ತೊಮೆಯೆ ಎಂಬ ಶಾಲೆಯೂ, ತೊತ್ತೋ-ಚಾನ್ ಎಂಬ ಮುದ್ದು ಹುಡುಗಿಯೂ

ಎಂ ಆರ್ ಭಗವತಿ

ಅಲ್ಲಿ ಹುಟ್ಟುವ ಗಾಳಿಗೆ ಇನ್ನೊಂದು ಹೆಸರಿಡೋಣ

ಚಿತ್ರ: ಛಾಯಾ ಭಗವತಿ

ಆ ಮುನ್ನಿಗೆ, ಪುಟ್ಟಿಗೆ ಆ ದಿನ ಬೇಸರದ ಹಗಲು. ಅವಳ ಶಾಲೆ ಅವಳನ್ನು ಕೈಬಿಟ್ಟಿತ್ತು. ಅಮ್ಮನ ಕೈ ಹಿಡಿದು ನಡೆಯುತ್ತಿದ್ದ ಆ ಪುಟ್ಟಿಗೆ ಅದರ ಅರಿವೇ ಇಲ್ಲ. ಪಾಪ ಅವಳ ಅಮ್ಮನಿಗೆ ಬೇಸರ. ಅವರಿಗೆ ಅವಳ ತುಂಟಾಟ ಭಾರ (?) ಹೊರಲಾರದೆ ಶಾಲೆಯಿಂದ ಹೊರ ಹಾಕಿದ್ದರು. ಅವಳು ಮಾಡಿದ ಘೋರ ಅಪರಾಧವೆಂದರೆ: ತರಗತಿಯಲ್ಲಿ ಡೆಸ್ಕನ್ನು ತೆಗೆದು ಮುಚ್ಚುವುದು, ಬೀದಿ ಸಂಗೀತಗಾರ ಸಂಗೀತವನ್ನು ಕೇಳಲು ತರಗತಿಯ ಕಿಟಕಿಯ ಹತ್ತಿರ ನಿಲ್ಲುವುದು, ಗುಬ್ಬಚ್ಚಿಗಳ ಜೊತೆ ಮಾತುಕತೆ ಆಡಿದ್ದಕ್ಕೆ (ಇತ್ಯಾದಿ) ! ಈಗ ಅವಳ ಅಮ್ಮ ಅವಳನ್ನು ಬೇರೊಂದು ಶಾಲೆಗೆ ಸೇರಿಸಲು ಕರೆದುಕೊಂಡು ಹೋಗುತ್ತಿದ್ದಳು. ಆಮೇಲೆ ಅವಳ ಕೈ ಹಿಡಿದದ್ದು ತೊಮೆಯೆದ ಸುಂದರ ಪರಿಸರದಲ್ಲಿದ್ದ ಆ ಶಾಲೆ. ಕೊಬಯಾಶಿಯವರ ಕನಸಿನ ನಂದನವನದಂಥ ಶಾಲೆ. “ನೀನೀಗ ನಮ್ಮ ಶಾಲೆಯ ಹುಡುಗಿಯಾಗಿಬಿಟ್ಟೆ” ಎನ್ನುತ್ತಾ ಆ ಪುಟ್ಟಿಯೆಡೆಗೆ ಅಪ್ಯಾಯತೆಯಿಂದ ಕೈಚಾಚಿದ್ದು ಆ ಶಾಲೆಯ ಮುಖೋಪಾಧ್ಯಾಯರಾದ ಕೊಬಯಾಶಿ. ಅಲ್ಲಿಗೆ ಸೇರಿದಾಗಿನಿಂದ ಬೇರೆಯದೆ ಆದ ಲೋಕವನ್ನು ಕಂಡ ಪುಟ್ಟಿ ’ಕೆಟ್ಟ ಹುಡುಗಿ’ಯಾಗಿ ಉಳಿಯಲಿಲ್ಲ. ರೈಲು ಬಂಡಿಯಲ್ಲಿ ಪಾಠಗಳು ನಡೆಯುತ್ತಿದ್ದ ಆ ಶಾಲೆಯಲ್ಲಿ ಎಲ್ಲರು ಅವರವರಿಗೆ ಇಷ್ಟವಾದ ವಿಷಯವನ್ನು ಬೇಕಾದರು ಕಲಿಯಬಹುದಿತ್ತು. ಒಬ್ಬ ಚಿತ್ರ ಬಿಡಿಸುತ್ತಿದ್ದರೆ ಇನ್ನು ಕೆಲವರು ವ್ಯಾಯಾಮ ಮಾಡುತ್ತಿದ್ದರು. ಇನ್ನೊಬ್ಬಳು ಪುಟ್ಟಿ ಪುಸ್ತಕ ಓದಬಹುದು. ಈ ಬಗೆಯ ಕಲಿಕೆಯಿಂದ “ಉಪಾಧ್ಯಾಯರಿಗೆ ಮಕ್ಕಳು ಬೆಳೆಯುತ್ತಾ ಹೋದಂತೆ ಅವರ ನಿಜವಾದ ಆಸಕ್ತಿಗಳನ್ನು ಜೊತೆಗೆ ಅವರ ಆಲೋಚನಾ ಕ್ರಮ ಹಾಗು ವ್ಯಕ್ತಿತ್ವಗಳನ್ನು ಚೆನ್ನಾಗಿ ತಿಳಿದುಕೊಳ್ಳಲು ಸಹಾಯವಾಗುತ್ತದೆ. ಉಪಾಧ್ಯಾಯರಿಗೆ ತಮ್ಮ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಅರ್ಥಮಾಡಿಕೊಳ್ಳಲು ಇದೊಂದು ಉತ್ತಮ ಮಾರ್ಗ” ಎನ್ನುವ ಸದ್ದುದ್ದೇಶದಿಂದ ಕೂಡಿತ್ತು. ಮಕ್ಕಳ ಮನಸ್ಸನ್ನು ಅರಿತ ಶಾಲೆ ಅದು. ಊಟದ ಸರದಿ ಬಂದಾಗ ಅದನ್ನು ಕೂಡ ದಿನ ನಿತ್ಯದ ಕರ್ಮವೆಂಬಂತೆ ಆಗಗೊಡಲಿಲ್ಲ ಆ ಶಾಲೆಯ ಕೊಬಯಾಶಿಯವರ ಮನಸ್ಸು. ಊಟ ಮಾಡುವ ಪ್ರತಿ ಕ್ಷಣವನ್ನು ಮಕ್ಕಳು ಸಂತೋಷದಿಂದ ಅನುಭವಿಸುವಂತೆ ಏರ್ಪಡಿಸಿದ್ದರು. ಪ್ರತಿಯೊಬ್ಬ ಮಕ್ಕಳು “ಸ್ವಲ್ಪ ನೆಲದ್ದು, ಸ್ವಲ್ಪ ಜಲದ್ದು” ತರಬೇಕಾಗಿತ್ತು. (ಸಮತೋಲನ ಆಹಾರ ಸಿಗಬೇಕು ಎನ್ನುವ ಅರ್ಥದಲ್ಲಿ) ಅದರಂತೆ ಪುಟ್ಟಿಯೂ ಆ ದಿನ ಅಮ್ಮನಿಂದ ’ನೆಲದ್ದು, ಸ್ವಲ್ಪ ಜಲದ್ದು’ ಊಟ ಕಟ್ಟಿಸಿಕೊಂಡು ಹೋಗಿದ್ದಳು. ಪುಟ್ಟಿ ತಂದ ಊಟವನ್ನು ಎಲ್ಲರು ಇಷ್ಟಪಟ್ಟು ಹಂಚಿಕೊಂಡು ತಿಂದರು. ಅಮ್ಮ ರುಚಿಯಾಗಿ ಅಡುಗೆ ಮಾಡುತ್ತಾಳೆ ಎನ್ನುವುದು ಪುಟ್ಟಿಗೆ ಹೆಮ್ಮೆ. ರುಚಿಯ ತಾರತಮ್ಯ ಇಲ್ಲ ಅಲ್ಲಿ. ಬೆಳಕು ಎಷ್ಟು ಹೊತ್ತಿಗೆ ಆಗುವುದೋ, ನಾನು ಯಾವಾಗ ಆ ಶಾಲೆಗೆ ತಲುಪುವೆನೋ ಎನ್ನುವ ಕುತೂಹಲ ಹುಟ್ಟಿಸುವ, ’ವಿಸ್ಮಯ’ದ್ದು. ಏನನ್ನು ಮಾಡಿದರು ವಿಶೇಷವೆನ್ನುವಂತೆ ರೂಪುಗೊಳಿಸುವ ಶಾಲೆ ಅದು. ತೊಮೆಯೆದ ಕ್ರೀಡಾದಿನದಂದು ಅಟಗಳಲ್ಲಿ ಗೆದ್ದವರಿಗೆ ತರಕಾರಿಗಳ ಬಹುಮಾನ. ಆಟಗಳಾದರು ಎಂಥವು, ದಿನನಿತ್ಯ ಸಿಗುವ ಸಾಮಾನುಗಳಿಂದಲೇ ರೂಪಿಸಿದ್ದ ಆಟಗಳು. ಏನಾದರೊಂದು ಅಪಾಯ ತಂದುಕೊಳ್ಳುವುದು ತೊತ್ತೋ-ಚಾನಳಂಥ ತರಲೆ ತಿಮ್ಮಿಗೆ ಹೊಸದೇನು ಆಗಿರಲಿಲ್ಲ. ತನ್ನ ಮನೆಯ ನಾಯಿ ರಾಕಿಯೊಂದಿಗೆ ಉರುಳಾಟ, ಕಚ್ಚಾಟದ ಆಟವಾಡಲು ಹೋಗಿ ಕಿವಿ ಹರಿದುಕೊಂಡಿದ್ದಳು, ಮರಳು ಗುಪ್ಪೆಯೆಂದು ತಿಳಿದು ಜೇಡಿ ಮಣ್ಣಿನೊಳಗೆ ಎಗರಿ ಕುತ್ತಿಗೆಯವರೆಗು ಹೂತು ಹೋಗಿದ್ದವಳನ್ನು ಅಮ್ಮ ಬಂದು ಬಿಡಿಸಬೇಕಾಗಿತ್ತು. ಇನ್ನೆಂದೂ ಹಿಂದೆ ಮುಂದೆ ನೋಡದೆ ಎಲ್ಲಿಯೂ ಹಾರಕೂಡದೆಂದು ಅಮ್ಮ ತಾಕೀತು ಮಾಡಿದಳು. ಹಿಂದೊಮ್ಮೆ ರಿಪೇರಿಗೆಂದು ತೆಗೆದ ಕಕ್ಕಸ್ಸು ಗುಂಡಿಂiನ್ನು ವಾಸನೆ ಬಾರದಂತೆ ಪೇಪರು ಮುಚ್ಚಿದ್ದರಿಂದ ಅದನ್ನು ತಿಳಿಯದೆ ತೊತ್ತೋ-ಚಾನ್ ಪೇಪರಿನ ಮೇಲೆ ಜಿಗಿಯಲೆಂದು ಆ ಗುಂಡಿಗೆ ಹಾರಿದ್ದ ಪ್ರಸಂಗವಿತ್ತು! ಅದಕ್ಕೇ ಅವಳ ಅಮ್ಮ ಹಾಗೆ ಹಾರಕೂಡದೆಂದು ತಾಕೀತು ಮಾಡಿದ್ದು. ಅಮ್ಮನ ಮಾತಿಗೆ ತೊತ್ತೋ-ಚಾನ್ ಹೇಳಿದ್ದು: “ನಾನು ಪೇಪರು ಇಲ್ಲವೇ ಮರಳಿನ ಗುಪ್ಪೆಯ ಮೇಲೆ ಇನ್ನ್ನೆಂದಿಗೂ ಹಾರುವುದೇ ಇಲ್ಲ.”!! ಚಿಕ್ಕ ಪುಟ್ಟ ಸಂತೋಷಗಳನ್ನು, ಅದರಿಂದಾಗುವ ಮಹತ್ತರ ಅನುಭವಗಳನ್ನು ಪ್ರತಿನಿಧಿಸುತ್ತಾಳೆ ತೊತ್ತೋ-ಚಾನ್. ಎಲ್ಲ ಮಕ್ಕಳಂತೆ ಮಹತ್ವದೆನ್ನಿಸುವ ಕೆಲಸ ಗಳನ್ನು ಕಂಡಾಗಲೆಲ್ಲ ತಾನು ಅದಾಗಬೇಕೆಂದು ಬಯಸುತ್ತಿದ್ದಳು. ರೇಲ್ವೆಯಲ್ಲಿ ಟಿಕೆಟ್ ಚೆಕ್ ಮಾಡುವವಳಾಗಿ, ಬೀದಿ ಸಂಗೀತಗಾರಳಾಗಿ, ಗೂಢಾಚಾರಿಣಿಯಾಗಿ, ಕೊನೆಗೆ ’ಹಂಸದ ಕೊಳ’ವೆಂಬ ಬ್ಯಾಲೆ ನೃತ್ಯದಿಂದ ಪ್ರಭಾವಿತಳಾಗಿ ನೃತ್ಯಗಾತಿಯಾಗಿ-ಹೀಗೆ ವಿವಿಧ ಅವತಾರಗಳಲ್ಲಿ ರೂಪುಗೊಳ್ಳುತ್ತಿದ್ದಳು ತೊತ್ತೋ-ಚಾನ್. “ಎಲ್ಲ ಮಕ್ಕಳಲ್ಲೂ ಜನ್ಮತಃ ಒಳ್ಳೆಯ ಸ್ವಭಾವವಿರುತ್ತದೆ. ಆದರೆ ಅವರ ಪರಿಸರ ಮತ್ತು ದೊಡ್ಡವರ ಸಲ್ಲದ ಪ್ರಭಾವದಿಂದಾಗಿ ಅದು ಬಲುಬೇಗ ನಾಶಗೊಳ್ಳುತ್ತದೆ” ಎಂಬ ನಂಬಿಕೆ ಮುಖ್ಯೋಪಾಧ್ಯಾಯರ ದಾಗಿತ್ತು. “ನೀನು ಒಳ್ಳೆಯ ಹುಡುಗಿ” ಎಂಬ ಅವರ ಮಾತು ಅವಳ ಇಡೀ ಬದುಕನ್ನು ಪ್ರಭಾವಿಸಿತ್ತು. ನಮ್ಮೆಲ್ಲರಿಗು ಪ್ರಿಯವಾಗುವ ಮುದ್ದು ಹುಡುಗಿ ತೊತ್ತೋ-ಚಾನ್ ಜಪಾನಿನಲ್ಲಿ ಪ್ರಸಿದ್ದಿ ಪಡೆದ ಟೆಲಿವಿಷನ್ ಕಲಾವಿದೆ. ಮೂಲದಲ್ಲಿ “ತೆತ್ಸುಕೊ ಕೊರೊಯಾನಾಗಿ”- ’ಕಿಟಕಿಯ ಬಳಿ ನಿಂತ ಪುಟ್ಟ ಹುಡುಗಿ’ ಯಾಗಿ ಪ್ರಪಂಚಾದ್ಯಂತ ಅತ್ಯಂತ ಪ್ರಸಿದ್ದಿ ಪಡೆದ ಈ ಸುಂದರವಾದ ಪುಸ್ತಕವನ್ನು ನ್ಯಾಷನಲ್ ಬುಕ್‌ಟ್ರಸ್ಟ್‌ನವರ ಮೂಲಕ ವಿ. ಗಾಯತ್ರಿ ಯವರು ಕನ್ನಡಕ್ಕೆ ತಂದಿದ್ದಾರೆ. ೧೯೬೬ ರಲ್ಲಿ ಪ್ರಕಟವಾದ ಈ ಪುಸ್ತಕ ಈಗಲೂ ಅದೇ ರುಚಿಯನ್ನು ಉಳಿಸಿಕೊಂಡು ಬಂದಿದೆ. ತೊಮೆಯೆದ ಶಾಲೆಯಲ್ಲಿ ತನ್ನ ಮರೆಯಲಾರದ ವಿಶಿಷ್ಟ ಅನುಭವವನ್ನು ಒಂದು ಸ್ವಾರಸ್ಯಕರ ಕಥಾನಕವಾಗಿಸಿದ ಆ ಮುದ್ದು ಹುಡುಗಿಗೆ ಈಗ ಐವತ್ತರ ಹರೆಯ. ಆ ಶಾಲೆಯಲ್ಲಿ ಕಲಿತವರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಅವವರವರ ಜೀವನದಲ್ಲಿ ಯಶಸ್ವಿಯಾಗಿದ್ದಾರೆ. ಅಸಂಪ್ರದಾಯಿಕ ಶಿಕ್ಷಣದ ಮಹತ್ವವನ್ನು, ಅದರ ದುರ್ಲಭತೆಯ ಅರಿವನ್ನು ಮೂಡಿಸುವ ಈ ಪುಸ್ತಕ, ನಮ್ಮಲ್ಲಿ ಆಳವಾಗಿ ಬೇರು ಬಿಟ್ಟಿರುವ ಸಾಂಪ್ರದಾಯಿಕ ಶಿಕ್ಷಣ ಪದ್ದತಿಯ ಹುಳುಕುಗಳನ್ನು ಎತ್ತಿತೋರಿಸುತ್ತದೆ. ಸಹಜವಾಗಿ ಯೋಚಿಸುವುದನ್ನು ಕಲಿಸುವ, ಪ್ರಕೃತಿಯೊಡನೆ ಒಂದಾಗಿ ಕಲಿಯುವ ಶಿಕ್ಷಣವನ್ನು ಪ್ರತಿಪಾದಿಸುತ್ತದೆ. ಗುಜರಾತಿ ಲೇಖಕ ಗೀಜೂಬಾಯಿ ಬಧೇಕ ಅವರ ’ಹಗಲುಗನಸು’ ಪುಸ್ತಕ ಕೂಡ ಅಸಂಪ್ರದಾಯಿಕ ಶಿಕ್ಷಣದವನ್ನು ಯಶಸ್ವಿಯಾಗಿ ಪ್ರಯೋಗಿಸಿದ ಉಪಾಧ್ಯಾಯರೊಬ್ಬರ ಸ್ವಾನುಭವ. ಅದು ತೊತ್ತೋ-ಚಾನ್‌ಳ ತೊಮೆಯೆ ಶಾಲೆಯ ಮುಂದುವರಿಕೆಯ ಕಥೆಯಂತೆ ಕಾಣುತ್ತದೆ. ಮಕ್ಕಳ ಮನಸ್ಸನ್ನು ಸಕಾರಾತ್ಮಕವಾಗಿ ಗ್ರಹಿಸಿ ಒಳ್ಳೆಯತನದ ಬೀಜ ಬಿತ್ತಿದರೆ ಎಂಥ ಮಕ್ಕಳು ಬದಲಾಗಬಲ್ಲರು ಎನ್ನುವುದಕ್ಕೆ ತೊತ್ತೋ-ಚಾನ್ ಅತ್ಯುತ್ತಮ ಉದಾಹರಣೆ. ’ಕಿಟಕಿಯ ಬಳಿ ನಿಂತ ಪುಟ್ಟ ಹುಡುಗಿಯ’ ಅಸೀಮ ಕುತೂಹಲ ನಮ್ಮ ಕಣ್ಣುಗಳಿಂದ ಮರೆಯಾಗುವುದೇ ಇಲ್ಲ…

ಕೃಪೆ: ಕನ್ನಡಪ್ರಭ

]]>

‍ಲೇಖಕರು G

July 21, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಥೆಗಾರ, ಆರ್ಥಿಕ ವಿಶ್ಲೇಷಣಾಕಾರ ಎಂ ಎಸ್ ಶ್ರೀರಾಮ್ ಅವರ ಹೊಸ ಪುಸ್ತಕ ಮಾರುಕಟ್ಟೆಯಲ್ಲಿದೆ ಅಕ್ಷರ ಪ್ರಕಾಶನ ಈ ಕೃತಿಯನ್ನು ಹೊರತಂದಿದ್ದು...

ಸಂಗೀತ ಲೋಕದ ಸಂತ

ಸಂಗೀತ ಲೋಕದ ಸಂತ

ಡಾ.ಎನ್. ಜಗದೀಶ್ ಕೊಪ್ಪ ಸಂಗೀತ ಲೋಕದ ಸಂತಬಿಸ್ಮಿಲ್ಲಾ ಖಾನ್(ಜೀವನ ಚರಿತ್ರೆ)ಲೇಖಕರು: ಡಾ. ಎನ್ ಜಗದೀಶ್ ಕೊಪ್ಪಪ್ರಕಾಶಕರು: ಮನೋಹರ ಗ್ರಂಥಾಲಯ,...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This