ದಟ್ಸ್ ಕನ್ನಡಕ್ಕೆ 10 : ಕಂಗ್ರಾಟ್ಸ್ ಶಾಮಿ

‘ದಟ್ಸ್ ಕನ್ನಡ’ಕ್ಕೆ 10 ವರ್ಷ ತುಂಬಿದೆ. ವೆಬ್ ಜಗತ್ತಿದೆ 10 ಸಣ್ಣ ಸಂಖ್ಯೆಯಲ್ಲ. ನಮ್ಮ ಕಣ್ಣೆದುರಿಗೇ ಡಾಟ್ ಕಾಂ ವ್ಯಾಪಾರ ನೀರ ಮೇಲಣ ಗುಳ್ಳೆಯಂತೆ ಒಡೆದು ಹೋಗಿದೆ. ‘ಕೆಂಡಸಂಪಿಗೆ’ ಒಮ್ಮೆ ಮುಚ್ಚಿ ಬಾಗಿಲು ತೆರೆಯುವ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಎಸ ಕೆ ಶ್ಯಾಮ ಸುಂದರ್ ಒಂದು ವೆಬ್ ಪತ್ರಿಕೆಯನ್ನು 10 ವರ್ಷ ನಡೆಸಿದ್ದಾರೆ ಎಂಬುದು ಆಶ್ಚರ್ಯ ಆದರೂ ನಿಜ.
ಸಂಯುಕ್ತ ಕರ್ನಾಟಕ, ಕಸ್ತೂರಿ, ಕನ್ನಡಪ್ರಭ ಹೀಗೆ ಪತ್ರಿಕೋದ್ಯಮಕ್ಕೆ ಗಟ್ಟಿ ನೆಲೆಗಟ್ಟು ಕೊಟ್ಟ ಪತ್ರಿಕೆಗಳಲ್ಲೆಲ್ಲಾ ಶಾಮಿ ತಮ್ಮ ಕಾಣಿಕೆಯನ್ನು ಸಲ್ಲಿಸಿದ್ದಾರೆ. ಈ ಅನುಭವವೇ ಅವರನ್ನು ವೆಬ್ ಪತ್ರಿಕೆಯನ್ನು ಕೈ ಹಿಡಿದು ಇಷ್ಟು ವರ್ಷ ನಡೆಸಿಕೊಂಡು ಬರಲು ಕಾರಣವಾಗಿದೆ.
‘ಶಾಮಿ’ ಎಂದೇ ಗೆಳೆಯ ಪತ್ರಕರ್ತರಿಂದ ಕರೆಸಿಕೊಳ್ಳುವ ಶಾಮ ಸುಂದರ್ ಹೆಜ್ಜೆಗಳು ಇನ್ನಷ್ಟು ವಿಸ್ತರಿಸಲಿ. ಅವರ ಕನಸು ಇನ್ನಷ್ಟು ದೊಡ್ಡದಾಗಿ ಬೆಳೆಯಲಿ ಎಂಬುದು ‘ಅವಧಿ’ಯ ಹಾರೈಕೆ
10 ತುಂಬಿದ ಸಂದರ್ಭದಲ್ಲಿ ಶಾಮಿ ಬರೆದ ಮಾತುಗಳು ಇಲ್ಲಿವೆ

ಪ್ರತಿದಿನ ತಪ್ಪದೆ ಭೇಟಿಕೊಡುವ ದಟ್ಸ್ ಕನ್ನಡ [^] [^] ಅಂತರ್ಜಾಲ ತಾಣದ ಆಪ್ತಮಿತ್ರರು(Loyal Visitors) ಆಗಾಗ ಬಂದುಹೋಗಿ ಮಾಡುವ ಬಂಧು-ಭಗಿನಿಯರು(unique visitors) ಅಂತರ್ಜಾಲ ಮಾರ್ಗದಲ್ಲಿ ಕನ್ನಡ ಹುಡುಕುತ್ತಾ ಬಾಯಾರಿ thatkskannada ಕೊಂಡಿಗೆ ಢಿಕ್ಕಿಹೊಡೆದು ಬಂದಿಳಿಯುವ ಹೊಸ ಗೆಳೆಯ ಗೆಳತಿಯರಿಗೆಲ್ಲ(New Visitor) ಹೊಸವರ್ಷ 2010ರ ಹೃತ್ಪೂರ್ವಕ ಶುಭಾಶಯಗಳು. ದಟ್ಸ್ ಕನ್ನಡ ಡಾಟ್ ಕಾಂ ಎಂದರೆ ಜಾತಿ ವಿಹೀನರ ಮನೆಯ ಕನ್ನಡ ಜ್ಯೋತಿ.
ಪಾಶ್ಚಿಮಾತ್ಯರ ಹೊಸ ಕ್ಯಾಲೆಂಡರ್ ಸಂವತ್ಸರದ ಮುನ್ನಾದಿನವಾದ ಇಂದು ನಮ್ಮ ಕನ್ನಡದ ಜಾಗತಿಕ ಹಳ್ಳಿಮನೆಗೆ ನಿಮಗೆ ಮತ್ತೊಮ್ಮೆ ಸ್ವಾಗತಕೋರಲು ಅತೀವ ಸಂತೋಷವಾಗುತ್ತಿದೆ. ಕಾರಣ ಸ್ಪಷ್ಟ. ನಮ್ಮ ಓದುಗರಿಗೆ ನಾವು ಕೊಡಬಹುದಾದ ಏಕಮೇವ ಬಳುವಳಿಯೆಂದರೆ ತ್ವರಿತಗತಿಯ ಮಾಹಿತಿ ಹಾಗೂ ತಾಣದಲ್ಲಿ ಸುಲಭ, ಸುಸೂತ್ರ ವಿಹಾರಕ್ಕೆ ಹೊರಡಲು ನಿಮಗೆ ಇನ್ನಷ್ಟು ಅನುಕೂಲವಾಗುವ ವಿನ್ಯಾಸ.
ಇಂದಿನಿಂದ ಅಂತಹ ಇನ್ನೊಂದು ಹೊಸ ನಮೂನೆಯ ವಿನ್ಯಾಸವನ್ನು ನಿಮ್ಮ ಕಣ್ಣೆದುರು ತೆರೆದಿಡುತ್ತಿದ್ದೇನೆ. ಕಾಲಕಾಲಕ್ಕೆ ತಾಣವನ್ನು ನವೀಕರಿಸುವ, ಅಲಂಕರಿಸುವ ಮತ್ತು ಕನ್ನಡ ಓದುಗರ ಚಕಚಕ ಓದುವ ಚಡಪಡಿಕೆಯನ್ನು ತೃಪ್ತಿಗೊಳಿಸುವ ಉದ್ದೇಶವೇ ನೂತನ ವಿನ್ಯಾಸದ ಉದ್ದೇಶ. ನಮ್ಮ ತಾಣ ಆರಂಭವಾದಾಗಿನಿಂದ ಇದುವರೆಗೆ ವರ್ಷಕ್ಕೊಮ್ಮೆಯಂತೆ ವಿನ್ಯಾಸ ಪುನರ್ರೂಪಿಸಬೇಕೆಂಬ ನಮ್ಮ ಸಂಕಲ್ಪ ಇವತ್ತು ಮತ್ತೊಮ್ಮೆ ಸಾಕಾರವಾಗಿದೆ. ಅಂದಹಾಗೆ, 2010 ದಟ್ಸ್ ಕನ್ನಡ ತಾಣಕ್ಕೆ ದಶಮಾನೋತ್ಸವ ವರ್ಷ. ಈ ಸಂದರ್ಭಕ್ಕೆ ನಾವು ನೀಡಿರುವ ದಟ್ಸ್ ಕನ್ನಡದ ಹೊಸ ವೆಬ್ ನೋಟ ನಿಮಗೆ ಆಸಕ್ತಿದಾಯಕವೂ, ತೃಪ್ತಿದಾಯಕವಾಗಿಯೂ ಇದೆ ಎಂಬ ವಿಶ್ವಾಸ ಇಟ್ಟುಕೊಂಡಿದ್ದೇನೆ.
ವೇಷಗಳು ಬದಲಾಗಬಹುದು, ಸ್ವಭಾವ ಬದಲಾಗುವಂಥದಲ್ಲ. ಪ್ರಧಾನವಾಗಿ ಕನ್ನಡನಾಡಿನ ಆಗುಹೋಗುಗಳು, ಪ್ರಜಾಪ್ರತಿನಿಧಿ ವ್ಯವಸ್ಥೆಯ ನಮ್ಮ ಕರ್ನಾಟಕದ ಜನತಂತ್ರ, ನಿರಂತರ ಬದಲಾವಣೆಗೆ ಪಕ್ಕಾಗಿರುವ ಕಾಲಮಾನಗಳು ಹಾಗೂ ಕನ್ನಡ ಚಲನಚಿತ್ರ ಪ್ರೇಮಿಗಳಿಗೆ ಉದ್ಯಮ ಉತ್ಪತ್ತಿ ಮಾಡುವ ಕಸರಸದೌತಣಗಳ ಸಮಾರಾಧನೆ ಮಾಡುವುದೇ ನಮ್ಮ ಕಾಯಕ ಮತ್ತು ಆಕಾಂಕ್ಷೆ. ಈ ಕಾಯಕವನ್ನು ಇನ್ನಷ್ಟು ಆಸ್ಥೆಯಿಂದ ಮಾಡುವುದಕ್ಕೆ ನಿಮ್ಮ ಪ್ರೋತ್ಸಾಹ ಮತ್ತು ಪಾಲುದಾರಿಕೆಯನ್ನು ನಾನು ಮತ್ತು ನನ್ನ ತಂಡ ಆತಂಕ ಮತ್ತು ಕುತೂಹಲದಿಂದ ಎದುರು ನೋಡುತ್ತಲೇ ಇರುತ್ತೇವೆ.
ಹೊಸವರ್ಷದಲ್ಲಿ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಶಾಂತಿ ಮತ್ತು ಸಂಪತ್ತು ಪ್ರಾಪ್ತವಾಗಲಿ ಎನ್ನುವುದು ನನ್ನ ಈ ನಾಲಕ್ಕು ವಾಕ್ಯಗಳಲ್ಲಿ ಅಡಗಿರುವ ಆಶಯ. ಪ್ರತಿಯಾಗಿ, ತಾವೂ ಕೂಡ ನಮಗೆ ಅದನ್ನೇ ಬಯಸುತ್ತೀರೆಂಬ ಭರವಸೆ ಇಟ್ಟುಕೊಳ್ಳೋಣವೆ?

‍ಲೇಖಕರು avadhi

March 14, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

6 ಪ್ರತಿಕ್ರಿಯೆಗಳು

 1. H. Anandarama Shastry

  ’ದಟ್ಸ್ ಕನ್ನಡ’ಕ್ಕೆ ತುಂಬಿದೆ ವರುಷ ಹತ್ತು.
  ನಡೆಸಿದವರಿಗಷ್ಟೇ ಅದರ ನಡುಕ ಗೊತ್ತು.
  ಬುದ್ಧಿ ಹೇಳಿದವರ ಮಾತಿಗೆ ಬೆಲೆಯಿತ್ತು
  ತಿದ್ದಿಕೊಂಡು ಮುನ್ನಡೆದರೆ ಅದಾಗಬಲ್ಲುದು
  ಕನ್ನಡದ ಆಣಿಮುತ್ತು.
  ಎಂಭತ್ತರ ದಶಕದಿಂದ ಶ್ಯಾಮ್ ಅವರನ್ನು ಗಮನಿಸುತ್ತಿದ್ದೇನೆ. ಕನ್ನಡ ಪತ್ರಿಕೋದ್ಯಮದ ಆಪ್ಯಾಯಮಾನ ವ್ಯಕ್ತಿ.

  ಪ್ರತಿಕ್ರಿಯೆ
 2. V.R.BHAT

  ಸ್ವಾಮೀ ಶಾಮೀ,
  ನಮಸ್ಕಾರಗಳು,
  ತಾವು ತಾವಾಗಿ ಒಂದುದಿನ ನನ್ನ ಬ್ಲಾಗ್ ‘ ನಿಮ್ಮೊಡನೆ ವಿ.ಆರ್.ಭಟ್ ‘ ನಲ್ಲಿ ಪ್ರತ್ಯಕ್ಷವಾದಾಗ ಯಾರೋ ಹ್ಯಾಕರ್ ಇರಬಹುದೆಂದು ಹೆದರಿದೆ, ಯಾಕೆಂದ್ರೆ ನನಗದಿನ್ನೂ ಬ್ಲಾಗ್ ಲೋಕ ಹೊಸತು, ಸುಮಾರು 20 ವರ್ಷಗಳಿಂದ ಬರೆಯುತ್ತಿದ್ದರೂ ಬರೆದ ಬರೆಹಗಳೆಲ್ಲ ನೀರುಪಾಲಾದ ಒಂದು ಕಹಿನೆನಪು ಎಂಬ ಬೇವನ್ನೂ ಮತ್ತು ಇಂದು ಕೇವಲ ಬೆರಳೆಣಿಕೆಯ ಎರಡು ತಿಂಗಳಲ್ಲಿ ಬ್ಲಾಗ್ ಮೂಲಕ ದೇವರು ನನಗೆ ಕರುಣಿಸಿದ ಜನಪ್ರಿಯತೆಯೆಂಬ ಸಿಹಿಯನ್ನೂ ಒಟ್ಟಿಗೆ ನೀಡುವುದರ ಮೂಲಕ ಈ ಯುಗಾದಿಯನ್ನು ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನಾನು ವೃತ್ತಿಯಿಂದ ಗಣಕಯಂತ್ರ ತಜ್ಞನಾಗಿ, ಮಾನವ ಸಂಪನ್ಮೂಲ ತರಬೇತಿಯಲ್ಲಿ ಕೂಡ ಅಪಾರ ಅನುಭವ-ಜನಪ್ರಿಯತೆ ಗಳಿಸಿ ಸ್ನೇಹಿತರ ಒತ್ತಾಸೆಯ ಮೇರೆಗೆ ಬ್ಲಾಗ್ ಪ್ರಾರಂಭಿಸಿದೆ. ಇವತ್ತಿಗಾಗಲೇ ಸರಿಸುಮಾರು 61 ವಿವಿಧ ಕಥನ-ಕವನಗಳನ್ನು ಜನತೆಗೆ ಇತ್ತ ಹರುಷ ನನ್ನದು. ವೃತ್ತಿಯಲ್ಲಿ ದಣಿದು ಬೇಸತ್ತರೂ ಸಾಹಿತ್ಯ-ಕಾವ್ಯ ಪ್ರೇಮದಿಂದ ಹಗಲಿರುಳೂ ಅದರ ಧ್ಯಾನ ಮತ್ತು ಅನುಸಂಧಾನ ನಿರತನಾದ ನನಗೆ ನಿದ್ದ್ಗೆ ಸಿಗುವ ಕಾಲ ಅಜಮಾಸ್ 4 ತಾಸು.
  ಬರಹವೇ ಜೀವನದ ಅವಿಭಾಜ್ಯ ಅಂಗವಾಗಿ ಬೆಳೆದ ನನ್ನ ರಕ್ತದಲ್ಲಿ ಅದರ ಸಲುವಾಗಿ ಬೇರೆ ಯಾವುದೂ ಪರ್ಯಾಯ ಇಲ್ಲ,ಬೇರೆಯದನ್ನು ಬಯಸಲೂ ಇಲ್ಲ. ಅವಧಿಯ ಮೂಲಕ ನನಗೆ ತಿಳಿದ ವಿಷಯ 10 ವರ್ಷ ಈ-ಪತ್ರಿಕೆ ನಡೆಸಿ ಪೂರೈಸಿದ ಹೆಗ್ಗಳಿಕೆ ತಮದು.ತಮ್ಮ ಪತ್ರಿಕೆ ಚಿರಾಯುವಾಗಲಿ, ತಮಗೆ ತನ್ಮಧ್ಯೆ ಬರುವ ಎಲ್ಲಾ ವ್ಯಾವಹಾರಿಕ ತೊಂದರೆಗಳನ್ನೂ ನಿಭಾಯಿಸುವ ಶಕ್ತಿಯನ್ನು ದೈವವೆಂಬ ಆ ಶಕ್ತಿ ಕೊಡಲಿ ಎಂದು ಮನಸಾ ಹಾರೈಸುತ್ತಿದ್ದೇನೆ. ಬೇಂದ್ರೆಯ ಆಪ್ಪಟ ಶಿಷ್ಯನಾದ ನಾನು ಅವರ ಮಾತಿಂದಲೇ ಹೇಳುವುದಾದರೆ
  ಹುಸಿನಗುತ ಬಂದೇವ ನಸುನಗುತ ಬಾಳೋಣ
  ತುಸುನಗುತ ತೆರಳೋಣ
  ಬಡನೂರು ವರುಷಾನ ಹರುಷಾದಿ ಕಳೆಯೋಣ
  ಯಾಕಾರೆ ಕೆರಳೋಣ
  ಯುಗಾದಿ ಮತ್ತೆ ಮತ್ತೆ ಬರಲಿ,ಆರ್ಷೇಯ ಪದ್ಧತಿಯಂತೆ ನಿಮ್ಮೆ ಮನೆ-ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: