‘ಥೂ, ಡಬ್ಬಾ ನನ್ ಮಗನೇ!’

ಡಬ್ಬಿ ಪ್ರೀತಿಯ ಅಮ್ಮ

ಸುಶ್ರುತ ದೊಡ್ಡೇರಿ

ಮೌನ ಗಾಳ

14sun2

ಮೊನ್ನೆ ಬೆಂಗಳೂರಿಗೆ ಬಂದಿದ್ದ ಅಪ್ಪನನ್ನು ವಾಪಸು ಕಳುಹಿಸುವ ರಾತ್ರಿ ಅಮ್ಮನಿಗೆ ಫೋನಿನಲ್ಲಿ “ಅಪ್ಪನ್ ಹತ್ರ ಏನಾದ್ರೂ ಕೊಟ್ ಕಳ್ಸವಾ ಅಮ್ಮಾ?” ಅಂತ ಕೇಳಿದರೆ ಅವಳು ನಿರಾಳವಾಗಿ “ಏನೂ ಬ್ಯಾಡ. ಆದ್ರೆ ಹೋದ್ಸಲ ನೀನು ಉಪ್ಪಿನ್‌ಕಾಯಿ, ತುಪ್ಪ ತುಂಬಿಕೊಂಡು ಹೋಗಿದ್ದ ಡಬ್ಬಿ ವಾಪಸ್ ಕಳ್ಸು. ಹೊತ್ಗಂಬರ್ಲಿ ಅಪ್ಪ!” ಎಂದಳು. ಮೊಬೈಲಿನ ವಾಲ್ಯೂಮು ಸ್ವಲ್ಪ ಜಾಸ್ತಿಯೇ ಇದ್ದುದರಿಂದ ಅವಳು ಹೇಳಿದ್ದು ಅಪ್ಪನಿಗೂ ಕೇಳಿಸಿತಿರಬೇಕು, “ನೋಡು, ನಾನು ಆರಾಮಾಗ್ ಬರವು ಅನ್ನೋದು ಸ್ವಲ್ಪನೂ ಇಲ್ಲೆ ಅವ್ಳಿಗೆ. ಯಾವಾಗ್ ನೋಡಿದ್ರೂ ಡಬ್ಬೀದೇ ಚಿಂತೆ!” ಎಂದ ಅಪ್ಪ. ನಾನು ಜೋರಾಗಿ ನಕ್ಕೆ.

ನಾನು ಪ್ರತಿ ಸಲ ಊರಿಗೆ ಹೊರಡುವ ಹಿಂದಿನ ದಿನ ಅಮ್ಮನಿಗೆ ಫೋನ್ ಮಾಡಿ ಇಲ್ಲಿಂದ ಏನಾದ್ರೂ ತರಬೇಕಾ ಅಂತ ಕೇಳಿದರೆ ಅವಳು ಹೇಳುವುದು ಒಂದೇ: “ಡಬ್ಬಿ ವಾಪಸ್ ತಗಂಬಾ ಸಾಕು”. ನನ್ನ ಅಮ್ಮನಿಗೆ ಡಬ್ಬಿಗಳ ಮೇಲೆ ಪ್ರೇಮ! ಹಾಗೆ ನೋಡಿದರೆ ಈ ಡಬ್ಬಿಯೆಂಬುದು ಎಲ್ಲಾ ಗೃಹಿಣಿಯರ ಪ್ರೀತಿಗೆ, ಪೊಸೆಸಿವ್‌ನೆಸ್‌ಗೆ ಒಳಗಾಗಿರುವ ವಸ್ತು. ಅಡುಗೆಮನೆಯ ಶೆಲ್ಫು-ನಾಗಂದಿಗೆಯ ಮೇಲೆ ಬೆಪ್ಪಣ್ಣಗಳಂತೆ ಸಾಲಾಗಿ ಕುಳಿತುಕೊಂಡಿರುವ ಇವುಗಳಲ್ಲಿ ಅದೆಂತಹ ಆಕರ್ಷಣೆಯಿದೆಯೋ, ಯಾರಿಗೆ ಏನನ್ನೇ ತುಂಬಿ ಕಳುಹಿಸುವುದಿದ್ದರೂ ಕೊಡುವಾಗ “ಡಬ್ಬಿ ಒಂದು ವಾಪಸ್ ಕಳ್ಸೋದು ಮರೀಬೇಡಿ” ಎಂದು ಹೇಳುವುದನ್ನು ಅವರು ಮರೆಯುವುದಿಲ್ಲ.

ಮೊದಲೆಲ್ಲ ನಮ್ಮ ಮನೆಯಲ್ಲಿ ತಗಡಿನ ಡಬ್ಬಿಗಳಿದ್ದವು. ನಾನು ಮಗುವಾಗಿದ್ದಾಗ ತಂದಿದ್ದ ಒಂದು ನೆಸ್ಟಮ್ಮಿನ ಡಬ್ಬಿಯಂತೂ ಅದೆಷ್ಟು ವರ್ಷಗಳ ಕಾಲ ಇತ್ತು ಎಂದರೆ, ನಾನು ದೊಡ್ಡವನಾಗಿ, ಇಂಗ್ಲೀಷ್ ಓದಲು-ಬರೆಯಲು ಕಲಿತು, ಆ ಡಬ್ಬಿಯ ಮೇಲೆ ಬರೆದಿದ್ದ ‘ನೆಸ್ಟಮ್’ ಎಂಬ ಶಬ್ದವನ್ನು ಓದಿದಾಗ ಅಮ್ಮ “ಹೂಂ, ಅದು ನೀ ಪಾಪು ಆಗಿದ್ದಾಗ ತಂದಿದ್ದು. ಒಂದು ಚಮಚ ನೆಸ್ಟಮ್ ತಿನ್ಸಕ್ಕರೆ ಎಷ್ಟ್ ಕಾಟ ಕೊಡ್ತಿದ್ದೆ ಗೊತ್ತಿದಾ? ದನವಿನ್ ಕರ, ಬೆಕ್ಕಿನ್ ಮರಿ, ಚಂದ್ರ, ಪೋಲೀಸು -ಎಲ್ಲವಕ್ಕೂ ಒಂದೊಂದು ಚಮಚ ತಿನ್ಸಿದ್ ಮೇಲೇ ನೀನು ತಿಂತಿದ್ದಿದ್ದು!” ಎನ್ನುತ್ತಿದ್ದಳು. ಮಗುವಾಗಿದ್ದ ನನ್ನನ್ನೆತ್ತಿಕೊಂಡು ಅಮ್ಮ, ಒಂದು ಕೈಯಲ್ಲಿ ನೆಸ್ಟಮ್ ಖಾದ್ಯದ ಬಟ್ಟಲನ್ನು ಹಿಡಿದು, ಕೊಟ್ಟಿಗೆ, ಅಂಗಳ, ರಸ್ತೆಯನ್ನೆಲ್ಲಾ ಸುತ್ತುತ್ತಿದ್ದ ಚಿತ್ರವನ್ನು ಕಲ್ಪಿಸಿಕೊಂಡು ನಾನು ಖುಶಿ ಪಡುತ್ತಿದ್ದೆ. ಅದೇ ಚಿತ್ರದ ನೆನಪಿನ ಲಹರಿಯಲ್ಲಿರುತ್ತಿದ್ದ ಅಮ್ಮ, “ಅರ್ಧ ನೆಸ್ಟಮ್ ಡಬ್ಬಿ ನಿನ್ನ ಮುಖ-ಮುಸುಡಿಗೆ ಬಡಿಯಕ್ಕೇ ಆಯ್ದು ಬಿಡು!” ಎಂದು ನಗುತ್ತಿದ್ದಳು. ಹೀಗೆ, ನಮ್ಮನೆಯ ಅಡುಗೆ ಮನೆ ನಾಗಂದಿಗೆ ಮೇಲೆ ಕೊತ್ತುಂಬರಿ ಕಾಳನ್ನು ಅರ್ಧದವರೆಗೆ ತುಂಬಿಸಿಕೊಂಡು ಮುಗುಮ್ಮಾಗಿ ಕೂತಿದ್ದ ಆ ನೆಸ್ಟಮ್ ಡಬ್ಬಿ, ಆಗಾಗ ಅಮ್ಮನಿಗೆ ಸಿಹಿಸಿಹಿ ನೆನಪನ್ನೂ ನನಗೆ ಕಲ್ಪನೆಯನ್ನೂ ತುಂಬಿಕೊಡುವಲ್ಲಿ ಯಶಸ್ವಿಯಾಗುತ್ತಿತ್ತು.

ಈ ತಗಡಿನ ಡಬ್ಬಿಗಳ ಸಮಸ್ಯೆಯೆಂದರೆ, ಇವುಗಳ ಒಡಲಲ್ಲಿ ಏನಿದೆ ಅಂತ ಪ್ರತಿ ಸಲ ಮುಚ್ಚಳ ತೆಗೆದೇ ನೋಡಬೇಕು. ಹೀಗಾಗಿ ನಾನು, ಆಯಾ ಡಬ್ಬಿಗಳ ಮೇಲೆ ಆಯಾ ವಸ್ತುವಿನ ಹೆಸರನ್ನು ಬರೆದ ಪಟ್ಟಿ ಅಂಟಿಸಿರುತ್ತಿದ್ದೆ. ಆದರೆ ಪಟ್ಟಿ ಕಿತ್ತು ಹೋದ ಡಬ್ಬಿಗಳದೇ ಸಮಸ್ಯೆ. ಅಮ್ಮನಾದರೆ ಕೈಯಲ್ಲಿ ಹಿಡಿದು ಕುಲುಕಿದಾಗ ಬರುವ ಶಬ್ದದಿಂದಲೇ ಒಳಗಿರುವುದು ಕಡಲೆ ಬೇಳೆಯೋ ಉದ್ದಿನ ಬೇಳೆಯೋ ಅಂತ ಪತ್ತೆ ಮಾಡುತ್ತಿದ್ದಳು. ಆದರೆ ಅಮ್ಮ ‘ರಜೆ’ಯಲ್ಲಿದ್ದಾಗ ಅಡುಗೆ ಮಾಡುವ ಪಾಳಿಯನ್ನು ವಹಿಸಿಕೊಳ್ಳುತ್ತಿದ್ದ ಅಪ್ಪನಿಗೆ ಇದು ಗೊತ್ತಾಗುತ್ತಿರಲಿಲ್ಲ. ಸಾಸಿವೆ ಕಾಳಿಗೂ ತೊಗರಿ ಬೇಳೆಗೂ ವ್ಯತ್ಯಾಸ ಗುರುತಿಸುವುದು ಸುಲಭ; ಆದರೆ ಒಂದೇ ಸೈಜಿನ – ಒಂದೇ ತೂಕದ ಬೇಳೆಗಳ ನಡುವಿನ ಶಬ್ದವ್ಯತ್ಯಾಸ ಪತ್ತೆ ಮಾಡುವುದು ಅಷ್ಟು ಸುಲಭವಲ್ಲ. ಹೆಚ್ಚುಕಮ್ಮಿ ಶಬ್ದವೇದಿ ಕಲಿತವರಷ್ಟೇ ಜಾಣ್ಮೆ ಬೇಕು.

ಈ ಸಮಸ್ಯೆ ದೂರವಾದದ್ದು ಪಾರದರ್ಶಕ ಪ್ಲಾಸ್ಟಿಕ್ ಡಬ್ಬಿಗಳು ಬಂದಮೇಲೆ. “ಎಲ್ಲಾರ್ ಮನೇಲೂ ಈಗ ಪ್ಲಾಸ್ಟಿಕ್ ಡಬ್ಬಿ. ಬೇಳೆ-ಕಾಳು ತುಂಬಿಸಿ ನಾಗಂದಿಗೆ ಮೇಲೆ ಇಟ್ರೆ ನೀಟಾಗಿ ಎಲ್ಲಾ ಕಾಣ್ತು. ಈ ಸಲ ಸಾಗರಕ್ಕೆ ಹೋದಾಗ ನಮ್ಮನಿಗೂ ಐದಾರು ಡಬ್ಬಿ ತಗಂಬನ್ನಿ” ಎಂಬ ಅಮ್ಮನ ಚಿತಾವಣೆಯನ್ನು ಪಾಲಿಸಿದ ಅಪ್ಪ, ಆ ಸಲ ಸಾಗರದಿಂದ ಬರುವಾಗ ವಿನಾಯಕ ರಾಯರ ಅಂಗಡಿಯಿಂದ ಆರು ಚಾಕ್ಲೇಟ್ ಡಬ್ಬಿ ತಂದ. ಈ ಚಾಕ್ಲೇಟ್ ಡಬ್ಬಿಗಳ ಮೇಲಿದ್ದ ಆಲ್ಫೆನ್ಲೀಬೇ, ಇಕ್ಲೇರ್ಸ್, ಹಾಜ್‌ಮುಲಾ ಇತ್ಯಾದಿ ಸ್ಟಿಕ್ಕರುಗಳನ್ನು ಕಿತ್ತು ತೆಗೆಯುವ ಕೆಲಸ ನನಗೆ ಬಂತು. ಮತ್ತೆ ಇವುಗಳಲ್ಲಿ ಇನ್ನೂ ಆಯಾ ಚಾಕ್ಲೇಟಿನ ಫ್ಲೇವರಿನ ಪರಿಮಳ ಇರುತ್ತಿತ್ತು. ಮುಚ್ಚಳ ತೆರೆದರೆ ಸಾಕು, ಆ ಚಾಕ್ಲೇಟಿನ ರುಚಿಯೇ ನೆನಪಾಗಿ ಬಾಯಲ್ಲಿ ನೀರು ಬರುತ್ತಿತ್ತು. ಅದಕ್ಕೇ, ತುಂಬಾ ಬೇಜಾರಾಗಿ ನಾನು, “ಖಾಲಿ ಡಬ್ಬಿ ತರೋದಕ್ಕಿಂತ ತುಂಬಿದ್ದೇ ತರ್ಲಾಗಿತ್ತು” ಅಂತ ಅಪ್ಪನಿಗೆ ಹೇಳಿದೆ. ಅಪ್ಪನಿಗೆ ಇದ್ಯಾಕೋ ದುಬಾರಿ ವ್ಯವಹಾರ ಆಯ್ತಲ್ಲಾ ಅನಿಸಿರಬೇಕು, “ವಿನಾಯಕ ರಾಯರ ಅಂಗಡೀಲಿ ಇದ್ದಿದ್ದು ಅಷ್ಟೂ ಖಾಲಿ ಚಾಕ್ಲೇಟ್ ಡಬ್ಬಿ! ಇದೇ, ಇದೊಂದರಲ್ಲಿ ಎರಡು ಉಳಿದಿತ್ತು, ಜೇಬಲ್ ಇಟ್ಕಂಡ್ ಬೈಂದಿ” ಎನ್ನುತ್ತಾ, ಎರಡು ಚಾಕ್ಲೇಟ್ ತೆಗೆದು ಕೊಟ್ಟ. ಅವನು ಸುಳ್ಳು ಹೇಳುತ್ತಿದ್ದಾನೆ ಅಂತ ಗೊತ್ತಾದರೂ ನಾನು ಅದನ್ನು ಇಸಕೊಂಡು, ಖುಶಿಯಿಂದ ಸ್ಟಿಕರ್ ಕೀಳುವುದನ್ನು ಮುಂದುವರೆಸಿದೆ. ಈಗ ಬೇಡವಾದ ಹಳೆಯ ತಗಡಿನ ರೌಂಡು ಡಬ್ಬಿಗಳಿಗೆ ತೂತು ಮಾಡಿ, ಮಧ್ಯೆ ದಾರ ಪೋಣಿಸಿ ಬುಲ್ಡೇಜರ್ ಮಾಡಿ ಮನೆ ತುಂಬಾ ಶಬ್ದ ಮಾಡುತ್ತಾ ಓಡಾಡಿಸಿದೆ.

ಆ ಚಾಕ್ಲೇಟ್ ಡಬ್ಬಿಗಳು ನಮ್ಮ ಮನೆಯಲ್ಲಿ ಸುಮಾರು ವರ್ಷ ಕಾಲ ಚಲಾವಣೆಯಲ್ಲಿದ್ದವು. ಉದ್ದು, ಹೆಸರು, ತೊಗರಿ, ಕಡಲೆ, ಕೊತ್ತಂಬರಿಯಾದಿಯಾಗಿ ಅನೇಕ ಬಣ್ಣಬಣ್ಣದ ದವಸ ಧಾನ್ಯಗಳನ್ನು ಇವು ತಮ್ಮೊಡಲಲ್ಲಿಟ್ಟುಕೊಂಡು ಸಂರಕ್ಷಿಸುತ್ತಿದ್ದವು. ಸಾಮಾನ್ಯವಾಗಿ ನಮ್ಮ ಮನೆಯಲ್ಲಿ ವರ್ಷಕ್ಕೊಮ್ಮೆ, ಮಳೆಗಾಲಕ್ಕೆ ಮುನ್ನ, ಕಾಳು-ಬೇಳೆಗಳನ್ನು ತರಿಸಿ, ಹಸನು ಮಾಡಿ ಡಬ್ಬಿಗಳಲ್ಲಿ ತುಂಬಿಡುತ್ತಿದ್ದೆವು. ಹಾಗೆ ತುಂಬಿಡುವ ಮುನ್ನ ಡಬ್ಬಿಯನ್ನು ತೊಳೆದು, ಬಿಸಿಲಲ್ಲಿ ಒಣಗಿಸಿ, ಒರೆಸಿ ಇಡಬೇಕಿತ್ತು. ಪ್ರತಿ ವರ್ಷವೂ ಮೆಂತೆಕಾಳನ್ನೇ ತುಂಬಿಸಿಕೊಂಡಿರಬೇಕೆಂದು ಸಣ್ಣ ಡಬ್ಬಿಯ ಮುಖ ಕಹಿಯಾಗುವುದನ್ನೂ, ಪ್ರತಿ ವರ್ಷವೂ ಒಣಮೆಣಸಿನ ಕಾಯಿ ತುಂಬಿಸಿಕೊಂಡಿರಬೇಕೆಂದು ದೊಡ್ಡ ಡಬ್ಬಿ ಮಾಡಿದ ಸಿಟ್ಟಿಗೆ ಅದರ ಮುಖ ಕೆಂಪಾಗುವುದನ್ನೂ ನಾನು ಗಮನಿಸುತ್ತಿದ್ದೆ. ಇವೆಲ್ಲವುಗಳಿಗಿಂತ ಭಿನ್ನವಾಗಿದ್ದು ತಮ್ಮದೇ ಗತ್ತಿನಿಂದ ಮೆರೆಯುತ್ತಿದ್ದುದು ಉಪ್ಪಿನಕಾಯಿಯ ಪಿಂಗಾಣಿ ಜಾಡಿ ಮತ್ತೆ ತನ್ನೊಳಗೆ ಅಮ್ಮನ ಚಿಲ್ಲರೆ ಕಾಸನ್ನು ಅಡಗಿಸಿಟ್ಟುಕೊಂಡಿರುತ್ತಿದ್ದ ಸಾಸಿವೆಕಾಳಿನ ಡಬ್ಬಿ -ಎರಡೇ.

ನಮ್ಮ ಮನೆಯಲ್ಲಿ ಒಂದಷ್ಟು ಗಾಜಿನ ಡಬ್ಬಿಗಳೂ ಇದ್ದವು. ಕಡಗಾಯಿ, ಕುಚ್ಚುಮಾವಿನಕಾಯಿ, ಸಕ್ಕರೆ, ಇತ್ಯಾದಿ ವಸ್ತುಗಳನ್ನು ಅವುಗಳಲ್ಲಿ ತುಂಬಿಸಿ ಅಡುಗೆಮನೆ ಪಕ್ಕದ ಚಿಕ್ಕ ಕಾಲುದಾರಿಯಲ್ಲಿದ್ದ ಕಪಾಟಿನಲ್ಲಿ ಅಮ್ಮ ಅವನ್ನು ಇಟ್ಟಿರುತ್ತಿದ್ದಳು. ಒಮ್ಮೆ ನನ್ನ ಅತ್ತಿಗೆ ಅದರ ಮೇಲ್ಗಡೆ ಅರೆಯಲ್ಲಿ ತಾನೇ ಅಡಗಿಸಿಟ್ಟುಕೊಂಡಿದ್ದ ಚಾಕ್ಲೇಟುಗಳನ್ನು ತೆಗೆದುಕೊಳ್ಳಲೆಂದು ಕಪಾಟಿನ ಕೆಳಾಗಡೆ ಅರೆಯ ಮೇಲೆ ಕಾಲಿಡುತ್ತಿದ್ದಂತೆಯೇ ಇಡೀ ಕಪಾಟೇ ಅವಳ ಮೇಲೆ ಮಗುಚಿ ಬಿದ್ದು, ಗಾಜಿನ ಡಬ್ಬಿಗಳೆಲ್ಲ ಒಡೆದುಹೋದವು. ಸದ್ದು ಕೇಳಿ ಓಡಿ ಬಂದ ನಾನು, ಆವರಣದ ತುಂಬಾ ಚೆಲ್ಲಿದ್ದ ಬಣ್ಣಬಣ್ಣದ ದ್ರವದ ಮಧ್ಯೆ ಅತ್ತಿಗೆ ಬಿದ್ದುಕೊಂಡಿರುವ ದೃಶ್ಯ ಕಂಡು, ಹೆದರಿ ಕಿಟಾರನೆ ಕಿರುಚಿಕೊಂಡಿದ್ದೆ. ಪುಣ್ಯಕ್ಕೆ ಸ್ವಲ್ಪ ಕೈಗೆ ಗಾಯವಾಗಿದ್ದು ಬಿಟ್ಟರೆ ಮತ್ತಿನ್ನೇನೂ ಆಗಿರಲಿಲ್ಲ ಅವಳಿಗೆ. ಸ್ಥಳಕ್ಕೆ ಧಾವಿಸಿದ ಅಮ್ಮ ವರ್ಷಕ್ಕಾಗುವಷ್ಟು ಸಂಗ್ರಹಿಸಿಟ್ಟುಕೊಂಡಿದ್ದ ಕುಚ್ಚುಮಾವಿನಕಾಯಿ ನೆಲದ ಪಾಲಾದುದಕ್ಕೆ ತೀವ್ರವಾಗಿ ಬೇಸರ ಪಟ್ಟುಕೊಂಡಳು. ವಾರದವರೆಗೂ ಆ ವಾತಾವರಣದಲ್ಲಿ ಕುಚ್ಚುಮಾವಿನಕಾಯಿಯ ಪರಿಮಳ ಸುಳಿದಾಡುತ್ತಿತ್ತು.

ನಾವು ಹೊಸ ಮನೆಗೆ ಬಂದಮೇಲೆ, ಅಲ್ಲಿಯ ಶೆಲ್ಫಿನಲ್ಲಿ ಈ ಚಾಕ್ಲೇಟ್ ಡಬ್ಬಿಗಳು ತುಂಬಾ ಹಳತಿನಂತೆ ಕಾಣತೊಡಗಿದವು. ಇವು ಒಂದೊಂದೂ ಬೇರೆ ಬೇರೆ ಸೈಜು, ಬೇರೆ ಬೇರೆ ಆಕಾರದಲ್ಲಿದ್ದವು. ಆಗಲೇ ಪಾಲಿಶ್ ಕಳೆದುಕೊಂಡು, ಒಂಥರಾ ಬೆಳ್ಳಬೆಳ್ಳಗಾಗಿ ಮುದುಕಿಯರಂತೆ ಕಾಣುತ್ತಿದ್ದವು. ಮತ್ತೆ ಊರಲ್ಲಿ ಈಗ ಎಲ್ಲರ ಮನೆಗೂ ಬಂದುಬಿಟ್ಟಿದ್ದ ಟಪ್ಪರ್‌ವೇರಿನ ಆಕರ್ಷಕ ಪೆಟ್-ಜಾರ್‌ಗಳು ಅಮ್ಮನ ಕಣ್ಣನ್ನು ಕುಕ್ಕುತ್ತಿದ್ದವು. ಫೇಶಿಯಲ್ ಮಾಡಿಸಿಕೊಂಡ ಸ್ಲೀವ್‌ಲೆಸ್ ನಟಿಯರಂತೆ ಥಳಥಳಿಸುತ್ತ, ಒಂದೇ ಬಣ್ಣದ ಮುಚ್ಚಳಗಳನ್ನು ಹೊಂದಿ ಚಂದಗೆ ನಳನಳಿಸುತ್ತಿದ್ದ ಇವನ್ನು ನಮ್ಮ ಮನೆಯ ಶೆಲ್ಫಿನ ಮೇಲೆ ಕಲ್ಪಿಸಿಕೊಂಡು ಅಮ್ಮ ಹಿರಿಹಿಗ್ಗಿದಳು. ಅದಾಗಲೇ ಬೆಂಗಳೂರಿಗೆ ಸೇರಿಕೊಂಡಿದ್ದ ನನ್ನ ಬಳಿ ಫೋನಿನಲ್ಲಿ “ಅಪ್ಪೀ, ಈ ಸಲ ಬರಕ್ಕರೆ ಒಂದು ಕೆಜಿ ಸೈಜಿಂದು ಒಂದಷ್ಟ್ ಬಾಕ್ಸ್ ತಗಂಬಾ” ಅಂತ ಸಣ್ಣಗೆ ಹೇಳಿದಳು. ನಾನು ಅಮ್ಮನಿಗೆ ಖುಶಿಯಾಗಲಿ ಅಂತ, ಮೂರು ಸೈಜಿನ ಆರರಂತೆ ಒಟ್ಟು ಹದಿನೆಂಟು ಟಪ್ಪರ್‌ವೇರ್ ಡಬ್ಬಿ ಒಯ್ದು ಕೊಟ್ಟೆ. ಅಷ್ಟೇ ಅಲ್ಲ, ಅವಳನ್ನು ಸಾಗರಕ್ಕೆ ಕರೆದುಕೊಂಡು ಹೋಗಿ ಐದಾರು ದೊಡ್ಡ ದೊಡ್ಡ ಸ್ಟೀಲ್ ಡಬ್ಬಿಗಳನ್ನೂ ಕೊಡಿಸಿದೆ. ಅಷ್ಟನ್ನೆಲ್ಲಾ ಒಟ್ಟಿಗೆ ಮನೆಗೆ ತಂದುಕೊಂಡ ಅಮ್ಮ ಮುಗ್ದವಾಗಿ ಕೇಳಿದ್ದು ಒಂದೇ ಪ್ರಶ್ನೆ: “ಈಗ ಈ ಚಾಕ್ಲೇಟ್ ಡಬ್ಬೀನೆಲ್ಲ ಎಂಥ ಮಾಡದು?!”

ಅಷ್ಟೆಲ್ಲಾ ಡಬ್ಬಿ ಮನೆಯಲ್ಲಿದ್ದರೂ ಪ್ರತಿ ಸಲ ಮನೆಗೆ ಹೊರಟಾಗಲೂ ‘ಡಬ್ಬಿ ತಗಂಬಾ’ ಎಂದು ನೆನಪಿಸುವ ಅಮ್ಮನ ಬಗ್ಗೆ ನನಗೆ ಪ್ರೀತಿಲೇಪಿತ ಕೋಪ ಬಂದು ಕೊನೆಗದು ಮುದ್ದಾಗಿ ಪರಿವರ್ತಿತವಾಗಿ “ಅಯ್ಯೋ ಅಡ್ಡಿಲ್ಲೆ ಮಾರಾಯ್ತೀ” ಎಂದು ನಗುತ್ತಾ ಫೋನಿಡುವಂತೆ ಮಾಡುತ್ತದೆ. ಬೆಂಗಳೂರಿನ ಪುಟ್ಟ ಮನೆಯ ಪುಟ್ಟ ಕಿಚನ್ನಿನ ಪುಟ್ಟ ನಾಗಂದಿಗೆಯ ಮೇಲೆ ಬಿದ್ದುಕೊಂಡಿರುವ ಖಾಲಿ ಡಬ್ಬಿಗಳನ್ನು ಚೀಲದೊಳಗೆ ತುಂಬಿ ಊರಿನ ಬಸ್ಸಿನ ರಶ್ಶಿನೊಳಗೆ ತೂರಿಸುವಾಗ ರೂಮ್‌ಮೇಟ್ ರೇಗಿಸುತ್ತಾನೆ: ‘ಥೂ, ಡಬ್ಬಾ ನನ್ ಮಗನೇ!’. ನಾನು ತಕ್ಷಣ ಸರಿ ಮಾಡುತ್ತೇನೆ: ‘ಡಬ್ಬಾ ನನ್ ಮಗ ಅಲ್ಲ; ಡಬ್ಬಿಪ್ರೀತಿಯ ಅಮ್ಮನ ಮಗ’ ಅಂತ.

‍ಲೇಖಕರು avadhi

September 26, 2009

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

4 ಪ್ರತಿಕ್ರಿಯೆಗಳು

 1. ರಾಘವೇಂದ್ರ ಜೋಷಿ

  ಹಸನ್ಮುಖಿ ಲೇಖನ.
  ಯಾಕೋ ವಸುಧೇಂದ್ರರ ”ನಮ್ಮಮ್ಮ ಅಂದ್ರೆ..” ನೆನಪಾಯಿತು..
  ಅದ್ಯಾಕೆ ಈ ಅಮ್ಮಂದ್ರಿಗೆ ಸಾಸಿವೆ ಡಬ್ಬದ ಮೇಲೆ ಮೋಹವೋ..?
  ನನ್ನ ಬಾಲ್ಯ ಕನಸುಗಳಿಗೆ ಜೀವ ತುಂಬಲೆಂದು ನಮ್ಮಮ್ಮ ಸಾಸಿವೆ ಕಾಳಿನ
  ಡಬ್ಬದಲ್ಲಿ ಚಿಲ್ರೆಗಳಿಗಾಗಿ ತಡಕಾಡುತ್ತಿದ್ದುದು ನಾನೆಂದೂ ಮರೆಯಲಾರೆ..

  ಪ್ರತಿಕ್ರಿಯೆ
 2. Ashwini

  Sudha Murthya avra `Asamaanyaralli saamaanyaru’ emba pustakadalli `Dabbi Nalini’ nenapayithu. Lekhana Chennagide

  ಪ್ರತಿಕ್ರಿಯೆ
 3. ms

  highly enjoyable -from the beginning to the end
  nice read after a long long time
  🙂
  malathi S

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: