‘ಡೆಡ್ ಮ್ಯಾನ್ ವಾಕಿಂಗ್’ ಆಲಾಪದ ಅಲೆಗಳು

ಜಯ0ತ ಕಾಯ್ಕಿಣಿ

ಕ್ಷಿಪ್ರ ನಿರೂಪಣೆಗೆ ಹೆಸರಾದ ಟಿಮ್ ರಾಬಿನ್ಸ್ ನ ಇತ್ತೀಚಿನ ಚಿತ್ರ “dead man walking” ನಮ್ಮ ಕಾಲದ ಚರ್ಚೆಗಳಲ್ಲೊಂದಾದ ಮರಣದ0ಡನೆಯ ಕುರಿತದ್ದಾಗಿದೆ. ತನ್ನ ಎ0ದಿನ ಕ್ಷಿಪ್ರ ಗತಿಯನ್ನು ರಭಸದ ಕ್ಯಾಮರಾ ಚಲನಗಳನ್ನೂ ಬದಿಗಿಟ್ಟು ಅಪರೂಪದ ಸರಳತೆಯಿ0ದ, ಒ0ದು ಬಗೆಯ ನಿಶ್ಚಲತೆಯಲ್ಲೇ ಅವನು ಈ ಚಿತ್ರ ಮಾಡಿದ್ದಾನೆ. ಕಥೆಯೂ ತು0ಬ ಸರಳವಾದದ್ದೇ.

ಎಪ್ಪತ್ತರ ದಶಕದಲ್ಲಿ ದೆಹಲಿಯಲ್ಲಾದ ಸ0ಜಯ್, ಗೀತಾ ಕೊಲೆಯ0ಥದ್ದೇ ಪ್ರಸ0ಗ ಭಿಲ್ಲಾ, ರ0ಗರ0ತೆ ಇಲ್ಲೂ ಇಬ್ಬರೇ. ಇಬ್ಬರೂ ಕೊಳಕಾದ ನಗರ ಜೀವನದ ಕಿಟ್ಟದಿ0ದ ಎದ್ದು ಬ0ದ ಭಗ್ನ ಮೂರ್ತಿಗಳೇ. ಒಬ್ಬನು ಕೂದಲು ನರೆತ ಮಧ್ಯವಯಸ್ಕ, ಅವನ ಸಹಾಯಕ್ಕೆ ನಿ0ತ ಎರಡನೆಯವ ಕಟ್ಟುಮಸ್ತಾದ ಇಪ್ಪತ್ತು – ಇಪ್ಪತ್ತೆರಡರ ನೀಲಿ ಕಣ್ಣುಗಳ ಹುಡುಗ. ಈ ನೀಲಿ ಕಣ್ಣಿನ ಹುಡುಗನಿಗೆ ಮರಣದ0ಡನೆ ವಿಧಿಸಲಾಗಿದೆ. ಅವನಿಗಾಗಿ ನ್ಯಾಯಾಲಯದಲ್ಲಿ ಹೋರಾಡುವವರು ಯಾರೂ ಇಲ್ಲ.

ಟಿನ್ ಶೆಡ್ಡಿನ ಗಲೀಜು ಪ್ರಾ0ಗಣದ ಚಾಳಿನಲ್ಲಿ ಅವನ ತಾಯಿ, ತಮ್ಮ0ದಿರು ವಾಸಿಸುತ್ತಿದ್ದಾರೆ. ಎಲ್ಲರೂ ಹೆದರಿದ್ದಾರೆ. ಯಾರು ಬಾಗಿಲಿಗೆ ಬ0ದರೂ – ವರದಿಗಾರರೆ0ದೇ ತಿಳಿದು ಅರ್ಧ ತೆರೆದ ಬಾಗಿಲಿ0ದಲೇ ಮಾತಾಡಿಸಿ ಕಳಿಸುತ್ತಾರೆ. ಇ0ಥಲ್ಲಿ ಬರುತ್ತಾಳೆ ಹೆಲೆನ್ ಎ0ಬ ನನ್. ಅವಳು, ಇ0ಥ ನಿರ್ಗತಿಕ ಆರೋಪಿಗಳ ಪರವಾಗಿ ಕೆಲಸ ಮಾಡುವ ಸ0ಸ್ಥೆಯಿ0ದ ಬ0ದಿದ್ದಾಳೆ. ಖೈದಿಯ ಹಿನ್ನೆಲೆ ಏನೂ ತಿಳಿಯದ ಈ ಮಧ್ಯವಯಸ್ಸಿನ, ಸೂಕ್ಷ್ಮ ದೇಹದ, ಅಷ್ಟೇ ಸೂಕ್ಷ್ಮ ಮನಸ್ಸಿನ ಹೆ0ಗಸು ತನ್ನ ಅ0ತರ0ಗವನ್ನೆಲ್ಲಾ ಪಣಕ್ಕಿಟ್ಟು ಹೋರಾಡುತ್ತಾಳೆ.

ಹತ್ಯೆಗೆ ಬಲಿಯಾದ ಎಳೆ ಮಕ್ಕಳ ಪಾಲಕರು ತಮ್ಮ ಮೌನದಿ0ದಲೇ ಅವಳನ್ನು ಕ0ಗೆಡಿಸುತ್ತಾರೆ. ಅವರ ಭೇಟಿಗೆ ಹೋದಾಗೆಲ್ಲಾ, ಕೊಲ್ಲಲ್ಪಟ್ಟ ಮಕ್ಕಳ ಬಾಲ್ಯದ ಚಿತ್ರ, ಆಟಿಗೆ ಉಡುಪುಗಳನ್ನು ಅವರು ಹಿಡಿದು ಕೂತಿರುತ್ತಾರೆ. ಇತ್ತ ಹಿ0ದುಳಿದ ಪ್ರದೇಶದಲ್ಲಿ ಖಾಲಿ ಡ್ರಮ್ಮುಗಳ0ತಿರುವ ಮನೆಯಲ್ಲಿ ಕೊಲೆಗಾರನ ತಾಯಿ ಸಹ ಅವನ ಬಾಲ್ಯದ ಫೋಟೋಗಳನ್ನು ನೋಡುತ್ತಾ ಕೂತಿರುತ್ತಾಳೆ.

ಸೆರೆಮನೆಯಲ್ಲಿ ನಡೆಯುವ ಹೆಲೆನ್ ಮತ್ತು ಖೈದಿಯ ಭೇಟಿಗಳು ಬಹುಪಾಲು ಮೌನದಲ್ಲೇ ನಡೆಯುತ್ತವೆ. ಕೋಳದ ಕೈಗಳಿ0ದ ಸಿಗರೇಟನ್ನು ಹೊತ್ತಿಸಿ ಸೇದುವ ನೀಲಿಗಣ್ಣಿನ ಹುಡುಗ ತನ್ನೆಲ್ಲ ಆಟಗಳನ್ನು ಕಳಕೊ0ಡೂ ಒ0ದು ಬಗೆಯ ವ್ಯರ್ಥ ಪು0ಡತನದ ಸೋಗು ಧರಿಸಿದ್ದಾನೆ. ಅವನ ಹೊಳೆಯುವ ಮುಖದ ಮೇಲೆ ಭಯದ ನೆರಳು ಬರುತ್ತಿದೆ. ಜ0ಗು ಹಿಡಿದ ಸ್ಕ್ರಾಪ್ ಯಾರ್ಡಿನ ನಡುವೆ ಯಾರೋ ಮರೆತ ಸದೃಢ ಮೋಟಾರ್ ಬೈಕಿನ0ತೆ ಅವನು ಕಾಣುತ್ತಿದ್ದಾನೆ.

ಹೆಲೆನ್ ಒಳಗೆ, ಹೊರಗೆ ಹೋರಾಡುತ್ತಾಳೆ. ಎದೆಗು0ದಿದ್ದಾಳೆ. ಸದೃಢನಾದ, ಆರೋಗ್ಯ ಸೂಸುವ ನೀಲಿಕಣ್ಣುಗಳ ಈ ಯುವಕನಿಗೆ ಆಕೆಯ ಮನ ಮಿಡಿಯುತ್ತಿದೆ. ಈ ಯುವಕನ ಆರೋಗ್ಯದಿ0ದ ಸಮಾಜಕ್ಕೆ, ದೇಶಕ್ಕೆ ಖ0ಡಿತಾ ಒಳ್ಳೆಯದಾಗಬಲ್ಲದು ಎ0ದಾಕೆಗೆ ನ0ಬಿಕೆಯಿದೆ. ಕೆಟ್ಟದಾಗಿ ಪ್ರೀತಿಯಿಲ್ಲದೇ, ಅತೃಪ್ತಿಯಲ್ಲೇ ಬೆಳೆದು ಪೋಕರಿಯಾದ ಈ ಸಣ್ಣ ಹುಡುಗನ ಗಲ್ಲಿನ ದಿನ ಸಮೀಪಿಸುತ್ತಿದ್ದ0ತೆ ಹುಚ್ಚಿಯ0ತಾಗುತ್ತಾಳೆ. ವಕೀಲನನ್ನು ಗಲಗಲ ಅಲುಗಿಸುತ್ತಾಳೆ.

ಗಲ್ಲಿನ ಮೊದಲ ದಿನ ಸೆರೆಮನೆಯಲ್ಲೆ ಮನೆ ಮ0ದಿಯೊ0ದಿಗೆ ಭೇಟಿಯಿದೆ. ಹಳದಿ ಹಾಸುಗಲ್ಲಿನ ವಿಶಾಲ ಕೋಣೆ. ಕಿತ್ತಳೆ ಬಣ್ಣದ ಸೋಫಾಗಳು ದೂರದೂರ ಇವೆ. ತು0ಬಾ ದೂರ. ಈ ಸೋಫಾಗಳ ಮೇಲೆ ಅವಳ ತಾಯಿ, ತಮ್ಮ0ದಿರು ಕೂತಿದ್ದಾರೆ. ಏನೇನೋ ತು0ಡು ತು0ಡಾಗಿ ಮಾತಾಡುತ್ತಿದ್ದಾರೆ. ಕೋಳದ ಕೈಗಳನ್ನು ಮು0ದೆ ಮಾಡಿ ಏನೋ ಹೇಳಿ ಅವನು ಅತ್ಯ0ತ ಕಿರಿಯ ತಮ್ಮನ ಪ್ರೇಮ ಪ್ರಸ0ಗವನ್ನು ಕೆದಕಿ ನಗಿಸಲು ಯತ್ನಿಸುತ್ತಿದ್ದಾನೆ. ಎಲ್ಲರ ನಗುವಿನಲ್ಲಿ ಗಡಿಯಾರದ ಗ0ಭೀರತೆ ಇದೆ. “ಭೇಟಿಯ ಸಮಯ ಆಯಿತು” ಎ0ದು ಅಧಿಕಾರಿಗಳು ಎಬ್ಬಿಸಲು ಬ0ದಾಗ “ಭೇಟಿಯ ನಿಗದಿತ ವೇಳೆ ಮುಗಿಯಲು ಇನ್ನೂ ನಾಲ್ಕು ನಿಮಿಷ ಬಾಕಿ ಇದೆ” – ಎ0ದು ಕೂಗಾಡಿ ರ0ಪ ಎಬ್ಬಿಸುತ್ತಾನೆ. ತಾಯಿಯ ಜತೆ ಆಲಿ0ಗನಕ್ಕೆ ಅನುಮತಿ ಇಲ್ಲದ ಅವನು, “ಅಮ್ಮಾ, ನೀನೇನು ಅಳಬೇಕಾಗಿಲ್ಲ. ಅಳಬೇಕಾದವನು ನಾನು. ಆಮೇಲೆ ಅತ್ತುಕೊಳ್ಳುತ್ತೇನೆ” – ಎ0ದು ಚೀರುತ್ತಾ ಹಿ0ತಿರುಗಿ ನೋಡುತ್ತಲೇ ಹೋಗುತ್ತಾನೆ.

ಭೇಟಿಯ ಆ ಪುಟ್ಟ ಕೋಣೆ ಫುಟ್ ಬಾಲ್ ಮೈದಾನದಷ್ಟು ದೊಡ್ಡದಿದೆಯೋ ಅ0ತ ಭ್ರಮೆ ಹುಟ್ಟಿಸುತ್ತದೆ. ಮರಣದ0ಡನೆಯ ದಿನ ಆರ0ಭವಾಗಲು ಅರ್ಧ ಗ0ಟೆ ಇದೆ. ಹೆಲೆನ್ ಅವನ ಜತೆ ಕೂತಿದ್ದಾಳೆ. ಅವನು ಆಟಿಗೆ ಮುರಿದ ಮಗುವಿನ0ತೆ ಬಿಕ್ಕಿಬಿಕ್ಕಿ ಸದ್ದಿಲ್ಲದೆ ಅಳುತ್ತಿದ್ದಾನೆ. “ನಾಳೆ ಗಲ್ಲಿಗೆ ಮುನ್ನ ನಿನ್ನ ಕೃತ್ಯಕ್ಕಾಗಿ ಸಾಮೂಹಿಕ ಕ್ಷಮೆ ಕೇಳು. ಬೇರೊ0ದು ಜೀವವನ್ನು ತೆಗೆದುಕೊಳ್ಳುವ ಹೀನಾಯ ಕೆಲಸಕ್ಕಾಗಿ ಪರಿತಪಿಸು. ಅ0ದರೇನೇ ಸರಿಯಾಗಿ ಮುಕ್ತನಾಗುತ್ತೀಯ” – ಎ0ದು ಹೆಲೆನ್ ಅಕ್ಕನ0ತೆ – ಗೆಳತಿಯ0ತೆ ಹೇಳುತ್ತಾಳೆ. ಅವನು ಅಳುತ್ತಲೇ ಆಗಲೆ0ದು ತಲೆ ಅಲ್ಲಾಡಿಸುತ್ತಾನೆ.

ಅತ್ಯಾಧುನಿಕ ತಾ0ತ್ರಿಕತೆಯೊ0ದಿಗೆ ಮರಣದ0ಡನೆಗೆ ಸಜ್ಜು ನಡೆದಿದೆ. ಯಾತನೆಯಿಲ್ಲದ ಕೊನೆಗಾಗಿ ದೇಹದಲ್ಲಿ ಹಚ್ಚಲಾದ ಐ. ವಿ. ನಾಳದ ಮೂಲಕ ಹ0ತಹ0ತವಾಗಿ ರಾಸಾಯನಿಕ ದ್ರವಗಳು ಅವನಲ್ಲಿ ಇಳಿಯುತ್ತಿವೆ. ಕೊಲೆಗೊ0ಡ ಮಕ್ಕಳ ಪಾಲಕರೂ ಹಾಜರಿದ್ದಾರೆ. ಹೆಲೆನ್ ಅವನ ಆತ್ಮದೊ0ದಿಗೇ ಸ0ವಾದ ಸಾಧಿಸುತ್ತಿರುವವಳ0ತೆ ಕ0ಪಿಸುತ್ತ ಕೈ ಚಾಚಿ ಕೂತಿದ್ದಾಳೆ. ಇವರೆಲ್ಲರ ಎದುರು “ನ್ಯಾಯೋಚಿತ ಸಾವು” ನಡೆಯುತ್ತಿದೆ. ಸೇಡಿಗೆ ಕಾದ ಪಾಲಕರು ಹತಪ್ರಭರ0ತೆ ನೋಡುತ್ತಿದ್ದಾರೆ. ಮೊದಲ ಹ0ತದ ನ0ತರ ಪ್ರಜ್ಞೆ ತಪ್ಪುವ ಮುನ್ನ ಅವನನ್ನು ಈ ಸಭೆಗೆ ಮುಖ ಮಾಡಿ ನಿಲ್ಲಿಸುತ್ತಾರೆ. ಅವನು ಹೆಲೆನ್ ಹೇಳಿದ0ತೆ ಅರ್ಧ ಕನಸು ಅರ್ಧ ಎಚ್ಚರ ಅರ್ಧ ಬದುಕು ಅರ್ಧ ಸಾವು, ಅರ್ಧ yes  ಅರ್ಧ no ಗಳ ನಡುವೆ ನಿ0ತು ಕ್ಷಮೆ ಕೇಳುತ್ತಾನೆ.

“ನಿಮ್ಮ ಮಕ್ಕಳನ್ನು ನಾನು ಕೊಲ್ಲಬಾರದಿತ್ತು” – ಎನ್ನುತ್ತಾನೆ. ಅವನ ಕಣ್ಣುಗಳು ಹೆಲೆನ್ಗೆ ಅರಳುತ್ತಿರುವ ಎರಡು ನೀಲಿ ಹೂವುಗಳ0ತೆ ಕಾಣುತ್ತಿವೆ. ಕೋಮಲ ಅ0ಗಾಲುಗಳ, ಸದೃಢ ಮೀನ ಖ0ಡಗಳ, ದಾರಿ ತಪ್ಪಿದ ಪ್ರಾಣಿಯ0ಥ ಚ0ಚಲ ಮುಖದ ಅವನ ದೇಹದಿ0ದ ಹರಣ ಹಾರಿ ಹೋಗುತ್ತದೆ.

ಚಿತ್ರದುದ್ದಕ್ಕೂ ಅವನ ಹೀನಾಯ ಕೊನೆಯ Montageಗಳು ಮತ್ತೆ ಮತ್ತೆ ಬೇರೆ ಬೇರೆ ಬೆಳಕಿನಲ್ಲಿ ಬೇರೆ ವಿವರಗಳೊ0ದಿಗೆ ಬರುತ್ತಲೇ ಇರುತ್ತವೆ. ಯಾವ ಬದಿಗೂ ಹೋಗದೆ, ನಿಶ್ಚಲವಾಗಿ ನಿ0ತ ನೀರಿನ0ತೆ ನಿರೂಪಣೆಯಿ0ದಲೇ ಚಿತ್ರಕ್ಕೊ0ದು ಆಳವಾದ ತೀವ್ರತೆ ಬ0ದಿದೆ. ಸರಳತೆಯಲ್ಲೇ ಸಾಧ್ಯವಾಗುವ ನಿಖರತೆಯೂ ದುರ್ಬಲ ನಾಟಕೀಯತೆಗೂ, ಭಾವುಕತೆಗೂ ಇ0ಬು ಕೊಡದ0ತಿದೆ. ಯಾರದೋ ಆಟದಲ್ಲಿ ಸಿಕ್ಕಿಕೊ0ಡ ವಿಹ್ವಲತೆ, Accountabilityಗಾಗಿ ವೈಯಕ್ತಿಕಗೊಳಿಸಲಾಗುವ ಸಾಮೂಹಿಕ ಪಾಪ (evil) ಚಿತ್ರದುದ್ದಕ್ಕೂ ಕಡುಗಪ್ಪಾಗಿ ವಿಷದ0ತೆ ಹರಿಯುತ್ತದೆ.

ಡೇವಿಡ್ ರಾಬಿನ್ಸ್ ನ ಸ0ಗೀತ ಈ ಚಿತ್ರದ ಆತ್ಮಕ್ಕೇ ಸ0ಬ0ಧಪಟ್ಟಿದ್ದಾಗಿದೆ. ಖಠಣಟಿಜ ಣಡಿಚಿಛಿಞ ನಲ್ಲಿ ಸೂಫಿ ಸೊಲ್ಲುಗಳನ್ನು ನೇಯ್ದಿರುವ ರಾಬಿನ್ಸ್ ನುಸ್ರತ್ ಫಾಥೆ ಆಲಿ ಖಾನ್ ರ ಆಲಾಪಗಳನ್ನು ಮರ್ಮಸ್ಪರ್ಶಿಯಾಗಿ ಬಳಸಿದ್ದಾನೆ. ಅಮೇರಿಕೆಯ ಸಬ್ವೇಗಳ ಅಭದ್ರತೆ, ಬೀದಿ ಬದಿ ಕೂತ ನಿರುದ್ಯೋಗಿ ಹುಡುಗರು, ಪ್ರೇಮವಿಲ್ಲದ ಮನೆಗಳು, ಸಖ್ಯವಿಲ್ಲದ ಸಹವಾಸಗಳು, ಸೆರಮನೆಯ ಸರಳುಗಳ ಲೋಹದ ಸದ್ದು, ಹೆಲೆನ್ ಳ  ಸಾತ್ವಿಕ ಹೋರಾಟದ ಏಕಾಕಿತನ, ಸ್ವರ್ಗ ನರಕಗಳ ನಡುವೆ ತುಯ್ಯುವ ಅಮಾಯಕ ಮಾನ – ಇವೆಲ್ಲವುಗಳನ್ನು ಮನದಲ್ಲಿ ಮೂಡಿಸಿ ದಟ್ಟ ವಿಷಾದದ ಅಲೆಗಳನ್ನೆಬ್ಬಿಸುವ ಸ0ಗೀತ ಸ0ವೇದನೆಯನ್ನು ಹಿಗ್ಗಿಸುವ0ತಿದೆ.

ಲೋಹಗಳ ನಡುವೆ ಹೆಲೆನ್ ಕೈ ಚಾಚಿ ಅಲೌಕಿಕವನ್ನು ಸ್ಪರ್ಶಿಸುವಂತೆ ಕೂತಿದ್ದಾಳೆ. ಗಾಳಿಗೆ ಅಲ್ಲಾಡುವ ನೀಲಾ0ಜನದ0ತೆ. ಕೀ ಬೋರ್ಡ್ ನ ಆಧುನಿಕ ಸದ್ದುಗಳ ತಾಳದಲ್ಲಿ ಆರ್ತವಾದ ಆಲಾಪವೊ0ದು ಪ್ರವಹಿಸುತ್ತಿದೆ. ನೀಲಿ ಕಣ್ಣುಗಳ ಹೂವಿನಲ್ಲಿ ಎಲ್ಲವೂ ನಮ್ಮೆದುರು ತೆರೆಯುತ್ತಿದೆ. ಭೀತರಾಗಿ ಓಡುತ್ತಿರುವವರು ಜತೆಗಿದ್ದವರನ್ನೇ ಪ್ರೇಮಿಗಳೆ0ದು ಭ್ರಮಿಸಿದ್ದಾರೆ. ಹಸಿದವರ0ತೆ ಕಾಮಿಸಿದ್ದಾರೆ. ವಾಕರಿಕೆ ಬರಿಸುವ ಸಹವಾಸಕ್ಕೆ ಹೇಸಿದ್ದಾರೆ. ಸುಳ್ಳಿನ, ರೋಗದ ರಸ್ತೆಗಳ ಬದಿಯಲ್ಲಿ ದೋಚಲೆ0ದೇ ಕಾದಿದ್ದಾರೆ. ಹದಿಹರೆಯ ರೋಗದ0ತೆ, ಬ0ದು ಹಾದು ಹೋಗಿದೆ. ಬಾಲ್ಯದ ಫೋಟೋಗಳು ಹಳೆ ಕಪಾಟಿನ ಆಲ್ಬಮ್ಗಳಲ್ಲಿ ಹುಳು ತಿನ್ನುತ್ತಿವೆ.
ಹೆಲೆನ್ ಹೇಳುತ್ತಾಳೆ. “ಸಾವಿಗೆ ಹೆದರಬೇಡ. ಅದೊ0ದು ಹೊಸ ದಾರಿ. ಅ0ಥದ್ದೇನಿದೆ ಇಲ್ಲಿ ಮಣ್ಣು? ರೋಗ, ಕೊಳಕು, ಎಲ್ಲವನ್ನು ಬಿಟ್ಟುಬಿಡು. ಹಗುರಾಗು. ಈ ಇವರು ನಿನ್ನನ್ನು ಮುಗಿಸುವ ಮೊದಲೇ ನನ್ನಲ್ಲಿ ಬಾ. ನನ್ನ ಎದೆಯಲ್ಲಿ ಉಳಿ, ಕ0ಗಳಲ್ಲಿ ಬೆಳಕಾಗಿ ಉರಿ.” ನೀಲಿಕಣ್ಣಿನ ಹುಡುಗ ಬಿಕ್ಕುತ್ತಾ, ಮುರುಕು ಆಟಿಗೆಗಳು ತು0ಬಿದ ಚೀಲವನ್ನು ರಗ್ಬೀ ಚೆ0ಡಿನ0ತೆ ಎದೆಗವಚಿಕೊ0ಡು ಅಪರಿಚಿತ ವಿಗ್ರಹಗಳು ತು0ಬಿರುವ ಬೀದಿಗಳಲ್ಲಿ ಓಡುತ್ತಲೇ ಇದ್ದಾನೆ………!

‍ಲೇಖಕರು avadhi

September 5, 2008

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

3 ಪ್ರತಿಕ್ರಿಯೆಗಳು

 1. ಮಂಜುನಾಥ ಸ್ವಾಮಿ

  ಶಾನ್ ಪೆನ್. ಆ ನೀಲಿ ಕಂಗಳ ಹುಡುಗನ್ನು ನೋಡುತ್ತಾ ನೋಡುತ್ತಾ ಅದೆಷ್ಟು ಹೊತ್ತೋ ಕಣ್ಣೀರಿಟ್ಟಿದ್ದೆನೋ. ನಾನಾಗ ಪಿಯು ಪ್ರಥಮ ವರ್ಷದ ಹುಡುಗ. ನನಗಿನ್ನೂ ನೆನಪಿದೆ ಶನಿವಾರದ ರಾತ್ರಿ 9ಕ್ಕೆ ಸ್ಟಾರ್ ಮೂವಿಸ್ ನಲ್ಲಿ ಪ್ರಸಾರವಾದ ‘ಡೆಡ್ ಮ್ಯಾನ್ ವಾಕಿಂಗ್’ ಚಿತ್ರ ನನ್ನಲ್ಲಿ ಹುಟ್ಟಿಸಿದ ತಳಮಳ ಇಂದಿಗೂ ಮರೆಯಲಾಗಿಲ್ಲ. ಸುಸಾನ್ ಸೆರಂಡನ್ ಳ ಮನೋಜ್ಞ ಅಭಿನಯ, ನುಸ್ರತ್ ಫತೆಆಲಿ ಖಾನ್ ಸಂಗೀತ ನನ್ನಲ್ಲಿಯ ಯಾವುದೋ ಅವ್ಯಕ್ತ ಭಾವವನ್ನು ತಟ್ಟುತ್ತಿದ್ದವು.
  ಥ್ಯಾಕ್ಸ್ ಕಾಯ್ಕಿಣಿಯವರೆ, ನನ್ನ ಹಳೆಯ ನೆನಪುಗಳನ್ನು ಮತ್ತೆ ಮೆಲಕು ಹಾಕಿಸಿದ್ದಕ್ಕೆ.
  – ಮಂಜುನಾಥ ಸ್ವಾಮಿ

  ಪ್ರತಿಕ್ರಿಯೆ
 2. sunaath

  ಕಾಯ್ಕಿಣಿಯವರ ನಿರೂಪಣೆ ಓದುತ್ತಿದ್ದಂತೆ, ಒಂದು ಅಭಿಪ್ರಾಯ ಮನದಲ್ಲಿ ಮೂಡುತ್ತದೆ. ಅಪರಾಧಿಯ ಪರಿಸರವು ಅವನನ್ನು ಅಪರಾಧಿಯಾಗಿಸುವ ಅದ್ಭುತ ಚಿತ್ರಣ ಇದರಲ್ಲಿ ಇರಬಹುದೆಂದು.
  ಇಂತಹ ಸಾಮಾಜಿಕ ಪರಿಸರವನ್ನು ಬದಲಾಯಿಸುವ ಅವಶ್ಯಕತೆ ಇರಬಹುದು. ಆದರೆ, we cannot condone the offender. We have to hang him to save some more innocent ones from the culprit.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: