“ಡೋಂಟ್ ಶೂಟ್ ಅವರ್ ರೈನ್ ಬೋ”

door_number142.jpg

“ಡೋರ್ ನಂ 142”

ಬಹುರೂಪಿ

ವತ್ತು ಸ್ಕೂಲಿಂದ ವಾಪಸ್ ಬರ್ತಾ ಇರೋವಾಗ ವಿಚಿತ್ರವಾದ ದೃಶ್ಯ ಕಣ್ಣಿಗೆ ಬಿತ್ತು. ಎಷ್ಟೊಂದು ಜನ ಕೈಯಲ್ಲಿ ಕಪ್ಪು ಕಾಗದ, ಗೋಂದು, ಏಣಿ ಹಿಡ್ಕೊಂಡು ಬೀದೀಲಿರೋ ದೀಪದ ಕಂಬ ಸುತ್ತುತ್ತಿದ್ದರು. ಎಲ್ಲೆಲ್ಲಿ ಬೆಳಕು ಬರೋ ದೀಪ ಇದೆಯೋ ಅಲ್ಲೆಲ್ಲಾ ಏಣಿ ಹಾಕಿ ಹತ್ತಿ ಆ ಕಪ್ಪು ಕಾಗದ ಮೆತ್ತುತಾ ಇದ್ರು.

ಸ್ಕೂಲಿಂದ ಚಡ್ಡಿ ಏರಿಸ್ಕೊಂಡು ಬರ್ತಿದ್ದ ನಮಗೆ ಇದೇನಪ್ಪಾ, ಯಾವ ಲೋಕದಿಂದ ಬಂದ್ರಪ್ಪಾ ಇವರು ಅನಿಸ್ತಿತ್ತು. ಅಲ್ಲೀವರ್ಗೂ ನಾವು ಸಿನಿಮಾ ಪೋಸ್ಟರ್ ಅಂಟಿಸೋವರನ್ನ ನೋಡಿದ್ವಿ. ಅದನ್ನ ನೋಡ್ತಾ ನಿಂತ್ಕೊಳೋದೇ ಒಂದು ಥರಾ ಮಜಾ ಇತ್ತು. ಗೋಡೆ ಮೇಲೆ ಈ ಪೋಸ್ಟರ್ ಗಳು ಇದ್ರೂ ಹೊಸ ಬಣ್ಣದ ಜಗತ್ತಿಗೆ ನಮ್ಮನ್ನ ಎಳಕೊಳ್ತಾ ಇದ್ವು. ಆದರೆ ಈಗ ಗೋಂದು ಹಿಡಿದವರು ಅಂಟಿಸ್ತಾ ಇರೋದು ಬೆಳಕು ಚೆಲ್ಲೋ ದೀಪಗಳನ್ನ. ಅಲ್ಲಾ, ಬೆಳಕು ಬರ್ಲಿ ಅಂತಾ ತಾನೇ ಅಷ್ಟು ಕಷ್ಟಪಟ್ಟು ಹಾದಿ ಬೀದಿ ಗಲ್ಲೀಗೆಲ್ಲಾ ದೀಪ ಹಾಕ್ಸಿದಾರೆ. ಹಾಗಾದ್ರೆ ಈಗ ಆ ಬೆಳಕೇ ಬೇಡ ಅಂತ ಗುದ್ದಾಡ್ತಾ ಇದಾರಲ್ಲಾ ಅನಿಸ್ತು.

brazil.jpg

ಮನೇಗೇ ಓಡೋಡಿ ಬಂದ್ವಿ. ಉಸಿರು ತಗೊಳ್ದೀರಾ ಕೂಗಿದ್ವಿ. ಎಲ್ಲಾ ಕಡೆ ದೀಪಗಳನ್ನ ಮುಚ್ಚಿ ಹಾಕ್ತಾ ಇದ್ದಾರೆ. ಯಾಕೆ ಅಂತ ದೊಡ್ಡಣ್ಣನ್ನ ಕೇಳಿದ್ವಿ. ಯುದ್ಧ ಆರಂಭ ಆಗಿದೆ ಅಂದ್ರು. ಯುದ್ಧ. ಅದುವರೆಗೂ ನಾವು ಈ ಹೆಸರೇ ಕೇಳಿರ್ಲಿಲ್ಲ. ಯುದ್ಧ ಅಂದ್ರೇನು? ಅಂತ ಕೇಳಿದ್ವಿ. ನಮಗೆ ಆಗ ಅಬ್ಬಬ್ಬಾ ಅಂದ್ರೆ ನಮ್ಮ ಕಲ್ಪನೆ ಹಳ್ಳಿ ಥರಾ ಇದ್ದ ಹಳ್ಳಿ ಬಿಟ್ಟು ಪಟ್ಟಣದವರೆಗೂ ಬೆಳೀತಿತ್ತು ಅಷ್ಟೆ. ಏನಾದ್ರೂ ಹೊಸತು ಬಂದರೆ ಬಸ್ ಹಿಡ್ಕೊಂಡು ಅದು ಪಟ್ಟಣದಿಂದಾನೇ ಬರುತ್ತೆ ಅನ್ಕೊಂಡಿದ್ವಿ. ಸರ್ಕಸ್ ಬರೋದು, ನಾಟಕ ಬರೋದು, ರೇಡಿಯೋದವರು ಬರೋರು. ನಮಗೆ ನಮ್ಮ ಹಳ್ಳಿ ಬಿಟ್ರೆ ಬೆಂಗಳೂರು ಅಂತಾ ಒಂದು ಇದೆ ಅಂತ ಅಷ್ಟೇ ಗೊತ್ತಿದ್ದಿದ್ದು. ಎರಡು-ಮೂರನೇ ಕ್ಲಾಸ್ ಗೇ ಯಾರೂ ಜಿಯಾಗ್ರಫಿ ಹೇಳ್ಕೊಡಲ್ಲಾ ಅಲ್ವಾ? ಯಾರಾದ್ರೂ ಅವಾಗ ಬೆಂಗಳೂರು ಆಚೇಗೂ ಬೆಂಗಳೂರು ಅಪ್ಪಂದಿರಂತ ಊರು ಇದೆ ಅಂದಿದ್ದಿದ್ರೆ ಜೋಕ್ ಅಂತ ಚೆನ್ನಾಗಿ ನಕ್ಕು ಬಿಡ್ತಿದ್ವೇನೋ?

ಈಗ್ಲೂ ಹಾಗೇ ಅನಿಸ್ತು. ಬೆಂಗಳೂರಿನವರು ಏನೋ ನಮ್ಮ ಹಳ್ಳಿ ಮೇಲೆ ಮಾಡ್ತಾ ಇದಾರೆ. ಅದಕ್ಕೇ ಇರಬೇಕು ದೀಪಾನೇ ಹತ್ತಿಸಬಾರದು. ಹತ್ತಿಸಿದ್ರೂ ಬೆಳಕು ಬರ್ಬಾದ್ರು ಹಾಗೆ ಮಾಡ್ತಾ ಇದಾರೆ. ನಮ್ಮ ಇಡೀ ಹಳ್ಳಿಯಿಂದಾನೆ ಬೆಳಕು ಕಿತ್ಕೊಂಡು ಹೋಗ್ತಾ ಇದಾರೆ ಅಂತ ಅನಿಸ್ತು. ಅಥವಾ, ಬೆಂಗಳೂರಿನವರಿಗೆ ಕರೆಂಟ್ ಬಿಲ್ ಕೊಟ್ಟಿಲ್ವಾ ಅದಕ್ಕೆ ಬೆಳಕು ಬರೋದಿಕ್ಕೆ ಬಿಡ್ತಿಲ್ವಾ ಅಂತೆಲ್ಲಾ ಅನಿಸ್ತಿತ್ತು.

ನಮ್ಮಣ್ಣನಿಗೆ ಯಾವುದಾದ್ರೂ ವಿಷಯ ಹೇಳ್ಬೇಕು ಅಂದ್ರೆ ಇಷ್ಟ. ಒಂದಿನಾ ಹೊಟ್ಟೆ ಒಳಗೆ ಏನೇನಿರುತ್ತೆ ಅಂತ ಕೇಳಿದ್ವಿ. ಗುಬ್ಬಚ್ಚಿ ಒಂದು ಸತ್ತು ಬಿದ್ದಿದ್ದಾಗ ಅದನ್ನ ಮನೆಗೆ ತಂದು ತುಂಬಾ ಚೆನ್ನಾಗಿ ಡಿಸೆಕ್ಷನ್ ಮಾಡಿ ಏನೇನಿರುತ್ತೆ ಹೊಟ್ಟೇಲಿ ಅಂತಾ ಹೇಳಿಕೊಟ್ಟಿದ್ರು. ಯುದ್ಧ ಅಂದ್ರೇನು ಅಂತ ಕಕ್ಕಾಬಿಕ್ಕಿಯಾಗಿ ನೋಡ್ತಿದ್ವಲ್ಲಾ ಆಗ ಅವರು ಬೆಂಗಳೂರು ಮಾತ್ರ ಅಲ್ಲ. ದೇಶ ಅಂತ ಇರುತ್ತೆ, ಖಂಡ ಅಂತಾ ಇರುತ್ತೆ ಅಂತಾ ಬಾವಿ ಒಳಗೆ ಇರೋ ಕಪ್ಪೇಗೇ ಆಚೆ ಕಡೆ ಒಂದು ಜಗತ್ತು ಅಂತಾ ಇರುತ್ತೆ ಅಂತ ಹೇಳಿ ಕೊಟ್ಟ ಹಾಗೆ ಹೇಳಿ ಕೊಟ್ರು.

ಇಂಡಿಯಾಗೂ ಪಾಕಿಸ್ತಾನಕ್ಕೂ ಯುದ್ಧ ಬಂದ್ಬಿಟ್ಟಿತ್ತು. ಇಂದಿರಾಗಾಂಧಿ ರೇಡಿಯೋದಲ್ಲಿ ಹೇಳಿದ್ರಂತೆ ನಾವು ಖಂಡಿತಾ ಗೆಲ್ತೀವಿ. ಸ್ವಲ್ಪ ಪ್ರಾಬ್ಲಂ ಆಗುತ್ತೆ ತಡಕಳಿ ಅಂತ. ನಮಗೇನು ಗೊತ್ತಿತ್ತು. ಒಂದಿನಾ ಉಪ್ಪಿಟ್ಟು ಮಾಡಿ ಅಂತ ನಮ್ಮಮ್ಮನಿಗೆ ನಾವು ಎಲ್ಲಾ ಪಿಳ್ಳೆಗಳೂ ದುಂಬಾಲು ಬಿದ್ವಿ. ಆದ್ರೆ ಉಪ್ಪಿಟ್ಟು ಮಾಡೋಕೆ ರವೇನೇ ಇಲ್ಲ. ಯಾಕಂದ್ರೆ ಅಂಗಡೀಗೆ ರವೆ ಬರ್ತಾ ಇಲ್ಲ. ಯಾಕಪ್ಪಾ ಅಂದ್ರೆ ಯುದ್ಧ ಅಂತೆ. ನಮಗೋ ಆಶ್ಚರ್ಯ, ಯುದ್ಧ ಬಂದ್ರೆ ಉಪ್ಪಿಟ್ಟು ಯಾಕೆ ಮಾಡಕ್ಕಾಗಲ್ಲಾ ಅಂತಾ.

ಸರೀ, ಆದ್ರೆ ದೀಪಕ್ಕೆ ಯಾಕೆ ಕಪ್ಪು ಕಾಗದ ಅಂಟಿಸ್ತಾ ಇದಾರೆ ಅಂತಾನೇ ನಮ್ಮ ಕುತೂಹಲ. ಪಾಕಿಸ್ತಾನದ ವಿಮಾನ ಹಾರ್‍ತಾ ಬರುತ್ತೆ. ಬಾಂಬ್ ಎಸೀತಾರೆ. ಊರಿಗೆ ಊರೇ ಸುಟ್ಟು ಹೋಗುತ್ತೆ. ಹಂಗಾಗಿ ಪಾಕಿಸ್ತಾನದೋರಿಗೆ ಕನ್ ಫ್ಯೂಸ್ ಮಾಡ್ಬೇಕು. ಊರು ಯಾವುದು ಕಾಡು ಯಾವುದು ಗೊತ್ತಾಗಬಾರದು. ಬೀದಿ ದೀಪ, ಮನೇ ದೀಪ ಎಲ್ಲಾ ಆರಿಸಿಬಿಟ್ರೆ ಅವಾಗ ಯಾವುದೋ ಕಾಡಿರಬೇಕು ಅಂತ ಪಾಕಿಸ್ತಾನದೋರು ಮುಂದೆ ಹೋಗ್ಬಿಡ್ತಾರೆ ಅಂತ ಪ್ಲಾನ್. ಹಂಗೇ ಆಯ್ತು. ಒಂದಿನಾ ಪೇಪರ್ನಲ್ಲೂ ಬಂತಂತೆ. ಮನೆ ದೀಪ ೬ ಗಂಟೆ ಆದ್ಮೇಲೆ ಹತ್ತಿಸಬೇಡಿ ಅಂತ. ನಾವು ಇದ್ದ ಹಳ್ಳೀನಲ್ಲಿ ಎಲ್ಲಾರ ಮನೇನೂ ಅಷ್ಟೆ. ದೀಪಾನೇ ಹತ್ತಿಸ್ತಾ ಇರ್ಲಿಲ್ಲ. ಗಂವ್ ಅನ್ನೋ ಕತ್ಲು. ನಮಗೆ ಪಾಠ ಓದ್ಬೇಕು. ಏನ್ಮಾಡೋದು ಸಣ್ಣದಾಗಿ ಚಿಮಣಿ ದೀಪ ಬರ್ತಿತ್ತು. ಒಂದು ದೀಪದಲ್ಲೇ ಬುಟ್ಟಿ ಒಳಗೆ ಸೇರಿಕೊಳ್ಳೋ ಎಲ್ಲಾ ಕೋಳಿ ಮರಿಗಳ ಥರಾ ಸೇರ್ಕೊಂಡು ಪಾಠ ಓದ್ತಾ ಇದ್ವಿ.

ಅದಕ್ಕಿಂತಾ ಹೆಚ್ಚಾಗಿ ಕತ್ತಲು ನಮಗೆ ತುಂಬಾ ಭಯ ಹುಟ್ಟಿಸೋದು. ಒಂದು ರೂಮು ಸೇರ್ಕೊಂಡು ಬಿಟ್ರೆ ಸಾಯಂಕಾಲ ಆದ್ಮೇಲೆ ಇನ್ನೊಂದು ಕಡೇಗೆ ಹೋಗ್ತಾನೆ ಇರ್ಲಿಲ್ಲ. ಟಾಯ್ಲೆಟ್ ಗೆ ಹೋಗ್ಬೇಕು ಅಂದ್ರೂ ಭಯಾ ಆಗೋದು.

ಒಂದಿನಾ ನಮ್ಮನೆ ಹಿಂದಿನ ಭಾವೀನಲ್ಲಿ ರಾತ್ರಿ ೧೧ ಗಂಟೆ ಅಷ್ಟೊತ್ತಿಗೆ ರಾಟೆ ದಢದಢಾ ಶಬ್ದ ಮಾಡ್ತು. ಯಾರೋ ನೀರು ಸೇದುತಾ ಇದ್ರು ಅನ್ಸುತ್ತೆ. ತಕ್ಷಣ ನೋಡು ಬೇಕಂತಾನೇ ನೀರು ಸೇದುತಾ ಅವ್ರೆ. ಲೈಟ್ ಹಾಕಿದ್ರೆ ಎಲ್ಲಾರೂ ಬೈತಾರೆ. ಆದ್ರೂ ಹೆಂಗಾದ್ರೂ ಮಾಡಿ ಆ ವಿಮಾನದಲ್ಲಿರೋರಿಗೆ ಸುದ್ದಿ ಗೊತ್ತಾಗುಬಿಡಬೇಕು. ಇದು ಕಾಡಲ್ಲ ಊರು ಅಂತ. ಅದಕ್ಕೆ ಅವರಿಗೆ ಕೇಳಿಸ್ಲಿ ಬಾಂಬ್ ಹಾಕ್ಲಿ ಅಂತ ಅವ್ರು ಬೇಕಂತಾನೇ ರಾತ್ರಿ ನೀರು ಸೇದೋ ಥರಾ ನಾಟ್ಕಾ ಮಾಡ್ತಾವ್ರೆ ಅಂದ್ರು. ಮಾರನೇ ದಿನಾ ನೋಡಿದ್ರೆ ಅಕ್ಕದ ಮನೆ ಪಕ್ಕದ ಮನೆ ಓಣೀನಲ್ಲಿ ಎಲ್ಲಾ ಕಡೇ ನೀರು ಸೇದಿದ್ದೇ ಸುದ್ದಿ.

ಅವತ್ತು ಸ್ಕೂಲ್ ನಲ್ಲಿ ಬೆಳಗ್ಗೆ ಬೆಳಗ್ಗೇನೇ ಸ್ವೀಟ್ ಹಂಚ್ತಾ ಇದ್ರು. ಯುದ್ಧದಲ್ಲಿ ನಾವು ಗೆದ್ದುಬಿಟ್ವಂತೆ. ಬಾವುಟಾ ಹಾರಿಸಿದ್ರು. ಹಾಡು ಹೇಳಿಸಿದ್ರು. ಯಾಕೋ ಅವತ್ತಿಂದ ನನ್ನ ಒಳಗೆ ಯುದ್ಧ ಅನ್ನೋದು ಕೂತುಬಿಟ್ಟಿದೆ. ಅಷ್ಟೇ ಅಲ್ಲಾ ಅವತ್ತು ಬಾವೀಲೀ ನೀರು ಸೇದಿದ್ರಲ್ಲಾ ಅವರು ನೀರು ಬೇಕು ಅಂತ ಸೇದಿದ್ರಾ ಇಲ್ಲಾ ಯುದ್ಧ ಆಗ್ಲಿ ಅಂತಾ ಸೇದಿದ್ರಾ ಅಂತಾ ಎಷ್ಟೋ ವರ್ಷ ನನ್ನ ತಲೇಲಿ ಗಿರಕಿ ಹೊಡೀತಾ ಇತ್ತು.

ಯುದ್ಧ ಅಂದ್ರೆ ಸುಮ್ನೆ ಆಗುತ್ತಪ್ಪಾ. ಅದು ದೊಡ್ಡೋರ್ದು ವಿಷಯ ಅನ್ಕೊಂಡಿದ್ದೆ. ಉಪ್ಪಿಟ್ಟು ಯಾವಾಗ ಸಿಗ್ಲಿಲ್ಲ ಅವತ್ತು ಯುದ್ಧ ಅಂದ್ರೆ ಏನೇನೋ ಅನಿಸಿತ್ತು. ಒಂದಿನಾ ಹೀಗೆ ಪಾಠ ಓದ್ತಾ ಇದ್ದೆ. ಮನೇನಲ್ಲಿ ಅಣ್ಣ ತಂದ ಪುಸ್ತಕದ ರಾಶಿ ರಾಶೀನೇ ಇತ್ತು. ಪುಟ ತಿರುಗಿಸ್ತಾ ಇದ್ದೆ. ಮುಖಪುಟದಲ್ಲಿ ಏನೋ ಕಾಮನಬಿಲ್ಲು ಚಿತ್ರ ಇತ್ತು. ಒಳಗಡೆ ಒಂದು ಪುಟಾಣಿ ಬರೆದಿರೋ ಡ್ರಾಯಿಂಗ್ ಇತ್ತು. ತುಂಬಾ ದೊಡ್ಡದಾಗಿ ಪ್ರಿಂಟ್ ಮಾಡಿದ್ರು. ಇದರಲ್ಲೇನಿದೆ ಅಂತಾದ್ದು ಇಷ್ಟು ದೊಡ್ಡದಾಗಿ ಪ್ರಿಂಟ್ ಮಾಡಿದಾರೆ ಅಂತಾ ನೋಡಿದೆ. ಅದು ಲೆಕ್ಕ. ಡ್ರಾಯಿಂಗ್ ಥರಾ ಇದೆ ಅಷ್ಟೆ. ಲೆಕ್ಕಾನೂ ತಪ್ಪು. ೩+೧=೦ ಅಂತಾ ಬರೆದಿದ್ರು. ೩+೧ ಸೇರಿದ್ರೆ ನಾಲ್ಕು ಆಗಬೇಕಲ್ಲವಾ. ಆದ್ರೆ ಇದು ಉಲ್ಟಾ. ಸೊನ್ನೆ ಅಂತ ಅನ್ಕೊಂಡು ಕೆಳಗಡೆ ಕಣ್ಣಾಡಿಸಿದೆ. ಅಲ್ಲಿ ಒಂದು ಚಿತ್ರ ಇತ್ತು. ೩ ಅಂತಾ ಬರೆದಿದ್ರಲ್ಲಾ ಅದರ ಕೆಳಗೆ ಅಪ್ಪ, ಅಮ್ಮ, ಒಬ್ಬ ಹುಡುಗನ ಚಿತ್ರ ಇತ್ತು. ಒಂದು ಅಂತ ಬರೆದಿದ್ರಲ್ಲಾ ಅದರ ಪ್ಲೇಸ್ ನಲ್ಲಿ ಒಂದು ಬಾಂಬ್ ಚಿತ್ರ ಇತ್ತು. ಅದರ ಪಕ್ಕದಲ್ಲಿ ಸೊನ್ನೆ ಬರೆದಿದ್ರು.

ನನಗೆ ಏನು ಗೊತ್ತಾಯ್ತೋ, ಏನು ಬಿಡ್ತೋ ಗೊತ್ತಿಲ್ಲ. ಗಾಬರಿಯಾಯ್ತು. ಏನೋ ಕಳ್ಕೊಳ್ಳೋ ಕಥೆ ಇದು ಅನಿಸ್ತು. ಮೂರು ಜನ ಇದ್ರೂ, ಮುನ್ನೂರು ಜನಾ ಇದ್ರೂ, ಮೂರು ಸಾವಿರ ಜನ ಇದ್ರೂ ಒಂದು ಬಾಂಬ್ ಹಾಕ್ಬಿಟ್ರೆ ಅದು ಸೊನ್ನೇನೇ ಅಲ್ವಾ ಉಳಿಯೋದು. ಇದು ಗೊತ್ತಾಯ್ತಲ್ವಾ. ಆಮೇಲೆ ಹೈಸ್ಕೂಲಿಗೆ ಹೋದೆ. ಹಿರೋಶಿಮಾ, ನಾಗಸಾಕಿ ಪಾಠಾನೂ ಆಯ್ತು. ಆಕಾಶದಲ್ಲಿ ಗಾಳಿಪಟ ತೇಲ್ತಾ ಇತ್ತಂತೆ ಅದನ್ನ ಹಿಡಿಯೋಕೆ ಹುಡುಗನಿಗೆ ಕೈಯೇ ಇರ್ಲಿಲ್ಲ ಅಂತ ಓದಿದ್ನಾ. ಪಾಪ ಅನಿಸ್ತು.

ಒಂದಿನಾ ಬುಕ್ ಷಾಪ್ ನಲ್ಲಿ ಪುಸ್ತಕ ಹುಡುಕ್ತಾ ನಿಂತಿದ್ದೆ. ಅದೇ ಪುಸ್ತಕ ಸಿಕ್ಕಿ ಬಿಡಬೇಕಾ. ನಾನು ಯಾವಾಗ್ಲೋ ನೋಡಿದ್ದು. ಪುಟ ತೆಗೆದರೆ ಅದೇ ತಪ್ಪು ತಪ್ಪು ಲೆಕ್ಕದ ಡ್ರಾಯಿಂಗ್. ಪುಸ್ತಕದ ಹೆಸರು ಡೋಂಟ್ ಶೂಟ್ ಅಟ್ ಅವರ್ ರೈನ್ ಬೋ ಅಂತ. ಸುಸ್ತಾಗಿ ಹೋದೆ. ಆಮೇಲೊಂದಿನಾ ಒಬ್ಬ ಪುಟ್ಟ ಹುಡುಗಿ ಕಥೆ ಓದ್ತಾ ಇದ್ದೆ. ಅವಳ ಸ್ಕೂಲೂ ಸಹಾ ಸುಟ್ಟು ಹೋಯ್ತಂತೆ. ಅವಳ ಸ್ಕೂಲ್ ಮೇಲೆ ಬಾಂಬ್ ಬಿತ್ತಂತೆ. ಅವಳು ಇವಾಗ್ಲೂ ಅಂದ್ರೆ ತುಂಬಾ ವಯಸ್ಸಾದ ಮೇಲೂ ಆ ಸ್ಕೂಲ್ ಇರೋ ಜಾಗಕ್ಕೆ ಹೋಗ್ತಾಳಂತೆ. ಅವಳ ಆಟದ ಸಾಮಾನು ಹಾಗೇ ಇದೆಯಾ ಹುಡುಕ್ತಾಳಂತೆ.

ಅದನ್ನ ಓದಿದ ತಕ್ಷಣ ನಂಗೂ ಅನಿಸ್ತು. ನನ್ನ ಸ್ಕೂಲ್ಗೂ ಹೋಗ್ಬೇಕು. ಆ ಊರ್ಗೂ ಹೋಗ್ಬೇಕು. ನಾನಿದ್ದ ಮನೇನೂ ನೋಡ್ಬೇಕು. ಬೀದಿ ದೀಪಕ್ಕೆ ಅಂಟಿಸಿದ್ರಲ್ಲಾ ಕಪ್ಪು ಪೇಪರ್ ಅದು ಹಾಗೇ ಇದೆಯಾ ತೆಗೆದಿದಾರಾ ನೋಡ್ಬೇಕು. ಅಂಗಡಿಗೆ ಹೋಗಿ ಹುಡುಕ್ಬೇಕು. ರವೆ ಸ್ಟಾಕ್ ಇದೆಯಾ ಇಲ್ವಾ ಅಂತ. ಬಾವೀನಲ್ಲಿ ನೀರು ತೆಗೀವಾಗ ಹುಷಾರಾಗಿರ್ಬೇಕು.

ಎಷ್ಟೋ ಸಲಾ ಅನಿಸೋದು ಅಂಗಡೀನಲ್ಲಿ ರವೆ ಇದೆ ಅಂದ್ರೆ ಯುದ್ಧ ನಡೀತಿಲ್ಲ ಅಂತ. ಅಂಗಡೀನಲ್ಲಿ ರವೆ ಇಲ್ಲಾ ಅಂದ್ರೆ ಇವತ್ತು ಇಂದಿರಾಗಾಂಧಿ ರೇಡಿಯೋದಲ್ಲಿ ಭಾಷಣ ಮಾಡ್ತಾರೆ ಅಂತ. ಅದಿರ್ಲಿ ಈಗ ಪಿಲ್ಸ್ ಬರಿ, ಅನ್ನಪೂರ್ಣ ಗೋದಿಹಿಟ್ಟು, ರವೆ ಎಲ್ಲಾ ಪ್ಯಾಕೇಟಲ್ಲಿ ಸಿಗುತ್ತಲ್ಲ ಹೆಂಗೆ ಗೊತ್ತಾಗುತ್ತೆ ಯುದ್ಧ ನಡೀತಿದ್ಯಾ ಇಲ್ವಾ ಅಂತ.

‍ಲೇಖಕರು avadhi

February 6, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಡೋರ್ ನಂ ೧೪೨: ಇವು ಶಬ್ದಚಿತ್ರಗಳು

ಡೋರ್ ನಂ ೧೪೨: ಇವು ಶಬ್ದಚಿತ್ರಗಳು

ಉದಯಕುಮಾರ್ ಹಬ್ಬು 'ಡೋರ್ ನಂ 142' ಈ ಕೃತಿ ನಮ್ಮೆಲ್ಲರ ಮನೆ ಮನದ ಡೋರ್ ನಂ ಆಗಿಬಿಟ್ಟಿದೆ. ನಮೆಲ್ಲರ ಬಾಲ್ಯದ ನೆನಪುಗಳು, ಹದಿಹರೆಯದ ಬಿಸಿ,...

ಯಾವುದೀ ಪ್ರವಾಹವು…

ಯಾವುದೀ ಪ್ರವಾಹವು…

ಡೋರ್ ನಂ 142 ಬಹುರೂಪಿ   ಮುಖ ಮುಖವೂ ಮುಖವಾಡವ ತೊಟ್ಟು ನಿಂತ ಹಾಗಿದೆ ಆಡುತಿರುವ ಮಾತಿನೊಳಗೆ ಹೃದಯ ಕಾಣದಾಗಿದೆ ಯಾವುದೀ ಪ್ರವಾಹವು... ರೇಡಿಯೋ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This