‘ತ್ರಿವೇಣಿ: ಮನಮಂಥನ’ ಗಮನಾರ್ಹ ಕೃತಿ: ಬರಗೂರು

ಬರಗೂರು ರಾಮಚಂದ್ರಪ್ಪ

ಡಾ. ಅರ್ಚನಾ ಅವರು ಒಂದು ದಿನ ನಮ್ಮ ಮನೆಗೆ ಬಂದರು. ಅವರ ಪರಿಚಯ ಹೆಚ್ಚೇನೂ ಇರಲಿಲ್ಲ. ಅವರು ನನ್ನ ಗೆಳೆಯ ಡಾ. ಸಣ್ಣರಾಮ ಅವರ ಮಾರ್ಗದರ್ಶನದಲ್ಲಿ ಪಿಎಚ್.ಡಿ ಮಾಡಿರುವುದಾಗಿ ಹೇಳಿದರು. ಡಾ. ಕೇಶವಶರ್ಮ, ಡಾ. ರಂಗರಾಜವನದುರ್ಗ ಮುಂತಾದವರು ಅವರಿಗೆ ಅಧ್ಯಾಪಕರಾಗಿದ್ದರೆಂದು ತಿಳಿಸಿದರು. ಇವರೆಲ್ಲ ನನ್ನ ಗೆಳೆಯರು. ಈ ಗೆಳೆಯರ ವಿದ್ಯಾರ್ಥಿನಿಯಾಗಿ ಬೆಳೆದವರು ಈ ಅರ್ಚನಾ. ಹೀಗೆ ಪರಿಚಯ ಪ್ರಾರಂಭವಾದ ಕೆಲವೇ ದಿನಗಳಲ್ಲಿ ತಮ್ಮ ಪಿಎಚ್.ಡಿ. ಮಹಾಪ್ರಬಂಧ ‘ತ್ರಿವೇಣಿ: ಮನಮಂಥನ’ದ ಬೆರಳಚ್ಚು ಪ್ರತಿಯ ಸಮೇತ ಬಂದರು; ತೋರಿಸಿದರು, ‘ನೀವೇ ಮುನ್ನುಡಿ ಬರೀ ಬೇಕು ಸರ್’ ಎಂದರು. ನನ್ನ ಇತರೆ ಕೆಲಸಗಳ ನಡುವೆ ಬೇಗ ಬರೆಯೋದು ಕಷ್ಟ ಎಂದರೂ ಅವರು ಬಿಡಲಿಲ್ಲ.

‘ಡಾ. ಸಿ.ಎನ್. ರಾಮಚಂದ್ರನ್ ಅವರು ಬೆನ್ನುಡಿ ಬರೀತಾರೆ. ನೀವು ಮುನ್ನುಡಿ ಬರೀಲೇಬೇಕು’ ಎಂದು ಒತ್ತಾಯಿಸಿದರು. ನಾನು ‘ಡಾ. ಸಿ.ಎನ್. ರಾಮಚಂದ್ರನ್ ಅವರು ಹಿರಿಯರು ಉತ್ತಮ ವಿಮರ್ಶಕರು. ಅವರಿಂದಲೇ ಮುನ್ನುಡಿ ಬರೆಸಬಹುದಿತ್ತು’ ಎಂದೆ. ಆಗ ಅರ್ಚನಾ ‘ಸಿ.ಎನ್.ಆರ್. ಅವರಿಗೆ ನಿಮ್ಮಿಂದ ಮುನ್ನುಡಿ  ಬರೆಸ್ತೇನೆ  ಅಂದಾಗ ಸರಿಯಾದ ನಿರ್ಧಾರ, ಬರಗೂರರಿಂದಲೇ ಬರೆಸಿ ಅಂದಿದ್ದಾರೆ’ ಎಂದು ಹೇಳಿದರು.

‘ಅದು ಸಿ.ಎಸ್.ಆರ್. ಅವರ ದೊಡ್ಡತನ  ಅವರೇ ಬರೆದಿದ್ರೆ ಚೆನ್ನಾಗಿತ್ತು.’ ಎಂದು ನಾನು ಹೇಳಿದೆನಾದರೂ ನಾನೇ ಬರೆಯಬೇಕಾಗುತ್ತದೆ ಎಂಬುದು ಅದಾಗಲೇ ನನಗೆ ಮನವರಿಕೆಯಾಗಿತ್ತು! ಅಷ್ಟರಲ್ಲಿ ಅರ್ಚನಾ ಅವರು ಸಿ.ಎನ್.ಆರ್. ಅವರು ಬರೆದ ಬೆನ್ನುಡಿಯನ್ನು ತೋರಿಸಿದರು. ಓದಿದೆ ಅರ್ಚನಾ ಅವರ ಕೃತಿ ಕುರಿತು ಕೆಲವು ಒಳ್ಳೆಯ ಮಾತುಗಳಿದ್ದವು. ‘ಸ್ವಲ್ಪ ತಡವಾದ್ರೂ ಸಹಿಸಿಕೋಬೇಕು’ ಎನ್ನುವ ಷರತ್ತಿನೊಂದಿಗೆ ‘ಮುನ್ನುಡಿ’ ಬರೆಯಲು ಸಮ್ಮತಿಸಿದೆ. ಇದಿಷ್ಟು ನಾನು ಬರೆಯುವ ಮುನ್ನುಡಿಗೊಂದು ಮುನ್ನುಡಿ.

ಡಾ. ಅರ್ಚನಾ ಅವರ ಕೃತಿಯನ್ನು ಓದುತ್ತಾ ಹೋದಂತೆ ತ್ರಿವೇಣಿಯವರ ಕೃತಿಗಳು ಪುಟ ತೆರೆದು ನನ್ನೊಂದಿಗೆ ಮಾತಾಡುತ್ತಿರುವಂತೆ ಅನ್ನಿಸಿತು. ಅರ್ಚನಾ ಅವರು ತ್ರಿವೇಣಿಯವರ ಕಾದಂಬರಿಗಳಲ್ಲಿರುವ ಮನೋವೈಜ್ಞಾನಿಕ ನೆಲೆಗಳನ್ನು ಕುರಿತು ನಡೆಸಿದ ಅಧ್ಯಯನದ ಫಲವಾದ ಈ ಕೃತಿಯ ಓದು ನನ್ನ ಕೆಲವು ನೆನಪುಗಳನ್ನು ಕೆದಕಿತು.

ನಾನು ಹೊಸದಾಗಿ ಕಾಲೇಜು ಅಧ್ಯಾಪಕನಾದಾಗ ನವ್ಯ ಸಾಹಿತ್ಯದ ಏರುಗತಿಯ ಕಾಲ. ಅಂದಿನ ಕೆಲವು ವಿಮರ್ಶಕರು ಮತ್ತು ಇವರಿಂದ ಪ್ರೇರಿತರಾದ ಅನೇಕ ಗಂಭೀರಾರೋಪಿತ ಓದುಗರು ಮಹಿಳೆಯರಿಂದ ರಚಿತವಾದ ಸಾಹಿತ್ಯದ ಬಗ್ಗೆ ಲಘುವಾಗಿ ಮಾತಾಡುತ್ತಿದ್ದರು. ‘ಅಡುಗೆ ಮನೆ ಸಾಹಿತ್ಯ’ ಎಂದು ಹೀಗಳೆದವರೂ ಉಂಟು, ಇದಕ್ಕೆ ಪ್ರತಿಕ್ರಿಯೆಯಾಗಿ ನಾನು ಒಮ್ಮೆ ಡಾ. ಅನುಪಮಾ ನಿರಂಜನರ ಬಗ್ಗೆ ಮಾತನಾಡುತ್ತ ‘ಅಡುಗೆ ಮನೆ ಸಾಹಿತ್ಯ ಅಂತ ಹೀಗಳೆಯೋರ್ದು ಮಲಗೊ ಮನೆ ಸಾಹಿತ್ಯ ಅಂತ ಕರೆದರೆ ಅವರಿಗೆ ಹೇಗನ್ನಿಸಬಹುದು’ ಎಂದು ಪ್ರಶ್ನಿಸಿದ್ದೆ.

ಕಾಮಕೇಂದ್ರಿತ  ಕವಿತೆ, ಕತೆ, ಕಾದಂಬರಿ ಬರೆಯೋರನ್ನ ಗಮನದಲ್ಲಿಟ್ಟುಕೊಂಡು ಈ ಮಾತನ್ನು ಹೇಳಿದ್ದೆನಾದರೂ ನನ್ನ ಆಶಯ ಮಹಿಳೆಯರನ್ನು ಅಡುಗೆ ಮನೆಯಲ್ಲೇ ಬಂಧಿಯಾಗಿಸಿದ ಸಾಮಾಜಿಕ ಆರ್ಥಿಕ ಸಂರಚನೆಯ ಹಿನ್ನೆಲೆಯನ್ನು ಗಮನಿಸುವುದರ ಮೂಲಕ ಮಹಿಳೆಯರ ಸಾಹಿತ್ಯ ಪ್ರವೇಶ ಮಾಡಬೇಕೆಂಬ ಒತ್ತಾಸೆ ನನ್ನದಾಗಿತ್ತು. ವಿಶೇಷವೆಂದರೆ ಈ ಒತ್ತಾಸೆಯ ಒಳ ತಿಳುವಳಿಕೆ ನನಗೆ ಮೂಡಿದ್ದು ನನ್ನ ಪತ್ನಿ ರಾಜಲಕ್ಷ್ಮಿಯಿಂದ ಎಂದು ಇಲ್ಲಿ ನೆನೆಯಲೇಬೇಕು.

ಆಗ ನಾನು ತುಮಕೂರು ಸರ್ಕಾರಿ ಕಾಲೇಜಿನ ಅಧ್ಯಾಪಕ, ಬಿಎ ತರಗತಿಗೆ ಪಠ್ಯವಾಗಿದ್ದ ರಾವ್ ಬಹದ್ದೂರರ ‘ಗ್ರಾಮಾಯಣ’ ಕಾದಂಬರಿಯನ್ನು ಬೋಧಿಸುತ್ತಿದ್ದೆ. ಕಾದಂಬರಿ ಪ್ರಕಾರ ಬೆಳೆದು ಬಂದ ಬಗೆಯನ್ನು ವಿವರಿಸುತ್ತ ‘ಗ್ರಾಮಾಯಣ’ ಪ್ರವೇಶಮಾಡಿ ನಾನು ಮಾಡುತ್ತಿದ್ದ ಅಂದಿನ ‘ಪಾಠ’ ಕೇಳಲು ಬೇರೆ ತರಗತಿಯ ವಿದ್ಯಾರ್ಥಿಗಳೂ ಬಂದು ಜಾಗವಿಲ್ಲದೆ ಹೊರಗೆ ಕಿಟಕಿಯ ಬಳಿ ನಿಂತು ಕೇಳುತ್ತಿದ್ದರೆಂದು ವಿನಯಪೂರ್ವಕ ಹೆಮ್ಮೆಯಿಂದ ನೆನೆದಾಗ ನನ್ನೊಳಗೆ ಈಗಲೂ ಏನೋ ಒಂದು ಸಂಭ್ರಮ! ಹೀಗೆ ‘ಪಾಠಪ್ರಸಿದ್ಧ’ನಾಗಿದ್ದ ನನಗೆ ಒಂದು ‘ಪಾಠ’ ಕಲಿಸಿದ್ದು ನನ್ನ ರಾಜಲಕ್ಷ್ಮಿ – ‘ನನ್ನ’ ಆಗುವುದಕ್ಕೆ ಮುಂಚೆ.

ಆಗ ಆಕೆ ಬಿಎ ವಿದ್ಯಾರ್ಥಿನಿ ನಾನು ‘ಗ್ರಾಮಾಯಣ’ ‘ಸಂಸ್ಕಾರ’ ‘ವಂಶವೃಕ್ಷ’ – ಕಾದಂಬರಿಗಳನ್ನು ತೌಲನಿಕವಾಗಿ ವಿಶ್ಲೇಷಿಸುತ್ತ ಮಹಿಳೆಯರಿಂದ ರಚಿತವಾದ ಕಾದಂಬರಿಗಳನ್ನು ತೆಳುಬರಹಗಳೆಂದು ಟೀಕಿಸಿದ್ದೆ. ಎಷ್ಟಾದರೂ ಕೆಲವು ನವ್ಯ ವಿಮರ್ಶಕರ ಪ್ರಭಾವ! ಪ್ರಸಿದ್ಧರನ್ನು ಟೀಕಿಸುವುದರ ಮೂಲಕ ಸಿದ್ಧಪುರುಷನಾಗುವ ಭ್ರಮೆ! ಆದರೆ ಭ್ರಮೆ ಎಂದು ಗೊತ್ತಾಗಿದ್ದು ರಾಜಲಕ್ಷ್ಮಿ ತ್ರಿವೇಣಿಯವರ ಕಾದಂಬರಿಗಳನ್ನು ಉದಾಹರಿಸಿ ‘ಎಲ್ಲರನ್ನೂ ಒಂದೆ ತಕ್ಕಡಿಯಲ್ಲಿ ತೂಗೋದು  ಸರೀನಾ ಸಾರ್’ ಎಂದು ಪ್ರಶ್ನಿಸಿದಾಗ ನಾನು ಅಂದು ತರಗತಿಯಲ್ಲಿ ಒಂದಿಷ್ಟು ಸಮಜಾಯಿಷಿ ನೀಡಿದೆ. ಆಕೆ ಆನಂತರ ಸ್ಟಾಫ್‍ರೂಂಗೆ ಬಂದು ತಾನು ಓದಿದ ತ್ರಿವೇಣಿ, ಎಂ ಕೆ ಇಂದಿರಾ ಮುಂತಾದವರ ಕಾದಂಬರಿಗಳನ್ನು ಕುರಿತು ಚರ್ಚಿಸಿದಾಗ ಅಲ್ಲಿ ವಾದ ಮಂಡಿಸಿದಾಗ – ನಾನು ಮರುಚಿಂತನೆಗೆ ತೊಡಗಿದೆ.

ಈ ಚರ್ಚೆ, ಚಿಂತನೆಗಳು ಬೆಳೆದು ಆನಂತರ ನಾವು (ಅಂತರ ಜಾತೀಯ) ವಿವಾಹವಾಗಿ ನಲವತ್ತನಾಲ್ಕು ವರ್ಷ ಒಟ್ಟಿಗೆ ಬದುಕಿದ್ದು. ಈಗ ನನ್ನ ಬಾಳಸಂಗಾತಿ ರಾಜಲಕ್ಷ್ಮಿ ತನ್ನ ಬಾಳು ಮುಗಿಸಿ ನಿಧನವಾಗಿದ್ದೂ ನಿತ್ಯ ನೆನಪಾಗಿ ಉಳಿದದ್ದು – ಈ ಎಲ್ಲವೂ ಅರ್ಚನಾ ಅವರ ಕೃತಿ ಪ್ರವೇಶದ ಮೂಲಕ ಮನದಲ್ಲಿ ಮನೆಕಟ್ಟುತ್ತಿವೆ. ಮಹಿಳೆಯರ ಬರಹಗಳ ಬಗ್ಗೆ, ವಿಶೇಷವಾಗಿ ತ್ರಿವೇಣಿಯವರ ಕಾದಂಬರಿಗಳ ಬಗ್ಗೆ ಗಂಭೀರ ನೋಟ ಬೀರುವಂತೆ ಮಾಡಿದ್ದು ನನ್ನ ಪತ್ನಿ ರಾಜಲಕ್ಷ್ಮಿ ಎಂಬುದನ್ನು ನೆನೆಯದೆ ನಾನು ಈ ಮುನ್ನುಡಿ ಬರೆಯಲಾರೆ. ಅದಕ್ಕಾಗಿ ಇಷ್ಟೆಲ್ಲಾ ನೆನಪು!

ಇರಲಿ, ಈಗ ಅರ್ಚನಾ ಅವರ ಅಧ್ಯಯನಕ್ಕೆ ಬರುತ್ತೇನೆ. ಮಹಿಳೆಯರನ್ನು ಅಡುಗೆ ಮನೆಯಲ್ಲಿ ‘ಬಂಧಿ’ಯಾಗಿಸಿದ ಸಾಮಾಜಿಕ – ಆರ್ಥಿಕ ಸಂರಚನೆ ಕುರಿತು ನಾನು ಪ್ರಸ್ತಾಪಿಸಿದೆ. ಇದೇ ವಿಷಯವನ್ನು ಡಾ. ಅರ್ಚನಾ ಅವರು ತಮ್ಮದೇ ಚಿಂತನಾ ವಿಧಾನದಲ್ಲಿ ಮಂಡಿಸಿರುವುದು ವಿಶೇಷವಾಗಿದೆ. ಅವರು ಹೀಗೆ ಹೇಳುತ್ತಾರೆ;

‘ಭಾರತೀಯ ಪರಂಪರೆಯಲ್ಲಿ ಮಹಿಳೆಯನ್ನು ಜೈವಿಕ ನಿಯಂತ್ರಣದಂತಹ ಕಾರಣಕೊಟ್ಟು ಕುಟುಂಬ ನಿರ್ವಹಣೆ, ಸಂತಾನೋತ್ಪತ್ತಿಗೆ ಮಾತ್ರ ಸೀಮಿತಗೊಳಿಸಲಾಯಿತು. ಇದು ಎಲ್ಲ ಬಗೆಯ ಅಸಮಾನತೆ, ಶೋಷಣೆಗೆ ಕಾರಣವಾಯಿತು. ಪರಿಣಾಮವಾಗಿ ಮಹಿಳೆಯನ್ನು ಭಾವನಿಷ್ಠ ವ್ಯಕ್ತಿಯನ್ನಾಗಿ ಗುರುತಿಸಲಾಯಿತು. ಬುದ್ಧಿ, ಪಾಂಡಿತ್ಯ, ಜ್ಞಾನವೆಂಬುದು ಪುರುಷರ ಹಕ್ಕು ಮಾತ್ರ ಎಂಬಂತೆ ಸಮಾಜ ಬದಲಾಯಿತು. ಈ ಎಲ್ಲಾ ಕಾರಣಗಳಿಂದ ಪುರುಷರು ಶ್ರೇಷ್ಠರು ಮತ್ತು ಮಹಿಳೆಯರು ಕನಿಷ್ಠರು ಎಂಬ ಏಣಿಶ್ರೇಣಿಗಳು ಸಮಾಜದಲ್ಲಿ ಉಂಟಾದವು… ಆದ್ದರಿಂದ ಭಾರತೀಯ ಪರಂಪರೆಯಲ್ಲಿ ಪುರುಷರು ಜ್ಞಾನದ ವಾರಸುದಾರರಾದರು. ಮಹಿಳೆಯರು ಲೋಕದೃಷ್ಟಿಯಿಂದ ದೂರ ಉಳಿದರು.’ (ಪುಟ 132)

ಇನ್ನೊಂದು ಕಡೆ ಹೀಗೆ ನಿರೂಪಿಸುತ್ತಾರೆ; ‘ಮಾನವ ಸಮಾಜದಲ್ಲಿ ಲಿಂಗಭೇದ ನೀತಿ ಅನಾದಿ ಕಾಲದಿಂದಲೂ ರೂಢಿಯಲ್ಲಿದೆ… ಹೆಣ್ಣು, ಗಂಡಿಗಿಂತ ಕೀಳು ಎನ್ನುವ ಸ್ಥಿತಿ ಜಗತ್ತಿನಾದ್ಯಂತ ಪ್ರಶ್ನಾತೀತವಾಗಿ, ಒಪ್ಪಿತವಾಗಿ ರೂಢಿಯಲ್ಲಿದೆ. ಆದರೂ ಮಹಿಳಾಧ್ವನಿ ಕ್ಷೀಣವಾಗಿ ಅಲ್ಲಲ್ಲಿ ಕೇಳಿ ಬಂದದ್ದನ್ನು ಇತಿಹಾಸದಲ್ಲಿ ಕಾಣಬಹುದು. ಭಾರತೀಯ ಸಂಸ್ಕೃತಿಯನ್ನು ಅರಿಯಲು ನಮಗೆ ವೇದಗಳ ಕಾಲದಿಂದಲೂ ದಾಖಲೆಗಳು ಸಿಗುತ್ತವೆ. ಸ್ತ್ರೀಯರನ್ನು ದೈವತ್ವಕ್ಕೇರಿಸಿ, ದೇವತೆಯನ್ನಾಗಿ ಮಾಡಿ ಕಲ್ಲು ದೇವರಂತೆ ಆದರ್ಶೀಕರಿಸಲಾಗಿದೆ. ಸಂಪ್ರದಾಯ, ಶಾಸ್ತ್ರದ ಆಧಾರಗಳನ್ನಿಟ್ಟು ಸ್ತ್ರೀಯನ್ನು ನಿರ್ಬಂಧಿಸಲಾಗಿದೆ’ (ಪುಟ – 163).

ಡಾ. ಅರ್ಚನಾ ಅವರ ಈ ನಿರ್ಣಯಾತ್ಮಕ ಹೇಳಿಕೆಗಳು ಹುಸಿಯಲ್ಲ ಅಥವಾ ಹಸಿ ಹಸಿಯಾಗಿ ಬೀಸುವಾದಗಳೂ ಅಲ್ಲ. ಮಹಿಳೆಯರ ಸ್ಥಿತಿಗತಿಗಳನ್ನು ಕುರಿತಂತೆ ಇಲ್ಲೀವರೆಗೆ ನಡೆದ ಚಲನಶೀಲ ಚಿಂತನೆಗಳ ಕ್ರೋಡೀಕೃತ ವಾಕ್ಯಗಳಾಗಿ ಇಲ್ಲಿ ದಾಖಲಾಗಿವೆ. ಅರ್ಚನಾ ಅವರ ಹೇಳಿಕೆಗಳು ನಕಾರಾತ್ಮಕ ನೆಲೆಯಲ್ಲಿ ಮಾತ್ರ ನಿಲ್ಲದೆ ‘ಚರಿತ್ರೆಯ ಪುಟಗಳಲ್ಲಿ ಮಹಿಳೆ ತನ್ನ ತನದ ಹುಡುಕಾಟ’ ನಡೆಸಿದ್ದನ್ನು ನಿರೂಪಿಸುತ್ತವೆ.

ಇಲ್ಲಿಯೇ ಅರ್ಚನಾ ಅವರು ಹೇಳಿರುವ ಮಹಿಳೆಯರು ಲೋಕದೃಷ್ಟಿಯಿಂದ ದೂರ ಉಳಿದರು ಎಂಬ ಮಾತನ್ನೂ ‘ಭಾರತೀಯ ಸಂಸ್ಕೃತಿಯಲ್ಲಿನ ಮಹಿಳಾ ವೈಭವೀಕರಣ ಮತ್ತು ವಾಸ್ತವದ ವಿಷಯವನ್ನೂ ಒಂದಿಷ್ಟು ಚರ್ಚೆಗೆ ಒಳಪಡಿಸಬಹುದು. ಮಹಿಳೆಯರ ಸ್ಥಿತಿಗತಿಗಳ ಬಗ್ಗೆ ಅರ್ಚನಾ ಅವರು ನಮೂದಿಸಿದ ನಿಜದ ನೆಲೆಗಳ ತಳದಲ್ಲಿ ಇರುವುದು ನಮ್ಮ ಉತ್ಪಾದನಾ ಪದ್ಧತಿಯ ಪುರುಷ ಪ್ರಧಾನತೆ ಎಂಬುದನ್ನಿಲ್ಲಿ ಗಮನಿಸಬೇಕು. ಉತ್ಪಾದನೆ ಎನ್ನುವುದು ಒಂದು ಆರ್ಥಿಕ ಚಟುವಟಿಕೆ.

ಈ ಆರ್ಥಿಕ ಚಟುವಟಿಕೆಯನ್ನು ಮೊದಲಿನಿಂದಲೂ ಪುರುಷರೇ ನಿಯಂತ್ರಿಸುತ್ತ ಬಂದರು. ಅಂದರೆ ಉತ್ಪಾದನಾ ಪದ್ಧತಿಯ ಮೂಲಸೂತ್ರ ಪುರುಷರ ಕೈಯಲ್ಲಿತ್ತು. ಅವರೇ ಉತ್ಪಾದನಾ ವಿಧಾನದ ನಿಯಂತ್ರಣಾಧಿಕಾರವುಳ್ಳವರಾಗಿದ್ದರು. ಉತ್ಪಾದನೆಗೆ ಬೆವರು ಹರಿಸುವ ಶ್ರಮಸಾಧನವಾದರು. ಪುರುಷರು ಉತ್ಪಾದನಾ ಫಲಿತಗಳ ಮಾಲೀಕರಾದರು. ಆಸ್ತಿಯ ಒಡೆಯರಾದರು. ಅಂತಸ್ತಿನ ಅಹಂಕಾರಿಗಳಾದರು. ಇದರ ಜೊತೆಗೆ ಅರ್ಚನಾ ಅವರು ಯಾವುದನ್ನು ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯ ವೈಭವೀಕರಣವೆಂದು ಪ್ರಸ್ತಾಪಿಸುತ್ತಾರೊ ಆ ಸಂಸ್ಕೃತಿಯು ಭಾವನಾತ್ಮಕವಾಗಿ ಮಹಿಳೆಯರಿಗೆ ಪೂಜ್ಯಸ್ಥಾನ ಕೊಟ್ಟಂತೆ ಮಾಡಿ, ಸಾಮಾಜಿಕ ಮತ್ತು ಆರ್ಥಿಕ ಕ್ರಿಯೆಗಳ ಶಕ್ತಿಕೇಂದ್ರವನ್ನು ಪುರುಷರಿಗೇ ವಹಿಸಿತ್ತು.

ಇಷ್ಟಕ್ಕೂ ‘ಭಾರತೀಯ ಸಂಸ್ಕೃತಿ’ಯೆನ್ನುವುದು ಏಕರೂಪಿಯಲ್ಲ, ಬಹುರೂಪಿ. ಭಾರತೀಯ ಸಮಾಜವು ಬಹು ಸಂಸ್ಕೃತಿಗಳ ಒಕ್ಕೂಟ. ಈ ಒಕ್ಕೂಟದ ವಿವಿಧ ವಲಯಗಳಲ್ಲಿ ಮಹಿಳೆಯರ ಸ್ಥಿತಿಗತಿ ಕೂಡ ವಿವಿಧ ರೂಪಗಳನ್ನು ಪಡೆದಿದೆ. ದಲಿತರು, ಬುಡಕಟ್ಟಿನವರು ಬದುಕುತ್ತಿರುವ ಸಂಸ್ಕೃತಿಗಳಲ್ಲಿನ ಮಹಿಳೆಗೂ ಮಧ್ಯಮ, ಮೇಲ್‍ಮಧ್ಯಮ ಮತ್ತು ಮೇಲ್‍ವರ್ಗವಲಯದ ಮಹಿಳೆಗೂ ಅಂತರವಿರುವುದನ್ನೂ ಗಮನಿಸಬಹುದು. ಹೀಗಾಗಿ ಶ್ರೇಣೀಕರಣವೆನ್ನುವುದು ಕೇವಲ ಪುರುಷ ಮತ್ತು ಮಹಿಳೆಯರ ನಡುವಿನ ಎರಡುಸ್ತರ ಮಾತ್ರವಾಗದೆ ಪುರುಷರಲ್ಲೂ ಮಹಿಳೆಯರಲ್ಲೂ, ಒಳಶ್ರೇಣಿಗಳಿವೆ. ಆದರೂ ಎಲ್ಲ ಶ್ರೇಣಿಗಳ ಪುರುಷರು ಪ್ರಧಾನ ಪಾತ್ರ ‘ಪುಣ್ಯಜೀವಿಗಳು!’ ಇದು ಶ್ರೇಣಿಕೃತ ಸಮಾಜದ ವಿಪರ್ಯಾಸ!

ಡಾ. ಅರ್ಚನಾ ಅವರು ಮಹಿಳೆಯ ಪಾರಂಪರಿಕ ಸ್ಥಿತಿಯನ್ನು ಹೇಳಿಕೆಗಳಲ್ಲಿ ಹಿಡಿದಿಡುತ್ತಲೇ ಬದಲಾದ ಸನ್ನಿವೇಶವನ್ನು ವಿವರಗಳಲ್ಲಿ ಕಟ್ಟಿಕೊಡುತ್ತಾರೆ. ಶಿಕ್ಷಣವನ್ನೂ ಒಳಗೊಂಡಂತೆ ನಮ್ಮ ಸಾಮಾಜಿಕ ಸುಧಾರಣೆಗಳು ಹೇಗೆ ಮಹಿಳೆಯ ಅಭಿವ್ಯಕ್ತಿಗೆ ಒತ್ತಾಸೆಯಾಗಿ ಬೆಳೆದವೆಂಬುದನ್ನು ವಿವರಿಸುತ್ತಾರೆ. ತಾತ್ವಿಕತೆಯೊಂದನ್ನು ಬೆಳೆಸುತ್ತಾರೆ. ಡಾ. ಅರ್ಚನಾ ಅವರ ಬರವಣಿಗೆಯ ಮಹತ್ವಾಂಶಗಳಲ್ಲಿ ಒಂದು- ಅವರು ತಾತ್ವಿಕ ಭೂಮಿಕೆಯನ್ನು ಕಟ್ಟಿಕೊಡುವ ಕ್ರಮ.

ಯಾವುದೇ ವಿಷಯಕ್ಕೆ ಹೋಗುವ ಮುಂಚೆ ಆ ವಿಷಯಕ್ಕೆ ಸಂಬಂಧಿಸಿದ ಚಿಂತನೆಗಳನ್ನು ಕ್ರೋಡೀಕರಿಸುವ ಮೂಲಕ ತಾತ್ವಿಕ ಭೂಮಿಕೆಯನ್ನು ಸಿದ್ಧಗೊಳಿಸುವುದು ಅರ್ಚನಾ ಅವರ ವಿಶ್ಲೇಷಣಾ ವಿಧಾನದ ಒಂದು ವಿಶಿಷ್ಠತೆ. ವಿವರಣೆ ಮತ್ತು ವಿಶ್ಲೇಷಣೆಗಳ ಮೂಲಕ ತಾವು ಸಿದ್ಧಗೊಳಿಸಿದ ತಾತ್ವಿಕಾಂಶಗಳನ್ನು ಅನುಸಂಧಾನಿಸುವುದು ಇವರ ಬರವಣಿಗೆಯ ಮುಂದುವರಿದ ವಿಧಾನ. ಒಂದು ವಸ್ತುವನ್ನು ನಿರೂಪಿಸುವಾಗ ಅದರಲ್ಲಿರುವ ಬಿಡಿ ಅಂಶಗಳನ್ನು ಗುರುತು ಮಾಡುತ್ತಲೇ ಇಡಿಯಾಗಿ ಹಿಡಿದಿಡುತ್ತಾರೆ. ಜೊತೆಗೆ ಪರಂಪರೆ ಮತ್ತು ಪ್ರಗತಿ ಪ್ರಜ್ಞೆಗಳನ್ನು ಒಟ್ಟಿಗೇ ಒಳಗೊಳ್ಳುವ ಒಳನೋಟಗಳ ಹರಿವು ಕೂಡ ಈ ಕೃತಿಯ ಒಂದು ಸಕಾರಾತ್ಮಕ ಶಕ್ತಿಯಾಗಿದೆ.

ಡಾ. ಅರ್ಚನಾ ಅವರು ಪ್ರತಿ ಅಧ್ಯಾಯದ ಆರಂಭಿಕ ಪುಟಗಳನ್ನು ನಿರ್ದಿಷ್ಟ ವಿಷಯ ವಿಕಾಸ ನಿರೂಪಣೆಗೆ ಮೀಸಲಿಟ್ಟು ಆ ವಿಷಯದ ಬಗ್ಗೆ ವಿವಿಧ ಪರಿಣತರು ಅಭಿವ್ಯಕ್ತಿಸಿದ ಅಭಿಪ್ರಾಯಗಳನ್ನು ಕ್ರಮಬದ್ಧವಾಗಿ ಸಂಯೋಜಿಸಿದ್ದಾರೆ. ಇದು ಅರ್ಚನಾ ಅವರ ಅಪಾರ ಅಧ್ಯಯನಕ್ಕೆ ನಿದರ್ಶನವಾಗಿ ನಿಲ್ಲುವ ನಿರೂಪಣೆ, ‘ಸಾಹಿತ್ಯ ಮತ್ತು ಮನೋವಿಜ್ಞಾನ’ವೆಂಬ ಅಧ್ಯಾಯದಲ್ಲಿ ಈ ಎರಡರ ಸಂಬಂಧ ಕುರಿತಂತೆ ಬೋಡ್ಕೀನ್, ಸಿಗ್ಮಂಡ್‍ಫ್ರಾಯ್ಡ್, ಕಾರ್ಲ್‍ಝಂಗ್, ಆಂಡ್ರೆಮೌರಿಸ್ ಮುಂತಾದವರ ವ್ಯಾಖ್ಯಾನಗಳನ್ನು ಸಂಗ್ರಹಿಸಿ ನೀಡಿರುವ ವಿವರಣೆ ಅರ್ಚನಾ ಅವರ ಗ್ರಹಿಕೆಯ ಕ್ರಮಕ್ಕೊಂದು ಉದಾಹರಣೆ.

ಫ್ರಾಯ್ಡ್ ಮತ್ತು ಯೂಂಗ್ ದೃಷ್ಟಿಕೋನಗಳ ಸಂಬಂಧಾಂತರಗಳನ್ನು ಪ್ರತ್ಯೇಕವಾಗಿ ಸಾದರಪಡಿಸಿರುವ ಸರಳ ಸ್ಪಷ್ಟತೆಯೂ ಇಲ್ಲಿ ಉಲ್ಲೇಖನೀಯ. ಈ ಅಧ್ಯಾಯದ ಕೊನೆಯ ಪ್ಯಾರಾದಲ್ಲಿ ತಮ್ಮದೇ ವ್ಯಾಖ್ಯಾನಾತ್ಮಕ ಹೇಳಿಕೆಗಳನ್ನು ನೀಡುವ ಅರ್ಚನಾ ಅವುಗಳನ್ನು ವಿಸ್ತರಿಸಿದ್ದರೆ ಚೆನ್ನಾಗಿತ್ತು ಎನ್ನಿಸುತ್ತದೆ. ಹೇಳಿಕೆಗಳ ಒಳಗೊಂದು ವ್ಯಾಖ್ಯಾನವಿದ್ದರೂ ಈ ವ್ಯಾಖ್ಯಾನವೂ ಹೊರ ವಿವರಣೆಯಾಗಿ ಹೊಮ್ಮುವ ಅಗತ್ಯವಿತ್ತು. ‘ಕವಿಗಿಂತ ಕಾವ್ಯ ಹಿರಿದಾಗಿ ಬೆಳೆದು ನಿಲ್ಲುತ್ತದೆ’ಯೆಂಬ ಹೇಳಿಕೆ ಸರಿಯಾಗಿದೆಯಾದರೂ ‘ವ್ಯಾಸನಿಗಿಂತ ಕೃಷ್ಣನ ಕಲ್ಪನೆ ಮಹತ್ತರವಾದುದು’ ಎಂಬ ಹೇಳಿಕೆಯನ್ನು ಸರಿ ಎಂದು ಒಪ್ಪುವುದು ಕಷ್ಟ. ಯಾಕೆಂದರೆ ಕೃಷ್ಣನ ಕಲ್ಪನೆಯೂ ವ್ಯಾಸನ ಕಲ್ಪನೆಯೇ ಆಗಿರುತ್ತದೆ.

ಕೃಷ್ಣನೆಂಬ ಪಾತ್ರವನ್ನು ರೂಪಿಸಿದ್ದು ವ್ಯಾಸ, ಕೃಷ್ಣನನ್ನು ಕಲ್ಪಿಸಿದ, ಶಿಲ್ಪಿಸಿದ ಪ್ರತಿಭೆ ವ್ಯಾಸ ಕವಿಯದೇ ಆಗಿದೆ. ಆದ್ದರಿಂದ ‘ವ್ಯಾಸನಿಗಿಂತ ಕೃಷ್ಣನ ಕಲ್ಪನೆ ಮಹತ್ತರವಾದುದು’ ಎಂಬ ಮಾತನ್ನು ಹೇಗೆ ಸರಿಯೆನ್ನಲಾದೀತು. ಹೋಗಲಿ, ‘ಸರಿ’ ಎಂದು ಮನವರಿಕೆ ಮಾಡಿಕೊಡುವ ಸಮರ್ಥನಾತ್ಮಕ ವಿವರಣೆ ಬೇಕಿತ್ತಲ್ಲವೆ? ಕವಿಗಿಂತ ಕಾವ್ಯ ಹಿರಿದಾಗಿ ಬೆಳೆದು ನಿಲ್ಲುವುದರಲ್ಲೂ ಕವಿಯ ಹಿರಿಮೆ ಇದ್ದೇ ಇರುತ್ತದೆಯಲ್ಲವೆ?

‘ಆಧುನಿಕ ಕನ್ನಡ ಕಾದಂಬರಿ ಮತ್ತು ತ್ರಿವೇಣಿ ಅವರ ಪ್ರವೇಶ’ ಎಂಬ ಅಧ್ಯಾಯವು ಕನ್ನಡ ಕಾದಂಬರಿಯ ಸಂಕ್ಷಿಪ್ತ ಇತಿಹಾಸವನ್ನು ನೀಡುತ್ತಲೇ ತ್ರಿವೇಣಿಯವರ ‘ಸ್ಥಾನ ಸ್ಥಿರೀಕರಣ’ ಮಾಡುತ್ತದೆ. ಈ ಅಧ್ಯಾಯದ ಒಂದು ವಿಶಿಷ್ಟತೆಯೆಂದರೆ ತ್ರಿವೇಣಿಯವರ ಪತ್ರಗಳನ್ನು ಸಂಗ್ರಹಿಸಿ ಸಾಧಾರ ಆಕರವಾಗಿ ಬಳಸಿರುವುದು. ಇದು ಅಧಿಕೃತತೆಗೆ ಅರ್ಚನಾ ಅವರು ನೀಡಿರುವ ಮಹತ್ವ.

‘ತ್ರಿವೇಣಿ ಕಾದಂಬರಿಗಳಲ್ಲಿ ಅಂತರ್ಘಟಿತ ಮನೋವೈಜ್ಞಾನಿಕ ಸಿದ್ಧಾಂತಗಳು’ ಎಂಬ ಅಧ್ಯಾಯವು ಅಪರೂಪದ ಅಧ್ಯಯನ ಶೀಲತೆಗೆ ಸಾಕ್ಷಿಯಾಗಿ ನಿಲ್ಲುತ್ತದೆ. ಭಾಸ, ಕಾಳಿದಾಸ, ಶೂದ್ರಕ ಮುಂತಾದವರ ಕೃತಿಗಳಲ್ಲಿ ಮನೋವೈಜ್ಞಾನಿಕ ಸಿದ್ಧಾಂತಗಳ ಅಪ್ರಜ್ಞಾಪೂರ್ವಕವಾಗಿ ಅಂತರ್ಗತವಾದ ಚರಿತೆಯನ್ನು ಈ ಅಧ್ಯಾಯ ನೀಡುತ್ತದೆ. ಆನಂತರ ತ್ರಿವೇಣಿಯವರ ಆಯ್ದ ಕಾದಂಬರಿಗಳಲ್ಲಿ ಕಂಡುಬರುತ್ತವ ಪ್ರಧಾನ ಮನೋವೈಜ್ಞಾನಿಕ ನೆಲೆಗಳನ್ನು ನಿದರ್ಶನ ಸಮೇತ ನಿರೂಪಿಸಲಾಗಿದೆ.

ಮನೋವಿಜ್ಞಾನದ ಕೆಲವು ಪರಿಕಲ್ಪನೆಗಳನ್ನು ಕಾದಂಬರಿಗಳಲ್ಲಿ ಕಾಣುವ ಮೂಲಕ ಸಾಹಿತ್ಯ ಕೃತಿ ಮತ್ತು ಮನೋವಿಜ್ಞಾನಗಳ ಸಂಬಂಧವನ್ನು ಚರ್ಚಿಸಲಾಗಿದೆ. ‘ಬೆಕ್ಕಿನ ಕಣ್ಣು’ ಕಾದಂಬರಿಯ ಕುರಿತ ವಿಶ್ಲೇಷಣೆಯಿಂದ ತ್ರಿವೇಣಿ ಕಾದಂಬರಿಗಳ ಮನೋತಳವನ್ನು ಶೋಧಿಸುವ ಕ್ರಿಯೆ ಆರಂಭವಾಗಿದೆ. ಈ ಶೋಧಕ್ರಿಯೆಯು ವಿವಿಧ ಮಗ್ಗಲುಗಳನ್ನು ಕಾಣಿಸುತ್ತದೆ. ನಿದರ್ಶನಕ್ಕೆ ನೋಡಿ; ‘ಬೆಕ್ಕಿನ ಕಣ್ಣು’ ಕಾದಂಬರಿಯ ಕುಸುಮಾ ತನ್ನ ಮಲತಾಯಿಯ ಅನಾದರಕ್ಕೆ ಒಳಗಾಗಿ ಅನುಭವಿಸುವ ತಲ್ಲಣಗಳ ಚಿತ್ರಣವಾಗಿದ್ದರೂ ತ್ರಿವೇಣಿಯವರಿಗೆ ಮಲತಾಯಿಯನ್ನು ಖಳನಾಯಕಿಯಾಗಿಸುವ ಉದ್ದೇಶವಿಲ್ಲವೆಂದು ಅರ್ಚನಾ ಅಭಿಪ್ರಾಯಿಸುತ್ತಾರೆ.

ಅವರು ಹೀಗೆ ಬರೆಯುತ್ತಾರೆ; ‘ಭಾರತೀಯ ಸಮಾಜದಲ್ಲಿ ಮಲತಾಯಿಯರು ಹೆಚ್ಚು ಕ್ರೂರವಾಗಿ ವರ್ತಿಸುತ್ತಾರೆಂಬ ಸಿದ್ಧಮಾದರಿಯೊಂದಿದೆ. ಅದನ್ನು ಚಿತ್ರಿಸುವ ಉದ್ದೇಶ ತ್ರಿವೇಣಿಗಿರಲಿಲ್ಲ. ಮಲತಾಯಿಯೂ ಸಹ ಒಬ್ಬ ಮಾನಸಿಕ ರೋಗಿಯೇ ಆಗಿದ್ದರ  ಪರಿಣಾಮ ಅವರ ಈ ವರ್ತನೆಗೆ ಕಾರಣ ಎಂದು ಚಿತ್ರಿಸುವಲ್ಲಿ ಭಾರತೀಯ ಸ್ಥಿರ ಮಾದರಿಯನ್ನು ಒಡೆದು ಹೊಸ ಬಗೆಯ ಚಿತ್ರಣವನ್ನು ಕಟ್ಟಿಕೊಟ್ಟಿದ್ದು ತ್ರಿವೇಣಿಯವರ ಆಲೋಚನಾಕ್ರಮದ ಭಿನ್ನತೆಗೆ ಸಾಕ್ಷಿಯಾಗಿದೆ’, ಅರ್ಚನಾ ಅವರ ಈ ಕಾಣ್ಕಿಯು ತ್ರಿವೇಣಿಯವರ ಕೃತಿಯು ಏಕರೇಖಾತ್ಮಕವಲ್ಲವೆಂದು ತಿಳಿಯಪಡಿಸುತ್ತದೆ.

‘ಜನಪ್ರಿಯ’ ಮಾದರಿಯ ಕೃತಿಯಲ್ಲೂ ಬಹುಮುಖ್ಯ ಆಯಾಮಗಳಿರುತ್ತವೆಯೆಂದು ಮನವರಿಕೆ ಮಾಡಿಕೊಡುವ ಅರ್ಚನಾ ಅವರ ಈ ಕಾಣ್ಕೆಯು ಒಂದು ಮುಖ್ಯ ವಿಮರ್ಶಾ ವ್ಯಾಖ್ಯಾನವೂ ಆಗಿದೆ. `ಬೆಕ್ಕಿನ ಕಣ್ಣು’ – ಕಾದಂಬರಿ ಮನೋವೈಜ್ಞಾನಿಕ ಮತ್ತು ಸಾಮಾಜಿಕ ಉದ್ದೇಶಗಳೆರಡನ್ನೂ ಸಾಧಿಸಿಕೊಂಡಿದೆ” ಎಂದು ಸಾಧಿಸಿ ತೋರಿಸುವ ಉಮೇದು ಅರ್ಚನಾ ಅವರದ್ದಾಗಿದೆ. ಹೀಗೆ `ಬೆಕ್ಕಿನ ಕಣ್ಣು’ವನ್ನು ಮೆಚ್ಚುವ ಅರ್ಚನಾ ಮತ್ತೊಂದು ಕಡೆ (ಪುಟ – 119) ಅಷ್ಟೇನೂ ಮಹತ್ವಪೂರ್ಣ ಕೃತಿಯಲ್ಲವೆಂಬ ಅರ್ಥ ಬರುವ ಮಾತುಗಳನ್ನು ಆಡಿದ್ದಾರೆ. ಅದು ಯಶಸ್ವಿ ಕೃತಿಯಲ್ಲ ಎನ್ನುತ್ತಾರೆ! ಅದೊಂದು ವಿಪರ್ಯಾಸದ ಪ್ರತಿಕ್ರಿಯೆಯಂತೆ ಕಾಣುತ್ತದೆ.

‘ದೂರದ ಬೆಟ್ಟ’ ಕಾದಂಬರಿಯ ನಾಯಕಿ ಸುನಂದಾ ಮನಸ್ಥಿತಿಯನ್ನು ಅರ್ಚನಾ ತುಂಬಾ ವೈಜ್ಞಾನಿಕವಾಗಿ ವಿಶ್ಲೇಷಿಸಿದ್ದಾರೆ. ಜಾಗೃತ ಮತ್ತು ಸುಪ್ತ ಮನಸ್ಥಿತಿಯ ಆಯಾಮಗಳನ್ನು ಮನೋವೈಜ್ಞಾನಿಕ ಪರಿಭಾಷೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಫ್ರಾಯ್ಡ್ ಬರೆದಿರುವ ‘The Interpretation of dream’ ಕೃತಿಯಿಂದ ಪೂರಕ ಅಂಶಗಳನ್ನು ಪಡೆದು ನಾಯಕಿ ಸುನಂದಾಗೆ ಬೀಳುವ ಕನಸುಗಳ ಅರ್ಥಶೋಧ ಮಾಡಿರುವುದು ಅರ್ಥಪೂರ್ಣವಾಗಿದೆ. ‘ಶರಪಂಜರ’ ಕಾದಂಬರಿಯ ನಾಯಕಿ ಕಾವೇರಿ ‘ಹಿಸ್ಟೀರಿಯಾ’ಕ್ಕೆ ತುತ್ತಾದ ಸನ್ನಿವೇಶವನ್ನು ಕಥನ ನಿರೂಪಣೆಯೆಂಬಂತೆ ಕಟ್ಟಿಕೊಟ್ಟಿರುವುದೊಂದು ವಿಶೇಷ. ಜೊತೆಗೆ ‘ಹಿಸ್ಟೀರಿಯಾ’ದ ಇತಿಹಾಸವನ್ನು ಪ್ಲೇಟೋ ಕಾಲದ ಉದಾಹರಣೆ ಸಮೇತ ವಿವರಿಸಿರುವುದು ಓದುಗರ ದೃಷ್ಟಿಯಿಂದ ಉಪಯುಕ್ತ.

‘ಶರಪಂಜರ’ವು ಜನಪ್ರಿಯ ಸಿನಿಮಾ ಆಗಿಯೂ ಪ್ರಸಿದ್ಧವಾಗಿದ್ದರಿಂದ ಅರ್ಚನಾ ಏನು ಹೇಳುತ್ತಾರೆಂಬ ಕುತೂಹಲ ನನಗಿತ್ತು. ‘ಪುಟ್ಟಣ್ಣ ಕಣಗಾಲ’ರ ಅಪಾರ ಅನುಭವದ ಕೌಶಲ್ಯ ಮತ್ತು ನಟಿ ಕಲ್ಪನಾ ಅಸಾಧಾರಣ ಅಭಿನಯಗಳಿದ್ದರೂ ಈ ಕಾದಂಬರಿಯನ್ನಾಧರಿಸಿದ  ಚಲನಚಿತ್ರ, ಅನೇಕ ಸಂದರ್ಭಗಳಲ್ಲಿ ಭಾವಾತೀರೇಕದಲ್ಲಿ Melodrama ಆಗಿ ಪರಿಣಮಿಸಿತ್ತು” ಎಂಬ ಅರ್ಚನಾ ಅಭಿಪ್ರಾಯ ನನ್ನ ಗ್ರಹಿಕೆಗೆ ಹತ್ತಿರವಾಗಿದೆ. ಸಿನಿಮಾಕ್ಕಿಂತ ಕಾದಂಬರಿಯೇ ಚೆನ್ನಾಗಿದೆಯೆಂಬ ಅನಿಸಿಕೆ. ಅವರದಾಗಿದ್ದು ‘ತ್ರಿವೇಣಿಯವರ ಉತ್ತಮ ನಿರೂಪಣೆ, ಸನ್ನಿವೇಶ ನಿರ್ಮಾಣದಿಂದಾಗಿ ಈ  ಕಾದಂಬರಿ ಒಂದು ಉತ್ತಮ ಮನೋವೈಜ್ಞಾನಿಕ ಕೃತಿಯಾಗಿದೆ’ಯೆಂದು ನಿರ್ಣಯಿಸಿರುವುದು ಸರಿಯಾಗಿಯೇ ಇದೆ.

‘ಮುಚ್ಚಿದ ಬಾಗಿಲು’ ಕಾದಂಬರಿಯನ್ನು ಕುರಿತ ಅರ್ಚನಾ ಅವರ ವಿಶ್ಲೇಷಣೆ ಸಾಕಷ್ಟು ವಿವರವಾಗಿ ಮೂಡಿ ಬಂದಿದೆ. ವಿವಿಧ ರೋಗಿಗಳ ಮಾನಸಿಕ ಅಸ್ವಸ್ಥತೆಯ ಮಾದರಿಗಳ ಮೂಲಕ ತ್ರಿವೇಣಿಯವರು ಕಥನಗಳನ್ನು ಕಟ್ಟಿದ ರೀತಿಯನ್ನು ಹೀಗೆ ಗುರುತಿಸಿದ್ದಾರೆ; ‘ಮನಸ್ಸು ಒಂದು ಉಗ್ರಾಣವಿದ್ದಂತೆ. ದಿನನಿತ್ಯದ ನಮ್ಮ ಅನುಭವಗಳಲ್ಲಿ ಬೇಕಾದ್ದು ಬೇಡವಾದವುಗಳಲ್ಲಿ, ಕೆಲವೊಮ್ಮೆ ಬೇಡವಾದ, ಅಹಿತಕರವಾದ ಅನುಭವಗಳನ್ನು ಆ ಉಗ್ರಾಣದ ಮೂಲೆಗೆ ತಳ್ಳಿ ಬಿಡುತ್ತೇವೆ. ಆದರೆ ಮೂಲೆಗೆ ತಳ್ಳಿದ ಅಹಿತಕರ ಅನುಭವಗಳನ್ನು ಮನಸ್ಸು ಕಾಡುತ್ತಲೇ ಇರುತ್ತದೆ. ಇಂತಹ ಮನಸ್ಸುಗಳ ಪದರವನ್ನು ಹಿಂದೆ ಸರಿಸಿ ಒಳ ಹೊಕ್ಕು ನೋಡಿದರೆ ತ್ರಿವೇಣಿ ಈ ಕಾದಂಬರಿಯಲ್ಲಿ ಹಲವಾರು ಮಾದರಿಗಳನ್ನು ಬಿಡಿಬಿಡಿಯಾದ ಕತೆಯ ರೂಪದಲ್ಲಿ ಚಿತ್ರಿಸಿದ್ದಾರೆ; (ಪುಟ – 110)

ಅರ್ಚನಾ ಅವರು ಮನಸ್ಸನ್ನು ಉಗ್ರಾಣಕ್ಕೆ ಹೋಲಿಸಿದ್ದು ಸರಿಯೆ ಎಂಬ ಪ್ರಶ್ನೆಯೂ ಮೂಡಬಹುದು. ‘ಉಗ್ರಾಣ’ವೆನ್ನುವುದು ಸರಕು – ಸಾಮಗ್ರಿಗಳ ತಾಣ. ಮನಸ್ಸಿನಲ್ಲಿರುವ ಭಾವ ಸಂಕುಲವನ್ನು ಸರಕು – ಸಾಮಗ್ರಿಗಳೆಂದು ತಿಳಿಯುವುದು ಎಷ್ಟು ಸೂಕ್ತ ಎಂಬ ಪ್ರಶ್ನೆ ಏಳುವುದು ಸಹಜ. ಮನಸ್ಸಿನಲ್ಲಿ ಅನೇಕ ಭಾವನೆಗಳು ಸರಕು ಸಾಮಗ್ರಿಯಂತೆ ತುಂಬಿಕೊಂಡಿರುತ್ತವೆ ಎಂಬ ಸೀಮಿತಾರ್ಥದಲ್ಲೇ ‘ಉಗ್ರಾಣ’ ಪದವನ್ನು ಬಳಸಿದಂತೆ ಕಾಣುತ್ತದೆ. ಸರಕುಗಳಿಗೆ ಸ್ಪಂದನ ಶೀಲತೆ ಇರುವುದಿಲ್ಲ. ಭಾವನೆಗಳಿಗೆ ಸ್ಪಂದನೆ – ಸಂವೇದನೆಗಳು ಇರುತ್ತವೆ. ತ್ರಿವೇಣಿಯವರು ಮನಸ್ಸನ್ನು ಭಾವಕೋಶವೆಂಬ ‘ಭಾವನೆ’ಯಿಂದ ಪ್ರವೇಶಿಸಿ ಕಥನಗಳನ್ನು ಕಟ್ಟಿದ್ದಾರೆಂಬುದನ್ನು ಗಮನಿಸಬೇಕು. ಇದು ಅರ್ಚನಾ ಅವರಿಗೂ ತಿಳಿದಿದೆ. ಹೀಗಾಗಿಯೇ ‘ಮುಚ್ಚಿದ ಬಾಗಿಲು’ ಕಾದಂಬರಿಯ ವಿಶ್ಲೇಷಣಾ ಅಧ್ಯಾಯದ ಕೊನೆಗೆ ಮಾನಸಿಕ ಲೋಕದ ಏರುಪೇರುಗಳನ್ನು ಸರಿಯಾಗಿಯೇ ಗುರುತಿಸಿದ್ದಾರೆ.

‘ದೇಹದಲ್ಲಿ ಶೀತ ಹೆಚ್ಚಾದರೆ ನೆಗಡಿ ಹೆಚ್ಚಾಗುತ್ತದೆ. ಹೆಚ್ಚು ಉಷ್ಣವಾದಾಗ ದೇಹಕ್ಕೆ ಜ್ವರ ಬರುತ್ತದೆ. ಕಣ್ಣಿಗೆ ಹೆಚ್ಚು ಆಯಾಸವಾದಾಗ ಕಣ್ಣು ಕೆಂಪಾಗುತ್ತದೆ. ಹಾಗೆಯೇ ಮನಸ್ಸಿಗೆ ಯಾವುದಾದರೊಂದು ರೀತಿಯಿಂದ ಹಿಂಸೆಯಾದರೆ, ಮನಸ್ಸಿನ ಮೇಲೆ ಒತ್ತಡ ಹೆಚ್ಚಾದರೆ, ಜೀವನದ ಕಹಿಯನ್ನುಂಡು ಮನಸ್ಸು ಬೇಸರಗೊಂಡರೆ, ಯಾವುದಾದರೊಂದು ಭಾವನೆಯನ್ನು ಪ್ರಕಟಿಸಲಾಗದೆ. ಅದನ್ನು ಅದುಮಿಟ್ಟರೆ, ಅವು ಒಂದಲ್ಲ ಒಂದು ರೂಪದಲ್ಲಿ ಹೊರ ಹಾಕಲ್ಪಡುತ್ತವೆ. ಅಂತಹ ಭಾವನೆಗಳಿಗೆಲ್ಲ ಮನಸ್ಸಿನಿಂದ ಹೊರ ಹೋಗಲು ಒಂದು ದಾರಿಬೇಕು. ಎಲ್ಲಾ ಭಾವನೆಗಳನ್ನೂ ಮನಸ್ಸಿನಲ್ಲಿಯೇ ಕೂಡಿ ಹಾಕುವುದು ತಪ್ಪು. ಬಲೂನಿಗೆ ಮಿತಿ ಮೀರಿ ಗಾಳಿ ತುಂಬಿದರೆ, ಅದು ಒತ್ತಡ ತಾಳಲಾರದೆ ಒಡೆದು ಹೋಗುವಂತೆ, ಮಾನವನ ಮನಸ್ಸು ಕೂಡ ಬಲವಂತವಾಗಿ ಭಾವನೆಗಳನ್ನು ಸಹಿಸುವುದಿಲ್ಲ. ಸಮಾಜ ತನ್ನ ಸುತ್ತಲಿನ ಜನರಿಗೆ ಸಹಕಾರ, ಪ್ರೀತಿ, ಸಹಾನುಭೂತಿ ತೋರಿದರೆ ಮಾತ್ರ ಮಾನಸಿಕ ರೋಗವನ್ನು ಗುಣಪಡಿಸಲು ಸಾಧ್ಯವೆಂಬ ನಿಲುವನ್ನು ತ್ರಿವೇಣಿ, ಈ ಕಾದಂಬರಿಯ ಪಾತ್ರಗಳ ಮೂಲಕ ಚಿತ್ರಿಸಿದ್ದಾರೆ’ (ಪುಟ-111)

ಡಾ. ಅರ್ಚನಾ ಅವರ ಈ ಮಾತುಗಳಲ್ಲಿ ಒಬ್ಬ ಮನೋಶಾಸ್ತ್ರಜ್ಞೆ ಇದ್ದಾರೆ ಎನ್ನಿಸುತ್ತದೆ! ಸಾಹಿತ್ಯದ ಸಂವೇದನೆ ಮತ್ತು ಮನೋವಿಜ್ಞಾನದ ಚಿಂತನೆ – ಎರಡೂ ಸೇರಿದ ವಿಶ್ಲೇಷಣಾ ವಿಧಾನದಿಂದ ಅರ್ಚನಾ ಅವರು ಗಂಭೀರ ಗಮನಕ್ಕೆ ಪಾತ್ರರಾಗಿದ್ದಾರೆ. ಅರ್ಚನಾ ಅವರ ಅಧ್ಯಯನವು ತ್ರಿವೇಣಿ ಕಾದಂಬರಿಗಳ ಮನೋವೈಜ್ಞಾನಿಕ ಮಂಥನಕ್ಕೆ ಮಾತ್ರ ಸೀಮಿತವಾಗಿಲ್ಲ, ಸಾಹಿತ್ಯಕ ನೆಲೆಗಳ ಶೋಧವನ್ನೂ ನಡೆಸಿದ್ದಾರೆ. ಹೀಗಾಗಿ ತ್ರಿವೇಣಿಯವರ ಕಾದಂಬರಿಗಳ ಅಧ್ಯಯನಕ್ಕೆ ಒಂದು ಮಟ್ಟಿನ ಸಮಗ್ರ ಸ್ವರೂಪ ಲಭ್ಯವಾಗಿದೆ.

ಈ ಅಧ್ಯಯನ ಭಾಗದಲ್ಲಿ ವಸ್ತು ನಿರ್ವಹಣೆ, ಭಾಷಾ ಶೈಲಿಗಳನ್ನು ಕುರಿತು ಗಂಭೀರ ಚರ್ಚೆಯಿದೆ. ವಸ್ತುವಿಗೂ ಭಾಷಾಶೈಲಿಗೂ ಸಂಬಂಧವಿರುವುದನ್ನು ಅರ್ಚನಾ ಸರಿಯಾಗಿಯೇ ಗುರುತಿಸಿದ್ದಾರೆ; ‘ತ್ರಿವೇಣಿ ಅವರ ಕನ್ನಡದಲ್ಲಿ ಬರೆಯಲ್ಪಟ್ಟ, ನಗರೀಕೃತ ಮಧ್ಯಮ ವರ್ಗಗಳ ಅನುಭವಕ್ಕೆ ಸೀಮಿತವಾದ ಮತ್ತು ಚುರುಕಾದ ಸಂಭಾಷಣೆಗಳಿಂದ ಕೂಡಿದ ಮಾದರಿಯನ್ನು ಗಮನಿಸಬಹುದು.’ (ಪುಟ – 126)

ಹೀಗೆ ತ್ರಿವೇಣಿಯವರ ಭಾಷಾ ಶೈಲಿಗೂ ಮಧ್ಯಮ ವರ್ಗಕ್ಕೂ ಇರುವ ಸಂಬಂಧವನ್ನು ಗುರುತಿಸುವ ಅರ್ಚನಾ, ತ್ರಿವೇಣಿಯವರ ವಸ್ತು ನಿರ್ವಹಣೆ ಕುರಿತಂತೆ ‘ಬದುಕನ್ನು ಕುರಿತು ಭಾವುಕ ಪ್ರತಿಕ್ರಿಯೆಗಳನ್ನು ತಮ್ಮ ಕಾದಂಬರಿಗಳಲ್ಲಿ ದಾಖಲಿಸಿದ್ದಾರಲ್ಲದೆ, ಓದುಗರ ವೈಚಾರಿಕತೆ ಮತ್ತು ಭಾವನಾತ್ಮಕ ವ್ಯಕ್ತಿತ್ವವನ್ನೇ ತಮ್ಮ ಲಕ್ಷ್ಯವಾಗಿಸಿಕೊಂಡರು’ ಎಂಬ ನಿರ್ಣಯಕ್ಕೆ ಬರುತ್ತಾರೆ. ವೈಚಾರಿಕತೆ ಮತ್ತು ಭಾವನಾತ್ಮಕತೆಗಳನ್ನು ಒಟ್ಟಿಗೇ ಗ್ರಹಿಸುವುದು ಸುಲಭ ಸಾಧ್ಯವಲ್ಲ. ಈ ಗ್ರಹಿಕೆಯನ್ನು ಓದುಗರ ವ್ಯಕ್ತಿತ್ವದಲ್ಲಿ ಕಂಡುಕೊಂಡು ತ್ರಿವೇಣಿಯವರು ಬರೆದಿದ್ದಾರೆಂಬ ನಿರ್ಣಯವು ಮತ್ತಷ್ಟು ವಿವರಣಾತ್ಮಕ ಚರ್ಚೆಯನ್ನು ಬಯಸುತ್ತದೆ. ಯಾಕೆಂದರೆ, ವೈಚಾರಿಕತೆ ಮತ್ತು ಭಾವನಾತ್ಮಕತೆಗಳನ್ನು ಪ್ರತ್ಯೇಕವೆಂದು ಪರಿಗಣಿಸುವ ದೃಷ್ಟಿಕೋನವೊಂದು ನಮ್ಮಲ್ಲಿದೆ.

ಈ ಎರಡೂ ಬೆಸೆದ ವ್ಯಕ್ತಿತ್ವವೊಂದು ಸಾಧ್ಯವೆನ್ನುವುದು ನನ್ನ ಮಟ್ಟಿಗೆ ನಿಜ. ಆದರೆ ಅಧ್ಯಯನದ ವಿಧಾನಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಇಂತಹ ವಿಭಿನ್ನ ನಿಜದ ನೆಲೆಗಳನ್ನು ವಿಸ್ತೃತ ಚರ್ಚೆ ಅಥವಾ ಚಿಂತನೆ ಮೂಲಕ ಸಾದರ ಪಡಿಸುವ ಅಗತ್ಯವಿರುತ್ತದೆ. ಅರ್ಚನಾ ಅವರು ಇಂತಹ ನಿರ್ಣಯಕ್ಕೆ ಬರುವ ಮುಂಚೆ ಕಾದಂಬರಿಗಳ ವಿಸ್ತೃತ ವಿಶ್ಲೇಷಣೆ ಮಾಡಿದ್ದಾರೆ, ನಿಜ. ಆದರೆ ತ್ರಿವೇಣಿಯವರ ಲಕ್ಷ್ಯದಲ್ಲಿ ಓದುಗರ ವೈಚಾರಿಕ ಮತ್ತು ಭಾವನಾತ್ಮಕ ವ್ಯಕ್ತಿತ್ವವಿತ್ತೆಂಬ ನಿರ್ಧಾರಕ ನುಡಿಗೆ ಪೂರಕ ಚರ್ಚೆಯೊಂದಿದ್ದರೆ, ಕೃತಿಯ ಮೌಲ್ಯಕ್ಕೆ ಮತ್ತಷ್ಟು ಮಹತ್ವ ಸೇರ್ಪಡೆಯಾಗುತ್ತಿತ್ತು.

ತ್ರಿವೇಣಿಯವರನ್ನು 19ನೇ ಶತಮಾನದ ಆಂಗ್ಲ ಲೇಖಕಿ ಜೇನ್ ಆಸ್ಟಿನ್ ಅವರೊಂದಿಗೆ ಹೋಲಿಸುವುದನ್ನು ಅರ್ಚನಾ ಅವರು ಪೂರ್ಣ ಪ್ರಮಾಣದಲ್ಲಿ ಒಪ್ಪದೆ, ನಡೆಸಿರುವ ಸಂಕ್ಷಿಪ್ತ ಚರ್ಚೆಯನ್ನು ಇಲ್ಲಿ ಉಲ್ಲೇಖಿಸಬಹುದು. ‘ಈ ಹೋಲಿಕೆ ಒಂದು ಮಟ್ಟದಲ್ಲಿ ಮಾತ್ರ ಅರ್ಥಪೂರ್ಣ’ವೆಂದು ಭಾವಿಸುವ ಅರ್ಚನಾ ಅವರು ಅದಕ್ಕೆ ಸಂಕ್ಷಿಪ್ತವಾಗಿ ಸಮರ್ಥನೆ ಒದಗಿಸುತ್ತಾರೆ. ‘ಜೇನ್ ಆಸ್ಟಿನ್ ಕೃತಿಗಳಲ್ಲಿ ಕಂಡುಬರುವ ಜಟಿಲ ಹಾಗೂ ಸಂಕೀರ್ಣ ಸಂವಿಧಾನಗಳು ತ್ರಿವೇಣಿಯವರ ಕೃತಿಗಳಲ್ಲಿ ಕಾಣಿಸದು’ ಎಂದು ವಿಮರ್ಶಿಸುವ ಮೂಲಕ ತಮ್ಮ ನಿಲುವಿಗೆ ಸೂಕ್ತ ಪುರಾವೆ ಒದಗಿಸುತ್ತಾರೆ. ಇಂತಹ ವಿಶ್ಲೇಷಣೆಯಿಂದ ಕೃತಿಯ ಮೌಲ್ಯ ಬೆಳೆಯುತ್ತದೆ. ಇದೇ ಪುಟದಲ್ಲಿ (120) ತ್ರಿವೇಣಿಯವರ ಮೌಲ್ಯ ದೃಷ್ಟಿಯ ಸ್ಥಾನ ನಿರ್ದೇಶನವನ್ನು ಮಾಡುತ್ತಾರೆ:

‘ತ್ರಿವೇಣಿ, ಮನೋವಿಜ್ಞಾನವನ್ನು ಬಳಸಿದುದರಿಂದ ಅವರು ಹೊಸ ಹಾದಿಯನ್ನು ಹಿಡಿದರು ಎಂದು ತೋರಿದರೂ ಅವರ ಕಾದಂಬರಿಗಳಲ್ಲಿ ಪ್ರತಿಪಾದಿಸಿರುವ ಮೌಲ್ಯಗಳು, ಭಾರತೀಯ ಸಮಾಜದಲ್ಲಿ ಪ್ರಚಲಿತವಿದ್ದ ಮೌಲ್ಯಗಳೇ ಆಗಿದ್ದವು’ ಎಂಬುದು ಅರ್ಚನಾ ಅವರ ಅಭಿಪ್ರಾಯ, ಇದೊಂದು ಮಹತ್ವದ ಹೇಳಿಕೆ. ತ್ರಿವೇಣಿಯವರು ‘ಹೊಸಹಾದಿ ಹಿಡಿದರು ಎಂದು ತೋರಿದರೂ’ ಎಂದು ಹೇಳುವಲ್ಲಿ ‘ಹೊಸಹಾದಿ’ಯೆಂಬುದು ತೋರಿಕೆಯ ಅಥವಾ ಮೇಲ್ಮೈ ಮಟ್ಟದಲ್ಲಿ ಮಾತ್ರ ಇದೆಯೆ ಎಂಬ ಅನುಮಾನ ಹುಟ್ಟಿಸುತ್ತದೆ.

ಭಾರತೀಯ ಸಮಾಜದಲ್ಲಿ ಪ್ರಚಲಿತವಿದ್ದ ಮೌಲ್ಯಗಳನ್ನೇ ತ್ರಿವೇಣಿಯವರು ಪ್ರತಿಪಾದಿಸಿದ್ದಾರೆಂದು ಅಭಿಪ್ರಾಯಿಸುವ ಅರ್ಚನಾ ಅವರು, ಇದು ತ್ರಿವೇಣಿಯವರ ದೃಷ್ಟಿಕೋನದ ಮಿತಿಯೆಂದು ಭಾವಿಸಿರುವಂತಿದೆ. ಇದೇ ಕೃತಿಯಲ್ಲಿ ಅರ್ಚನಾ ಅವರು ಭಾರತೀಯ ಸಂಸ್ಕೃತಿ ಮತ್ತು ಸಮಾಜವು ಮಹಿಳೆಯನ್ನು ಕೇವಲ ವೈಭವೀಕರಿಸಿತೇ ಹೊರತು ಸೂಕ್ತ ಸ್ಥಾನ ನೀಡಿಲ್ಲವೆಂದು ವಾದಿಸಿರುವ ಹಿನ್ನೆಲೆಯಲ್ಲಿ ತ್ರಿವೇಣಿಯವರ ದೃಷ್ಟಿಕೋನದ ಮಿತಿಯನ್ನು ಗುರುತಿಸಬಹುದು. ಅರ್ಚನಾ ಅಭಿಪ್ರಾಯ ಸರಿಯೇ ಇರಬಹುದು ಆದರೆ ಇಂತಹ ನಿರ್ಣಯಾತ್ಮಕ ನುಡಿಗಳು ಅಭಿಪ್ರಾಯದ ಹಂತದಲ್ಲಿ ಮಾತ್ರ ನಿಲ್ಲದೆ ವಿಸ್ತೃತ ಹಾಗೂ ಪೂರಕ ಚಿಂತನಾ ವಿಧಾನವನ್ನು ಬಯಸುತ್ತವೆ.

ಇದೇ ಅಧ್ಯಾಯದ ಆರಂಭದಲ್ಲಿ (ಪುಟ – 114) ‘ಕಾದಂಬರಿ ಎಂಬುದು ಕಥನಕ್ಕಿಂತ ಭಿನ್ನವಾಗಿರಬೇಕೆಂಬ ಅರಿವು ಅಂದಿನ ಕೃತಿಕಾರರಲ್ಲಿ ಇದ್ದಂತೆ ಕಾಣುತ್ತದೆ’ ಎಂಬ ನೋಟವೊಂದಿದೆ. ಹಾಗಾದರೆ ಕಾದಂಬರಿಯಲ್ಲಿ ಕಥನವಿರುವುದಿಲ್ಲವೆ? ಕಥನ ಕ್ರಿಯೆಯೇ ಕಾದಂಬರಿಯ ಶಿಲ್ಪವಾಗುವುದಿಲ್ಲವೆ? ಈ ರೀತಿಯ ಪ್ರಶ್ನೆಗಳು ಹುಟ್ಟುತ್ತವೆ. ಆದ್ದರಿಂದ ಇಂತಹ ನೋಟಗಳ ವಿಷಯದಲ್ಲಿ ವಿಸ್ತೃತವಾದ ಪ್ರತ್ಯೇಕ ಚಿಂತನೆಯೇ ನಡೆದಿದ್ದರೆ ಕೃತಿಗೊಂದು ಹೊಸ ಆಯಾಮ ಸಾಧ್ಯವಾಗುತ್ತಿತ್ತು. ಈ ಆಯಾಮವನ್ನು ಇದೇ ಅರ್ಚನಾ ಅವರು ಕಾದಂಬರಿಗಳ ವಸ್ತು ವಿವರಗಳ ಚರ್ಚೆಯಲ್ಲಿ ಸಾಧ್ಯವಾಗಿಸುತ್ತಾರೆ. ಉದಾಹರಣೆಗೆ ‘ಅಪಸ್ವರ’ ಮತ್ತು ‘ಅಪಜಯ’ ಕಾದಂಬರಿಗಳನ್ನು ಕುರಿತ ತಾತ್ವಿಕ ಚರ್ಚೆಯನ್ನು ಗಮನಿಸಬಹುದು. ಈ ತಾತ್ವಿಕ ಚರ್ಚೆಯು ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಹೀಗೆ ಕಾದಂಬರಿಗಳ ವಸ್ತು ಮತ್ತು ಒಳ ವಿವರಗಳಲ್ಲಿ ನಡೆಸುವ ತಾತ್ವಿಕ ಚರ್ಚೆಯು, ತಾತ್ವಿಕ ನಿರ್ಣಯಗಳ ಸಂದರ್ಭದಲ್ಲೂ ನಡೆಯಬೇಕಿತ್ತು ಮತ್ತು ಹಾಗೆ ನಡೆಸುವುದರಿಂದ ಈ ಕೃತಿಗೆ ಈಗಾಗಲೇ ಇರುವ ಮೌಲ್ಯಕ್ಕೆ ಮತ್ತಷ್ಟು ಮೆರುಗು ಬರುತ್ತಿತ್ತು. ಇದು ಮತ್ತೊಮ್ಮೆ ನನ್ನ ಸ್ಪಷ್ಟನೆ.

ಈ ಕೃತಿಯ ಕೊನೆಯ ಭಾಗದಲ್ಲಿ ಡಾ. ಸಿ.ಎನ್. ರಾಮಚಂದ್ರನ್, ಡಾ. ಕೇಶವಶರ್ಮ, ಅವರ ವಿಮರ್ಶಾ ಪ್ರಾತಿನಿಧ್ಯದ ಸಂದರ್ಶನಗಳ ಜೊತೆಗೆ ಡಾ. ಕೆ.ಎಸ್. ಪವಿತ್ರ, ಎಂ. ಶ್ರೀಧರಮೂರ್ತಿಯವರ ಮನೋವಿಜ್ಞಾನ ಪ್ರಾತಿನಿಧ್ಯದ ಸಂದರ್ಶನಗಳನ್ನು ಸೇರಿಸಿದ್ದು ಈ ಸಂದರ್ಶನಗಳು ಆಯಾಕ್ಷೇತ್ರದ ಉಪಯುಕ್ತ ವ್ಯಾಖ್ಯಾನಗಳನ್ನು ನೀಡುತ್ತವೆ. ಜೊತೆಗೆ ಆಯ್ದ ಓದುಗರ ಅಭಿಪ್ರಾಯಗಳನ್ನು ಕೊಡಲಾಗಿದೆ.

ಒಟ್ಟಾರೆ, ಡಾ. ಅರ್ಚನಾ ಅವರ ಅಧ್ಯಯನ ಶೀಲತೆ, ವಿಷಯ ಗ್ರಹಿಕೆಯ ಪ್ರಾಮಾಣಿಕತೆ, ಕೃತಿಯುದ್ದಕ್ಕೂ ಅಂತರ್ಗತ ಶಕ್ತಿಯಾಗಿ ಹರಿದಿದೆ. ತೋರಿಕೆಯ ‘ತೋರುಭಾರ’ ಇಲ್ಲದ ವಿಶ್ಲೇಷಣಾ ವಿಧಾನದಿಂದ ಓದುಗರ ಬಳಗವನ್ನು ಆವರಿಸಿಕೊಳ್ಳುವ ಗುಣವನ್ನು ಪಡೆದಿರುವ ಈ ಕೃತಿ ಒಂದು ಗಮನಾರ್ಹ ಕೊಡುಗೆಯಾಗಿದೆ. ಪಿಎಚ್.ಡಿ ಗೆಂದು ಮಾಡಿದ ಈ ಅಧ್ಯಯನವು ಡಾಕ್ಟರೇಟ್‍ ಧಾರಣೆಗೆ ಮಾತ್ರ ಮಿತಿಗೊಳ್ಳದೆ, ಅರ್ಚನಾ ಅವರ ಅಧ್ಯಯನ ಮತ್ತು ಬರವಣಿಗೆ ಮುಂದುವರಿಯಬೇಕು. ಅವರಿಗೆ ವಿಶ್ಲೇಷಣೆ ಮತ್ತು ನಿರೂಪಣೆಯ ಸಾಮರ್ಥ್ಯವಿದೆ. ಈ ಸಾಮರ್ಥ್ಯ ಸದುಪಯೋಗವಾಗಬೇಕು ಎಂದು ಆಶಿಸುತ್ತೇನೆ.

‍ಲೇಖಕರು Avadhi

January 17, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬಯಲು ಸೀಮೆಯ ʼಒಕ್ಕಲ ಒನಪುʼ

ಬಯಲು ಸೀಮೆಯ ʼಒಕ್ಕಲ ಒನಪುʼ

ಮಧುಸೂದನ ವೈ ಎನ್ ಈ ಪುಸ್ತಕ ಕೈಗೆ ಸಿಕ್ಕಿ ಒಂದೋ ಎರಡೋ ತಿಂಗಳಾಗಿರಬಹುದು. ಎರಡು ಹಗಲು ಎರಡು ಇನ್ನಿಂಗ್ಸ್‌ ಗಳಲ್ಲಿ ಖತಂ! ಓದಿದ ಎಷ್ಟೋ...

೧ ಪ್ರತಿಕ್ರಿಯೆ

  1. Kala Bhagwat

    ತ್ರಿವೇಣಿ ಮನಮಂಥನ ಪುಸ್ತಕ ಎಲ್ಲಿ ಲಭ್ಯ ವಿದೆ ಎಂದು ತಿಳಿಸಬಹುದೇ?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: