ತೇಜಸ್ವಿಯವರ “ಪಕ್ಷಿಕಾಶಿ”

ತೇಜಸ್ವಿಯವರ ಮಾಯಾಲೋಕದಲ್ಲಿ, ಅವರ ಅಕ್ಷರಗಳಿಗಿರುವಷ್ಟೇ ಹೆಚ್ಚುಗಾರಿಕೆ ಅವರ ಛಾಯಾಚಿತ್ರಗಳಿಗೂ ಇದೆ. ಅವರು ತೆಗೆದ ಪಕ್ಷಿಗಳ ಛಾಯಾಚಿತ್ರಗಳು ಅಮೋಘವಾದವುಗಳು. ಅದೇ ಒಂದು ಕಾವ್ಯ. ಚಿತ್ರಕಲಾ ಪರಿಷತ್ತಿನಲ್ಲೊಮ್ಮೆ ಅವರ ಫೋಟೋ ಎಕ್ಸಿಬಿಷನ್ “ಹಾರಾಡುವ ಹಾಡುಗಳು” ಹೆಸರಿನಲ್ಲಿ ನಡೆದಿತ್ತು. ಆಗ ಅವರೊಂದಿಗೆ ಜಯಂತ ಕಾಯ್ಕಿಣಿ ನಡೆಸಿಕೊಟ್ಟ ಸಂವಾದದ ಅಮೂಲ್ಯ ಗಳಿಗೆಯನ್ನು ಗೆಳೆಯ ಅಪಾರ ತಮ್ಮ ಬ್ಲಾಗಿನಲ್ಲಿ ಹಿಡಿದಿಟ್ಟಿದ್ದಾರೆ. ಪಕ್ಷಿಗಳ ಛಾಯಾಚಿತ್ರ ತೆಗೆಯಲು ಮಾಡಬೇಕಾದ ತಪಸ್ಸು ಎಂಥದು ಎಂಬುದನ್ನು ಆ ಸಂವಾದದಲ್ಲಿ ತೇಜಸ್ವಿ ವಿವರಿಸಿದ್ದರು. ಆ ಭಾಗವನ್ನು ಇಲ್ಲಿ ಕೊಡುತ್ತಿದ್ದೇವೆ, ತೇಜಸ್ವಿಯವರ ಮಾಯಾಲೋಕವನ್ನು ನೆನೆಯುತ್ತ.

te2new1.jpg

ಪ್ರಶ್ನೆ: ಪಕ್ಷಿ ಛಾಯಾಗ್ರಹಣ ಅಂತಂದ್ರೆ ಸಂಪೂರ್ಣವಾಗಿ ಪರಿಸರದಲ್ಲಿ ಕಳೆದುಹೋಗ್‌ಬೇಕು, ಕೈಲಿರೋ ಕೆಮೆರಾನೂ ಮರೆತುಹೋಗಬೇಕು ಅಂತ ನೀವೊಂದ್ಸಲ ಹೇಳಿದ್ರಿ. ಪಕ್ಷಿಗಳ ಜತೆಗಿನ ನಿಮ್ಮ ನಂಟು- ದಯವಿಟ್ಟು ಅದರ ಬಗ್ಗೆ ಸ್ಪಲ್ಪ ಹೇಳಿ?

ತೇಜಸ್ವಿ: ನೀವು ಪರಿಸರದಲ್ಲಿ ಲೀನ ಆಗೋದನ್ನ ಕಲಿತ್ರೆ ಅಂಥ ಛಾಯಾಚಿತ್ರಗಳನ್ನು ತೆಗೀಬಹುದು ಅಂತ ಹಿಂದೆ ಒಮ್ಮೆ ಹೇಳಿದ್ದೆ. ಆದರೆ ಈಗ ಮತ್ತೆ ನನ್ನ ನಿಲುವು ಬದಲಾಯಿಸ್ಕೊಂಡಿದೀನಿ. ಯಾಕೆ ಅಂದ್ರೆ ಲೀನವಾದ್ರೂ ಬರೋದಿಲ್ಲ ಕಣ್ರೀ…ಯು ನೀಡ್‌ ಸೂಪರ್ ಹ್ಯೂಮನ್‌ ಪೇಷನ್ಸ್. ಬೆಳಗ್ಗಿಂದ ಸಾಯಂಕಾಲದವರೆಗೆ ಕಷ್ಟಪಟ್ಟು, ಏನೂ ಸಾಧನೆ ಮಾಡದೆ ಮತ್ತೆ ಅದೇ ನೆಮ್ಮದಿಯಲ್ಲಿ ಮನೆಗೆ ಬಂದು ನಿದ್ದೆ ಮಾಡೋದಿಕ್ಕೆ ತಯಾರಿದ್ರೆ ಮಾತ್ರ ಆಗುತ್ತೆ…..ಪಕ್ಷಿಗಳ ಬಗ್ಗೆ ದ್ವೇಷ ಬರೋದಿಕ್ಕೆ ಶುರುವಾಗತ್ತೆ ಕಣ್ರೀ….ಅಷ್ಟು ತಲೆನೋವಿನ ಕೆಲಸ. ಹಿಂಗ್‌ ಹೋಗಿ ಛಕ್ಕಂತ ಹಕ್ಕಿ ಫೋಟೊ ತಕ್ಕೊಂಡು ಬಂದ್‌ಬಿಡಬಹುದು ಅಂತ ತಿಳ್ಕೊಂಡಿದ್ರೆ ತಪ್ಪು.

ನಮ್ಮಲ್ಲಿ ಏನಾಗುತ್ತೆ ಅಂದ್ರೆ ಒಂದು ಕಲಾಕೃತಿ ನಿರ್ಮಾಣ ಮಾಡೋದಿಕ್ಕೆ ಪ್ರತಿಭೆ, ಸ್ಫೂರ್ತಿ ಇವೆಲ್ಲಾ ಬೇಕಾಗತ್ತೆ ಅಂತ ತಿಳ್ಕೊಂಡಿದೀವಿ. ಈ ರೀತಿ ಸ್ಫೂರ್ತಿ, ಪ್ರತಿಭೆ ಇವುಗಳ ಮೇಲೆ ನಾವು ಅನಗತ್ಯವಾದ ಮತ್ತು ವಿಪರೀತವಾದ ತೂಕ ಹೇರ್ತಾ ಇದೀವಿ ಅಂತ ಅನಿಸುತ್ತೆ. ಯಾಕೆ ಅಂದ್ರೆ ನಾನು ತಿಳ್ದಂಗೆ ಪ್ರತಿಭೆ ಬೇಕು, ಸ್ಫೂರ್ತಿ ಬೇಕು ಎಲ್ಲಾ ಸರಿ, ಆದ್ರೆ ಇವೆಲ್ಲಾ ಒಂದು ಪಾಯಿಂಟ್‌ ಫೈವ್‌ ಪರಸೆಂಟ್‌ ಸೈತ ಇರೋದಿಲ್ಲ. ಒಂದು ಕಲಾಕೃತಿ ಹಿಂದೆ ಅತ್ಯಂತ ಕಷ್ಟಪಟ್ಟು ತಾಳ್ಮೆಯಿಂದ ಮಾಡಿರೋ ಕೆಲಸ 99.5 ಪರಸೆಂಟ್ ಇರುತ್ತೆ. ಇನ್ನೊಂದು ಪಾಯಿಂಟ್‌ಫೈವ್‌ ಪರಸೆಂಟ್‌ ಅವನಿಗೆ ಸ್ಫೂರ್ತಿನೊ ಅಥವಾ ಇನ್ನೊಂದೋ ಸಹಾಯ ಮಾಡಿರುತ್ತಷ್ಟೇ ಹೊರತು…

ಒಬ್ಬ ಮೇದರವನು ಹೇಗೆ ಕಷ್ಟಪಟ್ಟು ಬುಟ್ಟಿ ಹೆಣಿತಾನೊ, ಅಷ್ಟೇ ಕಷ್ಟಪಟ್ಟು ಕತೆ, ಕಾದಂಬರಿ, ಕವನ ಮತ್ತು ಹಕ್ಕಿಗಳ ಛಾಯಾಚಿತ್ರ ಎಲ್ಲವೂ. ಇವೆಲ್ಲಾ ಕಷ್ಟಪಟ್ಟು ಬಂದಿರತಕ್ಕಂಥವೇ ಹೊರತು, ಸ್ವಯಂಸ್ಫೂರ್ತಿಯಿಂದ ಇದ್ದಕ್ಕಿದ್ದಂತೆ ಒಂದಿವಸ ನಾವು ಸಾಧನೆ ಮಾಡಿಬಿಟ್ವು ಅಂತ ಹೇಳದು ಸುಳ್ಳು ಅಂತ ಅನಿಸುತ್ತದೆ ನಂಗೆ. ಯಾಕೆಂದ್ರೆ ನಾನಿಲ್ಲಿವರೆಗೂ ಬರೆದಿರೋ ಕಲಾಕೃತಿಗಳು, ಕ್ರಿಯೇಟಿವ್ ಆರ್ಟ್‌ ಎಲ್ಲಾ ಬಹುಶಃ ಆ ಮಾದರಿದೇನೆ. ಕಷ್ಟಪಟ್ಟು ಕೆಲಸ ಮಾಡಬೇಕು, ಚೆನ್ನಾಗಿಲ್ಲದಿದ್ರೆ ತೆಗೆದು ಕಸದ ಬುಟ್ಟಿಗೆ ಹಾಕಬೇಕು. ಶ್ರೇಷ್ಟ ಕಲಾಕೃತಿಗಳನ್ನ ನೋಡ್ದಾಗ ಯಾವ ಕಾರಣಕ್ಕಾಗಿ ಇವು ಶ್ರೇಷ್ಟ ಅಂತ ನನಗನ್ನಿಸುತ್ತಿದೆ ಅಂತ ಅನ್ನೋದ್ನ ಅರ್ಥಮಾಡಿಕೋಬೇಕು. ನಮ್ಮದನ್ನ ಅಷ್ಟು ಶ್ರೇಷ್ಟ ಮಾಡೋದು ಹೇಗೆ ಅಂತ ಕಷ್ಟಪಟ್ಟು ಯೋಚ್ನೆ ಮಾಡ್ಬೇಕು. ಮೂರು ನಾಲ್ಕು ಐದು ಮಾಡಲ್‌ ಮಾಡಿ ತುಂಬಾ ಕ್ರಿಟಿಕಲ್‌ ಆಗಿ ನೋಡಬೇಕು. ಕಸದ ಬುಟ್ಟಿ ರೆಡಿ ಇಟ್ಕಂಡು ಕುಂದು ಕೊರತೆ ಇದೆ ಅನ್ಸಿದ್ರೆ ಬಿಸಾಕಬೇಕು.

ಹೊಗಳುಭಟರನ್ನು ಕರ್ಕೊಂಡ್ಹೋಗಿ ಹೆಂಗಿದಿಯೋ ಅಂತ ಕೇಳೋದ್ರಿಂದ ಪ್ರಯೋಜನವಿಲ್ಲ. ಗ್ಲೋಬಲ್‌ ಸ್ಟಾಂಡರ್ಡ್‌ಗೆ ಕಂಪೇರ್ ಮಾಡಿ ನಮ್ಮದು ಸೆಕೆಂಡ್‌ ರೇಟ್‌ ಆದ್ರು ಪರ್ವಾಗಿಲ್ಲ. ಇಲ್ಲಿ ನಮ್ಮ ಚೇಲಾಗಳನ್ನು ಕರ್ಕೊಂಡ್ಹೋಗಿ ಫಸ್ಟ್‌ರೇಟ್ ಆಗೋದ್ರಿಂದ ಪ್ರಯೋಜನ ಇಲ್ಲ. ಪ್ರಯೋಜನ ಇಲ್ಲ ಅಂದ್ರೆ, ನೀವು ಜೀವಮಾನದಲ್ಲಿ ಒಂದು ಅದ್ಭುತ ಕಲಾಕೃತಿ ಎದುರು ನಿಂತಾಗ ಹೊಗಳಿದೋರ್ನೆಲ್ಲ ಹಿಡ್ಕಂಡು ಒದೀಬೇಕು ಅನ್ನಿಸುತ್ತೆ. ಎಂಥ ಕೆಲಸ ಮಾಡಿ ದಾರಿತಪ್ಪಿಸಿಬಿಟ್ರು ನೋಡು ಅಂತ. ಬಯ್ಯೋಕ್ಕಿಂತ ಸುಲಭವಾಗಿ ಹೊಗಳಿ ಒಬ್ಬನ್ನ ಹಾಳುಮಾಡಾಕಿ ಬಿಡಬಹುದು. ಯು ಹ್ಯಾವ್‌ ಟು ಬಿ ಎಕ್ಸ್‌ಟ್ರೀಮ್‌ಲಿ ಕ್ರಿಟಿಕಲ್‌.

ಸ್ಫೂರ್ತಿ, ಏಕಾಗ್ರತೆ, ತನ್ಮಯತೆ ಇವೆಲ್ಲಾ ಅಗತ್ಯ ಇದೆ. ಅವುಗಳಿಂದ ಪ್ರಯೋಜನಾನೇ ಇಲ್ಲ, ಇದು ಕತ್ತೆ ಕೆಲಸಾನೇ ಹೆಚ್ಚು ಅಂತ ಹೇಳ್ತಾ ಇರೋದಲ್ಲ. ಆದ್ರೆ ಅವುಗಳಿಗೆ ಅನಗತ್ಯ ಪ್ರಾಧಾನ್ಯತೆ ಕೊಟ್ರೆ… ನಮ್ಮ ಯಂಗ್‌ಸ್ಟರ್ ಗಳೆಲ್ಲಾ ಮೈಗಳ್ಳರು, ಎಲ್ಲೋ ಒಂದ್‌ ಒಳದಾರಿ ಇದೆ, ಅದ್ಭುತಗಳನ್ನ ಸಾಧಿಸೋಕೆ ಅಂತ ಕೆಲಸ ಮಾಡದನ್ನ ನಿಲ್ಲಿಸಿಬಿಟ್ಟು ಕಾಲ್ದಾರಿ ಹುಡುಕ್ತಾ ಓಡಾಡ್ತಾರೆ. ಅದ್ರಿಂದ ನಾನು ಈ ವಿಷಯ ಹೇಳ್ತಾ ಇರೋದು.

‍ಲೇಖಕರು avadhi

April 5, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This