’ತಗೀ’ – ಸುರೇ೦ದ್ರನಾಥ್ ಅನುವಾದಿಸಿದ ಮಾ೦ಟೊ ಕಥೆ

ಮೇ ೧೧ಕ್ಕೆ ಸಾದತ್ ಹಸನ್ ಮಂಟೋನ ೧೦೦ನೇ ಜನ್ಮ ಶತಾಬ್ದಿ. ಮ೦ಟೋ ನ ನೆನಪಿಗಾಗಿ ಸುರೇ೦ದ್ರನಾಥ್ ಭಾವಾನುವಾದ ಮಾಡಿರುವ ಮ೦ಟೋ ನ ಕಥೆ ನಿಮಗಾಗಿ

ತಗೀ

-ಎಸ್ ಸುರೇಂದ್ರನಾಥ್

  ಮಧ್ಯಾಹ್ನ ಎರಡು ಗಂಟೆಗೆ ಅಮೃತ್ಸರ್ ಬಿಟ್ಟ ಸ್ಪೆಷಲ್ ಟ್ರೇನು ಮುಘಲ್ಪುರ ಮುಟ್ಟಿದಾಗ ರಾತ್ರಿ ಹತ್ತಾಗಿತ್ತು. ದಾರೀಲಿ ಭಾಳಾ ಜನಾನ್ನ ಹೊಡದು ಹಾಕಿದ್ರು. ಇನ್ನೊಂದಿಷ್ಟು ಜನಕ್ಕೆ ಎದ್ದೇಳದ ಹಾಗಿ ಹೊಡೆದಿದ್ರು. ಇನ್ನೂ ಒಂದಷ್ಟು ಜನ ರಾತ್ರೋರಾತ್ರಿ ದಾರಿ ಸಿಕ್ಕ ಕಡೆ ಓಡಿ ಹೋದ್ರು. ಬೆಳಿಗ್ಗೆ ಹತ್ತು ಗಂಟೆಗೆ ಕ್ಯಾಂಪ್ನಲ್ಲಿ ಸಿರಾಜುದ್ದೀನ ಕಣ್ಣು ಬಿಟ್ಟಾಗ ಸುತ್ತ ಎಲ್ಲ ಜನಾವೋ ಜನ. ಬರೇ ಗಂಡಸರು ಮತ್ತು ಹುಡುಗರು. ಎಲ್ಲಿ ನೋಡಿದರಲ್ಲಿ ಗಲಾಟೆ. ತಲೆ ಕೆಟ್ಟುಬಿಟ್ಟಿತು ಸಿರಾಜುದ್ದೀನನಿಗೆ. ಬಹಳ ಹೊತ್ತಿನ ತನಕ ಆಕಾಶವನ್ನೇ ದಿಟ್ಟಿಸಿ ನೋಡುತ್ತಿದ್ದ. ಆ ಕ್ಯಾಂಪ್ ತುಂಬಾ ಕಿವಿ ಹರಿದು ಹೋಗೋ ಹಾಗೆ ಗಲಾಟೆಯಿದ್ರೂ ಸಿರಾಜುದ್ದೀನನ ಕಿವಿ ಮಾತ್ರ ಸೀಸೆ ತುಂಬಿದ ಹಾಗೆ ಥಣ್ಣಗಿತ್ತು. ಏನೂ ಕೇಳ್ತಾಯಿರಲಿಲ್ಲ. ನೋಡಿದೋರಿಗೆ ಅವನು ಯೋಚನೇಲಿ ಮುಳುಗಿದ್ದ ಹಾಗೆ ಕಾಣುತ್ತಿತ್ತು. ನಿಜ ಹೇಳಬೇಕೂಂದ್ರೆ ಅವನಿಗೆ ಪ್ರಜ್ಞೆಯೇ ಇರಲಿಲ್ಲ. ಒಂದು ಹಗ್ಗದಲ್ಲಿ ಆಕಾಶದಿಂದ ತೂಗಿ ಹಾಕಿದಂತಿದ್ದ. ಆಕಾಶವನ್ನೇ ನೋಡುತ್ತಿದ್ದವನಿಗೆ ಇದ್ದಕ್ಕಿದ್ದಂತೇ ಸೂರ್ಯ ಕಂಡಹಾಗಾಯ್ತು. ಕಣ್ಣಿನೊಳಗೆ ಸೂರ್ಯನ ಬೆಳಕು ಇಳಿದ ಹಾಗಾಯ್ತು. ಮೈಯೊಳಗೆ ಸೂರ್ಯ ಇಳಿದ ಹಾಗಾಯ್ತು. ಎದ್ದು ಕೂತ. ಒಂದಷ್ಟು ಚಿತ್ರಗಳು ತುಂಡು ತುಂಡಾಗಿ ಕಣ್ಣ ಮುಂದೆ ಹರಡಿಕೊಂಡವು. ಲೂಟಿ, ದರೋಡೆ, ಬೆಂಕಿ, ಓಡಿದ್ದು, ತಪ್ಪಿಸಿಕೊಂಡಿದ್ದು, ಗುಂಡು ಹೊಡೆದಿದ್ದು, ಕತ್ತಲು. ಮತ್ತೆ ಸಕೀನಾ. ಧಡಕ್ಕಂತ ಪೂರ್ಣ ಎಚ್ಚರವಾಯಿತು. ಸುತ್ತಲೂ ನೋಡಿದ. ಅದೇ ಜನವೋ ಜನ. ಜನಗಳ ಓಡಾಟ. ಅವರ ಮಧ್ಯೆ ಮೈಮೇಲೆ ದೆವ್ವ ಬಂದ ಹಾಗೆ ಹುಡುಕೋದಿಕ್ಕೆ ಶುರು ಮಾಡಿದ. ಮೂರು ಗಂಟೆ ಸಕೀನಾನ್ನ ಹುಡುಕಿದ. `ಸಕೀನಾ…ಸಕೀನಾ’ ಅಂತ ಹುಚ್ಚು ಅರಚುತ್ತಾ ಹುಡುಕಿದ. ಅವನ ಮಗಳ ಸುಳಿವು ಮಾತ್ರ ಎಲ್ಲೂ ಸಿಗಲಿಲ್ಲ. ಆ ಗಲಾಟೇಲಿ ಯಾರೋ ತಮ್ಮ ಕಳೆದು ಹೋದು ಮಕ್ಕಳನ್ನು ಹುಡುಕ್ತಾಯಿದ್ರು. ಇನ್ಯಾರೋ ತಮ್ಮ ಹೆಂಡತೀನ ಹುಡುಕ್ತಾಯಿದ್ರು. ಅಮ್ಮನ್ನ ಹುಡುಕ್ತಾಯಿದ್ರು. ಮಗಳನ್ನು ಹುಡುಕ್ತಾಯಿದ್ರು. ಮೂರು ಗಂಟೆ ಹುಡುಕಿದ ಮೇಲೆ ಕಾಲಿನ ಜೀವ ಹೋಯಿತು. ಒಂದು ಕಡೆ ಕೂತು ಯೋಚನೆ ಮಾಡಿದ. ತಾನೂ ತನ್ನ ಮಗಳು ಬೇರೆಯಾಗಿದ್ದು ಎಲ್ಲಿ, ಎಷ್ಟು ಹೊತ್ತಿಗೆ ಅಂತ. ನೆನಪಿನ ಚಿತೆಗೆ ಎಷ್ಟೇ ಮೀಟುಗೋಲು ಹಾಕಿದರೂ ಅವನಿಗೆ ನೆನಪಾಗುತ್ತಿದ್ದುದು ತನ್ನ ಹೆಂಡತಿಯ ದೇಹ ಮಾತ್ರ. ಒಳಗಿನದೆಲ್ಲಾ ಹೊರಗೆ ಚೆಲ್ಲಿಕೊಂಡು ಬಿದ್ದಿತ್ತು ಆ ದೇಹ. ಆಮೇಲೆ ಏನಾಯ್ತು ನೆನಪಿಲ್ಲ ಅವನಿಗೆ. ಬರೇ ಕಾಲಿನಲ್ಲಿ ಅವನು ಸಕೀನಾ ಓಡ್ತಾಯಿದ್ರು. ಅವಳು ಹೊದ್ದಿದ್ದ ದುಪ್ಪಟ್ಟ ಜಾರಿ ಬಿತ್ತು. ಎತ್ತಿಕೊಳ್ಳಲು ನಿಂತ. ಸಕೀನಾ ಕೂಗಿದ್ಲು, `ಅಬ್ಬಾಜಾನ್, ಬಿಟ್ಟು ಬಿಡದನ್ನ.’ ಆದರೆ ಅವನು ಬಿಡಲಿಲ್ಲ. ತನ್ನ ಮಗಳ ದುಪ್ಪಟ್ಟ ಎತ್ತಿಕೊಂಡೇ ಬಿಟ್ಟ. ಯಾಂತ್ರಿಕವಾಗಿ ಅವನ ಕೈ ಉಬ್ಬಿದ ಪೈಜಾಮ ಜೇಬನ್ನು ಸವರಿತು. ಸಕೀನಾ ದುಪ್ಪಟ್ಟ ಮುದ್ದೆಯಾಗಿ ಜೇಬು ತುಂಬಿಕೊಂಡಿತ್ತು. ಆದ್ರೆ ಅವಳು ಎಲ್ಲಿ? ತಿಣುಕಿದ. ನೆನಪಾಗಲಿಲ್ಲ. ಸಕೀನಾ ಮತ್ತು ತಾನು ಸ್ಟೇಷನ್ ಮುಟ್ಟಿದ್ದೆವಾ? ಅವಳು ತನ್ನ ಜೊತೆ ಟ್ರೇನು ಹತ್ತಿದ್ಲಾ? ಆ ಟ್ರೇನನ್ನ ಜನ ಮುತ್ತಿದರಲ್ಲಾ ಆವಾಗೇನು ತಾನು ಅವಳನ್ನು ಕಳೆದುಕೊಂಡಿದ್ದು? ಅವರೇನಾದರೂ ಅವಳನ್ನ ಹಾರಿಸಿಕೊಂಡು ಹೋದರಾ?…ಯಾವುದೂ ನೆನಪಾಗ್ತಾಯಿಲ್ಲ. ತಲೆ ತುಂಬಾ ಪ್ರಶ್ನೆಗಳು. ಯಾವುದಕ್ಕೂ ಉತ್ತರವಿಲ್ಲ. ಅವನಿಗೆ ಈಗ ಯಾರದ್ದಾದರೂ ಅನುಕಂಪ ಬೇಕಿತ್ತು. ಸುತ್ತಲಿದ್ದ ಜನ ಕೂಡಾ ಅನುಕಂಪ, ಪ್ರೀತಿಗೆ ಹುಡುಕ್ತಾಯಿದ್ದರು. ಅಳೋಕೆ ಪ್ರಯತ್ನಿಸಿದ. ಕಣ್ಣೀರೆಲ್ಲಾ ಬತ್ತಿಹೋಗಿತ್ತೋ ಏನೋ, ಅಳಲು ಆಗಲೇಯಿಲ್ಲ. ಐದಾರು ದಿನಗಳಾದವು. ಮನಸ್ಸು ಸ್ವಲ್ಪ ತಿಳಿಯಾಗಿತ್ತು. ಅವತ್ತೇ ಆ ಪಡ್ಡೆಹುಡುಗರು ಅವನನ್ನು ಭೇಟಿಯಾಗಿದ್ದು. ಎಂಟು ಜನ.. ಒಬ್ಬೊಬ್ಬರ ಕೈಲೂ ಬಂದೂಕು, ಲಾಟಿ, ಕತ್ತಿ ಇದ್ದವು. ಒಂದು ಲಾರಿಯಲ್ಲಿ ತಿರುಗಾಡಿಕೊಂಡಿದ್ದರು. ಸಿರಾಜುದ್ದೀನ ಅವರಿಗೆ ತನ್ನ ಮಗಳ ಗುರುತು ಹೇಳಿದ. `ಸೊಲ್ಪ ಬೆಳ್ಳಗಿದ್ದಾಳೆ. ನೋಡೋಕೆ ಚೆನ್ನಾಗಿದ್ದಾಳೆ. ಥೇಟ್ ಅವರ ಅಮ್ಮನ ಹಾಗೆ. ಹದಿನಾಲ್ಕು ವರ್ಷ ಅವಳಿಗೆ ಇನ್ನೂ. ತಲೆ ತುಂಬಾ ಕಪ್ಪು ಕೂದಲು, ಸೊಂಟದ ತನಕ. ಗಲ್ಲದ ಮೇಲೆ ಬಲಗಡೆ ಇಷ್ಟಗಲ ಒಂದು ಮಚ್ಚೆಯಿದೆ. ಹೇಗಾದ್ರೂ ಮಾಡಿ ಅವಳನ್ನು ಹುಡುಕಿಕೊಡಿ. ನನ್ನ ಒಬ್ಬಳೇ ಮಗಳು. ಎಲ್ಲಿದಾಳೋ ಏನೋ…ದೇವರು ನಿಮ್ಮನ್ನು ಸುಖವಾಗಿಟ್ಟಿರಲಿ.’ ಮಂಡಿಯೂರಿ ಬೇಡಿಕೊಂಡ. ಪಡ್ಡೆ ಹುಡುಗರು ಪ್ರಾಮಿಸ್ ಮಾಡಿದರು. `ಸಕೀನಾ ಏನಾದ್ರೂ ಬದುಕಿದ್ರೆ ಇನ್ನೈದು ದಿನಗಳಲ್ಲಿ ನಿಮ್ಮ ಮುಂದೆ ಇರ್ತಾಳೆ’ ಅಂತ. ಸೀರಾಜುದ್ದೀನನ ಕೈ ಹಿಡಿದು ಆಣೆ ಮಾಡಿದ್ರು. ಪಾಪ, ಅವರೂ ಹುಡುಕೇ ಹುಡುಕಿದರು. ತಮ್ಮ ಜೀವ ಹೋದರೂ ಪರವಾಗಿಲ್ಲ ಅಂತ ಹೇಳಿ ಗಲಾಟೆ-ದೊಂಬಿ ನಡೆಯುತ್ತಿದ್ದ ಅಮೃತ್ಸರಕ್ಕೆ ಮತ್ತೆ ಹೋದರು. ದಾರೀಲಿ ಗಂಡಸರನ್ನು ಉಳಿಸಿದರು. ಹೆಣ್ಣುಮಕ್ಕಳನ್ನು ಉಳಿಸಿದರು. ಮಕ್ಕಳನ್ನು ಉಳಿಸಿದರು. ಒಂದು ಜಾಗಕ್ಕೆ ಕರೆದುಕೊಂಡು ಬಂದು, ಬಿಟ್ಟು ಹೋದ್ರು. ಆದರೆ ಹತ್ತು ದಿನಗಳಾದರೂ ಸಕೀನಾ ಸುಳಿವು ಸಿಗಲೇಯಿಲ್ಲ. ಇಂಥಾದ್ದೇ ಒಂದು ದಿನ, ಇಂಥಾದ್ದೇ ಒಂದು ಕೆಲಸದ ಮೇಲೆ ಲಾರೀಲಿ ಅಮೃತ್ಸರಕ್ಕೆ ಹೊರಟಿದ್ದಾಗ, ಚುಹ್ರಾತ್ ಹತ್ರ ಒಂದು ಹುಡುಗೀನ್ನ ನೋಡಿದರು. ಲಾರಿ ಶಬ್ದ ಕೇಳುತ್ತಿದ್ದ ಹಾಗೇ ಆ ಹುಡುಗಿ ಬೆಚ್ಚಿ ಬಿದ್ದಳು. ಓಡೋಕೆ ಶುರುಮಾಡಿದಳು. ಈ ಪಡ್ಡೆ ಹುಡುಗರೂ ಲಾರಿ ನಿಲ್ಲಿಸಿ ಅವಳ ಬೆನ್ನು ಹತ್ತಿದರು. ಒಂದು ಹೊಲದಲ್ಲಿ ಅವಳನ್ನು ಹಿಡಿದರು. ನೋಡೋಕೆ ಚೆನ್ನಾಗಿದ್ದಳು. ಗಲ್ಲದ ಮೇಲೆ ಇಷ್ಟಗಲ ಒಂದು ಮಚ್ಚೆಯಿತ್ತು ಅವಳಿಗೆ. ಅವರಲ್ಲೊಬ್ಬ ಹೇಳಿದ, `ಹೆದರಬೇಡ, ನಿನ್ನ ಹೆಸ್ರು ಸಕೀನಾ’ ಆ ಹುಡುಗಿ ಹೆದರಿ ಕಂಗಾಲಾಗಿದ್ದಳು. ಮುಖ ಬಿಳಿಚಿಕೊಂಡಿತ್ತು. ಮಾತನಾಡಲಿಲ್ಲ. ಮತ್ತೆ ಮತ್ತೆ ಕೇಳಿದರು. ಕೈ ಹಿಡಿದು ಕೂಡಿಸಿಕೊಂಡರು. ತಲೆ ಸವರಿದರು. `ಏನಾಗಲ್ಲ, ನಾವಿದ್ದೀವಿ’ ಅಂತ ಸಾಂತ್ವನ ಮಾಡಿದರು. ದಯೆ ತೋರಿಸಿದರು. ಕುಡಿಯಲು ಹಾಲು ಕೊಟ್ಟರು. ತಮ್ಮ ಜತೆ ಲಾರೀಲಿ ಹತ್ತಿಸಿಕೊಂಡರು. ದುಪ್ಪಟ್ಟ ಕಳೆದು ಹೋಗಿತ್ತಲ್ಲ, ಆ ಹುಡುಗಿ ತನ್ನ ಎದೆಯನ್ನು ಕೈಯಲ್ಲಿ ಮುಚ್ಚಿಕೊಂಡಿದ್ದಳು. ಅವರಲ್ಲೊಬ್ಬ ತನ್ನ ಜಾಕೀಟು ಕೊಟ್ಟ. ಅವಳು ಅದನ್ನ ಹಾಕಿಕೊಂಡಳು… ಇನ್ನೊಂದಷ್ಟು ದಿನಗಳು ಕಳೆದವು. ಸಿರಾಜುದ್ದೀನನಿಗೆ ತನ್ನ ಮಗಳು ಸಕೀನಾ ಸುದ್ದಿ ಸಿಗಲೇಯಿಲ್ಲ. ಇಡೀ ಕ್ಯಾಂಪ್ ಹುಡುಕೋನು. ಸಿಕ್ಕ ಸಿಕ್ಕ ಆಫೀಸಿಗೆ ಹೋಗಿ ಕೇಳೋನು. ತಮ್ಮ ಮಗಳ ಸುಳಿವು ಹತ್ತಲಿಲ್ಲ. ರಾತ್ರಿಯಿಡೀ ತನ್ನ ಮಗಳನ್ನು ಆ ಪಡ್ಡೆ ಹುಡುಗರು ಕರೆದುಕೊಂಡು ಬರಲಪ್ಪಾ ಅಂತ ದೇವರಲ್ಲಿ ಬೇಡಿಕೊಳ್ಳೋನು. ಅಂಥಾ ಒಂದು ದಿನ ಆ ಪಡ್ಡೆ ಹುಡುಗರು ಅವನಿಗೆ ಕ್ಯಾಂಪಿನಲ್ಲಿ ಮತ್ತೆ ಸಿಕ್ಕರು. ಎಂಟೂ ಜನ ಲಾರೀಲಿ ಕೂತಿದ್ದರು. ಅವರ ಹತ್ತಿರ ಓಡಿ ಹೋದ. ಲಾರಿ ಇನ್ನೇನು ಹೊರಡುವುದರಲ್ಲಿತ್ತು. ಲಾರಿಗಡ್ಡ ನಿಂತು ಕೇಳಿದ, `ನನ್ನ ಮಗಳು ಸಿಕ್ಕಳಾ?’ `ಇಲ್ಲಾ ಚಾಚಾ, ಇನ್ನೂ ಸಿಕ್ಕಿಲ್ಲ. ಸಿಕ್ತಾಳೆ. ನಾವು ಹುಡುಕಿ ಕರ್ಕೊಂಡು ಬರ್ತೀವಿ.’ ಲಾರಿ ಹೋಯಿತು. ಅಬ್ಬಾ ಇವರಾದರೂ ಇದ್ದಾರಲ್ಲಾ, ಸಿಗ್ತಾಳೆ, ಸಿಕ್ಕೇ ಸಿಗ್ತಾಳೆ ಅಂತ ನಿಟ್ಟುಸಿರು ಬಿಟ್ಟ ಸಿರಾಜುದ್ದೀನ. ಅವತ್ತು ಸಾಯಂಕಾಲ, ಸಿರಾಜುದ್ದೀನ ಕ್ಯಾಂಪಿನಲ್ಲಿ ಕೂತಿದ್ದ. ಏನೋ ಗಲಗಲ ಶುರುವಾಯಿತು. ಒಂದೈದಾರು ಜನ ಒಂದು ಹುಡುಗೀನ್ನ ಹೊತ್ಕೊಂಡು ಬರುತ್ತಿದ್ದರು. ಯಾರೂ ಅಂತ ಕೇಳಿದ್ದಕ್ಕೆ `ಯಾರೋ ಗೊತ್ತಿಲ್ಲ, ರೈಲ್ವೇ ಹಳಿ ಹತ್ರ ಬಿದ್ದಿದ್ದಳು. ಮೈಮೇಲೆ ಎಚ್ಚರಾನೇ ಇರಲಿಲ್ಲ. ಎತ್ಕೊಂಡು ಬಂದ್ವಿ’ ಅಂದ್ರು. ಇವನೂ ಆವರ ಜೊತೆ ಹೆಜ್ಜೆ ಹಾಕಿದ. ಅವರು ಆ ಹುಡುಗೀನ್ನ ಕ್ಯಾಂಪಿನಲ್ಲಿದ್ದ ಆಸ್ಪತ್ರೆಗೆ ಸೇರಿಸಿ ಹೋದರು. ಸಿರಾಜುದ್ದೀನ ಮಾತ್ರ ಒಬ್ಬನೇ ನಿಂತಿದ್ದ. ಸುಮಾರು ಹೊತ್ತು ಹಾಗೇ ನಿಂತಿದ್ದ. ಏನನ್ನಿಸಿತೋ ಏನೋ, ಮೆತ್ತಗೆ ಒಳಗೆ ಹೋದ. ಒಂದು ಕತ್ತಲು ಕತ್ತಲು ರೂಮು ಅದು. ಅಲ್ಲಿ ಗೋಡೆ ಪಕ್ಕ ಒಂದು ಸ್ಟ್ರೆಚರ್ ಮೇಲೆ ಆ ಹುಡುಗಿ ದೇಹ. ಮಲಗಿದ ಹಾಗೆ ಬಿದ್ದುಕೊಂಡಿತ್ತು. ಸಣ್ಣ ಸಣ್ಣ ಹೆಜ್ಜೆಯಿಡುತ್ತಾ ಹತ್ತಿರ ಹೋದ. ಅಷ್ಟರಲ್ಲಿ ಯಾರೋ ದೀಪ ಹಾಕಿದರು. ಜಗ್ಗಂತ ಇಡೀ ರೂಮು ಹತ್ತಿಕೊಂಡಿತು. ಆ ದೀಪದ ಬೆಳಕಲ್ಲಿ ಆ ಹುಡುಗಿಯ ಮುಖದ ಮೇಲಿನ ಇಷ್ಟಗಲದ ಮಚ್ಚೆ ಕಾಣಿಸಿತು. ಸಿರಾಜುದ್ದೀನ ಕಿರುಚಿದ `ಸಕೀನಾ…’ ದೀಪ ಹಾಕಿ ಇನ್ನೂ ಒಳಗೆ ಕಾಲಿಡುತ್ತಿದ್ದ ಡಾಕ್ಟ್ರು `ಏನದು ಗಲಾಟೆ’ ಅಂತ ಸಿಡುಕಿದ್ರು. `ನಾ..ನಾ..ನಾನು ಅವಳ ತ..ತಂ..ತಂದೆ’ ಅಂತ ಗಂಟಲಿಗೆ ಜೀವ ತಂದುಕೊಂಡು ಹೇಳುವಷ್ಟರಲ್ಲಿ ಜೀವಾನೇ ಹೋಗಿತ್ತು ಸಿರಾಜುದ್ದೀನಂಗೆ. ಡಾಕ್ಟ್ರು ಸ್ಟ್ರೆಚರ್ ಮೇಲಿದ್ದ ದೇಹದ ಕೈ ಹಿಡಿದು ನಾಡಿ ನೋಡಿದ್ರು. ತಲೆಯೆತ್ತಿ ಮುಚ್ಚಿದ್ದ ಕಿಟಿಕೀ ಕಡೆ ನೋಡಿ `ತಗೀ’ ಅಂದ್ರು. ದೇಹ ಸ್ವಲ್ಪ ಅಲ್ಲಾಡ್ತು. ಕೈಗಳು ಮೆಲ್ಲಗೆ ಸಲ್ವಾರ್ನ ಲಾಡಿ ಬಿಚ್ಚಿದವು. ಸಲ್ವಾರ್ನ್ನು ಸೊಂಟದಿಂದ ಇಳಿಸಲು ಶುರುಮಾಡಿದವು.. ‘ಇನ್ನೂ ಬದುಕಿದಾಳೆ, ನನ್ನ ಮಗಳು ಇನ್ನೂ ಬದುಕಿದಾಳೆ’ ಅಂತ ಸಿರಾಜುದ್ದೀನ ಕೇಕೇ ಹಾಕಿದ. ಡಾಕ್ಟ್ರು ಬೆನ್ನಹುರಿಯುದ್ದಕ್ಕೂ ಥಣ್ಣಗೆ ಬೆವೆತು ಹೋದರು.

***

(ಮೂಲ: ಸಾದತ್ ಹಸನ್ ಮಂಟೋ. Open It ಅನ್ನೋ ಇಂಗ್ಲಿಷ್ ಕಥೆಯ ನೆರವಿನಿಂದ ಈ ಕಥೆಯನ್ನು ಅನುವಾದ ಮಾಡಿದ್ದೇನೆ. ಹಿಂದಿಯಲ್ಲಿ ‘ಖೋಲ್ದೋ’ ಅಂತ ಹೆಸರು. ಆ ಶಬ್ದಕ್ಕೆ ಇರೋ ಎರಡೂ ಅರ್ಥಗಳು ಸ್ಪಷ್ಟವಾಗುತ್ತವೆ ಹಿಂದಿಯಲ್ಲಿ. ಕನ್ನಡದಲ್ಲಿ ‘ತಗೀ’ ಅನ್ನೋದಕ್ಕೂ ‘ಬಿಚ್ಚು’ ಅನ್ನೋದಕ್ಕೂ ವ್ಯತ್ಯಾಸ ಇದೆ. ಈ ಸೂಕ್ಷ್ಮವನ್ನು ಗಮನಿಸಬೇಕು ಅಷ್ಟೇ.)

]]>

‍ಲೇಖಕರು G

May 21, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಾಲ್ಕು ಸಲ ಕೇಳಿದ ಒಂದು ಕಥೆ

ನಾಲ್ಕು ಸಲ ಕೇಳಿದ ಒಂದು ಕಥೆ

ಯಶಸ್ವಿನಿ ನನ್ನಜ್ಜಿ ನನಗೊಂದು ಕಥೆ ಹೇಳಿದ್ದಳು. ಆ ಕಥೆಯನ್ನ ಅವಳು ನನಗೆ ಒಟ್ಟು ನಾಲ್ಕು ಬಾರಿ ಹೇಳಿದ್ದಳು. ಅದ್ಹೇಗೆ ಅಷ್ಟು ನಿಖರವಾಗಿ...

ನಾಲ್ಕು ಸಲ ಕೇಳಿದ ಒಂದು ಕಥೆ

ಯಶಸ್ವಿನಿ ಬರೆದ ‘ಕೋಳಿಕಥೆ ‘

ಯಶಸ್ವಿನಿ ಕೆಂಪು ಜುಟ್ಟಿಗೆ ಅಚ್ಚ ಬಿಳಿಯ ಮೈಬಣ್ಣ, ಒಂದು ಧೂಳಿನ ಕಣವೂ ಕಾಣ ಸಿಗದ ಬಿಳಿಯ ಗರಿಗಳು, ಗೇರು ಬೀಜ ಬಣ್ಣದ ಕೊಕ್ಕು, -ಗತ್ತಲ್ಲಿ...

ಬಾಲಕೇಳಿ ವ್ಯಸನಿಗಳು

ಬಾಲಕೇಳಿ ವ್ಯಸನಿಗಳು

ಎ ಜೆ ಕ್ರೋನಿನ್ ರವರ ‘ಟು ಜೆಂಟಲ್ ಮನ್ ಆಫ್ ವೆರೋನಾ’ ಕಥೆಯ ಅನುವಾದ ಕನ್ನಡಕ್ಕೆ: ರಾಜು ಎಂ ಎಸ್ ಆಲ್ಫ್ಸ್ ಪರ್ವತ ಸಾಲಿನ ಪಾದದಗುಂಟ...

3 ಪ್ರತಿಕ್ರಿಯೆಗಳು

 1. ಸೂರಿ

  ಗಮನಿಸಬೇಕಾದ ಒಂದು ಅಂಶವೆಂದರೆ ಅಮೃತಸರ ಮತ್ತು ಮುಘಲ್ಪುರ ಭಾರತ ಮತ್ತು ಪಾಕಿಸ್ತಾನ ಗಡಿಯ ಆಚೀಚಿನ ಊರುಗಳು. ದೂರ ಸುಮಾರು ಐವತ್ತು ಕಿಲೋಮೀಟರುಗಳು. ಸಾಧಾರಣವಾಗಿ ಸುಮಾರು ಒಂದು ಅಥವಾ ಒಂದೂವರೆ ಗಂಟೆ ಸಾಕು ಒಂದು ಊರಿನಿಂದ ಇನ್ನೊಂದು ಊರನ್ನು ತಲುಪಲು. ಆದರೆ ಅಂದಿನ ಭಯಾನಕ ದಿನಗಳಲ್ಲಿ ಮಧ್ಯಾಹ್ನ ಅಮೃತಸರ ಬಿಟ್ಟ ರೈಲು ಮುಘಲ್ಪುರ ತಲುಪಿದಾಗ ರಾತ್ರಿಯ ಹತ್ತಾಗಿತ್ತು.

  ಪ್ರತಿಕ್ರಿಯೆ
 2. ವಸುಧೇಂದ್ರ

  ಕತೆಯಲ್ಲಿ ಎಷ್ಟೊಂದು ದುಃಖವಿದೆ! ಸಾದತ್ ಹಸನ್ ಮಂಟೋ ಬರೆದ ಸಾಕಷ್ಟು ಕತೆಗಳಲ್ಲಿ ಇಂತಹದೇ ಶೋಕ ತುಂಬಿರುತ್ತದೆ. ಕ್ರೌರ್ಯದ ಪರಾಕಾಷ್ಠೆಯನ್ನು ತನ್ನದೇ ಆದ ಸೂಕ್ಷ್ಮತೆಯಲ್ಲಿ ನಮಗೆ ದಾಟಿಸುತ್ತಾನೆ. ಅನುವಾದ ಸೊಗಸಾಗಿದೆ.

  ಪ್ರತಿಕ್ರಿಯೆ
 3. D.RAVI VARMA

  ಸಾದನ್ ಹಸನ್ ಮಂಟೋ ಅವರಬಗ್ಗೆ ಕೇಳಿದ್ದೆ,ಒಂದು ಅತ್ಯುತ್ತಮ ಕಥೆ ಓದಿದೆ, ಇನ್ನು ಅವರನ್ನು ಓದಬೇಕೆನಿಸುತ್ತಿದೆ, ಕಥೆ ಓದುತ್ತ ಓದುತ್ತ ಆದಂತೆ ಕಣ್ಣು ತುಂಬಿ ಬಂತು ಅನುವದಕರಿಗೂ ಅವದಿಗು ವಂದನೆ
  ರವಿ ವರ್ಮ ಹೊಸಪೇಟೆ

  ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ ವಸುಧೇಂದ್ರCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: