಆ ಗೋಲಿನಿಂದ ದೇವರಾಗಿದ್ದ. ಮತ್ತು ಆ ಗೋಲ್ ಶತಮಾನದ ಗೋಲ್ ಎಂದು ಚಿರಪರಿಚಿತ.

ಡೀಗೋ ಅರ್ಮಾಂಡೋ ಮರಾಡೋನಾ ಅಂದರೆ ಅಷ್ಟೇನಾ. ಅರ್ಜೆಂಟೀನಾದ ಬ್ಯೂನಸ್ ಐರಿಸ್ ನ ಬಡನಗರದಲ್ಲಿ ಬೆಳೆದ ಅವನು ತಪ್ಪುಗಳ ಜಾತ್ರೆಯ ಒಬ್ಬೊಂಟಿ ತೇರು. ಮಾಡಬಾರದ್ದನ್ನೆಲ್ಲಾ ಮಾಡಿದ. ಜೀವನದ ಕಪ್ಪು ಭಾಗವನ್ನ ಅವನು ಮುಚ್ಚಿಡಲಿಲ್ಲ ಅಥವಾ ಬಟಾಬಯಲಾಗಿತ್ತು. ಸಡನ್ ಆಗಿ ಯಶಸ್ಸು ಕಾಲ ಬುಡಕ್ಕೆ ಬಂದು ಬಿದ್ದರೆ ಏನೇನಾಗಬಹುದೋ ಎಲ್ಲವೂ ಆಗಿದ್ದ. ಅಧ್ವಾನಗಳಿಗೆ ಅನ್ವರ್ಥವಾಗುವಂತೆ ಬದುಕನ್ನ ಬದುಕಿಬಿಟ್ಟ.

ಕೊಕೇನ್ ಸೇವಿಸುತ್ತಿದ್ದ, ವರದಿಗಾರರತ್ತ ಗನ್ ಝಳಪಿಸಿದ್ದ. ನಿಷೇಧಕ್ಕೆ ಒಳಗಾಗಿದ್ದ, ಮೂರು ದೇಶಗಳು ಫುಟ್ ಬಾಲ್ ನಂತೆ ಒದ್ದು ಓಡಿಸಿದ್ದವು. ಕ್ಲಬ್ ಗಳಿಗೆ ಅಡ್ಡಡ್ಡ ಬಿದ್ದರೂ ಬೇಡವಾಗಿದ್ದ. ಎಣಿಸಿಕೊಂಡು ಮದುವೆಯಾಗುತ್ತಿದ್ದ, ಅದರಾಚೆಗಿನ ಅವನ ಕಾಮ ಲೆಕ್ಕಕ್ಕೆ ಸಿಗಲಿಲ್ಲ, ಬಿಡಿ.

ಈ Success ಹಾಗೇನೇ ಒಂದು ಅಲೌಕಿಕ ಜಗತ್ತಿನಲ್ಲಿ ತೇಲಿಸುತ್ತದೆ, ತೋಯಿಸುತ್ತದೆ, ಯಾಮಾರಿದರೆ ಶುದ್ಧ ಬಿಳಿ ಬಟ್ಟೆಯಲ್ಲಿ ತೊಪ್ಪೆ ಮಾಡಿ ನಿಲ್ಲಿಸಿ ಬಿಡುತ್ತದೆ. ಬೇಕಾದವರು ಬೇಕಾದ್ದನ್ನ ನೋಡಿಕೊಳ್ಳಬಹುದು. ಮರಾಡೋನ ತನ್ನ ವಿಶಿಷ್ಟ ಆಟ ಮತ್ತು ವಿಚಿತ್ರ ನಡವಳಿಕೆಗಳಿಂದ ತೆರೆದ ಪುಸ್ತಕವಾದವನು. ಇದ್ದಕ್ಕಿದ್ದಂತೆ 130 ಕೆಜಿ ಮಾಂಸದ ಮುದ್ದೆಯಾದವನು. ಅನಾಮತ್ತು 40 ಕೆಜಿ ತೂಕ ಇಳಿಸಿಕೊಂಡವನು.

ದಾದಾ ಸೌರವ್ ಗಂಗೂಲಿ ಕರೆಗೆ ಭಾರತಕ್ಕೆ ಓಡಿ ಬಂದವನು. ಆಟಕ್ಕೆ ಮುಂಚೆಯೇ ಸುಸ್ತಾಗಿ ಏದುಸಿರು ಬಿಡುತ್ತಾ ಮ್ಯಾಚ್ ನೋಡುತ್ತಾ ಕುಳಿತು ಬಿಟ್ಟವನು. ಅವನು ಎಲ್ಲವೆಂದರೆ ಎಲ್ಲವೂ. ಅರವತ್ತಕ್ಕೆ ಎದ್ದು ನಡೆದಿದ್ದಾನೆ. ಗೊತ್ತಿದ್ದವರೂ, ಈಗಷ್ಟೇ ಗೊತ್ತಾದವರೂ ಒಂದು ವಿನಾಕಾರಣದ ಕಣ್ಣೀರು ಸುರಿಸುವಂತೆ. ಪ್ರಿಯತಮನ ಅಷ್ಟೂ ಆಟಗಳು ಗೊತ್ತಿದ್ದೂ ಆ ಕ್ಷಣಕ್ಕೆ ಕ್ಷಮಿಸಿಬಿಡುವ ನಲ್ಲೆಯಂತೆ, ಅವನ ಅಷ್ಟೂ ಅಭಿಮಾನಿಗಳು. ಮರಾಡೋನಾ. ಅವನು ವಿವಾದಾತ್ಮಕವಾಗಿ ನಿಮ್ಮವನು. ಅಷ್ಟೇ.

ಮಾಹಿತಿಗೆ, ಅವನು ಅರ್ಜೆಂಟಿನಾ ಪರವಾಗಿ 91 ಬಾರಿ ಟೀ ಶರ್ಟ್ ಹಾಕಿದ್ದ Midfielder, Second striker. ಪ್ರೀತಿಯಿಂದ ಪ್ರಾಪ್ತವಾಗಿದ್ದ ಜೆರ್ಸಿ ನಂಬರ್ 10. ಹೆಸರಿನ ಮುಂದೆ 34 ಗೋಲ್ ಬರೆಸಿದ್ದ. ಅವನೆಂದರೆ ಬರಿಯ ಗೋಲ್ ಅಲ್ಲ, ಅದರಾಚೆಗಿನ ಗೋಲ್ಡನ್ ಬಾಯ್. ಇಟಲಿಯ ನೇಪಲ್ಸ್ ನಗರದಲ್ಲಿ ನೆಪೋಲಿ ತಂಡಕ್ಕೆ ಆಡಿ ಗೆದ್ದು ಕುಡಿದು ಕುಣಿದು ಕುಪ್ಪಳಿಸಿ ನಶೆಯಲ್ಲಿ ತೇಲಿದವನು.

ಐದು ಅಡಿ ಐದೇ ಇಂಚು ಉದ್ದದ ವಾಮನ. 20ನೇ ಶತಮಾನ ಕಂಡ ಶ್ರೇಷ್ಠ ಆಟಗಾರನಾಗಿ ಸಾವಿರ ಗೋಲುಗಳ ಸರದಾರ, ‘ಕರಿಮುತ್ತು’ ಪೀಲೆಯೊಂದಿಗೆ ಪ್ರಶಸ್ತಿ ಹಂಚಿಕೊಂಡ ತ್ರಿವಿಕ್ರಮ. ಈಗ ಬದುಕು ಸಾಕೆಂದು ಎದ್ದು ನಡೆದಿದ್ದಾನೆ. ಸಕಲ ಅಭಿಮಾನಿ ಗೌರವದೊಂದಿಗೆ. ನಿನ್ನಾತ್ಮ ವಿರಮಿಸಲಿ ಡೀಗೋ.

‍ಲೇಖಕರು Avadhi

November 29, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹುಲಿಹೊಂಡದ ಹುಲಿಯಪ್ಪ ನೆನಪು

ಹುಲಿಹೊಂಡದ ಹುಲಿಯಪ್ಪ ನೆನಪು

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ...

‘ತ್ರಯಸ್ಥ’ ಎಂಬ ನೆನಪಿನ ಓಣಿ

‘ತ್ರಯಸ್ಥ’ ಎಂಬ ನೆನಪಿನ ಓಣಿ

ವಿಜಯಭಾಸ್ಕರರೆಡ್ಡಿ / ಕಲಬುರಗಿ ಕಮಲಿಯ ನೀಳ ನೋಟ, ಅವಳ ಸನ್ನೆಯ ಪಿಸುಮಾತು, ಒಲವಿನ ಉಸಿರು ಹೀಗೆ ಅವಳ ನಾನಾ ಬಗೆಯ ಮಗ್ಗಲುಗಳನ್ನ ಹೇಳತ್ತಾ ರಂಗದ...

೧ ಪ್ರತಿಕ್ರಿಯೆ

  1. ಗೀತಾ ಎನ್ ಸ್ವಾಮಿ

    ಎದುರಾ ಎದುರೇ ಎಲ್ಲವನ್ನೂ ಕಂಡಂತಹ ಅನುಭವವಾಯಿತು. ಚೆಂದ ಬರ್ದಿದೀರಿ ಸರ್.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: