ತಬ್ಬಲಿ ಜಾತಿಯ ಸೂಲಗಿತ್ತಿ ಮಲ್ಲಮ್ಮ…..!

ಶಿವರಾಜ್ ಮೋತಿ

ಒಡಹುಟ್ಟಿದ ಹತ್ತು ಮಕ್ಕಳಿರುವ ತುಂಬು ಸಂಸಾರದಲ್ಲಿ ಜನಿಸಿ, ತಾನೂ ಸಹ ಹನ್ನೆರಡು ಮಕ್ಕಳ ಹೆತ್ತಿ, ಇಬ್ಬರು ತೀರಿದ್ದಾರೆ. ಈಗ ಹತ್ತು ಮಕ್ಕಳಿದ್ದಾರೆ. ತೀರಾ ಬಡತನ ಅನುಭವಿಸಿ, ಈಗಲೂ ಅನುಭವಿಸುತ್ತಾ ವೈದ್ಯಲೋಕದ ವೃತ್ತಿಗೆ ಸವಾಲಾದ ಹೆಣ್ಣಜ್ಜಿ (ತಾಯಿಯ ತಾಯಿ) ಡುಮ್ಕಿ ಯಲ್ಲಮ್ಮನಿಂದ ಪಾರಂಪರಿಕವಾಗಿ ಸೂಲಗಿತ್ತಿ ವಿದ್ಯೆಯ ಕರಗತವಾಗಿ ಕಲಿತು ಗಳಿಸಿಕೊಂಡ ಮಲ್ಲಮ್ಮ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪಟ್ಟಣದಲ್ಲಿ ಸೂಲಗಿತ್ತಿಯಾಗಿ ಹೆಸರು ಮಾಡಿದ ಇವರ ತಂದೆ ಬಸವಲಿಂಗಪ್ಪ, ತಾಯಿ ನಾಗಮ್ಮ‌. 3 ಗಂಡು 5 ಹೆಣ್ಮಕ್ಕಳಿಗೆ ಮದುವೆ ಮಾಡಿ ಇನ್ನೂ ಒಂದು ಹೆಣ್ಣು ಮದುವೆ ವಯಸ್ಸಿಗೆ ಬಂದರೆ, ಇನ್ನೊಬ್ಬ ಮಗ ಸರಕಾರಿ ಶಾಲೆಲಿ ಒಂಬತ್ತನೇ ತರಗತಿ ಓದುತ್ತಿದ್ದಾನೆ.

ಯಾವ ಆಸ್ಪತ್ರೆಗೂ ಹೋಗದೇ, ಸರಳವಾಗಿ ಸುಮಾರು 3000 ಕ್ಕಿಂತ ಹೆಚ್ಚು ಸಾಂಪ್ರದಾಯಿಕ ಸುಲಭ ಹೆರಿಗೆ ಮಾಡಿಸಿದ ಕೀರ್ತಿ, ಯಶಸ್ಸು ಇವರಿಗೆ ಲಭಿಸುತ್ತದೆ. ಎಂತಹದೇ ಹೆರಿಗೆಯಿದ್ರೂ ಸಹ ಯಾವುದೇ ಹಣ ಪಡೆಯದೇ, ಕೆಲವರಿಗೆ ವೈದ್ಯರು ನಮ್ಮಿಂದಾಗದು ತಾಲೂಕು/ಜಿಲ್ಲಾಸ್ಪತ್ರೆಗಳಿಗೆ ತೆರಳಿ ಎಂದ ಬಾಣಂತಿಯರನ್ನ ನಿಲ್ಲಿಸಿ ಈಕೆ ಮನೆಯಲ್ಲಿಯೇ ತಮ್ಮ ತಿಳುವಳಿಕೆಯ ಮೂಲಕ ಯಾವುದೇ ಏರುಪೇರುಗಳಿಲ್ಲದೇ ಸುಲಭ ಹೆರಿಗೆ ಮಾಡಿ, ಬಡವರ ಪಾಲಿನ ದೈವಿ ಸ್ವರೂಪಿಯಾಗಿದ್ದಾಳೆ.

ಗರ್ಭಿಣಿಯ ಪ್ರಸವರ ದಿನವನ್ನು ದೇಹದ ವರ್ತನೆಗಳನ್ನು (ನೋವು) ಗಮನಿಸಿಯೇ ಲೆಕ್ಕಾಚಾರ ಮಾಡಿ ಹೇಳಿದರೆ ತಪ್ಪಿದ ಉದಾಹರಣೆಗಳಿಲ್ಲ. ಗರ್ಭದಲ್ಲಿರುವ ಶಿಶುವು ಹೆಣ್ಣೋ-ಗಂಡೋ ಎಂಬುದಾಗಿ ತಿಳಿಸುವ ಇವರ ಜ್ಞಾನವು ಬಹಳ ವಿಶಿಷ್ಟ ಮತ್ತು ಅಚ್ಚರಿ. ಎಡಕ್ಕಿದ್ದರೆ ಹೆಣ್ಣು, ಬಲಕ್ಕಿದ್ದರೆ ಗಂಡು ಅಂತೆ. ಆದ್ರೆ ಈಗ ಮಗುವು ಗರ್ಭಕೋಶದಲ್ಲಿ ಜಾಸ್ತಿ ಅತ್ತಂದಿತ್ತ-ಇತ್ತಂದಿತ್ತ ತಿರುಗುವುದರಿಂದ ಶಿಶುಮಗು ಯಾವುದೆಂದು ನಿಖರವಾಗಿ ಹೇಳಲು ಅಸಾಧ್ಯ ಎನ್ನುತ್ತಾರೆ.

ತನ್ನ ಹತ್ತು ಮಕ್ಕಳ ಕುಟುಂಬವನ್ನು ಈಗಲೂ ಆಡುಗಳನ್ನು ಕಾಯುತ್ತಾ, ಕೂಲಿನಾಲಿ ಮಾಡುತ್ತಾ ಸಲಹುತ್ತಿರುವ ಗಟ್ಟಿಪಿಂಡ ಮಲ್ಲಮ್ಮ ಬಸುರಿಯರ ಪಾಲಿಗೆ ಸಂಜೀವಿನಿಯಂತೆ ಓಡಾಡುತ್ತಿದ್ದಾರೆ. ಇವರಿದ್ದರೆ ಸುತ್ತಮುತ್ತಲಿನ ಬಾಣಂತಿಯರಿಗೆ ನೆಮ್ಮದಿ ಮತ್ತು ಧೈರ್ಯ. ತುಂಬು ಗರ್ಭಿಣಿಯರ ಪಾಲಿಗೆ ಇವರು ಸಾಕ್ಷಾತ್ ದೇವತೆ, ಪುಣ್ಯವಂತೆ, ದೇವರ ಸ್ವರೂಪಿ ಎಂದರೂ ತಪ್ಪಾಗಲಾರದು.

ಈ ಹಿಂದೆ 35-40 ವರ್ಷಗಳಿಂದಾಚೆ ಈಗಲೂ ಕವಿತಾಳದ ಸುತ್ತಮುತ್ತ ಹೆರಿಗೆಗೆ ಸಾಮಾನ್ಯ ಚಿಕಿತ್ಸಾ ವ್ಯವಸ್ಥೆಯೂ ಇಲ್ಲದಿರುವಾಗ ಆಗ ಬಸುರಿಯಾಗುವುದೆಂದರೆ ಜೀವವನ್ನು ಕೈಲಿ ಹಿಡಿದು ಹೆಣ್ಣುಮಕ್ಕಳು ಬದುಕಬೇಕಿತ್ತು. ಆ ಸಂದರ್ಭದಲ್ಲಿ ಸೂಲಗಿತ್ತಿಯೆಂಬ ದೇವತೆಯಂತೆ ಸಂಚಾರಿ ಆಸ್ಪತ್ರೆಯಾಗಿ ಯಾವುದೇ ಫಲಾಪೇಕ್ಷೆಯನ್ನು ಆಕ್ಷೇಪಿಸದೇ ಸಂಚರಿಸುತ್ತಿದ್ದ ಈ ಮಲ್ಲಮ್ಮ ಗರ್ಭಿಣಿಯರಿಗೆ ಧೈರ್ಯ ತುಂಬಿ ಸಹಜ ಹಾಗೂ ಆರೋಗ್ಯಕರ ಹೆರಿಗೆ ಈಗಲೂ ಮಾಡಿಸುತ್ತಿದ್ದಾರೆ.

ಇಷ್ಟೆಲ್ಲ ಮಾಡಿದ್ದರೂ ಒಂದಾದರೂ ಫೇಲ್ ಆಗಿವೆಯೇ ಎಂದರೆ.? ಒಂದೂ ಹೆರಿಗೆ ಕೂಡ ಫೇಲ್ ಆಗಿಲ್ಲವೆಂದು ತಮ್ಮ ಆರಾಧ್ಯದೈವರಾದ ಗದ್ವಾಲ್ ಜಮಲಮ್ಮ, ಯಲ್ಲಮ್ಮನನ್ನು ಮಾತ್ರ ಪ್ರತಿಸಲವೂ ನೆನೆಸುತ್ತಾ ತಮ್ಮ ಸೇವೆಯಲ್ಲಿ ಈಗಲೂ ನಿರತರಾಗಿದ್ದಾರೆ. ತಮ್ಮ ಸೂಲಗಿತ್ತಿ ಸೇವೆಯನ್ನು ವ್ಯಾಪಾರಿಕರಣ ಮಾಡಿಕೊಳ್ಳದೇ, ಪ್ರವೃತ್ತಿಯನ್ನಾಗಿ ಮಾಡಿಕೊಂಡ ಮಲ್ಲಮ್ಮಳ ಪಡೆದ ಕವಿತಾಳದ ಬಡಜನತೆಯ ಪುಣ್ಯವಾಗಿದೆ.

ಸ್ವತಃ ತನ್ನ 4 ಮಕ್ಕಳಿಗೆ ತಾನೇ ಹೆರಿಗೆಯನ್ನು ಒಬ್ಬ ಸಹಾಯಕಿಯೊಂದಿಗೆ ಮಾಡಿಕೊಂಡ ಮೊಂಡು ಧೈರ್ಯವಂತೆ. ಕೊನೆಮಗನ ಹೆತ್ತು 5 ದಿನಗಳಾಗಿದ್ದರೂ, ಸಹ ಪಕ್ಕದ ಮನೆಯ ಒಡಹುಟ್ಟಿದ ತಮ್ಮ ತಬಲವಾದಕ ಶ್ರೀ ಶಿವರಾಜ್ ಯಡವಲ್ ರವರ ಪತ್ನಿಯ ಹೆರಿಗೆ ಮಾಡಿಸಿದ ಇವರು ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ನೆಲಕೋಳದಲ್ಲಿ ಜನಿಸಿ, ಗುರುಪಾದಪ್ಪ ಎಂಬುವವರನ್ನು 13 ನೇ ವಯಸ್ಸಿಗೆ ಮದುವೆಯಾಗಿ ಸುಮಾರು 45-50 ವರ್ಷಗಳಿಂದ ಕವಿತಾಳ ಪಟ್ಟಣದ ಉದಯನಗರದಲ್ಲಿ ಸರಕಾರಿ ಜಾಗ ಅಂದ್ರೆ ಗುಡ್ಡದ ಮಗ್ಗುಲಲ್ಲಿ ಹರಕು ಜೋಪುಡಿಯಲ್ಲಿ ತುಂಬು ಸಂಸಾರದಿಂದ ಜೀವನ ಸಾಗಿಸುತ್ತಾ ಬುರ್ರಕಥಾ, ಜನಪದ ಹಾಡುಗಳನ್ನು ಜೀವನೋಪಾಯಕ್ಕಾಗಿ ಹಾಡುತ್ತಿದ್ದರೂ, ಇವೆಲ್ಲವೂ ಬಿಟ್ಟು ಕೂಲಿನಾಲಿ ಮಾಡುತ್ತಾ ಸಂಪೂರ್ಣವಾಗಿ ತನ್ನನ್ನು ತಾನು 25 ನೇ ವಯಸ್ಸಿನಿಂದಲೇ ಸೂಲಗಿತ್ತಿಯಾಗಿ ಕಾರ್ಯಪ್ರವೃತ್ತಿಯಿಂದ ತೊಡಗಿಸಿಕೊಂಡಿದ್ದಾರೆ.

ಮಲ್ಲದಗುಡ್ಡದ ಅಯ್ಯಪ್ಪ ಮಠದಿಂದ ಗುರುಬೋಧ ತೆಗೆದುಕೊಂಡಿದ್ದಾರೆ. ಅಂದ್ರೆ, ಬಸವ ಪರಂಪರೆ ಆಚರಿಸುವ ಶರಣರಾಗುವುದು. ಹಾಗಾಗಿ ಸುಳ್ಳು ಹೇಳುವಂತಿಲ್ಲ, ಜಾತಿ ಪದ್ಧತಿಯಂತೂ ಮೊದಲೇ ಆಚರಿಸುವಂತಿಲ್ಲ. ಹಾಗಾಗಿ ಮಲ್ಲಮ್ಮಳದು ಕರ್ನಾಟಕದಲ್ಲಿಯೇ ಅತ್ಯಂತ ಹಿಂದುಳಿದಿರುವ ಅಲೆಮಾರಿ ಸಮುದಾಯಗಳಲ್ಲಿ ಅಲಕ್ಷಿತ ಸುಡುಗಾಡು ಸಿದ್ಧ ಸಮುದಾಯವಾದರೂ ಯಾರೇ ಕರೆದರೂ ಈಗ ದಲಿತ, ಶೋಷಿತ, ತೀರಾ ಅಲಕ್ಷಿತರೆಂದೂ ಗಮನಿಸಿ ಅಲಕ್ಷಿಸದೇ ಎಲ್ಲ ವರ್ಗದವರಿಗೂ ಹೆರಿಗೆ ಸೇವೆಯನ್ನು ಮಾಡುತ್ತಾ ಬಂದಿರುವ ಇವರ ಗುಣ, ವೃತ್ತಿಗೆ ತಲೆಬಾಗಿ ಸಲಾಂ ಹೊಡಯಲೇಬೇಕಿದೆ.

ಇಷ್ಟೆಲ್ಲಾ, ಸೇವೆ ಮಾಡಿರುವ ಮಲ್ಲಮ್ಮನಿಗೆ ಬಾಣಂತನ ಮಾಡಿದ್ರೆ ನಿನ್ನ ಮೇಲೆ ಕೇಸು ಮಾಡುತ್ತೇವೆಂದು ಖಾಸಗಿ ವೈದ್ಯರು, ಆಶಾಕಾರ್ಯಕರ್ತರು ಸುಮಾರು ವರ್ಷಗಳಿಂದಲೇ ನಾವಾಗಲ್ಲಂತ ಮುಂದಕ್ಕೆ ಕಳಿಸಿದರೆ ಊರಾಗ ನೀನು ಹಗಲು-ರಾತ್ರಿಯೆನ್ನದೇ, ಹೋಗಿ ಬಾಣಂತನ ಮಾಡುತಿದಿ ನಿನಗೆಷ್ಟು ರೊಕ್ಕ ಕೊಡ್ತಾರಾ.? ಎಂದೂ ಗದರಿಸಿ ಬೆದರಿಕೆ, ಕಿರುಕುಳ ನೀಡುತ್ತಿದ್ದರೂ, ನಾನೇನೂ ಡಾಕ್ಟರಾ, ಸೂಜಿ ಮಾಡ್ತೀನಾ.?

ಏನು ದೇವರು ಕಡೆಗಾಕಿದರೆ ನಾಲ್ಕುದಿನ ನೀರಾಕ್ತಿನಿ ಅಂದು ಇದ್ಯಾವುದಕ್ಕೂ ಜಗ್ಗದೇ, ಸಂಯಮದಿಂದಲೇ ಅಲ್ರೀ ನೀವಾಗಲ್ಲ ಅಂದು ಮುಂದಕ್ಕೆ ಕಳಿಸಿದರೆ ಬಡವರು 50-60 ಸಾವಿರ ಎಲ್ಲಿಂದ ತರಬೇಕೆಂದು ಪ್ರತ್ಯುತ್ತರಿಸಿ ಜೀವ ಉಳಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆಲ್ಲಾ, ಹೆರಿಗೆ ನೋವು ಶುರುವಾದಾಗಲೆಲ್ಲ ಆಸ್ಪತ್ರೆಗೆ ಹೋಗದೇ ಇವರತ್ರ ಬರುವುದೇ ಬಲವಾದ ಕಾರಣವಾಗಿದೆ. ಒಂದು ತಿಂಗಳು, 5-9 ತಿಂಗಳಂದ್ರೂ ಸಹ ಮಗುವಿಗೆ ನೀರಾಕ್ತಾರೆ. ಇದ್ದವರು ಪ್ರತಿಯಾಗಿ ತೊಟ್ಟಿಲುದಿನ ಸೀರೆ ಮತ್ತು ಉಡಿಹಕ್ಕಿ ಹಾಕಿ ಕಳಿಸುತ್ತಾರೆ.

ಹೆರಿಗೆ ಮಾಡಿಸಿಕೊಂಡ ಹಲವರು ನಾವು ನಿಮ್ಮ ಜೊತೆ ಇದ್ದೇವೆ. ನೀವು ಎಷ್ಟೇ ಕಷ್ಟಕರವಾದ ಹೆರಿಗೆ ಮಾಡಿಸಿದ್ರೂ ದುಡ್ಡು ಪಡೆಯದೇ ಸುಲಭವಾಗಿ, ಪ್ರಾಮಾಣಿಕವಾಗಿ ಮಾಡುತ್ತಿದ್ದೀರಿ. “ಯಾರಿಗೂ ಬಗ್ಗಬೇಡಿ ಅವರೇನ್ ಮಾಡ್ತಾರೆ, ನಾವು ಕರಕೊಂಡು ಹೋಗ್ತೀವಿ ಸತ್ರೇ ನೋಡ್ತಾರೇನ್, ಅವರೆಲ್ಲ ಬೇಸು ಬರಿತಾರ‌ (ಔಷಧಿ), ಅಲ್ಲಿಗಿ ಕಳಿಸ್ತಾರ (ದೊಡ್ಡಾಸ್ಪತ್ರೆ) ನಾವೆಲ್ಲ ಹೋಗಿ ಹೊಟ್ಟೆ ಕೊಯ್ಯಿಸಿಕೊಂಡು ಅಷ್ಟೊಂದು ದುಡ್ಡು ಎಲ್ಲಿಂದ ತರಬೇಕೆಂದೂ”,ಈಗಲೂ ಸಹ ಡಾಕ್ಟರ್ ಬೈತಾರೆ ಬರಲ್ಲಂದ್ರೆ ಸಾಕು “ಯಮ್ಮ, ಬಾಯಂಗೆ ಯಮ್ಮ ಕಾಲ್ಬೀಳ್ತೀವಿ” ಅಂತ ಹೃದ್ರಾಕವಾಗಿ ವಿನಂತಿಸುತ್ತಾ, ಧೈರ್ಯ ಕೊಡುತ್ತಾ, ಆಗಾಗ ಕರೆದುಕೊಂಡು ಹೋಗಿ ಸುಲಭ ಹೆರಿಗೆಗೆ ನೆಮ್ಮದಿಯಿಂದ ಒಳಗಾಗುತ್ತಲೂ ಇದ್ದಾರೆ.

ಕರೆದರೆ ಆಗಲ್ಲ ಎನ್ನದೇ ಒಂದು ದಿನವಾಗಲಿ, ಎರಡು ದಿನವಾಗಲಿ ನಿದ್ದೆಗೆಟ್ಟಾದರೂ ಸರಿ ಹೆರಿಗೆ ಮಾಡಿಯೇ ಬರುವೆ ಎನ್ನುವ ಇವರನ್ನು ನಿಮ್ಮಲ್ಲಿ ಬಂದ ಹೆರಿಗೆಗಳನ್ನು ಆಸ್ಪತ್ರೆಗೆ ಯಾಕೇ ಕಳಿಸುವುದಿಲ್ಲವೆಂದು ಮಾತಿಗಿಳಿದರೆ, ದವಾಖಾನೆಯಲ್ಲಿ ಹೆರಿಗೆ ಚೆನ್ನಾಗಿ ಮಾಡಲ್ಲ. ಸುಲಭ ಹೆರಿಗೆಗೂ ಸಿಜೇರಿಯನ್ ಮಾಡ್ತಾರೆ. ಅದರಲ್ಲೂ ಶಿಶುವನ್ನು ಎರ್ರಾಬಿರ್ರಿಯಾಗಿ ಅವಸರ-ಸರವಾಗಿ ಅಲ್ಲಾಡಿಸಿ ಎಳೆದು ಬಿಡ್ತಾರೆ. ಹಾಗಾಗಿ ಮಗು ಸಾವಾಗುವ ಸಂಭವವೇ ಹೆಚ್ಚು. ಈ ತರಹ ಕೆಲವು ತೀರಿದ್ದೂ ಕೂಡ ಕಣ್ಣಾರೆ ಕಂಡಿದ್ದೇನೆ. ಆಮೇಲೆ ಡಾಕ್ಟರುಗಳು ಬಹಳ ತಾತ್ಸಾರದಿಂದ ಮಾತಾಡಿದ್ದಾರೆಂದು ಬಹಳ ನೋವು, ಬೇಸರದಿಂದ ಹೇಳುತ್ತಾರೆ.

ಸ್ಥಳೀಯವಾಗಿ ಸೂಲಗಿತ್ತಿ ಮಲ್ಲಮ್ಮ, ವೇಷಗಾರ ಮಲ್ಲಮ್ಮ ಎಂತಲೂ ಪ್ರಸಿದ್ಧಿ ಪಡೆದು ಕವಿತಾಳದಲ್ಲಿ ಏನಿಲ್ಲವೆಂದರೂ ಒಂದೊಂದು ಮನೆಯಲ್ಲಿ 4-5 ಹೆರಿಗೆಗಳನ್ನು ಮಾಡಿದ್ದಾರೆ. ಹೆಣ್ಣಜ್ಜಿ ಜೊತೆ ಜಾಸ್ತಿ ಸಲಿಗೆಯೊಂದಿಗೆ ಬೆರೆತಿರುವುದರಿಂದ, ನೀನು ಹುಷಾರಿದ್ದಿ ಎಂದು ಅಜ್ಜಿಯ ಕಾಯಕದಲ್ಲಿ ಸಹಾಯಕಳಾಗಿ ತಾನು ತೊಡಗಿಸಿಕೊಂಡಿದ್ದರಿಂದ ಈ ವಿದ್ಯೆಗಳನ್ನು ಕಲಿಸಿ ಕೊಟ್ಟಿದ್ದಾರೆ.

ಒಮ್ಮೊಮ್ಮೆ ಎಷ್ಟೋ ಕೈಮೀರಿ, ಮನೆಯಲ್ಲಿ ಆಗದ ಹೆರಿಗೆಗಳನ್ನು ಸಹ ಬಂದವರ ಸಮಾಧಾನಕ್ಕಾಗಿ ಪರಿಚಯಸ್ಥರಾದ ಡಾ.ಎನ್.ಜಿ.ಹಜಾರೆರವರತ್ರ ಕರೆದುಕೊಂಡು ಹೋಗಿ ಅವರ ಜೊತೆಯಲ್ಲಿಯೇ ಸೇರಿ ಹೆರಿಗೆನೂ ಮಾಡಿ, ಹೆರಿಗೆ ಮಾಡುವುದರಿಂದ ನನಗೆ ಸಹಾಯಕಿಯಾಗಿ ಇದ್ದು ಬಿಡಮ್ಮ ಎಂದು ಕೇಳಿಕೊಂಡಿದ್ದರೆಂದೂ, ಹಜೇರಿ ಸಾರ್ ಕೂಡ ಅತ್ಯಂತ ಕಡಿಮೆ ದರದಲ್ಲಿ ಹೆರಿಗೆಗಳನ್ನು ಮಾಡುತ್ತಾ ಬಡವರ ಸೇವೆ ಮಾಡುತ್ತಿದ್ದಾರೆಂದೂ ಅವರ ಕಾಯಕದ ಬಗ್ಗೆ ಕೂಡ ಸ್ಮರಿಸಿಕೊಳ್ಳುತ್ತಾರೆ.

ಸಾವಿರಾರು ಹೆರಿಗೆಗಳ ವೈವಿಧ್ಯಮಯ ಅನುಭವಗಳೇ, ಇವರಲ್ಲಿವೆ. ಹೀಗೆಯೇ ಮನಬಿಚ್ಚಿ ಹೇಳತೊಡಗಿದರೆ ಸ್ವತಃ ನಾವು ಹೆರಿಗೆ ಮನೆಯನ್ನು ಹೊಕ್ಕು ಬಂದಂತಹ ಅನುಭವವಾಗುತ್ತದೆ.

ಕವಿತಾಳ ಹಾಗೂ ಸುತ್ತಮುತ್ತಲಿನವರು ಹೆರಿಗೆ ಮಾಡಿಸಿಕೊಂಡ, ಔಷಧಿ ಪಡೆದು ತಮ್ಮ ದೇಹವನ್ನು ಸುಧಾರಿಸಿಕೊಂಡವರು ಮಾತ್ರ ಮಲ್ಲಮ್ಮಂದ್ರೆ ಮಲ್ಲಮ್ಮ, ದೇವರು ಮಲ್ಲಮ್ಮ ಅಂತ ಪ್ರೀತಿಯಿಂದ ಕರೆಯುವುದು ರೂಢಿಯಾಗಿಬಿಟ್ಟಿದೆ. ಸಾವಿರಾರು ಬಾಣಂತನ ಮಾಡುವುದರ ಮುಖಾಂತರ ತಾಯಿಗೆ ಮರುಹುಟ್ಟು, ಮಗುವಿಗೆ ಹೊಸಹುಟ್ಟುಗೆ ಕಾರಣವಾದ ದೊಡ್ಡ-ದೊಡ್ಡ ಡಾಕ್ಟರ್ ಗಳು ಆಶ್ಚರ್ಯಚಕಿತರಾಗುವಂತೆ, ಬಡ ಹೆಣ್ಣುಮಕ್ಕಳ ಸೇವೆ ಮಾಡಿರುವ ಈ ಮಹಾಮಾತೆಗೆ ಇದೆಲ್ಲವೂ ನಿಮಗೆ ಹೇಗೆ ಸಾಧ್ಯವೆಂದು ಪ್ರಶ್ನಿಸಿದರೆ,ಎಲ್ಲ ದೇವರದಯೆ ಅಂತ ಕೈ ಮುಗಿಯುತ್ತಾರೆ.

ಇವರ ಸೇವೆ ಸಮಾಜಕ್ಕೆ, ವೈದ್ಯಕೀಯ ಕ್ಷೇತ್ರಕ್ಕೆ ಮಾದರಿ ಹಾಗೂ ಅಚ್ಚರಿ. ಸಹಜ-ಸರಳ, ಆರೋಗ್ಯವಂತ ಜನನಕ್ಕೆ ಕಾರಣವಾಗಿರುವ ಮಲ್ಲಮ್ಮರ ತಾಯ್ತನ, ಅಂತಃಕರಣ, ವಿಶ್ವಾಸ ಮಾನವೀಯತೆಯ ಬಗ್ಗೆ ಹೇಳಲು ಅಸಾಧ್ಯ. ಇವರ ಸಾಧನೆಯ ಹಾದಿಯೇ ಒಂದು ವಿಸ್ಮಯ, ಬೆರಗು.

ʼಬರೀ ಸೂಲಗಿತ್ತಿಗೆ ಸೀಮಿತವಾಗದೇ, ಗಿಡಮೂಲಿಕೆಯ ಔಷಧಿ ನೀಡುವ ಪರಿಣಿತ ಹೊಂದಿ ಜನಪದ ವೈದ್ಯಯಾಗಿಯೂ ಮಲ್ಲಮ್ಮ,ಬಡವರ ಬಾಯಲ್ಲಿ ಇದ್ದಾರೆʼ.

ಕಾಮಾಲೆ, ತದ್ದು, ಇಸಬಿ, ಸರ್ಪಹುಣ್ಣು, ಚರ್ಮರೋಗ, ಗಂಡಮಾಲೆ, ಕಾಮಿಣಿ, ಮೂಲವ್ಯಾಧಿ (ಎಲ್ಲ ತರಹದ ಮುಳ್ಳು,ರಕ್ತ ಮೂಲವ್ಯಾಧಿಗೂ), ಕುರುವಾಗಲಿ ಎಂತಹ ಗಡ್ಡೆಯಾದ್ರೂ ಆಗಲಿ, ಹೆಣ್ಮಕ್ಕಳ ಬಿಳಿಮುಟ್ಟಿಗೆ, ಗಂಡುಮಕ್ಕಳಿಗೆ ಧಾತು ಹೋಗ್ತಿದ್ದರೆ ಕೂಡ ಗಿಡಮೂಲಿಕೆಯ ಔಷಧಿ ಕೊಡುತ್ತಾರೆ. ಯಾವುದೇ ಔಷಧಿ ಕೊಟ್ಟರೂ ಹೊಟ್ಟೆ ಒಳಗಾಕ್ಕಲ್ಲ. ಮೇಲೆಯೇ ಹಚ್ತಾರೆ. ಬಿಳಿಮುಟ್ಟಿಗೆ ಮಾತ್ರ ಹೊಟ್ಟೆಗೆ ಕೊಡುತ್ತಾರೆ. ಕೆಮ್ಮುಗೆ ಕೂಡ ಅಡವಿಯ ಜೇನುತುಪ್ಪದೊಂದಿಗೆ ಕಲಿಸಿ ಕೊಡುತ್ತಾರೆ. ಜ್ವರ ಮತ್ತು ಸುಸ್ತಿಯಾಗಿದ್ರೆ ಔಷಧಿಯೇ ಕೊಡಲ್ಲ.

ಆಧುನಿಕ ವೈದ್ಯರು ಆಶ್ಚರ್ಯಚಕಿತರಾಗುವಂತೆ ಪ್ರಾಚೀನ ವಿಧಿ-ವಿಧಾನಗಳನ್ನು ಬಳಸಿ ಪ್ರಾಣ ಹಾನಿಯಾಗದಂತೆ, ಶಾಲೆಯ ಮುಖವನ್ನೇ ನೋಡದಿದ್ದರೂ, ತಮ್ಮ ಅನುಭವಾತ್ಮಕ ಕಲಿಕೆಯಿಂದಲೇ, ಮಾಡುವ ಇವರ ಚಿಕಿತ್ಸಾಕ್ರಮವು ಬೆರಗು ಮತ್ತು ಅಚ್ಚರಿ. ತಮ್ಮ ತಿಳುವಳಿಕೆಯ ಮೂಲಕ ಜಾರಿಗೆ ತಂದ ಯಾವುದೇ ಚಿಕಿತ್ಸೆಗಳು ಅಪಾಯಕಾರಿಯಾದುದ್ದಲ್ಲ. ಅಲ್ಲಿ ಅವರ ಅನುಭವದ ಹುರುಳಿದೆ ಎಂದು ನಾವು ತಿಳಿದುಕೊಳ್ಳಲೇಬೇಕಾಗಿದೆ.

ನೂರಾರು ಗಿಡಮೂಲಿಕೆಗಳಿಂದ ಔಷಧಿಯನ್ನು ನೀಡುವ ಇವರು ಮಕ್ಕಳ ಆರೋಗ್ಯ ಕಾಪಾಡುವುದರಲ್ಲಿ ಎತ್ತಿದ ಕೈ. ಮಗುವಿಗೆ ಯಾವುದೇ ತರಹ ನೆಗಡಿ, ಕೆಮ್ಮು ಬಂದರೆ, ಅಳುವುದು, ಕಿರಿಕಿರಿ ಮಾಡುತ್ತಿದ್ದರೆ ಮನೆಯಲ್ಲಿಯೇ ಔಷಧಿಗಳನ್ನು ತಯಾರಿಸಿ ಹಾರೈಕೆ ಮಾಡುತ್ತಾರೆ. ಇಂದು ಹೊಸಹೊಸ ಔಷಧಿಗಳು, ಮಾತ್ರೆಗಳು, ಮುಲಾಮುಗಳು, ಇಂಜೆಕ್ಷನ್ ಗಳು ಯಥೇಚ್ಛವಾಗಿ ಲಭಿಸುತ್ತಿದ್ದರೂ, ಇವರು ನೀಡುವ ಗಿಡಮೂಲಿಕೆಯ ಔಷಧಿಗಳಿಗೆ ಜನ ಮಾರುಹೋಗಿ ಬರುತ್ತಿದ್ದಾರೆ.

ಇಂತಹ ಬಹಳ ಸೂಲಗಿತ್ತಿಯರು ಎಲೆಮರಿ ಕಾಯಿಗಳಂತೆ ಎಲ್ಲ ಭಾಗದಲ್ಲೂ ಕಾಣಸಿಗುತ್ತಾರೆ. ಅವರಿಂದ ಯಾವ ತೊಂದರೆಯೂ ಆಗಿಲ್ಲ. ಈಗ ಇಂತಹವರನ್ನೆಲ್ಲ ಗುರುತಿಸಿ ಬಳಸಿಕೊಳ್ಳುವಂತಾಗಬೇಕಿದೆ. ಸಾಂಪ್ರದಾಯಿಕ ಹೆರಿಗೆ ಮಾಡಿಸುವುದು ಒಂದು ಮಾನವೀಯ ಕೆಲಸ ಹಾಗೂ ನಂಬಿಕೆಯ ಸವಾಲಿನ‌ ಕೆಲಸವೂ ಹೌದು.

ಸಹಜ ಹೆರಿಗೆ ಎಂಬುದೇ ಅಪರೂಪವಾಗಿರುವ ಈ ದಿನಮಾನಗಳಲ್ಲಿ ಸಿಜೇರಿಯನ್ ಎಂಬುದು ಸ್ವಾಭಾವಿಕವಾಗಿರುವ ಈ ಕಾಲಘಟ್ಟದಲ್ಲಿ ಇವರು ಸುಲಭ ಹೆರಿಗೆಗಳನ್ನು ಮಾಡಿಸುತ್ತಾ, ಯಶಸ್ವಿಯಾಗುತ್ತಿದ್ದಾರೆ. ಇಂದಿನ ವೈಜ್ಞಾನಿಕ ಯುಗದಲ್ಲಿ ಎಷ್ಟೇ ಉತ್ತಮ ಆಧುನಿಕ ಉಪಕರಣವಿರುವ ಆಸ್ಪತ್ರೆಗಳಿದ್ದರೂ ಸಾಕಷ್ಟು ಅಡೆತಡೆಗಳನ್ನು ಎದುರಿಸಬೇಕಾದ ಪ್ರಸಂಗ ಎದುರಿಸಬೇಕಾದ ಪ್ರಸಂಗ ಬರಬಹುದೇ ವಿನಹ ಆದರೆ ಕೇವಲ ಪಂಚೇಂದ್ರಿಯ ಜ್ಞಾನದಿಂದ ಸರಳವಾಗಿ ಮಾಡುವ ಹೆರಿಗೆಗಳಿಗೆ ಈ ದಿನಗಳಲ್ಲಿಯೂ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನ ಇಷ್ಟು ಮುಂದುವರಿದಿದ್ದರೂ ಜನಮಾತ್ರ ಇನ್ನೂ ಇವರ ಜನಪದ ವೈದ್ಯಕ್ಕೆ ಹೆಚ್ಚು ಮಹತ್ವ ಕೊಡುತ್ತಿದ್ದಾರೆ. ಹಾಗಾಗಿ ಇದು ಹೆಚ್ಚು ಪ್ರಯೋಜನಕಾರಿ ಹಾಗೂ ಮಿತವ್ಯಯಕಾರಿಯಾಗಿದೆ.

ಬೇರೆ-ಬೇರೆ ಕಡೆಯಿಂದ ಜನಪದ ವೈದ್ಯದ ಗಿಡಮೂಲಿಕೆಯ ಔಷಧಿಗಾಗಿ ಹಾಗೂ ಸೂಲಗಿತ್ತಿ ಎಂಬ ಕಾರಣಕ್ಕೆ ಬಾಣಂತಿಯರು, ಜನರೂ ಕೂಡ ಬರುತ್ತಲೇ ಇದ್ದಾರೆ. ಬಂದವರೆಲ್ಲ ಇವರ ಪುಣ್ಯ, ಕೈಗುಣದಿಂದ ಗುಣವೂ ಆಗುತ್ತಿದ್ದಾರೆ. ಹಣಕ್ಕಾಗಿ ಕೆಲಸ ಮಾಡಿದ್ರೆ ನಾನು ಮಾಡುವ ಕೆಲಸ ಹುಸಿಯಾಗುತ್ತದೆ ಎಂದು ನಂಬಿರುವ ಇವರ ಬದುಕು‌ ಮಾತ್ರ ಹರಕು ಜೋಪುಡಿಯಲ್ಲಿದೆ.

“ಹಡೆಯುವವಳ ನೋವು ಸೂಲಗಿತ್ತಿಗೆ ಬಾರದು” ಎಂಬ ಗಾದೆಮಾತನ್ನು ಸುಳ್ಳು ಮಾಡಿ ಎಲ್ಲ ಹೆರಿಗೆಗಳ ನೋವ ತಾನೇ ಉಂಡ ಸೂತಕವಿಲ್ಲದ ಮಲ್ಲಮ್ಮನ ಸೇವೆ ಸಮಾಜಕ್ಕೆ, ವೈದ್ಯಕೀಯ ಕ್ಷೇತ್ರಕ್ಕೆ ಮಾದರಿ ಹಾಗೂ ಅಚ್ಚರಿ. ಇವರ ಸಾಧನೆಯ ಹಾದಿಯೇ ಒಂದು ವಿಸ್ಮಯ, ವೈದ್ಯಲೋಕದ ಬೆರಗು. ನಿರ್ವಹಿಸಿದ, ನಿರ್ವಹಿಸುತ್ತಿರುವ ಅಪರೂಪದ ಸೂಲಗಿತ್ತಿ ಸೇವೆಯ ಗುರುತಿಸಿ, ಜೀವನದುದ್ದಕ್ಕೂ ಅಸಹಾಯಕರಿಗಾಗಿ, ಬಡವರಿಗಾಗಿ ತಮ್ಮ ಜೀವವನ್ನೇ ಮುಡಿಪಾಗಿಟ್ಟು, ಸದ್ದಿಲ್ಲದೇ ಮಾಡುತ್ತಿರುವ ಜೀವಪೊರೆಯುವ ಮಾನವೀಯ ಸೇವೆ ಹಾಗೂ ಜನಪದ ವೈದ್ಯಯ ಸೇವೆಯನ್ನೂ ಗುರುತಿಸಿ ಸಂಘ-ಸಂಸ್ಥೆಗಳು, ಸರ್ಕಾರ ಗುರುತಿಸಿ ಪ್ರೋತ್ಸಾಹಿಸಿ, ಸೂಕ್ತ ಸ್ಥಾನಮಾನಗಳೊಂದಿಗೆ ಗೌರವಿಸಿ ಬೆಳಕಿಗೆ ತರಬೇಕಾಗಿದೆ.

‍ಲೇಖಕರು Avadhi

November 22, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ದಿಲ್ಲಿ ಹೈ ದಿಲ್ ಹಿಂದೂಸ್ತಾನ್ ಕಾ – 2’

‘ದಿಲ್ಲಿ ಹೈ ದಿಲ್ ಹಿಂದೂಸ್ತಾನ್ ಕಾ – 2’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ |ಕಳೆದ ಸಂಚಿಕೆಯಿಂದ|...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This