ಎಸ್ ವಿ ಪಿ ಅವಧಿಯ ಓದುಗರನ್ನು ಮತ್ತೆ ಮತ್ತೆ ಕಾಡುತ್ತಿದ್ದಾರೆ. ಗುಂಗು ಹಿಡಿಸುವ ಅವರ ಕವಿತೆಗಳ ಪಟ್ಟಿ ದೊಡ್ಡದು. ಈ ಕವಿತೆಗಳನ್ನು ಕೇಳಿ ಮತ್ತೆ ನೆನಪಿನ ದೋಣಿಯಲ್ಲಿ ಪಯಣಿಸಲು ಎಲ್ಲರಿಗೂ ಆಸೆ. ಹೀಗಾಗಿಯೇ ನಮ್ಮ ಮುಂದೆ ಅವರಿಗೆ ಇಷ್ಟವಾದ ಎಸ್ ವಿ ಪಿ ಯವರ ಕವಿತೆಗಳ ಪಟ್ಟಿ ಇಟ್ಟಿದ್ದಾರೆ. ಇದನ್ನು ಹುಡುಕಿ ಪ್ರಕಟಿಸಿ ಎಂದಿದ್ದಾರೆ. ಅವಧಿಗೂ ಈ ಕವಿತೆಗಳಲ್ಲಿ ಕಳೆದುಹೋಗುವ ಬಯಕೆ. ಹೀಗಾಗಿಯೇ ಮತ್ತೆ ಶಿವಮೊಗ್ಗ ಕರ್ನಾಟಕ ಸಂಘದ ಮೊರೆ ಹೋಗಿದ್ದೇವೆ. ಅವರ ಪುಸ್ತಕದಿಂದ ಈ ಬಾರಿ ‘ಒಂದು ರಾತ್ರೆ’ ಕವನವನ್ನು ನೀಡುತ್ತಿದ್ದೇವೆ.
ತಿಳಿಮುಗಿಲ ತೊಟ್ಟಿಲಲಿ ಕುಳಿತು ಗಾಳಿ ಜೋಗುಳದ ಮಧ್ಯೆ ಈ ಕವನ ನಿಮ್ಮದಾಗಲಿ.
ಪುಸ್ತಕವೇ ಬೇಕಾದಲ್ಲಿ-
ಕರ್ನಾಟಕ ಸಂಘ, ಬಿ ಎಚ್ ರೋಡ್, ಶಿವಮೊಗ್ಗ -೫೭೭೨೦೧ ಅಥವಾ ದೂರವಾಣಿ- ೨೭೭೪೦೬ ಸಂಪರ್ಕಿಸಿ.
೩೬೪ ಪುಟಗಳ ಈ ಕೃತಿಯ ಬೆಲೆ ಕೇವಲ ೧೨೦ ಮಾತ್ರ
ಒಂದು ರಾತ್ರೆ
ತಿಳಿಮುಗಿಲ ತೊಟ್ಟಿಲಲಿ
ಮಲಗಿದ್ದ ಚಂದಿರನ
ಗಾಳಿ ಜೋಗುಳ ಹಾಡಿ
ತೂಗೂತಿತ್ತು.
ಗರಿ ಮುದುರಿ ಮಲಗಿದ್ದ
ಹಕ್ಕಿಗೂಡುಗಳಲ್ಲಿ
ಇರುಳು ಹೊಂಗನಸೂಡಿ
ಸಾಗುತಿತ್ತು.
ಮುಗುಳಿರುವ ಹೊದರಿನಲಿ
ನರುಗಂಪಿನುದರದಲಿ
ಜೇನುಗನಸಿನ ಹಾಡು
ಕೇಳುತಿತ್ತು.
ತುಂಬುನೀರಿನ ಹೊಳೆಯೊ
ಳಂಬಿಗನ ಕಿರುದೋಣಿ
ಪ್ರಸ್ಥಾನಗೀತೆಯನು
ಹೇಳುತಿತ್ತು.
ಬರುವ ಮುಂದಿನ ದಿನದ
ನವನವೋದಯಕಾಗಿ
ಪ್ರಕೃತಿ ತಪವಿರುವಂತೆ
ತೋರುತಿತ್ತು.
ಶಾಂತರೀತಿಯೋಳಿರುಳು
ಮೆಲ್ಲಮೆಲ್ಲನೆ ಉರುಳಿ
ನಾಳಿನ ಶುಭೋದಯವ
ಸಾರುತಿತ್ತು.
Nice poem accompanied by fine art.
Malathi S
ತುಂಬಾ ಆತ್ಮೀಯವಾದ ಗೀತೆ. ಇದಕ್ಕೆ ಉಪಾಸನ ಮೋಹನ್್ಅದ್ಭುತವಾದ ಸಂಗೀತ ಸಂಯೋಜನೆ ಮಾಡಿದ್ದಾರೆ. ಗೀತೆಗೂ ಸಂಗೀತಕ್ಕೂ ತುಂಬಾ ಹೊಂದುತ್ತದೆ. ಮೋಹನ್ ಈ ಗೀತೆಯನ್ನು ಸಿಡಿ ರೂಪದಲ್ಲಿ ಹೊರತಂದಿದ್ದಾರೆ. ಮಾತ್ರವಲ್ಲ ಕನ್ನಡದ ಶ್ರೇಷ್ಠ ಕವಿಗಳ ಅನೇಕ ಕವಿತೆಗಳಿಗೆ ಹೊಸ ಟ್ಯೂನ್ ನೀಡುವ ಮೂಲಕ ಇಂದಿನ ಪೀಳಿಗೆಗೆ ಭಾವಗೀತೆಗಳ ರುಚಿ ತೋರಿಸಿದ್ದಾರೆ. ಫಿಲಿಫ್ಸ್ ಕಂಪನಿಯಲ್ಲಿ ಕೈ ತುಂಬಾ ಸಂಬಳ ಪಡಯುತ್ತಿದ್ದರೂ ಸಂಗೀತದ ಆಕರ್ಷಣೆಯಿಂದ ಪ್ರವೃತ್ತಿಯನ್ನೇ ವೃತ್ತಿಯಾಗಿಸಿಕೊಂಡವರು. ಅವರೊಬ್ಬ ಭಾವಗೀತೆಗಳ ಪರಿಚಾರಕ ಎಂದರೆ ಉತ್ಪ್ರೇಕ್ಷೆಯಲ್ಲ.
ಮೋಹನ್ ಕೇವಲ ಸಂಗೀತ ಸಂಯೋಜಕ ಮಾತ್ರವಲ್ಲ ಒಬ್ಬ ಉತ್ತಮ ಗಾಯಕ ಕೂಡ. ಕವಿ ಬಿ.ಆರ್.ಲಕ್ಷ್ಮಣರಾಯರ ‘ಕೊಲ್ಲುವುದಾದರೆ ಕೊಂದು ಬಿಡು ಹೀಗೆ ಕಾಡಬೇಡ’ ಅವರಿಗೆ ಹೆಸರು ತಂದುಕೊಟ್ಟ ಗೀತೆ. ಲಘು ಸಂಗೀತ, ಭಾವಗೀತೆಗಳ ಬೆಳವಣಿಗೆಗೆ ಕಾರಣರಾದ ಮೈಸೂರು ಅನಂತಸ್ವಾಮಿ, ಕಾಳಿಂಗರಾಯರನ್ನು ಆರಾಧಿಸುವ ಮೋಹನ್ ಪ್ರತಿ ವರ್ಷ ನೂರಾರು ಮಕ್ಕಳಿಗೆ ಭಾವಗೀತೆ ಕಲಿಸುತ್ತಿದ್ದಾರೆ. ನೂರೈವೈತ್ತು ಮಕ್ಕಳನ್ನು ಒಂದೇ ವೇದಿಕೆಯಲ್ಲಿ (ಬೆಂಗಳೂರಿನ ಸಂಸ ಬಯಲು ರಂಗಮಂದಿರ, ಕಲಾಕ್ಷೇತ್ರದ ಹಿಂಭಾಗ)ಹಾಡಿಸಿ ದಾಖಲೆ ಸೃಷ್ಟಿಸಿದ್ದಾರೆ. ತಾವೇ ಸ್ಥಾಪಿಸಿರುವ ಉಪಾಸನೆ ಶಾಲೆಯ ಹೆಸರಲ್ಲಿ ಪ್ರತಿವರ್ಷ ಕಲಾವಿದರನ್ನು ಗೌರವಿಸಿ, ಪ್ರಶಸ್ತಿ ನೀಡಿ ಸನ್ಮಾನಿಸುತ್ತಾರೆ. ಅಷ್ಟು ಸಾಲದೆಂಬಂತೆ ಪ್ರತಿ ತಿಂಗಳು ಸಂಗೀತಾಸಕ್ತರ ಮನೆಯಂಗಳದಲ್ಲಿ ಒಂದು ಸಂಜೆ ‘ಮನೆಯಂಗಳದಲ್ಲಿ ಭಾವಗೀತೆಗಳ ಗಾಯನ’ ನಡೆಸುತ್ತಾರೆ. ಈಗಾಗಲೇ 56ಕ್ಕೂ ಹೆಚ್ಚು ಮನೆಯಂಗಳದ ಕಾರ್ಯಕ್ರಮ ನೀಡಿದ್ದಾರೆ. 57ನೆಯದು ಬೆಂಗಳೂರಿನ ಬನಶಕರಿ ಮೂರನೇ ಹಂತದ ಸೀತಾ ಸರ್ಕಲ್ ಸಮೀಪದ ಮನೆಯಂಗಳದಲ್ಲಿ ನಡೆಯಲಿದೆ. ಸದಾ ಸಂಗೀತಕ್ಕಾಗಿ ಮೋಹನ್ ಅಹರ್ನಿಶವಾಗಿ ದುಡಿಯುತ್ತಿದ್ದಾರೆ. ‘ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ’ ಅಂತ ಅಂದು ಅನಂತ ಸ್ವಾಮಿ ಹಾಡಿದರೆ, ಇಂದು ಮೋಹನ್ ಯಾರು ಕೇಳಲಿ, ಬಿಡಲಿ ತಮ್ಮ ಸಂಗೀತ ಸರಸ್ವತಿ ಸೇವೆಯನ್ನು ಮುಂದುವರಿಸಿದ್ದಾರೆ. ಅವರಿಗೆ ಈಗ ಬೇಕಿರುವುದು ನಮ್ಮೆಲ್ಲರ ಪ್ರೀತಿಯ ಹಾರೈಕೆ. ಆಸಕ್ತಿಯಿದ್ದವರು ಮೋಹನ್ ಸಂಪರ್ಕಿಸಬಹುದು. ಸಂಖ್ಯೆ :9845338363
ಗಾಣಧಾಳು ಶ್ರೀಕಂಠ