ತೇಜಸ್ವಿ ಎಂಬ ‘ತೇಜಪ್ಪ’

ಶ್ವೇತಾರಾಣಿ. ಹೆಚ್

ದುರಿತಕಾಲದಲ್ಲಿ ಸಿಗುವ ಸಮಾಧಾನಕ್ಕೆ ಏನೆನ್ನಬೇಕು ? ಅವರೊಂದು ವಿಸ್ಮಯ.. ತೇಜಸ್ವಿಯ ಮಾಯಲೋಕಕ್ಕೆ ನಾನು ಪ್ರವೇಶ ಪಡೆದದ್ದು ಪದವಿ ಓದುವಾಗ. ಆಗಷ್ಟೇ ತೇಜಸ್ವಿ ಬರಹಗಳ ಓದಿನ ರುಚಿಗೆ ಮನಸೋತು ಹೋಗಿದ್ದೆ. ಇನ್ನು ಲೇಖಕರನ್ನು ಕಾಣುವ ತವಕ ಪ್ರಾರಂಭವಾಗುವ ಮುನ್ನವೇ ಹೇಳದೆ ಕೇಳದೆ ಬಿರಿಯಾನಿ ತಂದಿಟ್ಟು ತಿನ್ನದೆ ಎದ್ದು ಹೋಗಿದ್ದರು.

ನ್ಯೂಸ್ ಚಾನೆಲ್ ಗಳಲ್ಲಿ, ಕುಬಿ – ಇಯಾಲ, ಯಮಳ ಪ್ರಶ್ನೆಗಳ ಬ್ರೇಕಿಂಗ್ ಟ್ಯಾಗ್ ಲೈನ್ ಗಳ ಸುರಿಮಳೆ. ಅಂದಿಗೆ ಮೊದಲಾದ ತೇಜಸ್ವಿ ಬಗೆಗಿನ ಮೋಹ, ವ್ಯಾಮೋಹ ಇಂದಿಗೂ ಹಾಗೆ ಉಳಿದಿದೆ. ಯಾರಾದರೂ ತೇಜಸ್ವಿ ಸಾಹಿತ್ಯದ ಬಗ್ಗೆ ಮಾತು ಪ್ರಾರಂಭಿಸಿದರೆ ಸಾಕು ಮೈಯೆಲ್ಲಾ ಕಿವಿಯಾಗುತ್ತದೆ. ಮೂಕವಿಸ್ಮಿತೆಯಾಗುವ ಸರದಿ ನನ್ನದು.

ಕಳೆದ ಮೂರು ತಿಂಗಳ ಕೆಳಗೆ ಗಂಡನಿಗೆ ಕೊರೋನಾ ವರದಿ ಪಾಸಿಟಿವ್ ಎಂದು ಬಂದಾಗ ನಾನು ನನ್ನ 5 ವರ್ಷದ ಮಗ ಇಬ್ಬರೂ ಪರೀಕ್ಷೆಗೆ ಒಳಗಾದೆವು.. ಮಗನಿಗೆ ಯಾವುದೇ ಲಕ್ಷಣಗಳಿಲ್ಲದಿದ್ದರೂ ಪಾಸಿಟಿವ್ ಎಂದದ್ದು ನನಗೆ ನುಂಗಲಾರದ ತುತ್ತಾಗಿದ್ದು.

ಮೊದಲೆ ಕರೋನಾ ಕರೋನಾ ಎಂಬ ಭಯಕ್ಕೆ ಅರ್ಧ ಹಣ್ಣಾಗಿದ್ದ ಪರಿಸ್ಥಿತಿ, ಮನೆಯಲ್ಲಿಯೇ ಐಸೋಲೆಟ್ ಆಗಿರುವ ಆ ಮುಗ್ಧ ಕಂದನಿಗೆ ಕರೋನಾವೆಂದರೆ ಭೀಕರ ಭೂತದ ಕಲ್ಪನೆ. ಹೀಗಿರುವಾಗ ಅವನಿಗೆ ಸತ್ಯ ತಿಳಿಸದೆ ದೈಹಿಕ ಅಂತರ ಕಾಪಾಡಿಕೊಳ್ಳಬೇಕಾದ ಕಾಯಕ ನನ್ನದು.

ಇದರ ನಡುವೆ ತಾಸಿಗೊಂದು, ಅರ್ಧ ತಾಸಿಗೊಂದರಂತೆ ಪೋನ್ ಕರೆಗಳು. ಒಮ್ಮೆ ಡಾಕ್ಟರ್, ಮತ್ತೊಮ್ಮೆ ನಗರಸಭೆ ಸಿಬ್ಬಂದಿಗಳು, ಮಗದೊಮ್ಮೆ ಮಾಹಿತಿ ಕಲೆಹಾಕುವ ಕೇಂದ್ರ ಸರ್ಕಾರದ ಸಿಬ್ಬಂದಿಗಳು ಕೇಳುವ ಪ್ರಶ್ನೆಗಳಿಗೆ ಹರುಕು ಮುರುಕು ಹಿಂದಿ ಇಂಗ್ಲೀಷ್ ನಲ್ಲಿ ಸಂಭಾಳಿಸುವಲ್ಲಿ ಹೈರಾಣವಾಗಿದ್ದೆ.

ಮಗುವಿಗೆ ಕರೋನಾ ಎಂದರೆ ಹಿರಿಜೀವಗಳು ನಲುಗುತ್ತವೆ. ಅವರಿಗೂ ವಿಷಯ ತಿಳಿಸದೆ ಸಂಭಾಳಿಸುವುದು, ದಿನಬಳಕೆಯ ವಸ್ತುಗಳ ಸ್ಯಾನಿಟೈಸ್ ಮಾಡುವುದು, ಸಮಯಕ್ಕೆ ಸರಿಯಾಗಿ ಇಬ್ಬರಿಗೂ ವೈದ್ಯರು ಹೇಳಿದ ಆಹಾರ, ಮನೆಯ ಸ್ವಚ್ಚತೆ, ಅವರ ದೇಹದ ಉಷ್ಣತೆ ಮತ್ತು ಆಮ್ಲಜನಕ ಪರೀಕ್ಷೆಗಳ ದಾಖಲಾತಿ ಇವುಗಳಲ್ಲಿ ದಿನಕಳೆಯುತ್ತಿದ್ದರೂ ಮನದ ಆತಂಕ ದೂರ ಮಾಡಲು ನೆರವಾದದ್ದು ಮಾತ್ರ ತೇಜಸ್ವಿಯ ಬರಹಗಳು.

ಮಗನಿಗೆ ಎರಡೊತ್ತು ನಿದ್ದೆ ಮಾಡಿಸಬೇಕು. ಮಧ್ಯಾಹ್ನ ನಿದ್ದೆ ತಪ್ಪಿ ಹೋಗಿದೆ. ಕಥೆ ಹೇಳದಿದ್ದರೆ ಮಲಗಲೊಲ್ಲ. ದಿನವೂ ಹೊಸ ಕಥೆಯೇ ಆಗಬೇಕು. ಜನಪದ ಕಥೆಗಳ ಖಜಾನೆ ಖಾಲಿ ಆಯ್ತು. ಆಗ ನಾನು ಆಯ್ದುಕೊಂಡದ್ದು ‘ಕರ್ವಾಲೋ’. ಕಥೆ ಹೇಳುವಾಗ ಮಗನ ಕಣ್ಣಲ್ಲಿನ ಮಿಂಚು ಹೇಳತೀರದು. ರೈತನಾಗಿ ಕೆಸರಲ್ಲಿ ಕೆಲಸ ಮಾಡಿ ಕೆಸರು ಗುಳ್ಳೆನ್ನು ಲೆಕ್ಕಿಸದೆ ಓಡಾಡುವ, ಪಕ್ಷಿ ಪ್ರೇಮಿಯಾಗಿ ಅವುಗಳ ಬಗ್ಗೆ ತಿಳಿಯುವ ಕುತೂಹಲ ತೋರುತ್ತಾ ಮಗಳೊಂದಿಗೆ ಮಗುವಾಗುವ ತೇಜಸ್ವಿ ನನ್ನ ಮಗನ ಪಾಲಿಗೆ ತೇಜಪ್ಪ.

ತೇಜಪ್ಪನ ಮಗಳು ಈಗಲೂ ಅವನದೇ ವಯಸ್ಸಿನ ಹುಡುಗಿ. ಪ್ರಕೃತಿ ಬಗ್ಗೆ ತೇಜಸ್ವಿ ತೋರುವ ಕೌತುಕ ಇವನದೂ ಕೂಡ, ತೇಜಪ್ಪನ ಬಗ್ಗೆ ನನ್ನ ಮಗ ಆಗಾಗ ನಡುವಲ್ಲಿ ಅವನ ಪುಟ್ಟ ವಿಮರ್ಶೆ ಕೂಡ ಸೇರಿಸುವ.

ಮುಂದಿನ ತಲೆಮಾರಿಗೆ ತೇಜಸ್ವಿಯನ್ನು ದಾಟಿಸಬೇಕೆಂಬ ನನ್ನ ಹಂಬಲ ಫಲಿಸಿತು. ತೇಜಸ್ವಿ ಬಗ್ಗೆ , ಅವರ ಸಾಹಿತ್ಯದ ಬಗ್ಗೆ ತರಗತಿಗಳಲ್ಲಷ್ಟೆ ಮಾತನಾಡುವ ನನ್ನ ತೀರದ ಕುತೂಹಲಕ್ಕೆ ಈಗ ನನ್ನ ಮಗನೂ ಸೇರ್ಪಡೆಯಾಗಿದ್ದಾನೆ.

‍ಲೇಖಕರು Avadhi

December 14, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಬರೆದ ಬೆಳಕಾಗುವ ಕಥೆಗಳು

ಸುಧಾ ಆಡುಕಳ ಕಥೆಗಳನ್ನು ಹುಡುಕಿಕೊಂಡು ಹೀಗೆ ಸಾಗುವುದು ಇತ್ತೀಚಿಗೆ ನನ್ನ ರೂಢಿಯೇ ಆಗಿ ಹೋಗಿದೆ. ಕಥೆಯ ಹುಡುಕಾಟವೆಂದರೆ ಅದು ಬದುಕಿನ...

2 ಪ್ರತಿಕ್ರಿಯೆಗಳು

  1. ಮಲ್ಲಿಕಾ ಬಸವರಾಜು

    ಕೊರೋನಾ ತಂದಿಟ್ಟ ಅತಂಕದ ಪರಿಸ್ಥಿತಿ ಯನ್ನು ನಿಭಾಯಿಸುತ್ತಲೇ ,ಮುಂದಿನ ತಲೆಮಾರಿಗೆ ತೇಜಪ್ಪನನ್ನು ಸಮರ್ಥವಾಗಿ ದಾಟಿಸಿರುವಿರಿ ಶ್ವೇತಾ.

    ಪ್ರತಿಕ್ರಿಯೆ
  2. ಸಣ್ಣಮಾರಪ್ಪ

    ತೇಜಸ್ವಿಯವರ ಬರಹವೇ ಓದುಗರಿಗೆ ಚಂದ. ಅಂತ ಓದುಗರಿಗೆ ಅವರ ವೈಯಕ್ತಿಕ ಜೀವನದ ಬಗ್ಗೆ ತಿಳಿಯಲು ಎಲ್ಲರಿಗೂ ಕುತೂಹಲ. ಅದರಲ್ಲಿ ನಾನು ಸಹ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: