ತುಳು ಭಾಷೆಗೆ ಸಂವಿಧಾನದ ಮಾನ್ಯತೆ ಬೇಕು

ಪುರುಷೋತ್ತಮ ಬಿಳಿಮಲೆ

ಕಾರ್ಯಕ್ರಮ  ನಿರ್ದೇಶಕ

ದೆಹಲಿ ತುಳು ಸಿರಿ

ದ್ರಾವಿಡ ಭಾಷಾ ವರ್ಗದಲ್ಲಿ ತುಳುವಿಗೆ ವಿಶಿಷ್ಟವಾದ ಸ್ಥಾನವಿದೆ. 1856 ರಷ್ಟು ಹಿಂದೆಯೇ ದ್ರಾವಿಡ ಭಾಷೆಗಳ ತೌಲನಿಕ ವ್ಯಾಕರಣವನ್ನು ಬರೆದ ರಾಬರ್ಟ ಕಾಲ್ಡವೆಲ್ನು’ತುಳು ಚೆನ್ನಾಗಿ ಬೆಳವಣಿಗೆ ಹೊಂದಿದಭಾಷೆ’ ಎಂದು ಕೊಂಡಾಡಿದ್ದಾನೆ. ಆಂತಾರಾಷ್ಟ್ರೀಯ ಖ್ಯಾತಿಯ ಭಾಷಾವಿಜ್ಞಾನಿಗಳಾಗ ತಮಿಳಿನ ಡಾ.ಪಿ ಎಸ್ ಸುಬ್ರಮಣ್ಯಂ ಅವರ ಪ್ರಕಾರ ಮೂಲದ್ರಾವಿಡದಿಂದ ಕ್ರಿ. ಶ. ಪೂರ್ವ 8ನೇ ಶತಮಾನದ ಹೊತ್ತಿಗೆ ತುಳು ಸ್ವತಂತ್ರ ಭಾಷೆಯಾಗಿ ಬೆಳೆಯತೊಡಗಿತು.ಈಗ ಈ ಭಾಷೆಗೆ 2500 ವರ್ಷಗಳಿಗೂ ಮಿಗಿಲಾದ ಶ್ರೀಮಂತ ಇತಿಹಾಸವಿದೆ. ಪುರಾತತ್ವ ಶಾಸ್ತ್ರಜ್ಞರು ತುಳುನಾಡಿನ ಜನರ ಇತಿಹಾಸವನ್ನು 25 ಶತಮಾನಗಳಷ್ಟು ಹಿಂದೆ ಕೊಂಡೊಯ್ದಿದ್ದಾರೆ. ಈ ಸುದೀರ್ಘ ಕಾಲಾವಧಿಯಲ್ಲಿ ತುಳುನಾಡಿನ ಗಡಿ ರೇಖೆಗಳು ಆಗಾಗ ಬದಲಾಗಿವೆ. ಐತಿಹಾಸಿಕವಾಗಿ ಅದು ಪಶ್ಚಿಮದಲ್ಲಿ ಅರಬ್ಬೀ ಸಮುದ್ರ, ಪೂರ್ವದಲ್ಲಿ ಪಶ್ಚಿಮ ಘಟ್ಟ, ಉತ್ತರದಲ್ಲಿ ಸೀತಾನದಿ ಮತ್ತು ದಕ್ಷಿಣದಲಿ ್ಲಚಂದ್ರಗಿರಿ ಹೊಳೆಯ ನಡುವಣ ಪ್ರದೇಶವಾಗಿತ್ತು. ಮಂಗಳೂರು ಇದರ ಕೇಂದ್ರ ಸ್ಥಾನ. ಆದರೆ ಪ್ರಸ್ತುತ ತಲಪಾಡಿಯಿಂದ ದಕ್ಷಿಣ ಭಾಗವು ಕಾಸರಗೋಡಾಗಿ ಕೇರಳಕ್ಕೆ ಸೇರಿದೆ. ಉಳಿದ ತುಳುನಾಡು ದಕ್ಷಿಣ ಕನ್ನಡಜಿಲ್ಲೆ ಮತ್ತುಉಡುಪಿ ಜಿಲ್ಲೆಗಳಾಗಿ ಒಡೆದಿದೆ. ಆದರೆ ವಲಸೆಗೆ ಹೆಸರಾದ ತುಳುವರು ಇಂದು ವಿಶ್ವದಾದ್ಯಂತ ಹರಡಿಕೊಂಡಿದ್ದಾರೆ.ಅದರಲ್ಲೂ ಮುಖ್ಯವಾಗಿ ಮುಂಬೈ ಮಹಾನಗರ ಮತ್ತು ದುಬೈ ದೇಶಗಳು ತುಳುವರ ಕರ್ಮ ಭೂಮಿ.
‘ತುಳು’ ಪದದ ಅರ್ಥ ನಿಷ್ಪತ್ತಿ ಈಗ ಖಚಿತಗೊಂಡಿದೆ. ಅದು ‘ಜಲವಾಚಕ’ಎಂದು ಮಹಾಪಂಡಿತರಾದ ಗೋವಿಂದ ಪೈ ಮತ್ತು ಸೇಡಿಯಾಪು ಕೃಷ್ಣಭಟ್ಟರು ಸಾಧಿಸಿ ತೋರಿಸಿದ್ದಾರೆ. ತುಳುನಾಡಿನ ಮಣ್ಣಿನಗುಣ, ಬೀಳುವ ಮಳೆ ಮತ್ತು ಅಲ್ಲಿ ಹರಿಯುವು ನದಿಗಳನ್ನು ನೋಡಿದರೆ ಇದನ್ನು ಅಲ್ಲಗಳೆಯಲಾಗದು

ತುಳುನಾಡಿನ ಕುರಿತು ಟಾಲೆಮಿ ಮಾಡಿದ ಉಲ್ಲೇಖಗಳು, ಗ್ರೀಕ್ ಪ್ರಹಸನದಲ್ಲಿ ಕಂಡು ಬರುವ ತುಳು ಪದಗಳು, ಅಶೋಕನ ಶಾಸನದಲ್ಲಿ ಉಲ್ಲೇಖಿತವಾದ ‘ಸತಿಯ ಪುತ’, ತಮಿಳಿನ ಸಂಗಂ ಸಾಹಿತ್ಯದಲ್ಲಿ ದೊರೆಯುವ ‘ಕೋಶರ್’ ಜನವರ್ಗದ ಉಲ್ಲೇಖ, ಪಾಡ್ದನಗಳಲ್ಲಿ ಹಾಗೂ ತಮಿಳಿನ ಪ್ರಾಚೀನ ಕೃತಿಗಳಲ್ಲಿ ಕಂಡು ಬರುವ ‘ಭೂತಾಳ ಪಾಂಡ್ಯ’ನ ಉಲ್ಲೇಖ, ತುಳುನಾಡಿನಲ್ಲಿ ಯಹೂದಿ ವ್ಯಾಪಾರಿ ಅಬ್ರಹಾಂ ಬೆನ್ 800 ವರ್ಷಗಳ ಹಿಂದೆ ಪಿಸುಗುಟ್ಟಿದ ತುಳು ಪದಗಳು ಇವೆಲ್ಲವುಗಳನ್ನು ಗಮನಿಸಿದರೆ, ತುಳು ಭಾಷೆಯನ್ನಾಡುವ ಜನಸಮುದಾಯವೊಂದು ಕ್ರಿಸ್ತಶಕದ ಹಿಂದು-ಮುಂದಿನ ಕಾಲದಲ್ಲಿ ಇಂದಿನ ಕೇರಳದ ಕಾಸರಗೋಡಿನಿಂದ ಭಟ್ಕಳದ ಸಮೀಪದ ಕಾಸರಕೋಡಿನವರೆಗೆ ಹರಡಿಕೊಂಡಿತ್ತೆಂದು ಭಾವಿಸಬಹುದು.
ತೌಳವ ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳುವವರು ಅಲ್ಲಿನ ವಿಶಿಷ್ಟವಾದ ನಾಗಾರಾಧನೆ, ಭೂತಾರಾಧನೆ ಮತ್ತು ಯಕ್ಷಗಾನಗಳ ಬಗ್ಗೆ ಗಮನ ಹರಿಸುತ್ತಾರೆ.ಇಲ್ಲಿನ ಜನ ನಾಗನ ಭಕ್ತರು, ಇಲ್ಲಿ ಬಗೆ ಬಗೆಯ ಭೂತಗಳಿವೆ. ಈ ದೈವಗಳ ಹುಟ್ಟು, ಸಾಧನೆ ಮತ್ತು ಸಾವಿಗೆ ಸಂಬಂಧಿಸಿದ ಕಥನಗಳನ್ನು ಪಾಡ್ದನಗಳೆಂದು ಕರೆಯತ್ತಾರೆ. ಪಾಡ್ದನಗಳು ತುಳುವಿನ ಅತ್ಯಂತ ಶ್ರೀಮಂತವಾದ ಮೌಖಿಕ ನಿರೂಪಣೆಗಳು. ಪ್ರಖ್ಯಾತವಾದ ಸಿರಿ ಪಾಡ್ದನಕ್ಕೆ ಇದೀಗ ವಿಶ್ವ ಮನ್ನಣೆ ದೊರಕಿದೆ. ತುಳುವರು ಯಕ್ಷಗಾನದ ಮೂಲಕ ಭಾರತೀಯ ಪುರಾಣಗಳನ್ನು ಪುನಾರಚಿಸಿಕೊಂಡಿದ್ದಾರೆ. ಈ ಪ್ರಕ್ರಿಯೆಯಲ್ಲಿ ಪುರಾಣದ ಖಳನಾಯಕರೆಲ್ಲ ನಾಯಕರಾಗಿ ಮಾರ್ಪಟ್ಟಿದ್ದಾರೆ. ತುಳುನಾಡಿಗೆ ಮಾತ್ರ ಸೀಮಿತವಾಗಿರುವ ಕಂಬುಳ, ಆಟಿ ಕಳೆಂಜ, ಕಂಗಿಲು, ಸಿದ್ಧವೇಶ ಇತ್ಯಾದಿಗಳು ತುಳು ಸಂಸ್ಕೃತಿಯ ಅನನ್ಯತೆಗೆ ಸಾಕ್ಷಿ. ಮಾತೃ ಪ್ರಧಾನ ಕುಟುಂಬ ವ್ಯವಸ್ಥೆ ಇನ್ನೂ ಚಾಲ್ತಿಯಲ್ಲರುವ ಪ್ರದೇಶವಿದು. ತುಳುನಾಡಿನ ಅನೇಕ ಸ್ಥಳ ನಾಮಗಳು ಮೂಲದ್ರಾವಿಡದಲ್ಲಿ ಮಾತ್ರ ಸಿಗುತ್ತವೆ. ಸ್ವತಂತ್ರ ತುಳು ಲಿಪಿಯನ್ನು ಶಾಲೆಗಳಲ್ಲಿ ಕಲಿಸುವ ಪ್ರಯತ್ನವೂ ಇದೀಗ ನಡೆಯುತ್ತಿದೆ.

ತುಳುನಾಡನ್ನಾಳಿದ ಅಳುಪರು, ಬಂಗರು, ಅಜಿಲರು, ಸಾವಂತರು, ಮತ್ತು ಭೈರರಸರು ಅಲ್ಲಿನ ವರ್ಣರಂಜಿತ ಇತಿಹಾಸಕ್ಕೆ ಕಾರಣರಾದವರು. ಬಸರೂರಿನ ತುಳುವ ವೀರರು ವಿಜಯನಗರದವರೆಗೆ ಹೋಗಿ ಅಲ್ಲೇ ನೆಲೆ ನಿಂತು, ನಿಧಾನವಾಗಿ ‘ತುಳುವ ವಂಶ’ವನ್ನು ಸ್ಥಾಪಿಸಿ, ಅಲ್ಲಿ ಮೆರೆದದ್ದುಂಟು. ‘ಕನರ್ಾಟಕ ರಾಜ್ಯರಮಾರಮಣ’ ನಾದ ಶ್ರೀ ಕೃಷ್ಣದೇವರಾಯನು ತುಳುವ ವಂಶದವನಾಗಿದ್ದ. ಕಾರ್ಕಳದ ಭೈರರಸರು ಮತ್ತು ವೇಣೂರಿನ ಅಜಿಲರು ಕೆತ್ತಿಸಿದ ಎರಡು ಏಕಶಿಲಾ ಗೊಮ್ಮಟ ಮೂತರ್ಿಗಳು ತುಳುನಾಡಿನ ಇತಿಹಾಸದ ಮೈಲಿಗಲ್ಲುಗಳು. ರಾಣಿ ಅಬ್ಬಕ್ಕಳು ಪೋಚರ್ುಗೀಸರ ಆಕ್ರಮಣದ ವಿರುದ್ಧ ಹೋರಾಡಿದ ದಿಟ್ಟ ಮಹಿಳೆ. ಟಿಪ್ಪೂವಿನ ಮರಣಾನಂತರ (1799) ಬ್ರಿಟಿಷರ ಆಳ್ವಿಕೆಗೆ ಒಳಪಟ್ಟ ತುಳುನಾಡು ಆಧುನಿಕತೆಗೆ ವೇಗವಾಗಿ ಒಳಗಾದ ಪ್ರದೇಶಗಳಲ್ಲೊಂದು. ಕಾರಣ ತುಳು ಜನರು ಉದ್ಯಮಶೀಲತೆ ಮತ್ತು ವ್ಯವಹಾರ ನೈಪುಣ್ಯತೆಗೆ ಹೆಸರಾದರು ಹೀಗಿದ್ದರೂ ತುಳುವರು ತಮ್ಮಭಾಷೆಯನ್ನು ಮಾತ್ರ ಮರೆಯಲಿಲ್ಲ. ಕಾರಣ ತುಳು ನಶಿಸುತ್ತಿರುವ ಭಾಷೆಗಳ ಸಾಲಲ್ಲಿ ಇಲ್ಲ. ಅದು ಒಂದು ಜೀವಂತ ಭಾಷೆಯಾದ್ದರಿಂದ ಅದರಲ್ಲಿ ಅನೇಕ ಪ್ರಾದೇಶಿಕ ಮತ್ತು ಸಾಮಾಜಿಕ ಪ್ರಬೇಧಗಳು ಕಾಣಿಸಿಕೊಳ್ಳುತ್ತಿವೆ.
ಇವತ್ತು ತುಳು ಬಾಷೆಯಲ್ಲಿ ನೂರಾರು ಪುಸ್ತಕಗಳು ಪ್ರಕಟವಾಗುತ್ತಿವೆ. ಮಂದಾರ ರಾಮಾಯಣದಂತಹ ತುಳು ಮಹಾಕಾವ್ಯಕ್ಕೆಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿದೆ.ಮಂಗಳೂರು ವಿಶ್ವವಿದ್ಯಾಲಯದಲ್ಲಿ ತುಳು ಪೀಠವೊಂದು ಕಾರ್ಯನಿರ್ವಹಿಸುತ್ತಿದೆ. ಅಲ್ಲಿನ ಕನ್ನಡ ವಿಭಾಗದ ವಿದ್ಯಾಥರ್ಿಗಳು ತುಳುವನ್ನು ಒಂದು ವಿಷಯವಾಗಿ ಆಯ್ದುಕೊಂಡು ಅಭ್ಯಾಸ ಮಾಡುತ್ತಿದ್ದಾರೆ.ಎಂ.ಫಿಲ್ ಮತ್ತು ಪಿಎಚ್.ಡಿ ಪದವಿಗಳಿಗಾಗಿ ತುಳು ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಗಂಭೀರವಾದ ಅಧ್ಯಯನಗಳು ನಡೆಯುತ್ತಿವೆ. ಮಂಗಳೂರಿನ ಬಾಸೆಲ್ ಮಿಶನ್ ತನ್ನ ತುಳು ಮೋಹವನ್ನುಇಂದಿಗೂ ಬಿಟ್ಟುಕೊಟ್ಟಿಲ್ಲ. ಕಣ್ಣೂರು, ಕಲ್ಲಿಕೋಟೆ, ಚೆನ್ನೈ, ಅಣ್ಣಾಮಲೈ, ಮಧುರೈ, ಕುಪ್ಪಂ, ಒಸ್ಮಾನಿಯಾ, ಹೈದರಾಬಾದ್, ಮತ್ತು ಮುಂಬೈಗಳಲ್ಲಿ ತುಳುವಿನ ಕುರಿತಾದ ಸಂಶೋಧನೆಗಳು ನಿರಂತರವಾಗಿ ನಡೆಯುತ್ತಿವೆ. ಜರ್ಮನಿಯ ಟ್ಯೂಬಿಂಜನ್ ವಿವಿ ಮತ್ತು ಫಿನ್ಲೆಂಡಿನ ತುಕರ್ು ವಿವಿಗಳಲ್ಲಿ ತುಳುವಿನ ಕುರಿತಾದ ಸಂಶೋಧನೆಗಳಿಗೆ ಅವಕಾಶವಿದೆ. ಟೋಫೆಲ್ ಪರೀಕ್ಷೆಗಾಗಿ ಪಟ್ಟಿಮಾಡಿದ ಜಗತ್ತಿನ 133 ಭಾಷೆಗಳಲ್ಲಿ ಭಾರತದ 17 ಭಾಷೆಗಳು ಸೇರ್ಪಡೆಗೊಂಡಿದ್ದು ಅದರಲ್ಲಿ ತುಳುವೂ ಒಂದು. ಮಂಗಳೂರು ಆಕಾಶವಾಣಿಯು ತುಳು ವಾತರ್ೆಯ ಜೊತೆಗೆ ಅನೇಕ ಜನಪ್ರಿಯ ಕಾರ್ಯಕ್ರಮಗಳನ್ನು 1976ರಿಂದಲೂ ಪ್ರಸಾರ ಮಾಡುತ್ತಿದೆ. ಬೆಂಗಳೂರಿನ ದೂರದರ್ಶನ ಕೇಂದ್ರವು ತುಳು ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುತ್ತಿದೆ. 1994 ರಲ್ಲಿ ಸ್ಥಾಪಿತಗೊಂಡ ತುಳು ಸಾಹಿತ್ಯ ಅಕಾಡೆಮಿಯು ನೂರಾರು ಉಪಯುಕ್ತ ಕಾರ್ಯಕ್ರಮಗಳನ್ನು ನಡೆಸುತ್ತಲೇ ಬಂದಿದೆ.ತುಳು ಚಲನಚಿತ್ರಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿವೆ. ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರವು ಹೊರತಂದ ತುಳು ನಿಘಂಟುವಿಗೆಅಂತಾರಾಷ್ಟ್ರೀಯ ಮನ್ನಣೆ ಪ್ರಾಪ್ತಿಸಿದೆ. ಹೀಗೆ ತುಳುವಿನ ಹಿರಿಮೆ ಬಹಳ ದೊಡ್ಡದು.
ಸಂವಿಧಾನದ ಮಾನ್ಯತೆ
ಹೀಗಿದ್ದರೂ ಭಾರತೀಯ ಸಂವಿಧಾನವು ತುಳು ಭಾಷೆಯನ್ನು ಮಾನ್ಯ ಮಾಡಿಲ್ಲ. ಅದರಎಂಟನೇ ಪರಿಚ್ಛೇದಕ್ಕೆ ತುಳು ಇನ್ನೂ ಸೇರಿಲ್ಲ. ಅದಕ್ಕೆ ಕಾರಣಗಳು ಹಲವು. ಭಾಷೆಯೊಂದು ನಿದರ್ಿಷ್ಟ ರಾಜ್ಯದ ಅಧಿಕೃತವಾದ ಭಾಷೆಯೆಂದು ಘೋಷಿಸಲ್ಪಟ್ಟಾಗಅದು ಸಹಜವಾಗಿಎಂಟನೇ ಪರಿಚ್ಛೇದಕ್ಕೆ ಸೇರುತ್ತದೆ. ಕಾರಣ 1950 ರಲ್ಲಿಸಂವಿಧಾನ ಅಸ್ತಿತ್ವಕ್ಕೆ ಬಂದಾಗಅಸ್ಸಾಮಿ, ಬಾಂಗ್ಲಾ, ಗುಜರಾಥಿ, ಹಿಂದಿ, ಕನ್ನಡ, ಕಾಶ್ಮೀರಿ, ಮಲೆಯಾಳಂ, ಒರಿಯಾ, ಮರಾಠಿ, ಪಂಜಾಬಿ, ಸಂಸ್ಕೃತ, ಉದರ್ು, ತೆಲುಗು ಮತ್ತು ತಮಿಳು ಭಾಷೆಗಳನ್ನು ಅಧಿಕೃತ ಭಾಷೆಗಳಾಗಿ ಸಂವಿಧಾನ ಮಾನ್ಯಮಾಡಿತು, ಮುಂದೆ 1967ರಲ್ಲಿ ಸಿಂಧಿ, 1992ರಲ್ಲಿ ಕೊಂಕಣಿ, ಮಣಿಪುರಿ, ಮತ್ತು ನೇಪಾಲಿ ಭಾಷೆಗಳನ್ನು ಸೇರಿಸಲಾಯಿತು.ಆದರೆ 2003ರಲ್ಲಿ ಶ್ರೀ ಅಟಲ್ ಬಿಹಾರಿ ವಾಜಪೇಯಿ, ಎಲ್. ಕೆ ಆಧ್ವಾನಿ, ಮತ್ತು ಡಾ.ಕರಣ್ ಸಿಂಗ್ ಅವರು ಸಂವಿಧಾನದಲ್ಲಿ ಬದಲಾವಣೆ ಮಾಡಿ, ಯಾವುದೇ ರಾಜ್ಯದ ಆಧಿಕೃತ ಭಾಷೆಗಳಲ್ಲದ ಬೋಡೋ, ಡೋಗ್ರಿ, ಸಂತಾಲಿ ಮತ್ತು ಮೈಥಿಲಿ ಭಾಷೆಗಳನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಿದರು.ಇದೀಗ ಉತ್ತರ ಭಾರತದ 18 ಭಾಷೆಗಳೂ, ದಕ್ಷಿಣ ಭಾರತದ ಕೇವಲ 4 ಭಾಷೆಗಳೂ ಭಾರತದ ಅಧಿಕೃತ ಭಾಷಾ ಸಮಿತಿಯಅಂಗೀಕಾರ ಪಡೆದಿವೆ. ಈ ಪ್ರಾದೇಶಿಕ ಅಸಮಾನತೆಯು ಅಪಾಯಕಾರಿಯಾದುದು.
ಈಗ ತುಳುವಿನ ಮುಂದೆ ಕೆಲವು ಸವಾಲುಗಳಿವೆ. ಅದನ್ನು ಕನರ್ಾಟಕ ರಾಜ್ಯವು ತನ್ನ ಅಧಿಕೃತ ಭಾಷೆಯೆಂದು ಇದುವರೆಗೂ ಘೋಷಿಸಿಲ್ಲ. ಆಂಧ್ರ ಪ್ರದೇಶವು ತೆಲುಗುವಿನ ಜೊತೆಗೆ ಉದರ್ುವನ್ನು, ಬಿಹಾರವು ಬಿಹಾರಿ ಭಾಷೆಯ ಜೊತೆಗೆ ಬಾಂಗ್ಲಾವನ್ನು , ಪಶ್ಚಿಮ ಬಂಗಾಳವು ಬಾಂಗ್ಲಾ ಜೊತೆಗೆ ಉದರ್ು, ಪಂಜಾಬಿ, ನೇಪಾಲಿ, ಒರಿಯಾ ಮತ್ತು ಹಿಂದಿಯನ್ನು, ದೆಹಲಿ ಸರಕಾರವು ಹಿಂದಿಯ ಜೊತೆಗೆ ಪಂಜಾಬಿ ಮತ್ತು ಉದರ್ುವನ್ನು ಅಧಿಕೃತ ಭಾಷೆಗಳೆಂದು ಘೋಷಿಸಿದ ಹಾಗೆ ಕನರ್ಾಟಕವು ತುಳುವನ್ನು ಅಧಿಕೃತ ಭಾಷೆಯೆಂದು ಮಾನ್ಯ ಮಾಡಿರದೇ ಇರುವುದರಿಂದ ಕೇಂದ್ರ ಸರಕಾರಕ್ಕೆ ಸುಲಭವಾಗಿ ನುಣುಚಿಕೊಳ್ಳಲು ಸಾಧ್ಯವಾಗಿದೆ.
ಈ ನಡುವೆ ಭಾಷೆಯಕುರಿತು ಹೆಚ್ಚು ತಿಳುವಳಿಕೆ ಮೂಡುತ್ತಿದ್ದಂತೆ 8ನೇ ಪರಿಚ್ಛೇದಕ್ಕೆ ಭಾಷೆಗಳ ಸೇರ್ಪಡೆ ಕುರಿತು ದೇಶದಾದ್ಯಂತದಿಂದ ಹೆಚ್ಚುತ್ತಿರುವ ಒತ್ತಡವನ್ನು ಗಮನಿಸಿ ವಾಜಪೇಯಿ ನೇತೃತ್ವದ ಸರಕಾರವು ‘ಒಂದು ಭಾಷೆಯನ್ನು ಸಂವಿಧಾನಕ್ಕೆ ಸೇರಿಸಲು ಬೇಕಾದ ನಿಯಮಾವಳಿಗಳನ್ನು ರೂಪಿಸಲು ಮತ್ತು ಅಂಥ ಭಾಷೆಗಳ ಪಟ್ಟಿ ಮಾಡಲು’ 2003 ರಲ್ಲಿ ಒರಿಯಾದ ಖ್ಯಾತ ಬರೆಹಗಾರ ಸಿತಾಕಾಂತ ಮಹಾಪಾತ್ರ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತು. ಈ ಸಮಿತಿಯು 2004 ರಲ್ಲಿ ನೀಡಿದ ವರದಿಯು ನಮಗೆ ಲಭ್ಯವಿಲ್ಲವಾದರೂ ಸಮಿತಿಯು ತುಳು ಕೂಡಾ ಸೇರಿದಂತೆ ಒಟ್ಟು 38 ಭಾಷೆಗಳ ಪಟ್ಟಿಯನ್ನು ಸರಕಾರಕ್ಕೆ ಒಪ್ಪಿಸಿದೆ ಎಂದು ತಿಳಿದು ಬಂದಿದೆ, ಮಾತ್ರವಲ್ಲ ಎಂಟನೇ ಪರಿಚ್ಛೇದಕ್ಕೆ ಸೇರಿದ ಭಾಷೆಗಳಲ್ಲಿ ಕೇಂದ್ರ ಲೋಕ ಸೇವಾ ಆಯೋಗವು ಪರೀಕ್ಷಗಳನ್ನು ನಡೆಸುವುದಕ್ಕೆ ವಿನಾಯತಿ ನೀಡಬೇಕೆಂದೂ, ರಿಸರ್ವ ಬ್ಯಾಂಕು ನೋಟುಗಳಲ್ಲಿ ಪಟ್ಟಿಯಲ್ಲಿದ್ದ ಎಲ್ಲ ಭಾಷೆಗಳ ಹೆಸರನ್ನು ಮುದ್ರಿಸಬೇಕಿಲ್ಲವೆಂದೂ, ಆದರೆ ಕೇಂದ್ರ ಸರಕಾರದ ಇತರ ಎಲ್ಲ ಅನುದಾನಗಳಿಗೆ ಅವು ಅರ್ಹವಾಗಿರುತ್ತವೆ’ ಎಂದೂ ಅದು ಹೇಳಿದೆ. ಈ ಹಿನ್ನೆಲೆಯಲ್ಲಿ ಭೋಜಪುರಿ ಮತ್ತು ರಾಜಸ್ಥಾನಿ ಭಾಷೆಗಳು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಲು ಈಗ ಸಜ್ಜಾಗಿವೆ. ಈ ಭಾಷೆಗಳೊಂದಿಗೆ ತುಳು ಅಗತ್ಯ ಸೇರಿಕೊಳ್ಳಬೇಕು.
ಈ ಪ್ರಯತ್ನಕ್ಕೆ ಪೂರಕವಾಗಿ 2013ರ ಫೆಬ್ರವರಿ 24 ರಂದು ದೆಹಲಿಯಲ್ಲಿ ಬೃಹತ್ ‘ದೆಹಲಿ ತುಳು ಸಿರಿ ಸಮಾವೇಶ’ವನ್ನು ಆಯೋಜಿಸಲಾಗಿದೆ.ತುಳು ಭಾಷೆಯನ್ನು ಸಂವಿಧಾನದಎಂಟನೇ ಪರಿಚ್ಛೇದಕ್ಕೆ ಸೇರಿಸಲು ಒತ್ತಡ ಹೇರುವುದು ಸಮಾವೇಶದ ಗುರಿ.
ಈ ಬೃಹತ್ ಸಮಾವೇಶದ ಉದ್ಘಾಟನೆಯನ್ನು ಕೇಂದ್ರ ಸಚಿವರಾದ ಶ್ರೀ ಎಂ. ವೀರಪ್ಪ ಮೊಯಿಲಿಯವರು ಮಾಡಲಿದ್ದಾರೆ. ಆಂತಾರಾಷ್ಟ್ರೀಯ ಖ್ಯಾತಿಯ ತುಳು ವಿದ್ವಾಂಸರಾದ ಡಾ. ಬಿ ಎ. ವಿವೇಕ ರೈ ಅವರು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ರಾಜ್ಯ ಸಭಾ ಸದಸ್ಯರಾದ ಶ್ರೀ ಆಸ್ಕರ್ ಫೆನರ್ಾಂಡಿಸ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ. ಕೇಂದ್ರ ಸಚಿವರುಗಳಾದ ಶ್ರೀ ಮಲ್ಲಿಖಾಜರ್ುನ ಖಗರ್ೆ, ಶ್ರೀ ಕೆ ರಹಮಾನ್ ಖಾನ್ ಮತ್ತು ಶ್ರೀ ಕೆ ಎಚ್ ಮುನಿಯಪ್ಪ , ಕನರ್ಾಟಕದ ಮಾಜಿ ಮುಖ್ಯಮಂತ್ರಿಗಳಾದ ಡಿ ವಿ ಸದಾನಂದ ಗೌಡ, ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ನಮ್ಮ ಬೇಡಿಕೆಗೆ ಬೆಂಬಲ ಸೂಚಿಸಲಿದ್ದಾರೆ. ಮಹಾರಾಷ್ಟ್ರ ಸರಕಾರದ ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಸುರೇಶ್ ಶೆಟ್ಟಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಸುರೇಂದ್ರ ಕುಮಾರ, ಮೂಡಬಿದಿರೆಯ ಸಾಂಸ್ಕೃತಿಕ ಸಂಘಟಕ ಶ್ರೀ ಮೋಹನ ಆಳ್ವ, ಸಂಸದರಾದ ಶ್ರೀ ಜಯಪ್ರಕಾಶ ಹೆಗ್ದೆ ಮತ್ತು ನಳಿನ ಕುಮಾರ ಕಟೀಲು ಅವರು ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದಾರೆ. ಕನರ್ಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಉಮಾನಾಥ ಕೋಟ್ಯಾನ್ ಸರಕಾರಕ್ಕೆ ಸಲ್ಲಿಸಲಿರುವ ಮನವಿಯ ಕುರಿತು ಬೆಳಕು ಚೆಲ್ಲಲಿದ್ದಾರೆ. ಕಾರ್ಯಕ್ರಮದಲ್ಲಿ ಮನವಿಯನ್ನು ಕೇಂದ್ರ ಸರಕಾರಕ್ಕೆ ಒಪ್ಪಿಸಲಾಗುವುದು, ಕನರ್ಾಟಕ ಎಲ್ಲ ಸಂಸದರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.
ಇದೇ ಸಂದರ್ಭದಲ್ಲಿ ಡಾ. ನಿತ್ಯಾನಂದ ಶೆಟ್ಟಿ ಮತ್ತು ಡಾ. ನರೇಂದ್ರ ರೈ ದೇರ್ಲ ಅವರಿಂದ ತುಳು ಭಾಷೆ ಮತ್ತು ಸಂಸ್ಕೃತಿಯ ಕುರಿತು ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಲಾಗಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು:
ಈ ಸಂದರ್ಭದಲ್ಲಿ ತುಳು ಸಂಸ್ಕೃತಿಯನ್ನು ಮನವರಿಕೆ ಮಾಡಿಕೊಡುವ ಕೆಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ತುಳು ಚಲನಚಿತ್ರ ಕಲಾವಿದರಿಂದ ಚಿತ್ರ ಲಹರಿ, ಖ್ಯಾತ ಹಾಡುಗಾರ ಶಶಿಧರ ಕೋಟೆ ಅವರಿಂದ ಸುಗಮ ಸಂಗೀತ, ಮೂಲ್ಕಿಯ ಚಂದ್ರಹಾಸ ಸುವರ್ಣ ನಿದರ್ೇಶನದ ‘ತುಳು ನಾಡ ವೈಭವ’ ದೃಶ್ಯ ರೂಪಕ ಮತ್ತು ಮಂಗಳೂರಿನ ಯಕ್ಷಮಂಜೂಷ ತಂಡದಿಂದ ತುಳು ಯಕ್ಷಗಾನ ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳಾಗಿವೆ.
ಸಮಾವೇಶದ ಪೂರ್ಣ ವಿವರ ನೀಡುವ ಕರೆಯೋಲೆಯನ್ನು ಜೊತೆಗಿರಿಸಲಾಗಿದೆ.

‍ಲೇಖಕರು avadhi

February 16, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

 1. K.V.Tirumalesh

  ಶ್ರೀ ಬಿಳಿಮಲೆಯವರು ತುಳು ಭಾ‍ಷೆಗೆ ಸಂವಿಧಾನದ ಮಾನ್ಯತೆ ಬೇಕೆಂದು ನೀಡಿರುವ ಕರೆಗೆ ನನ್ನ ಸಂಪೂರ್ಣ ಬೆಂಬಲವಿದೆ. ತುಳು ಒಂದು ಜೀವಂತ ಭಾ‍ಷೆ, ಅದು ತಲೆಯೆತ್ತಿ ಬೆಳೆಯಬೇಕು.
  ಕೆ.ವಿ.ತಿರುಮಲೇಶ್

  ಪ್ರತಿಕ್ರಿಯೆ
 2. Vaidehi

  bilimaleyavaru neediruva ‘tulu bhaashege samvidhaanada maanyate’karege naanu danigoodisutiddene. idondu aagale bekaada kaarya. tulu ondu sampoorna bhashe embudaralli sandehave illa. jotege idondu tannade vishishtate mereva ‘porlu’ bhaashe.
  Vaidehi

  ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ P, BilimaleCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: