ತೀವ್ರವಾಗಿ ಕಾಡಿದ ‘ಸ್ವಪ್ನ ಸಾರಸ್ವತ’

ಸ೦ತೋಷ್ ಅನ೦ತಪುರ

 

ಇತ್ತೀಚಿಗಿನ ದಿನಗಳಲ್ಲಿ ನನ್ನನ್ನು ಬಹುವಾಗಿ ಕಾಡಿದ, ಕಾಡಿ ಕಾಡಿ ತೀವ್ರವಾಗಿ ತಟ್ಟಿದ ಕಾದಂಬರಿ ಅಂತ ಒಂದಿದ್ದರೆ ಅದು ” ಸ್ವಪ್ನ ಸಾರಸ್ವತ” ಅಂತ ಅಭಿಮಾನದಿಂದ ಹೇಳಬಲ್ಲೆ. ಅಷ್ಟರ ಮಟ್ಟಿಗೆ ಅದು ನನ್ನನ್ನು ಕಾಡಿದೆ ಮತ್ತು ಕಾಡುತ್ತಲೇ ಇದೆ. ಇದು ಲೇಖಕನ ಮತ್ತು ಓದುಗರಿಬ್ಬರ ಗೆಲುವೂ ಹೌದು !! ಒಂದು ಪೂರ್ಣ ರಾತ್ರಿಯಲ್ಲಿ ಕುಳಿತು ಓದಿ ಮುಗಿಸಿದ ಕೃತಿ ಇದು. ಕಾರಣ ಇಷ್ಟೇ…..ಓದಿಗೆಂದು ಕೈಗೆತ್ತಿಕೊಂಡರೆ ಪುಟಗಳನ್ನು ತಿರುವಿ ಹಾಕುವುದೇ ಗೊತ್ತಾಗುತ್ತಿರಲಿಲ್ಲ…ಮುಂದ….ಮುಂದ…ಮುಂದ…!!! ಎಂದು ಕೌತುಕವನ್ನು, ಬೆರಗನ್ನು, ಅಚ್ಚರಿಯನ್ನು, ಖುಷಿಯನ್ನು ಒಟ್ಟೊಟ್ಟಿಗೆ ತಂದು ಒಡ್ಡುವ ಸರಕದು. ಅಷ್ಟರಮಟ್ಟಿಗೆ ಅದನ್ನು ಓದಿ ನಾನು ಸಾರ್ಥಕ್ಯವನ್ನು ಪಡೆದೆ ಎಂದೆನ್ನಬಹುದು.

ಸಾರ್, ದಯವಿಟ್ಟು ನನ್ನ ಹೃದಯ ತುಂಬಿದ ಅಭಿನಂದನೆಗಳನ್ನು ಸ್ವೀಕರಿಸಿ. ಇನ್ನು ಕೃತಿಯ ಬಗ್ಗೆ ನನ್ನ ಒಂದೆರಡು ಅನಿಸಿಕೆಗಳು ;

ಇದು ಕೇವಲ ಒಂದು ಸಮುದಾಯದ ವಲಸೆ, ಭೂತ, ವರ್ತಮಾನ ಹಾಗೂ ಭವಿಷ್ಯದ ಕಥೆಯಾಗಿದ್ದರೂ ಯಾವುದಾದರೂ ಒಂದು ಹಂತದಲ್ಲಿ ಅದು ಸಾರ್ವತ್ರಿಕವಾಗಿ ಎಲ್ಲರನ್ನೂ ತಟ್ಟುವ ವಸ್ತುವಾಗಿದೆ. ೪೦೦ ವರ್ಷಗಳ ಇತಿಹಾಸವನ್ನು ಸತತ ೫-೬ ವರ್ಷಗಳ ಕಠಿಣ ಅಧ್ಯಯನದ ಮೂಲಕ ತಾವು ಕೆತ್ತಿಟ್ಟು ಕೊಟ್ಟ ಮೂರ್ತಿಯೇ ” ಸ್ವಪ್ನ ಸಾರಸ್ವತ”. ಇದನ್ನು ಓದುತ್ತಾ ಓದುತ್ತಾ ಹೋದಂತೆ ಜೊತೆಯಲ್ಲೇ ಸಿನೆಮಾ ನೋಡಿದಂತೆಯೂ ಅನುಭವವಾಯಿತು. ಕಾರಣ ಪ್ರತಿಯೊಂದು ಅಧ್ಯಾಯದಲ್ಲೂ ತಾವು ಹೇಳ ಬಯಸುವುದನ್ನು ಸ್ಫುಟವಾಗಿಯೂ ನಿಖರವಾಗಿಯೂ ಸಂಕಲಿಸಿ ಹೇಳಿದಂತೆ ಇತ್ತು.

ನಮ್ಮ ತಲೆಯಲ್ಲಿ ಪಾತ್ರಗಳ ಬಗ್ಗೆ ಏನಾಯಿತು ಅಂದುಕೊಳ್ಳುವಷ್ಟರಲ್ಲಿ ಉತ್ತರ ದೊರೆಯುತ್ತಿತ್ತು. ಹೀಗೆ ಶಾರ್ಟ್ ಬೈ ಶಾರ್ಟ್ ಸಿನೆಮಾದಂದಂತಹ ಅನುಭವವನ್ನು ಓದುವ ನಮಗೂ ಅದರ ಅರಿವಾಗಿ ಒಮ್ಮೆ ಬೆಚ್ಚನೆಯ ಅನುಭವ ಕೊಟ್ಟದ್ದು ಮಾತ್ರ ಸುಳ್ಳಲ್ಲ ! ವೇರಣೆಯಿಂದ ಹೊರಟು ಕುಂಬಳೆ ಗೆ ತಲುಪುವ ವಿಟ್ಟೂ ಪೈ ಮತ್ತು ಇತರ ಕುಟುಂಬಗಳು ಸವೆಸಿದ ಹಾದಿ, ಬಂದ ಬವಣೆ ಜೊತೆಯಲ್ಲಿ ಧರ್ಮಕ್ಕಾಗಿನ ಹೋರಾಟ, ತ್ಯಾಗ ಇವೆಲ್ಲವೂ ಒಂದು ನಾಗರಿಕತೆಯನ್ನು ಉಳಿಸಿ ಬೆಳೆಸುವ ಕಾಯಕವಾಗಿ ಕಂಡು, ನಮ್ಮ ಚರಿತ್ರೆಯೂ ಇದ್ದರೆ ಹೀಗೇ ಇದ್ದಿರಬಹುದೇ…..? ಎನ್ನುವಲ್ಲಿಗೆ ನಮ್ಮನ್ನು ಕೊಂಡೊಯ್ಯುತ್ತದೆ.

ಕಿನಾರೆಯ ಮೂಲಕವೇ ವಲಸೆ ಹೊರಟು…ಹೊನ್ನಾವರ, ಭಟ್ಕಳ್ ಹಾದಿಯಾಗಿ ಸಾಗುವಾಗ…ನಾನು ನನ್ನನ್ನು ಅಲ್ಲಿಯೂ ಗುರುತಿಸಿಕೊಂಡೆ..ನನ್ನ ಅಜ್ಜಿಮನೆ ಕುಮಟೆಯ ಬಳಿ ಇರುವ ಗುಡೇ ಅಂಗಡಿ..! ಅಘಾನಾಶಿಣಿಯು ಅಲ್ಲಿಯೂ ಹರಿಯುತ್ತಿದ್ದು… ದೋಣಿಯಲ್ಲಿ ದಾಟಿದರೆ ಗೋಕರ್ಣೇ…! ನಂತರ ಬಾರಕೂರು, ಕುಂದಾಪುರ, ಉಡುಪಿ, ಮಂಗಳೂರು, ಉಳ್ಳಾಲ, ಹೀಗೆ ಮಂಜೇಶ್ವರ ಹತ್ತಿರ ಹತ್ತಿರ ಬರುತ್ತಿದ್ದಂತೆ ಒಂದು ರೀತಿಯ ಉದ್ವೇಗವು ನನ್ನನ್ನು ಆವರಿಸಿಕೊಳ್ಳ ತೊಡಗಿತು…..ನಂತರ ಬರುವುದೇ ಕುಂಬಳೆ ಯಲ್ಲವೇ…! ಅದು ನಾನು ಹುಟ್ಟಿದ ” ಅನಂತಪುರ” ಊರಿನಿಂದ ಕೇವಲ ೫ ಕಿ. ಮಿ ದೂರದ ಪೇಟೆ. ನಮ್ಮ ಬೇಕು ಬೇಡಗಳ ತಾಣ. ಅಷ್ಟರಲ್ಲಿ ಕಣಿಪುರ ಪ್ರವೇಶಿಸಿಯೇ ಬಿಟ್ಟ ವಿಟ್ಟು ಪೈ !

ದಾಳಿ ತೊವ್ವೆ, ಹುರುಳಿ ಸಾರು, ಹುರಿದ ಮೀನಿನ ವಾಸನೆಯನ್ನು ನಮ್ಮ ಮೂಗಿಗೆ ಘಮ್ಮೆನಿಸಿದ….ಕೈ ತೊಳೆದರೂ ಹಿಂಗಿನ ಒಗ್ಗರಣೆಯ ಪರಿಮಳವು ಹೋಗದಂತೆ, ಗತಕಾಲದ ನೆನಪುಗಳು ಮತ್ತೆ ಮತ್ತೆ ಗುಮ್ಮೆಂದು ಬಡಿಯುವಂತೆ ಮಾಡಿ ಇಂದಿಗೂ ನೆನೆಸಿಕೊಂಡರೆ ಮೂಗಿನ ಹೊರಳೆ ಅರಳುವಂತೆ ಮಾಡಿದ ಮರ್ಥ ಕಿಣಿ ನಮ್ಮನ್ನಗಲಿಯೇ ಬಿಟ್ಟ !!! ಇಲ್ಲಿ ಬರುವ ಭೌಗೋಳಿಕ ಪ್ರದೇಶದಿಂದ ಕಾದಂಬರಿಗೆ ನಾನು ಹೆಚ್ಚು ಆಪ್ತನಾದೆ ಎನ್ನುವುದು ಒಂದು ಅಂಶ ಮಾತ್ರ. ಮೊತ್ತದಲ್ಲಿ ಕಾದಂಬರಿ ನನ್ನನ್ನು ಆವರಿಸಿಕೊಂಡಂತೆ ನಾನೂ ಕಾದಂಬರಿಯನ್ನು, ಅಲ್ಲಿ ಬರುವ ಪಾತ್ರಗಳನ್ನು ಆವರಿಸಿಕೊಂಡು ಬಿಟ್ಟೆ ಅನ್ನುವುದೇ ಸತ್ಯದ ವಿಷಯ.

ನಂತರದ ಪರ್ವ ವು ಇನ್ನೂ ಆಪ್ಯಾಯಮಾನವಾದುದು. ತಲೆಯಿಂದ ತಲೆಗೆ ‘ ನಾಗ್ಡೊ ಬೆತಾಳ ‘ ಹೇಳಿದ ಕಥೆಯನ್ನು ಸಾಗಿಸುವ ಜೊತೆಗೆ, ತಮ್ಮ ತಮ್ಮ ಅಸ್ತಿತ್ವವನ್ನು ಭೂಮಿಯ ಒಡೆತನದಿಂದ, ವ್ಯವಹಾರ ಚತುರತೆಯಿಂದ ಸಾರಸ್ವತರು ಶ್ರುತಪಡಿಸಿದ ಜಾಣ್ಮೆಯನ್ನು ಎಲ್ಲರೂ ಮೆಚ್ಚಬೆಕಾದದ್ದೇ. ನಾಗನ ಶಾಪ, ದಡ್ಡನ ತ್ಯಾಗ, ನಾಗ್ಡೊ ಬೇತಾಳ ನ ಅಭಯ, ಮಾಳಶಿಮಾಯಿ, ವೀರ ವಿಠಲನ ಆಶೀರ್ವಾದವು ಸತತವಾಗಿ ಬೆನ್ಣಿಗಿದ್ದ ಪರಿಣಾಮ ರಾಂಚೋ ಪೈ ೪೦೦ ಎಕರೇ ಭೂ ಪ್ರದೇಶದ ಒಡೆಯನಾದ…ಮತ್ತು ನೋವು-ನಲಿವುಗಳನ್ನು ಸಮವಾಗಿ ಅನುಭವಿಸಿದ…! ಕೊನೆಯಲ್ಲಿ,ತನ್ನ ಪತಿಯ ಸಾವಿನಿಂದಾಗಿ ಬೆಳ್ಳಂ ಬೀಡಿನಲ್ಲಿ ಉಳಿದು ಬಾಹ್ಯ ಪ್ರಪಂಚಕ್ಕೆ ಪ್ರಶ್ನೆಯಾದ ಜಾಹ್ನವಿ ಏನಾದಳು ಎಂದು ಯೋಚಿಸುವಷ್ಟರಲ್ಲಿ ದುತ್ತೆಂದು ಎರಗುವ ಬೆಂಕಿಯ ಕೆನ್ನಾಲಿಗೆ, ಸೇವಕಿ ಕಾಳಿಯನ್ನು ಹಸಿ ಹಸಿಯಾಗಿಯೇ ಬೆಳ್ಳಗಿನ ದೇಹವೊಂದು ಕಚ್ಚಿ ತಿನ್ನುವ ವಿವರಣೆಯು ಭೀಭತ್ಸವಾಗಿ, ಬೆಳ್ಳಂಬೆಟ್ಟಕ್ಕೆ ಕೊಳ್ಳಿಯಿಡಲು ಬಂದ ಭುಜಂಗ ಪೈ ಯ ಗಲ್ಲವೂ ಬೆಳ್ಳಗಿನ ದೇಹದ ಏಟಿಗೆ ತಿರುವಿ ಹೋಗಿ….ಭಯದಿಂದ ಹೊರ ಬರಲು ಪ್ರಯತ್ನಿಸುವ ಭುಜಂಗನಿಗೂ ಬೆಂಕಿ ತಗುಲಿ ಕಿರುಚಾಡಿ ಹೊರ ಓಡುವ ದೃಶ್ಯವು ಅದ್ಭುತವಾಗಿ ಅಕ್ಷರಗಳಲ್ಲಿ ಮೂಡಿ ಬಂದಿದೆ.

ಯಾವ ಹೊರರ್ ಸಿನೆಮಾಕ್ಕು ಕಡಿಮೆ ಇಲ್ಲ ಎಂಬಂತೆ ಕಾದಂಬರಿಯಲ್ಲಿ ಆ ಚಿತ್ರಣವು ಮೂಡಿ ಬಂದಿದೆ. ಒಬ್ಬ ಓದುಗ ಪುಟದಿಂದ ಪುಟಕ್ಕೆ, ಅಧ್ಯಾಯದಿಂದ ಅಧ್ಯಾಯಕ್ಕೆ ಅದನ್ನು ವಿಶುವಲೈಸ್ ಮಾಡಬಲ್ಲ ಎಂದರೆ ಅದು ನಿಜಕ್ಕೂ ನಿಮ್ಮ ವಿಜಯವಾಗಿದೆ. ನಿಮ್ಮ ಕಾರ್ಯದಲ್ಲಿ ನೀವು ಯಶಸ್ವಿಯಾಗಿದ್ದೀರಿ ಎಂದು ಸಾಮಾನ್ಯ ಓದುಗನಾದ ನಾನು ಗ್ರಹಿಸಬಲ್ಲೆ ಮತ್ತು ಅದು ಸತ್ಯವೂ ಹೌದು.

ಕುಂಬಳೆ ಯ ಅರಸರು, ಬಮ್ಬ ಮಣಿಯಾಣಿ, ಕೃಷ್ಣ ಭಟ್ಟರು, ದುಗ್ಗಮ್ಮ, ಬೀಡಿನ ಬಲ್ಲಾಳರು, ಕುರುಪ್ಪು, ಪಾಟಾಳಿ, ಅಣ್ಣು ಪೂಜಾರಿ, ಚಂದ್ರಭಾಗಾ….ಮತ್ತಿತರ ಪಾತ್ರಗಳು , ಅಡೂರು, ಮಧೂರು, ಕಣಿಪುರ ಕ್ಷೇತ್ರಗಳು, ಸೀತಾಂಗೊಳಿ, ಬೇಳ, ಮಾನ್ಯ ಊರುಗಳು, ಕರಾಡ, ಹವ್ಯಕ, ಬ್ಯಾರೀ ವರ್ಗಗಳೂ, ಯಕ್ಷಗಾನವೂ ಸೇರಿದಂತೆ ಗಾಢ ಮಣ್ಣಿನ ವಾಸನೆಯನ್ನು ಹೊಂದಿದ ಒಂದು ಅದ್ಭುತ ಅಕ್ಷರ ಲೋಕವನ್ನು ನಿರ್ಮಿಸಿದ್ದೀರಿ. ಎಲ್ಲಾ ಪಾತ್ರಗಳೂ, ಅವುಗಳ ನಂತರದ ತಲೆಗಳ ಬಗ್ಗೆಯೂ ವಿವರಿಸಿದ್ದೀರಿ.

ಹೀಗೆ ಒಂದು ಸಮುದಾಯವು ಪಟ್ಟ ಬವಣೆಯನ್ನು ಓದಿದ ನನಗೆ ಅದು ನಮ್ಮೆಲ್ಲರ ಬವಣೆಯೂ ಆಗಿದೆ ಎಂದೆನಿಸಿತು…ಕಾಲಘಟ್ಟ ಬದಲಾದ ಮಾತ್ರಕ್ಕೆ ಬವಣೆಗಳು ಇಲ್ಲವಾಗುವುದಿಲ್ಲ, ಪ್ರಮಾಣ, ರೀತಿಗಳು ಮಾತ್ರ ವ್ಯತ್ಯಸ್ತವಾಗಿರುತ್ತವೆ ಅಷ್ಟೇ. ದುಷ್ಟ ಜನರಿರುವ ಈ ಕೆಟ್ಟ ಕಾಲದಲ್ಲಿ, “ದಡ್ಡ ” ನಂತಹ ತ್ಯಾಗಿ, ಸದಾ ಬೆನ್ನಿಗಿರುವ, ಕಷ್ಟ ಕಾಲದ ಸಂಗಾತಿ, ಮಾರ್ಗದರ್ಶಕ ” ನಾಗ್ಡೊ ಬೇತಾಳ” ನಂತಹವನು ನಮ್ಮ ನಡುವೆಯೂ ಇರಬೇಕಾದುದು ಇಂದಿನ ತುರ್ತಾಗಿದೆ ಅಲ್ಲವೇ !?

ಹೇಳಿ ಬರುವವನಲ್ಲವಲ್ಲ ಅವನು…! ಆದರೂ ಆತ ಬರುವನಾದರೆ, ಹುಳಿ ಹೆಂಡ, ಹುರಿದ ಮೀನು, ಬಟ್ಟಲು ತುಂಬಾ ಬಳ್ಳಿ ವೀಳ್ಯದೆಲೆ, ನೀರಲ್ಲಿ ಹಾಕಿದ ಅಡಿಕೆ, ಲವಂಗ, ಏಲಕ್ಕಿ, ಕೊಬ್ಬರಿಯೇನೋ ಇದೆ. “ನಾಗ್ಡೊ ಬೆತಾಳ” ಯಾವಾಗ ಬರುತ್ತಾನೆ…..? ಎಂದು ತಿಳಿಸಿ…! ಅವನು ಎಲ್ಲಿದ್ದಾನೆಂದಾದರೂ ತಿಳಿದರೆ…..ಅಲ್ಲಿಗೆ ನಮ್ಮವರನ್ನಾದರೂ ಅಟ್ಟಿಸಬಹುದಿತ್ತು…?! ಒಟ್ಟಿನಲ್ಲಿ ಕಾದಂಬರಿ ಓದುವ ಮೊದಲು ” ಸಾರ್ ” ಆಗಿದ್ದ ನೀವು ಈಗ ” ಪೈ ಮಮ್ಮಾ” ಆಗಿದ್ದೀರಿ….!!!!! ಮಾಳಶಿಮಾಯಿಯ ಆಶೀರ್ವಾದದ ಜೊತೆಗೆ ಇಲ್ಲೇ ಎಲ್ಲೋ ಇರಬಹುದು ಆತ…..ಯಾರೆಂದಿರಾ…..? ಅವನೇ “ನಾಗ್ಡೊ ಬೇತಾಳ”…. ಎಂಬ ನಮ್ಮ-ನಿಮ್ಮ ವಿಶ್ವಾಸಕ್ಕೆ ಇದೋ ಸಾಷ್ಟಾಂಗ ನಮನ.

ಇದು ಕನ್ನಡ ಸಾರಸ್ವತ ಲೋಕದ ಹೆಮ್ಮೆಯ ಕೃತಿಯೂ, ವಿಜಯವೂ, ಜೊತೆಗೆ ನಮ್ಮ ಒಟ್ಟು ಪರಂಪರೆಯನ್ನು, ಚರಿತ್ರೆಯನ್ನು ಕಾಪಿಡುವ ಕಾರ್ಯವೂ ಹೌದು. ಪ್ರೀತಿಯ “ಪೈ ಮಮ್ಮಾ” ತ್ರಿ ಚಿಯರ್ಸ್ ಟು ಯು…!!!

‍ಲೇಖಕರು G

April 13, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Vikram Hathwar

    naanidannu ‘kendra saahitya’ baruva muncheye 2010 ralle odi snehitarigella hanchidde 🙂 Thanks to Sanchaya Prahlad. And, Pai Maam rocks!!

    idu kevala valaseya ondu samudaayada kate maatra alla. adaralli baruva kelavondu sannivEshagaLantu obba appaTa kalaavidana sookshma kusuri. tumba preetiyinda bardiddeeya….cheers!!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: