ತಲಾಖ್ ಬಗ್ಗೆ ರಂಜಾನ್ ದರ್ಗಾ ವ್ಯಾಖ್ಯಾನ

ಇಸ್ಲಾಂ ವಿರೋಧಿ ತಲಾಖ್ ತಲಾಖ್ ತಲಾಖ್

darga
ರಂಜಾನ್ ದರ್ಗಾ

‘ಸುಧಾರಣೆಯ ಹೆಸರಿನಲ್ಲಿ ವೈಯಕ್ತಿಕ ಕಾನೂನುಗಳ ಪುನರ್ ರಚನೆ ಸಾಧ್ಯವಿಲ್ಲ. ಮುಸ್ಲಿಂ ಧರ್ಮಗ್ರಂಥ ಕರಾನ್ ನಿಂದ ಮುಸ್ಲಿಂ ವೈಯಕ್ತಿಕ ಕಾನೂನನ್ನು ರಚಿಸಲಾಗಿದೆ. ಆದ್ದರಿಂದ ಅದನ್ನು ಪರೀಕ್ಷೆಗೆ ಒಳಪಡಿಸಲು ಅವಕಾಶವಿಲ್ಲ’ ಎಂದು ಅಖಿಲ ‘ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ’ಯು 2016ನೇ ಸೆಪ್ಟೆಂಬರ್ 18ರಂದು ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.

ಪ್ರಜ್ಞಾವಂತ ಮುಸ್ಲಿಮರು ಕೇಳುತ್ತಿರುವುದು ಷರಿಯತ್ ನಲ್ಲಿ ಸುಧಾರಣೆ ಅಲ್ಲ, ಬ್ರಿಟಿಷರು ಜಾರಿಗೊಳಿಸಿದ ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಸುಧಾರಣೆ.

talaq3‘ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ’ ಸಂಘಟನೆ, ಮೂರು ತಲಾಖ್ ವಿರುದ್ಧ 50 ಸಾವಿರ ಸಹಿ ಸಂಗ್ರಹಿಸಿ ಅದನ್ನು ನಿಷೇಧಿಸಬೇಕೆಂದು ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದೆ.

ಮುಸ್ಲಿಮರ ಮೇಲೆ ಹೇರಿರುವ ಮುಸ್ಲಿಂ ವೈಯಕ್ತಿಕ ಕಾನೂನು ಷರಿಯತ್ ಅಲ್ಲ. ಷರಿಯತ್ ಚಲನಶೀಲವಾದುದು. ಮುಸ್ಲಿಂ ಧರ್ಮದ ಪ್ರಬುದ್ಧ ಅನುಯಾಯಿಗಳು ಯಾವ ಕಾಲಕ್ಕೂ ಹೆಂಡತಿಗೆ ‘ತಲಾಖ್ ತಲಾಖ್ ತಲಾಖ್’ ಎಂದು ಹೇಳುವುದಿಲ್ಲ.
ಕಾಮದಾಸೆಗಾಗಿ ಎರಡನೇ ಮದುವೆಯಾಗುವುದಿಲ್ಲ. ‘ತಲಾಖ್ ತಲಾಖ್ ತಲಾಖ್’ ಎಂದು ಒದರಿ ಹೆಂಡತಿಯನ್ನು ಹೊರಗಟ್ಟುವ ಗಂಡನನ್ನು ಪ್ರಶ್ನಿಸುವ ಹಕ್ಕು ಭಾರತದಲ್ಲಿ ಪ್ರಚಲಿತವಿರುವ ಮುಸ್ಲಿಂ ವೈಯಕ್ತಿಕ ಕಾನೂನಿಗೆ ಇಲ್ಲ. ಆದರೆ ಷರಿಯತ್ ಗೆ ಇದೆ.

‘ಬರುವ ವರ್ಷ ನಿಮ್ಮನ್ನು ಕಾಣುವೆನೊ ಇಲ್ಲವೊ ಗೊತ್ತಿಲ್ಲ. ಅದಕ್ಕಾಗಿ ಓ ಜನರೇ ನನ್ನ ಮಾತುಗಳ ಕಡೆ ಗಮನವಿಡಿ. ಅಧರ್ಮವಾದ ಪದ್ಧತಿಗಳೆಲ್ಲ ನನ್ನ ಪದತಲದಲ್ಲಿ ನಿರ್ನಾಮಗೊಂಡಿವೆ. ಅರಬರು ಅರಬರಲ್ಲದವರಿಗಿಂತ ಹೆಚ್ಚಿನವರಲ್ಲ. ಅರಬರಲ್ಲದವರು ಅರಬರಿಗಿಂತ ಹೆಚ್ಚಿನವರಲ್ಲ. ನೀವೆಲ್ಲ ಆದಂನ ಮಕ್ಕಳು. ಆದಂನನ್ನು ಮಣ್ಣಿನಿಂದ ಸೃಷ್ಟಿಸಲಾಗಿದೆ. ಸತ್ಯವಾಗಿಯೂ ಎಲ್ಲಾ ಸತ್ಯವಿಶ್ವಾಸಿಗಳು ಸಹೋದರರು. ನಿಮ್ಮ ಗುಲಾಮರು! ನೀವು ಉಣ್ಣುವಂಥ ಆಹಾರ ಅವರಿಗೆ ಕೊಡಿ. ನೀವು ಉಡುವಂಥ ಬಟ್ಟೆ ಅವರಿಗೆ ಕೊಡಿ. ಅಜ್ಞಾನ ಕಾಲದ ರಕ್ತಪಾತಮಯವಾದ ಬದ್ಧದ್ವೇಷವನ್ನು ನಿಷೇಧಿಸಲಾಗಿದೆ.
ನೀವು ನಿಮ್ಮ ಹೆಂಡಂದಿರೊಡನೆ ವ್ಯವಹರಿಸುವಾಗ ಅಲ್ಲಾಹನನ್ನು ಜ್ಞಾಪಿಸಿಕೊಳ್ಳಿ. ನಿಮಗೆ ಅವರ ಮೇಲೆ ಹಕ್ಕಿದೆ. ಅವರಿಗೆ ನಿಮ್ಮ ಮೇಲೆ ಹಕ್ಕಿದೆ. ಸತ್ಯವಾಗಿಯೂ ನ್ಯಾಯತೀರ್ಮಾನದ ದಿನದ ವರೆಗೆ ಪ್ರತಿಯೊಬ್ಬರ ರಕ್ತ, ಆಸ್ತಿ ಮತ್ತು ಪ್ರತಿಷ್ಠೆಗಳು ಅತಿಕ್ರಮಣಕ್ಕೀಡಾಗದಂಥವು ಎಂಬುದನ್ನು ನೀವು ತಿಳಿಯಲೇ ಬೇಕು’.

ಮುಹಮ್ಮದ್ ಪೈಗಂಬರರು (ಕ್ರಿಸ್ತಶಕ 571-633) ಮಕ್ಕಾದಲ್ಲಿ ಹಜ್ ಯಾತ್ರಿಕರಿಗೆ ವಿದಾಯ ಹೇಳುವಾಗ ಅವರನ್ನು ಉದ್ದೇಶಿಸಿ ಮಾಡಿದ ಕೊನೆಯ ಭಾಷಣವಿದು. ಅವರ ಕೊನೆ ಮಾತು ಮಾನವ ಜನಾಂಗಕ್ಕೆ ಅನುಪಮ ಕೊಡುಗೆಯಾಗಿದೆ. ಮಾನವ ವ್ಯಕ್ತಿತ್ವವನ್ನು ಅಳೆಯುತ್ತ ಆಚಂದ್ರಾರ್ಕವಾಗಿ ನಿಲ್ಲುವಂಥ ಶಕ್ತಿಶಾಲಿಯಾದ ಮಾತು ಅದು. ಪೈಗಂಬರರು ವಿಶ್ವಕ್ಕೆ ಅರುಹಿದ ಇಸ್ಲಾಂ ಧರ್ಮದಲ್ಲಿ ಮೇಲಿಲ್ಲ ಕೀಳಿಲ್ಲ. ಒಡೆಯ ಒಡೆಯನಲ್ಲ, ಗುಲಾಮ ಗುಲಾಮನಲ್ಲ. ಯಾರೂ ಸರ್ವಾಧಿಕಾರಿ ಅಲ್ಲ. ಹೆಂಗಸು ಗಂಡಸಿನ ದಾಸಿ ಅಲ್ಲ. ಯಾರೂ ಯಾರ ಮೇಲೂ ಏನನ್ನೂ ಹೇರುವಂತಿಲ್ಲ. ಶಾಂತಿ ಮತ್ತು ಪರಧರ್ಮ ಸಹಿಷ್ಣುತೆಯನ್ನು ಬಿಟ್ಟುಕೊಡುವಂತಿಲ್ಲ. ಇಂಥ ಮಹಾಬಯಕೆಗಳ ಒಂದು ಧರ್ಮದ ಹೆಸರಿನಲ್ಲಿ ಏನೇನು ನಡೆಯುತ್ತಿದೆ ಎಂಬುದಕ್ಕೆ ಇಂದಿನ ವಿದ್ಯಮಾನಗಳೇ ಸಾಕ್ಷಿ.

ಮಹಿಳೆ ಸದಾ ಬಲಿಪಶು:

ಮಹಿಳೆ ಯುಗ ಯುಗಗಳಿಂದಲೂ ಬಲಿಪಶುವಾಗುತ್ತಲೇ ಮುಂದುವರಿದಿದ್ದಾಳೆ. ಇಸ್ಲಾಂ ಧರ್ಮ ಮಹಿಳೆಯರಿಗೆ, ಅನಾಥ ಮಕ್ಕಳಿಗೆ, ಗುಲಾಮರಿಗೆ ಮತ್ತು ಬಡಜನರಿಗೆ ಹೊಸ ಆಶಾಕಿರಣವಾಗಿ ಬಂದಿತು. ಸಮಾನತೆಯ ಸಂದೇಶದೊಂದಿಗೆ ಹೊಸ ಗಾಳಿ ಬೀಸಿತು. ಸರ್ವವಿಧದಿಂದಲೂ ತುಳಿತಕ್ಕೀಡಾದವರು ಹಾಯಾಗಿ ಉಸಿರಾಡುವಂತಾಯಿತು.

ಆದರೆ ಮುಸ್ಲಿಂ ವೈಯಕ್ತಿಕ ಕಾನೂನಿನಿಂದಾಗಿ ಭಾರತೀಯ ಮುಸ್ಲಿಂ ಮಹಿಳೆ ಹೊಸ ಬದುಕನ್ನು ಕಾಣದಂಥ ಪರಿಸ್ಥಿತಿಯುಂಟಾಗಿದೆ. ಇಂಥ ಇಸ್ಲಾಂ ವಿರೋಧಿ ವೈಯಕ್ತಿಕ ಕಾನೂನಿಂದಾಗಿ ಅವಳನ್ನು ಕಟ್ಟಿಕೊಂಡ ಗಂಡ ಮೂರು ಬಾರಿ ತಲಾಖ್ ಹೇಳಿ ಅವಳನ್ನು ಆರ್ಥಿಕವಾಗಿ ಕೂಡ ಸಹಕರಿಸದೆ ಬೀದಿಗಟ್ಟಬಹುದು. ಇಲ್ಲವೆ ಇನ್ನೊಬ್ಬಳನ್ನು ಕಟ್ಟಿಕೊಂಡು ಅವಳನ್ನು ಅವಮಾನಕ್ಕೀಡುಮಾಡಬಹುದು.

ಹೀಗೆಂದ ಮಾತ್ರಕ್ಕೆ ಎಲ್ಲ ಮುಸ್ಲಿಂ ಗಂಡಸರು ಕ್ರೂರಿಗಳಾಗಿದ್ದಾರೆಂದಾಗಲೀ, ಹಿಂದೂ ಮಹಿಳೆಯರು ಸುಖದ ಸುಪ್ಪತ್ತಿಗೆಯಲ್ಲಿ ಹೊರಳಾಡುತ್ತಿದ್ದಾರೆಂದಾಗಲೀ ಭಾವಿಸಬಾರದು. ಕರುಣೆ ಮತ್ತು ಮಾನವೀಯತೆಯಿಂದ ತುಂಬಿದ ಒಂದು ಧರ್ಮದ ಹೆಸರಿನಲ್ಲಿ ವಿಕೃತ ಮನಸ್ಸಿನ ಜನ ವೈಯಕ್ತಿಕ ಕಾನೂನಿನ ದುರ್ಬಳಕೆ ಮಾಡಿಕೊಳ್ಳುತ್ತ ಎಂಥ ಅಧರ್ಮಕ್ಕೆ ಇಳಿಯುತ್ತಾರೆ ಎಂಬುದನ್ನು ತಿಳಿಯಪಡಿಸುವುದೇ ಇಲ್ಲಿನ ಉದ್ದೇಶವಾಗಿದೆ.

ಷರಿಯತ್ ಜಾರಿಯಲ್ಲಿಲ್ಲ:

trple-talaqಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಆಡಳಿತವಿದ್ದಾಗ ಭಾರತದ ವೈಸರಾಯ್ ವಾರನ್ ಹೆಸ್ಟಿಂಗ್ಸ್ 1772ರಲ್ಲಿ ಹಿಂದೂ ಮುಸ್ಲಿಂ ಕಾಯ್ದೆಗಳ ಮೇಲೆ ನಿಯಂತ್ರಣ ಹೇರಿದ. 1780ರಲ್ಲಿ ಅದನ್ನು ಕಾನೂನಿನ ಮೂಲಕ ಕಾರ್ಯರೂಪಕ್ಕೆ ತರಲಾಯಿತು. ಆಗ ಮುಸ್ಲಿಮರಿಗೆ ಅವರ ಮದುವೆ, ಉತ್ತರಾಧಿಕಾರ ಮುಂತಾದ ವಿಚಾರಗಳಿಗೆ ಸಂಬಂಧಿಸಿದ ಕಾನೂನು ಮಾತ್ರ ಉಳಿಯಿತು.

ಮುಂದೆ 1937ರಲ್ಲಿ ಬ್ರಿಟಿಷರು ಜಾರಿಗೆ ತಂದ ‘ಮುಸ್ಲಿಂ ಪರ್ಸನಲ್ ಲಾ (ಷರಿಯತ್) ಅಪ್ಲಿಕೇಷನ್ ಆಕ್ಟ್ 1937’ ಅನ್ನು ಜಸ್ಟಿಸ್ ಅಮೀರ್ ಅಲಿ ಅವರು ಕ್ರೋಡೀಕರಿಸಿದ್ದಾರೆ. ಷಿಯಾ ಪಂಗಡಕ್ಕೆ ಸೇರಿದ್ದ ಅವರು, ಭಾರತದಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಇರುವ ಸುನ್ನಿ ಪಂಗಡಕ್ಕೆ ಅವಶ್ಯಕವೆನಿಸುವಂಥ ಕಾನೂನನ್ನು ರೂಪಿಸುವಲ್ಲಿ ವಿಫಲರಾಗಿದ್ದಾರೆ. ಅವರು ಕಾಯ್ದೆ ತಜ್ಞರಾಗಿದ್ದರೂ ಷರಿಯತ್ ಅನ್ನು ಆಳವಾಗಿ ಅಧ್ಯಯನ ಮಾಡಿದವರಾಗಿರಲಿಲ್ಲ ಎಂಬ ವಾದವೂ ಇದೆ.

ಇಸ್ಲಾಂ ಮೂಲತಃ ಏಕಪತ್ನಿತ್ವವನ್ನು ಬೆಂಬಲಿಸುತ್ತದೆ ಮತ್ತು ವಿವಾಹ ವಿಚ್ಛೇದನವನ್ನು ತಿರಸ್ಕರಿಸುತ್ತದೆ ಎಂಬುದು ಅವರ ಗಮನಕ್ಕೆ ಬರಲೇ ಇಲ್ಲ. ಹೀಗಾಗಿ ಅವರು ಕ್ರೋಡೀಕರಿಸಿದ ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಕುರಾನ್ ಮತ್ತು ಹದೀಸ್ ಗೆ  ಅಪಚಾರವೆಸಗುವಂಥ ವಿಚಾರಗಳಿವೆ. ಆದ್ದರಿಂದ ಮುಸ್ಲಿಮರು ಷರಿಯುತ್ ನ ತಿರುಳನ್ನು ಅರ್ಥೈಸಿಕೊಂಡು ಮುನ್ನಡೆಯುವುದು ಅವಶ್ಯವಾಗಿದೆ.

ಷರಿಯತ್ ನ  ಶಬ್ದಾರ್ಥ ‘ನೀರುಳ್ಳ ಸ್ಥಳಕ್ಕೆ ದಾರಿ’ ಅಥವಾ ಅನುಸರಿಸಬೇಕಾದ ಮಾರ್ಗ. ಪಾರಿಭಾಷಿಕ ಅರ್ಥದಲ್ಲಿ ಅದು ಮುಸ್ಲಿಂ ಧರ್ಮಶಾಸ್ತ್ರ. ಧಾರ್ಮಿಕ, ನೈತಿಕ, ಸಾಮಾಜಿಕ, ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ವಿಚಾರಗಳನ್ನು ಅದು ಒಳಗೊಂಡಿದೆ.

ಬ್ರಿಟಿಷರು ಅಮೀರ್ ಅಲಿ ಮೂಲಕ ಸೃಷ್ಟಿಸಿದ ಮುಸ್ಲಿಂ ವೈಯಕ್ತಿಕ ಕಾನೂನು ಕೇವಲ ಮದುವೆ, ವಿವಾಹ ವಿಚ್ಛೇದನ, ಉತ್ತರಾಧಿಕಾರ ಮತ್ತು ಧರ್ಮದತ್ತಿ ಮುಂತಾದ ವೈಯಕ್ತಿಕ ಧಾರ್ಮಿಕ ವಿಚಾರಗಳಿಂದ (ಅದೂ ಕೆಲವೆಡೆ ತಪ್ಪು ತಪ್ಪಾಗಿ) ಕೂಡಿದೆ. ಗೊಂದಲದ ಈ ಮುಸ್ಲಿಂ ವೈಯಕ್ತಿಕ ಕಾನೂನನ್ನೇ ಷರಿಯತ್ ಎಂದು ಪಟ್ಟಭದ್ರ ಹಿತಾಸಕ್ತಿಗಳು ಮುಸ್ಲಿಂ ಸಮೂಹದಲ್ಲಿ ಭ್ರಮೆ ಹುಟ್ಟಿಸಿವೆ. ಮುಸ್ಲಿಂ ಕೋಮುವಾದಿಗಳು ಮತ್ತು ಹಿಂದೂ ಕೋಮುವಾದಿಗಳು ಒಂದು ವಿಚಾರದಲ್ಲಿ ಒಮ್ಮತಕ್ಕೆ ಬರುತ್ತಾರೆ. ಅದೇನೆಂದರೆ ಯಥಾಸ್ಥಿತಿವಾದವನ್ನು ಬೆಂಬಲಿಸುವುದು.

‘ಮುಸ್ಲಿಂ ವೈಯಕ್ತಿಕ ಕಾನೂನು ಮುಸ್ಲಿಂ ಮಹಿಳೆಯರಿಗೆ ವಿರುದ್ಧವಾಗಿದೆ. ಆದರೆ ಷರಿಯತ್ ಮುಸ್ಲಿಂ ಮಹಿಳೆಯರಿಗೆ ರಕ್ಷಣಾ ಕೋಟೆಯಂತಿದೆ’ ಎಂಬ ಸತ್ಯವನ್ನು ಯಾವ ‘ಕಟ್ಟಾ’ ಮುಸ್ಲಿಮನೂ ಹೇಳಲು ಸಿದ್ಧನಿಲ್ಲ!

‘ಭಾರತದಲ್ಲಿ ಷರಿಯತ್ ಜಾರಿಯಲ್ಲಿಲ್ಲ. ಹೀಗಾಗಿ ಆ ಕುರಿತು ಸುಧಾರಣೆ ಬಯಸುವುದು, ಅಥವಾ ಅದು ಇದ್ದಂತೆ ಇರಲಿ ಎಂದು ವಾದಿಸುವುದು ಅಸಮಂಜಸವಾಗುತ್ತದೆ. ಆದರೆ ಷರಿಯತ್ ಆಶಯದ ಪ್ರಕಾರ ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ತಿದ್ದುಪಡಿಯಾಗಿ ಬಹುಪತ್ನಿತ್ವ ಮತ್ತು ತಲಾಖ್ ಅನ್ನು ಕಾನೂನು ಬಾಹಿರಗೊಳಿಸುವುದು. ಒಂದುವೇಳೆ ಕೂಡಿಬಾಳುವುದು ಸಾಧ್ಯವೇ ಇಲ್ಲ ಎಂದಾದರೆ ತಲಾಖ್ ಪಡೆದ ಮಹಿಳೆಗೆ ಜೀವನಾಂಶವನ್ನು ಒದಗಿಸುವುದು’- ಇವು ಪ್ರಜ್ಞಾವಂತ ಮುಸ್ಲಿಮರ ಮುಖ್ಯ ವಿಚಾರಗಳಾಗಿವೆ.

ಷರಿಯತ್ ವಿಕಸನಶೀಲವಾದುದು:

ಇನ್ನು ಷರಿಯತ್ ವಿಚಾರವನ್ನೇ ತೆಗೆದುಕೊಳ್ಳೋಣ. ಕಾಲದ ಹಿನ್ನೆಲೆಯಲ್ಲಿ ಅದು ಕೂಡ ವಿಕಸನಗೊಳ್ಳುತ್ತಲೇ ಬಂದಿದೆ.

ಷರಿಯತ್ ಮೂಲ ಕುರಾನ್ ಮತ್ತು ಹದಿಸ್ಗಳಲ್ಲಿದೆ. (ಮಹಮ್ಮದ್ ಬದುಕಿದ ಪರಿ ಮತ್ತು ಅವರ ವಚನಗಳನ್ನು ಹದಿಸ್ ಒಳಗೊಂಡಿದೆ). ಇಜ್ಮಾ ಮತ್ತು ಕಿಯಾಸ್ ಗಳ ಮೂಲಕ ಅದು ವಿಕಸನಗೊಂಡಿದೆ. ಪೈಗಂಬರರ ಸಂಗಾತಿಗಳು ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ‘ಇಜ್ಮಾ’ ಎನ್ನುತ್ತಾರೆ. ಮುಸ್ಲಿಂ ನ್ಯಾಯಪಂಡಿತರು ಮತ್ತು ಮುಸ್ಲಿಂ ಸರ್ವಸದಸ್ಯರ ಸಭೆಯ ಒಟ್ಟು ಅಭಿಪ್ರಾಯದ ಮೂಲಕವೂ ‘ಇಜ್ಮಾ’ ರೂಪಿಸಲಾಗುವುದು. ಕೇವಲ ಮುಜ್ತಾಹಿದ್ ಗಳು (ವ್ಯಾಖ್ಯಾನಕಾರರು) ಮಾತ್ರ ಇಜ್ಮಾ ರೂಪಿಸುವಲ್ಲಿ ಭಾಗವಹಿಸಬೇಕೆಂಬುದು ತಪ್ಪು ಅಭಿಪ್ರಾಯವಾಗಿದೆ. ‘ಕಿಯಾಸ್’ ಎಂದರೆ ಔಚಿತ್ಯ ಪ್ರಜ್ಞೆಯಿಂದ ಮೂಲಗ್ರಂಥದ ಮೂಲಕ ಕಾನೂನನ್ನು ಬೆಳೆಸುವುದು.

ಈ ರೀತಿಯ ವಿಕಸನ ಕ್ರಿಯೆ ಇಂದು ನಿನ್ನೆಯದಲ್ಲ. ಪೈಗಂಬರರೇ ಈ ಬಗ್ಗೆ ಸೂಚನೆ ಕೊಟ್ಟಿದ್ದಾರೆ. ಕುರಾನ್ ಮತ್ತು ಸುನ್ನಾ (ಹದಿಸ್)ಗಳ ಮೂಲಕ ಸಮಸ್ಯೆಗಳಿಗೆ ಯಾವುದೇ ಬೆಳಕು ಕಾಣದಿದ್ದರೆ ಏನು ಮಾಡಬೇಕೆಂದು ಕೇಳಿದ್ದಕ್ಕೆ, ‘ಆಗ ತರ್ಕದ ಮೂಲಕ ನನ್ನ ಅಭಿಪ್ರಾಯ ವ್ಯಕ್ತಪಡಿಸುತ್ತೇನೆ’ ಎಂದು ಪೈಗಂಬರರು ಹೇಳಿದ್ದರು. ಹೀಗೆ ಮೂಲ ಗ್ರಂಥದ ಆಧಾರದ ಮೇಲೆ ತರ್ಕದ ಮೂಲಕ ಕಾಲದ ಸಮಸ್ಯೆಗಳನ್ನು ಬಿಡಿಸುವ ಕ್ರಿಯೆಗೆ ‘ಇಜ್ತೆಹಾದ್’ ಎಂದು ಹೇಳುತ್ತಾರೆ.

talaq2ಹಜ್ರತ್ ಉಮರ್ ಅವರು ಎರಡನೇ ಖಲಿಫಾ ಆಗಿದ್ದರು. ಅವರು ಇಜ್ತೆಹಾದ್ ಕುರಿತು ಹೀಗೆ ಹೇಳಿದ್ದಾರೆ:

‘ನಿಮ್ಮ ತಿಳಿವಳಿಕೆ ಪ್ರಕಾರ ಕುರಾನ್ ಮತ್ತು ಸುನ್ನಾ (ಹದಿಸ್) ಹೇಳದಂಥ ಸಮಸ್ಯೆಯನ್ನು ನೀವು ಎದುರಿಸುವಾಗ ಅದಕ್ಕೆ ಸಂಬಂಧಿಸಿದಂತೆ ಯಾವ ನಿರ್ಣಯ ಯೋಗ್ಯವಾದುದು ಎಂಬುದನ್ನು ನಿಮ್ಮ ಮನಸ್ಸಿನಲ್ಲಿ ಸ್ಪಷ್ಟಪಡಿಸಿಕೊಳ್ಳಿರಿ. ಮೊದಲು ಸಮಸ್ಯೆಯನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸಿರಿ. ಒಂದೇ ತೆರನಾದ ಮತ್ತು ಸಾದೃಶ್ಯ ರೀತಿಯ ಘಟನೆಗಳನ್ನು ಹುಡುಕಿರಿ. ನಂತರ ಸಾದೃಶ್ಯವಾಗಿ ತರ್ಕಿಸಿರಿ. ಸಮಾನಾಂತರವಾದ ನಿರ್ಣಯಗಳನ್ನು ಕೈಗೊಳ್ಳಿರಿ. ನಂತರ ಅಲ್ಲಾಹಗೆ ಹೆಚ್ಚು ಹಿಡಿಸುವಂಥ ಮತ್ತು ಆ ವಿಚಾರದಲ್ಲಿ ಸತ್ಯಕ್ಕೆ ಅತಿ ಸಮೀಪವಿರುವ ಅಭಿಪ್ರಾಯ ಹೊಂದಿರಿ.

ಷರಿಯತ್ ಜಡವಲ್ಲ:

ಅರಬಸ್ತಾನದಲ್ಲಿ ಬಡತನ ಹೆಚ್ಚಾದಾಗ ಹಜ್ರತ್ ಉಮರ್ ಅವರು, ಕಳ್ಳತನ ಮಾಡಿದವರ ಕೈ ಕತ್ತರಿಸುವುದನ್ನು ನಿಲ್ಲಿಸಲು ತಿಳಿಸಿದರು. ಷರಿಯತ್ ಜಡವಲ್ಲ ಎನ್ನಲು ಇದೊಂದೇ ಉದಾಹರಣೆ ಸಾಕು. ಅರಬರಲ್ಲಿ ಬಡತನ ಹೆಚ್ಚಾಯಿತು ಎಂದರೆ ಅರಬರಲ್ಲಿನ ಶ್ರೀಮಂತರು ಇಸ್ಲಾಂ ಧರ್ಮವನ್ನು ನಿಜವಾದ ಅರ್ಥದಲ್ಲಿ ಅನುಸರಿಸಲಿಲ್ಲ ಎಂದೇ ಅರ್ಥ. ಇಸ್ಲಾಂ ಧರ್ಮದ ಪ್ರಕಾರ ಬಡ್ಡಿ ತಿನ್ನಬಾರದು. ಕಷ್ಟದಲ್ಲಿದ್ದವರಿಗೆ ಸಾಲ ಕೊಟ್ಟದ್ದನ್ನು ಮರಳಿ ಪಡೆಯಬಾರದು. ಸಂಪಾದಿಸಿದ್ದರಲ್ಲಿ ಶೇಕಡಾ 2.5ರಷ್ಟು ಭಾಗವನ್ನು ಜಕಾತ್ ರೂಪದಲ್ಲಿ ಬಡವರಿಗೆ ಕೊಡಬೇಕು. ಆಸ್ತಿಯನ್ನು ಹಂಚಿಕೊಳ್ಳುವಾಗ ಬಡವರು ಮತ್ತು ಸಂಬಂಧಿಕರು ಬಂದರೆ ಅವರಿಗೂ ಒಂದಿಷ್ಟು ಪಾಲು ಕೊಡಬೇಕು.

ಇಷ್ಟೆಲ್ಲ ಮಾಡಿದರೆ ಒಂದು ಸಮಾಜದಲ್ಲಿ ಬಡತನವಿರಲು ಸಾಧ್ಯವೆ? ಇಂಥ ಒಂದು ಪರಿಪೂರ್ಣವಾದ ಇಸ್ಲಾಂ ಸಮಾಜದಲ್ಲಿ ಕಳ್ಳತನ ಮಾಡಿದವನ ಕೈ ಕಡೆಯಬೇಕೆಂದು ಕುರಾನ್ ಹೇಳುತ್ತದೆ ಹೊರತಾಗಿ ಡಂಬಾಚಾರದ ಸಮಾಜದಲ್ಲಿನ ಕಳ್ಳರ ವಿಚಾರವಾಗಿ ಹೇಳುವುದಿಲ್ಲ. ಇದನ್ನು ಹಜರತ್ ಉಮರ್ ಅವರು ಸರಿಯಾಗಿ ಅರ್ಥೈಸಿಕೊಂಡು ಕಳ್ಳರ ಕೈ ಕಡಿಯದಂತೆ ನೋಡಿಕೊಂಡರು. ಹೀಗೆ ಇಜ್ತಿಹಾದ್ ಮೂಲಕ ಮುಸ್ಲಿಂ ಕಾನೂನು ಬೆಳವಣಿಗೆ ಹೊಂದಿದೆ.

‘ತಲಾಖ್ ತಲಾಖ್ ತಲಾಖ್’ ಎಂದು ಒಂದೇ ಸಮನೆ ಒದರಿ ಹೆಂಡತಿಯನ್ನು ಹೊರಗಟ್ಟುವುದಕ್ಕೆ ‘ತಲಾಖ್ ಉಲ್ ಬಿದಾತ್’ ಎನ್ನುತ್ತಾರೆ. ಇಸ್ಲಾಂ ಧರ್ಮದ ಪ್ರಕಾರ ಅದು ಪಾಪ ಕಾರ್ಯ. ಅದನ್ನು ಕಾನೂನು ಬಾಹಿರ ಮಾಡಿ ಇಸ್ಲಾಂ ಸಂಸ್ಕೃತಿಯನ್ನು ರಕ್ಷಿಸುವುದು ಭಾರತ ಸರ್ಕಾರದ ಸಂವಿಧಾನಾತ್ಮಕ ಕರ್ತವ್ಯವಾಗಿದೆ.

ಷರಿಯತ್ ಗಳು ಅನೇಕ:

ಮುಸ್ಲಿಮರಲ್ಲಿ ಮುಖ್ಯವಾಗಿ ಷಿಯಾ ಮತ್ತು ಸುನ್ನಿ ಎಂಬ ಎರಡು ಪಂಗಡಗಳಿವೆ. ಸುನ್ನಿಗಳಲ್ಲಿ ಮುಖ್ಯವಾಗಿ ನಾಲ್ಕು ಪದ್ಧತಿಗಳು ಜಾರಿಯಲ್ಲಿವೆ.

ಸುನ್ನಿಗಳಲ್ಲಿ ಮೊದಲಿಗೆ ಇಮಾಮ್ ಅಬು ಹನಿಫಾ (ಕ್ರಿಸ್ತಶಕ 699-766) ಅವರಿಂದ ಹನಾಫಿ ಪದ್ಧತಿ ಆರಂಭವಾಯಿತು. ಇದರಲ್ಲಿ ಔಚಿತ್ಯ ಪ್ರಜ್ಞೆಯಿಂದ ಮೂಲಗ್ರಂಥದ ಮೂಲಕ ಕಾನೂನನ್ನು ಬೆಳೆಸುವ ‘ಕಿಯಾಸ್’ಗೆ ಅವಕಾಶವಿದೆ. ಭಾರತ, ಪಾಕಿಸ್ತಾನ, ಟರ್ಕಿ ಮತ್ತು ಈಜಿಪ್ಟ್ ನಲ್ಲಿ ಹನಾಫಿಗಳು ಹೆಚ್ಚಾಗಿದ್ದಾರೆ.

ಇಮಾಮ್ ಮಾಲಿಕ್ ಇಬ್ ನ ಅನಾಸ್ (ಕ್ರಿಸ್ತಶಕ 713-795) ಅವರಿಂದ ಮಾಲಕಿ ನ್ಯಾಯ ಪದ್ಧತಿ ಆರಂಭವಾಯಿತು. ಇದರಲ್ಲಿ ಕಿಯಾಸ್ ಗೆ ಆದ್ಯತೆ ಇಲ್ಲ. ಮಾಲಕಿಗಳು ಉತ್ತರ ಆಫ್ರಿಕಾದಲ್ಲಿದ್ದಾರೆ.

ಇಮಾಮ್ ಷಫಿ (ಕ್ರಿಸ್ತಶಕ 767-820) ಅವರಿಂದ ಷಫಾಯಿ ನ್ಯಾಯ ಪದ್ಧತಿ ಆರಂಭವಾಯಿತು. ಉಸುಲ್ ನ (ತತ್ತ್ವದ) ಪ್ರತಿಪಾದಕರಿವರು. ಉಸುಲ್ ಮೂಲಕ ವ್ಯಾಖ್ಯಾನಿಸಲು ಬೇಕಾದ ತತ್ತ್ವಗಳು ಹುಟ್ಟಿಕೊಂಡವು. ಅರಬಸ್ತಾನದ ಕರಾವಳಿಗುಂಟ ಷಫಾಯಿಗಳಿದ್ದಾರೆ. ಕೇರಳದ ಮಾಪಿಳ್ಳೆಗಳು ಷಫಾಯಿಗಳು.

ಇಮಾಮ್ ಅಹ್ಮದ್ ಇಬ್ ನ ಹನ್ಬಾಲ್ (ಕ್ರಿಸ್ತಶಕ 780-855) ಅವರಿಂದ ಹನ್ಬಾಲಿ ನ್ಯಾಯಪದ್ಧತಿ ಆರಂಭವಾಯಿತು. ಈ ಪದ್ಧತಿ ಹೆಚ್ಚಾಗಿ ಹದಿಸ್ ಮೇಲೆ ಅವಲಂಬಿತವಾಗಿದೆ. ಸೌದಿ ಅರೇಬಿಯಾದಲ್ಲಿ ಹನ್ಬಾಲಿಗಳಿದ್ದಾರೆ.

ಷಿಯಾಗಳಲ್ಲಿ ಕೂಡ ಅನೇಕ ಪದ್ಧತಿಗಳಿದ್ದರೂ ಭಾರತದಲ್ಲಿ ಇಸ್ಮಾಯಿಲ್ ಮತ್ತು ಇಥ್ನಾ ಅಷಾರಿಯ ಎಂಬುವು ಮುಖ್ಯವಾಗಿವೆ.

ಹೀಗೆ ಮುಸ್ಲಿಮರಲ್ಲಿ ಅನೇಕ ಪ್ರಕಾರದ ಷರಿಯತ್ ಗಳಿವೆ. ಭಾಷೆ, ಪ್ರದೇಶ ಮತ್ತು ಕಾಲದ ಕಟ್ಟಳೆಗಳನ್ನು ಒಳಗೊಂಡು ಒಂದು ಧರ್ಮ ಹುಟ್ಟಿಕೊಂಡರೂ ಅದರಲ್ಲಿನ ಸಾರ್ವತ್ರಿಕ ಸತ್ಯದೊಂದಿಗೆ ಅವರ ಅನುಯಾಯಿಗಳು ಮುನ್ನಡೆಯಬೇಕಾಗುತ್ತದೆ. ಅದರ ಮಾನವೀಯ ತಿರುಳನ್ನು ರಕ್ಷಿಸಲೇ ಬೇಕಾಗುತ್ತದೆ.

ಹೃದಯಗಳಲ್ಲಿ ಕುಟಿಲತೆ ಇರುವವರು ಗೊಂದಲ ಮತ್ತು ದುರ್ವ್ಯಾಖ್ಯಾನದ ಉದ್ದೇಶದಿಂದ ಅದರಲ್ಲಿನ (ಕುರಾನಿನ) ಮುತಶಾಬಿಹಾತ್ (ಅರ್ಥೈಸುವಿಕೆಯಲ್ಲಿ ಸಂದಿಗ್ಧತೆಗೆ ಅವಕಾಶವಿರುವ ವಾಕ್ಯಗಳು) ಹಿಂದೆ ಬೀಳುತ್ತಾರೆ. ಎಂದು ಕುರಾನಿನ 3ನೇ ಸೂರಾ (ಅಧ್ಯಾಯ)ದ 7ನೇ ಆಯತ್ (ಸೂಕ್ತ)ದಲ್ಲಿ ಹೇಳಲಾಗಿದೆ.

ಸ್ತ್ರೀಯರಿಗೆ ಸಂಬಂಧಿಸಿದ ಕುರಾನಿನ ಕೆಲ ಮುಖ್ಯ ಆಯತ್ ಗಳು:

thediplomat_2016-04-22_19-04-04-386x258ಗಂಡು ಹೆಣ್ಣುಗಳನ್ನು ಒಂದೇ ಜೀವದಿಂದ ಸೃಷ್ಟಿಸಲಾಗಿದೆ. (4:1)
ವಿಶ್ವಾಸಿಗಳೆ! ಸ್ತ್ರೀಯರನ್ನು ಬಲಾತ್ಕಾರವಾಗಿ ಪರಂಪರಾಗತ ಸೊತ್ತಿನಂತೆ ಒಡೆತನಕ್ಕೆ ಅಧಿನಗೊಳಿಸುವುದು ನಿಮಗೆ ಧರ್ಮಬದ್ಧವಲ್ಲ. (4:19)

ಅವರು (ನಿಮ್ಮ ಪತ್ನಿಯರು) ನಿಮಗೆ ಪೋಷಾಕು. ನೀವು ಅವರಿಗೆ ಪೋಷಾಕು. (2:187)

ಹೆಣ್ಣು ಗಂಡಿನ ಮಧ್ಯೆ ಅನ್ಯೋನ್ಯ ಸಂಬಂಧ ಇರಬೇಕೆಂಬುದೆ ಕುರಾನಿನ ಆಶಯವಾಗಿದೆ. ಅರಬರು ಹೆಂಗೂಸುಗಳನ್ನು ಜೀವಂತ ಹುಗಿಯುತ್ತಿದ್ದರು. ಅದು ಹಿಂದೂಗಳಲ್ಲಿನ ಸತಿಪದ್ಧತಿಯಷ್ಟೇ ಸಹಜವಾಗಿತ್ತು. ಇಸ್ಲಾಂ ಅಸ್ತಿತ್ವಕ್ಕೆ ಬಂದಮೇಲೆ ಆ ಹೀನಪದ್ಧತಿಯನ್ನು ಧರ್ಮಬಾಹಿರಗೊಳಿಸಲಾಯಿತು. ಬಹುಪತ್ನಿತ್ವಕ್ಕೆ ನಿಯಂತ್ರಣ ಹಾಕಲಾಯಿತು. ಹೆಂಗಸರು ಗಂಡನನ್ನು ಪಡೆಯುವಲ್ಲಿ ಸ್ವಾತಂತ್ರ್ಯ ಸಿಕ್ಕಿತು. ಅಯೋಗ್ಯ ಗಂಡನನ್ನು ಬಿಡುವ ಹಕ್ಕು ಲಭಿಸಿತು. ಆ ದಿನಗಳಲ್ಲಿ ಮುಸ್ಲಿಂ ಮಹಿಳೆಯರು ಸಾರ್ವಜನಿಕ ಜೀವನದಲ್ಲಿ ಮಹತ್ವದ ಪಾತ್ರ ವಹಿಸಿದರು.

ತಬ್ಬಲಿಗಳ ಸಂಬಂಧ ನ್ಯಾಯ ಪಾಲಿಸಲಾರಿರಿ ಎಂದು ನೀವು ಭಯಪಟ್ಟರೆ. ನೀವು ಇಷ್ಟಪಡುವ ಸ್ತ್ರೀಯರನ್ನು ಈರ್ವರನ್ನೊ, ಮೂವರನ್ನೊ, ನಾಲ್ವರನ್ನೊ ವಿವಾಹ ಮಾಡಿಕೊಳ್ಳಿರಿ. ಆದರೆ ಅವರ ಮಧ್ಯೆ ನ್ಯಾಯಪಾಲಿಸಲಾರಿರೆಂದು ನೀವು ಭಯಪಟ್ಟರೆ ಒಬ್ಬಳು ಸ್ತ್ರೀಯೊಡನೆ ಮಾತ್ರ ವಿವಾಹ ಮಾಡಿಕೊಳ್ಳಿರಿ. ಅದಲ್ಲದಿದ್ದರೆ ಯುದ್ಧ ಸೆರೆಯಾಳುಗಳಾಗಿ ನಿಮ್ಮ ಅಧೀನ ಬಂದಿರುವ ಸ್ತ್ರೀಯರನ್ನು ಸ್ವೀಕರಿಸಿಕೊಳ್ಳಿರಿ. ನಿಮ್ಮಿಂದ ಅನ್ಯಾಯವಾಗದಿರಲು ಇದು ಇನ್ನಷ್ಟು ಯೋಗ್ಯವಾಗಿದೆ. (4:3)

ಮದಿನಾ ಬಳಿಯ ಉಹುದ್ ಬೆಟ್ಟದಲ್ಲಿ ಕುರೈಶರು ಮತ್ತು ಮುಸ್ಲಿಮರ ಮಧ್ಯ ಯುದ್ಧವಾಗಿ ಮುಸ್ಲಿಮರ ಕಡೆ ಹೆಚ್ಚಿನ ಜೀವಹಾನಿಯುಂಟಾಯಿತು. ವಿಧವೆಯರ ಮತ್ತು ಅನಾಥ ಮಕ್ಕಳ ಪ್ರಶ್ನೆ ಮುಂದೆ ಬಂದಿತು. ಆಗ ಬಹುಪತ್ನಿತ್ವದ ವಿಚಾರ ವ್ಯಕ್ತವಾಯಿತು. ಇಲ್ಲಿ ಬಹುಪತ್ನಿತ್ವವೆಂಬುದು ಗಂಡಸಿನ ಕಾಮಪಿಪಾಸೆಯ ಪ್ರತೀಕವಲ್ಲ. ನಿರಾಶ್ರಿತರಿಗೆ ಆಶ್ರಯ ಒದಗಿಸುವಂಥದ್ದು. ತಬ್ಬಲಿಗಳ ತಾಯಂದಿರನ್ನು ಮದುವೆಯಾಗದೆ ಅವರನ್ನು ನೋಡಿಕೊಳ್ಳುವುದು ಕುರಾನ್ ಪ್ರಕಾರ ಆದರ್ಶ ಮುಸ್ಲಿಮನ ಲಕ್ಷಣವೆಂಬುದು ಮೇಲಿನ ಸೂಕ್ತದಿಂದ ತಿಳಿದು ಬರುತ್ತದೆ. ಅಷ್ಟೊಂದು ಚಿತ್ತಸ್ಥೈರ್ಯವಿಲ್ಲದ ಮುಸ್ಲಿಮರು ಅನಾಥ ಮಕ್ಕಳ ಯೋಗಕ್ಷೇಮದ ಉದ್ದೇಶದಿಂದ ಅವರ ತಾಯಂದಿರನ್ನು ಮದುವೆಯಾಗಬಹುದು. ಆವಾಗ ಅವರ ಮಧ್ಯ ನ್ಯಾಯಪಾಲಿಸಬೇಕು. ಅದಾಗದಿದ್ದರೆ ಬಹುಪತ್ನಿತ್ವ ಆಚರಿಸಬಾರದು.

ಆದರೆ ಪತ್ನಿಯರ ನಡುವೆ ಸಮಾನ ನ್ಯಾಯ ಪಾಲಿಸಲು ನೀವೆಷ್ಟು ಪ್ರಯತ್ನಿಸಿದರೂ ಅದು ನಿಮಗೆ ಸಾಧ್ಯವಾಗದು. ಆದ್ದರಿಂದ ನೀವು ಒಬ್ಬಳ ಕಡೆ ವಾಲಿಕೊಂಡು ಇನ್ನೊಬ್ಬಳನ್ನು ನಿಸ್ಸಹಾಯಕ ಸ್ಥಿತಿಯಲ್ಲಿ ಬಿಟ್ಟು ಬಿಡದಿರಿ (4:129) ಎಂದು ಎಚ್ಚರಿಸಲಾಗಿದೆ.

ದೇವರು ಅನುಮತಿ ನೀಡಿದ ಎಲ್ಲವುಗಳಲ್ಲಿ ಆತ ಅತೀವವಾಗಿ ತಿರಸ್ಕರಿಸುವುದೆಂದರೆ ತಲಾಖ್ ಎಂದು ಪೈಗಂಬರರು ಹೇಳಿದ್ದಾರೆ. ಯಾರು ತಮ್ಮ ಹೆಂಡಂದಿರ ಮೇಲೆ ಅತೀವವಾಗಿ ಕರುಣೆಯುಳ್ಳವರಾಗಿರುತ್ತಾರೊ ಅವರೇ ನಮ್ಮೊಳಗಿನ ಶ್ರೇಷ್ಠರು ಎಂದು ಅವರು ತಿಳಿಸಿದ್ದಾರೆ.

ಸುಶೀಲೆಯರಾದ ಸ್ತ್ರೀಯರ ಮೇಲೆ ಯಾರು ಆರೋಪ ಹೊರಿಸುತ್ತಾರೊ ಮತ್ತು ನಾಲ್ಕು ಮಂದಿ ಸಾಕ್ಷಿದಾರರನ್ನು ಅವರು ತರುವುದಿಲ್ಲವೊ ಅವರಿಗೆ ಎಂಬತ್ತು ಬಾರೇಟುಗಳನ್ನು ಹೊಡೆಯಿರಿ ಮತ್ತು ಅವರ ಸಾಕ್ಷ್ಯಗಳನ್ನು ಸ್ವೀಕರಿಸಬೇಡಿರಿ. ಅವರೇ ಧರ್ಮಭ್ರಷ್ಟರು (24:4)

ಸುಳ್ಳು ಆರೋಪ ಹೊರಿಸಿ ಅಥವಾ ಇನ್ನೊಬ್ಬಳನ್ನು ಮದುವೆಯಾಗುವ ಉದ್ದೇಶದಿಂದ ತಲಾಖ್ ಕೊಡುವುದಕ್ಕೆ ಇಸ್ಲಾಂ ಧರ್ಮದಲ್ಲಿ ಅವಕಾಶವೇ ಇಲ್ಲ.

ವಿವಾಹ ವಿಚ್ಛೇದನ ಮಾಡಲ್ಪಟ್ಟ ಸ್ತ್ರೀಯರಿಗೆ ವಾಡಿಕೆಯಂತೆ ಜೀವನೋಪಾಯಕ್ಕೆ ಏನಾದರೂ ಕೊಡಬೇಕು. ಇದು ದೈವಭಕ್ತರ ಮೇಲಿರುವ ಬಾಧ್ಯತೆಯಾಗಿದೆ. (2:241)

ಒಂದುವೇಳೆ ಒಬ್ಬ ಮಹಿಳೆ ತಪ್ಪು ಮಾಡಿದ್ದು ಸಾಬೀತಾದರೆ ಒಂದು ಸಲ ತಲಾಖ್ ಎಂದು ಎಚ್ಚರಿಸಬೇಕಾಗುವುದು. ಎರಡನೇ ಸಲ ತಪ್ಪು ಮಾಡಿದರೆ ಇನ್ನೊಮ್ಮೆ ತಲಾಖೆ ಎಂದು ಎಚ್ಚರಿಸಬೇಕಾಗುವುದು. ಮೂರನೇ ಸಲ ತಪ್ಪು ಮಾಡಿ ಅದು ಕೂಡ ಸಾಬೀತಾದರೆ ಮಾತ್ರ ತಲಾಖ್ ಹೇಳಿ ಆಕೆಯನ್ನು ವಿವಾಹ ವಿಚ್ಛೇದನ್ನಕ್ಕೆ ಒಳಪಡಿಸಬಹುದು. ಇದು ಇಸ್ಲಾಂ ಧರ್ಮದ ನೀತಿ.
ಇಂಥ ಸ್ತ್ರೀಗೆ ಕೂಡ ಜೀವನೋಪಾಯಕ್ಕೆ ವ್ಯವಸ್ಥೆ ಮಾಡಬೇಕು ಎಂದು ಕುರಾನ್ ಹೇಳುತ್ತದೆ. ಆದರೆ ಭಾರತದಲ್ಲಿ ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ತಲಾಖ್, ತಲಾಖ್, ತಲಾಖ್ ಎಂದು ಒಂದೇ ಸಮನೆ ಸುಶೀಲೆಯಾದ ಹೆಂಡತಿಗೆ ಕೂಡ ಹೇಳಿ, ಅವಳ ಜೀವನೋಪಾಯಕ್ಕೆ ಯಾವುದೇ ವ್ಯವಸ್ಥೆ ಮಾಡದೆ ಹೊರಗೆ ದಬ್ಬಬಹುದು!

ತುಳಿತಕ್ಕೀಡಾದವರು ಈ ಜಗತ್ತಿನ ನಾಯಕರು ಮತ್ತು ನೇರ ವಾರಸುದಾರರು ಆಗಬೇಕೆಂದು ನಾವು ಇಚ್ಛಿಸಿದ್ದೇವೆ. (28:6) ಎಂದು ಕುರಾನ್ ನಲ್ಲಿ ಹೇಳಲಾಗಿದೆ. ತುಳಿತಕ್ಕೀಡಾದವರು ಆಳುವ ಸಮಾಜ ಬಂದಾಗ ಇಂಥ ಅನೇಕ ಅನ್ಯಾಯಗಳು ದೂರಾಗಬಹುದು.

‍ಲೇಖಕರು Admin

September 23, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎ ದಿಲ್ ಕಾ ಮಾಮ್ಲಾ ಹೈ…

ಎ ದಿಲ್ ಕಾ ಮಾಮ್ಲಾ ಹೈ…

ಶ್ರೀ ಮುರಳಿ ಕೃಷ್ಣ  ಈ ‘ಲವ್ ಜಿಹಾದ್’ ಎಂಬ ಪದಗಳ ಬ್ರಹ್ಮ ಯಾರು ಎಂಬುದು ನನಗೆ ತಿಳಿದಿಲ್ಲ. ಆದರೆ ಒಂದಂತೂ ನಿಜ, ಆ...

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಮ ಶ್ರೀ ಮುರಳಿ ಕೃಷ್ಣ ಈ ಕಿರು ಬರಹಕ್ಕೆ ‘ಅಬ್ ಕಿ ಬಾರ್ ಬೈಡನ್ ಕಿ ಸರ್ಕಾರ್’ ಎಂಬ ಶೀರ್ಷಿಕೆಯನ್ನು ಬಳಸಲು ಮುಂದಾಗಿದ್ದೆ. ಆದರೆ ಒಬ್ಬ...

8 ಪ್ರತಿಕ್ರಿಯೆಗಳು

 1. lakshmikanth itnal

  ತುಂಬ ವಿದ್ವತ್ಪೂರ್ಣ ಬರಹ ಸರ್. ಕಣ್ಣು ತೆರೆಸುವಂತಿದೆ.

  ಪ್ರತಿಕ್ರಿಯೆ
 2. C M Haneef Bellare

  ಮಾರ್ಮಿಕ ಮತ್ತು ವಿಚಾರಪೂರ್ಣವಾದ ಬರಹ. ಧನ್ಯವಾದಗಳು ರಂಜಾನ್ ದರ್ಗ ಸರ್. ಈ ವಿಷಯವಾಗಿ ಸಮಾನಮನಸ್ಕರೊಡನೆ ಒಂದೆರಡು ಸಾರಿ ಚರ್ಚೆ ಮಾಡಿದ್ದಿದೆ. ಈಯೆಲ್ಲ ವಿಚಾರಗಳೂ ಆಗ ಬಂದಿವೆ. ಸರ್, ನೀವು ಮಂಡಿಸಿದ ತರ್ಕಗಳು ಒಪ್ಪಬೇಕಾದ್ದೆ, ಆದರೆ ಒಂದೆರಡು ವಿಚಾರಗಳ ಹೊರತು. ಒಂದು ಕಡೆ ಇಜ್ತಿಹಾದ್ ಪದಕ್ಕೆ ಬ್ರಾಕೆಟ್ ನಲ್ಲಿ ವ್ಯಾಖ್ಯಾನಕಾರರು ಎಂಬರ್ಥ ಕೊಟ್ಟಿರುವಿರಿ. ತಪ್ಪು ಅದರರ್ಥ ಧಾರ್ಮಿಕ ವಿಧಿ ಶೋಧಕರು ಎಂದು. ಇನ್ನೊಂದು; ಷರಿಯತ್ ಪದ್ದತಿಗಳನ್ನು ವಿಂಗಡಿಸುವಾಗ ಸುನ್ನಿಗಳಲ್ಲಿ ನಾಲ್ಕು ವಿಭಾಗ ಎಂದ ಬಳಿಕ ಅವುಗಳ ಕಿರುಪರಿಚಯ ಮಾಡಿದಿರಿ. ಆದರೆ ಮೂಲಭೂತವಾಗಿ ನಾಲಕ್ಕು ಪಂಗಡಗಳೂ ಒಂದೆ. ಇಜ್ಮಾ ಮತ್ತು ಕಿಯಾಸ್ ಗೆ ಎಲ್ಲ ವಿಭಾಗಗಳಲ್ಲೂ ಸಮಾನ ಅರ್ಥ ಮತ್ತು ಅವಕಾಶ ಇದೆ. ಆದರೆ ಮಾತ್ರ ಷರಿಯ ಕಾನೂನಿನಲ್ಲಿ ಯಾವುದೇ ಹಸ್ತಕ್ಷೇಪ ಸಲ್ಲದು. ಯಾಕೆಂದರೆ, ಇವತ್ತಿನ ಯಾವ ಕಮಿಟಿಗೂ ಯಾವ ವಿದ್ವಾಂಸರಿಗೂ ಯಾವ ಒಕ್ಕೂಟಕ್ಕೂ ಷರಿಯ ವಿಧಿಗಳನ್ನು ಬದಲಿಸುವ ಹಕ್ಕಿಲ್ಲ. ಆದರೂ ಅದು ಚಲನಶೀಲವಾದುದು ಸರಿ. ಹೇಗೆಂದರೆ ಯಾವ ಸಮಸ್ಯೆಗೂ ಪರಿಹಾರವಿದೆ, ಯಾವ ಪ್ರಶ್ನೆಗೂ ಉತ್ತರವಿದೆ. ನಿಮ್ಮ ಪ್ರಕಾರ ಇಜ್ತಿಹಾದ್ ಅಂದರೆ ಮುಸ್ಲಿಂ ಕಾನೂನಿನ ಬೆಳವಣಿಗೆ , ಅದು ಸರಿ. ಆದರೆ ಇಜ್ತಿಹಾದ್ ಆಗಿದೆ, ಇನ್ನು ಇಜ್ತಿಹಾದ್ ಮಾಡುವವರು ಉಳಿದಿಲ್ಲ. ಅದಕ್ಕೇ ಸಿದ್ಧವಿರುವ ಷರಿಯ ವಿಧಿಗಳಲ್ಲಿ ಹೊಸ ವಿಚಾರಗಳನ್ನು ಹರವಿ ಅದರಿಂದ ವಿಧಿ ತೆಗೆಯುವುದು ಷರಿಯ ವಿದ್ವಾಂಸರ ಧ್ಯೇಯವಾಗಿದೆ. ನೀವು ಪ್ರಸ್ತಾಪಿಸಿದ ಅಷ್ಟೂ ವಿಷಯಗಳು ಬಹಳ ಮಾಹಿತಿಪೂರ್ಣವಾಗಿದ್ದು ಎಲ್ಲರಿಗೂ ತಲುಪಬೇಕಾದ್ದಾಗಿದೆ. ಧನ್ಯವಾದಗಳು.

  ಪ್ರತಿಕ್ರಿಯೆ
 3. bm basheer

  ಅತ್ಯುತ್ತಮ ಲೇಖನ ಇದು. ತಲಾಕ್ ನ ವಿಷಯವನ್ನು ಕಪ್ಪು – ಬಿಳುಪು ಆಗಿ ನೋಡುವವರ ಕಣ್ಣು ತೆರೆಸುವ ವಿವೇಕ, ಸಹನೆ, ಮುತ್ಸದ್ಧಿ ತನದಿಂದ ಕೂಡಿದ ಲೇಖನ. ಸದ್ಯಕ್ಕೆ ತಲಾಕ್ ಎನ್ನೋದು ಮುಸ್ಲಿಮರ ಸಮಸ್ಯೆ ಅಷ್ಟೇ ಅಲ್ಲ. ಆಧುನಿಕ ಜಗತ್ತಿನಲ್ಲಿ ತಲಾಕ್ ಅಥವಾ ವಿಚ್ಛೇದನ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ಅವಿದ್ಯಾವಂತರು, ಮೂಲಭೂತವಾದಿಗಳ ನಡುವೆ, ಬಡವರ ನಡುವೆ ಮಾತ್ರ ತಲಾಕ್ ಸಂಭವಿಸುತ್ತದೆ ಎನ್ನೋದು ವಿದ್ಯಾವಂತರ ಇನ್ನೊಂದು ಆತ್ಮ ವಂಚನೆ. ಸದ್ಯದ ದಿನಗಳಲ್ಲಿ ಅತಿ ಹೆಚ್ಚು ವಿಚ್ಛೇದನಗಳು ನಡೆಯುತ್ತಿರೋದು ವಿದ್ಯಾವಂತರ ನಡುವೆ. ಶ್ರೀಮಂತರ ನಡುವೆ. ಆಧುನಿಕತೆಯನ್ನು ಸಂಪೂರ್ಣ ಸ್ವೀಕರಿಸಿದವರ ನಡುವೆ. ಇಂದು ನ್ಯಾಯಾಲಯ ಮಾತ್ರ ತಲಾಕ್ ಅಥವಾ ವಿಚ್ಛೇದನಕ್ಕೆ ಪರಿಹಾರ ಎನ್ನೋದು ಇನ್ನೊಂದು ಅಪಕ್ವ ನಂಬಿಕೆ. ಇಂದು ನ್ಯಾಯಾಲಯ ತನ್ನಲ್ಲಿ ರಾಶಿ ಬಿದ್ದಿರುವ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗದೆ ಸಾರ್ವಜನಿಕ ವೇದಿಯಲ್ಲೇ ಕಣ್ಣೀರಿಟ್ಟಿದೆ. ನ್ಯಾಯಾಲಯದ ಹೊರಗಡೆ ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಒಂದು ಚಳವಳಿಯೇ ನಡೆಯುತ್ತಿದೆ. ಪ್ರತಿ ವರ್ಷ ನ್ಯಾಯಾಲಯದಲ್ಲಿ ವಿಚ್ಛೇದನಗಳ ಸಂಖ್ಯೆ ಹೆಚ್ಚುತ್ತಿವೆ. ಇಬ್ಬರು ಲಾಯರ್ ಗಳ ವಿಚ್ಛೇದನ ನೆನೆಗುದಿಗೆ ಬಿದ್ದು ಮಕ್ಕಳು ಅಲ್ಲೂ ಇಲ್ಲೂ ಎಲ್ಲೂ ಸಲ್ಲದವರಾಗಿ ಬೆಳೆಯುತ್ತಿದ್ದಾರೆ. ಇಂಥಹ ಸಂದರ್ಭಲ್ಲಿ ತಲಾಕ್ ನ ಬಲಿಪಶುಗಳು ಕೇವಲ ಕೇವಲ ಮುಸ್ಲಿಮರು ಮಾತ್ರ ಅಲ್ಲ. ಎಲ್ಲ ಧರ್ಮದ ಮಹಿಳೆಯರು ಬೇರೆ ಬೇರೆ ರೀತಿಯಲ್ಲಿ ಇದರ ಫಲಾನುಭವಿಗಳಾಗಿದ್ದಾರೆ.
  ಎರಡನೆಯದು, ತಲಾಕ್ ನ ಸಂತ್ರಸ್ತರು ಕೇವಲ ಮಹಿಳೆ ಮಾತ್ರ ಅಲ್ಲ. ಆಕೆಯ ಸೋದರರು, ಮಕ್ಕಳು ಅಥವಾ ಆಕೆಯ ತಂದೆಯೂ ಅದರ ನೋವನ್ನು ತಿನ್ನ ಬೇಕಾಗುತ್ತದೆ. ತಲಾಕ್ ಅಥವಾ ವಿಚ್ಛೇದನ ಒಂದು ಇಡೀ ಕುಟುಂಬವನ್ನು ಬಾಧಿಸುತ್ತದೆ. ಅದರಲ್ಲಿ ಮಹಿಳೆ ಹೆಚ್ಚು ನೋವು ತಿನ್ನುತ್ತಾಳೆ.
  ಮೂರನೆಯದು, ಮುಸ್ಲಿಂ ಕಾನೂನು ವೈಯಕ್ತಿಕ ಮಂಡಳಿಯನ್ನು ಜಾರಿ ಗೊಳಿಸಿದ್ದು ಪ್ರವಾದಿಯವರು ಅಲ್ಲ. ಬ್ರಿಟಿಷರು. ಆದುದರಿಂದ ಅದರಲ್ಲಿ ಸುಧಾರಣೆ ತರಬೇಕು ಎನ್ನೋದು ಪ್ರವಾದಿಯವರನ್ನಾಗಲಿ, ಶರಿಯತ್ ನ್ನಾಗಲಿ ವಿರೋಧಿಸಿದಂತೆ ಆಗೋದಿಲ್ಲ. ಮಂಡಳಿಯ ಸುಧಾರಣೆಯ ಕೂಗು ಶರಿಯತ್ ಪರವಾಗಿದೆ. ಪ್ರವಾದಿಯವರ ಪರವಾಗಿದೆ.
  ನಾಲ್ಕನೆಯದು, ಇದರ ಹೆಸರಲ್ಲಿ ಸಮಾನ ನಾಗರಿಕ ಸಂಹಿತೆಯನ್ನು ತುರುಕಿಸುವ ಆರೆಸ್ಸೆಸ್ ಅಜೇಂಡಾವನ್ನು ನಾನು ತಿರಸ್ಕರಿಸುವೆ. ಅಸಮಾನ ಸಮಾಜದೊಳಗೆ ಸಮಾನ ಸಂಹಿತೆ ಎಲ್ಲರಿಗೂ ಮುಖ್ಯವಾಗಿ ಈ ದೇಶದ ದಲಿತರಿಗೆ ನ್ಯಾಯ ನೀಡುತ್ತದೆ ಎನ್ನುವ ನಂಬಿಕೆ ನನಗಿಲ್ಲ .
  ಅಂತಿಮವಾಗಿ, ಪತ್ನಿಯ ಮೇಲೆ ಗಂಡಿಗೆ ಹಕ್ಕಿರುವಂತೆ, ಪತಿಯ ಮೇಲೆ ಹೆಣ್ಣಿಗೂ ಹಕ್ಕಿದೆ… ಇಸ್ಲಾಮ್ ನಲ್ಲಿ ಹೆಣ್ಣಿಗೆ ಆಸ್ತಿಯ ಹಕ್ಕು ೧೫೦೦ ವರ್ಷಗಳ ಹಿಂದೆ ಘೋಷಿಸಲ್ಪಟ್ಟಿತು. ಮತ್ತು ಬ್ರಿಟಿಷರ ಕಾಲದಲ್ಲಿ ಮುಸ್ಲಿಂ ಮಹಿಳೆ ಅದನ್ನು ಮುಂದಿಟ್ಟು ನ್ಯಾಯಾಲಯದ ಮೆಟ್ಟಿಲೇರಿದ್ದೆ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹುಟ್ಟಲು ಕಾರಣವಾಯಿತು. ಯಾಕೆಂದರೆ, ಸಮಾಜದಲ್ಲಿ ಆಗಿನ್ನೂ ಮಹಿಳೆಯರಿಗೆ ಆಸ್ತಿಯ ಹಕ್ಕು ಘೋಷಣೆ ಆಗಿರಲಿಲ್ಲ. ಹೆಣ್ಣಿಗೆ ಅನ್ಯಾಯ ಆಗಲು ಪ್ರವಾದಿ ಮಹಮ್ಮದರು ಬಿಡುತ್ತಿರಲಿಲ್ಲ ಎನ್ನೋದು ನಿಜ ಆಗಿದ್ದರೆ, ಮಂಡಳಿಯಿಂದ ಹೆಣ್ಣಿಗೆ ಅನ್ಯಾಯ ಆಗಿದೆ ಎಂದರೇ ಅದರ ವಿರುದ್ಧ ನಾವು ಧ್ವನಿ ಎತ್ತಲೇ ಬೇಕಾಗುತ್ತದೆ. ಮತ್ತು ಶರಿಯತ್ ನ್ನು ಆಧುನಿಕ ದಿನಗಳಿಗೆ ಪೂರಕವಾಗಿ ಅಳವಡಿಸಿಕೊಳ್ಳೋದು ಇಸ್ಲಾಮ್ ಅಥವಾ ಮುಸ್ಲಿಮರ ದೃಷ್ಟಿಯಿಂದಲೂ ಅತ್ಯಗತ್ಯ.

  ಪ್ರತಿಕ್ರಿಯೆ
 4. Shrikant Swamy Bidar Karnataka

  Sir, very nice article, you are cleared regarding Talakh, so many people’s misunderstood about Holy Books Khuraan and Sharieta, this is misused by Muslim fundamentalists and criticised by other Religion fundamentalists. You are very softly cleared the all doubts about Sheriata, now court should direct the Government change the Muslims personal laws. Woman world thanks to you.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: