ತಂನಂ ತಂನಂ..ಎಂಬುದರ ಬಳಕೆಯೇ ಒಂದು ಅದ್ಭುತ

-ಎ ಆರ್ ಮಣಿಕಾಂತ್

6213_1079515355773_1462958320_30205965_5660699_n

ಚಿತ್ರ: ಎರಡು ಕನಸು. ಗೀತೆರಚನೆ: ಚಿ. ಉದಯಶಂಕರ್.

ಗಾಯನ: ಪಿ.ಬಿ. ಶ್ರೀನಿವಾಸ್, ಎಸ್. ಜಾನಕಿ. ಸಂಗೀತ: ರಾಜನ್-ನಾಗೇಂದ್ರ.

ತಂನಂ ತಂನಂ ನನ್ನೀ ಮನಸು ಮಿಡಿಯುತಿದೇ

ಓ ಸೋತಿದೆ

ಕೈಯಲ್ಲಿ ಕುಣಿವ ಈ ಹೊನ್ನ ಬಳೆಯ

ಘಲ್ ಘಲ್ ಘಲ್ ಘಲ್ ತಾಳಕೆ

ನನ್ನೆದೆಯ ವೀಣೆ ತನ್ನಂತೆ ತಾನೆ

ತಂನಂ ತಂನಂ ಎಂದಿದೆ

ಘಲ್ ಘಲ್ ಘಲ್ ಘಲ್ ತಾಳಕೆ

ತಂನಂ ತಂನಂ ಎಂದಿದೆ ||ಪ||

ನೀ ಸನಿಹಕೇ ಬಂದರೇ ತನುವಿದೂ

ನಡುಗುತಿದೆ ಏತಕೇ, ಎದೆ ಝಲ್ ಎಂದಿದೇ

ಒಲಿದಿಹಾ ಜೀವವೂ ಬೆರೆಯಲೂ

ಮನ ಹೂವಾಗಿ ತನು ಕೆಂಪಾಗಿ ನಿನ್ನಾ ಕಾದಿದೇ ||1||

ನೀ ನಡೆಯುವಾ ಹಾದಿಗೇ ಹೂವಿನಾ

ಹಾಸಿಗೆಯ ಹಾಸುವೇ, ಕೈ ಹಿಡಿದು ನಡೆಸುವೇ

ಮೆಲ್ಲಗೇ ನಲ್ಲನೇ ನಡೆಸು ಬಾ

ಎಂದೂ ಹೀಗೆ ಇರುವಾ ಆಸೆ ನನ್ನೀ ಮನಸಿಗೇ ||2||

ಮಧುರ ಗೀತೆಗಳು ಅಂದಾಕ್ಷಣ, ಇವತ್ತಿಗೂ ಎಲ್ಲರಿಗೂ ತಕ್ಷಣವೇ ನೆನಪಾಗುವುದು ಅಣ್ಣಾವ್ರು ಅಭಿನಯಿಸಿದ ಚಿತ್ರಗಳೇ. ತೆರೆಗೆ ಬಂದ ಡಾ. ರಾಜ್ ಅಭಿನಯದ ಇನ್ನೂರೂ ಚಿಲ್ಲರೆ ಸಿನಿಮಾಗಳ ಪೈಕಿ ಬಹುಪಾಲು ಎಲ್ಲ ಚಿತ್ರಗಳೂ ಯಶಸ್ಸು ಕಾಣಲು ಮಧುರ ಗೀತೆಗಳೂ ಕಾರಣವಾದವು ಎಂಬುದು ಸುಳ್ಳಲ್ಲ. ಈ ಪೈಕಿ ಹೆಚ್ಚಿನ ಮಧುರ ಗೀತೆಗಳ ಹಿಂದಿದ್ದವರೇ ಚಿ. ಉದಯಶಂಕರ್.

13-kalpana13ನವೋದಯ, ನವ್ಯ, ಬಂಡಾಯ ಕವಿತೆಗಳನ್ನು ಮಾತ್ರವಲ್ಲ, ಪೌರಾಣಿಕ ಕಥನಕವನಗಳು, ಸರ್ವಜ್ಞ, ಅಕ್ಕಮಹಾದೇವಿ, ಬಸವಣ್ಣ, ಅಲ್ಲಮಪ್ರಭುವಿನ ವಚನ, ಜಾನಪದ ಕಾವ್ಯ… ಹೀಗೆ ಪ್ರತಿಯೊಂದನ್ನೂ ಓದಿಕೊಂಡಿದ್ದವರು ಉದಯಶಂಕರ್. ಒಂದು ಸಂದರ್ಭದ ತೀವ್ರತೆಯನ್ನು ಹಾಡಿನ ಮೂಲಕ ಹೇಗೆ ಹೆಚ್ಚಿಸಬಹುದು ಎಂಬುದು ಅವರಿಗೆ ತುಂಬ ಚೆನ್ನಾಗಿ ಗೊತ್ತಿತ್ತು. ಹೆಚ್ಚಿನ ಸಂದರ್ಭದಲ್ಲಿ ತಾರೆ, ಚಂದ್ರ, ಹೂವು, ಮುಗಿಲು, ಬೆಳದಿಂಗಳು, ನೈದಿಲೆ… ಮುಂತಾದ ಪದಬಳಕೆಯಿಂದಲೇ ಅವರು ಹಾಡು ಬರೆದರು ನಿಜ. ಆದರೆ, ಹಾಗೆ ಸೃಷ್ಟಿಯಾದ ಎಲ್ಲ ಹಾಡುಗಳೂ ಒಂದಕ್ಕಿಂತ ಒಂದು ಭಿನ್ನವಾಗಿದ್ದವು ಎಂಬುದೂ ಅಷ್ಟೇ ನಿಜ.

ಒಂದು ಚಿತ್ರಗೀತೆಯಲ್ಲಿ ಸಾಮಾನ್ಯವಾಗಿ ಒಂದು ಪಲ್ಲವಿ ಹಾಗೂ ಎರಡರಿಂದ ಮೂರು ಚರಣಗಳಿರುತ್ತವೆ. ಉದಯಶಂಕರ್ ಅವರ ಸ್ಪೆಷಾಲಿಟಿಯೆಂದರೆ, ಅವರು ಯಾವತ್ತೂ ಎರಡೇ ಚರಣ ಬರೆದು ಸುಮ್ಮನಾದವರಲ್ಲ. ಒಂದು ಹಾಡು ಬರೆಯಲು ಕೂತರೆ ಎಂಟು ಚರಣ ಬರೆದಿಡುತ್ತಿದ್ದರಂತೆ; ಅದೂ ಎಕ್ಸ್ಪ್ರೆಸ್ ವೇಗದಲ್ಲಿ. ನಂತರ ಅದನ್ನು ನಿಮರ್ಾಪಕ, ನಿದರ್ೇಶಕ ಹಾಗೂ ಸಂಗೀತ ನಿದರ್ೇಶಕರ ಮುಂದಿಟ್ಟು ನಿಮ್ಗೆ ಯಾವುದು ಇಷ್ಟವಾಗ್ತದೋ ಅದನ್ನು ತಗೊಳ್ಳಿ ಎನ್ನುತ್ತಿದ್ದರಂತೆ. ಸ್ವಾರಸ್ಯವೆಂದರೆ, ಒಂದು ಹಾಡು ಬರೆಯಲು ಉದಯಶಂಕರ್ ತೆಗೆದುಕೊಳ್ಳುತ್ತಿದ್ದುದು ಕೆಲವೇ ನಿಮಿಷಗಳ ಅವ. `ಕವಿರತ್ನ ಕಾಳಿದಾಸ’ದ `ಸದಾ ಕಣ್ಣಲಿ’, `ಸಂಪತ್ತಿಗೆ ಸವಾಲ್’ನ `ಯಾರೇ ಕೂಗಾಡಲಿ’, `ಮಯೂರ’ದ `ನಾನಿರುವುದೇ ನಿಮಗಾಗಿ’, `ತ್ರಿಮೂತರ್ಿ’ಯ `ಮೂಗನ ಕಾಡಿದರೇನು?’, `ಶ್ರುತಿ ಸೇರಿದಾಗ’ ಚಿತ್ರದ `ಬೊಂಬೆಯಾಟವಯ್ಯ’, `ಪ್ರೇಮದ ಕಾಣಿಕೆ’ಯ `ಬಾನಿಗೊಂದು ಎಲ್ಲೆ ಎಲ್ಲಿದೆ?’ ಗೀತೆಗಳೆಲ್ಲ ಉದಯಶಂಕರ್ ಲೇಖನಿಯಲ್ಲಿ ಹತ್ತರಿಂದ ಇಪ್ಪತ್ತು ನಿಮಿಷಗಳಲ್ಲಿ ಅರಳಿದ ಭಾವಕುಸುಮಗಳೇ.

ಎಷ್ಟೋ ಸಂದರ್ಭಗಳಲ್ಲಿ ಪರಿಚಯದ ಯಾರಾದರೂ, ನಿಮಗೆ ಅತ್ಯುತ್ತಮ ಹಾಡು ಬರೆವ ಸಾಮಥ್ರ್ಯವಿಲ್ಲ ಎಂದು ತಮಾಷೆ ಮಾಡಿದರೂ ಸಾಕು; ಆ ಕ್ಷಣದಲ್ಲೇ- `ನನ್ನ ಶಕ್ತಿ ಏನೂಂತ ನಿಮ್ಗೆ ತೋರಿಸ್ತೀನಿ ನೋಡಿ’ ಎನ್ನುತ್ತಾ ಹೊಸದೊಂದು ಹಾಡು ಬರೆದುಕೊಡುತ್ತಿದ್ದರಂತೆ ಉದಯಶಂಕರ್. ಅವರ ಗೀತೆ ರಚನೆಯ ಸಾಮಥ್ರ್ಯ ಎಂಥದೆಂದು ವಿವರಿಸುತ್ತಾ `ಮಲ್ಲಿಗೆ’ ಮಾಸಪತ್ರಿಕೆಯ ಸಂಪಾದಕರೂ, ಉದಯಶಂಕರ್ ಅವರ ಆಪ್ತರೂ ಆದ ಎನ್.ಎಸ್. ಶ್ರೀಧರಮೂತರ್ಿಯವರು `ಚಿರಂಜೀವಿ’ ಪುಸ್ತಕದಲ್ಲಿ ಹೀಗೆ ಬರೆದಿದ್ದಾರೆ: ಅದು, `ಬೆಂಕಿಯ ಬಲೆ’ ಚಿತ್ರದ ಗೀತೆರಚನೆಯ ಸಂದರ್ಭ. ಮದ್ರಾಸಿನ ಸ್ವಾಗತ್ ಹೋಟೆಲಿನಲ್ಲಿ ದೊರೆ-ಭಗವಾನ್ ಅವರೊಂದಿಗೆ ಚಚರ್ೆ ನಡೆಸುತ್ತಿದ್ದರು ಉದಯಶಂಕರ್. ಆಗೆಲ್ಲ ಮಧ್ಯಾಹ್ನ 2:20ರಲ್ಲಿ ರೇಡಿಯೊ ಸಿಲೋನ್ನಲ್ಲಿ ಕನ್ನಡ ಚಿತ್ರಗೀತೆಗಳು ಪ್ರಸಾರವಾಗುತ್ತಿದ್ದವು. ಆ ದಿನಗಳಲ್ಲಿ ಸಿಲೋನ್ ಸ್ಟೇಷನ್ ಹಾಕಿ, ನಿರೂಪಕಿಯ ವಿಚಿತ್ರ ಕನ್ನಡ ಮಾತು ಕೇಳಿ ನಂತರ ಹಾಡಿಗೆ ಕಿವಿಯಾಗುವುದು ಫ್ಯಾಷನ್ ಆಗಿಹೋಗಿತ್ತು. ಅದೊಂದು ಮಧ್ಯಾಹ್ನ ಉದಯಶಂಕರ್, ದೊರೆ-ಭಗವಾನ್ ಮೂವರೂ ರೇಡಿಯೋ ಮುಂದೆ ಕೂತರು. ಒಟ್ಟು ಮೂರು ಗೀತೆಗಳು ಪ್ರಸಾರವಾದವು ನಿಜ. ಆದರೆ ಅವುಗಳಲ್ಲಿ ಉದಯಶಂಕರ್ ರಚನೆಯ ಒಂದು ಹಾಡೂ ಇರಲಿಲ್ಲ. ಇದನ್ನೇ ನೆಪ ಮಾಡಿಕೊಂಡ ಭಗವಾನ್- `ನೋಡ್ರೀ ಉದಯಶಂಕರ್, ನೀವು ಜಾಸ್ತಿ ಹಾಡು ಬರೆದಿದ್ದೀರಿ ನಿಜ. ಆದರೆ ಉತ್ತಮ ಹಾಡುಗಳ ಸಂಖ್ಯೆ ಕಡಿಮೆ. ಹಾಗಾಗಿ ರೇಡಿಯೊ ಸಿಲೋನ್ನಿಂದ ನಿಮ್ಮ ಒಂದು ಹಾಡೂ ಪ್ರಸಾರವಾಗಲಿಲ್ಲ’ ಎಂದರಂತೆ.

ಈ ಮಾತಿಗೆ ತಕ್ಷಣವೇ ಪ್ರತಿಕ್ರಿಯಿಸಿದ ಉದಯಶಂಕರ್- `ಹೌದಾ? ಹಾಗಂತೀರಾ? ಇರಲಿ, ನನ್ನ ಶಕ್ತೀನ ಈಗ ತೋರಿಸ್ತೀನಿ’ ಎಂದು ತಾವು ಬರೆಯುತ್ತಿದ್ದ ಗೀತೆಗೆ ಒಟ್ಟು 24 ಚರಣಗಳನ್ನು ಬರೆದುಕೊಟ್ಟರಂತೆ, ಬರೀ 20 ನಿಮಿಷದಲ್ಲಿ! ಒಂದಕ್ಕಿಂತ ಒಂದು ಚೆಂದವಿದ್ದ ಆ ಚರಣಗಳಿಂದ ಸೃಷ್ಟಿಯಾದ ಹಾಡೇ- `ಬಿಸಿಲಾದರೇನು, ಮಳೆಯಾದರೇನು?’

* * *

13-kalpana13`ಎರಡು ಕನಸು’ ಚಿತ್ರದ `ತಂ ನಂ ತಂ ನಂ ನನ್ನೀ ಮನಸು ಮಿಡಿಯುತಿದೇ…’ ಗೀತೆಯ ಬಗ್ಗೆ ಬರೆಯುವ ಮುನ್ನ, ಉದಯಶಂಕರ್ ಅವರ ಗೀತರಚನೆ ಸಾಮಥ್ರ್ಯದ ಬಗ್ಗೆ ಸ್ವಲ್ಪ ವಿವರವಾಗಿ ಹೇಳಬೇಕಾಯಿತು.

`ಎರಡು ಕನಸು’ ಚಿತ್ರ ತೆರೆಕಂಡದ್ದು 1974ರಲ್ಲಿ. ಅವತ್ತಿನ ಸಂದರ್ಭಕ್ಕೆ ಒಂದು ಹಾಡಿನಲ್ಲಿ ಅತ್ತ ಒಂದು ಪದವೂ ಅಲ್ಲದ, ಇತ್ತ ಬಿಡಿ ಅಕ್ಷರ ಕೂಡ ಅಲ್ಲದ ತಂನಂ ತಂನಂ… ಎಂಬುದರ ಬಳಕೆಯೇ ಒಂದು ಅದ್ಭುತ. ಒಂದು ಕನಸಿನ ಹಾಡಿಗೆ ಅದುವರೆಗೂ ಯಾರೂ ಕೇಳಿರದಂಥ ಸಾಲುಗಳನ್ನು ಹಾಕಲು `ಧೈರ್ಯ’ ಇರಬೇಕಿತ್ತು. ಅದರಲ್ಲೂ ರಾಜ್ಕುಮಾರ್ ಅವರಂಥ ಸೂಪರ್ಸ್ಟಾರ್ ನಟಿಸಿದ್ದ ಚಿತ್ರದಲ್ಲಿ ಇಂಥ ಹಾಡು ಬಳಸಲು ಒಂದೆರಡಲ್ಲ, ಹತ್ತು ಬಾರಿ ಯೋಚಿಸಬೇಕಿತ್ತು. ಈ ಕುತೂಹಲದಿಂದಲೇ ತಂನಂ ತಂನಂ… ಹಾಡು ಸೃಷ್ಟಿಯಾದ ಸಂದರ್ಭದ ಬಗ್ಗೆ ಕೇಳಿದಾಗ ದೊರೆ-ಭಗವಾನ್ ಜೋಡಿಯಲ್ಲಿ ಒಬ್ಬರಾದ ಭಗವಾನ್ ಹೀಗೆಂದರು:

`ಎರಡು ಕನಸು’ `ವಾಣಿ’ ಅವರ ಕಾದಂಬರಿ ಆಧರಿಸಿದ ಸಿನಿಮಾ. ಆ ಚಿತ್ರದ ನಿದರ್ೇಶನ ಮಾತ್ರವಲ್ಲ; ನಿಮರ್ಾಣ ಕೂಡ ನಮ್ಮದೇ. ಆ ಚಿತ್ರದ ನಾಯಕ, ಹಳೆಯ ಪರಿಚಯದ ಹುಡುಗಿಯನ್ನು ಪ್ರೀತಿಸಿರುತ್ತಾನೆ. ಅವಳನ್ನೇ ಮದುವೆಯಾಗಬೇಕು ಅಂದುಕೊಂಡಿರುತ್ತಾನೆ. ಅವನ ಪಾಲಿಗೆ ಅವಳೇ ಜಗತ್ತು. ಅವಳೇ ಬದುಕು. ಹೀಗಿರುವಾಗಲೇ ಆಕಸ್ಮಿಕವಾಗಿ ಆ ಹುಡುಗಿಗೆ ಬೇರೆ ಕಡೆ ಮದುವೆಯಾಗುತ್ತದೆ. ಮುಂದೆ, ತಾಯಿಯ ಒತ್ತಾಯಕ್ಕೆ ಮಣಿದು ನಾಯಕ ಬೇರೊಂದು ಮದುವೆಯಾಗುತ್ತಾನೆ ನಿಜ. ಆದರೆ ಅವನ ಮನದ ತುಂಬಾ ಹಳೆಯ ಗೆಳತಿಯ ಹೆಜ್ಜೆಗುರುತು, ಪಿಸುಮಾತು, ಮುಗುಳ್ನಗೆ, ತುಂಟತನವೇ ಹಚ್ಚೆಯ ಗುರುತಿನಂತೆ ಉಳಿದುಹೋಗಿರುತ್ತದೆ. ಈ ಕಾರಣದಿಂದಲೇ ಕೈ ಹಿಡಿದ ಹಂಡತಿಯನ್ನು ಆದಷ್ಟೂ ಅವಾಯ್ಡ್ ಮಾಡುತ್ತಿರುತ್ತಾನೆ. ಒಂದೇ ಮನೆಯಲ್ಲಿದ್ದರೂ ಅವಳನ್ನು ಆಕಸ್ಮಿಕವಾಗಿಯಾದರೂ ಆತ ಮುಟ್ಟುವುದಿಲ್ಲ. ಮಾತಾಡಿಸುವುದಿಲ್ಲ. ಜತೆಗೆ ಸೇರುವುದಿಲ್ಲ. ಜಗಳ ಮಾಡುವುದೂ ಇಲ್ಲ. ಬದಲಿಗೆ, ಅವಳನ್ನು ಕಂಡರೂ ಕಾಣದಂತೆ ಹೋಗಿಬಿಡುತ್ತಿರುತ್ತಾನೆ. ರಾತ್ರಿ ಬೇಗ ಬಂದರೆ ಅವಳೊಂದಿಗೆ ಮಾತಾಡಬೇಕಾಗುತ್ತದೆ ಎಂಬ ಕಾರಣಕ್ಕೇ ತಡವಾಗಿ ಬರುತ್ತಿರುತ್ತಾನೆ. ಇಷ್ಟಾದರೂ, ಆತನ ಹೆಂಡತಿ, ಗಂಡನ ಒಂದೇ ಒಂದು ಪ್ರೀತಿಯ ಮಾತಿಗಾಗಿ, ಬಾಗಿಲಲ್ಲೇ ಕಾದು ಕೂತಿರುತ್ತಾಳೆ, ನಡುರಾತ್ರಿಯವರೆಗೂ…

ಚೆನ್ನೈನ ಸ್ವಾಗತ್ ಹೋಟೆಲಿನ 108ನೇ ನಂಬರಿನ ಕೊಠಡಿಯಲ್ಲಿ ಕೂತು ಈ ಸನ್ನಿವೇಶ ಕುರಿತು ಚಚರ್ೆ ನಡೆಸಿದೆವು. ಒಂದೆರಡು ನಿಮಿಷ ಸುಮ್ಮನಿದ್ದ ಉದಯಶಂಕರ್ ನಂತರ- `ನೋಡ್ರಿ, ಈ ಸಿನಿಮಾದ ನಾಯಕಿ ವಿಪರೀತ ಕಷ್ಟಪಡ್ತಾಳೆ. ಗಂಡನ ಪ್ರೀತಿಗೆ, ಒಂದು ಅಪ್ಪುಗೆಗೆ, ಪಿಸುಮಾತಿಗೆ ಹಾತೊರೆಯುತ್ತಾ, ಅದು ಸಿಗದಿರುವುದರಿಂದ ಪರಿತಪಿಸುತ್ತಿರುತ್ತಾಳೆ. ಅವಳಿಗೆ ಕನಸಿನಲ್ಲಾದರೂ ಆಕೆ ಬಯಸಿದ ಪ್ರೀತಿ ಸಿಗುತ್ತೆ ಎಂದು ಯಾಕೆ ಕಲ್ಪಿಸಿಕೊಳ್ಳಬಾರದು? ಇಂಥದೊಂದು ಕಲ್ಪನೆ ಇಟ್ಕೊಂಡೇ ಒಂದು ಹಾಡು ಬರೀತೇನೆ. ಅದನ್ನು ಸಿನಿಮಾದಲ್ಲಿ ಬಳಸಿಕೊಳ್ಳೋಣ. ಹೇಗಾದ್ರೂ ಸಿನಿಮಾದ ಹೆಸರೇ `ಎರಡು ಕನಸು’ ಅಂತ ಇರೋದ್ರಿಂದ ಈ ಕನಸಿನ ಹಾಡು ಅದಕ್ಕೆ ಹೊಂದಿಕೊಳ್ಳುತ್ತೆ…’ ಎಂದರಂತೆ.

13-kalpana13ಆಗ ಭಗವಾನ್- `ಸರ್, ನಾನೂ ಈಗ ಇದನ್ನೇ ಯೋಚಿಸ್ತಾ ಇದ್ದೆ. ನಿಮಗೆ ಬಂದ ಯೋಚನೆಯೇ ನನಗೂ ಬಂದಿದೆ. ಕಾಕತಾಳೀಯ ಅಂದ್ರೆ ಇದೇ ಇರಬಹುದು’ ಎಂದರಂತೆ. ನಂತರ ಇಬ್ಬರೂ ರಾಜನ್-ನಾಗೇಂದ್ರರ ಬಳಿ ಹೋಗಿ- `ಹೀಗ್ಹೀಗೆ’ ಎಂದಿದ್ದಾರೆ. ಎಲ್ಲವನ್ನೂ ಕೇಳಿದ ಅವರು – `ವಾಹ್, ವಾಹ್, ಇದೊಂದು ಅದ್ಭುತ ಕಲ್ಪನೆ. ಹಾಡು ಬರೀರಿ ಉದಯಶಂಕರ್’ ಎಂದರಂತೆ.

ತಕ್ಷಣವೇ ಕಥಾನಾಯಕಿಯ ಪಾತ್ರವನ್ನು ಕಣ್ಮುಂದೆ ತಂದುಕೊಂಡರಂತೆ ಉದಯಶಂಕರ್. ಆಕೆ, ಕೈತುಂಬ ಬಳೆ ತೊಟ್ಟು, ತುರುಬಿಗೆ ಹೂ ಮುಡಿದು, ಗಂಡನ ಧ್ಯಾನದಲ್ಲೇ ಕೂತಿರುತ್ತಾಳೆ. ಅದುವರೆಗೂ ಹತ್ತಿರ ಬಾರದ, ಮಾತೇ ಆಡದ, ರಮಿಸದ ಗಂಡ- ಅವತ್ತು ಆಸೆಯಿಂದ ಬಂದು ಅವಳನ್ನು ಬಾಚಿ ತಬ್ಬಿಕೊಳ್ಳುತ್ತಾನೆ. ಹಾಗೆ ತಬ್ಬಿಕೊಂಡೇ ಕೆನ್ನೆ ಸವರುತ್ತಾನೆ. ಅವಳ ಕೈಬಳೆ ನಾದಕ್ಕೆ ಮನಸೋತು ಮುದ್ದು ಮಾಡುತ್ತಾನೆ. ಅವಳೆದೆಯ ಹಾಡಿಗೆ ದನಿಯಾಗುತ್ತಾನೆ. ಇಂಥ ಕ್ಷಣದಲ್ಲಿ ಉಂಟಾಗುವ ಮಧುರ ಭಾವಗಳನ್ನೇ ಹಾಡಾಗಿಸಬೇಕು… ನಿನ್ನ ಪ್ರೀತಿಯ ಮಾತು ಕೇಳಿ ನನ್ನ ಮನವೆಂಬ ವೀಣೆ ತಂತಾನೇ ಮಿಡಿಯುತಿದೆ, ಅದಕ್ಕೆ ಹಿಮ್ಮೇಳದಂತೆ ಕೈಬಳೆ ನಾದ ಕೂಡ ಸೇರಿಕೊಂಡಿದೆ ಎಂದೆಲ್ಲ ಆಕೆ ಹೇಳಿದಂಥ ಭಾವದಲ್ಲಿ ಹಾಡಿರಬೇಕು…

ಹೀಗೆಲ್ಲ ಯೋಚಿಸಿದ ಉದಯಶಂಕರ್, ಯಾವುದೋ ಮೋಡಿಗೆ ಒಳಗಾದವರಂತೆ- `ತಂನಂ ತಂನಂ ನನ್ನೀ ಮನಸು ಮಿಡಿಯುತಿದೇ…’ ಎಂದು ಆರಂಭಿಸಿ ನಂತರದ ಹದಿಮೂರೇ ನಿಮಿಷದಲ್ಲಿ ಇಡೀ ಹಾಡನ್ನು ಪೂರ್ಣಗೊಳಿಸಿದರಂತೆ!

ಮುಂದಿನದು ಇತಿಹಾಸ. `ಎರಡು ಕನಸು’ ಚಿತ್ರ ತೆರೆಕಂಡ ನಂತರ- `ತಂನಂ ತಂನಂ’ ಹಾಡು ಸೂಪರ್ ಹಿಟ್ ಆಯಿತು. ಅದನ್ನು ಹಾಡುವುದು ಅವತ್ತಿನ ಪ್ರೇಮಿಗಳಿಗೆ, ದಂಪತಿಗಳಿಗೆ ಒಂದು ಹವ್ಯಾಸವೇ ಆಗಿಹೋಗಿತ್ತು. ಆ ಹಾಡು ಹುಟ್ಟುಹಾಕಿದ ಕ್ರೇಜ್ ನೆನಪಿಸಿಕೊಂಡು ಭಗವಾನ್ ಈಗಲೂ ಸಂಭ್ರಮದಿಂದ ಹೇಳುತ್ತಾರೆ; `ಉದಯಶಂಕರ್ ಕೈಯಲ್ಲಿ ಸರಸ್ವತಿಯೇ ಇದ್ದಳು ಸಾರ್. ಅಂಥ ಗೀತೆರಚನೆಕಾರರು ಸಾವಿರಕ್ಕೆ ಒಬ್ಬರು…’

ಅವರ ಮಾತಿಗೆ ಸಾಕ್ಷಿಯಾಗಿ ಚಿ.ಉ. ಬರೆದ ಅದೆಷ್ಟೋ ನೂರು ಹಾಡುಗಳಿವೆ. ಸಾಕಲ್ಲವೆ?

‍ಲೇಖಕರು avadhi

July 31, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

'ನಾಗಮಂಡಲ'ದ ಆ ಒಂದು ಹಾಡು

  ಎ ಆರ್ ಮಣಿಕಾಂತ್ ರಾಣಿಯ ಸುಮ್ಮಾನದ ಹಾಡಿಗೆ ಸೂರ್ತಿಯಾದವಳು ಕಣ್ವರ ಶಕುಂತಲೆ! ಈ ಹಸಿರು ಸಿರಿಯಲಿ... ಚಿತ್ರ : ನಾಗಮಂಡಲ        ಗೀತ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This