ತಪ್ಪಾಯಿತು – ಕ್ಷಮಿಸಿ ಬಿಡಿ!!

ಕಿರಣ್ 

“ತಪ್ಪು ಮಾಡುವುದು ಸಹಜ, ಆದರೆ ತಿದ್ದಿ ನಡೆಯುವವನು ಮನುಜ” ಎಂದು ಕೇಳಿದ್ದೇವೆ. ಎಷ್ಟೊಂದು ಸಲ ತಪ್ಪು ಮಾಡಿದಾಗ, ಅದು ಆಗಲೇ ಅರಿವಿಗೆ ಬಾರದಿರಬಹುದು/ಬರಬಹುದು. ನಾವು ಮಾಡಿದ್ದು ತಪ್ಪೆಂದು  ನಮಗೆ ಅನಿಸಿದಾಗ, ಸಹಜವಾಗಿ “ನನ್ನದು ತಪ್ಪಾಯ್ತು, ನನ್ನ ಕ್ಷಮಿಸಿ ಬಿಡಿ” ( I am sorry) ಎಂದು ಕೇಳಿಕೊಳ್ಳುತೇವೆ. 

ಇಲ್ಲಿ ತಿಳಿಯಬೇಕಾದ ಮುಖ್ಯ ಅಂಶವೆಂದರೆ, ಸುಖಾಸುಮ್ಮನೆ ಹೀಗೆ ಹೇಳೋದರಲ್ಲಿ ಹೆಚ್ಚು ಅರ್ಥ ಹಾಗೂ ಉಪಯೋಗವಿಲ್ಲ. ಏಕೆಂದರೆ, ಬಹಳಷ್ಟು ಸಲ ಈ ಕ್ಷಮಾ ಯಾಚನೆಯ ಮನೋಭಾವ ಬರುವುದು – ತನ್ನಿಂದ ಆದ ತಪ್ಪಿನ ಕೀಳಿರಿಮೆಯಿಂದಲೋ, ಮುಂದೇನು ಆಗುವೋದು? ಎನ್ನುವ ಭಯದಿಂದಲೋ ಆಗಿದ್ದು, ಆ ಭಾವನೆಗಳಿಂದ ಹೊರಬರುವ ಪ್ರಯತ್ನವಿರುತ್ತದೆ. ಇದು ಸಹಜವಾಗಿ ನಮ್ಮ ಅರಿವಿಲ್ಲದಂತೆ ಆಗುವ ಪ್ರತಿಕ್ರಿಯೆ. ಇದನ್ನು ಯಾರು ಬೇಕು-ಬೇಕಂತಲೇ ಮಾಡುವುದಿಲ್ಲ.

ಈ ರೀತಿಯ ಕ್ಷಮಾ ಯಾಚನೆಯಲ್ಲಿ ಇನ್ನೊಂದು ನ್ಯೂನತೆಯೆಂದರೆ, ಇದರಲ್ಲಿ ತಾನು ಮಾಡಿದ ತಪ್ಪಿನಿಂದ ಬೇರೆಯವರಿಗೆ ಆಗಿರುವ ನೋವು, ತೊಂದರೆ, ಅವಮಾನ, ನಷ್ಟದ ಅರಿವು ಕ್ಷಮೆಯಾಚಿಸುವವನಲ್ಲಿ ಇರುವುದಿಲ್ಲ ಹಾಗೂ ಅವನಲ್ಲಿ ಯಾವುದೇ ಪರಿವರ್ತನೆಯನ್ನು ಇದು ತರುವುದಿಲ್ಲ. ಅವನು ಮತ್ತೆ-ಮತ್ತೆ ಇದೇ ರೀತಿಯ ತಪ್ಪನ್ನು ಅದೇ ವ್ಯಕ್ತಿಯ ಜೊತೆಗೋ ಅಥವಾ ಮತ್ತೊಬ್ಬರ ಜೊತೆಗೋ ಮಾಡುತ್ತಲೇ ಇರಬಹುದು! 

ಹಾಗಿದ್ದರೆ ಕ್ಷಮೆ ಯಾವ ರೀತಿ ಕೇಳಬೇಕು? ಎನ್ನುವುದು ಮುಂದಿನ ಪ್ರಶ್ನೆಯಾಗುತ್ತದೆ. ಕ್ಷಮೆ ಕೇಳುವಾಗ, ಕ್ಷಮೆ ಯಾಚಿಸುವವನಿಗೆ ಯಾಕೆ ಕ್ಷಮೆ ಕೇಳುತಿದ್ದೇನೆ? ಅನ್ನುವ ಅರಿವಿರಬೇಕು; ಈ ಅರಿವಿನಲ್ಲಿ –  ತನ್ನ ಭಾವನೆಗಳಿಗಿಂತ (ಕೀಳಿರಿಮೆ, ಭಯ), ಬೇರೆಯವರಿಗಾದ ತೊಂದರೆಯ ಅರಿವಿರಬೇಕು.

ಇದನ್ನು ಒಂದು ಫಾರ್ಮುಲಾ ರೀತಿಯಲ್ಲಿ ಹೇಳಬಹುದಾದರೆ: “ನಾನು – <ಇಂತಹ ತಪ್ಪು ಮಾಡಿದೆ> . ಇದರಿಂದ ನಿಮಗೆ <ಇಂತಹ ತೊಂದರೆ > ಆಯಿತು. ನನ್ನನು ಕ್ಷಮಿಸಿ” ಎನ್ನಬಹುದು. ಹೀಗೆ ಕೇಳಿದಾಗ, ಕ್ಷಮೆ ಪಡೆದುಕೊಂಡವರಿಗೆ ಯಾಕೆ ಕ್ಷಮೆಯಾಚಿಸುತ್ತಿದ್ದಾನೆ ಎಂದು ಗೊತ್ತಾಗುವುದಲ್ಲದೆ ಒಂದು ವೇಳೆ ಅವರಿಗೆ ಬೇರೇನೇ ತೊಂದರೆ ಆಗಿದ್ದರೆ ಅವರು ಅದನ್ನು ತಿಳಿಸಬಹುದು. ಹಾಗೂ ಕ್ಷಮೆ ಯಾಚಿಸುವವನು,  ತಾನು ಏನು ತೊಂದರೆಯೆಂದು ಅಂದುಕೊಂಡಿದ್ದನೋ ಅದು ನಿಜವೋ? ಸರಿಯೋ? ಅಲ್ಲವೋ? ಅನ್ನುವುದು ಸಹ ಗೊತ್ತಾಗುತ್ತದೆ.

ಈ ರೀತಿ ಮಾಡಲು ಕ್ಷಮೆಯ ಬಗ್ಗೆ ಸರಿಯಾಗಿ ಯೋಚನೆ ಮಾಡಬೇಕಾಗುತ್ತದೆ ಆದ್ದರಿಂದ, ಪರಿಣಾಮವಾಗಿ ಕ್ಷಮೆಯಾಚಿಸುವವನಲ್ಲಿ ಮನೋ ಸ್ಥೈರ್ಯ, ಬೇರೆಯವರಿಗೆ ಆದ ತೊಂದರೆಯ ಬಗ್ಗೆ ಅನುಕಂಪ(empathy) ಮೂಡುತ್ತದೆ. ಕ್ಷಮೆ ಪಡೆಯುವವರು ಇದನ್ನು ಪೂರ್ಣವಾಗಿ ಕೇಳಿದಲ್ಲಿ, ಇಬ್ಬರ ನಡುವೆ ಒಂದು ಉತ್ತಮ ಮಾತುಕತೆಗೆ ಇದು ಈಡು ಮಾಡಿಕೊಡುತ್ತದೆ.

ಇದೇ ರೀತಿ, ಕ್ಷಮೆ ಪಡೆದುಕೊಂಡವರು ಎಲ್ಲವನ್ನು ಪೂರ್ಣವಾಗಿ ಕೇಳದೆ, ಸುಮ್ಮನೆ – “Its Okay”, “ಪರವಾಗಿಲ್ಲ”ಎಂದು ಹೇಳೋದರಲ್ಲಿ ಏನು ಅರ್ಥ ಇಲ್ಲ. ಯಾಕೆ ಇವನು ಕ್ಷಮೆ ಯಾಚಿಸುತ್ತಿದ್ದಾನೆಯೆಂದು ತಿಳಿದುಕೊಳ್ಳುವುದು ಮುಖ್ಯ. ಇಲ್ಲಿ – “ಪರವಾಗಿಲ್ಲ”, “Its Okay” ಅಂತ ಹೇಳಬಾರದೆಂದು ಹೇಳುತ್ತಿಲ್ಲ. ಬದಲಾಗಿ ಕ್ಷಮೆ ಯಾಚಿಸುವವನ ಯೋಚನೆ ಹಾಗೂ  ಭಾವನೆಗಳನ್ನು ತಿಳಿಯಲು ಪ್ರಯತ್ನಿಸಬೇಕು. ಇದರಿಂದ ಅವರನ್ನು ಹಾಗೂ ಅವರು ಯೋಚಿಸಲು ಪಟ್ಟ ಪರಿಶ್ರಮವನ್ನು ಗೌರವಿಸಿದ ಹಾಗೆ ಆಗುತ್ತದೆ. ಅಲ್ಲದೆ, ತನ್ನನ್ನು ಪೂರ್ಣವಾಗಿ ಕೇಳಿದ್ದರಿಂದ, ಅವರಿಗೆ ಹೇಳುವುದೇನು ಇರುವುದಿಲ್ಲವಾಗಿ, ಒಂದು ರೀತಿಯ ಮುಕ್ತತೆಯ ತೃಪ್ತಿಯೂ ಮೂಡುತ್ತದೆ.  

ಇಬ್ಬರ ಈ ರೀತಿಯ ಕ್ಷಮಾ ಸಂಭಾಷಣೆಯಿಂದ, ಇಬ್ಬರಲ್ಲೂ ಹಿಂದಿನ ಕಹಿ ಘಟನೆ ಮನಸ್ಸಿನಲ್ಲಿ ಸಂಪೂರ್ಣವಾಗಿ ಗುಣಮುಖವಾಗಿ, ಈ ಘಟನೆಯನ್ನು ಹಿಂದೆ ಬಿಟ್ಟು ಮುಂದೆ ನಡೆಯಲು ಸಹಕರಿಸುತ್ತದೆ. ಒಂದು ವೇಳೆ, ಇಬ್ಬರಲ್ಲಿ ಒಬ್ಬರು ಮಾತ್ರ ಈ ರೀತಿಯಾಗಿ ವರ್ತಿಸಿದರೆ ಏನಾಗಬಹುದು?! ಎನ್ನುವುದು ಮುಂದಿನ ಸಹಜ ಪ್ರಶ್ನೆ. ಆ ಒಬ್ಬರ ವರ್ತನೆಯಿಂದ ಕ್ಷಮಾ ಸಂಭಾಷಣೆಯು ಎಷ್ಟೋ ಪರಿಣಾಮಕಾರಿಯಾಗಿ ಬರುತ್ತದೆಯಲ್ಲದೆ, ಇನ್ನೊಬ್ಬರ ಮೇಲೆ ಕನಿಷ್ಠ ಪಕ್ಷದ ಗುಣಮುಖದ ಪರಿಣಾಮ ಮೂಡಿಸುತ್ತದೆ.

ಇದೆ ರೀತಿಯ ವಿಧಾನವನ್ನು ಒಬ್ಬರಿಗೆ “ಥಾಂಕ್ ಯು” ಹೇಳುವಾಗ ಕೂಡ ಮಾಡಬಹುದು: “ನಿಮ್ಮ <ಈ ಕೆಲಸದಿಂದ> ನನಗೆ <ಈ ರೀತಿಯ > ಸಹಾಯ ಆಗಿದೆ. ಅದಕ್ಕೆ ಥಾಂಕ್ ಯು”, ಎಂದು ಹೇಳಿದಾಗೆ, ಕೇಳುವವರಿಗೆ, ಹೇಗೆ ತಮ್ಮ ಕೆಲಸದಿಂದ ಬೇರೆಯವರಿಗೆ ಅನುಕೂಲವಾಗಿದೆಯೆಂದು ತಿಳಿದು ಸಂತೋಷ ಹಾಗೂ  ತಮ್ಮ ಬಗ್ಗೆ ತಮಗೆ ಹೆಮ್ಮೆಯಾಗುತ್ತದೆ. ಹಾಗೂ  ಇದೆ ಸಹಾಯವನ್ನು ಮತ್ತೆ ಬೇರೆಯವರಿಗೆ ಮಾಡಲು ಅವರಿಗೆ ಸ್ಪೂರ್ತಿ ಕೊಡುತ್ತದೆ. ಇದನ್ನೇ, ಸುಮ್ಮನೆ “ಥ್ಯಾಂಕ್ಸ್” ಅಂತ ಹೇಳುವುದಕ್ಕೆ ಹೋಲಿಸಿ ನೋಡಿ. ವ್ಯತ್ಯಾಸ ನಿಮಗೆ ಗೊತ್ತಾಗುತ್ತದೆ.

ಇದೆಲ್ಲ ತುಂಬಾ ಸಾಹಿತಿಕವಾಗಿ ಹೇಳುವ ರೀತಿಯೆಂದು ಅನಿಸುತ್ತಿರಬಹುದು. ಆದರೆ, ಇದನ್ನು ಸಹಜವಾಗಿ ಆಡು ಭಾಷೆಯಲ್ಲೇ ಹೇಳಬಹುದು. ಇಲ್ಲಿ – ಕ್ಷಮೆ ಯಾಚಿಸುವ ಅಥವಾ ಥ್ಯಾಂಕ್ಸ್ ಹೇಳುವ ರೀತಿಯನ್ನು ತಿಳಿಯುವುದು ಮುಖ್ಯ. ಹೇಳುವ ರೀತಿ ನಿಮಗೆ ಬಿಟ್ಟಿದ್ದು. 

ನಿಮಗೆ ಇದು ಸರಿ ಹಾಗೂ ಪರಿಣಾಮಕಾರಿಯೆಂದು ಅನಿಸಿದ್ದು, ಇದನ್ನು ಈಗಲೇ ಉಪಯೋಗಿಸಬೇಕೆನಿಸಿದ್ದರೆ, ಮೇಲೆ ತಿಳಿಸಿದ ಥಾಂಕ್ ಯು ಫಾರ್ಮುಲಾ ಬಳಸಿ, ಕಾಮೆಂಟ್ಸ್ ಮೂಲಕ ನಿಮಗೆ ಹೇಗೆ ಅನಿಸಿತು ಅನ್ನುವುದನ್ನು ನನಗೆ ತಿಳಿಸಿ.

‍ಲೇಖಕರು Avadhi

December 11, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಕಥೆಗಳನ್ನು ಹುಡುಕಿಕೊಂಡು ಹೀಗೆ ಸಾಗುವುದು ಇತ್ತೀಚಿಗೆ ನನ್ನ ರೂಢಿಯೇ ಆಗಿ ಹೋಗಿದೆ. ಕಥೆಯ ಹುಡುಕಾಟವೆಂದರೆ ಅದು ಬದುಕಿನ...

ಅಮ್ಮ…

ಅಮ್ಮ…

ಸಹನಾ ಹೆಗಡೆ ವೃತ್ತಿಯಿಂದ ಉಪನ್ಯಾಸಕರೂ ಪ್ರವೃತ್ತಿಯಿಂದ ಲೇಖಕರೂ ಸಾಹಿತ್ಯಾಸಕ್ತರೂ ಆದ ಶ್ರೀಯುತ ಪ್ರವೀಣ ನಾಯಕ ಹಿಚ್ಕಡ ಅವರು ತಮ್ಮ ತಾಯಿ...

೧ ಪ್ರತಿಕ್ರಿಯೆ

  1. Dr Maheshwari Sangolli

    ಕ್ಷಮೆ ಹಾಗೂ ಥಾಂಕ್ಯೂ ಬಗ್ಗೆ ನೀವು ತಿಳಿಸಿರುವ ವ್ಯಾಖಾನ ಉತ್ತಮವಾಗಿದೆ . ಅದರಲ್ಲೂ ಫಾರ್ಮುಲ ರೀತಿಯು ಸರಳ ಹಾಗೂ ಉಪಯುಕ್ತವಾಗಿದೆ . ಫಾರ್ಮುಲ ರೀತಿಯನ್ನು ನಾನು ಖಂಡಿತವಾಗಿಯೂ ಉಪಯೋಗಿಸುತ್ತೇನೆ . ಥಾಂಕ್ಯೂ .

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: