ತಂತ್ರಜ್ಞಾನದ ಎದುರು ಹಳ್ಳಿಗಾಡಿನವರು

desi.jpg

ಮೊಗಳ್ಳಿ ಗಣೇಶ್

ಗತ್ತು ಯಾವಾಗಲೂ ನಿರ್ದಯವಾಗಿರುತ್ತದೆ. ಒಂದಿಷ್ಟು ಅರ್ಜಿಗಳನ್ನು ಒಟ್ಟು ಹಾಕಿ ಕೆಲವರನ್ನು ಮಾತ್ರ ಕ್ರೂರವಾಗಿ ಆಯ್ದುಕೊಳ್ಳುತ್ತದೆ. ಈ ರೀತಿ ಸಾರಾಸಗಟಾಗಿ ನಿರಾಕರಿಸುವ ಜಗತ್ತಿಗೆ ಎದುರು ಸಿಕ್ಕಿರುವವರು ನಾವು, ಹಳ್ಳಿಯಿಂದ ಬಂದವರು. ಅತ್ಯಂತ ಚಿಕ್ಕ ಗ್ರಾಮದ ಕಿರು ಓಣಿಯಿಂದ ಬಂದು, ಪೇಟೆಯ ವಿಶಾಲ ರಸ್ತೆ ಮೂಲಕ ಮಾಹಿತಿ ತಂತ್ರಜ್ಞಾನದ ಎದುರು ನಮ್ಮಂಥವರು ದಿಗ್ಭ್ರಾಂತರಾಗಿ ನಿಂತಿದ್ದೇವೆ. “ಜಗತ್ತು”, “ವಿಶ್ವ” ಎಂಬ “ವಿಶಾಲ” ಪರಿಸರ ನಮ್ಮನ್ನು ಕಂಗೆಡಿಸಿದೆ.

ಈ ಸಮಾಜದಲ್ಲೆರಡು ವರ್ಗ. ಒಂದು ತಿಳಿದವರ, ಅಂದರೆ ಐಟಿ ಎಂಬ ಮಾಹಿತಿಯುಗ ತಿಳಿದವರ ವರ್ಗ; ಇನ್ನೊಂದು ಹಳ್ಳಿಯಿಂದ ಬಂದು, ಸಂಸ್ಕೃತಿ, ಸಾಹಿತ್ಯ, ಇತಿಹಾಸ ತಿಳಿದವರ ಪ್ರಪಂಚದ ಪ್ರಕಾರ “ತಿಳಿಯದವರ” ವರ್ಗ. ಇಲ್ಲಿನ ವಿರೋಧಾಭಾವೆಂದರೆ ಐಟಿ ಮಂದಿ ಕೈಯಲ್ಲಿ ಅಧಿಕಾರ ಇರುತ್ತದೆ, ಅವರು ಯಾವತ್ತೂ ಆಳುವ ವ್ಯವಸ್ಥೆ ಜತೆ ಸೇರಿಕೊಂಡಿರುತ್ತಾರೆ. ಉಳಿದವರು ಅಧಿಕಾರ ಇಲ್ಲದೆ, ಆದರ್ಶ ಕ್ರಮದಲ್ಲೇ ಉಳಿದುಬಿಡುತ್ತಾರೆ. ಇದನ್ನು ಮೀರಲು ಏನು ಮಾಡಬೇಕೆಂಬ ಪ್ರಶ್ನೆಗೆ ಗಾಂಧೀಜಿ, ಬಿ.ಆರ್.ಅಂಬೇಡ್ಕರ್, ಕುವೆಂಪು ಅವರು ಬೇರೆ ಬೇರೆ ಕಾಲದಲ್ಲಿ ನೀಡಿದ, ಒಂದೇ ಅರ್ಥ ಧ್ವನಿಸುವ ಉತ್ತರಗಳಿವೆ. ಗಾಂಧೀಜಿ, “ಜಗತ್ತಿನ ಎಲ್ಲಾ ಜ್ಞಾನ, ವಿವೇಕಗಳು ನನ್ನ ಮನೆ ಬಾಗಿಲಿಗೆ ಬರಲಿ. ಆದರೆ ಅದು ನನ್ನ ಮನೆ, ಮಾಡು, ಕಾರ್ಯಗಳನ್ನು ಉರುಳಿಸದಿರಲಿ” ಎಂದರು. ಅಂಬೇಡ್ಕರ್ “ವಸಾಹತುಶಾಹಿ ಜಗತ್ತು ನನ್ನ ಮುಟ್ಟಿಸಿಕೊಳ್ಳದಿದ್ದರೆ, ಇಂಗ್ಲಿಷ್ ಶಿಕ್ಷಣಕ್ಕೆ ತೆರೆದುಕೊಳ್ಳದಿದ್ದರೆ ಇಡೀ ಜಗತ್ತಿಗೆ ಈ ದೇಶದ ಮುಟ್ಟಿಸಿಕೊಳ್ಳದವರ ಸಂಕಟವನ್ನು ನನಗೆ ಹೇಳಲಾಗುತ್ತಿರಲಿಲ್ಲ” ಎಂದರು. ಕುವೆಂಪು, “ಇಂಗ್ಲಿಷ್ ಕಲಿಯದಿದ್ದರೆ, ಜಗದ ಜತೆ ಅನುಸಂಧಾನಕ್ಕಿಳಿಯದಿದ್ದರೆ ನಾನು, ಯಾವುದೋ ಗೌಡರ, ಊಳಿಗರ ನಿರ್ದಿಷ್ಟ ಜೀವನ ಕ್ರಮದಲ್ಲಿ ಕಳೆದುಹೋಗುತ್ತಿದ್ದೆ” ಎಂದರು.

ಅಂದರೆ ನಾವು ಹೊಸ ಕಾಲದ ಸವಾಲುಗಳನ್ನು ಎದುರಿಸಲು ಡಾರ್ವಿನ್ನನ “ವಿಕಾಸವಾದ” ತತ್ವವನ್ನು ಇನ್ನೊಮ್ಮೆ ನೆನಪಿಸಿಕೊಳ್ಳಬೇಕು. ಆ ತತ್ವ, “ಯಾವುದು ತನ್ನ ಪರಿಸರದೊಂದಿಗೆ ಅತ್ಯುತ್ತಮ ಹೊಂದಾಣಿಕೆ ಮಾಡಿಕೊಳ್ಳುತ್ತದೋ ಅದು ಬದುಕುಳಿಯುತ್ತದೆ”. ಈ ಹೊಂದಾಣಿಕೆ ನಿಸರ್ಗದ ಜೈವಿಕ ಸರಪಳಿಯ ಹಾಗೆ. ಎಲ್ಲರೊಳಗಿದ್ದೂ, ಎಲ್ಲರಿಗಿಂತ ಭಿನ್ನ ನೆಲೆಯನ್ನು ಹುಡುಕಿಕೊಳ್ಳುವುದು. ಕುವೆಂಪು, ಗಾಂಧೀಜಿ ಕೂಡಾ ಇದೇ ಅರ್ಥದಲ್ಲಿ ಮೇಲಿನ ಮಾತನಾಡಿರುವುದು.

ಹಾಗಾದರೆ ಸವಾಲು ಎದುರಿಸುವ ಬಗೆ ಎಂತು? ನಾವು ಮತ್ತೆ ನಮ್ಮ ಸಂಸ್ಕೃತಿಗೆ ಮರಳುವುದು. ನಮ್ಮಜ್ಜಿ ಹೇಳುತ್ತಿದ್ದ ರಾಜ ರಾಣಿಯರ ಸಾಮಾನ್ಯ ಕತೆ ಟಾಲ್ ಸ್ಟಾಯ್ ಕತೆಗೇನೂ ಕಡಿಮೆ ಇಲ್ಲ. ಶೇಕ್ಸ್ ಪಿಯರ್ ನಾಟಕಗಳ ಮೂಲ ದ್ರವ್ಯ ಜನಪದ ಕತೆ, ಪುರಾಣ. ಜಗತ್ತಿನ ಎಲ್ಲಾ ದೊಡ್ಡ ಲೇಖಕರು ಮೊರೆ ಹೋಗಿದ್ದು ಹಳೆಕಾಲದ ಜನಪದ ಕತೆ, ಪುರಾಣಗಳಿಗೆ. ಮಾಸ್ತಿ ಕತೆ ಕಟ್ಟುವುದನ್ನು ಕಲಿತಿದ್ದು ನಮ್ಮ ಜನಪದದಿಂದ. ಹೊಸ ಜಗತ್ತಿನ ಸ್ಪರ್ಧೆಗೆ, ಸವಾಲಿಗೆ ಎದುರು ನಿಲ್ಲುವುದಕ್ಕೆ ಗ್ರಾಮೀಣ ಜಗತ್ತಿಂದ ಬಂದ ಪ್ರತಿಯೊಬ್ಬರೂ ಅರ್ಹರು. ಅದು ಹೇಗೆಂಬುದನ್ನು ಕುವೆಂಪು ನಿಖರವಾಗಿ ತೋರಿಸಿದ್ದಾರೆ. ಏಕಲವ್ಯ ಕುವೆಂಪು ಅವರಿಗೆ, ಬಹುದೊಡ್ಡ ಸಾಧ್ಯತೆ. ಒಬ್ಬ ಗಾಂಢೀವಿ ಅರ್ಜುನನೆಂಬ “ತಿಳಿದ” ಜಗತ್ತಿನ ಎದುರು, ಆಸ್ಥಾನದಲ್ಲಿ ಕಲಿಯದೇ ತನ್ನ ಸ್ವಯಂ ವಿವೇಕದಿಂದ ಬಿಲ್ವಿದ್ಯೆ ಕಲಿತ ಏಕಲವ್ಯ ಶ್ರೇಷ್ಠ. ಒಬ್ಬ ಏಕಲವ್ಯ ಈ ಸಮಾಜದ ಜ್ಞಾನದ ಬೆಳಕಾಗಿ, ಅಲಕ್ಷಿತ ದನಿಗಳಿಂದೆದ್ದು ಬಂದ ಪ್ರಖರ ನ್ಯಾಯ ನಿರ್ಮಾತೃವಾಗಿ ಕಾಣುತ್ತಾನೆ. ಕುವೆಂಪು ಅವರ “ಜಲಗಾರ” ಕೂಡಾ ಕಾವ್ಯದ ನಾಯಕನಾಗಿ, ಕನ್ನಡ ಸಾಹಿತ್ಯದಲ್ಲಿ ಚಾರಿತ್ರಿಕ ಪಲ್ಲಟವನ್ನುಂಟು ಮಾಡುವವನಾಗಿ ಕಾಣುತ್ತಾನೆ. ಇವೆಲ್ಲಾ ಗ್ರಾಮೀಣ ಪ್ರತಿಭೆಗಿರುವ ಸಾಮರ್ಥ್ಯ ಹಾಗೂ ನಮ್ಮ ಸಂಸ್ಕೃತಿಗಿರುವ ಸಾಧ್ಯತೆಯ ಪ್ರತೀಕ. ಇಡೀ ದೇಶದ ಉಸಿರಾಟ, ನರನಾಡಿ, ರಕ್ತ ಸಂಚಾರ ಇರುವುದು ಗ್ರಾಮೀಣ ಭಾರತದಲ್ಲಿ; ಅನಕ್ಷರ ಜಗತ್ತಿನ ಒಳಗೆ ಈ ದೇಶವನ್ನು ಬಿಂಬಿಸುವ ಚೈತನ್ಯವಿದೆ.

ಈಗ ನಾವು ಮಾಡಬೇಕಾಗಿರುವುದು: ಮುಂದಿನ ಹೆಜ್ಜೆ ಇಡುವುದನ್ನು ಕಲಿಯಬೇಕಾದರೆ, ಹಿಂದಿನ ಹೆಜ್ಜೆಯನ್ನು ಮೊದಲು ತಿಳಿಯುವುದು. ಅಲ್ಲಮಪ್ರಭು ಹೇಳುವಂತೆ, “ಹಿಂದಣ ಹೆಜ್ಜೆಯನರಿಯದವರು ಮುಂದಣ ಹೆಜ್ಜೆಯನರಿಯರು”. ಹಳ್ಳಿಗಾಡಿನ ಜ್ಞಾನ ಜಗತ್ತನ್ನು ಮರುಸೃಷ್ಟಿ ಮಾಡಿದ ಮಾಸ್ತಿಯವರ “ಆಧುನಿಕ ಜಗತ್ತಿನ ಜನಪದ ಕತೆ”ಗಳ ಬಗ್ಗೆ, ತಮ್ಮೆರಡು ಕಾದಂಬರಿಗಳಲ್ಲಿ ಗ್ರಾಮ್ಯ ಜಗತ್ತು ಕಟ್ಟಿಕೊಟ್ಟ ಕುವೆಂಪು ಬಗ್ಗೆ… ಹೀಗೆ ಪೂರ್ವಿಕರ ಬಗ್ಗೆ, ಪೂರ್ವ ಸಾಹಿತ್ಯದ ಬಗ್ಗೆ ತಿಳಿಯಬೇಕು. ಹಳೆಕಾಲದ ತಿಳಿವಳಿಕೆಯನ್ನು ಹೊಸ ಕಾಲಕ್ಕೆ ತಕ್ಕಂತೆ ಪರಿಕ್ಷರಣೆ ಮಾಡಿಕೊಂಡು ಎಚ್ಚರಿಕೆಯಿಂದ ಬಳಸಿಕೊಳ್ಳಬೇಕು.

ಸಿದ್ಧಲಿಂಗಯ್ಯ ಸೃಷ್ಟಿಸಿದ ಕವಿತೆಗಳು ಅಡಿಗರ ಕಾವ್ಯಕ್ಕಿಂತ ಮುಖ್ಯ ಎಂದೇಕೆ ಅನಿಸುತ್ತದೆ? ದೇವನೂರು ಮಹಾದೇವರ ಕತೆಗಳು ಅಷ್ಟು ಪ್ರಧಾನವೇಂದೇಕೆ ಆಗುತ್ತದೆ? ಸಾಹಿತ್ಯದ ಲೆಕ್ಕಾಚಾರದಿಂದ ನೋಡಿದರೆ ಸಿದ್ಧಲಿಂಗಯ್ಯ ಕವಿಯೇ ಅಲ್ಲ; ದೇವನೂರರ ಕತೆಗಳು ಸಾಹಿತ್ಯಕ ಕ್ರಮದಲ್ಲಿ ಬರೆದ ಗದ್ಯವೇ ಅಲ್ಲ. ಆದರೆ ಸಾಹಿತ್ಯದ ಮಡಿವಂತಿಕೆ ಮುರಿಯುವುದರಲ್ಲಿ ಅವರು ಮುಖ್ಯ ಆಗುತ್ತಾರೆ. ಹಾಗೆ ಬರೆಯುವ ಒತ್ತಡವನ್ನು ಈ ಸಮಾಜ ನಿರ್ಮಾಣ ಮಾಡಿತು.

ಇನ್ನು ವಿಶ್ವ ಶ್ರೇಷ್ಠ ನಟ ಚಾರ್ಲಿ ಚಾಪ್ಲಿನ್ ನೋಡಿ. ಆತನ ತಾಯಿ ನರ್ತಕಿ, ವೇಶ್ಯೆ. ಕ್ಲಬ್ ಗಳಲ್ಲಿ ನೃತ್ಯ ನಡೆಯುವಾಗ ಉಳ್ಳವರು ಎಸೆಯುವ ನಾಣ್ಯ ಎತ್ತಿಕೊಳ್ಳಲು ಬಾಲಕ ಚಾರ್ಲಿ ಪ್ರವೇಶಿಸುತ್ತಿದ್ದ. ಆತ ಬರುವ ಶೈಲಿ, ನಾಣ್ಯ ಎತ್ತಿಕೊಳ್ಳುವ ಭಂಗಿಗಳೇ ಜನರನ್ನು ನಕ್ಕು ನಗಿಸುತ್ತಿದ್ದವು. ಕ್ರಮೇಣ ಜನ ಅವನ ನಟನೆ ನೋಡಲು ಬರತೊಡಗಿದರು. ಹೀಗೆ ಸಾಮಾಜಿಕ ಅಪಮಾನವನ್ನು ತನ್ನ ಅಭಿವ್ಯಕ್ತಿಯ ಕ್ರಮವಾಗಿ ರೂಢಿಸಿಕೊಂಡು ವಿಶ್ವಪ್ರಸಿದ್ಧನಾದವನು ಚಾರ್ಲಿ. ಹೊಸ ಕಾಲದ ಸವಾಲುಗಳಿಗೆ ನಾವು ಎದುರಾಗಬೇಕಾಗಿರುವುದೂ ಈ ತೆರನಾಗಿಯೇ. ಅಂದರೆ ಹಳ್ಳಿಗಾಡಿನವರ ಸಣ್ಣ ಅಪಮಾನವನ್ನು ಕಲೆಯಾಗಿ ಪರಿವರ್ತಿಸಿಕೊಂಡಾಗ ಜಗತ್ತಿಗೆ ಬೇಕಾದ ದೊಡ್ಡ ತಿಳಿವಳಿಕೆಯಾಗಿ ಅದು ಮಾರ್ಪಾಟಾಗಬಹುದು. ನಮ್ಮ ಅಪಮಾನವನ್ನು ಚಿತ್ರಕಲೆ, ಸಾಹಿತ್ಯ, ಸಂಗೀತ, ನಾಟಕ ಇತ್ಯಾದಿ ಪ್ರಕಾರಗಳ ಮೂಲಕ ದಾಖಲಿಸುತ್ತಾ ಹೋದಾಗ ಅದು ಈ ಸಮಾಜಕ್ಕೆ ಬೇಕಾದ ಎಚ್ಚರವಾಗಿ, ವಿವೇಕವಾಗಿ ಪರಿಣಮಿಸಬಹುದು.

ಇನ್ನು ಬೇಕಾದುದು ಒಂದಷ್ಟು ಹೊಣೆಗಾರಿಕೆ ಮತ್ತು ಸಮಾಜವಾದ ಎಚ್ಚರ. ಮತೀಯವಾದ, ಧಾರ್ಮಿಕವಾದ ಎಚ್ಚರ, ಹೊಸ ಕಾಲದ, ಹೊಸ ಬಗೆಯ ಶೋಷಣೆ ಕುರಿತ ಎಚ್ಚರ ಮುಖ್ಯ. ಜಗತ್ತಿನ ತಂತ್ರಜ್ಞಾನ ನಿರ್ಮಿಸುವ ಅಂತರವನ್ನು ಹೇಗೆ ಹೋಗಲಾಡಿಸಿಕೊಳ್ಳಬೇಕು? ನಮ್ಮ ಹಳ್ಳಿಗಾಡಿನ ತಿಳಿವಳಿಕೆಯನ್ನು ಆಧುನಿಕ ತಂತ್ರಜ್ಞಾನ ನುಂಗಿ ಹಾಕುವುದಾದರೆ ಅದರ ಜತೆ ಹೇಗೆ ಜಗಳ ಮಾಡಬೇಕು? ಜಗಳ ಪ್ರಯೋಜನವಿಲ್ಲವೆಂದಾಗ ಸ್ನೇಹ ಹೇಗೆ ಸಾಧ್ಯ? ಎಂಬ ಜಿಜ್ಞಾಸೆ ಅಗತ್ಯ. ಇದಕ್ಕೆಲ್ಲಾ ಪರಾಮರ್ಶನಾ ಪಠ್ಯವಿಲ್ಲ. ನಮ್ಮರಿವೇ ಗುರು, ಅನುಭವವೇ ಸಾಧನ. ನಮ್ಮ ನಾಳೆಗಳನ್ನು ಹಸನಾಗಿಸಲು ಈ ನಿಟ್ಟಿನಲ್ಲಿ ಆಲೋಚಿಸಬೇಕು.

“ಹಂಗಾಮ” ಪುಟದಿಂದ

‍ಲೇಖಕರು avadhi

January 12, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

೧ ಪ್ರತಿಕ್ರಿಯೆ

 1. basavakumar t.n

  preethiya mogally ganesh
  neevu barediruvdu chennagide mattu aalochanege hachhuvan
  hachhutide aadre neevu ondu vishaya gamaninsiddiro illavo
  illavo gottilla,i.t athava b.t e eradu kshetrad hechhinavaru
  hechhina jana halligaadinavaru,dollar ,pound hinde od
  odavaru.
  basavkumar.mangalore

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: