ತೇಜಸ್ವಿ ಕಥನ: "ಸಾರ್ ಬೆಂಗಳೂರಿಗೆ ಹೋಗಲಿಲ್ವೆ?"

ತೇಜಸ್ವಿ ಕಥನ-೩ ಪ್ರಸಾದ್ ರಕ್ಷಿದಿ

ತೇಜಸ್ವಿಯವರು ಈ ದಾರಿಯಲ್ಲಿ ಅನೇಕ ಬಾರಿ ಓಡಾಡಿದ್ದರೂ ನಮ್ಮೂರು ಬೆಳ್ಳೇಕೆರೆಗೆ (ಬೆಳ್ಳೇಕೆರೆ ಸಕಲೇಶಪುರ-ಮೂಡಿಗೆರೆ ರಸ್ತೆಯಲ್ಲಿ ಹತ್ತು ಕಿ.ಮೀ. ದೂರದಲ್ಲಿರುವ ಹಳ್ಳಿ) ಕಾರ್ಯಕ್ರಮವೊಂದಕ್ಕೆ ಪ್ರಥಮಬಾರಿಗೆ ಬಂದದ್ದು 1988 ರಲ್ಲಿ. ಆ ವೇಳೆಗಾಗಲೇ ಅವರು ‘ಚಿತ್ರಕೂಟ’ವನ್ನು ಬಿಟ್ಟು ಮೂಡಿಗೆರೆ ಹ್ಯಾಂಡ್ ಪೋಸ್ಟ್ ಹತ್ತಿರದ ‘ನಿರುತ್ತರ’ದಲ್ಲಿ ನೆಲೆಸಿದ್ದರು. ನಮ್ಮ ಗೆಳೆಯರ ಬಳಗ ಆವೇಳೆಗಾಗಲೇ ಸುಮಾರು ಹತ್ತುವರ್ಷಗಳಿಂದ ಹಲವು ಚಳುವಳಿಗಳು, ಹೋರಾಟಗಳು, ಮತ್ತು ಕೆಲವು ವರ್ಷಗಳ ರಂಗ ಚಟುವಟಿಕೆಗಳನ್ನು ನಡೆಸಿದ್ದೆವಾದರೂ, ಆಗಷ್ಟೇ ಪ್ರಥಮ ಬಾರಿಗೆ ಒಂದು ರಂಗ ತರಬೇತಿ ಶಿಬಿರವನ್ನು ನಡೆಸುವ ಯೋಜನೆ ಹಾಕಿದ್ದೆವು. ಶಿಬಿರದ ನಿರ್ದೇಶಕರಾಗಿ ಮಂಡ್ಯ ರಮೇಶ್ ಮತ್ತು ಈಗ ರಂಗಾಯಣದಲ್ಲಿ ನಟರಾಗಿರುವ ಕೃಷ್ಣಕುಮಾರ್ ನಾರ್ಣಕಜೆ ಬರುವವರಿದ್ದರು. ಶಿಬಿರದ ಉದ್ಘಾಟನೆಗೆ ತೇಜಸ್ವಿಯವರನ್ನು ಆಹ್ವಾನಿಸುವುದೆಂದು ತೀರ್ಮಾನವಾಯ್ತು. ಆದರೆ ನಮಗ್ಯಾರಿಗೂ ಅವರಲ್ಲಿ ನೇರವಾಗಿ ಮಾತನಾಡಿ ಆಹ್ವಾನಿಸುವಷ್ಟು ಪರಿಚಯ-ಧೈರ್ಯ ಎರಡೂ ಇರಲಿಲ್ಲ. ಆದ್ದರಿಂದ ತೇಜಸ್ವಿಯವರನ್ನು ಚೆನ್ನಾಗಿ ಪರಿಚಯವಿರುವ ಮೂಡಿಗೆರೆಯ ರೈತಸಂಘದ ನಮ್ಮ ಗೆಳೆಯರೊಬ್ಬರ ಸಹಾಯವನ್ನು ಕೇಳಿದೆವು. (ನಮ್ಮ ರಂಗತಂಡದ ಹಲವರು ರೈತಸಂಘದಲ್ಲಿದ್ದೆವು.) ಆದರೆ ಆ ಗೆಳೆಯರು “ತೇಜಸ್ವಿಯವರು ಹೇಳಿದ ಯಾವುದೋ ಕೆಲಸವನ್ನು ಒಪ್ಪಿಕೊಂಡು ಮಾಡದೆ ಈಗ ಅವರ ಎದುರಿಗೆ ಸಿಕ್ಕದೆ ಕದ್ದು ತಿರುಗುತ್ತಿದ್ದೇನೆ ನಾನು ಬರುವುದಿಲ್ಲ” ಎಂದರು!. ಆ ಸಮಯದಲ್ಲಿ ನಮ್ಮ ಬಳಗದ ಗೆಳೆಯ ರಿಚರ್ಡ್ ಲೋಬೊ ಬೆಳ್ಳೇಕೆರೆಯಲ್ಲಿ ಮಂಡಲ ಉಪಪ್ರಧಾನರಾಗಿದ್ದರು. ಅವರ ತಂದೆ ಜಾನ್ ಲೋಬೋರವರಿಗೆ ಹಿಂದೆ ಮೂಡಿಗೆರೆಯ ಪಕ್ಕದ ಜನ್ನಾಪುರದಲ್ಲಿ ಕಾಫಿತೋಟವಿದ್ದು ತೇಜಸ್ವಿಯವರ ನೆರೆಯವರಾಗಿದ್ದರು. ಮೂಡಿಗೆರೆಯ ಚರ್ಚಿನ ಪಾದ್ರಿಯೊಬ್ಬರು ಆಗಾಗ ಲೋಬೋರವರ ಮನೆಗೆ ಭೇಟಿ ನೀಡುತ್ತಿದ್ದರಂತೆ. ಆ ಪಾದ್ರಿ ಬಿಳಿಯ ಜುಬ್ಬಾ ಪೈಜಾಮ ಧರಿಸುತ್ತಿದ್ದು ಬರುವಾಗಲೆಲ್ಲ ಮಕ್ಕಳಿಗೆಂದು ಚಾಕಲೇಟ್ ತರುತ್ತಿದ್ದರಂತೆ. ಅವರನ್ನು ಕಂಡೊಡನೆಯೇ ರಿಚರ್ಡ್ ಮತ್ತು ಅವರ ಅಣ್ಣ ತಮ್ಮಂದಿರೆಲ್ಲ ಅವರ ಸುತ್ತ ಸೇರುತ್ತಿದ್ದರು. ಪಕ್ಕದಲ್ಲೇ ತೋಟವನ್ನು ಹೊಂದಿದ್ದ ತೇಜಸ್ವಿಯವರು ಕೂಡಾ ಕೆಲವುಸಾರಿ ಜುಬ್ಬಾ ಪೈಜಾಮ ಧರಿಸುತ್ತಿದ್ದರಂತೆ. ಅದರಿಂದ ತೇಜಸ್ವಿಯವರನ್ನು ‘ಇವರೂ ಒಬ್ಬರು ಪಾದ್ರಿಯಿರಬೇಕೆಂದುಕೊಂಡಿದ್ದ ರಿಚರ್ಡ್ರ ಅಣ್ಣ ತಮ್ಮಂದಿರು (ಆಗ ಇವರೆಲ್ಲ ಶಾಲೆಗೆ ಹೋಗುವ ಹುಡುಗರು)ಚಾಕಲೇಟ್ ಸಿಕ್ಕೀತೆಂಬ ಆಸೆಯಿಂದ ತೇಜಸ್ವಿಯವರು ಬರುವ ದಾರಿಯಲ್ಲಿ ಕಾದು ನಿಂತು, ಅವರ ಮುಂದೆ ಸುಳಿದಾಡುತ್ತಿದ್ದರಂತೆ!. ಈ ನೆನಪಿನ ಎಳೆಯನ್ನೇ ಹಿಡಿದು ರಿಚರ್ಡ್ ಮತ್ತು ನಾನು ಮೂಡಿಗೆರೆಗೆ ತೇಜಸ್ವಿಯವರ ಮನೆಗೆ ಹೋದೆವು. ರಿಚರ್ಡ್ ತಮ್ಮ ಪರಿಚಯ ಹೇಳಿಕೊಂಡೊಡನೆ ತೇಜಸ್ವಿಯವರು ಜಾನ್ ಲೋಬೋರವರನ್ನು ನೆನಪಿಸಿಕೊಂಡು ತುಂಬ ಮಾತನಾಡಿದರು ಮನೆಮಂದಿಯ ಬಗ್ಗೆಯೆಲ್ಲ ಮಾತುಕತೆ ಸಾಗಿತು. ನಾನು ಹೇಗಾದರೂ ಅವರನ್ನು ಮಾತಿಗೆ ಎಳೆಯುವ ಉದ್ದೇಶದಿಂದ ಮಧ್ಯೆ ಬಾಯಿ ಹಾಕಿ ತೋಟ ಹೇಗಿದೆ ಸಾರ್ ಎಂದೆ. ಈಗ ಬರ್ತಾ ದಾರೀಲಿ ನೋಡ್ಲಿಲ್ವೇನ್ರಿ, ಗಿಡ ಹಾಕಿ ಎಂಟು ವರ್ಷ ಆಯ್ತು, ಈಗ ನೋಡಿದ್ರೆ ಜಾಡ್ಸಿ ಒದ್ದು ಬಿಡಬೇಕು ಹಂಗಿದೆ! ಎಂದರು. ನಾನು ತೆಪ್ಪಗಾದೆ. ಲೋಬೋ ಮಾತು ಮುಂದುವರೆಸಿದರು. “ನೀವೆಲ್ಲ ಹುಡುಗ್ರು ಬೆಳ್ದಿದ್ದೀರಿ ನಾನು ಗುರುತು ಹಿಡಿಯೋಕ್ಕಾಗಲ್ಲ ಸಧ್ಯ ನೀನು ನೆನಪಿಟ್ಕೊಂಡಿದ್ದೀಯಲ್ಲ! ಮತ್ತೆ ಏನ್ ವಿಷ್ಯ” ಎಂದರು. ಲೋಬೋ ನನ್ನತ್ತ ನೋಡಿದರು. ನಾನು ಮೆಲ್ಲನೆ ನಮ್ಮ ರಂಗತರಬೇತಿ ಶಿಬಿರದ ವಿಚಾರವಾಗಿ ಮುದ್ರಿಸಿಕೊಂಡಿದ್ದ ಸಣ್ಣ ಕರಪತ್ರವೊಂದನ್ನು ಅವರಿಗೆ ಕೊಟ್ಟೆ. ಅದನ್ನು ತೆಗೆದುಕೊಂಡು ಸ್ವಲ್ಪ ಹುಬ್ಬುಗಂಟಿಕ್ಕಿ ನನ್ನನ್ನೇ ನೋಡಿದರು. ನೋಡಿದ ರೀತಿ ಚಂದಾ ವಸೂಲಿಗೆ ಬರುವವರನ್ನು ನೋಡಿದಂತಿತ್ತು. ಕೂಡಲೇ ನಾನು ಗಾಬರಿಯಿಂದ ಇದೊಂದು ಕಾರ್ಯಕ್ರಮ ಮಾಡ್ತಾ ಇದ್ದೀವಿ ನೀವು ಬರ್ಬೇಕು ಎಂದೆ. ನಿಧಾನವಾಗಿ ಕರಪತ್ರವನ್ನು ಓದಿದರು. ನಿಧಾನವಾಗಿ ಮುಖಚಹರೆ ಬದಲಾಯಿತು. ಈ ಕಾಡಲ್ಲಿ ಕೂತ್ಕೊಂಡು ಇದೆಲ್ಲ ಮಾಡೋಕೆ ನಿಮ್ಗೆ ಹೆಂಗ್ ಹೊಳೀತು ಮಾರಾಯ್ರ, ಎಂದ್ ಹೇಳು ಬರ್ತೀನಿ ಎಂದರು. ಸಾರ್ ನೀವು ಬರುವ ವ್ಯವಸ್ಥೆ ಎಂದೆ ಅವಸರದಿಂದ. ಎಂಥದ್ದೂ ಬೇಡ ನನ್ ಸ್ಕೂಟರಿದೆ ಬರ್ತೀನಿ ಕಾರ್ಯಕ್ರಮದ ದಿನಾಂಕ ಸಮಯವನ್ನೆಲ್ಲ ತಿಳಿಸಿದ ರಿಚರ್ಡ್ ತೇಜಸ್ವಿಯವರನ್ನು ಕಾರ್ಯಕ್ರಮದ ದಿನ ರಾತ್ರಿ ಊಟಕ್ಕೆ ಅವರಲ್ಲಿಗೆ ಬರುವಂತೆ ಆಹ್ವಾನಿಸಿದರು. ತೇಜಸ್ವಿಯವರನ್ನು ಒಪ್ಪಿಸಿದ ಖುಷಿಯಲ್ಲಿ ಊರಿಗೆ ಬಂದೆವು. ಉದ್ಘಾಟನಾ ಸಮಾರಂಭದ ಸಿದ್ದತೆಗಳು ನಡೆದವು ಮತ್ತು ಅದಕ್ಕೊಂದು ಕರಪತ್ರವೂ ತಯಾರಾಯಿತು.

ಚಿತ್ರ: ಪ್ರಭು ಕೆ ಎನ್

1988 ನವೆಂಬರ್ ಒಂದರಂದು-ಕನ್ನಡ ರಾಜ್ಯೋತ್ಸವದ ದಿನ ಸಂಜೆ ಐದು ಗಂಟೆಗೆ ರಂಗ ತರಬೇತಿ ಶಿಬಿರದ ಉದ್ಘಾಟನೆಯಾಗಲಿತ್ತು. ನಮ್ಮ ಗೆಳೆಯರ ಬಳಗವೆಲ್ಲ ಉತ್ಸಾಹದಿಂದ ಸೇರಿತ್ತು. ನಿರ್ದೇಶಕರುಗಳಾದ ಮಂಡ್ಯರಮೇಶ್ ಮತ್ತು ಕೃಷ್ಣಕುಮಾರ್ ಹಿಂದಿನ ದಿನವೇ ಬಂದಿದ್ದರು. ಸಂಜೆ ವೇಳೆಗೆ ಸಕಲೇಶಪುರದಿಂದ ಬಂದ ಕೆಲವರು ಗೆಳೆಯರು “ನಿಮಗೆ ಅಷ್ಟೂ ಬುದ್ದಿ ಬೇಡ್ವಾ? ಅವರಿಗೆ ಇವತ್ತು ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಇದೆ. ಅವರೇನೋ ಮರ್ತು ನಿಮಗೆ ಡೇಟ್ ಕೊಟ್ಟಿದ್ದಾರೆ. ನೀವು ಫೋನ್ ಮಾಡಿ ವಿಚಾರಿಸೋದಲ್ವ? ಎಂದು ಬೈದರು. ಫೋನ್ ಮಾಡಿ ಕೇಳಲು ಆಗ ನಮ್ಮೂರಲ್ಲಿ ಫೋನೇ ಇರಲಿಲ್ಲ. ದೂರದ ಕೆಲವು ದೊಡ್ಡ ಕಾಫಿ ತೋಟಗಳಲ್ಲಿ ಮಾತ್ರ ಫೋನಿತ್ತು ಅಥವಾ ನಾವೇ ಮೂಡಿಗೆರೆಗೆ ಹೋಗಿ ವಿಚಾರಿಸ ಬೇಕಿತ್ತು ಆದರೆ ಮೂಡಿಗೆರೆ ಇಲ್ಲಿಂದ 26 ಕಿ ಮೀ ದೂರವಿದೆ. ತೇಜಸ್ವಿಯವರ ಆಸೆ ಬಿಟ್ಟು ಊರಲ್ಲೇ ಯಾರಾದರೂ ಹಿರಿಯರಿಂದ ಉದ್ಘಾಟನೆ ಮಾಡಿಸುವುದೆಂದು ತೀರ್ಮಾನಿಸಿ ಹಿರಿಯರೊಬ್ಬರನ್ನು ಹುಡುಕಿ ಕಾರ್ಯಕ್ರಮ ಉದ್ಘಾಟನೆಗೆ ಅವರನ್ನು ಒಪ್ಪಿಸಿ ಕರೆತಂದೂ ಆಯ್ತು. ಸಂಜೆ ಐದು ಗಂಟೆಗೆ ಸರಿಯಾಗಿ ತೇಜಸ್ವಿಯವರು ಸ್ಕೂಟರಿನಲ್ಲಿ ಹಾಜರ್! ಜೊತೆಯಲ್ಲಿ ಕೆಂಜಿಗೆ ಪ್ರದೀಪ್ ಕೂಡ ಇದ್ದರು. “ಸಾರ್ ಬೆಂಗಳೂರಿಗೆ ಹೋಗಲಿಲ್ವೆ?” ಆಶ್ಚರ್ಯ ಮತ್ತು ಸಂತೋಷದಿಂದ ನಾವೆಲ್ಲ ಒಟ್ಟಿಗೆ ಕಿರುಚಿಕೊಂಡೆವು. “ಯಾರಿಗೆ ಬೇಕು ಮಾರಾಯ್ರ, ಅಲ್ಲಿ ವೇದಿಕೆ ಮೇಲೆ ಕೂರ್ಸಿ ವಾಚಾಮಗೋಚರವಾಗಿ ಹೊಗಳೋದು ತಡ್ಕೊಳ್ಳೋಕ್ಕಾಗಲ್ಲ ಇಲ್ಲೇ ಇಷ್ಟ ಆಯ್ತು ಬಂದ್ ಬಿಟ್ಟೆ” ಎಂದರು! ಶಿಬಿರವನ್ನು ಉದ್ಘಾಟಿಸಿ, ರಂಗಶಿಬಿರದ ಅಗತ್ಯದ ಬಗ್ಗೆ ಹಾಗೂ ಮಲೆನಾಡಿನಲ್ಲಿ ರಂಗ ಚಟುವಟಿಕೆಗಳನ್ನು ನಡೆಸಲು ಇರುವ ಕಷ್ಟಗಳ ಬಗ್ಗೆ ಮಾತಾಡಿದರು ಅಂದು  ಮಕ್ಕಳಿಂದ ಒಂದು ನಾಟಕ ಪ್ರದರ್ಶನವಿತ್ತು. ನಾಟಕದ ವಸ್ತುವೂ ಕಾಡು, ಪ್ರಾಣಿಗಳು ಮತ್ತು ಪರಿಸರದ ಬಗ್ಗೆಯೇ ಇತ್ತು. ಮಕ್ಕಳ ಅಭಿನಯವನ್ನು ಮೆಚ್ಚಿಕೊಂಡು ಈ ಕೆಲಸ ಮುಂದುವರಿಸಿ ಮಕ್ಕಳಿಗೆ ಆಸಕ್ತಿ ಮೂಡಿಸೋದು ಬಹಳ ಮುಖ್ಯ ಎಂದು ಹೇಳಿ, ನಮ್ಮೆಲ್ಲರ ಬೆನ್ನು ತಟ್ಟಿ ಹೋದರು.  ]]>

‍ಲೇಖಕರು G

September 8, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ತೇಜಸ್ವಿ ಜೀಪು

ತೇಜಸ್ವಿ ಜೀಪಿನಲ್ಲಿ ಸವಾರಿ ಚಿನ್ನಸ್ವಾಮಿ ವಡ್ಡಗೆರೆ  ಇದು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು ಬಳಸುತ್ತಿದ್ದ ಜೀಪು. ಈಗ ಆ ಜೀಪು ತೇಜಸ್ವಿ...

ಅನಂತಮೂರ್ತಿಯ ತೇಜಸ್ವಿ

ಯು ಆರ್ ಅನಂತಮೂರ್ತಿ ತೇಜಸ್ವಿ, ಅವರ ಕಾಲೇಜು ದಿನಗಳಿಂದಲೂ ನನಗೆ ಪರಿಚಯ, ನಾನಾಗ ಶಿವಮೊಗ್ಗದಲ್ಲಿ ಮೇಷ್ಟ್ರು, ವಯಸ್ಸು ಇಪ್ಪತ್ತಮೂರೋ,...

5 ಪ್ರತಿಕ್ರಿಯೆಗಳು

 1. Dr.B.R.Satyanarayana

  ತೇಜಸ್ವಿ ಇಷ್ಟವಾಗುವುದು, ಆಸಕ್ತಿ ಮೂಡಿಸುವುದು, ವಿಸ್ಮಯವಾಗುವುದು ಇಂತಹ ನಡವಳಿಕೆಯಿಂದಲೇ. ವಿಧಾನಸೌಧ, ಕನ್ನಡಭವನದ ಸುತ್ತಾ ಠಳಾಯಿಸುತ್ತಾ ಪ್ರಶಸ್ತಿಗಳಿಗೆ ವಶೀಲಿಬಾಜಿ ಮಾಡುವ ಸಾಹಿತಿಗಳನ್ನು ನೋಡಿದಾಗ, ತೇಜಸ್ವಿಯವರ ಬದುಕು ಎಂತಹ ಮಹತ್ವಪೂರ್ಣವಾದುದು ಹಾಗೂ ಇಂದಿನ ತಲೆಮಾರಿನವರಿಗೆ ಭರವಸೆದಾಯಕವಾದುದು ಎಂಬುದು ಹೆಚ್ಚು ಮನದಟ್ಟಾಗುತ್ತದೆ.

  ಪ್ರತಿಕ್ರಿಯೆ
 2. shivu.k

  ರಾಜ್ಯೋತ್ಸವ ಪ್ರಶಸ್ತಿಯನ್ನು ತಪ್ಪಿಸಿಕೊಂಡು ಹಳ್ಳಿ ಕಾರ್ಯಕ್ರಮ ಭಾಗವಹಿಸುವ ತೇಜಸ್ವಿ ಈ ಕಾರಣಕ್ಕೆ ಇಷ್ಟವಾಗುತ್ತಾರೆ. ಮತ್ತು ಅವರ ಮಾತು ಕೂಡ..

  ಪ್ರತಿಕ್ರಿಯೆ
 3. bharathi

  ಅವರನ್ನ ಒಂದು ಸಲ ಭೇಟಿ ಮಾಡಬೇಕು ಅನ್ನೋ ಆಸೆ ಕನಸಾಗೇ ಉಳೀತು …

  ಪ್ರತಿಕ್ರಿಯೆ
 4. nempe devaraj

  tejasviyanta sahiti rajakaraniyagi,mantriyagi mukhya mantriyagi karnatakakke bandaga hogalubhatarella arabbii samudrakke beeluvudannu noodabekenisuttade aadare avarilla. tumba tumba yoochanege haccuva haleya nenapugalannu barahakke ilisida prasadge vndanegalu

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: