ಥ್ಯಾ೦ಕ್ ಯು ಫ಼ೇಸ್ ಬುಕ್!

ಪಂಚಲಿಂಗ ದರ್ಶನ – ನಟರಾಜು ಎಸ್ ಎಮ್ ಬೆಳಿಗ್ಗೆ ಏಳು ಗಂಟೆಯ ಸಮಯದಲ್ಲಿ ಗೋಪಾಲಕೃಷ್ಣ ಚಿತ್ರಮಂದಿರ ಎಂದು ಕರೆಯಲ್ಪಡುವ ನಮ್ಮೂರ ಸಿನಿಮಾ ಟೆಂಟ್ ನ ಡೌನ್ ನಲ್ಲಿ ನಡೆದು ಹೋಗುತ್ತಿದ್ದೆ. ಕೈಯಲ್ಲಿ ಒಂದು ಪ್ಲಾಸ್ಟಿಕ್ ಕವರ್ ಇತ್ತು ಅದರೊಳಗೊಂದು ಚಡ್ಡಿ, ಒಂದು ಟೀ ಶರ್ಟ್ ಮತ್ತು ಟವಲ್ ಇತ್ತು. ಅದೇ ಸಮಯದಲ್ಲಿ ನನ್ನ ವಯಸ್ಸಿನವನೇ ಹುಡುಗನೊಬ್ಬ ಆ ರಸ್ತೆಯ ಮತ್ತೊಂದು ಬದಿಯಲ್ಲಿ ನನ್ನೆದುರು ನಡೆದು ಬರುತ್ತಿದ್ದ. ಅವನ ಕೈಯಲ್ಲಿ ಆ ವರ್ಷ ತಾನೆ ಮಾರುಕಟ್ಟೆಗೆ ಬಂದಿದ್ದ ಫಿಸಿಕ್ಸ್ ಪುಸ್ತಕವಿತ್ತು. ಒಂದು ಪ್ರಿಸಮ್ ನಲ್ಲಿ ಬೆಳಕಿನ ವಕ್ರೀಕರಣವಾಗುವ ಬಣ್ಣದ ಮುಖಪುಟವಿರುವ ಪುಸ್ತಕ ಅದಾಗಿತ್ತು. ದಾರಿಯಲ್ಲಿ ಹೋಗುತ್ತಿದ್ದ ನನಗೆ ಆ ಪುಸ್ತಕ ಕಂಡು ಏನೋ ಖುಷಿಯಾಗಿತ್ತು. ಯಾಕೆಂದರೆ ಪಿಯುಸಿಯಲ್ಲಿ ನಾನು ವಿಜ್ಞಾನ ಆರಿಸಿಕೊಂಡಿದ್ದೆ. ನಮ್ಮ ಏರಿಯಾದ ಕಡೆಯಿಂದ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳೇ ಕಡಿಮೆ. ಅಂತಹುದರಲ್ಲಿ ನನ್ನ ವಿಷಯದವನೇ ಸಿಕ್ಕಿದ ಎಂದು ನನಗೆ ಹೆಚ್ಚು ಖುಷಿಯಾಗಲು ಕಾರಣವಾಗಿತ್ತು. ಆತುರವಾಗಿ ರಸ್ತೆ ದಾಟಿ. ಆ ಹುಡುಗನನ್ನು ಮಾತಿಗೆ ಎಳೆದಿದ್ದೆ. ಬೆಳಿಗ್ಗೇನೆ ಸಿಇಟಿ ಟ್ಯೂಷನ್ ಮುಗಿಸಿ ಅವನು ತನ್ನ ಮನೆ ಕಡೆಗೆ ಹೋಗುತ್ತಿದ್ದ. ನನಗೆ ಮೊದಲ ಪಿಯುಸಿಯ ಪರೀಕ್ಷೆ ಮುಗಿದು ಬೇಸಿಗೆ ರಜೆ ಇದ್ದುದರಿಂದ ನನ್ನ ಎಂದಿನ ಪಾರ್ಟ್ ಟೈಮ್ ಕೆಲಸಕ್ಕೆ ಹೋಗುತ್ತಿದ್ದೆ. ಬೆಳಿಗ್ಗೆ ಏಳಾಗಿದ್ದರಿಂದ ಆ ಗೆಳೆಯನ ಜೊತೆ ಮಾತನಾಡಲು ಹೆಚ್ಚು ಸಮಯವಿರಲಿಲ್ಲ. ಕೆಲಸಕ್ಕೆ ಲೇಟ್ ಆಗುತ್ತಿತ್ತು. ನೀನು ಸೈನ್ಸ್ ವಿದ್ಯಾರ್ಥಿನಾ? ಯಾವ ಕಾಲೇಜು? ಎಲ್ಲಿ ಮನೆ? ಎಂದು ಮೂರು ಪ್ರಶ್ನೆಗಳಿಗಷ್ಟೇ ಕೇಳಿ ಉತ್ತರ ಪಡೆದು ಒಂದು ದಿನ ನಿಮ್ಮ ಮನೆಗೆ ಬರ್ತೀನಿ ಮತ್ತೆ ಸಿಗೋಣ ಎಂದು ಹೇಳಿ ನನ್ನ ಕೆಲಸಕ್ಕೆ ಆತುರಾತುರವಾಗಿ ಹೊರಟು ಹೋಗಿದ್ದೆ. ಒಂದು ಭಾನುವಾರ ನನ್ನ ಪಾರ್ಟ್ ಟೈಮ್ ಜಾಬ್ ಗೆ ರಜೆ ಸಿಕ್ಕಾಗ ನಮ್ಮ ಮನೆಯಿಂದ ಅವನ ಮನೆ ಹತ್ತೇ ನಿಮಿಷದ ದೂರದಲ್ಲಿದ್ದರೂ ಆ ಮನೆ ಹುಡುಕಲು ಅರ್ಧ ಗಂಟೆ ಹಿಡಿದಿತ್ತು. ಮಳವಳ್ಳಿಗೆ ಹೋಗುವ ರಸ್ತೆಯಲ್ಲಿ ಕನಕಪುರದ ಕೊನೆಗೆ ರಸ್ತೆಯ ಬಲ ಭಾಗದಲ್ಲಿ ನಮ್ಮ ಮನೆಯಾದರೆ ರಸ್ತೆಯ ಎಡ ಭಾಗದ ಮರ ಕುಯ್ಯುವ ಮಿಲ್ ನ ಹಿಂದೆ ಅವನ ಮನೆಯಿತ್ತು. ಹೊಚ್ಚ ಹೊಸ ಮನೆಯಂತೆ ಕಾಣುವ ಬಿಳಿ ಬಣ್ಣ ಬಳಿದಿರುವ ಆ ಮನೆಯ ಮುಂದೆ ನಿಂತಾಗ ಹೊರಾಂಡದಲ್ಲಿ ಚಕ್ಕಲಮಕ್ಕಲ ಹಾಕಿ ಕುಳಿತು ಓದುತ್ತಿರುವ ಅಂದು ರಸ್ತೆಯಲ್ಲಿ ಸಿಕ್ಕಿದ್ದ ಅದೇ ಹುಡುಗ ಕಣ್ಣಿಗೆ ಬಿದ್ದಿದ್ದ. ನನ್ನ ಕಂಡಿದ್ದೇ ಅವನ ಮುಗ್ದ ನಗುವಿನಲ್ಲಿ ಆತ್ಮೀಯವಾಗಿ ಒಳ ಕರೆದು ಮಾತನಾಡಿಸಿದ. ಅವನ ಜೊತೆ ಮಾತನಾಡುವಾಗ ತಿಳಿಯಿತು ಅದು ಆತನ ಅಕ್ಕನ ಮನೆ ಎಂದು. ಅವನ ಊರು ಕನಕಪುರದಿಂದ ಇಪ್ಪತ್ತು ಕಿಲೋ ಮೀಟರ್ ದೂರದ ಹೊನ್ನಗನಹಳ್ಳಿ ಎಂದು. ಅಂದು ಅವನ ಅಕ್ಕ, ಮಾವ ಮತ್ತು ಅವರ ಮುದ್ದು ಪುಟ್ಟಿ ಎಲ್ಲರೂ ಪರಿಚಯ ಆಗಿದ್ದರು. ಅವನು ಸಿಇಟಿಗೆ ತಯಾರಿ ನಡೆಸುತ್ತಿದ್ದ ಕಾರಣ ಅವನಿಗೆ ಹೆಚ್ಚು ಡಿಸ್ಟರ್ಬ್ ಮಾಡುವ ಮನಸ್ಸಾಗದೆ ನಾನು ನಮ್ಮ ಮನೆ ಕಡೆಗೆ ಗೆಳೆಯನೊಬ್ಬ ಸಿಕ್ಕಿದ ಸಂತಸದಲ್ಲಿ ಹೆಜ್ಜೆ ಹಾಕಿದ್ದೆ.   ನಂತರದ ದಿನಗಳಲ್ಲಿ ನನ್ನ ಪಾರ್ಟ್ ಟೈಮ್ ಜಾಬ್ ಪೋಸ್ಟಿಂಗ್ ಅವನಿದ್ದ ಏರಿಯಾಗೆ ಆಯಿತು. ಅದು ನನಗೆ ಒಳ್ಳೆಯದೇ ಆಗಿತ್ತು. ಕೆಲವು ಸಲ ಮಧ್ಯಾಹ್ನದ ಊಟದ ಸಮಯದಲ್ಲಿ ಅವನು ಮನೆಯಲ್ಲಿದ್ದರೆ ಹೋಗಿ ಒಂದೆರಡು ಮಾತನಾಡಿ ಬರುತ್ತಿದ್ದೆ. ಹೊಸದಾಗಿ ಪರಿಚಯವಾಗಿದ್ದ ಈ ಗೆಳೆಯ ಭಾನುವಾರದ ರಜಾ ದಿನಗಳಲ್ಲಿ ನನ್ನನ್ನು ತನ್ನ ಆತ್ಮೀಯ ಗೆಳೆಯ ಕಿಸನ್ ಎಂಬ ಹುಡುಗನ ಮನೆಗೂ ಕರೆದೊಯ್ಯುತ್ತಿದ್ದ. ಅವನ ಗೆಳೆಯ ಕಿಸನ್ ಮುದ್ದು ಮುದ್ದಾಗ ಅತಿ ಮುಗ್ಗ ಹುಡುಗ. ಕಿಸನ್ ಮತ್ತು ನನ್ನ ಗೆಳೆಯ ಮಾತಿಗೆ ಕುಳಿತರೆ ನಾನು ಶ್ರಧ್ದೆಯಿಂದ ಅವರ ಮಾತುಗಳನ್ನು ಕೇಳುತ್ತಿದ್ದೆ. ಎರಡನೇ ಪಿಯುಸಿಯ ಪರೀಕ್ಷೆಯಲ್ಲಿ ಅವರು ಏನೇನು ತಪ್ಪು ಮಾಡಿದರು. ಯಾವ ರೀತಿ ಯಾವ ಪುಸ್ತಕ ಓದಿದ್ದರೆ ಹೆಚ್ಚು ಅಂಕ ತೆಗೆಯಬಹುದ್ದಾಗಿತ್ತು ಎಂದು ಅವರು ಒಬ್ಬರಿಗೊಬ್ಬರು ಮಾತನಾಡಿಕೊಳ್ಳುತ್ತಾ ಇರುವಾಗ ಅವರ ಮಾತುಗಳೆಲ್ಲಾ ನನಗೆ ಅಡ್ವೈಸ್ ಗಳ ತರಹ ಕಾಣುತ್ತಿತ್ತು. ಕಿಸನ್ ನ ಓದಲೆಂದೇ ಇದ್ದ ಅವನ ಸಪರೇಟ್ ರೂಮಿನಲ್ಲಿ ಹರಟೆ ಹೊಡೆಯುತ್ತಾ ಕುರುಕು ತಿಂಡಿಗಳ ತಿಂದ ನೆನಪು ಇನ್ನೂ ಹಸಿರು ಹಸಿರು.   ಈ ಪ್ರಪಂಚದಲ್ಲಿ ಒಬ್ಬ ಮನುಷ್ಯ ಮತ್ತೊಬ್ಬ ಮನುಷ್ಯನನ್ನು ಸ್ಪರ್ಧಿಯಂತೆ ನೋಡುವ ಈ ಕಾಲದಲ್ಲಿ ಅಂದು ನನ್ನ ಗೆಳೆಯ ಅವನು ಕಂಡಿದ್ದ ಸೋಲುಗಳನ್ನು ನಾನು ಕಾಣಬಾರದು ಎಂದು ನನಗೆ ಕುಳ್ಳರಿಸಿಕೊಂಡು ಅಣ್ಣನ ಹಾಗೆ ಸಲಹೆಗಳನ್ನು ನೀಡುತ್ತಿದ್ದ. ಜೊತೆಗೆ ಅವನ ಸಿಇಟಿ ಪರೀಕ್ಷೆ ಮುಗಿಯುತ್ತಿದ್ದಂತೆ ರಾಶಿ ರಾಶಿ ಪುಸ್ತಕಗಳನ್ನು ಅವನು ದುಂಡಾಗಿ ಬರೆದಿಟ್ಟಿದ್ದ ಕ್ಲಾಸ್ ನೋಟ್ಸ್ ಮತ್ತು ಟ್ಯೂಷನ್ ನೋಟ್ಸ್ ಗಳನ್ನು ಕೈಗಿತ್ತು ಚೆನ್ನಾಗಿ ಓದಿಕೋ ಎಂದು ಹಾರೈಸಿದ್ದ. ತನ್ನ ಎರಡನೇ ಪಿಯುಸಿಯ ಸಿಇಟಿ ಪರೀಕ್ಷೆ ಮುಗಿಯುತ್ತಿದ್ದಂತೆ ಅಕ್ಕನ ಮನೆಯಿಂದ ತನ್ನೂರಿಗೆ ಹೊರಟು ಹೋಗಿದ್ದ. ನಾವು ಆ ದಿನಗಳಲ್ಲಿ ಜೊತೆ ಕಳೆದಿದ್ದು ಕೆಲವೇ ದಿನಗಳು ಅನ್ನೋದಕ್ಕಿಂತ ಕೆಲವು ಗಂಟೆಗಳು ಎಂದಷ್ಟೇ ಹೇಳಬಹುದು. ಜೊತೆ ಕಳೆದಿದ್ದು ಕೆಲವು ಗಂಟೆಗಳೇ ಆಗಿದ್ದರೂ ಏನೋ ಒಂದು ಸ್ನೇಹ ನಮ್ಮಲ್ಲಿ ಮೂಡಿಯಾಗಿತ್ತು. ಅವನ ಸ್ನೇಹಕ್ಕೆ ಮಣಿದು ಅವನು ಊರಿಗೆ ಹೋದ ಮೇಲೆಯೂ ಅವನ ಮನೆಗೊಮ್ಮೆ ಹೋಗಿದ್ದೆ. ಅವನ ಮನೆಗೆ ಹೋದಾಗ ಅವನ ಅಮ್ಮ ನನಗೆ ರುಚಿಯಾದ ಚಿತ್ರಾನ್ನ ನೀಡಿದ್ದರು. ಚಿತ್ರಾನ್ನ ತಿಂದು ಬಿಸಿ ಬಿಸಿಯಾದ ಕಾಫಿಯ ಲೋಟವನ್ನು ಕೈಯಲ್ಲಿ ಹಿಡಿದು ಅವನ ತಂದೆಯ ಜೊತೆ ಆತ್ಮೀಯವಾಗಿ ಮಾತನಾಡಿದ ಕ್ಷಣ ನನಗಿನ್ನೂ ನೆನಪಿದೆ.   ಆಮೇಲೆ ಪಿಯುಸಿಯಲ್ಲಿ ಒಳ್ಳೆಯ ಅಂಕಗಳನ್ನು ತೆಗೆದು ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ನನ್ನ ಗೆಳೆಯ ಇಂಜಿನಿಯರಿಂಗ್ ಸೇರಿದ್ದ. ನಂತರದ ವರ್ಷ ನಾನೂ ಸಹ ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದು ಬೆಂಗಳೂರಿನಲ್ಲಿ ಪಶುವೈದ್ಯಕೀಯ ಕಾಲೇಜಿಗೆ ಸೇರಿದ್ದೆ. ನಾನು ಕಾಲೇಜಿಗೆ ಸೇರಿದ ಮೇಲೆಯೂ ಯಾಕೋ ನನ್ನ ಗೆಳೆಯ ತುಂಬಾ ನೆನಪಾಗುತ್ತಿದ್ದ. ಯಾಕೆಂದರೆ ನನಗೆ ಪಿಯುಸಿಯಲ್ಲಿ ಒಳ್ಳೆಯ ಅಂಕ ಬಂದಿದ್ದರೆ ಅದಕ್ಕೆ ಅವನ ಮಾರ್ಗದರ್ಶನವೂ ಒಂದು ಮುಖ್ಯ ಕಾರಣವಾಗಿತ್ತು ಎನ್ನಬಹುದು. ನನ್ನ ಗೆಳೆಯನನ್ನು ನೋಡಬೇಕಾಗಿತ್ತು ಎಂದು ಯೋಚಿಸುತ್ತಿದ್ದ ದಿನಗಳಲ್ಲೇ ಒಮ್ಮೆ ಬೆಂಗಳೂರಿನಲ್ಲಿ ಹಠಾತ್ ಸಿಕ್ಕಿದ್ದ ಮಂಡ್ಯ ಕಡೆಯ ನನ್ನ ಶಾಲೆಯ ದಿನಗಳ ಜೊತೆಗಾರ ಏಳುಮಲೆ ತನ್ನ ಮದುವೆಗೆ ಆಮಂತ್ರಣವಿಟ್ಟಿದ್ದ. ನನ್ನ ಗೆಳೆಯ ಶಂಕರನನ್ನು ನೋಡಿದ ಹಾಗಾಗುತ್ತದೆ ಎಂದು ಅವನ ಮದುವೆಗೆ ಖಂಡಿತಾ ಬರುವೆ ಎಂದು ಹೇಳಿದ್ದೆ. ಮಂಡ್ಯ ತಲುಪುವ ಮುಂಚೆ ಗೆಳೆಯ ಶಂಕರನ ಹಾಸ್ಟೆಲ್ ನ ವಿಳಾಸ ಮತ್ತು ಫೋನ್ ನಂಬರ್ ಅನ್ನು ಹೇಗೋ ಪಡೆದಿದ್ದೆ. ಮಂಡ್ಯ ಗೆಳೆಯನ ಮದುವೆಯ ದಿನ ಮಂಡ್ಯ ತಲುಪಿ ಮೊದಲು ನನ್ನ ಗೆಳೆಯ ಶಂಕರನನ್ನು ಭೇಟಿ ಸಹ ಮಾಡಿದ್ದೆ.   ಮಂಡ್ಯದಿಂದ ಸ್ವಲ್ಪ ದೂರವಿದ್ದ ಗೆಳೆಯ ಏಳುಮಲೆಯ ಊರಿಗೆ ಶಂಕರನ ಸಲಹೆಯಂತೆ ಬಸ್ ಹಿಡಿದು ಹೋಗಿ ಮದುವೆ ಮುಗಿಸಿ ಸಂಜೆ ಮತ್ತೆ ತನ್ನ ನೋಡುವಂತೆ ಶಂಕರನ ಆಣತಿಯಾಗಿದ್ದರಿಂದ ಅವನನ್ನು ನೋಡುವ ಸಲುವಾಗಿ ಅವನ ಹಾಸ್ಟೆಲ್ ನ ಮುಂದೆ ನಿಂತಿದ್ದೆ. ಹಾಸ್ಟೆಲ್ ನಿಂದ ಹೊರ ಬಂದವನೇ ಜೊತೆಗೆ ನಮ್ಮೂರಿನವೇ ಆದ ಮತ್ತೊಬ್ಬ ಗೆಳೆಯನ ತಂದು ನನ್ನನ್ನು ಆತನಿಗೆ ಪರಿಚಯ ಮಾಡಿಸಿದ್ದ. ನನಗೋ ವಿಪರೀತ ನಾಚಿಕೆಯಾಗಿ ಒಂತರಾ ಪಾಪ ಪ್ರಜ್ಞೆ ಕಾಡುತ್ತಿತ್ತು. ಪಾಪ ನಮ್ಮ ಶಂಕರನ ಫ್ರೆಂಡ್ ನನ್ನ ನೋಡಿ ಏನು ತಿಳಿದನೋ ಎಂದು. ಯಾಕೆಂದರೆ ಏಳುಮಲೆಯ ಮದುವೆಯಲ್ಲಿ ಸಿಕ್ಕಿದ್ದ ನನ್ನ ಶಾಲೆಯ ಗೆಳೆಯ ನಾನು ಸಿಕ್ಕಿದ ಖುಷಿಗೆ ಅವರ ಊರಿನಲ್ಲಿ ಸಿಗುವ ಆಗ ತಾನೆ ತೆಂಗಿನ ಮರದಿಂದ ಇಳಿಸಿದ್ದ ನೀರವನ್ನು ಕುಡಿಸಿದ್ದ. ಕುಡಿದಾದ ಮೇಲೆ ಅದು ಯೆಂಡ ಎಂದು ತಿಳಿದಿತ್ತು. ಬಹುಶಃ ಹತ್ತಿರ ನಿಂತಿದ್ದವರಿಗೆ ನಾನು ಯೆಂಡ ಕುಡಿದಿರುವೆ ಎಂದು ಗೊತ್ತಾಗುತ್ತಿತ್ತೋ ಏನೋ, ನನಗೆ ನನ್ನಿಂದ ಯೆಂಡದ ವಾಸನೆ ಬರುತ್ತಿದೆ ಎಂದು ಗೊತ್ತಾಗದೆ ಇದ್ದರೂ ಯೆಂಡದ ವಾಸನೆ ಹೇಗಿರುತ್ತೆ ಎಂದು ತಿಳಿದಿದ್ದ ನನಗೆ ಅವತ್ತು ಪಾಪ ನಮ್ಮ ಶಂಕರ ಏನಂದುಕೊಂಡನೋ ಎಂದು ಇಂದಿಗೂ ಪಶ್ಚತ್ತಾಪ ಪಡುತ್ತೇನೆ.   ಆ ದಿನದ ನಂತರ ಮತ್ತೆ ಒಂದು ಸಾರಿ ಕನಕಪುರದಲ್ಲಿ ಶಂಕರನ ಗೆಳೆಯನೊಬ್ಬ ಸಿಕ್ಕಿದಾಗ ನೀವು ಶಂಕರನ ಫ್ರೆಂಡ್ ಅಲ್ವಾ ಎಂದು ಮಾತಿಗೆ ಎಳೆದು ಎಲ್ಲಿದ್ದಾನೆ ಈಗ ನಮ್ಮ ಶಂಕರ ಎಂದಿದ್ದೆ. ಪಂಚಲಿಂಗ ಇಲ್ಲೇ ಅಂಗಡಿಗೆ ಹೋಗಿದ್ದಾನೆ ಇರಿ ಬರ್ತಾನೆ ಎಂದಿದ್ದ. ಎಚ್ ಎಲ್ ಪಂಚಲಿಂಗೇಗೌಡ ಎನ್ನುವುದು ನಮ್ಮ ಶಂಕರನ ಪೂರ್ತಿ ಹೆಸರು. ಚಿಕ್ಕದಾಗಿ ಎಚ್ ಎಲ್ ಪಿ ಎಲ್ ಗೌಡ. ಅಂದು ತನ್ನ ತಂಗಿಯ ಮದುವೆಯ ತಯಾರಿಯಲ್ಲಿದ್ದ ಶಂಕರ ನನ್ನ ಕಂಡಿದ್ದೇ ಖುಷಿಯಾಗಿ ತನ್ನ ವಿಸಿಟಿಂಗ್ ಕಾರ್ಡ್ ತನ್ನ ಕೈಗಿತ್ತು ಫೋನ್ ಮಾಡ್ತೀನಿ ಎಂದು ಆತುರಾತುರವಾಗಿ ಹೊರಟು ಹೋಗಿದ್ದ. ನಾನೂ ಸಹ ಬೆಂಗಳೂರು ಬಿಟ್ಟು ಕೊಲ್ಕತ್ತಾಗೆ ಬಂದುಬಿಟ್ಟಿದ್ದೆ. ಅವನು ಕೊಟ್ಟಿದ್ದ ವಿಸಿಟಿಂಗ್ ಕಾರ್ಡ್ ಎಲ್ಲೋ ಕಳೆದು ಹೋಗಿತ್ತು. ಅವನೊಮ್ಮೆ ತುಂಬಾ ನೆನಪಾದಾಗ ಗೂಗಲ್ ನಲ್ಲಿ ಒಮ್ಮೆ ಅವನ ಹೆಸರು ಟೈಪ್ ಮಾಡಿದಾಗ ತುಮಕೂರಿನ ಇಂಜಿನಿಯರಿಂಗ್ ಕಾಲೇಜಿನಲ್ಲಿ ತನ್ನ ಟಿಸಿಎಸ್ ಕೆಲಸದ ಜೊತೆ ಎಂ ಇ ಸಹ ಮಾಡುತ್ತಿದ್ದಾನೆ ಎಂದು ತಿಳಿದಿತ್ತು. ಫೇಸ್ ಬುಕ್ ನಲ್ಲಿ ಅವನ ಹೆಸರು ಟೈಪ್ ಮಾಡಿ ಅವನನ್ನು ಹುಡುಕಲು ಪ್ರಯತ್ನಿಸಿದ್ದೆ. ಪಂಚಲಿಂಗೇ ಗೌಡ ಅನ್ನೋ ಹೆಸರಿನವರು ಇಲ್ಲವೇ ಇಲ್ಲ ಎಂದು ಫೇಸ್ ಬುಕ್ ಹೇಳುತ್ತಿತ್ತು.   ನಿನ್ನೆ ಶಂಕರ್ ಪಿ ಎಲ್ ಗೌಡ ಎಂಬ ಹೆಸರಿನಲ್ಲಿ ಫ್ರೆಂಡ್ ರಿಕ್ವೆಸ್ಟ್ ಬಂದಾಗ ಓ ಮೈ ಗಾಡ್! ನನಗೆ ಎಷ್ಟು ಖುಷಿಯಾಯಿತು ಎಂದು ಹೇಳಲಾಗದು. “ಒಂದು ಕಾಲಕ್ಕೆ ನನ್ನ ಗುರುವಿನಂತಿದ್ದ ಗೆಳೆಯನ ಮುಖವನು ಹದಿಮೂರು ವರ್ಷಗಳ ಅಂತರದಲ್ಲಿ ನೋಡಲು ಸಿಕ್ಕಿದ್ದು ಮೂರೇ ಬಾರಿ.. ಕೊನೆಯ ಎರಡು ಬಾರಿ ಯಾವಾಗ ಎಂದು ನೆನಪಿಲ್ಲ. ಆದರೆ ಮೂರನೇ ಬಾರಿ ಅವನ ಮುಖ ನೋಡಿದ್ದು ಇವತ್ತು ಈ ಫೇಸ್ ಬುಕ್ ಎಂಬ ಮಾಯಾಜಾಲದಲ್ಲಿ.. ಸಿಕ್ಕಾಪಟ್ಟೆ ಖುಷಿಯಾಯ್ತು ಅವನ ಫೋಟೋ ನೋಡಿ..” ಎಂದು ನನ್ನ ಸ್ಟೇಟಸ್ ಅಪ್ ಡೇಟ್ ಮಾಡಿದ್ದೆ. ಜೊತೆಗೆ ಗುರುಗಳೇ ನಿಮ್ಮನ್ನು ಹುಡುಕಿ ಹುಡುಕಿ ಸಾಕಾಗಿತ್ತು ಎಂದು ಗೆಳೆಯನ ವಾಲ್ ಮೇಲೆ ಬರೆದಿದ್ದೆ. ಅದಕ್ಕೆ ಉತ್ತರವಾಗಿ ನಾನು ಕೂಡ ಬ್ರದರ್ ಸಿಕ್ಕಿದವರನ್ನೆಲ್ಲಾ ಕೇಳ್ತಾ ಇದ್ದೆ ಎಂದು ನನ್ನ ಗೆಳೆಯ ಬರೆದಿದ್ದ. ನನ್ನ ಇನ್ ಬಾಕ್ಸ್ ಗೆ ನಿನ್ನ ನಂಬರ್ ಕಳಿಸು. ನಿನ್ನ ಜೊತೆ ಮಾತನಾಡಲು ಕಾತುರನಾಗಿದ್ದೇನೆ ಎಂದು ಅವನ ಉತ್ತರಕ್ಕೆ ಪ್ರತಿಕ್ರಿಯೆ ನೀಡಿ ನಿದ್ದೆಗೆ ಜಾರುವಾಗಲೇ ಪ್ರೀತಿ ಪ್ರೇಮ ಅಂತ ಬರೆದು ಬರೆದು ಬೋರ್ ಹೊಡೆಸುವ ಬದಲು ಹೀಗೊಂದು ಚಂದದ ಗೆಳೆತನದ ಬಗ್ಗೆ ಒಬ್ಬ ಚಂದದ ಗೆಳೆಯನ ಬಗ್ಗೆ ಏನಾದರು ಬರೆಯಬೇಕು ಎನಿಸಿತ್ತು. ಬೆಳಿಗ್ಗೆ ಎದ್ದಾಗ ಈ ನನ್ನ ಗೆಳೆಯ ಶಂಕರನ ಕುರಿತು ಪೀಠಿಕೆ ಬರೆದು. ಫೇಸ್ ಬುಕ್ ತೆರೆದಾಗ ಇನ್ ಬಾಕ್ಸ್ ನಲ್ಲಿ ಅವನ ನಂಬರ್ ಇತ್ತು. ಎಷ್ಟೋ ವರ್ಷಗಳ ನಂತರ ಮಾತಿಗೆ ಸಿಕ್ಕವನ ದನಿ ಕೇಳಿ ಒಂತರಾ ಖುಷಿಯಾಯ್ತು. ಆ ಖುಷಿಯಲ್ಲೇ ಈ ಸಾಲುಗಳನ್ನು ಬರೆದು ಮುಗಿಸಿದೆ. ಅಂದ ಹಾಗೆ ನಾನು ಅಂದು ಮಾಡುತ್ತಿದ್ದ ಪಾರ್ಟ್ ಟೈಮ್ ಜಾಬ್ ಏನು ಅಂತ ಯಾರಾದ್ರು ಗೆಸ್ ಮಾಡ್ತೀರ?? ಅದು ಗಾರೆ ಕೆಲಸ.   ಥ್ಯಾಂಕ್ಸ್ ಟು ಫೇಸ್ ಬುಕ್.]]>

‍ಲೇಖಕರು G

June 27, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

6 ಪ್ರತಿಕ್ರಿಯೆಗಳು

 1. malathi S

  your writing is always so humbling Nataraju..another lesson learnt today..dont change..be the nice person you are…ದಿನ ಈ ತರಹ ಚೆಂದದ ಬರಹ ಹಾಕಿದ್ರೆ ಓದ್ತ ಓದ್ತಾ ನನ ತಲೆ ಮೇಲೆ halo ಬರುತ್ತೆ ಅಷ್ಟೆ…
  ಮಾಲತಿ (ಅಮ್ಮನಂತಹ ಅಕ್ಕ)..ಶ್ರೀಕಾಂತ ಗೆ ತುಂಬ ಖುಶಿಯಾಗಿದೆ ನಿಮ್ಮ ಈ ಪದದ ಬಳಕೆ..ನನಗೂ ಸಹ

  ಪ್ರತಿಕ್ರಿಯೆ
 2. shanthi k.a.

  oh…tumba chendage barediddeeri…
  nimagoo nimma kashta jeevi mitranigoo ondu shubha haaraike…

  ಪ್ರತಿಕ್ರಿಯೆ
 3. Nandeesh

  ಈಗಿನ ದಿನಗಳಲ್ಲಿ ಶಂಕರನಂತಹವರೂ ಅಪರೂಪ, ಅವರನ್ನು ನೆನಪಿಸಿಕೊಳ್ಳುವ ನಿಮ್ಮಂತಹವರೂ ಅಪರೂಪ…
  ಚೆನ್ನಾಗಿದೆ ನಟರಾಜ್

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: