ತುಂಬು ಗರ್ಭಿಣಿ ಭೂಮಿಗೆ ಬಯಕೆ ಹಾಕುತ್ತಾ..

ಇಂದು ಭೂಮಿ ಹುಣ್ಣಿಮೆ

%e0%b2%a8%e0%b3%86%e0%b2%82%e0%b2%aa%e0%b3%86-%e0%b2%a6%e0%b3%87%e0%b2%b5%e0%b2%b0%e0%b2%be%e0%b2%9c%e0%b3%8d

ನೆಂಪೆ ದೇವರಾಜ್

ಚಗಟೆ, ಕುನ್ನೇರಲು, ಕೆಸ, ಕೆಂದಾಳ, ಮೀನಿಂಗಿ, ಕೇಸಟ್ಟೆ, ಸಳ್ಳೆ, ಗರ್ಗ, ಗಿಡಾಲೆ ಗರ್ಗ, ಮಳ್ಳಿ, ಮತ್ತಿ, ಮುಕ್ಕುಡುಕ, ಕಲ್ಡಿ, ಕರ್ಜಿ, ಬಾಳೆ, ಹಲಸು ಮಾವು, ಕಬಳೆ, ನೀರಟ್ಟೆ,ಗಂಧ, ನೇರಲು, ಹೈಗ, ಹಾಲುವಾಣ, ಹೊಳೆಲಕ್ಕಿ, ಕಿರಾಲುಭೋಗಿ, ತ್ವಾರಂಗಲು, ಬೋಗಿ, ಕೂಳೆ, ಸದಗ, ಒಂದೆಲಗ, ರತ್ನಗಂಜಿ, ತಗ್ಗಿ, ತುಂಬೆ, ಅರಮರಲು, ಅತ್ತಿ, ನೆಲ್ಲಿ, ಬಲಿಗೆ, ಬಗುನೆ, ಹೀಗೆ ನೂರೊಂದು ಕುಡಿಗಳನ್ನು ಚಿವುಟಿ ಬುಟ್ಟಿ ತುಂಬಿಸಿಕೊಂಡು ಮನೆಯಲ್ಲಿ ಹರಡಿ ಇಡೀ ರಾತ್ರಿ ಎಚ್ಚರಿದ್ದು ಅಡುಗೆ ಮಾಡುವ ಈ ಹಬ್ಬ ಇಡೀ ಪಶ್ಚಿಮ ಘಟ್ಟದ ಸಾವಿರಾರು ಗಿಡಗಂಟಿಗಳ ಪರಿಚಯ ಮಾಡಿಕೊಡುತ್ತದೆ.

ಭೂಮಾತೆಯ ಹಬ್ಬಕ್ಕೆ ಇಂಡಿಯಾ ಸ್ಪಂದಿಸದಿದ್ದರೂ ಇಂಡಿಯಾದ ಜಿಡಿಪಿ ದರದ ಮೇಲೆ ಭಾರತ ನಿಂತಿದೆ ಎಂದು ಹೇಳುವ ಹಾಗೂ ಅದರ ಮೇಲೆ ಅವಲಂಬಿತರಾಗಿರುವವರಿಗೆ ಅನ್ನ ಕೊಡುವ ಭೂಮಿಯಂತೂ ಸ್ಪಂದಿಸುತ್ತಲೇ ಬಂದಿದೆ..

ತೀರ್ಥಹಳ್ಳಿ ಹೊಸನಗರ , ಸಾಗರ, ಸೊರಬ, ಶೃಂಗೇರಿ, ಕೊಪ್ಪ ನರಸಿಂಹರಾಜಪುರಗಳ ಆಜುಬಾಜಿನಲ್ಲಿ ಪ್ರಚಲಿತವಾಗಿರುವ ಪೂರ್ಣ ಚಂದ್ರನ ನೀಲಾಕಾಶದ ಕೆಳಗೆ ಗೃಹಿಣಿಯರ ತಪಸ್ಸಿನ ಫಲವಾಗಿ ಮೂಡಿ ಬರುವ ಭೂಮಿ ಹುಣ್ಣಿಮೆ ಹಬ್ಬ ಬೇರಾವ ಹಬ್ಬವೂ ಕೊಡದಷ್ಟು ಅರ್ಥವಂತಿಕೆಯನ್ನು ಸಾರುತ್ತಾ ಬರುತ್ತಿದೆ.

ನೇಗಿಲ ಯೋಗಿ ಇಡೀ ರಾತ್ರಿ ಭೂತಾಯಿಗೆ ಕೃತಜ್ಞನಾಗುವ ರೀತಿಯೇ ಅಭೂತಪೂರ್ವವಾದುದು. ತುಂಬಿದ ಬಸುರಿಯಾಗಿ ತನ್ನೊಳಗೆ ಹಸಿರು ಹೊದ್ದು ಕಂಗೊಳಿಸುವ ಭೂಮಿಗೆ ಉಣ್ಣಿಸುವ ಪರಿಯಲ್ಲಿರುವ ಉಪಕಾರ ಸ್ಮರಣೆಗೆ ಮತ್ತೊಂದು ಉದಾಹರಣೆಯನ್ನು ಬೇರಾವ ವಿಧದಲ್ಲೂ ನೋಡಲು ಅಸಾಧ್ಯ.

ಬೆಳ್ಳಂಬೆಳಿಗ್ಗೆ ಎದ್ದು ಇಡೀ ಕಾಡು ಮೇಡುಗಳನ್ನು ಸುತ್ತುತ್ತಾ ಪ್ರತಿ ಗಿಡಗಳನ್ನು ಮುಟುತ್ತ, ಅದರ ಮೇಲಿನ ಮುತ್ತಿನ ಹನಿಗಳನ್ನು ಬೀಳಿಸಿ ಸಸ್ಯದ ಕುಡಿಗಳನ್ನಷ್ಟೆ ಬುಟ್ಟಿಯೊಳಗೆ ತುಂಬಿಸಿಕೊಳ್ಳುವ ಪ್ರತಿ ಹುಡುಗನ ಮನ ಪುಳಕಗೊಳ್ಳುವ ಬಗೆಗೆ ಇಂದಿಗೂ ವಿಶ್ವ ಶ್ರೇಷ್ಠನೆನಿಸಿಕೊಂಡಿರುವ ಪರಿಸರ ತಜ್ಞ ಅವಜ್ಞೆಗೊಳಪಡಿಸಿದ ರೀತಿ ಕ್ಷಮಾರ್ಹವಲ್ಲವೇ ಅಲ್ಲ.

ಕುವೆಂಪುರವರು ಮಹಿಳೆಯನ್ನು ಮಾತೆ ಎನ್ನಲಿಲ್ಲ. ಪರಮ ಪತಿವ್ರತೆ ಎನ್ನುತ್ತಾ ಸೀತೆ ಸಾವಿತ್ರಿಯರ ತರಹ ಎನ್ನಲಿಲ್ಲ. ಕತ್ತಲ ಕೋಣೆಯೊಳಗೆ ಬೇಯುತ್ತಾ, ಒಲೆಯ ಹೊಗೆಯಲ್ಲಿ ಊದಿಕೊಂಡ ಕಣ್ಣುಗಳಲ್ಲೇ ಸಹನೆಯ ನೋಟ ಬೀರುತ್ತಾ ಒತ್ತರಿಸಿ ಬರುತ್ತಿದ್ದ ದುಃಖಕ್ಕೆ ನಗೆಯ ಸಿಂಚನ ನೀಡಿ ಮನೆಯನ್ನು ತಪೋವನವನ್ನಾಗಿಸಿದ ಆಕೆಯ ಸಾಧನೆಯನ್ನು ಗೃಹ ತಪಸ್ವಿನಿಗೆ ಹೋಲಿಸಿದ ಕುವೆಂಪುರವರ ಬಿರುದನ್ನು ಸವಾಲಾಗಿ ಸ್ವೀಕರಿಸಿ ತನ್ನೊಡಲನ್ನೇ ಹಬ್ಬದ ಯಶಸ್ಸಿಗೆ ಸ್ಪಂದಿಸುವ ಬಗೆಗೆ ಪದಗಳು ದಕ್ಕುತ್ತಿಲ್ಲ

ತುಂಬು ಗರ್ಭಿಣಿ ಭೂಮಿಯ ಬಯಕೆಗಳು ಹತ್ತು ಹಲವು. ದಟ್ಟಾರಣ್ಯದಲ್ಲಿರುವ ನೂರೊಂದು ಕುಡಿಗಳ ಪಲ್ಯ, ಕಬ್ಬಿನ ಪಚೀಡಿ, ಚೆಂಡು ಹೂವಿನ ಪಚೀಡಿ, ಬಾಳೆ ದಿಂಡಿನ ಪಚೀಡಿ, ಹಾಲು ಮತ್ತು ಮಜ್ಜಿಗೆಯ ಅಂಬಲಿಗಳು, ಹೀರೆ, ಸೌತೆ ಕಾಯಿಯ ಹುಳಿಗಳು, ಹೀಗೆ ಒಂದೇ ಎರಡೇ. ತರಕಾರಿಗಳ ಸುರಿಮಳೆ. ಇಡೀ ರಾತ್ರಿ ಪುರುಷರು ಗೊರಕೆ ಹೊಡೆಯುತ್ತಲೋ, ಇಸ್ಪೀಟು ಆಡುತ್ತಲೋ ಕಾಲ ಕಳೆದರೆ ಹೆಂಗಸರು ಪಾತ್ರೆಗಳ ಮೇಲೆ ಪಾತ್ರೆ ತೆಗೆದು ಸಿಟ್ಟು ಮತ್ತು ಸಡಗರದಲ್ಲಿ ಸದ್ದು ಮಾಡುತ್ತಾ ಬೆಳದಿಂಗಳನ್ನು ಚೇತೋಹಾರಿಗೊಳಿಸುತ್ತಿರುತ್ತಾರೆ.

ಮೊದಲ ಕೋಳಿ ಕೂಗುವ ವೇಳೆಗೆ ಗಂಡಸರ ಗೊರಕೆಗೆ ಇತಿಶ್ರಿ ಬೀಳುತ್ತದೆ. ಬೆಳಿಗ್ಗೆ ನಾಲ್ಕರೊಳಗೆ ಎದ್ದು ಸ್ನಾನ ಮಾಡಿ ಹಿಂದಿನ ದಿನವೇ ಮಾಡಿಟ್ಟ ಅಡಿಕೆ ದಬ್ಬೆಯ ದೊಂದಿಗಳ ಜ್ವಾಲೆಯೊಂದಿಗೆ ಬಗೆ ಬಗೆಯ ಭಕ್ಷ್ಯಗಳೂ, ಅಮಟೆ ಕಾಯಿ ಮತ್ತು ಕೆಸುವಿನ ಸೊಪ್ಪು ಮಿಶ್ರಿತ ಅನ್ನವೂ ಸೇರಿದಂತೆ ಎಲ್ಲವನ್ನೂ ಗೆರಸಿಗೆ ಹಾಕಿ ದೊಡ್ಡ ಮಣೆ ಎದುರು ಜ್ಯೋತಿ ಹಚ್ಚಿ ಜಾಗಟೆಯ ಸದ್ದು ಮೊಳಗಿಸಲಾಗುತ್ತದೆ.

ಮುಂದೆ ಗೆರಸಿ ಹೊತ್ತ ಚಿಕ್ಕಪ್ಪ, ಆತನ ಹಿಂದೆ ಧಗಧಗಸುವ ದೊಂದಿ ಹೊತ್ತ ನನ್ನಪ್ಪ, ಆ ಬೆಳಕಿನ ಹಿಂದೆ ಜಾಗಟೆ ಸದ್ದನ್ನು ಇಡೀ ಊರು ಮೊಳಗಿಸುವ ನಾನು. ಬೆಳಿಗ್ಗೆ ಐದಕ್ಕೋ ಆರಕ್ಕೋ ಕೂಗಬೇಕಾದ ಕೋಳಿಗಳು ಅಂದು ಗೊಂದಲಕ್ಕೊಳಗಾಗಿ ಎಲ್ಲೆಲ್ಲೂ ದೊಂದಿಯ ಜ್ವಾಲೆಗಳನ್ನು ನೋಡಿಯೂ ಮತ್ತು, ಶಂಖ – ಜಾಗಟೆಗಳ ಸದ್ದಿಗೆ ಬೆಚ್ಚಿ ಬಿದ್ದು ಕೊಕೋ ಕೋ ಎಂದು ಕೂಗತೊಡಗುತ್ತವೆ. ಒಡು ವಟ್ಟೆಗಳ ಗದ್ದೆಯ ಬದುಗಳನ್ನು ದಾಟುತ್ತಾ, ಕಿರಿದಾದ ಅಂಚುಗಳ ಮೇಲೆ ಕಗ್ಗತ್ತಲ ಬೆಳಗಲ್ಲಿ ಹೋಗುವ ದಿನಗಳು ಮನಸಿಂದ ಮರೆಯಲಾಗದ ಹೃದಯ ಹೊಕ್ಕ ಕ್ಷಣಗಳು.

ಹಿಂದಿನ ದಿನ ರಾತ್ರಿಯೇ ಗದ್ದೆಯಲ್ಲಿ ಮಾಡಿಟ್ಟ ಬಾಳೆ ಮರಗಳನ್ನು ಹೂಚಿ ಅಲ್ಲೊಂದು ಸಣ್ಣ ತೋರಣ ಕಟ್ಟಲಾಗಿರುತ್ತದೆ. ಚೆಂಡು ಹೂ ತುಳಸಿ ಗಿಡಗಳನ್ನು ನೆಡಲಾಗಿರುತ್ತದೆ. ಹೊಡೆಗಳಿಂದ ಹಿಳ್ಳೊಡೆದ ಕೇವಿಯ ಒಂದೊಂದೇ ಓಲಿಗಳಿಗೆ ಪುಟ್ಟ ಬಳೆಗಳನ್ನೂ, ಸರಗಳನ್ನೂ, ಕಣ್ಣು ಕಪ್ಪನ್ನೂ ಹಚ್ಚಿ ಶೃಂರಿಸಲಾಗುತ್ತದೆ. ಬಂಗಾರದ ಸರವನ್ನು ನಟ್ಟಿಯ ಬುಡಕ್ಕೆ ಹಾಕಿ ಮಂಗಳಾರತಿ ಮಾಡಲಾಗುತ್ತದೆ. ಪೂಜೆ ಮಾಡಿ ಗೆರಸಿಯಲ್ಲಿದ್ದ ಒಂಭತ್ತು ಬಗೆಯ ಪಲ್ಯಗಳನ್ನು ಅನ್ನದೊಂದಿಗೆ ಕಲಿಸಲಾಗುತ್ತದೆ.

ಮೊದಲೇ ಮಾಡಿಟ್ಟ ಕೊಟ್ಟೆ ಕಡುಬನ್ನು ಗದ್ದೆಯ ಮಧ್ಯದಲ್ಲಿ ಹುಗಿದು ಬಂದವರೆ ಕಲಿಸಿಟ್ಟಿದ್ದ ಅನ್ನವನ್ನು ಮುದ್ದೆ ಮಾಡಿ ಒಂದೊಂದೇ ಮುದ್ದೆಗಳನ್ನು ಗದ್ದೆಗೆ ಎಸೆಯುತ್ತಾರೆ. ಎಸೆವಾಗ ಅಚ್ಚಂಬಲಿ ಹಾಲಂಬಲಿ, ಬೇಲಿ ಮೇಲಿರೋ ಧಾರೆ ಹೀರೇಕಾ ಭೂತಾಯಿ ಉಂಡು ಹೋಗು ಎಂದು ಮಕ್ಕಳು ಮಹಿಳೆಯರಾದಿಯಾಗಿ ಹೇಳುವಾಗ ಚಳಿ ಮತ್ತಷ್ಟು ತೀವ್ರತೆ ಪಡೆಯುತ್ತಾ ಹೋಗುತ್ತದೆ.

ಸೂರ್ಯ ಇಣುಕಲು ಹರ ಸಾಹಸ ಪಡುತ್ತಿರುತ್ತಾನೆ. ಕಾಗೆಗಳು ಕೂಗಲಾರಂಭಿಸುತ್ತವೆ. ದೊಂದಿಯ ಜ್ವಾಜಲ್ಯಮಾನತೆ ನಿಧಾನವಾಗಿ ಕಡಿಮೆಯಾಗತೊಡಗುತ್ತ ಹೋಗುತ್ತದೆ. ಭೂಮಿಗೆ ಹಾಕಿ ಉಳಿದ ಅನ್ನವನ್ನು ಉಳಿದ ಕಡೆ ಇರುವ ಗದ್ದೆಗಳಿಗೆ ತೆಗೆದು ಕೊಂಡು ಹೋಗಲಾತ್ತದೆ. ಪ್ರತಿ ಗದ್ದೆಗೂ ಒಂದೊಂದು ಮುಷ್ಟಿ ಅನ್ನ ಹಾಕುವಾಗಲೂ ಅಚ್ಚಂಬಲಿ ಹಾಲಂಬಲಿ ಘೋಷಣೆ ಕೂಗು ಮುಗಿಲು ಮುಟ್ಟುತ್ತಿರುತ್ತದೆ.

she-pregnentಭೂಮಿ ಹುಣ್ಣಿಮೆ ಭೂತಾಯಿಯ ಜೊತೆಗೆ ಇಟ್ಟುಕೊಂಡ ಭಾವನಾತ್ಮಕ ಸಂಬಂಧದ ದ್ಯೋತಕ. ಗರ್ಭಿಣಿಯ ಬೇಕು ಬೇಡಗಳನ್ನು ಈ ಹಬ್ಬದಲ್ಲಿ ಬಹು ಮುತುವರ್ಜಿಯಿಂದ ನೋಡಲಾಗುತ್ತದೆ. ಚೀನಿ ಕಾಯಿ, ಬದನೆ ಕಾಯಿತರಹದ ನಂಜೇರಿಸುವ ತರಕಾರಿಗಳ ಯಾವ ಅಡುಗೆಯೂ ಇಲ್ಲ. ಯಾವ ಪಲ್ಯಕ್ಕೂ ಒಗ್ಗರಣೆ ಅಥವಾ ತೆಂಗಿನ ಕಾಯಿಯನ್ನು ಉಪಯೋಗಿಸಿದರೆ ತುಂಬು ಗರ್ಭಿಣಿ ಭೂಮಿ ತಾಳಿಕೊಳ್ಳಲಾರಳು.

ಹೆಂಗಸರು ರಾತ್ರಿ ನಿದ್ದೆ ಮಾಡಿದರೆ ಹೊಡೆಗಳಿಂದಾವೃತವಾಗಿ ಫಸಲನ್ನು ಕೈಗೆ ಕೊಡಲು ಸಿದ್ದಗೊಂಡಿರುವ ಬತ್ತದ ತೆನೆಗಳು ಕಾಳು ಕಟ್ಟದೆ ಚಟ್ಟಾಗುತ್ತವೆಯಂತೆ. ಹಬ್ಬದ ಮಾರನೇ ದಿನ ಯಾವುದೇ ಕಾರಣಕ್ಕೂ ಭೂಮಿಯನ್ನು ಅಗಿಯುವ ಕೆಲಸ ನಿಷಿದ್ದ. ಈ ದಿನವನ್ನು ಭೂಮಿ ಬಲಿಯುವ ದಿನ ಎನ್ನುತ್ತಾರೆ. ಭೂಮಿ ಹುಣ್ಣಿಮೆಯಂದು ಹುಗಿದ ಕೊಟ್ಟೆ ಕಡಬು ಗದ್ದೆಕೊಯ್ಲು ಮಾಡುವಾಗ ದೊರೆತರೆ ಅದೊಂದು ಅದೃಷ್ಟದ ಸಂಕೇತವೆಂದೇ ಬಗೆಯಲಾಗುತ್ತದೆ.

ಭೂಮಿ ಹುಣ್ಣಿಮೆಯಂದು ಹಚ್ಚಿದ್ದ ಅಡಿಕೆ ದೊಂದಿ ಉಳಿದರೆ ಅದನ್ನು ಹಾಗೇ ಜೋಪಾನವಾಗಿ ದೀಪಾವಳಿಯವರೆಗೆ ಇಟ್ಟುಕೊಳ್ಳಲಾಗುತ್ತದೆ. ಬಲಿಪಾಡ್ಯಮಿಯಂದು ರಾತ್ರಿ ಗದ್ದೆ ತೋಟಗಳಿಗೆ ಕೋಲು ದೀಪಬೆಳಗಿಸಲು ಈ ಅರ್ಧ ಸುಟ್ಟ ದೊಂದಿಯನ್ನು ಉಪಯೋಗಿಸಲಾಗುತ್ತದೆ.

ನೂರೊಂದು ಕಾಡು ಸೊಪ್ಪುಗಳ ಬೆರಕೆ ಸೊಪ್ಪಿನ ಪಲ್ಯವೂ, ಹಾಲು ಮತ್ತು ಮಜ್ಜಿಗೆಯ ಅಂಬಲಿಯೂ, ಕಾಡು ಗೆಣಸಿನ ಹುರುಕಲೂ ಬದಿಗೆ ಸರಿದು ಬರ್ಗರ್ ಮತ್ತು ಫಿಜ್ಜಾಗಳ ಜೊತೆ ತೀರ್ಥಹಳ್ಳಿಯ ಆಯ್ದ ಹೋಟೆಲುಗಳಲ್ಲಿ ಮಾಡುವ ಮಟನ್ ಮತ್ತು ಚಿಕನ್ ಬಿರ್ಯಾನಿಗಳು ಹಬ್ಬದ ದಿನ ಮನಗೆ ಸಲೀಸಾಗಿ ಆಗಮಿಸಿ ತಮ್ಮ ಪಾರಮ್ಯ ಸಾರುತ್ತಿವೆ. ಭೂಮಿ ಹುಣ್ಣಿಮೆ ತರಹದ ಹಬ್ಬಗಳು ನಿಧಾನಕ್ಕೆ ಬದಿಗೆ ಸರಿಯುತ್ತಿವೆ.

ಕ್ಯಾಲೆಂಡರುಗಳು ಸಹಾ ಭೂಮಿ ಹುಣ್ಣಿಮೆ ಎಂಬುದನ್ನು ಸಂಬೋಧಿಸಲು ಕೂಡಾ ಇಷ್ಟಪಡಲಾರವು. ಬರಿ ಹುಣ್ಣಿಮೆ ಎಂದು ಹಾಕಿ ಕೈತೊಳೆದುಕೊಳ್ಳುವುದರಲ್ಲಿ ಕ್ಯಾಲೆಂಡರು ತಯಾರಕರಿಗೆ ತುಂಬಾ ಖುಷಿ.

‍ಲೇಖಕರು admin

October 15, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬಳ್ಳೊಳ್ಳಿ ಬುತ್ತಿಯೂಟದ ನೆನಪಿನಾಗ…

ಬಳ್ಳೊಳ್ಳಿ ಬುತ್ತಿಯೂಟದ ನೆನಪಿನಾಗ…

ಹೆಸರೇ ಅನಾಮಿಕಾ ಹಾಗಾಗಿಯೇ ಈಕೆ ಅನಾಮಿಕೆ . ಹೆಸರು ಹೇಳಲು ಒಲ್ಲದ ಈಕೆ ಭೋಜನಪ್ರಿಯೆ ಅಂತ ಬಿಡಿಸಿ ಹೇಳಬೇಕಿಲ್ಲವಲ್ಲ. ಅದು ಎಷ್ಟು ಖರೆ ಎಂದು...

9 ಪ್ರತಿಕ್ರಿಯೆಗಳು

 1. Anonymous

  ಕರ್ಕಶವಾಗುತ್ತಿರುವ ಬೆಂಗಳೂರಿನ ಬದುಕು. ಬೆಳ್ಳಂ ಬೆಳಗ್ಗೆ ಬಾಲ್ಯಕ್ಕೆಳೆದುಕೊಂಡು ಹೋದ ಅವಧಿ. ಭೂಮಿ ಹುಣ್ಣಿಮೆಯ ಘಮ…..ಕೊಟ್ಟೆ ಕಡುಬಿನ ರುಚಿ ಬಾಯಲ್ಲಿ ನೀರಾಡಿಸಿತು

  ಪ್ರತಿಕ್ರಿಯೆ
 2. Anonymous

  ಗರ್ಗ, ಬಾಳೆ, ಹಲಸು ಮಾವು, ಗಂಧ, ಕಿರಾಲುಭೋಗಿ, ಬೋಗಿ, ಒಂದೆಲಗ, ತುಂಬೆ, ಅತ್ತಿ, ನೆಲ್ಲಿ, – ಇಷ್ಟು ಹೆಸರು ಗೊತ್ತಲ್ಲ ನನಗೆ ಎಂದು ಹೆಮ್ಮೆ… ಹೆಸರೂ ಗೊತ್ತಿಲ್ಲದ ಉಳಿದ ಗಿಡಮರಗಳನ್ನು ಇನ್ನು ಯಾವಾಗ ಅರಿತುಕೊಳ್ಳುವುದು ಎಂಬ ಸಂಕೋಚ..!

  ಪ್ರತಿಕ್ರಿಯೆ
 3. S.p.vijaya Lakshmi

  Bahala ishtavaayithu…Aacharanegalu jaalaaguttiruvudu khedakara ….

  ಪ್ರತಿಕ್ರಿಯೆ
 4. Anonymous

  ಭೂಮಿ ಹುಣ್ಣಿಮೆಯ ಸಡಗರದ ಎಲ್ಲ ಅಂಶಗಳನ್ನೂ ಮನಮೆಚ್ಚುವಂತೆ ಲೇಖನದಲ್ಲಿ ಚಿತ್ರಿಸಿದ್ದೀರಿ.ಅಭಿನಂದನೆಗಳು.

  ಪ್ರತಿಕ್ರಿಯೆ
 5. .ಮಹೇಶ್ವರಿ.ಯು

  ತುಳುನಾಡಿನ ಕೆಡ್ಡೆಸದ ಆಚರಣೆಯಲ್ಲಿ ಭೂಮಿತಾಯಿ ಮುಟ್ಟಾಗುತ್ತಾಳೆ ಎಂಬ ನಂಬಿಕೆಯಿದ್ದರೆ ಭೂಮಿಹುಣ್ಣಿಮೆಯ ಆಚರಣೆಯಲ್ಲಿ ಆಕೆ ಗರ್ಭಿಣಿ ಎಂಬ ನಂಬಿಕೆ. ಎರಡರಲ್ಲೂ ನಮ್ಮ ಜನಪದರಿಗೆ ಭೂಮಿತಾಯಿಯ ಕುರಿತಾಗಿ ಇರುವ ಭಾವನಾತ್ಮಕ ಸಂಬಂಧ ನೆನೆದರೆ ಮನಸ್ಸು ಆರ್ದ್ರವಾಗುತ್ತದೆ.ಮಾಹಿತಿಪೂರ್ಣ ಲೇಖನಕ್ಕೆ ಧನ್ಯವಾದಗಳು.

  ಪ್ರತಿಕ್ರಿಯೆ
 6. Anonymous

  ಬೆಂಗಳೂರಿನ ಈ ಯಾಂತ್ರಿಕ ಜೀವನದ ನಡುವೆ ನನ್ನ ಬಾಲ್ಯದ ಸಿಹಿ ನೆನಪನ್ನು ಮೆಲಕು ಹಾಕಲು ಅವಕಾಶ ಕೊಟ್ಟ ನಿಮಗೆ ಧನ್ಯವಾಧಗಳು..ನಿಜವಾದ ಅರ್ಥದಲ್ಲಿ ಭೂಮಿ ಹುಣ್ಣಿಮೆ ರೈತರ ಪಾಲಿಗೆ ನಿಜವಾದ ಹಬ್ಬ …

  ಪ್ರತಿಕ್ರಿಯೆ
 7. H S Eswara

  Dear Devaraj,

  You have taken me back in my memory lane about three quarters of a century. Your article makes me very home sick. What a meaningful celebration. I am grateful to you for making me to remember all my loved ones. HS Eswara

  ಪ್ರತಿಕ್ರಿಯೆ
 8. Gayatri Badiger, Dharwad

  ಚಗಟೆ, ಕುನ್ನೇರಲು, ಕೆಸ, ಕೆಂದಾಳ, ಮೀನಿಂಗಿ, ಕೇಸಟ್ಟೆ, ಸಳ್ಳೆ, ಗರ್ಗ, ಗಿಡಾಲೆ ಗರ್ಗ, ಮಳ್ಳಿ, ಮತ್ತಿ, ಮುಕ್ಕುಡುಕ, ಕಲ್ಡಿ, ಕರ್ಜಿ, ಬಾಳೆ, ಹಲಸು ಮಾವು, ಕಬಳೆ, ನೀರಟ್ಟೆ,ಗಂಧ, ನೇರಲು, ಹೈಗ, ಹಾಲುವಾಣ, ಹೊಳೆಲಕ್ಕಿ, ಕಿರಾಲುಭೋಗಿ, ತ್ವಾರಂಗಲು, ಬೋಗಿ, ಕೂಳೆ, ಸದಗ, ಒಂದೆಲಗ, ರತ್ನಗಂಜಿ, ತಗ್ಗಿ, ತುಂಬೆ, ಅರಮರಲು, ಅತ್ತಿ, ನೆಲ್ಲಿ, ಬಲಿಗೆ, ಬಗುನೆ, ಹೀಗೆ ನೂರೊಂದು ಕುಡಿಗಳನ್ನು ಚಿವುಟಿ ಬುಟ್ಟಿ ತುಂಬಿಸಿಕೊಂಡು ಮನೆಯಲ್ಲಿ ಹರಡಿ ಇಡೀ ರಾತ್ರಿ ಎಚ್ಚರಿದ್ದು ಅಡುಗೆ ಮಾಡುವ ಈ ಹಬ್ಬ ಇಡೀ ಪಶ್ಚಿಮ ಘಟ್ಟದ ಸಾವಿರಾರು ಗಿಡಗಂಟಿಗಳ ಪರಿಚಯ ಮಾಡಿಕೊಡುತ್ತದೆ.

  ellavannu nenepisidiri.. thank you,, super sir

  ಪ್ರತಿಕ್ರಿಯೆ
 9. sudha y.m

  ಭೂಮಿ ಹುಣ್ಣಿಮೆ ಹಬ್ಬದ ಸಂಭ್ರಮ ಒಂದು ವಾರದಿಂದ ಪ್ರಾರಂಭವಾಗುತ್ತದೆ. ನಾನು ಇಪ್ಪತ್ತು ವ‍ರ್ಷ ರಾತ್ರಿ ಅಡುಗೆ ಮಾಡಿರುವೆ. ನಮ್ಮೂರಿನ ಹತ್ತಾರು ಮನೆಗಳಿಂದ ತರಕಾರಿ,ಹೂವು, ಹಣ್ನು ಪಡೆಯುತ್ತ ನಾನು ಕೊಡುತ್ತ ಒಂದು ಗೆರಸಿ ತುಂಬ ಎಲ್ಲವನ್ನು ಪೇರಿಸಿ, ನನ್ನ ಮಗ ಊರಿನ ಹುಡುಗರ ಜೊತೆ ಹೋಗಿ ತಂದ ನೂರೊಂದು ಕುಡಿಗಳನ್ನು ಸೇರಿಸಿ ಸೊಪ್ಪು ಸೋಸುವುದೆ ಒಂದು ಖುಷಿ. ವೀಳ್ಯೆದೆಲೆ ಸುಟ್ಟು ಕೊಬ್ಬರಿ ಎಣ್ಣೆ ಹಾಕಿ ಭೂಮಿಗೆ ಕಾಡಿಗೆ ಮಾಡುವುದು, ಐದು ಅಮಟೆಕಾಯಿ ಹಾಕಿ ಬೆರಕೆ ಸೊಪ್ಪಿನ ಪಲ್ಯ,ಹಿರೆಕಾಯಿ ಕೊಟ್ಟೆ ಕಡುಬು ಹೀಗೆ ಹಲವು ಬಗೆ ಅಡುಗೆ ಮಾಡುವುದರಲ್ಲೆ ಬೆಳ್ಳಗಿನ ಜಾವ ಮೂರಾಗುತ್ತದೆ. ನಂತರ ಭೂಮಿ ಪೂಜೆಗೆ ಸಿದ್ದತೆ. ದೇವರಾಜ್ ಅವರ ಬರವಣಿಗೆ ಮನೋಜ್ಞವಾಗಿದೆ. ಮತ್ತೆ ಮತ್ತೆ ಓದಬೇಕೆನಿಸುವ ಲವಲವಿಕೆ ಇದೆ, ಬೆರಕೆ ಸೊಪ್ಪಿನ ಪಲ್ಯ ದೀಪಾವಳಿ ಹಬ್ಬದವರೆಗು ಇಟ್ಟುಕೊಂಡು ತಿನ್ನುತ್ತೇವೆ
  ಸುಧಾ ವೈ. ಎಂ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: