ತೇಜಸ್ವಿಯನ್ನರಸಿ…

ತೇಜಸ್ವಿ

ಮಾಕೋನಹಳ್ಳಿ ವಿನಯ ಮಾಧವ

ತಿರುಗಾಟ

ನನಗನ್ನಿಸುತ್ತೆ, ಎಲ್ಲಾ ಜೀವಂತ ವಸ್ತುಗಳಂತೆ, ಭಾಷೆಗೂ ಸಾವಿದೆ. ಇದಕ್ಕೆ ಕನ್ನಡ ಕೂಡ ಹೊರತಲ್ಲ. ಎಂದೋ ಒಂದು ದಿನ ಅದು ಸಂಸ್ಕೃತದಂತೆ ಸಾಯುತ್ತೆ. ಇದನ್ನೆನೂ ನಾನು ಉಳಿಸಿಕೊಳ್ಳುತ್ತೇನೆ ಅನ್ನೋ ಭ್ರಮೆಯಲಿಲ್ಲ. ಆದರೆ ನಾನು ಸಾಯುವಾಗ ಕನ್ನಡವನ್ನು ಉಳಿಸಕೊಳ್ಳಬಹುದಿತ್ತೇನೋ ಎಂಬ ಪಾಪ ಪ್ರಜ್ಞೆ ಕಾಡುತ್ತದೆ. ಆ ಪಾಪ ಪ್ರಜ್ಞೆಯನ್ನು ಉತ್ತರಿಸಲು ಈ ಕಸರತ್ತು. ನೀನೊಂದು ಕೆಲಸ ಮಾಡು. ಚಂದ್ರಶೇಖರ ಕಂಬಾರರ ನಂಬರ್ ಇದೆಯಲ್ಲ, ಬೆಂಗಳೂರಿಗೆ ಹೋದಾಗ ಅವರನ್ನು ಭೇಟಿ ಮಾಡು. ನೀವೆಲ್ಲಾ ಜರ್ನಲಿಸ್ಟ್ ಗಳು ಸೇರಿ ಆ ರಾಜೀವ್ ಚಾವ್ಲಾ ತಲೆಗೆ ಸ್ವಲ್ಪ ಬುದ್ದಿ ತುಂಬಿ. ಕನ್ನಡ ಸಾಫ್ಟ್ ವೇರ್, ಮೈಕ್ರೋಸಾಫ್ಟ್ ಕೈಯಲ್ಲಿ ಕೊಟ್ಟು ಇನ್ನೊಂದು ಗುಲಾಮಗಿರಿಗೆ ಬೀಳೋದು ಬೇಡ. . . ಇದಕ್ಕೇನು ಹೇಳುವುದು ? ಕೋಲೆ ಬಸವನಂತೆ ತಲೆ ಅಲ್ಲಾಡಿಸುತ್ತಾ ಕತ್ತಲಲ್ಲಿ, ತೇಜಸ್ವಿಯವರ ತೋಟದ ಗೇಟಿನ ಹೊರಗೆ ನಿಲ್ಲಿಸಿದ್ದ ಕಾರಿನತ್ತ ಕಾಲು ಹಾಕಿದೆ. ಈ ತೇಜಸ್ವಿಯೇ ಹಾಗೆ. ಪ್ರತೀ ಭಾರಿ ಭೇಟಿಯಾದಾಗೊಂದು ವಿತಂಡವಾದ ಮುಂದಿಡುತ್ತಿದ್ದರು. ಸಾಯೋ ಭಾಷೆ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ಳಬೇಕು ಅಂತ ಒಮ್ಮೆ ಯೋಚಿಸಿದೆ. ನಾನೇ ನಕ್ಕು ಸುಮ್ಮನಾದೆ. ಪ್ರತೀ ಭೇಟಿಯಲ್ಲಿ ನೆನಪಿಡೋ ಅಂತದ್ದೇನಾದ್ರು ನಡೆತಿತ್ತು. ಮೊದಲ ಭಾರಿ ಭೇಟಿಯಾದಾಗಲೂ ಅಷ್ಟೇ. ಕೆಂಜಿಗೆ ಪ್ರದೀಪ್ ಜೊತೆ, ಭದ್ರಾ ಅಭಯಾರಣ್ಯದಲ್ಲಿ ಬಿದ್ದ ಬೆಂಕಿಯ ವಿಷಯ ಚರ್ಚಿಸಲು ಹೋಗಿದ್ದೆ. ಪೂರ್ವಾಒರ ವಿಚಾರಿಸಿಯೇ ಮನೆಯೊಳಗೆ ಬಿಟ್ಟಿದ್ದರು ತೇಜಸ್ವಿ. ಅರಣ್ಯಾಧಿಕಾರಿಗಳು ಬರೀ ನೂರಿನ್ನೂರು ಎಕರೆ ಸುಟ್ಟಿದೆ ಎಂದು ಹೇಳಿದ್ದರು. ನಾನು ಹೋಗಿ ನೋಡಿದಾಗ ಅದರ ಹತ್ತು ಪಟ್ಟು ಹೆಚ್ಚು ಕಾಡು ನಾಶವಾಗಿತ್ತು. ವಿಷಯ ತಿಳಿಯುತ್ತಲೇ ತೇಜಸ್ವಿ ಕೆರಳಿದರು. “ ರೀ ಪ್ರದೀಪ್, ನಾಳೆ ಬೆಳಿಗ್ಗೆ ನಾವು ಮೂರು ಜನ ಅಲ್ಲಿಗೆ ಹೋಗೋಣ, ಇವನೇನಾದರೂ ಹೇಳಿದ್ದು ಸತ್ಯವಾದರೆ, ಆ ಫಾರೆಸ್ಟ್ ಆಫೀಸರ್ ಗಳಿಗೆ ಚಪ್ಪಲಿ ಬಿಚ್ಚಿ ಹೊಡಿಯೋಣ”. ಅವಕ್ಕಾಗಿ ಪ್ರದೀಪ್ ಮುಖ ನೋಡಿದೆ. ಏನು ಬದಲಾವಣೆ ಇರಲಿಲ್ಲ. ಸಧ್ಯ, ಆ ನಾಳೆಯೂ ಬರಲಿಲ್ಲ. ಸಾಹಿತಿಗಳನ್ನೇ ಸೃಷ್ಟಿಸದ ಮೂಡಿಗೆರೆ ಎಂಬ ಮರುಭೂಮಿಗೆ ಶಿವಮೊಗ್ಗ ಜಿಲ್ಲೆಯಿಂದ ಕಾಣಿಕೆಯಾಗಿ ಬಂದ ಓಯಸಿಸ್ಸ್ ತೇಜಸ್ವಿ. ಅವರನ್ನು ಬೆರಗಾಗಿ ನೋಡಿದವರೇ ಹೆಚ್ಚು ಅವರ ಒಡನಾಟಕ್ಕಾಗಿ ಹಾತೊರೆದರು. ಬಾಪೂ ದಿನೇಶ್, ಕೆಂಜಿಗೆ ಪ್ರದೀಪ್, ನಂದೀಪುರ ಚರಣ್ ರಂತಹ ಕೆಲವೇ ಜನರನ್ನು ಬಿಟ್ಟರೆ, ಅದು ಹೆಚ್ಚು ಜನಕ್ಕೆ ಸಿದ್ದಿಸಲಿಲ್ಲ. ಅವರ ಸ್ನೇಹಗಳಿಸುವ ರೀತಿ ‘ ಚಿದಂಬರ ರಹಸ್ಯವಾಗೇ, ಉಳಿದಿತ್ತು. ತೇಜಸ್ವಿಯ ಕಥೆಗಳಂತೆ ಮೂಡಿಗೆರಯಲ್ಲಿ ತೇಜಸ್ವಿಯ ಮೇಲೆ ದಂತ ಕಥೆಗಳೂ ಬಹಳಷ್ಟಿವೆ. ಅವರ ಒಡನಾಟ ಬಯಸಿದವರು ಪಟ್ಟ ಪಾಡು, ಅವರಿಗೆ ಸಲಹೆ ಕೊಟ್ಟವರು ಪಟ್ಟ ಪಾಡುಗಳಂತೂ, ಅವರ ಕತೆಗಳಷ್ಟೇ ರಂಜನೀಯ. ಅದರಲ್ಲಿ ನಿಜವೆಷ್ಟು ಸುಳೆಷ್ಟು ಬಲ್ಲವರಾರು? ತೇಜಸ್ವಿಯನ್ನು ಒಲಿಸಿಕೊಳ್ಳಲು ಯುವಕನೊಬ್ಬ ಫೋಟೋಗ್ರಫಿ ಕಲಿಯುವ ಅಭಿಲಾಷೆ ವ್ಯಕ್ತಪಡಿಸಿದ. “ ನಾಳೆ ಬೆಳಿಗ್ಗೆ ಮನೆ ಹತ್ತಿರ ಬಾ” ಎಂದು ಸ್ಕೂಟರನ್ನೇರಿ ಹೊರಟೇ ಬಿಟ್ಟರು. ಪಟ್ಟು ಬಿಡದ ಹುಡುಗ ನನ್ನ ಯಶಿಕಾ ಕ್ಯಾಮರಾದೊಂದಿಗೆ ಬೆಳಿಗ್ಗೆ 9.30ಕ್ಕೆ ತೇಜಸ್ವಿ ಮನೆಯ ಹತ್ತಿರ ಹಾಜರಾದ. ಅಷ್ಟರಲ್ಲೇ ತೇಜಸ್ವಿ ತೋಟದ ದಾರಿ ಹಿಡಿದಾಗಿತ್ತು. ಬೆಂಬಿಡದ ಹುಡುಗ ತೇಜಸ್ವಿಯವರನ್ನು ಕೆರೆಯ ಹತ್ತಿರ ಹಿಡಿದ. ಹುಡುಗನ ಮುಖವನ್ನೊಮ್ಮೆ ನೋಡಿದ ತೇಜಸ್ವಿ, ನಮ್ಮ ಪಾಡಿಗೆ ಗಾಳದಲ್ಲಿ ಮೀನು ಹಿಡಿಯುತ್ತಾ, ಯಾವುದೋ ಹಕ್ಕಿಗಳನ್ನು ಹುಡುಕುತ್ತಾ ಕುಳಿತರು. ಮಧ್ಯಾಹ್ನದ ಹೊತ್ತಿಗೆ ಕೆರೆ ಬಿಟ್ಟು ಪಕ್ಕದ ತೋಟದ ಕಡೆಯಿಂದ ಕಾಡಿಗೆ ಹೊರಟರು. ಸಾಯಂಕಾಲದ ವರೆಗೂ ಈ ಸುತ್ತಾಟ ಮುಂದುವರೆಯಿತು. ಮನೆಗೆ ವಾಪಸ್ ಬಂದ ತೇಜಸ್ವಿ “ ನಾಳೆ ಸಿಗೋಣ” ಎಂದು ಮನೆಯೊಳಗೆ ಹೋದರು. ಮರು ದಿನವೂ ಅದೇ ಕತೆ. ಸಾಯಂಕಾಲ ವಾಪಾಸ್ಸಾದ ನಂತರ “ ನೀನು ಎಷ್ಟು ಫೋಟೋ ತೆಗೆದೆ?” ಎಂದು ತೇಜಸ್ವಿ ಹುಡುಗನನ್ನು ಕೇಳಿದರು. ತಬ್ಬಿಬ್ಬಾಗಿ “ ನೀವೇನೂ ಹೇಳಲಿಲ್ಲ” ಎಂದು ತಡವರಿಸಿದ. ಸಿಟ್ಟಾದ ತೇಜಸ್ವಿ “ ಅಲ್ಲಾ ಕಣಯ್ಯ. ಇಷ್ಟೊಂದು ತಿರುಗಾಡಿದಾಗಲೂ ನಿನಗೆ ಯಾವುದೇ ಸನ್ನಿವೇಶವೂ ಫೋಟೋ ತೆಗೆಯಲು ಅರ್ಹ ಎಂದು ಅನಿಸದಿದ್ದರೆ ನೀನು ಹ್ಯಾಗೆ ಫೋಟೋಗ್ರಾಫರ್ ಆಗ್ತೀಯಾ? ಯಾವುದನ್ನು ಪೋಟೋ ತೆಗೀಬೇಕು ಅಂತ ಹೇಳ್ಕೊಡಕ್ಕೆ ಆಗಲ್ಲಪ್ಪ. ನೀನು ತೆಗೆದ ಪೋಟೋವನ್ನು ಹೇಗೆ ತೆಗೆಯಬಹುದಿತ್ತು ಅಂತ ಹೇಳ್ಕೊಡಬಹುದು. ಇದು ನಿಮ್ಮಿಬ್ಬರಿಗೂ ಟೈಂ ವೇಸ್ಟ್, ಸರಿ ನೀ ಹೊರಡು” ಎಂದು ತಿರುಗಿ ನಡೆದೇ ಬಿಟ್ಟರು. ಕಬ್ಬಿಣದ ಅಂಗಡಿಯವನೊಬ್ಬ ತೇಜಸ್ವಿ ಅವರ ಪರಮಭಕ್ತ. ತೇಜಸ್ವಿ ಅವರ ಸ್ಕೂಟರ್ ಸದ್ದು ಕೇಳಿದ ತಕ್ಷಣ ಅಂಗಡಿಯಿಂದ ಹೊರಗೆ ಬಂದು ಒಂದು ಪೊಲೀಸ್ ಸಲ್ಯೂಟ್ ಹಾಕುತ್ತಿದ್ದ. ಒಂದು ದಿನ ಆತ ಸೆಲ್ಯೂಟ್ ಹೊಡೆಯುತ್ತಿದ್ದಂತೆ ತೇಜಸ್ವಿ ಯವರ ಸ್ಕೂಟರ್ ಅವನ ಅಂಗಡಿಯತ್ತಲೇ ನುಗ್ಗಿತು. ಲಗುಬಗೆಯಿಂದ ಅಂಗಡಿ ಮಾಲೀಕ ಕುರ್ಚಿಯ ಧೂಳು ಹೊಡೆದು ತೇಜಸ್ವಿ ಬಂದು ಕೂರುವುದನ್ನು ಕಾಯುತ್ತಾ ನಿಂತ.

ಸ್ಕೂಟರಿನಿಂದ ಇಳಿಯದ ತೇಜಸ್ವಿ “ ಅಲ್ಲಾ ಕಣಯ್ಯ, ದಿನಾ ನಾನು ಹೋಗಿ ಬರುವಾಗ ನನಗೆ ಸಲ್ಯೂಟ್ ಹೊಡೆಯುತ್ತೀಯಲ್ಲ. ದಿನಾ ಈ ಜಾಗಕ್ಕೆ ನಾನು ಬರುವಾಗ ನೀನು ಸಲ್ಯೂಟ್ ಹೊಡಿತೀದಿಯೋ ಇಲ್ಲವೋ ಅಂತಾ ನೋಡೋದೇ ಒಂದು ಕೆಲಸ ಆಗಿದೆ. ಅಲ್ಲಾ ಅಕಸ್ಮಾತ್ ನಿನಗೆ ಸಲ್ಯೂಟ್ ಹೊಡೀತಾ ಸ್ಕೂಟರ್ ಬ್ಯಾಲೆನ್ಸ್ ತಪ್ಪಿದರೆ? ಅಥವಾ ಎದುರಿಂದ ಬಂದ ಜೀಪಿಗೋ,ಕಾರಿಗೋ ಡಿಕ್ಕಿ ಹೊಡಿದ್ರೆ? ಸ್ವಲ್ಲ ಯೋಚನೆ ಮಾಡಬೇಕಯ್ಯ” ಎಂದವರೇ ಸ್ಕೂಟರ್ ತಿರುಗಿಸಿ ಮೂಡಿಗೆರೆಯತ್ತ ಹೊರಟೇ ಬಿಟ್ಟರು. ಅಂದಿನಿಂದ ಅಂಗಡಿಯವನ ಸೆಲ್ಯೂಟ್ ಬಂದಾಯ್ತು. ಬರವಣಿಗೆ ಅಷ್ಟೇ ಅಲ್ಲ. ಕಾಫಿ ಬೆಳೆಗಾರರ ಸಮಸ್ಯೆಗಳಿಗೂ ತೇಜಸ್ವಿ ಬಹಳವಾಗಿ ಸ್ಪಂದಿಸಿದರು. ಕಾಫಿ ಬೆಳೆಗೆ ಮುಕ್ತ ಮಾರುಕಟ್ಟೆ ಒದಗಿಸುವಲ್ಲಿ ತೇಜಸ್ವಿ ಅವರ ಪಾತ್ರ ಬಹಳ ದೊಡ್ಡದು. ಹಾಗೆಯೇ ಕಾಫಿ ಮಾರುಕಟ್ಟೆಗೆ ಸಹಕಾರ ಸಂಸ್ಥೆಯಾದ ಕೊಮಾರ್ಕ್ ಹುಟ್ಟಲು ತೇಜಸ್ವಿಯವರ ಕೊಡುಗೆ ಅಪಾರ, ಆದರೆ ಪುಡಿ ರಾಜಕಾರಣಿಗಳ ಕೈಗೆ ಸಿಕ್ಕಿದ ಕೊಮಾರ್ಕ್ ಪುಡಿಪುಡಿಯಾಯ್ತು. ಹಾಗೆಂದ ಮಾತ್ರಕ್ಕೆ ತೇಜಸ್ವಿ ಯಾವುದೇ ರಾಜಕಾರಣಕ್ಕಾಗಲಿ ಅಥವಾ ಆಂದೋಲನಕ್ಕಾಗಲಿ ಕೈ ಹಾಕಲಿಲ್ಲ ಅಂತಲ್ಲ. ಕುದುರೇ ಮುಖದ ವಿಷಯ ಬಂದಾಗಲೂ ಅಷ್ಟೇ, ಅವರ ನಿಲುವು ಸ್ಪಷ್ಟ. “ ಕಾಫಿ ಪ್ಲಾಂಟರ್ ಗಳ ಒತ್ತುವರಿಯಿಂದ ನೂರು ವರ್ಷಗಳಲ್ಲಿ ಆಗುವ ಅನಾಹುತವನ್ನು ಒಂದೇ ದಿನದಲ್ಲಿ ಈ ಗಣಿಗಾರಿಗೆ ಮಾಡುತ್ತೆ. ಈ ಫಾರೆಸ್ಟ್ ಆಫೀಸರ್ ಗಳಿಗೆ ಯಾವುದನ್ನು ಉಳಿಸಿಕೊಳ್ಳಬೇಕು, ಯಾವುದನ್ನು ಬಿಡಬೇಕು ಎಂಬ ಪ್ರಜ್ಞೆಯೇ ಇಲ್ಲ. ಗಣಿಗಾರಿಗೆ ಮುಂದುವರೆದರೆ ಸರ್ವನಾಶ ಖಂಡಿತ” ಎಂದಿದ್ದರು. ಆ ವಿಷಯದಲ್ಲಿ ನನ್ನನ್ನು ತುಂಬಾ ಪ್ರೋತ್ಸಾಹಿಸಿದರು ಕೂಡ. ಸುಪ್ರೀಂ ಕೋರ್ಟ್ ನಲ್ಲಿ ಕೇಸ್ ಕೊನೆಯ ಹಂತಕ್ಕೆ ಬಂದಾಗ, ಕುದುರೆ ಮುಖ ಗಣಿಗಾರಿಕೆ ವಿರುದ್ದ ತುಂಬಾ ಜನ ಚಳುವಳಿಗೆ ದುಮುಕಿದರು. ಅದರಲ್ಲಿ ಡಾ. ಯು.ಆರ್. ಅನಂತ ಮೂರ್ತಿ ಕೂಡ ಒಬ್ಬರು. ಬೆಂಗಳೂರಿನ ಶಾಸಕರ ಭವನದಲ್ಲಿ ಸಭೆ ನಡೆದಿದ ನಂತರ, ಅನಂತ ಮೂರ್ತಿಯವರಿಗೆ ತೇಜಸ್ವಿಯವರು ಫೋನ್ ಹಚ್ಚಿ, “ ತೇಜಸ್ವಿ, ನಾನು ಕುದುರೆ ಮುಖದ ವಿರುದ್ದ ಚಳುವಳಿಯಲ್ಲಿ ಗೊಡಗಿಸಿಕೊಂಡಿದ್ದೇನೆ. ನೀನು ಬರಬೇಕು.” ಅಂದರು. ಆ ಕಡೆಯ ಉತ್ತರ ನನಗೆ ಸ್ಪಷ್ಟವಾಗಿ ಕೇಳಿತು. “ ಆ ಕೃಷ್ಣನಿಗೆ (ಎಸ್.ಎಂ. ಕೃಷ್ಣ) ಬುದ್ದಿ ಇದ್ದರೆ ಗಣಿಗಾರಿಕೆಯನ್ನು ನಿಲ್ಲಿಸಲಿ, ಇಲ್ಲದಿದ್ದರೆ ದುರ್ಗದ ಹಳ್ಳಿಯವರೆಗೆ ಗಣಿಗಾರಿಕೆಗೆ ಕೊಡಲಿ. ಎಷ್ಟು ಸಲ ಅವರಿಗೆ ಹೇಳುತ್ತಾ ಕೂರುವುದು. ನನಗೇನು ಬೇರೆ ಕೆಲಸವೇ ಇಲ್ಲವಾ” ಎಂದಿದ್ದರು. ಸರ್ಕಾರವೇನೋ ಸರಿಯಾದ ನಿರ್ಧಾರ ತೆಗೆದುಕೊಂಡಿತು. ಸರ್ವೋಚ್ಚ ನ್ಯಾಯಾಲಯ ಗಣಿಗಾರಿಯನ್ನು ನಿಲ್ಲಿಸಲು ಆದೇಶಿಸಿತ್ತು. ಆದರೆ ಗಣಿಗಾರಿಕೆ ಕಂಪನಿಯವರು ನ್ಯಾಯಾಲಯದಲ್ಲಿ ಮರು ಪರಿಶೀಲನಾ ಅರ್ಜಿ ಸಲ್ಲಿಸಿತು. ಅನಂತ ಮೂರ್ತಿಯವರಿಗೆ ಕೊಟ್ಟ ಉತ್ತರ ನೋಡಿ, ತೇಜಸ್ವಿ ಇನ್ನೆಂದೂ ಕುದುರೇ ಮುಖದ ವಿಷಯಕ್ಕೆ ಬರೋದಿಲ್ಲ ಅಂದುಕೊಂಡಿದ್ದೆ. “ ಎಚ್.ಕೆ. ಪಾಟೀಲರು ಒಳ್ಳೆ ಮನುಷ್ಯ ಕಣೋ, ನಾನು ಹೇಳಿದೆ ಅಂತ ಹೇಳು, ಸರಿಯಾಗಿ ಕೇಸ್ ನಡೆಸಲಿ,” ಎಂದರು. ನನ್ನ ಖುಷಿಗೆ ಪಾರವೇ ಇರಲಿಲ್ಲ. ಕಾನೂನು ಮಂತ್ರಿ ಪಾಟೀಲರು ಮತ್ತು ತೇಜಸ್ವಿ ಒಳ್ಳೆ ಗೆಳಯರೆಂದೇ ಭಾವಿಸಿ ನೆಟ್ಟಗೆ ಅವರನ್ನು ಭೇಟಿ ಮಾಡಿ, ತೇಜಸ್ವಿ ಹೇಳಿದರೆಂದು ವರದಿ ಒಪ್ಪಿಸಿದೆ. ನನಗಿಂತ ಸಂತೋಷ ಪಟ್ಟವರು ಪಾಟೀಲರು. “ ತೇಜಸ್ವಿಯವರು ಹೇಳಿದರೇ.? ನೋಡಿ ವಿನಯ್. ಅವರ ಎಲ್ಲಾ ಪುಸ್ತಕಗಳನ್ನು ಓದಿದ್ದೇನೆ. ಒಮ್ಮೆಯೂ ಭೇಟಿ ಮಾಡಿಲ್ಲ ಒಂದು ಕೆಲಸ ಮಾಡಿ. ಶುಕ್ರವಾರ ರಾತ್ರಿ ಅವರನ್ನು ನಮ್ಮ ಮನೆಗೆ ಊಟಕ್ಕೆ ಕರೆತನ್ನಿ ಈ ಕೇಸನ್ನು ನನಗೆ ಬಿಡಿ.” ಎಂದರು. ಕರ್ಮ . . .. ನಮಾಜು ಮಾಡಲು ಹೋಗಿ, ಮಸೀದಿ ಮೇಲೆ ಬಿದ್ದಂತಾಗಿತ್ತು ನನ್ನ ಅವಸ್ತೆ. ಎರಡು ದಿನದಲ್ಲಿ ತೇಜಸ್ವಿಯವರನ್ನು ಮೂಡಿಗೆಯಿಂದ ಹೊರಡಿಸಿ, ಬೆಂಗಳೂರಿಗೆ , ಅದೂ ಒಂದು ಊಟಕ್ಕಾಗಿ ಕರೆಸಬೇಕಾಗಿತ್ತು. ಅಳುಕುತ್ತಲೇ ನಾನು, ಪ್ರವೀಣ್ ಭಾರ್ಗವ ಮತ್ತು ಡಿ.ವಿ.ಗಿರೀಶ್ ಸೇರಿ ತೇಜಸ್ವಿ ಮತ್ತು ಪಾಟೀಲರ ಭೇಟಿ ಏರ್ಪಡಿಸಿದೆವು. ಕಾರಿನಿಂದಿ ಇಳಿಯುತ್ತಲೇ, ನಾನು ಊಹಿಸಿದಂತೆ ಬೈಗಳಗಳ ಸುರಿಮಳೆ ಆಯ್ತು. ನಾನೇನು ತಲೆ ಕೆಡಿಸಿಕೊಳ್ಳಲಿಲ್ಲ. ನಾವು ಅಲ್ಲಿಗೆ ಹೋದ ಸಮಯದಲ್ಲಿ ರಾಮಕೃಷ್ಣಾಶ್ರಮದ ಕೆಲವು ಸ್ವಾಮೀಜಿಗಳು ಪಾಟೀಲರ ಮನೆಗೆ ಬಂದು ಹೋದರು. ಅಲ್ಲಿಗೆ, ವಿಷಯಾಂತರಾಗಿ ಹೋಯಿತು. “ ನೋಡ್ರಿ, ಬರ್ತಾ ಬರ್ತಾ ಈ ರಾಮಕೃಷ್ಣಾಶ್ರಮ, ವೈಧಿಕ ಧರ್ಮಕ್ಕೆ ತಿರುಗುತ್ತಿದೆ. ಪರಮಹಂಸ ಮತ್ತು ವಿವೇಕಾನಂದರು ಹೇಳಿದ್ದೊಂದು, ಈಗ ಆಚರಿಸುತ್ತಿರುವುದು ಇನ್ನೊಂದು” ಎಂದು ತೇಜಸ್ವಿ ಶುರು ಮಾಡಿದರು. ಮೈಸೂರು ರಾಮಕೃಷ್ಣ ವಿದ್ಯಾಶಾಲೆಯ ಹಳೆಯ ವಿದ್ಯಾರ್ಥಿಯಾದ ನಾನು ಇರುಸು ಮುರುಸುಗೊಂಡು ಸುಮ್ಮನೆ ಕುಳಿತೆ. ಊಟವಾಗಿ ಕುದುರೇಮುಖದ ವಿಷಯ ಬರುವ ಹೊತ್ತಿಗೆ ನಡುರಾತ್ರಿ ದಾಟಿತ್ತು. ಎರಡೇ ವಾಕ್ಯದಲ್ಲಿ ಮುಗಿಸಿದರು ತೇಜಸ್ವಿ: “ ನೋಡಿ, ಈಗ ನಿಮ್ಮ ಸರ್ಕಾರ ಸರಿಯಾದ ನಿರ್ಧಾರ ತೆಗೆದುಕೊಳ್ಳದಿದ್ದರೆ, ಮುಂದಿನ ಪೀಳಿಗೆಗೆ ಅಪಚಾರವೆಸಗಿದಂತಾಗುತ್ತದೆ. ನಿಮ್ಮ ನಿರ್ಧಾರದ ಮೇಲೆ ಮುಂದಿನ ಪೀಳಿಗೆಯ ಭವಿಷ್ಯ ನಿಂತಿದೆ”. ಪಾಟೀಲರು ನಾವು ತೋರಿಸಬೇಕೆಂದಿದ್ದ ಸಾಕ್ಷ್ಯ ಚಿತ್ರದ ಬಗ್ಗೆ ಹೆಚ್ಚಿನ ಆಸಕ್ತಿ ತೋರಲಿಲ್ಲ. ಕೆಲವು ಸಲಹೆಗಳನ್ನಿತ್ತು ತಾವು ಸಹಕಾರ ನೀಡುವುದಾಗಿ ಆಶ್ವಾಸನೆಯನ್ನಿತ್ತರು. ಆ ಆಶ್ವಾಸನೆ ಹುಸಿಯಾಗಲಿಲ್ಲ. ತೇಜಸ್ವಿ ನನ್ನ ಗುರುವೂ ಅಲ್ಲ, ನಾನು ಅವರಿಗೆ ಶಿಷ್ಯನೂ ಅಲ್ಲ. ಅವರ ಒಡನಾಡಿ ಅಂತೂ ಅಲ್ಲವೇ ಅಲ್ಲ. ಅಭಿಮಾನಿ ಅಷ್ಟೇ. ತೇಜಸ್ವಿಯವರನ್ನು ಎಲ್ಲರೂ ವರ್ಣಿಸುವುದು ಕುರುಡರು ಆನೆಯನ್ನು ಮುಟ್ಟಿ ವರ್ಣಿಸಿದಂತೆ ಅನ್ನಿಸುತ್ತದೆ. ನಾನೂ ಅಷ್ಟೇ. ನಾಲ್ಕಾರು ಬೇಟಿ,ಆರೆಂಟು ಪುಸ್ತಕ, ನೂರಾರು ದಂತ ಕಥೆಗಳು, ಮೂಡಿಗೆರೆಯ ಬಾಸೇಗೌಡರ ಗಂಡಾನೆ ಗೋಪಾಲ, ಕೃಷ್ಣೇಗೌಡರ ಹೆಣ್ಣಾನೆಯಾಗುತ್ತದೆ. ನನಗೆ ಅತೀ ರೇಜಿಗೆ ಎನಿಸುತ ಮೂಡಿಗೆರೆಯ ಬೇಸಿಗೆಯಲ್ಲಿ ತೇಜಸ್ವಿ ಅವರ ನವೀರಾದ ಹಾಸ್ಯ ಪ್ರಜ್ಞೆ ಅರಳಿ, ಅದ್ಬುತವಾದ ಕಥೆಗಳಿಗೆ ದಾರಿ ಮಾಡಿಕೊಡುತ್ತದೆ. ಆಗತಾನೇ ಪ್ರೌಢಾವಸ್ತೆಗೆ ಕಾಲಿಡುತ್ತಿರುವ ಯುವಕನಂತೆ ಜೀವನದ ಪ್ರತಿಕಣವನ್ನುಪ್ರಯೋಗಕ್ಕೆ ಆಳವಡಿಸಿ ಪಜೀತಿಗೆ ಸಿಕ್ಕಿಕೊಳ್ಳುತ್ತಿದ್ದರು. ಅದರ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ನಾನೇ ಹೊಕ್ಕು ಹುಡುಕುವ ಪಶ್ಚಿಮಘಟ್ಟದ ಕಾಡಿನಲ್ಲಿ ತೇಜಸ್ವಿ ಇನ್ನೊಂದು ‘ ವಿಸ್ಮಯ’ವನ್ನು ಸೃಷ್ಟಿಸುತ್ತಾರೆ. ಸಾವಿರಾರು ವರ್ಷಗಳ ಹಳೆಯ ಪಳಯುಳಿಕೆಯಿಂದ ಹಿಡಿದು ಜಾಗತೀಕರಣದ ಅನಿವಾರ್ಯತೆಯವರೆಗೆ ಮಾತನಾಡುತ್ತಾರೆ. ನಮಗಿನ್ನೇನು ಬೇಕು? ತೇಜಸ್ವಿ ತೀರಿ ಹೋದ ಸುದ್ದಿ ತಿಳಿದಾಗ, ನಾನು ಮದ್ರಾಸಿಗೆ ಹೊರಟಿದ್ದೆ. ರಸ್ತೆ ಬದಿಗೆ ಕಾರು ನಿಲ್ಲಿಸಿ ಸುಮ್ಮನೆ ಕುಳಿತೆ. ಏನೋ ಒಂಥರಾ ಕಳವಳ. ಗಹನವಾದ ಚರ್ಚೆಯನ್ನು ಆರಂಭಿಸಿ, ಹತ್ತಾರು ಜನರನ್ನು ಸೇರಿಸಿ, ಮಹತ್ವದ ಘಟ್ಟದಲ್ಲಿ ಆರಂಭಿಸಿದವರರು, ಏನನ್ನೂ ಹೇಳದೆ ಎದ್ದು ಹೋದೋತಿತ್ತು. ಮುಂದೇನು? ಚರ್ಚೆಯ ಗುರಿಯೇನು?…. ಯಾವುದಕ್ಕೂ ಉತ್ತರವಿಲ್ಲ. ಛೆ! ಒಂದು `ಗುಡ್ ಬ್ಐ’ ಕೂಡ ಬೇಡವೇ? ಮೂಡಿಗೆರೆಗೆ ಹೋಗುವ ಮನಸ್ಸಾಯಿತು. ಹೋಗಿ ಮಾಡುವುದೇನು? ನೂರು ಕುರುಡರ ಮಧ್ಯ ನನ್ನದೊಂದು ಒಗ್ಗರಣೆ ಅಷ್ಟೇ. ತೇಜಸ್ವಿ ಹೋದರು, ನಾನು ತಿರುಗಿ ನೋಡುವುದಿಲ್ಲ.    ]]>

‍ಲೇಖಕರು G

September 8, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ತೇಜಸ್ವಿ ಜೀಪು

ತೇಜಸ್ವಿ ಜೀಪಿನಲ್ಲಿ ಸವಾರಿ ಚಿನ್ನಸ್ವಾಮಿ ವಡ್ಡಗೆರೆ  ಇದು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು ಬಳಸುತ್ತಿದ್ದ ಜೀಪು. ಈಗ ಆ ಜೀಪು ತೇಜಸ್ವಿ...

ಅನಂತಮೂರ್ತಿಯ ತೇಜಸ್ವಿ

ಯು ಆರ್ ಅನಂತಮೂರ್ತಿ ತೇಜಸ್ವಿ, ಅವರ ಕಾಲೇಜು ದಿನಗಳಿಂದಲೂ ನನಗೆ ಪರಿಚಯ, ನಾನಾಗ ಶಿವಮೊಗ್ಗದಲ್ಲಿ ಮೇಷ್ಟ್ರು, ವಯಸ್ಸು ಇಪ್ಪತ್ತಮೂರೋ,...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: