ಡೈನೋಸಾರ್‌ ನಾಡಿನಲ್ಲಿ ಸಿಕ್ಕ ಸ್ವರ್ಗದ ಹಕ್ಕಿಗಳು!

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ.

ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಮಹಿಳಾ ಸ್ವಾವಲಂಬನೆ ವಿಭಾಗದಲ್ಲಿ ಗ್ರಾಮೀಣ ಮಹಿಳೆಯರಿಗೆ ಕಲಾ ತರಬೇತಿ ನೀಡುತ್ತಿರುವುದು ತೃಪ್ತಿಕೊಟ್ಟಿದೆ.

ತಿರುಗಾಟಹುಚ್ಚು. ಸ್ಟ್ರೆಂತೂ, ವೀಕ್ನೆಸ್ಸುಗಳೆರಡೂ ಹಿಮಾಲಯವೇ. ಬದುಕಿನ ಚಿಕ್ಕ ಚಿಕ್ಕ ಸಂಗತಿಗಳು ಕ್ಯಾಮೆರಾ ಫ್ರೇಮಿನೊಳಗೆ ಇಳಿವಾಗ ಅವುಗಳು ರೂಪಾಂತರ ಹೊಂದುವ ಅದ್ಭುತ ಸಾಧ್ಯತೆಗಳ ಬಗ್ಗೆ ಸದಾ ಬೆರಗು.

ಆಗಿನ್ನೂ ಚೀನಾದಲ್ಲಿ ಕೊರೋನಾ ಸದ್ದು ಮಾಡುತ್ತಿತ್ತಷ್ಟೆ. ನಾವೆಲ್ಲ ಭಾರತದಲ್ಲಿ, ಅದರ ಬಗ್ಗೆ ತಲೆಯೂ ಕೆಡಿಸಿಕೊಂಡಿರದ ಸಮಯವದು. ೨೦೨೦ರ ವರ್ಷಾರಂಭದ ಜನವರಿಯ ಚಳಿಯಲ್ಲಿ ಪಾಕಿಸ್ತಾನದ ನೆಲದಲ್ಲಿ ನಿಂತು ಅಲ್ಲಿಂದ ಭಾರತದ ಗಡಿ ಕಾಣುವುದನ್ನು ನೋಡಿದ್ದೆ. ವಿಮಾನದಲ್ಲಿ ಹಾರಿ ಹೋಗಿ ಮತ್ತೊಂದು ದೇಶ ಸುತ್ತಿ ಬರುವುದಕ್ಕೂ, ನಮ್ಮದೇ ದೇಶದ ಗಡಿಯ ಬೇಲಿ ದಾಟಿ ನಡೆಯುತ್ತಾ ಮತ್ತೊಂದು ದೇಶಕ್ಕೆ ಹೋಗೋದಕ್ಕೂ ವ್ಯತ್ಯಾಸ ಇದೆ. ಹಾಗೆ, ಅಲ್ಲಿದ್ದ ಗೆರೆ ದಾಟಿ, ಗೆರೆಯಿಂದೀಚೆ ನಮ್ಮ ನೆಲ, ಒಂದು ಕಾಲು ತೆಗೆದು ಆಚೆ ಇಟ್ಟರೆ ಪಾಕಿಸ್ತಾನ ಎಂಬ ಯೋಚನೆಯೇ ಬಹಳ ವಿಚಿತ್ರ ಭಾವ. ಗೆರೆ ದಾಟಿ, ʻವೆಲ್ಕಂ ಟು ಪಾಕಿಸ್ತಾನʼವನ್ನೂ ದಾಟಿ ಹೋಗ್ತಾ ಹೋಗ್ತಾ ಮೂರ್ನಾಲ್ಕು ಕಿಮೀವರೆಗೂ ಸಿಗುತ್ತಿದ್ದ ಭಾರತದ ನೆಟ್‌ವರ್ಕ್ ಆಮೇಲೆ ಸಿಗದಂತಾಗಿತ್ತು ಇಡೀ ದಿನ.

ಈಗ ಮೊನ್ನೆ ಮೊನ್ನೆ ವರ್ಷದ ಕೊನೆಯ ಡಿಸೆಂಬರ್ ನ ಹೆಚ್ಚು ಕಡಿಮೆ ಅಂಥದ್ದೇ ಚಳಿಯಲ್ಲಿ ಪಾಕಿಗೆ ತಾಗಿದಂತಿರುವ ಗುಜರಾತಿನ ಧೋಲವೀರ ಎಂಬ ಪುಟಾಣಿ ದ್ವೀಪವೆಂಬ ಹಳ್ಳಿಯ, ಇನ್ನೇನು ಮುಂದೆ ಕಾಲಿಟ್ಟರೆ ನೀರು ಎಂಬ ತೀರಾತಿತೀರದಲ್ಲಿ ನಿಂತಾಗ ಆತ ಹಿಂದಿನಿಂದ ಹೇಳಿದ್ದ, ʻನೋಡಿ ಈ ಉಪ್ಪು ನೀರೆಲ್ಲ ಬೇಸಿಗೆಯಲ್ಲಿ ಒಣಗಿ ನೆಲವೇ ಆಗಿಬಿಡುತ್ತದೆ. ಬರೀ ನೆಲವಲ್ಲ ಬೆಳ್ಳನೆಯ ಉಪ್ಪು ನೆಲ. ಓ ಅಲ್ಲಿ ಆಗಸವೂ ನೀರೂ ಒಂದೇ ಬಣ್ಣದಲ್ಲಿ ಹೌದೋ ಅಲ್ಲವೋ ಎಂಬಂತೆ ಕೂಡಿದಂಥ ಗೆರೆಯಿದೆಯಲ್ಲಾ, ಅಲ್ಲಿಂದಾಚೆಗೆ ಪಾಕಿಸ್ತಾನ. ಬೇಸಗೆಯ ಶುಭ್ರಾಕಾಶದ ದಿನಗಳಲ್ಲಿ ಪಾಕಿಸ್ತಾನ ನೆಲ ಇಲ್ಲಿಗೆ ಚೆಂದಕ್ಕೆ ಕಾಣಿಸುತ್ತದೆ. ಹತ್ತಿರ ಹತ್ತಿರ ಅಲ್ಲಿವರೆಗೆ ನಡೆದೇ ಹೋಗಬಹುದು, ನಾವೆಲ್ಲ ಈ ಬಿಳಿ ನೆಲದಲ್ಲಿ ಬೈಕು ಸವಾರಿಯೂ ಮಾಡುತ್ತೇವೆ ಅಂತʼ ಹೇಳಿ ಮುಗಿಸುವಷ್ಟರಲ್ಲಿ, ನನ್ನ ಫೋನು ಕಿಸೆಯೊಳಗಿಂದ ಟುರ್‌ ಎಂದು ಅದುರಿತು. ನೋಡಿದರೆ ಪಾಕಿಸ್ತಾನದ ನೆಟ್‌ವರ್ಕ್ ನಿಂತಲ್ಲಿಂದಲೇ ಡಿಟೆಕ್ಟ್‌ ಆಗುತ್ತಿತ್ತು! ಅರೆ, ೨೦೨೦ರ ಈ ವರ್ಷದ ಆರಂಭ ಹಾಗೂ ಅಂತ್ಯಕ್ಕೊಂದು ಎಂತಹ ವಿಚಿತ್ರವಾದ ಕನೆಕ್ಷನ್‌ ಇದೆಯಲ್ಲಾ ಎಂದುಕೊಂಡೆ.

ದಾರಿ ಅದಾಗಿ ನಮ್ಮನ್ನು ಕರೆದುಕೊಂಡು ಹೋಗೋದರಲ್ಲಿ ನಡೆಯುವ ಸುಖ ಬೇರೆಯೇ. ನಾಳೆ ಎಲ್ಲಿಗೆ ಹೋಗಬೇಕು ಎಂದು ಈ ಕ್ಷಣ ಕೂತು ಪಟ್ಟಂತ ಎದ್ದು ಹೊರಟದ್ದರಲ್ಲಿ ಸಿಕ್ಕ ಅಚ್ಚರಿಗಳು ಅನೇಕ. ಒಂದೇ ಜಾಗದಲ್ಲಿ ಕೂತು ಭಾರತವೆಂಬ ಬಹುದೊಡ್ಡ ʻಪ್ರಪಂಚʼವನ್ನು ಸುತ್ತುವುದರಲ್ಲಿ ದಕ್ಕುವ ಅನುಭವ ಯಾವುದರಲ್ಲೂ ದಕ್ಕುವುದಿಲ್ಲ. ಅದನ್ನು ಬರೆಯುವುದೂ ಕಷ್ಟ ಅನಿಸತೊಡಗುತ್ತದೆ. ಹಾಗಾಗಿಯೇ ಪ್ರತಿ ತಿರುಗಾಟದ ನಂತರ ನನ್ನಲ್ಲೊಂದು ಖಾಲಿತನ ಆವರಿಸಿಕೊಳ್ಳಲು ಶುರುವಾಗುತ್ತದೆ.

ಕೆಲ ದಿನ ಸುಮ್ಮನೆ ಕೂರುತ್ತೇನೆ. ತೆಗೆದ ರಾಶಿ ಫೋಟೋ ಹಾಗೆಯೇ ಗಾಜೆಟ್ಟಿನ ಮೆಮೊರಿ ಸಾಕಾಗದೆ ಒದ್ದಾಡುತ್ತಿರುತ್ತದೆ. ಒಂದಂತೂ ಅರ್ಥವಾಗಿದೆ, ಭಾರತವೆಂಬ ಈ ಬಹುದೊಡ್ಡ ಲೋಕ, ನಮ್ಮ ಜುಜುಬಿ ಕಿಮೀಗಳ ಲೆಕ್ಕಕ್ಕೆಲ್ಲ ಸಿಕ್ಕುವಂಥದ್ದಲ್ಲ, ಇದರ ಅಗಾಧತೆ ಒಬ್ಬರ ಒಂದು ಜೀವಿತಾವಧಿಯಲ್ಲಿ ಸಿಗುವಂಥದ್ದಲ್ಲ. ಇಲ್ಲಿನ ಅಚ್ಚರಿಗಳು ಬೇರೆಯೇ ಇವೆ!

ಇರಲಿ. ಕೆಲವೊಮ್ಮೆ ಅಂದುಕೊಂಡದ್ದು ಅಂದುಕೊಂಡ ಹಾಗೆ ನಡೆಯುವುದಿಲ್ಲ ಅಂತೀವಲ್ಲ, ಇಲ್ಲಿಯೂ ನಾವು ಅಂದುಕೊಂಡಂತಿದ್ದರೆ ಧೊಲವೀರಕ್ಕೆ ರಾತ್ರಿ ತಲುಪಿರಬೇಕಿತ್ತು. ಧೊಲವೀರವೆಂಬ ಅತ್ಯಂತ ಚೆಂದದ ಜಾಗವೊಂದರ ಸೌಂದರ್ಯ ನಮ್ಮ ಕಣ್ಣಿಗೆ ಆ ಕತ್ತಲಲ್ಲಿ ಕಾಣುತ್ತಲೇ ಇರಲಿಲ್ಲ. ಆ ಕ್ಷಣಕ್ಕೆ ಅಲ್ಲೇ ಹೆದ್ದಾರಿ ಬದಿಯ ಸಿಕ್ಕಿದ ಹೋಟೇಲೊಂದರಲ್ಲಿ ಅನಿವಾರ್ಯಕ್ಕೆ ತಂಗಿದರೂ ಮರುದಿನದ ನಮ್ಮ ಹಾದಿ ಒಂದು ಕನಸಿನ ಹಾಗೆ ಇರುತ್ತದೆಂದು ನಾನು ಕನಸಿನಲ್ಲೂ ಭಾವಿಸಿರಲಿಲ್ಲ.

ಹಾಗೆ ನೋಡಿದರೆ ೨೦೨೦ರ ಈ ಕೊರೋನಾ ವರ್ಷವೇ ನನ್ನನ್ನು ಅತೀ ಹೆಚ್ಚು ತಿರುಗಾಡಿಸಿದ್ದು. ನಾಲ್ಕೈದು ತಿಂಗಳು ಮನೆಯೊಳಗೆ ಕೂರಿಸಿದ್ದು ಬಿಟ್ಟರೆ, ಉಳಿದ ಅಷ್ಟೂ ತಿಂಗಳುಗಳೂ ಕೂಡಾ ಕಾಲಿಗೆ ಚಕ್ರವನ್ನೇ ಕಟ್ಟಿ ಬಿಟ್ಟಿತ್ತು. ಪ್ರಪಂಚವೇ ಆನ್‌ಲೈನ್‌ ಆಗಿದ್ದೂ ಕೂಡಾ ಇದಕ್ಕೆ ಕಾರಣವೇ. ಈ ಆನ್‌ಲೈನನ್ನು ಎಷ್ಟೇ ಬೈದರೂ ಇದು ಬಹಳಷ್ಟು ಒಳ್ಳೆಯದನ್ನೂ ಮಾಡಿದೆಯೆಂಬುದು ನಿಜವೇ. ಶಾಲೆ, ಆಫೀಸು ಎಲ್ಲವೂ ಬೆರಳ ತುದಿಗೇ ಬಂದ ಮೇಲೆ, ನಿಂತ ನೆಲ ಯಾವುದಾದರೇನು ಎಂದು ಹೆಚ್ಚು ಯೋಚಿಸದೆ ಹೊರಟಿದ್ದು ೨೦೨೦ ಎಂಬ ವರ್ಷದ ನೆನಪ ಬುತ್ತಿಯಲ್ಲಿ ಪುಷ್ಕಳ ಭೋಜನವನ್ನೇ ಇಟ್ಟುಬಿಟ್ಟಿತು.

ಇನ್ನೇನು ಬೆಳಕು ಹರಿಯುವ ಮೊದಲೇ ಆ ಹೋಟೇಲಿನ ಜಾಗ ಖಾಲಿ ಮಾಡಿದ್ದೆವು. ಆದಷ್ಟು ಬೇಗ ಜಾಗ ಖಾಲಿ ಮಾಡುವಂತೆಯೇ ಇತ್ತು ಅದು ಅನ್ನೋದೂ ಕೂಡಾ ಸತ್ಯವೇ ಆಗಿದ್ದರೂ, ನಮ್ಮ ಉದ್ದೇಶ, ಬೇಗ ಧೊಲವೀರ ತಲುಪುವುದು ಹಾಗೂ ಆ ಮೂಲಕ ನಿನ್ನೆಯೇ ತಲುಪಬೇಕಿದ್ದ ಸಮಯವನ್ನು ಅಡ್ಜೆಸ್ಟ್‌ ಮಾಡುವುದು. ಮೇಲಿನ ಸೂರ್ಯ ಭಗವಂತ ತನ್ನ ಬೆಳಕಿನಲ್ಲಿ ನಮಗಾಗಿ ಭರ್ಜರಿ ಹಬ್ಬವನ್ನೇ ತಯಾರಿ ಮಾಡಿದ್ದ ಅಂತ ನಮಗೆಲ್ಲಿ ಗೊತ್ತಿತ್ತು! ಮಧ್ಯದಲ್ಲೊಂದು ದಾರಿ ಬಿಟ್ಟರೆ ಎರಡೂ ಕಡೆ ಬೆಳ್ಳನೆ ಹಾಸಿನ ನೆಲ. ಆಗಸಕ್ಕೊಂದು ದೊಡ್ಡ ಕನ್ನಡಿಯನ್ನು ನೆಲದಲ್ಲಾರೋ ತಂದು ಹಾಸಿ ಬಿಟ್ಟಿದ್ದಾರೆಂಬ ಸ್ಪಟಿಕ ಶುದ್ಧ ನೀರಿನಲ್ಲಿ ಮತ್ತೆ ಕಾಣುವ ಆಗಸ. ಇದು ಕನಸೋ ನನಸೋ ಎಂದು ಆ ಹಗಲಿನಲ್ಲೂ ಡೌಟಾಯಿತು.

ಬೆಳಗಿನ ತಿಂಡಿಯೂ ತಿನ್ನದ ಆ ಹಸಿ ಹೊಟ್ಟೆ ಹೊತ್ತು ಧೋಲವೀರ ತಲುಪಿದಾಗ ಅಚಾನಕ್ಕಾಗಿ ಆ ಗೈಡ್‌ ಸಿಕ್ಕಿದ್ದು ಒಳ್ಳೆಯದೇ ಆಗಿತ್ತು. ನಮಗೆ ನೋಡಬೇಕಿದ್ದುದು ಹರಪ್ಪ ನಾಗರೀಕತೆಯ ಸ್ಥಳ. ಇದನ್ನು ವಿವರಿಸಲು ಗೈಡ್‌ ಬೇಕೇ ಬೇಕು ಎಂದು ಅಂದುಕೊಳ್ಳುತ್ತಿದ್ದಾಗ, ಆತ ಸಿಕ್ಕಿಬಿಟ್ಟಿದ್ದ. ಬೆಳಗ್ಗಿನ ಜಾವ ಐದು ಗಂಟೆಗೇ ಹೊರಟಿದ್ದ ನಮ್ಮ ಫೋನುಗಳೆಲ್ಲವೂ ನೆಟ್‌ವರ್ಕಿಲ್ಲದೆ ಮಲಗಿಬಿಟ್ಟಿದ್ದವು. ಇದು ನಮಗೆ ಅನಿರೀಕ್ಷಿತ ಶಾಕ್.‌ ಯಾವುದೋ ಮೀಟೀಂಗೂ ಅರ್ಜೆಂಟಾಗಿ ಇತ್ತೆನ್ನುವಾಗ ನೆಟ್‌ವರ್ಕಿಲ್ಲದೆ, ಸಂದೇಶ ತಿಳಿಸಲೂ ಆಗದೆ, ಧೋಲವೀರ ತಲುಪಿದಾಗ ಮಹೇಶ ವಿಚಿತ್ರ ಮೂಡಿನಲ್ಲಿದ್ದ. ಅಷ್ಟರಲ್ಲಿ ಆ ಯಾರೂ ಇಲ್ಲದ ರೆಸ್ಟೋರೆಂಟಿನಲ್ಲಿ ಈ ಗೈಡು, ʻನಿಮಗೊಂದು ವ್ಯೂ ಪಾಯಿಂಟು ತೋರಿಸುತ್ತೇನೆ, ಅದಾದ ಮೇಲೆ ಹರಪ್ಪ ಸೈಟಿಗೆ ಹೋಗೋಣವಂತೆʼ ಎಂದು ಆತ ಹೇಳಿದಾಗ, ನನಗಂತೂ ಸಿಟ್ಟು ಬಂದುಬಿಟ್ಟಿತ್ತು.

ಪ್ರವಾಸಿ ತಾಣಗಳಲ್ಲಿನ ವ್ಯೂ ಪಾಯಿಂಟ್‌ ಸಹವಾಸಕ್ಕೆ ಹೋಗದ ನಾವು, ಗೈಡುಗಳ ಇಂಥ ಬಣ್ಣದ ಮಾತಿಗೆ ಮರುಳಾಗಲೇಬಾರದು ಎಂದು ಶಪಥ ಮಾಡಿ ದಶಕವೇ ಆಗಿದೆ. ರೆಸ್ಟೋರೆಂಟಿನಲ್ಲಿ ಅಂಟಿಸಿದ್ದ ದೊಡ್ಡ ಫೋಟೋದಲ್ಲಿ ಕಂಡ ಫ್ಲೆಮಿಂಗೋ (ರಾಜಹಂಸ) ನೋಡಿ, ʻಈ ಹಕ್ಕಿಗಳು ಎಲ್ಲಿ ಸಿಗುತ್ತವೆ, ಅಲ್ಲಿಗೆ ದಾರಿ ಹೇಳಿ. ಯಾವ ವ್ಯೂ ಪಾಯಿಟೂ ಬೇಡʼ ಎಂದೆ. ʻಈ ಹಕ್ಕಿಗಳೂ ಅದೇ ಜಾಗದಲ್ಲೇ ಸಿಗುತ್ತೆ, ಅದೇ ವ್ಯೂ ಪಾಯಿಂಟುʼ ಅಂದ. ಈತ ಈ ವ್ಯೂ ಪಾಯಿಂಟ್‌ ಹೆಸರಿನಲ್ಲಿ ಬಕ್ರಾ ಮಾಡೋದು ಗ್ಯಾರೆಂಟಿʼ ಎಂಬಂತೆ ನಾನು ಮಹೇಶನ ಮುಖ ನೋಡಿದರೆ, ನನ್ನ ಭಾವವನ್ನು ಗ್ರಹಿಸಿದ ಆತ, ʻನೀವು ಹೆಚ್ಚೆಲ್ಲ ಕೊಡಬೇಡಿ, ಅದೇ ರೇಟು. ಆಮೇಲೆ ಹರಪ್ಪ ನೋಡೋಣʼ ಎಂದ. ಹೋಗ್ಲತ್ಲಾಗೆ ಅಂತ ಆತ ಹೇಳಿದಲ್ಲಿಗೆ ಹಿಂದೆಯೇ ಹೊರಟೆವು.

****

ಅದೊಂದು ಕಾಲವಿತ್ತು, ಆಗ ಡಿಸೆಂಬರ್‌ ಜನವರಿ ಬರುತ್ತಿದ್ದ ಹಾಗೆ ವಾರಾಂತ್ಯ ಬಂದ ಕೂಡಲೇ ಬೆಳಗಾತ ಎದ್ದು ಚೆನ್ನೈ ಸುತ್ತಮುತ್ತಲ ನೀರಿನ ಆಶ್ರಯ ಹುಡುಕಿ ಹೋಗುತ್ತಿದ್ದೆವು. ಮುಖ್ಯವಾಗಿ ಪುಲಿಕಾಟ್‌ ಸರೋವರ, ಶ್ರೀಹರಿಕೋಟಾ ಆಸುಪಾಸು, ತಪ್ಪಿದರೆ ಮಹಾಬಲಿಪುರಂ, ಪಾಂಡಿಚೇರಿ ಹೀಗೆ. ಇದೇ ಫ್ಲೆಮಿಂಗೋಗಳಿಗಾಗಿ. ಆದರೆ ಫ್ಲೆಮಿಂಗೋ ದರ್ಶನ ಅಷ್ಟು ಸುಲಭಕ್ಕೆ ಸಿಗುವಂಥದ್ದಲ್ಲ. ಸಿಕ್ಕರೂ ಹತ್ತಿರದಿಂದ ದರ್ಶನವಂತೂ ದೂರದ ಮಾತು. ಇಂಥದ್ದರಲ್ಲಿ ನಾವು ಒಂದು ಒಳ್ಳೆಯ ಕ್ಯಾಮೆರಾವೂ ಇಲ್ಲದೆ ಬರಿಗಣ್ಣಿನ ವೀಕ್ಷಣೆಗಾಗಿಯೇ ಹುಚ್ಚು ಹತ್ತಿಸಿಕೊಂಡುಬಿಟ್ಟಿದ್ದೆವು. ಪ್ರಾಣಿ ಪ್ರಪಂಚದಲ್ಲಿ ಹುಲಿ ದರ್ಶನ ಹೇಗೆ ರೋಮಾಂಚನವೋ ಹಾಗೆಯೇ ಈ ಫ್ಲೆಮಿಂಗೋಗಳು ಪಕ್ಷಿಪ್ರಪಂಚದ ಪ್ರಮುಖ ಆಕರ್ಷಣೆ.

ನಾಲ್ಕೈದು ವರ್ಷ ಹೀಗೇ ಸುತ್ತಾಡಿ, ದಣಿಯದೆ, ಈ ಹಕ್ಕಿಗಳ ಹಿಂದೆ ಬಿದ್ದು ನಮ್ಮ ಭಾರತದ ಕೆಳತುದಿಯಲ್ಲಿರುವ ಪಾಯಿಂಟ್‌ ಕಲಿಮೇರಿಗೂ ಹೋಗಿ ಬಂದಿದ್ದೆವು. ಅದೆಲ್ಲೋ ಕಿಮೀಗಟ್ಟಲೆ ದೂರದಲ್ಲಿ ಫ್ಲೆಮಿಂಗೋ ದಂಡು ಕಂಡಿತೆಂದರೆ ನಮಗಿಲ್ಲಿ ಉತ್ಸಾಹ. ಮೆಲ್ಲಮೆಲ್ಲನೆ ಉಸಿರೂ ಸದ್ದು ಮಾಡದಂತೆ ಇನ್ನು ಸ್ವಲ್ಪವೇ ಸ್ವಲ್ಪ ಹತ್ತಿರದಿಂದ ನೋಡುವ ಎಂಬ ಆಸೆಯಿಂದ ಮೆತ್ತಮೆತ್ತಗಿನ ಹೆಜ್ಜೆಯಿಡುತ್ತಾ ಹೋದರೆ, ನಾಲ್ಕು ಹೆಜ್ಜೆ ಮುಂದೆ ಹೋದರೆ ಸಾಕು, ಕಿಮೀ ದೂರದಲ್ಲಿರುವ ಆ ಫ್ಲೆಮಿಂಗೋಗಳು ಇನ್ನೂ ಒಂದಷ್ಟು ದೂರ ಹೋಗಿ ಧ್ಯಾನ ಶುರು ಮಾಡುತ್ತಿದ್ದವು. ಬಹಳ ಸೂಕ್ಷ್ಮ ಸ್ವಭಾವದ ಹಕ್ಕಿಗಳಾದ ಇವು, ಹೆರಾನ್‌, ಎಗ್ರೆಟ್‌, ಪೆಲಿಕನ್‌, ಸ್ಟಾರ್ಕ್‌ಗಳ ಹಾಗೆ ಸುಲಭಕ್ಕೆ ಹತ್ತಿರದಿಂದ ನೋಡಲು ಸಿಗೋದಿಲ್ಲ. ಯಾವಾಗಲೂ ಮನುಷ್ಯನ ಚಟುವಟಿಕೆಗಳ ಪ್ರದೇಶದಿಂದ ಬಹಳ ದೂರವೇ ಇರಬಯಸುತ್ತದೆ.

ಅಕ್ಟೋಬರ್‌ ಆಗುತ್ತಿದ್ದಂತೆ ಮಳೆಯೊಂದು ಬಂದರೆ ಮುಂಬೈ ಸುತ್ತಲ ನೀರಿನ ಆಶ್ರಯಗಳನ್ನು ಬಿಟ್ಟು ತಮ್ಮ ವಂಶೋದ್ಧಾರಕ್ಕೆ ಕಚ್‌ ಕಡೆಗೆ ಹಾರಿಕೊಂಡು ಬಂದು ಬಿಡುತ್ತವೆ. ಕೆಲವು ಗುಂಪು ಆಂಧ್ರಪ್ರದೇಶ, ತಮಿಳುನಾಡು ಸುತ್ತಮುತ್ತಲಿಗೂ ವಲಸೆ ಹೋಗುತ್ತವೆ. ಬಿಳಿಯ ಮೈಗೆ ಬೆನ್ನಿನ ಬಳಿ ಪಿಂಕ್‌ ಬಳಿದುಕೊಂಡು ಬಹಳ ಆಕರ್ಷಕವಾಗಿ ಕಾಣುವ ಭಾರತದ ಫ್ಲೆಮಿಂಗೋಗಳಲ್ಲಿ ಎರಡು ವಿಧ. ಒಂದು ಗ್ರೇಟರ್‌ ಫ್ಲೆಮಿಂಗೋ (ಕೊಂಚ ಉದ್ದ) ಮತ್ತೊಂದು ಲೆಸ್ಸರ್‌ ಫ್ಲೆಮಿಂಗೋ. ಕೇವಲ ಭಾರತದ್ದಲ್ಲದೆ, ಚಳಿಗಾಲದಲ್ಲಿ ತಮ್ಮ ವಂಶೋದ್ಧಾರಕ್ಕೆ ಇವು ಮಧ್ಯ ಏಷ್ಯಾ, ಆಫ್ರಿಕಾಗಳಿಂದಲೂ ಇಲ್ಲಿಗೆ ಹಾರಿ ಬರುವುದುಂಟು. ಗುಂಪುಗುಂಪಾಗಿ ಸರೋವರದಲ್ಲಿ ಇವು ನಿಂತರೆ ಬಿಳಿ ಮತ್ತು ತಿಳಿ ಗುಲಾಬಿ ಹಾಸಿದಂತೆ ಮನಮೋಹಕವಾಗಿ ಕಾಣುತ್ತದೆ.

ಇಷ್ಟೆಲ್ಲಾ ಹಿನ್ನೆಲೆ ಇದ್ದಾಗ ಸಡನ್ನಾಗಿ ಈ ಹಕ್ಕಿ ದಂಡು ನಿಮ್ಮ ತಲೆ ಮೇಲಿಂದಲೇ ಹಾರಿಕೊಂಡು ಹೋದರೆ! ಹಾಗೇ ಆಯಿತು ನನ್ನ ಪರಿಸ್ಥಿತಿ. ಆತ ಹೇಳಿದ ವ್ಯೂ ಪಾಯಿಂಟಿಗೆ ತಲುಪುವಷ್ಟರಲ್ಲಿ ಎದುರಿಗೆ ಫ್ಲೆಮಿಂಗೋ. ನಿರುಮ್ಮಳವಾಗಿ ಸಾಲುಸಾಲಾಗಿ ನೀರಲ್ಲಿ ಬಳುಕುತ್ತಾ ನಿಂತಿವೆ! ಹಬ್ಬ ಎಂದರೆ ಇದೇ. ನಾನಂತೂ ಆಗಲೇ ಡಿಸೈಡ್‌ ಮಾಡಿಬಿಟ್ಟಿದ್ದೆ. ನೆಟ್‌ವರ್ಕ್‌ ಇಲ್ಲದಿದ್ದರೆ ಕತ್ತೆ ಬಾಲ ಕುದುರೆ ಜುಟ್ಟು. ಈ ದಿನವಂತೂ ಇಲ್ಲೇ ಝಂಡಾ ಊರೋದು ಅಂತ.

*****

ನಾನು ನಿಂತಿದ್ದ ಜಾಗವೇ ಅಂಥದ್ದು. ಮೆಟ್ಟಿ ನಿಂತ ಆ ನೆಲದ ತುಂಬ ಕಲ್ಲಾಗಿಬಿಟ್ಟ ಮರದ ಪಳೆಯುಳಿಕೆಗಳು. ಅಲ್ಲಲ್ಲಿ ಬಸವನ ಹುಳು, ಆಮೆ, ಹುಳ ಹೀಗೆ ನಾನಾ ರೂಪುಗಳು ಫಾಸಿಲ್‌ ಆಗಿ ಪರಿವರ್ತನೆಗೊಂಡ ಕುರುಹುಗಳು. ಎದುರು ನೀಲಿಯಲ್ಲಿ ನೀಲಿಯಾಗಿ ಹೋದ ಲೋಕ. ಗುಂಪಾಗಿ ಹಾರಿ ಬಂದು ಕೂರುವ ಫ್ಲೆಮಿಂಗೋಗಳು. ಎಲ್ಲವನ್ನೂ ಪರ್ಫೆಕ್ಟಾಗಿ ಒಂದು ಜಾಗದಲ್ಲಿ ಬೇಕಂತಲೇ ಯಾರೋ ನಮಗಾಗಿಯೇ ಒಂದು ಫ್ರೇಮಿನೊಳಗೆ ಇಟ್ಟುಬಿಟ್ಟಿದ್ದಾರೋ ಎಂದು ಅನುಮಾನ ಹುಟ್ಟಬಹುದಾದ ಪರ್ಫೆಕ್ಟ್‌ ಜಾಗ.

ಒಂದಾನೊಂದು ಕಾಲದಲ್ಲಿ, ಸುಮಾರು ೨೫೦ ಮಿಲಿಯನ್‌ ವರ್ಷಗಳಷ್ಟು ಹಿಂದೆ ಸುಮಾರು ೨೫ಕ್ಕೂ ಹೆಚ್ಚು ಜಾತಿಯ ಡೈನೋಸಾರ್‌ಗಳೂ ಭಾರತದಲ್ಲಿ ಇದ್ದವು ಎನ್ನುವುದಕ್ಕೆ ಪುರಾವೆಗಳು ಸಿಕ್ಕಿವೆ. ಇಂಥ ಪುರಾವೆ ಹೆಚ್ಚು ಸಿಕ್ಕಿದ್ದು ಗುಜರಾತ್‌ನಲ್ಲಿ. ನಾ ನಿಂತಿದ್ದ ಧೋಲವೀರದ ಆ ಜಾಗವೂ ಅಂಥದ್ದೇ. ಗುಜರಾತ್‌ ಬಿಟ್ಟರೆ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರಗಳಲ್ಲೂ ಡೈನೋಸಾರ್‌ ಪಳೆಯುಳಿಕೆಗಳು ಸಿಕ್ಕಿವೆ. ಏಷ್ಯಾದಲ್ಲೇ ಮೊದಲು ಡೈನೋಸಾರ್‌ ಪಳೆಯುಳಿಕೆ ಸಿಕ್ಕಿದ್ದೂ ಕೂಡಾ ಭಾರತದಲ್ಲೇ.

ಬ್ರಿಟೀಷರ ಕಾಲದಲ್ಲೇ ೧೮೨೮ರಲ್ಲಿ ಜಬಲ್ ಪುರದಲ್ಲಿ ಡೈನೋಸಾರ್‌ ಮೂಳೆಗಳು ಸಿಕ್ಕಿದ್ದವು. ಇದಾದ ಮೇಲೆ ಸಾಲು ಸಾಲಾಗಿ ಭಾರತದ ಉದ್ದಗಲಕ್ಕೂ ಡೈನೋಸಾರ್‌ ಮೊಟ್ಟೆ, ಮೂಳೆಗಳು ಸಿಕ್ಕಿವೆ. ನರ್ಮದಾ ಕಣಿವೆಯೊಂದರಲ್ಲೇ ನೂರಾರು ಮೊಟ್ಟೆಗಳು ಸಿಕ್ಕಿವೆ. ಆದರೆ ಭಾರತಕ್ಕೂ ಡೈನೋಸಾರ್‌ ಯುಗಕ್ಕೂ ಇರುವ ಈ ನಂಟಿಗೆ ಹೋಲಿಸಿದರೆ, ಇಂದಿಗೂ ಭಾರತದಲ್ಲಿ ಡೈನೋಸಾರ್‌ ಬಗೆಗೆ ತಿಳುವಳಿಕೆ ಕಡಿಮೆಯೇ. ಈಗ್ಗೆ ಕೆಲವು ವರ್ಷಗಳಲ್ಲಿ ಪರಿಸ್ಥಿತಿ ಸುಧಾರಿಸಿದೆಯಾದರೂ, ಉತ್ತರ ಅಮೆರಿಕಾ, ಅರ್ಜೆಂಟಿನಾ, ಚೀನಾಗಳಷ್ಟು ವ್ಯಾಪಕವಾಗಿ ಇಲ್ಲಿ ಅಧ್ಯಯನಗಳು ನಡೆದಿಲ್ಲ. ಆಸಕ್ತಿಯೂ ತೋರಿಲ್ಲ.

‌ಧೋಲವೀರದ ಫಾಸಿಲ್‌ ಪಾರ್ಕ್‌ನಲ್ಲೂ ಸ್ವಲ್ಪ ಮಟ್ಟಿಗೆ ತಿಳುವಳಿಕೆ ನೀಡುವ ಪ್ರಯತ್ನ ಮಾಡಿದ್ದು ಗೋಚರಿಸುತ್ತಿತ್ತು. ಕೆಲವು ಪಳೆಯುಳಿಕೆಗಳನ್ನು ಗಾಜಿನೊಳಗಿಟ್ಟಿರುವುದರಿಂದ ಹೊರಗಿನಿಂದ ನೋಡುವಂಥ ವ್ಯವಸ್ಥೆ ಮಾಡಿದ್ದರು. ಮಗನೋ ಡೈನೋಸಾರ್‌, ಫಾಸಿಲ್ ಹೆಸರು ಕೇಳಿದ ಅತ್ಯುತ್ಸಾಹ ತೋರಿ ಒಂದೊಂದೂ ಕಲ್ಲನ್ನು ತಿರುಗಿಸಿ ನೋಡಿ, ಇದ್ಯಾವುದರ ಪಳೆಯುಳಿಕೆಯಾಗಿರಬಹುದು ಎಂದು ತನ್ನದೇ ರೀತಿಯಲ್ಲಿ ಲೆಕ್ಕ ಹಾಕಲು ಶುರು ಮಾಡಿದ್ದ. ನಾನು, ಗುಂಪಾಗಿ ಹಾರಿ ಹೋಗುವ, ಮತ್ತೊಂದು ಗುಂಪು ಹಾರಿ ಬರುವ ಫ್ಲೆಮಿಂಗೋಗಳನ್ನೇ ನೋಡುತ್ತಾ, ಕ್ಲಿಕ್ಕಿಸುತ್ತಾ ನಿಂತಿದ್ದೆ. ಜೊತೆಗೆ ಅಲ್ಲೇ ಅದೇ ಜಾಗಕ್ಕೆ ಹರಪ್ಪ ಮುಗಿಸಿಕೊಂಡು ಸಂಜೆಯ ಸೂರ್ಯಾಸ್ತ ಸವಿಯುವ ಕನಸು ಕಾಣಲು ಶುರು ಮಾಡಿದ್ದೆ.

*****

ಒಂದು ದಿವ್ಯವಾದ ಸೂರ್ಯಾಸ್ತವನ್ನೂ ಕಣ್ತುಂಬಿಕೊಂಡು, ಸೂರ್ಯೋದಯವನ್ನೂ ಒಳಗಿಳಿಸಿಕೊಂಡು ಒಂದು ಸಂತೃಪ್ತಿಯಿಂದ ಧೋಲವೀರಕ್ಕೆ ಟಾಟಾ ಹೇಳಿ ಮರುದಿನ ಕಚ್‌ನತ್ತ ಹೊರಟಾದರೂ, ಫ್ಲೆಮಿಂಗೋ ಹಬ್ಬ ಅಲ್ಲಿಗೇ ಮುಗಿದಿರಲಿಲ್ಲ. ಕಣ್ಣು ಅಲ್ಲಿಯೂ ಫ್ಲೆಮಿಂಗೋ ಹುಡುಕುವುದನ್ನು ನಿಲ್ಲಿಸಿರಲಿಲ್ಲ. ಮೊದಲೇ ವಿಘಾಕೋಟ್‌ನ ಅರ್ಜಿ ತಿರಸ್ಕೃತಗೊಂಡು ಒಂದು ದಿನ ಸುಮ್ಮನೆ ಅಲ್ಲಿಲ್ಲಿ ಸುತ್ತಾಡುತ್ತಾ, ಇಂಡಿಯಾ ಬ್ರಿಡ್ಜ್‌ ಕಡೆಗೂ ಹೋಗಿ ಬಂದು, ರಸ್ತೆ ಮಧ್ಯ ಬಿಸಿಲಿನಲ್ಲಿ ಇನ್ನೆಲ್ಲಿ ಹೋಗೋಣ ಎಂದು ಯೋಚಿಸುತ್ತಿದ್ದೆವು. ಸುಮ್ಮನೆ ಅಲ್ಲೇ ನಡೆದು ಹೋಗುತ್ತಿದ್ದಾತನನ್ನು ಮಾತಿಗೆಳೆದು ಪ್ರಶ್ನೆಯೆಸೆದೆವು. ʻಇಲ್ಲಿ ಫ್ಲೆಮಿಂಗೋ ಎಲ್ಲಿ ಸಿಗಬಹುದು?ʼ

ಆತ ನಮ್ಮನ್ನೇ ಪ್ರಶ್ನಾರ್ಥಕವೆಂಬಂತೆ ತಿರುಗಿ ನೋಡಿದ. ಅವನಿಗೆ ಫ್ಲೆಮಿಂಗೋ ಹೊಸ ಪದ. ಅದೇನು ಅಂದ.

ಅದೇ ಹಕ್ಕಿಗಳು, ಬೆಳ್ಳಗಿನ ದೊಡ್ಡ ದೊಡ್ಡ ನೀರ ಹಕ್ಕಿಗಳು! ಎಲ್ಲಿ ಸಿಗುತ್ತವೆ? ಎಂದೆ.

ʻಓ ಹಕ್ಕಿಗಳು. ಅವು ಇಲ್ಲೆಲ್ಲ ಇರೋದಿಲ್ಲ. ಇಂಡಿಯಾ ಬ್ರಿಡ್ಜ್‌ ಕಡೆಯಲ್ಲೆಲ್ಲ ಸಿಗಲ್ಲ. ಅಲ್ಲೆಲ್ಲ ಜನರ ಓಡಾಟ ಜಾಸ್ತಿ ಅಲ್ವಾʼ ಅಂದ.

ಜೊತೆಗೆ, ʻನೀವು ಯಾವ ಹಕ್ಕಿ ಬಗ್ಗೆ ಕೇಳ್ತೀರೋ ನನಗರ್ಥ ಆಗ್ತಿಲ್ಲ. ನೀವು ಕೇಳುವ ಹಕ್ಕಿಯನ್ನೇ ನಾನು ಹೇಳ್ತಿದೀನೋ ಅನ್ನೋದೂ ಗೊತ್ತಿಲ್ಲ. ಆದ್ರೆ, ಒಂದು ಜಾಗ ಇದೆ ನೋಡಿ. ಅಲ್ಲಿ ನಿಮಗೆ ಖಂಡಿತ ಹಕ್ಕಿಗಳು ಸಿಗ್ತಾವೆ. ಹೆಲ್ಲಾರೋ ಸಿನೆಮಾ ಗೊತ್ತಲ್ಲ. ಆ ಸ್ಪಾಟ್‌ʼ ಎಂದ.

ʻಓ ಹೆಲ್ಲಾರೋ!ʼ ನಾವು ಹುಬ್ಬೇರಿಸಿ ʻರೈಟ್‌ ಪೋಯಿʼ ಎಂದು ಆತ ಹೇಳಿದೆಡೆಗೆ ಕಾರು ತಿರುಗಿಸಿದೆವು.

ಸಿಕ್ಕಸಿಕ್ಕ ಪೊದೆಗಳ ಮಧ್ಯ ಸಪೂರಕ್ಕೆ ಕಾಣುತ್ತಿದ್ದ ರಸ್ತೆಯಂಥಾ ರಚನೆಯಲ್ಲಿ ಓಡಿಸುತ್ತಾ, ಆತ ಹೇಳಿದ್ದು ಸರಿಯಾಗಿದೆಯೋ ಇಲ್ಲವೋ ಎಂಬ ಡೌಟಿನಲ್ಲಿದ್ದಾಗಲೇ ದೂರದಿಂದಲೇ ನೀಲಿ ನೀರಿನಲ್ಲಿ ಬಿಳಿಯ ಕಡ್ಡಿಗಳಂತೆ ಗುಂಪುಗುಂಪಾಗಿ ಮಸುಕಾಗಿ ಗೋಚರಿಸತೊಡಗಿದವು. ʻಏ, ಕಾರು ಇಲ್ಲೇ ನಿಲ್ಸೋ. ಇನ್ನೂ ಮುಂದೆ ಹೋದರೆ, ಸದ್ದಿಗೆ ಅವಿನ್ನೂ ದೂರ ಓಡುತ್ತವೆʼ ಎಂದು ನಾನು ಕಾರಿಳಿದು ಕ್ಯಾಮೆರಾ ನೇತಾಡಿಸಿಕೊಂಡು ಸದ್ದು ಮಾಡದಂತೆ ಕಳ್ಳಹೆಜ್ಜೆಯಿಡುತ್ತಾ ಹಕ್ಕಿ ಕಾಣುವಲ್ಲಿಗೆ ಓಡಿದೆ. ನನ್ನ ಉತ್ಸಾಹಕ್ಕೆ ನೀರೆರೆಚುವಂತೆ ದೊಡ್ಡ ಕಾರೊಂದು ಭರ್ರನೆ ಸದ್ದು ಮಾಡುತ್ತಾ ನಮ್ಮನ್ನು ದಾಟಿಕೊಂಡು ಸೀದಾ ಹೆಲ್ಲಾರೋ ಸೆಟ್ಟಿನ ಹತ್ತಿರಕ್ಕೇ ಓಡಿತು. ಅಷ್ಟೇ ಕಥೆ, ಹಕ್ಕಿಗಳೆಲ್ಲ ಹಾರಿ ಬಿಡುತ್ತವೆ ಅಂದುಕೊಳ್ಳುವಷ್ಟರಲ್ಲಿ ಗುಂಪಿನ ನಾಯಕ/ಕಿ ಫ್ಲೆಮಿಂಗೋವೊಂದು ತನ್ನ ಜೊತೆಗಾರರಿಗೆ ಕೇಂಕೇ… ಎಂದು ಸೂಚನೆ ಕೊಟ್ಟಾಗಿತ್ತು. ಅಷ್ಟೂ ಹಕ್ಕಿಗಳು ಗುಂಪಾಗಿ ಇನ್ನೂ ದೂರಕ್ಕೆ ಹಾರಿದವು.

ದೊಡ್ಡಸದ್ದಿನೊಂದಿಗೆ ಬಂದಷ್ಟೇ ವೇಗದಲ್ಲಿ ಹೆಲ್ಲಾರೋ ಸೆಟ್ಟು ನೋಡಿಕೊಂಡು ವಾಪಸ್ಸು ಹೋದ, ಈ ಹಕ್ಕಿಗಳ ಬಗ್ಗೆ ಸುಳಿವೇ ಇಲ್ಲದ ಆ ಮಂದಿಯನ್ನು ನಾನು ಶಪಿಸುತ್ತಾ, ಸಿಕ್ಕಿದ ಒಂದೆರಡು ಕ್ಲಿಕ್ಕೇ ಪಂಚಾಮೃತ ಎಂದುಕೊಂಡು ಹೆಲ್ಲಾರೋ ಗುಡಿಸಲಿನೊಳಕ್ಕೆ ಬಹಳ ಜಾಗ್ರತೆಯಿಂದ ಜವುಗಿನಲ್ಲಿ ಕಾಲು ಹುಗಿಸಿಕೊಳ್ಳದಂತೆ ಹೆಜ್ಜೆ ಹಾಕುತ್ತಿದ್ದರೆ ಆ ಬದಿಯಲ್ಲಿ ಅದೇನೋ ಸರ್ಕಸ್ಸು ಮಾಡಿ ಕಾಲು ಹುಗಿಸಿಕೊಂಡು ಶೂ ಪೂರ್ತಿ ಕೆಸರಾಗಿದ್ದ ಕಾಲು ಹೊತ್ತು ಮಹೇಶ ಪೆಕರುಪೆಕರಾಗಿ ನಗುತ್ತಿದ್ದ.

ʻಇದೇನೋ, ಹೆಲ್ಲಾರೋಗೆ ಬಂದು ನಿನ್ನ ಕಾಲು ಹೆಲ್‌ ಆಯ್ತಲ್ಲೋʼ ಎಂದು ನಾನು ನಕ್ಕೆ. ಅಗತ್ಯಕ್ಕೆಂದು ಇಟ್ಟುಕೊಂಡಿದ್ದ ಒಂದು ಕ್ಯಾನು ನೀರೆಲ್ಲ ಕಾಲಿಗೆ ಅಭಿಷೇಕವಾಯಿತು ಎಂಬಲ್ಲಿಗೆ ಆ ದಿನದ ಕಥೆ ಮುಗಿಯಿತು.

‍ಲೇಖಕರು ರಾಧಿಕ ವಿಟ್ಲ

February 21, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಚಳಿಗಾಲದ ದೌಲತ್ತಿನಲ್ಲೊಂದು ನಿಮಿಷ!

ಚಳಿಗಾಲದ ದೌಲತ್ತಿನಲ್ಲೊಂದು ನಿಮಿಷ!

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ...

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಕಥೆಗಳನ್ನು ಹುಡುಕಿಕೊಂಡು ಹೀಗೆ ಸಾಗುವುದು ಇತ್ತೀಚಿಗೆ ನನ್ನ ರೂಢಿಯೇ ಆಗಿ ಹೋಗಿದೆ. ಕಥೆಯ ಹುಡುಕಾಟವೆಂದರೆ ಅದು ಬದುಕಿನ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This