ತಂದೆ ನೀನೇಕೆ ನನಗೆ ನಗೆಯ ಕೊಡಲಿಲ್ಲ?

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ..

ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು. 

‘ಸಂಯುಕ್ತ ಕರ್ನಾಟಕ’ ‘ವಾರ್ತಾ ಬಾರತಿ’ಯಲ್ಲಿ ಅಂಕಣ ಬರೆದ ರಂಗನಾಥರಾವ್ ಅವರು ‘ಅವಧಿ’ಯ ಆಹ್ವಾನವನ್ನು ಮನ್ನಿಸಿ ತಮ್ಮ ಮಾಧ್ಯಮ ಲೋಕದ ಪಯಣದ ಬಗ್ಗೆ ಬರೆಯಲಿದ್ದಾರೆ. 

ನಾನು ಈ ಅಂಕಣವನ್ನು ನನ್ನದೊಂದು ಕಥೆಯಿಂದಲೇ ಪ್ರಾರಂಭಿಸುತ್ತಿದ್ದೇನೆ. ಹನ್ನೊಂದು ವರ್ಷಗಳ ಹಿಂದೆ ಬರೆದ ಈ ಕಥೆ: ‘ನಾನು ಉತ್ತರ ಕುಮಾರನಲ್ಲ’. ಜಯಂತ ಕಾಯ್ಕಿಣಿಯವರು ಇದನ್ನು ಮೂರೇ ಪುಟಗಳ ಆತ್ಮಕಥನ ಎಂದು ಅದರ ನಾಡಿ ಹಿಡಿದುಬಿಟ್ಟರು. ಬುದ್ಧಿಭಾವಗಳನ್ನೆಲ್ಲ ನಿಷ್ಕಾರುಣ್ಯದಿಂದ ಅದುಮಿಟ್ಟು ಕಲ್ಲುಮನಸ್ಸಿನಿಂದ ನನ್ನ ಅಂತರಂಗವನ್ನು ಹಿಂಡಿದಾಗ ತೊಟ್ಟಿಕ್ಕಿದ ಕಥೆ ಇದು.

1942 ಜನವರಿ ಭೂಮಿಗೆ ಬಿತ್ತು ಪ್ರಾರಬ್ಧ. ಅತ್ತಿದ್ದೇ ಅತ್ತಿದ್ದು, ಅಂದಿನಿಂದ ಇಂದಿನವರೆಗೆ. ಮುಖದ ಮೇಲೆ ನಗೆಯ ‘ಮುಖ’ವಿಲ್ಲ (ತಂದೆ ನೀನೇಕೆ ನನಗೆ ನಗೆಯ ಕೊಡಲಿಲ್ಲ?).

ಹರೋಹಳ್ಳಿ, ತಾವರೇಕೆರೆ, ಕೃಷ್ಣರಾಜಪುರ, ಮಂಚನಬೆಲೆ, ಅಣೆಕೆಂಪಯ್ಯನದೊಡ್ಡಿ, ಚಿಕ್ಕಸೂಲಿಕೆರೆ, ಲಕ್ಷ್ಮೀಪುರ, ಮಾಗಡಿ, ಜಡಿಗೇನಹಳ್ಳಿ, ಹೊಸಕೋಟೆ ಇತ್ಯಾದಿ ಎಲ್ಲೆಲ್ಲೋ ಅಂಡೆಲೆದೆ ಬಾಲ್ಯ. ಸ್ಕೂಲಿದ್ದಲ್ಲಿ ಓದು, ಇಲ್ಲದಿದ್ದಲ್ಲಿ ದನಕಾಯುವುದು, ಹಿಟ್ಟಿಗೆ ಅಂಬಲಿಗೆ ಹೊನ್ನೆಸೊಪ್ಪು ಕಿತ್ತು ತರುವುದು, ಸುಗ್ಗಿ ಕಣದಲ್ಲಿ ಒಂದು ಮೊರ ರಾಗಿಗಾಗಿ, ಬ್ರಾಹ್ಮಣನಾಗಿ `ಐನೋರ ಕಾಣಿಕೆ’ಗೆ ಕಾಯುತ್ತ ನಿಲ್ಲುವುದು.

ವರ್ಗವಾದ ಹಳ್ಳಿಗಾಡಲ್ಲೆಲ್ಲ ಬಾಲ್ಯದ ಇದೇ ಪಯಣ. ಮೂರನೇ ಕ್ಲಾಸಿನಲ್ಲಿ ಓದುತ್ತಿರುವಾಗ, `ಗಾಂಧಿಯನ್ನು ಕೊಂದರು’ ಸುದ್ದಿ ಅರುಹಿದ ಮೇಷ್ಟ್ರು `ರಜೆ ಮನೆಗೆ ಹೋಗಿ’ ಎಂದು ಶಾಲೆಗೆ ಬೀಗ ಹಾಕಿದರು. ಎಲ್ಲರೂ ಅಳುವುದ ಕಂಡು ಅಳುತ್ತಾ ಮನೆ ಸೇರಿದ್ದು.

ಗಾಂಧಿಯನ್ನು ಯಾರು ಕೊಂದರು? ಏಕೆ ಕೊಂದರು?

“ಅದೆಲ್ಲ ಬೇಡ. ಕೊಲೆಗಡುಕರ ಸಂಘ ಸೇರ ಬೇಡ”

ತಂದೆ ಕಲಿಸಿದ ಮೊದಲ ಪಾಠ.

“ಸುಳ್ಳು ಹೇಳ ಬೇಡ, ಸತ್ಯವನ್ನೇ ನುಡಿ, ಪ್ರಮಾಣಿಕನಾಗಿರು. ದುಡಿಮೆಯೇ ದೇವರು, ಸತ್ಯವೇ ತಾಯಿತಂದೆ” ಮೋಟು ಬೀಡಿ ಸೇದಿ ಸಿಕ್ಕಿಬಿದ್ದಾಗ ಗಿಣ್ಣಗಿಣ್ಣ ಮೇಲೆ ಹೊಡೆದು ತಂದೆ ಕಲಿಸಿದ ಎರಡನೆಯ ಪಾಠ.

ದಟ್ಟಿ ಪಂಚೆ ಮೇಷ್ಟ್ರು ಲ್ಯಾಬಿನಲ್ಲಿ ಪರಿಮಳನ ಲಂಗದೊಳಗೆ ಕೈ ಗಿರಕಿ ಆಡಿಸಿದಾಗ ಪ್ರತಿಭಟಿಸಿ ಹುಡುಗರ ಜೊತೆ ಸೇರಿ ಮುಷ್ಕರ ಮಾಡಿದ್ದು, ನಿಂಗೆ ಈ ಜನ್ಮದಲ್ಲಿ ಲೆಕ್ಕ ತಲೆಗೆ ಹತ್ತಲ್ಲ ಎಂದು ಗಣಿತದ ಮೇಷ್ಟ್ರು ಎಚ್ಚೆನ್ ಎಲ್ಲರೆದುರು ಮುಖ ಮುರಿದಾಗ `ಲೆಕ್ಕದ ಮನೆ ಎಕ್ಕ್ಹುಟ್ಟೋಗ’ ಎಂದು ಗಣಿತದಲ್ಲಿ 35 ತೆಗೆದು ಕೊನೆಗೂ ಎಸ್ಸೆಸ್‍ಎಲ್ಸಿ ಪಾಸಾಗಿ ಉದ್ಯೋಗವೋ ಕಾಲೇಜಿಗೋ ಎಂದು ಬೆಂಗಳೂರಿಗೆ ಹೋದದ್ದು, ಬಿ.ಎ. ಪಾಸಾದದ್ದು ಒಂದು ಪವಾಡವೇ!

ಓದೋದುತ್ತಲೇ ಕೆಲಸ. ಸಬ್ ರಿಜಿಸ್ಟ್ರಾರ್ ಆಫೀಸು, ಡಿ.ಸಿ.ಆಫೀಸು ಇತ್ಯಾದಿ. ಸಬ್ ರಿಜಿಸ್ಟ್ರಾರ್ ಆಫೀಸಿನಲ್ಲಿ ಸಬ್ ರಿಜಿಸ್ಟ್ರಾರ್ ನಂಜಯ್ಯ ತಿಂಗಳ ಸಂಬಳದ ಜೊತೆ ಪ್ರತಿ ದಿನ ಸಂಜೆ ಕೈಯ್ಯಲ್ಲಿಡುತ್ತಿದ್ದ ಗಿಂಬಳ.

ಕತ್ತಲ ಕೋಣೆಯಲ್ಲಿ ದಫ್ತರುಗಳ ಮಧ್ಯೆ ಪತ್ರಗಳನ್ನು ಕಾಪಿ ಮಾಡಿದ್ದೇ ಮಾಡಿದ್ದು. ನಾನಾ ಬಗೆಯ ಪತ್ರಗಳು, ಆಸ್ತಿ ನೋಂದಣಿ, ಕ್ರಯ ಪತ್ರ, ಎನ್ಕಂಬ್ರೆನ್ಸು, ವ್ಯಕ್ತಿ ಸತ್ತ ಮೇಲೂ ರಿಜಿಸ್ಟರ್ ಮಾಡುವ ಉಯಿಲುಗಳು… ಒಂದೊಂದಕ್ಕೂ ಒಂದೊಂದು ರೇಟು.

ಸಂಬಳದೊಂದಿಗೆ ಗಿಂಬಳವನ್ನೂ ತಂದೆಯ ಕೈಗೆ ಒಪ್ಪಿಸಿದಾಗ ಅವರು ಕೆಂಡಾಮಂಡಲವಾದರು.

“ಅದು ಅಮೇಧ್ಯ. ಮುಟ್ಟಬಾರದು” ಎಂದು ಬಿಸಾಡಿದರು.

“ತ್ರಿಕರಣ ಶುದ್ದವಾಗಿಟ್ಟುಕೊ, ಕೈಯ್ಯಿ, ಬಾಯಿ, ಕಚ್ಚೆ ಶುದ್ಧವಿರಲಿ. ನಾಳೆಯಿಂದ ಅವರು ಕೊಟ್ಟರೂ ಇಸಕೊಬೇಡ. ಬೇರೆ ಕೆಲಸ ನೋಡ್ಕೊ.”

ಇದು ತಂದೆ ಕಲಿಸಿದ ಮೂರನೆಯ ಪಾಠ.

ಸಬ್‍ರಿಜಿಸ್ಟ್ರಾರ್ ಆಫೀಸಿಗೆ ಕೊನೆಯ ನಮಸ್ಕಾರ ಹೇಳಿದೆ. ಎಚ್.ಎ.ಎಲ್, ಐಟಿಐ, ಎನ್.ಸಿ.ಸಿ, ಅಕೌಂಟ್ಸ್ ಕಂಟ್ರೊಲರ್ ಆಫೀಸು ಹೀಗೆ ಅಲೆಮಾರಿ ಕೆಲಸ. ಶೋಷಣೆಗೆ ಧಿಕ್ಕಾರ, ವರದಕ್ಷಿಣೆಗೆ ಧಿಕ್ಕಾರ ಎಲ್ಲ ಮೊಳೆತು ಬೆಳೆದವು. ಮದುವೆಯೂ ಇಲ್ಲದೆ, ಕೆಲಸವೂ ಇಲ್ಲದೆ ಅರಳದೆ ನಿಂತ ತಂಗಿಯರ ಕಂಗೆಡಿಸುವ ನೋಟ. ತಂದೆತಾಯಿಯರ ಅಸಹಾಯಕತೆ. ನನ್ನಲ್ಲಿ ನೆಟ್ಟ ನಿರೀಕ್ಷೆಯ ನೋಟ.

ಸಿಟ್ಟು, ಕ್ರೋಧ, ನೋವು ಆವೇಶಗಳಲ್ಲಿ ಸುಟ್ಟುಕೋತ ಹೋದ ಹಾಗೆ ಎದೆಗೆ ಬಂದರು ಕಾರ್ಲ್ ಮಾಕ್ಸ್, ಶೇಕ್ಸ್ ಪಿಯರ್, ಕೀಟ್ಸ್, ಲೋಹಿಯಾ, ಅನಕೃ, ಕಾರಂತ, ಕುವೆಂಪು, ಅಡಿಗ, ಎಲಿಯೆಟ್ಟು, ಕಾಮು, ಕಾಫ್ಕ, ಲಾರೆನ್ಸ್…

ನಿಲ್ಲದ ತವಕ, ಆತಂಕ, ಸ್ಥಿರ ಸ್ಥಾವರವಾಗುವ ಹೆದರಿಕೆ-ಹೊಯ್ದಾಟಗಳ ಅಭಿವ್ಯಕ್ತಿಗೆ ಪೆನ್ನು ಆಸರೆಯಾಗಿ ಬಂತು.

ಬರವಣಿಗೆಯೇ ವೃತ್ತಿ ಪ್ರವೃತ್ತಿಯಾಗಿ ಖಾತ್ರಿ ಆದಾಗ ಬರೆದದ್ದೇ ಬರೆದದ್ದು. ಕಥೆ, ಕಾದಂಬರಿ ಬರೆದದ್ದು, ವಿಮರ್ಶೀಸಿದ್ದು, ಪರಾಮರ್ಶಿಸಿದ್ದು, ಟೀಕಿಸಿದ್ದು, ಸಂಪಾದಕೀಯಗಳಲ್ಲಿ ಸ್ಫೋಟಿಸಿದ್ದು, ಟೀಕೆ-ಟಿಪ್ಪಣಿಗಳ ಕೆಂಗಣ್ಣಿಗೆ ಗುರಿಯಾದದ್ದು, ಮಕ್ಕಳ ಅಪಹರಣದ ಬೆದರಿಕೆ ಬಂದಾಗಲೂ ಬೆದರಿಕೆಗಳಿಗೆ ಜಗ್ಗುವವನಲ್ಲ ಎಂದು ಇನ್ನಷ್ಟು ಪೆನ್ನು ಮಸೆದದ್ದು, ಅಧಿಕಾರವಲಯಗಳಲ್ಲಿ ಪ್ರಭಾವ ಇದ್ದಾಗ ಒಂದಿಷ್ಟು ಆಸ್ತಿ ಮಾಡಿಕೊಳ್ಳಬಾರದೆ ಎಂಬ ಸಲಹೆ, ಆಗ್ರಹಗಳಿಗೆ ಸೊಪ್ಪು ಹಾಕದೆ ದಿವ್ಯ ನಿರ್ಲಕ್ಷ್ಯ ತೋರಿದ್ದು, ಪ್ರಭಾವ ಇರುವಾಗ ಒಂದು ವರ್ಗ ಮಾಡಿಸಿಕೊಡಲಿಲ್ಲ, ಸೈಟು, ಜಮೀನು ಕೊಡಿಸಲಿಲ್ಲ ಎಂಬ ನೆಂಟರಿಷ್ಟರ ಕೋಪದ ಕೆಂಗಣ್ಣಿಗೆ ಗುರಿಯಾದದದ್ದು…

ನಿವೃತ್ತಿ ವಯಸ್ಸಾದರೂ ಆರದ ಉರಿ. ಕೊರಡು ಕೊನರುವುದೂ ಇಲ್ಲ, ಉರಿ ಆರುವುದೂ ಇಲ್ಲ. ನಿಧಾನ ಸುಟ್ಟುಕೋತ ಹೋದ ಕೊರಡು. ಆದಿ ಇದೆ, ಅಂತ್ಯ ಇದೆ. ಮಧ್ಯೆ ಮುಗಿಯದ ಅಧ್ಯಾಯ, ಕಾಮಾ, ಫುಲ್‍ಸ್ಟಾಪುಗಳಿಲ್ಲದ ಗೊಂಡಾರಣ್ಯ-

ಕಾಮಾಕ್ಕೂ ಫುಲ್‍ಸ್ಟಾಪ್  ಇದ್ದೀತು

ಆಶ್ಚರ್ಯಸೂಚಕಗಳಿಗೆ ಫುಲ್‍ಸ್ಟಾಪ್  ಉಂಟೆ?

ಕೊಲೆ ಯಾಕೆ ಮಾಡಬಾರದು?

ಲಂಚ ಯಾಕೆ ತಗೋಬಾರದು?

ಪರಸ್ತ್ರೀಯರನ್ನ ಯಾಕೆ ಅಪಹರಿಸಬಾರದು?

ತ್ರಿಕರಣ ಶುದ್ಧಿ ಯಾಕಿರಬೇಕು?

ಕೈಯ್ಯ, ಬಾಯಿ, ಕಚ್ಚೆ ಶುದ್ಧಿ ಯಾಕೆ ಬೇಕು?

ಸುಳ್ಳೇಕೆ ಹೇಳಬಾರದು?

ಗಿಫ್ಟ್ ಯಾಕೆ ತಗೋಬಾರದು?

ಅಕ್ಷರ ವ್ಯಭಿಚಾರ ಯಾಕೆ ತಪ್ಪು?

ಚೂರಿ ತಿವಿತದ ಎಳೆಯ ಕಣ್ಣುಗಳ ನಾಚದ, ಹೇಸದ ನಿರ್ಭೀತ ಪ್ರಶ್ನೆಗಳು.

‘ಏಜ್ ಡಿಮಾಂಡೆಡ್ ಆನ್ ಇಮೇಜ್’ ಎಂದ ಆಂಗ್ಲ ಕವಿ ಎಜ್ರಾ ಪೌಂಡ್. ಕಾಲ ನಿರ್ದಯವಾದದ್ದು, ಅದು ತನಗೆ ಬೇಕಾದ್ದನ್ನು ಎಷ್ಟೇ ಕಠೋರವಾದರೂ ಸರಿಯೇ ಪಡೆದುಕೊಳ್ಳುತ್ತದೆ. ಯುಗದ ಅಂತಃಸತ್ವವೇ ಅದರ ಪ್ರತಿಮೆ. ಅನೀತಿಯೇ ಆಚಾರ ಎಂಬುದು ಈ ಯುಗದ ಅಂತಃಸತ್ತ್ವವಿದ್ದೀತು… ಒಂದು ಪ್ರತಿಮೆ, ಪ್ರತೀಕವಾಗಿ ಅನೀತಿ ಮೆರೆಯುತ್ತಿರುವ ಈ ಕಾಲಘಟ್ಟದಲ್ಲಿ ಇಂಥ ಪ್ರಶ್ನೆಗಳೆಲ್ಲ ಉದ್ಭಿಸುವುದರಲ್ಲಿ ಆಶ್ಚರ್ಯವೇನೂ ಇರಲಾರದು.

ನಾನು ‘ಪ್ರಜಾವಾಣಿ’ಯಿಂದ ನಿವೃತ್ತಿ ಹೊಂದಿದ ನಂತರ ಭಾರತೀಯ ವಿದ್ಯಾ ಭವನದ ಕಾಲೇಜಿನಲ್ಲಿ ಹಾಗೂ ಸರ್ಕಾರಿ ಕಲಾ ಕಲೇಜಿನಲ್ಲಿ ಪತ್ರಿಕಾ ವ್ಯವಸಾಯ ಮತ್ತು ಸಂವಹನ ಕಲೆ ಬೋಧಿಸುವ ಅವಕಾಶ ದೊರೆಯಿತು.

ಪತ್ರಿಕಾಧರ್ಮ, ನೀತಿ ನಿಯಮಗಳು, ತತ್ವಾದರ್ಶಗಳು, ಡಿ.ವಿ.ಜಿ, ತಿ.ತಾ.ಶರ್ಮ, ಮಿಸೋರಿ ವಿಶ್ವವಿದ್ಯಾನಿಲಯದ ವಾಲ್ಟರ್ಸ್ ವಿಲಿಯಮ್ಸ್‍ನ ಪ್ರತಿಜ್ಞಾ ವಿಧಿ ಇತ್ಯಾದಿಗಳನ್ನೆಲ್ಲ ಪಾಠ ಮಾಡುತ್ತಿದ್ದಾಗ ವಿದ್ಯಾರ್ಥಿಗಳು ಇಂಥ ಪ್ರಶ್ನೆಗಳನ್ನೆಲ್ಲ ಕೇಳುತ್ತಿದ್ದರು ಅದರಲ್ಲಿ ನನಗೆ ಆಶ್ಚರ್ಯವೇನೂ ತೋರುತ್ತಿರಲಿಲ್ಲ.

ಅವರು ವೃತ್ತಿ ಜೀವನದ ಹೊಸ್ತಿಲಲ್ಲಿ ನಿಂತಿದ್ದ ಎಳೆಯರು. ಆದರೆ ಪ್ರಭಾವಿ ಪತ್ರಿಕೆಯೊಂದರಲ್ಲಿ ಹತ್ತಾರು ವರ್ಷಗಳ ಕಾಲ ಕೆಲಸ ಮಾಡಿದ ಹಿರಿಯ ಸಹದ್ಯೋಗಿಯೊಬ್ಬರು ಇಂಥ ಪ್ರಶ್ನೆ ಕೇಳಿದಾಗ `ಕಾಲ’ದ ಪ್ರಭಾವ ಎಷ್ಟು ಮಾರಣಾಂತಿಕವಾಗಿ ವ್ಯಾಪಿಸಿದೆ ಎಂಬ ಸತ್ಯ ಅರಿವಾಗಿ ಆಘಾತವಾಯಿತು.

ಇಂದಿನ ಮಾಧ್ಯಮದ ವಿದ್ಯಾರ್ಥಿಗಳನ್ನು “ಪತ್ರಿಕಾ ವೃತ್ತಿಯಲ್ಲಿ ನೀನು ಏನಾಗ  ಬಯಸುವೆ?” ಎಂದು ಕೇಳಿದರೆ ಬರುವ ಉತ್ತರ “ವರದಿಗಾರ.” ನನ್ನ ಬಹುಪಾಲು ವಿದ್ಯಾರ್ಥಿಗಳ ಕನಸೂ ಇದೇ ಆಗಿತ್ತು. ವರದಿಗಾರನಾಗಬೇಕು, ಮೊದಲ ದಿನವೇ ವಿಧಾನಸೌಧ ಅಥವಾ ಕ್ರೈಂ ಬೀಟ್ ಸಿಗಬೇಕು.

ಸಚಿವರು, ಶಾಸಕರುಗಳು, ಅಧಿಕಾರಿಗಳ ಸಾಮೀಪ್ಯ ಸಾಧಿಸಬೇಕು ಎನ್ನುವುದೇ ಅನೇಕರ ಮಹದಾಸೆಯಾಗಿರುತ್ತದೆ. ಈ ಸಾಮೀಪ್ಯ ತರುವ ಲಾಭಸೌಲಭ್ಯಗಳ ಬಗ್ಗೆ ನಾನು ಹೇಳಬೇಕಿಲ್ಲ. ಪತ್ರಿಕೋದ್ಯಮದಲ್ಲಿ ವರದಿಗಾರನೇ ಸರ್ವಸ್ವ,  ಅವನು ಸರ್ವಶಕ್ತ ಎನ್ನುವ ಅಭಿಪ್ರಾಯ ಅಧಿಕಾರವಲಯದಲ್ಲಿ ಬಲವಾಗಿ ಬೇರೂರಿ ಬಿಟ್ಟಿದೆ.

ಇವರಲ್ಲಿ ಅನೇಕರಿಗೆ ಪತ್ರಿಕೆಯ ಆತ್ಮವಾದ ಸಂಪಾದಕೀಯ ನೀತಿ, ಸಂಪಾದಕೀಯ ಪುಟ ರೂಪಿಸುವ ಸಂಪಾದಕ, ಸಹಾಯಕ ಸಂಪಾದಕ, ಉಪಸಂಪಾದಕ ಇವರುಗಳ ನಿರ್ಣಾಯಕ ಪಾತ್ರದ ಅರಿವೇ ಇರುವುದಿಲ್ಲ. ನಾನು ಸೇರಿದಾಗ ಮತ್ತು ಬಹುಮಟ್ಟಿಗೆ ನಿವೃತ್ತನಾಗುವವರೆಗೆ ನಾನು ಕೆಲಸ ಮಾಡಿದ ಪತ್ರಿಕೆಗಳಲ್ಲಿ ಸಂಪಾದಕೀಯ ನೀತಿ ಎಂಬುದೊಂದು ಇತ್ತು.

ಈಗ ಒಂದು ಪತ್ರಿಕೆಯ ಸಂಪಾದಕೀಯ ನೀತಿ ಏನೆಂಬುದನ್ನು ದೀಪ ತೆಗೆದುಕೊಂಡು ಹುಡುಕಬೇಕಾಗಿದೆ. ಈಗ ಭಾರತದ ಬಹುತೇಕ ಪತ್ರಿಕೆಗಳಲ್ಲಿ ಸಂಪಾದಕರೇ ಇರುವುದಿಲ್ಲ, ಇದ್ದರೂ ಮಾಲೀಕರೇ ಸಂಪಾದಕರಾಗಿರುತ್ತಾರೆ. ಸಂಪಾದಕೀಯ ನೀತಿಯೂ ಇರುವುದಿಲ್ಲ. ಇದ್ದರೂ ಅದು ಮಾಲೀಕರ ಮರ್ಜಿ ಅನುಸಾರವಾಗಿರುತ್ತದೆ.

ಅಧಿಕಾರಿಗಳಲ್ಲಿ, ರಾಜಕಾರಣಿಗಳ ಕಣ್ಣಲ್ಲಿ ವರದಿಗಾರನಿಗಿರುವ ಮಹತ್ವ ಸಂಪಾದಕನಿಗೂ ಇಲ್ಲ, ಸಂಪಾದಕೀಯ ಬರೆಯುವ ಸಹಾಯಕ ಸಂಪಾದಕರಿಗಾಗಲೀ ಬೇರಾರಿಗಾಗಲೀ ಇಲ್ಲ ಎನ್ನುವುದಕ್ಕೆ ಒಂದು ಹಳೆಯ ಪ್ರಸಂಗ ನೆನಪಾಗುತ್ತಿದೆ.

ಎಪ್ಪತ್ತರ ದಶಕ. ಗೋಪಾಲ ಕಣ್ಣನ್ ಎಂಬುವರು ಪ್ರಜಾವಾಣಿಯಲ್ಲಿ ಸಹಾಯಕ ಸಂಪಾದಕರಾಗಿದ್ದರು. ಬಿ.ವಿ.ವೈಕುಂಠ ರಾಜು ಅವರ ಪ್ರಕಾರ ಎಂ.ಎ ಮಾಡಿ ಕನ್ನಡ ಪತ್ರಿಕೋದ್ಯಮಕ್ಕೆ ಬಂದ ಮೊದಲಿಗರು ಗೋಪಾಲ ಕಣ್ಣನ್. ಕಣ್ಣನ್  ಸಾರ್ವಜನಿಕ ಹಿತದ ಕೆಲಸವೊಂದರ ಸಂಬಂಧದಲ್ಲಿ ಸಚಿವಾಲಯದಲ್ಲಿ ಅಧಿಕಾರಯೊಬ್ಬರನ್ನು ಕಾಣ ಬೇಕಿತ್ತು. ಆಗ ಹಿರಿಯ ವರದಿಗಾರರಾಗಿದ್ದ ಸಿ.ವಿ.ರಾಜಗೋಪಾಲ, ಕಣ್ಣನ್ ಅವರನ್ನು ಆ ಅಧಿಕಾರಿ ಬಳಿ ಕರೆದೊಯ್ದು ಪರಿಚಯಿಸಿದರು. ಅಧಿಕಾರಿ ಕೂತ್ಕಳ್ಳಿ ಎಂದರು. ಇದ್ದ ಒಂದೇ ಕುರ್ಚಿಯಲ್ಲಿ ಕಣ್ಣನ್ ಆಸೀನರಾದರು. ಕೂಡಲೇ ಆ ಆಧಿಕಾರಿ “ರೀ, ಏಳ್ರೀ ಮೇಲೆ, ರಾಜಗೋಪಾಲ್ ನೀವು ಕೂತ್ಕೊಳ್ಳಿ” ಎನ್ನಬೇಕೆ.   

ಒಂದು ದಿನ ಒಬ್ಬರು ಉದ್ಯಮಿಗಳಿಂದ ಫೋನ್ ಬಂತು. ನಿಮ್ಮ… ಇವರು ಇದ್ದಾರಲ್ಲ ಅವರಿಗೆ ವಿಧಾನ ಸೌಧದಲ್ಲಿ ಆಗಬೇಕಾದ ಒಂದು ಕೆಲಸ ಹೇಳಿದ್ದೆ. ಸಚಿವರ ಹತ್ತಿರ ಮಾತಾಡ್ತೀನಿ ಎಂದಿದ್ದರು. ಇನ್ನೂ ಆಗಿಲ್ಲ. ನೀವು ಅವರಿಗೆ ಒಂದು ಮಾತು ಹೇಳಬೇಕು. ನೋಡಿ ಸಾರ್ ಅವರಿಗೆ ಮನೆ ಕಟ್ಟಲು ನೂರು ಮೂಟೆ ಸಿಮೆಂಟ್ ಕಳಿಸಿಕೊಟ್ಟಿದ್ದೀನಿ.” ಆ ಮಹಾನುಭಾವನಿಗೆ ಏನು ಉತ್ತರ ಕೊಡಬೇಕು ಎಂದು ತೋಚದಷ್ಟು ಆಘಾತವಾಗಿತ್ತು ನನಗೆ.

ವರದಿಗಾರರು ತಮ್ಮ ಪತ್ರಿಕೆಯ ಪ್ರಭಾವವನ್ನು ಬಳಸಿಕೊಂಡು ಸಚಿವಾಲಯ/ಸರ್ಕಾರಿ ಕಚೇರಿಗಳಲ್ಲಿ ಲೈಸೆನ್ಸು ಇತ್ಯಾದಿ ಕೆಲಸಗಳನ್ನು ಮಾಡಿಸಿಕೊಟ್ಟು ಅದಕ್ಕೆ ಪ್ರತಿಫಲ ಪಡೆಯುತ್ತಾರೆ ಎಂದು ಕೇಳಿದ್ದೆ. ಅದೀಗ ಪ್ರತ್ಯಕ್ಷ ಅನುಭವಕ್ಕೆ ಬಂದಿತ್ತು. ಆ ಪತ್ರಕರ್ತರನ್ನು ಕರೆದು ವಿಚಾರಿಸಿದೆ. ಸಿಮೆಂಟು ತೆಗೆದುಕೊಂಡಿರುವುದು ನಿಜವೆ ಎಂದು ಕೇಳಿದೆ. ಆತ ಎಳ್ಳಷ್ಟೂ ಎಗ್ಗಿಲ್ಲದೆ ಹೌದು ಎಂದು ಒಪ್ಪಿಕೊಂಡರು.

ಖಾಸಗಿ ಕೆಲಸ ಮಾಡಿಸಿ ಕೊಡಲು ಪತ್ರಿಕೆ ಪ್ರಭಾವ ಬಳಸಿದ್ದು, ಅದಕ್ಕೆ ಪ್ರತಿಫಲ ಪಡೆದದ್ದು ತಪ್ಪಲ್ಲವೆ? ಅಪರಾಧವಲ್ಲವೆ? ಎಂದು ಕೇಳಿದೆ. ಆತನಿಗೆ ತಾನು ಮಾಡಿದ್ದು ತಪ್ಪು, ಅಪರಾಧ ಎನ್ನಿಸಿಯೇ ಇರಲಿಲ್ಲ. “ನಾನು ಅಧಿಕಾರಸ್ಥರೊಂದಿಗಿನ ಸ್ನೇಹ, ಸಾಮೀಪ್ಯ ಬಳಸಿಕೊಂಡು ಕೆಲಸ, ಮಾಡಿಸಿಕೊಟ್ಟು ಅದಕ್ಕೆ ಪ್ರತಿಫಲ ಪಡೆದೆ ಇದರಲ್ಲಿ ತಪ್ಪೇನಿದೆ” ಎಂಬುದೇ ಆತನ ತರ್ಕ.

ಅಧಿಕಾರಸ್ಥರೊಂದಿಗಿನ ಸ್ನೇಹ ಸಾಮೀಪ್ಯಗಳು ಈ ಪತ್ರಿಕೆಯಿಂದಾಗಿ ಬಂದದ್ದಲ್ಲವೆ? ಇದರಿಂದ ಪತ್ರಿಕೆಯ ಪ್ರಭಾವವನ್ನು ದುರುಪಯೋಗ ಪಡಿಸಿಕೊಂಡಂತಾಗಲಿಲ್ಲವೆ ಎನ್ನುವುದನ್ನು ಒಪ್ಪಲು ಆತ ತಯಾರಿರಲಿಲ್ಲ. ನಮ್ಮ ಪೀಳಿಗೆಯೇ ಹೀಗೆ ಭ್ರಷ್ಟವಾಗಿದ್ದಾಗ ಈಗಿನ ಯುವ ಪೀಳಿಗೆ “ಲಂಚ ತೆಗೆದುಕೊಳ್ಳುವುದರಲ್ಲಿ ಏನು ತಪ್ಪು? ಪತ್ರಕರ್ತರಾದ ನಾವೂ `ಭೋಗ ಜೀವನ ಅಪೇಕ್ಷಿಸುವದರಲ್ಲಿ ಏನು ತಪ್ಪು?” ಎಂದು ಕೇಳಿದಾಗ ಅಚ್ಚರಿ, ದಿಗ್ಭ್ರಾಂತಿ ಏಕಾಗಬೇಕು?

August 20, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಾಡಿದ ‘ನಾರಸಿಂಹ’

ಕಾಡಿದ ‘ನಾರಸಿಂಹ’

ಕಿರಣ್ ಭಟ್ ಅಭಿನಯ: ನೃತ್ಯನಿಕೇತನ ಕೊಡವೂರುರಚನೆ: ಸುಧಾ ಆಡುಕಳಸಂಗೀತ, ವಿನ್ಯಾಸ, ನಿರ್ದೇಶನ: ಡಾ.ಶ್ರೀಪಾದ ಭಟ್ನೃತ್ಯ: ಮಾನಸಿ ಸುಧೀರ್,...

ಕಾಲದಾ ಕನ್ನಡಿ

ಕಾಲದಾ ಕನ್ನಡಿ

ವಿಜಯಾ ಮೋಹನ್ ಇದ್ಯಾಕುಡುಗಿ ಇಂಗೆ ಕಂಬ ನಿಂತಂಗೆ ನಿಂತು ಬುಟ್ಟೆ, ಇದು ಕಳ್ಳು ಬಳ್ಳಿಯೆಂಬ ಅತ್ತಿಗೆಯ ದೊಡ್ಡಮ್ಮನ ಮಾತು. ಅವಳು ಅಂಗೆ...

ಕುವೆಂಪು ಮನೆ ‘ಉದಯರವಿ’ಸ್ಮಾರಕವಾಗಲಿ

ಕುವೆಂಪು ಮನೆ ‘ಉದಯರವಿ’ಸ್ಮಾರಕವಾಗಲಿ

ಜಿ ಟಿ ನರೇಂದ್ರ ಕುಮಾರ್ ರಾಷ್ಟ್ರಕವಿ ಕುವೆಂಪು ರವರು ಮೈಸೂರಿನಲ್ಲಿ ಸ್ವತಃ ಕಟ್ಟಿಸಿದ ಬಾಳಿ ಬದುಕಿದ ಮನೆ. ಈ ಮನೆಗೆ ಸರ್ವೋದಯ ಚಳುವಳಿಯ...

3 ಪ್ರತಿಕ್ರಿಯೆಗಳು

 1. Vasudeva Sharma

  ನಿಜ ಸರ್. ಸಚಿವರ ಮನೆಗೆ ಪ್ರಸಿದ್ಧ ಅನಾಥಾಲಯ ಪುಟ್ಟ ಬಾಲಕಿಯನ್ನು ಕೆಲಸಕ್ಕೆ ಕಳುಹಿಸಿದ ಪ್ರಕರಣವನ್ನು ನಿಮ್ಮ ಗಮನಕ್ಕೆ ತಂದಾಗ ನೀವು ತೆಗೆದುಕೊಂಡ ನಿಲುವು ನನಗಿನ್ನೂ ನೆನಪಿದೆ. ಪ್ರಬಾವಿಗಳೊಬ್ಬರು ನಿಮಗೆ ದೂರವಾಣಿ ಕರೆ ಮಾಡಿದರು. ಆಗ ನಾನು ನಿಮ್ಮ ಎದುರು ಇದ್ದೆ. ನೀವು ಆತನಿಗಿತ್ತ ಉತ್ತರ ಹೋರಾಟಕ್ಕೆ ನನಗೆ ಬೆಂಬಲ ಕೊಟ್ಟಿತು.

  ಪ್ರತಿಕ್ರಿಯೆ
 2. ರಾಂ

  ಲೇಖನ ಉತ್ತಮ ಪ್ರಶ್ನೆಗಳನ್ನು ಕೇಳಿದೆ. ಯಾವುದೇ ಉದ್ಯೋಗ, ವ್ಯವಹಾರಗಳಲ್ಲಿ ಅಗತ್ಯವಾಗಿ ಕೇಳಬೇಕಿವನ್ನು. ಮುಂದಿನ ಕಂತಿಗೆ ಕಾಯುತ್ತಿರುವೆ.

  ಪ್ರತಿಕ್ರಿಯೆ
 3. ಎಸ್ ಆರ್ ವಿಜಯಶಂಕರ

  ಜಿ . ಎನ್. ರಂಗನಾಥರಾವ್ ಅವರ ಅಂಕಣ ಓದುತ್ತಿರುವೆ. ಹಿಂದು – ಅಂದುಗಳ ಕಾಲ , ಜೀವನ , ನೈತಿಕತೆ , ಕೌಶಲ್ಯ , ಪ್ರತಿಭೆಗಳ ಅಪರೂಪದ ಆತ್ಮ ಕಥಾ ರೂಪಿ ಅಂಕಣ ಬರಹ. ಮುಂದಿನ ಓದುಗಳಿಗೆ ಕುತೂಹಲಿಯಾಗಿದ್ದೇನೆ. ಕೃತಜ್ಞತೆಗಳು.
  -ಎಸ್ ಆರ್ ವಿಜಯಶಂಕರ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: