ದಕ್ಷಿಣ ಏಷ್ಯಾದ ಮಾಂತ್ರಿಕರು ಸಿಕ್ಕಿದ್ದರು!

burger.jpg

vnew3.jpg“ವೆಂಕಿ ಬರ್ಗರ್”

 

ವೆಂಕಿ

ಕ್ಯಾಬ್ ನ ಹೊಟ್ಟೆಯೊಳಗೆ ತೂರಿಕೊಂಡಾಗ ಆಗ ಇನ್ನೂ ಬೆಳಗ್ಗೆ ೭.೩೦. ವರ್ಜೀನಿಯದಿಂದ ನ್ಯೂಯಾರ್ಕ್ ನ ಇನ್ನೊಂದು ವಿಮಾನ ನಿಲ್ದಾಣ ಲಾ ಗಾರ್ಡಿಯಾಗೆ ಬಂದವನಿಗೆ ಕಣ್ಣಿನ ರೆಪ್ಪೆಯ ಮೇಲೆ ಇನ್ನೂ ನಿದ್ದೆ ಕುಳಿತಿತ್ತು. ಕ್ಯಾಬ್ ನಲ್ಲಿ ಹಾಗೇ ಒರಗಿ ಒಂದಿಷ್ಟು ಜೊಂಪು ತೆಗೆಯಬೇಕು ಎಂದುಕೊಂಡೆ. ಆದರೆ ಕ್ಯಾಬ್ ಡ್ರೈವರ್ ಗೇನು ನಿದ್ದೆಗಣ್ಣಿರಲಿಲ್ಲವಲ್ಲ. ನನ್ನನ್ನು ಮಾತಿಗೆಳೆದ. ಮಾತಾಡದಿದ್ದರೂ ಬಿಡುವ ಮೂಡ್ ನಲ್ಲಿ ಅವನಿರಲಿಲ್ಲ. ದಕ್ಷಿಣ ಏಷ್ಯಾದ ಮುಖಗಳೇ ಹಾಗೆ. ನಾವು ಒಂದೇ ದೋಣಿಯ ಪಯಣಿಗರು ಎಂಬ ಭಾವನೆ ಮೂಡಿಸಿಬಿಡುತ್ತದೆ. ಕ್ಯಾಬ್ ಡ್ರೈವರ್ ಬಾಂಗ್ಲಾದೇಶದವ. ೧೭ ವರ್ಷಗಳ ಹಿಂದೆಯೇ ನ್ಯೂಯಾರ್ಕ್ ಸೇರಿಕೊಂಡಿದ್ದ.

“ನೀವು ಭಾರತದಿಂದ ಬಂದಿರುವ ಸಾಫ್ಟ್ ವೇರ್ ಎಂಜಿನಿಯರ್ ಅಲ್ಲವಾ?” ಎಂದ. ನಾನು ಅವನೊಂದಿಗೆ ವಾದ ಬೆಳೆಸಲೂ ಆಗದಷ್ಟು ನಿದ್ದೆ ಮೂಡ್ ನಲ್ಲಿದ್ದೆ. ಪಾಪ ಅವನ ವಿಶ್ವಾಸದ ಬಲೂನಿಗ್ಯಾಕೆ ಸೂಜಿ ಚುಚ್ಚಬೇಕು ಎನಿಸಿತು. ನಮ್ಮ ಮಾತುಕತೆ ನ್ಯೂಯಾರ್ಕ್ ನ ಟ್ರಾಫಿಕ್ ನಿಂದ ಆರಂಭವಾಗಿ ಬೆಂಗಾಲಿ ರಸಗುಲ್ಲಾ ಹಾದು ನಾವು ತಾಯ್ನಾಡಿನಿಂದ ಕಳೆದುಕೊಳ್ಳುತ್ತಿರುವ ನೂರಾರು ಸಂಗತಿಗಳವರೆಗೂ ಹರಿಯಿತು. ನ್ಯೂಯಾರ್ಕ್ ನ ಹೃದಯ ಭಾಗವಾದ ಮನ್ ಹಟಾನ್ ನ ೩ನೇ ಮುಖ್ಯರಸ್ತೆ ೫೧ನೇ ರಸ್ತೆಯನ್ನು ಮುಟ್ಟುವ ವೇಳೆಗೆ ಈ ಎಲ್ಲವೂ ನಡೆದು ಹೋಗಿತ್ತು. ಆ ವೇಳೆಗೆ ದೂರದ ಪ್ರಯಾಣದಲ್ಲಿ ರೈಲಿನ ಸಹಪ್ರಯಾಣಿಕರ ಜೊತೆ ಕುದುರುತ್ತದಲ್ಲಾ ಒಂದು ರೀತಿಯಲ್ಲಿ ಬಾಂಧವ್ಯ ಹಾಗೆ ನನ್ನ ಹಾಗೂ ಕ್ಯಾಬ್ ಡ್ರೈವರ್ ಮಧ್ಯೆ ಬಾಂಧವ್ಯ ಬೆಸೆದುಕೊಂಡಿತ್ತು. 

ಸೋಮವಾರ ಮಧ್ಯಾಹ್ನದ ಈ ಬಾಂಧವ್ಯದ ಎಳೆ ಮುಂದೆ ಬೆಸೆಯಲಿರುವ ಹಲವು ರೀತಿಯ ಬಾಂಧವ್ಯಕ್ಕೆ ಮುನ್ನುಡಿಯಾಗಿತ್ತು. ದಕ್ಷಿಣ ಏಷ್ಯಾದ ಹಲವು ಮಾಂತ್ರಿಕರು ನನ್ನೊಳಗೆ ಲಗ್ಗೆ ಹಾಕುತ್ತಿದ್ದರು. ಲಖ್ನೋದಿಂದ ಬಂದ ಅನಿಲ್ ಸಿಂಗ್ ರಿಂದ ಈ ಬಾಂಧವ್ಯ ಯಾತ್ರೆ ಆರಂಭವಾಯಿತು.

ಅನಿಲ್ ಹಾಗೂ ಅವರ ಬಾಂಧವರು ಉತ್ತರ ಪ್ರದೇಶ ಹಾಗೂ ಬಿಹಾರ್ ನ ಎರಡು ಲಕ್ಷಕ್ಕೂ ಜನರ ಬದುಕಿನಲ್ಲಿ ಜಾದೂ ಮಾಡಿದ್ದಾರೆ. ಎರಡೂ ರಾಜ್ಯಗಳಲ್ಲಿ ೪೦ ಸಾವಿರಕ್ಕೂ ಹೆಚ್ಚು ಸ್ವಸಹಾಯ ಗುಂಪುಗಳ ಮೂಲಕ ಈ ವಿಸ್ಮಯ ಜರುಗಿದೆ. ಗ್ರಾಮೀಣ ಮಹಿಳೆಯರೇ ನಡೆಸುತ್ತಿರುವ ಸಹಕಾರ ಸಂಘಗಳ ಮೂಲಕ ಚಿಕಣಿ ಎಂಬ್ರಾಯಿಡರಿಗಳಿಗೆ ವಿದೇಶಿ ಮಾರುಕಟ್ಟೆ ಒದಗಿಸುವುದು ಇವರ ಉದ್ದೇಶ. ಅನಿಲ್ ಈ ಕೆಲಸಕ್ಕಾಗಿಯೇ ಅಮೆರಿಕಾಗೆ ಬಂದಿದ್ದರು. ಸಭೆಯನ್ನು ಉದ್ದೇಶಿಸಿ ಓತಪ್ರೋತವಾಗಿ ಮಾತನಾಡಿದರು. ರಾಣಿ ನೂರ್ ಜಹಾನ್ ಳ ಕನಸು “ನೀಡ್” ಮೂಲಕ ಅನೇಕ ಮಹಿಳೆಯರಿಗೆ ಅಮೆರಿಕಾದಲ್ಲಿ “ನೂರ್” (ಬೆಳಕು) ನೀಡಿತ್ತು.

ಈ ಉತ್ತರಪ್ರದೇಶ ಬಾಂಧವ್ಯ ಅಲ್ಲಿಗೇ ನಿಲ್ಲಲಿಲ್ಲ. ಮಾಗ್ಸೆಸ್ಸೇ ಪ್ರಶಸ್ತಿ ವಿಜೇತ “ಆಶಾ” ಸಂಸ್ಥೆಯ ಸ್ಥಾಪಕ ಸಂದೀಪ್ ಪಾಂಡೆಯೊಂದಿಗೆ ಇಡೀ ಮಧ್ಯಾಹ್ನ ಕಳೆದೆ. ಸಂದೀಪ್ ಜೊತೆಗಿನ ಮಾತುಕತೆ ನನ್ನನ್ನು ಉತ್ತರಪ್ರದೇಶದ ಬಲ್ಲಿಯಾ ಹಾಗೂ ಹರ್ದೋಯಿಗೆ ಕರೆದೊಯ್ದಿತು. ಈ ಎರಡೂ ಪಾಂಡೆಯವರ ಕಾರ್ಯ ಕ್ಷೇತ್ರಗಳು.

mantrik.jpgದೆಹಲಿಯ ಅಧಿಕಾರ ಗದ್ದುಗೆಯಿಂದ ಹಿಡಿದು ಲಖ್ನೋದ ಬೀದಿಗಳವರೆಗೆ, ಶಿಕ್ಷಣ ಸುಧಾರಣೆಯಿಂದ ಮಾಹಿತಿ ಹಕ್ಕಿನವರೆಗೆ ಸಂದೀಪ್ ಪಾಂಡೆ ಅನೇಕ ಮೆರವಣಿಗೆಗಳನ್ನು ನಡೆಸಿದ್ದಾರೆ. ನ್ಯೂಯಾರ್ಕ್ ಗೆ ಸನಿಹದಲ್ಲಿಯೇ ಇರುವ ಪ್ರಖ್ಯಾತ ಪ್ರಿನ್ಸ್ಟನ್ ವಿಶ್ವವಿದ್ಯಾಲಯದಲ್ಲಿ ಸಂದೀಪ್ ಒಂದಿಷ್ಟು ದಿನ ಇರಲಿದ್ದಾರೆ. ಸದ್ಯದಲ್ಲಿಯೇ ಹರ್ದೋಯಿಗೆ ಹಿಂದಿರುಗಲಿರುವ ಇವರು ಅಧಿಕಾರದ ಅಮಲಿನಿಂದ ಮೈಮರೆತಿರುವ ಅನೇಕರಿಗೆ ನಿದ್ದೆ ಇಲ್ಲದ ರಾತ್ರಿಗಳನ್ನು ಸೃಷ್ಟಿಸುವುದು ಖಂಡಿತ.

ವಾರದ ಕೊನೆಗೆ ಪರ್ವತದಿಂದ ಸುಳಿಯುವ ತಂಪು ಮಾರುತದಂತೆ ನೇಪಾಳದಿಂದ ಸಾಧನಾ ಶ್ರೇಷ್ಠ ಬಂದಿಳಿದರು.  ನೇಪಾಳದ ಸಾಮಾಜಿಕ ಚಟುವಟಿಕೆಗಳ ಮುಖ್ಯ ಬಿಂದು ಇವರು. ನೇಪಾಳದ ಚಟುವಟಿಕೆಗಳನ್ನು ಇಲ್ಲಿನ ಜನರ ಮುಂದೆ ಬಿಡಿಸಿಡಲೆಂದೇ ಬಂದಿದ್ದರು.

ಒಮ್ಮೆ ಟ್ರಾಫಿಕ್ ದಟ್ಟಣೆಯ ನಡುವೆ ಬಸವಳಿದ ಪೇದೆಯಂತೆ, ಮತ್ತೊಮ್ಮೆ ಹೋಟೆಲ್ ಬಾಗಿಲಿನಲ್ಲಿ ಎಲ್ಲರಿಗೂ ಶುಭ ಕೋರುವ ಸ್ವಾಗತ ಪರಿಚಾರಕನಂತೆ ಇನ್ನೂ ಕೆಲವೊಮ್ಮೆ ಅವಕಾಶ ಹಾಗೂ ಸಾಧ್ಯತೆಗಳ ಮೊತ್ತವಾದ ನ್ಯೂಯಾರ್ಕ್ ಎಂಬ ದೇಗುಲದ ಪೂಜಾರಿಯಂತೆ ನ್ಯೂಯಾರ್ಕ್ ಬೀದಿಗಳಲ್ಲಿ ಬದುಕು ಭಿನ್ನ ಭಿನ್ನ.

‍ಲೇಖಕರು avadhi

August 27, 2007

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

೧ ಪ್ರತಿಕ್ರಿಯೆ

  1. Vasudeva Sharma

    Venki Burger chennagide. Vapassu Americakke hogibittiddare. We can expct more from him.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: