ತೇಜಸ್ವಿ ಇದ್ದಾರೆ!

ತೇಜಸ್ವಿ ಇದ್ದಾರೆ!

– ಸುಪ್ರೀತ್

ಮೊನ್ನೆ ಮೊನ್ನೆಯಷ್ಟೇ ಜಯಂತನ ಶಬ್ದತೀರ ಬಿಡುಗಡೆಯ ದಿನ ಮೊದಲ ಬಾರಿಗೆ ತೇಜಸ್ವಿಯವರನ್ನು ಭೇಟಿ ಮಾಡಿದ್ದೆ. ಅವರು ಬರುತ್ತಾರೆಂಬ ನಿರೀಕ್ಷೆ ಅಂದು ಯಾರಿಗೂ ಇರಲಿಲ್ಲ. ಬಹುಶಃ ಇಂಥ ಸಮಾರಂಭಗಳಿಗೆ ಅವರು ಬರುವುದಿಲ್ಲವೆಂದೇ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಬಹುದಾದ ಸಾಧ್ಯತೆಯ ಬಗ್ಗೆ ಯಾರೂ ಯೋಚಿಸಿರಲಿಕ್ಕಿಲ್ಲ. ನಿಜಕ್ಕೂ ನಾನು ತೇಜಸ್ವಿಯವರನ್ನು ಹೊರಗೆ, ಸೆಮಿನಾರುಗಳಲ್ಲಿ, ವೇದಿಕೆಯ ಮೇಲೆ ನೋಡಿದ ನೆನಪೇ ಇಲ್ಲ. ಆದರೆ ಅವರು ಸರ್ವಾಂತರ್ಯಾಮಿ. ಅವರ ಪುಸ್ತಕಗಳು ಅವರಿಗಿಂತ ಹೆಚ್ಚಿನ ಮಾತುಗಳನ್ನಾಡಿದುವು, ಅವರಿಗಿಂತ ಹೆಚ್ಚು ಕಂಡವು. ಅದಕ್ಕೇ ಏನೋ ಆದಿನ ಅವರು ಅನಿರೀಕ್ಷಿತವಾಗಿ ಅಲ್ಲಿಗೆ ಬಂದಾಗ ಜಯಂತ “ದೇವರು ಪ್ರತ್ಯಕ್ಷವಾಗುವುದನ್ನು ನಾವು ಕಥೆಗಳಲ್ಲಿ ಓದಿದ್ದೇವೆ, ಸಿನೇಮಾದಲ್ಲಿ ನೋಡಿದ್ದೇವೆ.. ಆದರೆ ಅದು ಏನೆನ್ನುವುದು ಈ ದಿನ ನಮಗೆ ಅರ್ಥವಾಯಿತು” ಅಂದ. ಅನಿರೀಕ್ಷಿತವಾಗಿ ಬಂದದ್ದಲ್ಲದೇ ಜಯಂತನ ಬಗ್ಗೆ ಪ್ರಾಮಾಣಿಕವಾದ ಮಾತುಗಳನ್ನು ತೇಜಸ್ವಿ ಆಡಿದರು. ತನ್ನ ಕಥನ ಸಂಭ್ರಮದ ಲೋಲುಪತೆಯಲ್ಲೇ ಮುಳುಗಿದರೆ ಉಂಟಾಗಬಹುದಾದ ಏಕತಾನತೆಯ ಬಗ್ಗೆ ಎಚ್ಚರ ನೀಡಿದರು. ಆನಂತರ ಅಲ್ಲಿದ್ದ ಅನೇಕರೊಡನೆ ಮಾತಾಡಿ, ಕೇಳಿದವರಿಗೆಲ್ಲಾ ಹಸ್ತಾಕ್ಷರ ನೀಡಿ ಅಂತರ್ಧಾನರಾದರು. ತೇಜಸ್ವಿ ತಮ್ಮ ಸಮಯದ ಲೇಖಕರಿಗಿಂತ ಭಿನ್ನವಾಗಿ ಬರೆದರು ಅನ್ನುವುದು ಎಲ್ಲ ಬರಹಗಾರರ ಬಗ್ಗೆಯೂ ಕೇಳಿಬರುವ ಮಾತು. ತೇಜಸ್ವಿ ತಮ್ಮ ಸಮಯದ ಬರಹಗಾರರಿಗಿಂತ ಭಿನ್ನವಾಗಿ ಜೀವಿಸಿದರು ಅನ್ನುವುದು ಸರಿಯಾದ ಮತೇನೋ. ಮೂಡಿಗೆರೆಯಲ್ಲಿ ಇದ್ದು ಪರಿಸರದೊಂದಿಗೆ ಒಂದಾಗಿ ಸಾಹಿತ್ಯವನ್ನಲ್ಲದೇ ಅನೇಕ ಆಸಕ್ತಿಗಳನ್ನು ಬೆಳೆಸಿಕೊಂಡಿದ್ದ ಅವರು ಯಾವ ಗುಂಪಿಗೂ ಸೇರಲಿಲ್ಲ. ಒಂದಿಷ್ಟು ಕಾಲ ಲಂಕೇಶ್ ಜೊತೆ ಇದ್ದಂತೆ ಕಂಡರೂ ಇರಲಿಲ್ಲ. ಅವರ ಕಥಾಸಾಹಿತ್ಯ ಕಾದಂಬರಿಗಳು ಎಷ್ಟು ಕನ್ನಡಕ್ಕೆ ಮುಖ್ಯವೋ, ಪರಿಸರದ ಬಗೆಗಿನ ಅವರ ಲೇಖನಗಳು, ಅವರ ಪ್ರಕಾಶನ ಕಾರ್ಯ, ಅವರ ಫೊಟೊಗ್ರಫಿ ಕೂಡಾ ಅಷ್ಟೇ ಮುಖ್ಯ.. ಅವರ ಸಾಹಿತ್ಯವನ್ನು ಅದ್ಭುತವಾಗಿ ದೃಶ್ಯಮಾಧ್ಯಮಕ್ಕೆ ಇಳಿಸಲು ಸಾಧ್ಯವಾಗುತ್ತಿದ್ದದ್ದು ಬಹುಶಃ ಕಾಸರವಳ್ಳಿಗೆ ಮಾತ್ರ. ತಬರನ ಕಥೆಯನ್ನು ನಾವು ಓದಿದರೆ ದೃಶ್ಯ ಮಾಧ್ಯಮದ ನಿಟ್ಟಿನಿಂದ ಅದು ನಿಜಕ್ಕೂ ಒಂದು ಸಾಧಾರಣ ಕಥೆ. ಆದರೆ ಕಾಸರವಳ್ಳಿ ಕೈಯಲ್ಲಿ ಅದು ಒಂದು ಅದ್ಭುತ ಚಿತ್ರವಾಗಿ ಮಾರ್ಪಾಡಾಗಿದ್ದಕ್ಕೆ ಕಾಸರವಳ್ಳಿಯ ಸೃಜನಶೀಲತೆ ಎಷ್ಟು ಕಾರಣವೋ, ಅಷ್ಟೇ ತೇಜಸ್ವಿಯವರ ಇತರ ಕಥೆಗಳು ಅನ್ನಬೇಕು. ಹಾಗೆ ನೋಡಿದರೆ ತಬರನ ಕಥೆಯಲ್ಲಿ ತುಕ್ಕೋಜಿ ಕಥೆಯ ಎಷ್ಟೊಂದು ಅಂಶಗಳಿವೆ! ಮೊದಮೊದಲ ಕಥೆಗಳಲ್ಲಿ ತೇಜಸ್ವಿ ನವ್ಯ ರಂತೆ ಕಂಡರೂ ಆ ನಂತರದ ಕಥೆಗಳು ಯಾವ ಪಂಥಕ್ಕೂ ಸೇರಿಲ್ಲವೆಂಬಂತೆ ತಮ್ಮ ದಾರಿಯನ್ನೇ ಪಡೆದವು. ಬಹುಶಃ ಕನ್ನಡದಲ್ಲಿ ಪರಿಸರದ ಬಗ್ಗೆ ಪ್ರಜ್ಞೆಯನ್ನು ಮೊದಲಬಾರಿಗೆ ತಂದವರೇ ತೇಜಸ್ವಿ ಅಂತ ನನಗನ್ನಿಸುತ್ತದೆ. ಕರ್ವಾಲೋ ಕನ್ನಡದ ಅತ್ಯುತ್ತಮ ಕಾದಂಬರಿಗಳಲ್ಲಿ ಒಂದು ಅಂತ ಅನೇಕ ವಿಮರ್ಶಕರು ಗುರುತಿಸಿದ್ದಾರೆ. ಆದರೆ ಕರ್ವಾಲೋವನ್ನು ಇಂಗ್ಲೀಷ್‌ನಲ್ಲಿ ಓದಿದಾಗ ನನಗ ಸಾಕಷ್ಟು ನಿರಾಸೆಯಾಯಿತು. ಅವರ ಚಿದಂಬರ ರಹಸ್ಯ ಕಾದಂಬರಿಗೆ ಸಿಗಬೇಕಾಗಿದ್ದ ಮಾನ್ಯತೆಯೆಲ್ಲಾ ಕರ್ವಾಲೋಗೆ ಸಿಕ್ಕಿಬಿಟ್ಟಿತೇನೋ. ತೇಜಸ್ವಿ ತಮ್ಮ ಅದ್ಭುತ ಸಾಹಿತ್ಯದಿಂದಾಗಿ ನಮ್ಮ ನಡುವೆ ಇದ್ದಾರೆ. ಅವರು ಕುವೆಂಪು ಮತ್ತು ಕಾರಂತರನ್ನು ಒಳಗೊಂಡ ಲೇಖಕರು ಅಂತ ಅನಂತಮೂರ್ತಿ ಹೇಳಿದರಂತೆ. ನನಗೇನೋ ಅವರಲ್ಲಿ ಕುವೆಂಪುಗಿಂತ ಕಾರಂತರೆ.. ಅದರಲ್ಲೂ ವಿಕಸಿತ ಕಾರಂತರೇ ಕಾಣುತ್ತಾರೆ. ವಿಕಸಿತ ಕಾರಂತರು ಅನ್ನುವುದಕ್ಕೆ ಒಂದೇ ಕಾರಣ.. ತೇಜಸ್ವಿಯವರ ಭಾಷೆ ಮತ್ತು ಕಥನಕಲೆ ಹೆಚ್ಚು ಎಂಗೇಜಿಂಗ್ ಆಗಿ ಇರುತ್ತಿತ್ತು. ಕುವೆಂಪು ಅವರಿಗೆ ಪುಟ್ಟಪ್ಪ ಅನ್ನುವ ಪುಟ್ಟ ಹೆಸರಿದ್ದರೂ ಅವರು ಅದನ್ನು ದೊಡ್ಡಹೆಸರನ್ನಾಗಿ ಮಾಡಿಕೊಂಡರು. ಆದರೆ ತಮ್ಮ ಮಕ್ಕಳಿಗೆ ಪುಟ್ಟ ಹೆಸರಿನ ರಿಸ್ಕ್ ಬೇಡವೆಂದೋ ಏನೋ ಇಬ್ಬರಿಗೂ ದೊಡ್ಡಹೆಸರುಗಳನ್ನೇ ಇಟ್ಟರು.. ಕೋಕಿಲೋದಯಚೈತ್ರ ಮತ್ತು ಪೂರ್ಣಚಂದ್ರತೇಜಸ್ವಿ. [he has not named them, he has sentenced them… for life ಅಂತ ವೈಎನ್‌ಕೆ ಹೇಳಿದ್ದು ಇಲ್ಲಿ ನೆನಪಾಗುತ್ತಿದೆ]. ಆದರೆ ಪೂರ್ಣಚಂದ್ರತೇಜಸ್ವಿ ತಮ್ಮ ತಂದೆ ಕೊಟ್ಟ ದೊಡ್ಡ ಹೆಸರನ್ನು ಉಳಿಸಿಕೊಂಡರು, ಬೆಳೆಸಿಕೊಂಡರು. ಗಿಡಮರಗಳ ಮರೆಯಲ್ಲಿ.. ಇಷ್ಟು ದಿನವೂ ಕಾಣದೇ ನಮ್ಮನ್ನೆಲ್ಲಾ ಹುರಿದುಂಬಿಸುತ್ತಾ, ಪ್ರೇರೇಪಿಸುತ್ತಾ, ಸ್ಫೂರ್ತಿ ನೀಡುತ್ತಾ ಇದ್ದ ತೇಜಸ್ವಿ ಆ ಕೆಲಸವನ್ನು ಮುಂದುವರೆಸುತ್ತಿದ್ದಾರೆ. ತೇಜಸ್ವಿ ಇದ್ದಾರೆ.  ]]>

‍ಲೇಖಕರು G

September 5, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೇವನೂರು ನಾಪತ್ತೆ…

ದೇವನೂರು ನಾಪತ್ತೆ…

ಹೌದು, ಪ್ರಚಾರ ಎಂದರೆ ಅವರಿಗೆ ಮುಜುಗರ! ಅಂಶಿ ಪ್ರಸನ್ನಕುಮಾರ್ ಇದ್ದಕ್ಕಿದ್ದಂತೆ ನಾಪತ್ತೆಯಾಗುವ ಹಲವು ಸಾಹಿತಿಗಳನ್ನು ಜಗತ್ತು ಕಂಡಿದೆ. ಏನೋ...

ತೇಜಸ್ವಿ ಜೀಪು

ತೇಜಸ್ವಿ ಜೀಪಿನಲ್ಲಿ ಸವಾರಿ ಚಿನ್ನಸ್ವಾಮಿ ವಡ್ಡಗೆರೆ  ಇದು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು ಬಳಸುತ್ತಿದ್ದ ಜೀಪು. ಈಗ ಆ ಜೀಪು ತೇಜಸ್ವಿ...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: