ಥರಾವರಿ ಸೋಪ್ ಮಧ್ಯೆ ಅಂಟುವಾಳದ ಸಿಪ್ಪೆ

urmile.jpg“ರಾಗಿರೊಟ್ಟಿ” ಕಾಲಂ

ಊರ್ಮಿಳೆ

ಣಿಸಿದೆ –
ಕರೆಕ್ಟಾಗಿ ಎಣಿಸಿದೆ –
ಒಂದು ಎರಡು ಮೂರು…

ಮೂರು ಸೋಪಿತ್ತು. ಎಲ್ಲದರ ಪ್ಯಾಕ್ ಓಪನ್ ಆಗಿತ್ತು. ಬಳಸಿದ್ದಾರೆ ಅನ್ನೋದಕ್ಕೆ ಪ್ರೂಫ್ ಇತ್ತು. ಏನು ಪ್ರಾಬ್ಲಂ ಇವರ ಮನೇಲಿ ಅಂತಾ ಯೋಚ್ನೆ ಆಯ್ತು.

ಆಗ ನಾನು ಆರನೇದೋ ಏಳನೇದೋ ಕ್ಲಾಸಲ್ಲಿದ್ದೆ. ಅಣ್ಣನ ಬಾಲ ಹಿಡಕೊಂಡು ಓಡಾಡೋದೇ ಕಸಬು. ಧಾರವಾಡದಲ್ಲಿದ್ದ ಅಣ್ಣ ನಮ್ಮ ಕ್ಲಾಸ್ ಮೇಟ್ ಮನೆಗೆ ಕರ್ಕೊಂಡು ಹೋಗ್ತೀನಿ ಬನ್ನಿ ಅಂತಾ ಕರ್ಕೊಂಡು ಹೋದ್ರು. ಆವಾಗ್ಲೇ ಈ ಶಾಕ್ ಎದುರಾದದ್ದು.

ಬಚ್ಚಲ ಮನೆಗೆ ಹೋದಾಗ್ಲೇ ಈ ಮೂರು ಸೋಪ್ ಕಂಡಿತ್ತು. ಬಚ್ಚಲ ಮನೆ ಅಂದ್ರೆ ಗೋಪಾಲ್ ಟೂಥ್ ಪೌಡರ್, ಮೈ ತಿಕ್ಕೋಕೆ ಒಂದು ಒರಟು ಕಲ್ಲು, ಮುಖ ತೊಳೆಯೋದಕ್ಕೆ ಒಂದು ಸೋಪು, ಅಂತಾ ಅಂದ್ಕೊಂಡಿದ್ದ ನಮಗೆ, ಮೂರು ಟೂಥ್ ಬ್ರಷ್, ಮೂರು ಸೋಪು ಶಾಕ್ ತಂದಿತ್ತು. ಗಂಡ, ಹೆಂಡತಿ ಒಂದು ಮಗು ಇದ್ದ ಮನೆ ಅದು. ಯಾವುದನ್ನು ನೋಡಿದ್ರೂ ಮೂರೊಂದ್ಲ ಮೂರು ಅನ್ನೋ ಪರಿಸ್ಥಿತಿ. ನಮ್ಮನೇಲಿ ಅಪ್ಪ, ಅಮ್ಮ, ಏಳು ಜನ ಮಕ್ಕಳು. ಆದ್ರೆ ಸೋಪು ಮಾತ್ರ ಒಂದೇ. ದೇವ್ರು ಒಂದು ಕ್ಷಣ ನನ್ನ ತಲೆ ತೆಗ್ದು ಅಲ್ಲಿ ಕ್ವೆಶ್ಚನ್ ಮಾರ್ಕ್ ಇಟ್ಟಿದ್ದಾನೇನೋ ಅನ್ನುವಷ್ಟು ಗೊಂದಲ. ಆಮೇಲೆ ನಾನೇ ಡಿಸೈಡ್ ಮಾಡ್ಕೊಂಡೆ. ಅವ್ರ ಮನೇಲಿ ಎಲ್ಲರಿಗೂ ಕಾಯಿಲೆ ಇದೆ. ಅದ್ಕೇ ಒಬ್ರ ಸೋಪು ಒಬ್ರು ಬಳಸಲ್ಲ ಅಂತಾ.

ಮೊನ್ನೆ ಟೈಮ್ಸ್ ಆಫ್ ಇಂಡಿಯಾದಲ್ಲಿ ಶಾರೂಕ್ ಬಟ್ಟೆ ಬಿಚ್ಚಿ ಗುಲಾಬಿ ಪಕಳೆ ಹರಕ್ಕೊಂಡು ಬಾತ್ ಟಬ್ ನಲ್ಲಿ ಕೂತ್ಕೊಂಡಿದ್ದನ್ನ ನೋಡಿದ್ನಲ್ಲ, ಫಳ್ಳಂತ ಇದು ತಲೆಗೆ ಬಂತು. ಆಗ ಬಚ್ಚಲ ಮನೆ ಇನ್ನೂ ಬಾತ್ ರೂಂ ಆಗಿರಲಿಲ್ಲ. ತೆಂಗಿನಕಾಯಿ ಚಿಪ್ಪು, ಸೀಮೆ ಎಣ್ಣೆ, ಊದು ಕೊಳವೆ, ಬೆಂಕಿ ಒಲೆ ಮಾಯವಾಗಿ ವಾಟರ್ ಹೀಟರ್ ಬಂದಿರಲಿಲ್ಲ. ಒಲೆಯಿಂದೆದ್ದ ಹೊಗೆ ಗೋಡೆಯನ್ನೆಲ್ಲ ಕಪ್ಪು ಮಾಡಿತ್ತು. ಅದು ಹೋಗಿ ಟೈಲ್ಸ್ ಬಂದಿರಲಿಲ್ಲ. ಅಮ್ಮ ತಲೆಗೆ ನೀರು ಹಾಕು ಅಂತಾ ಕುಂಯ್ಯೋ ಅನ್ನಬೇಕಿತ್ತೇ ಹೊರತು ಸುಂಯ್ಯಂತಾ ನೀರು ಸುರಿಸೋ ಶವರ್ ಇರಲಿಲ್ಲ. ಹಾಗಾಗೀನೇ ಶಾರೂಕ್ ನಮ್ಮನೆಯ ಬಚ್ಚಲ ಮನೆಗೆ ಬರಲೇ ಇಲ್ಲ. ಅಥ್ವಾ ನಮ್ಮ ಬಚ್ಚಲ ಮನೆಯಿಂದ ಯಾವ ಶಾರೂಕ್ಕೂ ಹೊರಗಡೆ ಹೋಗ್ಲಿಲ್ಲ.

ಯಾಕೋ ಗೊತ್ತಿಲ್ಲ. ಈವಾಗ ಸಿಇಟಿ, ಐಐಎಂ, ಐಐಎಸ್, ಲಾ ಸ್ಕೂಲು, ಮೌಂಟ್ ಕಾರ್ಮೆಲ್, ಡಿಡಿಎಲ್ ಜೆ, ಫೋರಂ ಮಾಲ್, ಐ ಮ್ಯಾಕ್ಸ್ ಗೂ ಸೋಪಿಗೂ ಏನೋ ಒಂಥರಾ ಕನೆಕ್ಷನ್ ಇದೆ ಅನ್ಸುತ್ತೆ.

“ಲೈಫ್ ಬಾಯ್ ಎಲ್ಲಿದೆಯೋ ಅಲ್ಲಿದೆ ಆರೋಗ್ಯ… ಲೈಫ್ ಬಾಯ್ ಲೈಫ್ ಬಾಯ್….” ಅನ್ನೋ ಹಾಡು ಸಾರಿ… ಜಿಂಗಲ್ ನಮ್ಗೆ ಸಾಕಾಗಿತ್ತು. ಅದನ್ನ ಸೋಪಂತ ಕರದ್ರೂ ನಡೀತಿತ್ತು. ಇಟ್ಟಿಗೆ ಅಂತ ಕರೆದ್ರೂ ಆಗ್ತಿತ್ತು. ಆದ್ರೆ ಈಗ ಎಲ್ಲಾ ಥರಾ ಥರಾ. ಐಶ್ವರ್ಯ ರೈನ ನೋಡೋಕ್ಕೆ ಈಗ ಯಾರಿಗೂ ಟೈಮಿಲ್ಲ. ಆದ್ರಿಂದ ತಾವೇ ಐಶ್ವರ್ಯಾ ರೈ ಆಗೋದಕ್ಕೆ ಇಷ್ಟಪಡ್ತಾರೆ ಅಂತಾ ಲಕ್ಸ್ ಸೋಪ್ ಬಗ್ಗೆ ಟೈಮ್ಸ್ ಆಫ್ ಇಂಡಿಯಾದಲ್ಲಿ ಲೇಖನ ಇತ್ತು. ಅರೆ! ಬೇಕಾಗಿರೋ ಸೋಪ್ ಹಾಕ್ಕೊಂಡು ನಮಗೆ ಬೇಕಾಗಿರೋ ಥರಾ ಬದಲಾಗೋದು ಸಾಧ್ಯಾನಾ? ಹಾಗಾದ್ರೆ ಕುರೂಪಿಯಾಗಿದ್ದಳಲ್ಲ, ಅವಳು ಸೋಪ್ ಹಚ್ಕೊಂಡಿದ್ರೆ ಸಾಕಾಗಿತ್ತು. ಶಾಪ ವಿಮೋಚನೆಗೆ ಯಾಕೆ ರಾಜಕುಮಾರ ಬರ್ಲಿ ಅಂತಾ ಕಾಯ್ಬೇಕಾಗಿತ್ತು? ಕಪ್ಪೆ ರಾಜಕುಮಾರ ಆಗೋದಕ್ಕೆ ಯಾಕೆ ಸುಂದರಿ ಟಚ್ ಗೇ ಕಾಯ್ಬೇಕಾಗಿತ್ತು? ಸೋಪುಗಳೆಲ್ಲ ಆ ಕಾಲ್ದಲ್ಲೇ ಇದ್ದಿದ್ರೆ ಪಾಪ, ಎಷ್ಟೊಂದು ಅಜ್ಜಿ ಕಥೆಗಳು ಮಟಾಶ್ ಆಗಿ ಹೋಗ್ತಿತ್ತು.

ಸೋಪುಗಳ ಸ್ಕೋಪು ಈಗ ಜಾಸ್ತಿ ಆಗಿದೆ. ನೀವು ಮೈಸೂರ್ ಸ್ಯಾಂಡಲ್, ಚಂದ್ರಿಕಾ, ಹಮಾಮ್ ಬಳಸಿದ್ರೆ ಹಳ್ಳಿ ಗುಗ್ಗು ಅನ್ನೋ ಥರಾ ನೋಡ್ತಾರೆ. ಡೆಟಾಲ್, ಮೆಡಿಮಿಕ್ಸ್ ಬಳಸಿದ್ರೆ ಪೇಶಂಟ್. ಲಕ್ಸ್, ಲಿರಿಲ್ ಬಳಸಿದ್ರೆ ಎಜುಕೇಟೆಡ್. ಎವಿಟಾ, ಡೋವ್ ಬಳಸಿದ್ರೆ ಗ್ರೇಟ್.

ಯಾಕೊ ಗೊತ್ತಿಲ್ಲ. ಒಂದು ಮನೇಲಿ ಮೂರು ಸೋಪು ಅನ್ನೋ ಶಾಕು ನನ್ನಲ್ಲಿ ಎಷ್ಟು ಆಳಕ್ಕಿಳಿದುಬಿಟ್ಟಿದೆ ಅಂದ್ರೆ, ಯಾರದಾದ್ರೂ ಬಚ್ಚಲ ಮನೆಗೋಗೋ ಸಂದರ್ಭ ಬಂದ್ರೆ ಕಣ್ಣು ಆಟೊಮ್ಯಾಟಿಕ್ ಆಗಿ ಸೋಪ್ ಟ್ರೇ ಕಡೆ ನೋಡುತ್ತೆ. ಆಮೇಲೆ ಯಾವ ಸೋಪು ಅಂತಾ ನೋಡುತ್ತೆ. ಈಗಂತೂ ಯಾರ ಮನೆಗೋಗ್ಲಿ, ಬಚ್ಚಲ ಮನೆ ಅನ್ನೋ ಬದ್ಲು ಫೋರಂ ಮಾಲ್ ಗೆ ಹೋಗಿದ್ದೀನೇನೋ ಅಂತ ಕನ್ ಫ್ಯೂಸ್ ಆಗುತ್ತೆ. ಟೂಥ್ ಬ್ರಷ್, ಹೇರ್ ಆಯಿಲ್, ಹೇರ್ ಕ್ರೀಮ್, ಟಿಶ್ಯೂಪೇಪರ್, ಟವಲ್…

ನಮ್ಮಮ್ಮ ಯಾವಾಗ್ಲೂ ಹೇಳ್ತಿದ್ರು. ಹುಟ್ಟಿದ ಪ್ರತಿಯೊಬ್ರಿಗೂ ಒಂದು ಜೋಡೀನ ದೇವ್ರು ಗಂಟು ಹಾಕಿರ್ತಾನೆ ಅಂತ. ಶಿವನೇ ಕನ್ ಫ್ಯೂಸ್ ಆದ್ನೇನೊ. ಅಥವಾ ಕಾಲವೇ ಹಾಗಾಗೋಯ್ತೇನೊ. ಹುಟ್ಟಿದ ಎಲ್ರಿಗೂ ಒಂದು ಜೋಡಿ ಹುಡ್ಕೋ ಹಾಗೆ ಒಂದು ಸೋಪು, ಒಂದು ಟವಲ್ಲು, ಒಂದು ಹೇರ್ ಕ್ರೀಮು… ಪಾಪ, ಶಿವನಿಗೂ ಕಲಿಕಾಲ ಬಂತಲ್ಲಪ್ಪಾ.

ಮೊನ್ನೆ ಇನ್ನೇನು ರೈಲು ಹೊರಡ್ಬೇಕು. ತುಂಬಾ ದೂರ ಹೋಗೋದಿತ್ತು. ಕಣ್ಣಲ್ಲಿ ನೀರು ತುಂಬ್ಕೊಂಡು ನಡುಗ್ತಿದ್ದ ತುಟೀನಾ ಕಂಟ್ರೋಲ್ ಮಾಡ್ತಾ, ಐ ಮಿಸ್ ಯೂ ಅಂತಾ ಹೇಳಿದ ಸಂಗಾತಿ ನೆನಪಿಗೆ ಅಂತಾ ಕೊಟ್ಟಿದ್ದು ಒಂದು ಕವರ್. ಚುಕುಬುಕು ರೈಲಲ್ಲಿ ಗಂಟೆಗಟ್ಲೆ ಪ್ರಯಾಣ ಮಾಡಿ ಮನೇಗೆ ಬಂದ ತಕ್ಷಣ ಓಪನ್ ಸಿಸೇಮ್ ಅಂತಾ ಮಂತ್ರ ಜಪ್ಸಿ ಕವರ್ ಬಿಚ್ಚಿ ನೋಡ್ದೆ – ಮೈ ತೊಳೆಯೋದಕ್ಕೆ ಅಂಟುವಾಳದ ಸಿಪ್ಪೆ.

ಯಾಕೋ ಗೊತ್ತಿಲ್ಲ. ಬಚ್ಚಲ ಮನೆ, ತೆಂಗಿನ ಚಿಪ್ಪು, ಊದು ಕೊಳವೆ, ಗೋಡೆ ಮೇಲಿನ ಕಪ್ಪು ಮಸಿ, ಮನೆ ಮೇಲಿನ ಚಿಮಣಿ, ಹೊಗೆ ಮೆತ್ತಿದ್ದ ಅಮ್ಮನ ಕೆಮ್ಮು… ಎಲ್ಲ ನೆನಪಾಯ್ತು.

“ಅಮೆರಿಕಾದ ಮಾರುಕಟ್ಟೆಯಲ್ಲಿ ಹಚ್ಚಗೆ ಕೊಯ್ದ ಕೊತ್ತಂಬರಿ ಸೊಪ್ಪು” ಅನ್ನುತ್ತಾರಲ್ಲ, ಎ.ಕೆ.ರಾಮಾನುಜನ್. ಹಾಗೇನೇ ಈಗ ನನ್ನ ಬಾತ್ ರೂಮಲ್ಲಿ “ಥರಾವರಿ ಬ್ರಾಂಡ್ ಸೋಪ್ ಮಧ್ಯೆ ಅಂಟುವಾಳದ ಸಿಪ್ಪೆ.”

‍ಲೇಖಕರು avadhi

August 9, 2007

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

೧ ಪ್ರತಿಕ್ರಿಯೆ

  1. mahendra c k

    ಅವಧಿ ತುಂಬಾ ಚೆನ್ನಾಗಿ ಬರುತ್ತಿದೆ. ರಾಗಿ ರೊಟ್ಟಿ ಸರಿ , ಉಚ್ಚಳ್ ಚಟ್ನಿ ಎಲ್ಲಿ? ……… ಸಿ.ಕೆ. ಮಹೇಂದ್ರ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: