ದಣಪೆ ದಾಟಿ ಬೆಟ್ಟಕ್ಕೆ….

ಕೆ ಅಕ್ಷತಾ
ak1
 
 
 
ದಣಪೆಯಾಚೆ
ಸುತ್ತ ಗೋಡೆಯಂತೆ ಸುತ್ತುವರೆದಿರುವ ಹೆಬ್ಬಂಡೆಗಳು ನಡುವೆ ಕಲ್ಲಿನಿಂದ ಕಟ್ಟಿದ ಪುಟ್ಟ ಕೊಳ ಹಿಂದಿನ ಬಾರಿ ಬಂದಾಗ ಕೊಳದಲ್ಲಿ ನೀರಿತ್ತು ಈ ಬಾರಿ ಇರಲಿಲ್ಲ. ಅಮ್ಮನ ಘಟ್ಟದ ಜೇನುಕಲ್ಲಮ್ಮ ದೇವಸ್ಥಾನದ ಆವರಣಕ್ಕೆ ಕಾಲಿಟ್ಟ ಕೂಡಲೇ ಇವನಿಗೆ ಇಲ್ಲೆಲ್ಲೋ ಒಂದು ಕೊಳ ಇದೆ ಕಣೋ ಎಂದೆ. ಕೊಳವಾ ಇನ್ನೆಂತಾ ಎಂದು ಹಾಸ್ಯ ಮಾಡಿದ. ಇಲ್ಲ ಕಣೋ ಇಲ್ಲೆಲ್ಲೋ ಒಂದು ಕೊಳ ಇತ್ತು ನನಗೆ ಖರೆ ನೆನಪಿದೆ ಎಂದೆ. ಹಿಂದಿನ ಬಾರಿಯೆಂದರೆ ಒಂದೆರಡು ವರ್ಷದ ಹಿಂದಿನ ಕತೆಯಲ್ಲ ಬರೋಬ್ಬರಿ ಹತ್ತು ವರ್ಷಗಳ ಹಿಂದೆ. ಹಿಂದಿನ ದಿನ ಹೋದವರ ಮನೆಯ ದಾರಿಯನ್ನು ಮರುದಿನದವರೆಗೂ ನೆನಪಿಟ್ಟುಕೊಳ್ಳಲು ಸೋಲುವ ತನ್ನ ಹೆಂಡತಿ ಅದ್ಯಾವಾಗಲೋ ಭೇಟಿಕೊಟ್ಟ ಅಮ್ಮನಘಟ್ಟದಲ್ಲಿ ಇಲ್ಲೆಲ್ಲೊ ಒಂದು ಕೊಳವಿದೆ ಎಂದು ಹುಡುಕಲು ಹೊರಟರೆ ಅವನಿಗೆ ಅದೊಂದು ಜೋಕಾಗಿ ಕಾಣದೆ ಇನ್ನೇನಾಗಿ ಕಂಡೀತು.
ಆದರೆ ನನಗೆ ಅಷ್ಟು ಚೆನ್ನಾಗಿ ಕೊಳದ ಬಗ್ಗೆ ನೆನಪಿಟ್ಟುಕೊಳ್ಳಲು ಕಾರಣವಿತ್ತು. ಆಗ ಪ್ರಥಮ ಪಿಯುಸಿಯಲ್ಲಿದ್ದೆ ಗೆಳತಿ ರಂಜನಾ ದಸರಾ ರಜೆಯಲ್ಲಿ ಅಮ್ಮನಘಟ್ಟ ತೋರಿಸಲು ಕರೆದುಕೊಂಡು ಬಂದಿದ್ದಳು. ಅವಳ ಸೋದರತ್ತೆಯ ಮೂವರು ಮಕ್ಕಳು ನಮ್ಮ ಜೊತೆಗಿದ್ದರು. ರಂಜೂ ನನ್ನ ಪಾಲಿನ ಗೆಳತಿ ಮತ್ತು ಗೈಡ್. ಸುತ್ತ ಮುತ್ತಲ ಅದೆಷ್ಟೋ ಊರುಗಳಿಗೆ ನನ್ನನ್ನು ಕರೆದೊಯ್ದು ತೋರಿಸಿದವಳು ಅವಳೇ. ಅಮ್ಮನಘಟ್ಟಕ್ಕೆ ಬಂದಾಗಲೂ ಎಂದಿನಂತೆ ನಾವೆಲ್ಲರು ತಂದ ದಾರಿ ಖರ್ಚಿನ ಹಣ ರಂಜೂವಿನ ಬ್ಯಾಗಲ್ಲಿತ್ತು. ಬುತ್ತಿಯ ಗಂಟು, ನೀರಿನ ಬಾಟಲಿ ಬಾಳೆ ಹಣ್ಣಿದ್ದ ಚೀಲ ಹೀಗೆ ಒಬ್ಬೊಬ್ಬರ ಹೆಗಲಿಗೆ ಒಂದೊಂದು ಜವಾಬ್ದಾರಿ ಗಂಟು ಬಿದ್ದಿತ್ತು. ಅವರವರ ಅರ್ಹತೆಗೆ ತಕ್ಕಂತೆ. ಮೊದಲಿಗೆ ಕೊಳದ ಬಳಿ ಹೋದವರೇ ಅಲ್ಲಿ ಸ್ವಲ್ಪ ಹೊತ್ತು ಕೂತು ಕೊಳದ ನೀರಿನಲ್ಲಿ ನಮ್ಮ ಪ್ರತಿಬಿಂಬ ನೋಡುತ್ತಾ ಸಂಭ್ರಮಿಸಿ ನಂತರ ದೇವಸ್ಥಾನದ ಆವರಣಕ್ಕೆ ಕಾಲಿಟ್ಟೆವು.
p1000828ಅಷ್ಟರೊಳಗೆ ಎದುರಿಗಿದ್ದ ಗುಡ್ಡ ಹತ್ತಿ ಒಂದು ಪ್ರದಕ್ಷಿಣೆ ಹಾಕಿ ಎಲ್ಲೆಲ್ಲಿ ಏನೇನಿದೆ ಎಂದು ಕಣ್ಣಾಡಿಸಿದ್ದೆವು. ಆವತ್ತು ನವರಾತ್ರಿಯ ದಿನವಾದ್ದರಿಂದ ದೇವಸ್ಥಾನದಲ್ಲಿ ಜನರಿದ್ದರು. ಆರತಿ ತಟ್ಟೆಗೆ ಕಾಸು ಕೊಡು ಎಂದು ರಂಜನಾಳನ್ನು ಕೇಳಿದಾಗಲೇ ಅವಳಿಗೆ ತನ್ನ ಹೆಗಲಲ್ಲಿದ್ದ ಬ್ಯಾಗ್ ಇಲ್ಲ ಎಂದು ನೆನಪಾದದ್ದು. ಎಲ್ಲಿ ಬಿಟ್ಟೆ ಎಂದು ನೆನಪಾಗುತ್ತಿಲ್ಲ. ಗುಡ್ಡದ ಸುತ್ತ ಹೋಗಿ ಹುಡುಕಿದೆವು ಅಲ್ಲೆಲ್ಲು ಇರಲಿಲ್ಲ. ಮತ್ತೆ ಮತ್ತೆ ನೆನಪಿಸಿಕೊಂಡೆವು ಎಲ್ಲಿ ಕೂತೆವು, ಎಲ್ಲಿ ಎದ್ದೆವು, ಎಲ್ಲಿ ನಡೆದೆವು ಎಂದೆಲ್ಲ. ಜೊತೆಗೆ ಯಾರಾದರೂ ತೆಗೆದುಕೊಂಡು ಹೋಗಿದ್ದರೆ ಮುಂದಿನ ಕತೆಯೇನು ಎಂಬ ಪ್ರಶ್ನೆಯು ಎದುರಿಗಿತ್ತು. ನಮ್ಮಲ್ಲೆ ಒಬ್ಬರು ಕೊಳದ ಹತ್ತಿರ ಇರಬಹುದು ಎಂದರು. ಓಹೋ ಹೌದಲ್ಲ ಎಂದು ಹೋಗಿ ನೋಡಿದರೆ ಅಲ್ಲಿ ಬ್ಯಾಗು ಸುರಕ್ಷಿತವಾಗಿತ್ತು. ಈಗ ಇದನ್ನು ಹೇಳಿದರೆ ಒಂದು ಸಾಮಾನ್ಯ ಘಟನೆಯನ್ನು ಹೇಳಿದ ಹಾಗೆ ಆಗುತ್ತದೆ. ಆದರೆ ಲೋಕ ಕಂಡಿಲ್ಲದ ನಮಗೆ ಅಂದು ಆದ ಆತಂಕ ತಾಕದೆ ಹೋಗುತ್ತದೆ. ಅದಕ್ಕೆ ನಾನು ಇವನಿಗೆ ಹೇಳಲು ಹೋಗಲಿಲ್ಲ.
ಅಮ್ಮನಘಟ್ಟಕ್ಕೆ ಹೋಗಬೇಕೆಂದು ಏಳೆಂಟು ವರ್ಷಗಳಲ್ಲಿ ಹತ್ತಾರು ಬಾರಿ ಅನ್ನಿಸಿದಿದೆ. ಸುತ್ತಲೂ ಗುಡ್ಡ ಬೆಟ್ಟಗಳಿಂದ ಆವೃತ್ತವಾದ, ನೈಸರ್ಗಿಕವಾಗಿ ರೂಪಿತವಾಗಿರುವ ಬೃಹತ್ ಕಪ್ಪು ಬಂಡೆಯ ಅಡಿ ಬಂಡೆಯನ್ನೆ ಮೇಲ್ಚಾವಣಿಯನ್ನಾಗಿಸಿ ಬೇರೆ ಛಾವಣಿಯನ್ನೆ ಕಟ್ಟದೆ ಸಣ್ಣದೊಂದು ಗುಡಿ ಕಟ್ಟಿ ಅಲ್ಲಿ ಅಮ್ಮನ ವಿಗ್ರಹ ಪ್ರತಿಷ್ಠಾಪಿಸಲಾಗಿದೆ. ಆಗ ಇಲ್ಲಿ ಬೇರೆ ಯಾವುದೇ ಬಿಲ್ಡಿಂಗ್ ಗಳಿರಲಿಲ್ಲ. ಉದ್ದಾನುದ್ದ ಹಬ್ಬಿರುವ ಬಂಡೆ ಮಳೆಯಿಂದ, ಬಿಸಿಲಿಂದ ದೇವಿಯನ್ನು, ಭಕ್ತರನ್ನು ರಕ್ಷಿಸುತಿತ್ತು. ಅಂದು ಈ ಪ್ರಾಕೃತಿಕವಾದ ಸೊಬಗಿನ ದೇವಿ ಸನ್ನಿಧಿ ನಮಗೆಲ್ಲರಿಗೂ ಇಷ್ಟವಾಗಿತ್ತು. ಆದರೆ ಇತ್ತೀಚೆಗೆ ಅಮ್ಮನಘಟ್ಟಕ್ಕೆ ಹೋಗಬೇಕೆಂದು ಕೊಂಡಾಗೆಲ್ಲ ಅಭಿವೃದ್ದಿಯ ಹೆಸರಿನಲ್ಲಿ ಬಂಡೆಗಳನ್ನೆ ಸರಿಸಿ ದೊಡ್ಡ ದೊಡ್ಡ ಬಿಲ್ಡಿಂಗ್ ಮಾಡಿ ಅದರ ನಡುವೆ ದೇವಿಯನ್ನಿಟ್ಟು, ಬಂಡೆಗಳೇ ಕಾಣದಂತಾಗಿರಬಹುದು, ಸುತ್ತಲಿದ್ದ ಗುಡ್ಡವನ್ನೆ ಬೋಳಿಸಿ ದೊಡ್ಡ ದೊಡ್ಡ ರಸ್ತೆ ಮಾಡಿಸಿರಬಹುದು, ಜನ ಜಂಗುಳಿ ನೆರೆದು ಕಾವಲಿಗೆ ಪೊಲೀಸರು, ಮುಂದೆ ಹೋಗಿ ಎಂದು ದೂಡುವ ಸಹ ಭಕ್ತರು, ಏನೇನು ಪೂಜೆ ಇದೆ ಬೇಗ ಬೇಗ ಹೇಳಿ ಎಂದು ಆರ್ಡರ್ ಮಾಡುವ ವಿಶೇಷ ಪೂಜೆ ಮಾಡಿಸದವರನ್ನು ಕೆಕ್ಕರಿಸಿ ನೋಡುವ ಪೂಜಾರಿಗಳು ಹೀಗೆ ಏನೇನೋ ಬೇರೆ ಹಲವು ದೇವಸ್ಥಾನದಲ್ಲಾದಂತೆ ಇಲ್ಲೂ ಮಾರ್ಪಾಡುಗಳಾಗಿರಬಹುದು ಎಂದೆನ್ನಿಸಿ ಅಮ್ಮನಘಟ್ಟಕ್ಕೆ ಹೋಗುವ ನನ್ನ ಆಸೆಯನ್ನು ಮುರುಟಿಸಿಬಿಡುತ್ತಿತ್ತು.
ಎಲ್ಲದರಂತೆ ದೇವಸ್ಥಾನಗಳು ವ್ಯಾಪಾರ, ವ್ಯವಹಾರದ ಕೇಂದ್ರಗಳಾಗಿ ಬದಲಾಗುತ್ತಿರುವ ಇಂದಿನ ದಿನಗಳಲ್ಲಿ ಅಲ್ಲಿ ಭಕ್ತಿ, ಶಾಂತಿ, ಮೌನಕ್ಕೆ ಸ್ಪೇಸ್ ಇರಬೇಕು ಎಂದು ಬಯಸುವುದೇ ಅರಿವುಗೇಡಿತನ ಎಂದು ನನಗೆ ಗೊತ್ತು. ಆದರೂ ಮನಸ್ಸು ಅಮ್ಮನಘಟ್ಟದ ಪ್ರಾಕೃತಿಕ ಸೌಂದರ್ಯ ಹಾಳಾಗುವುದನ್ನು ಬಯಸಿರಲಿಲ್ಲ. ಅಮ್ಮನಘಟ್ಟ ನೋಡಲು ಈ ಭಾನುವಾರ ಹೊರಟೇ ಬಿಟ್ಟೆವು. ಶಿವಮೊಗ್ಗೆಯಿಂದ ಎರಡು ಗಂಟೆಗಳ ದಾರಿ. ನಾವು ಹೋಗುವಷ್ಟರಲ್ಲಿ ಭಟ್ಟರು ಪೂಜೆ ಮುಗಿಸಿ ಹೊರಟು ಹೋಗಿದ್ದರು. ಅವರು ಅದೇ ತಾನೇ ದೇವಾಲಯದ ಹೊಸಿಲಿಗೆ ಏರಿಸಿದ ಕೆಂಪು ದಾಸವಾಳದ ಹೂವುಗಳು ಬಿರಿದು ನಿಂತಿದ್ದವು. ಹೆಚ್ಚಿನ ಯಾವ ಬದಲಾವಣೆಯು ಆಗಿರಲಿಲ್ಲ. ದೇವಿಗೆ ಬಂಡೆಯೇ ಮೇಲ್ಚಾವಣಿಯಾಗಿತ್ತು. ಸುತ್ತಲೂ ಆವೃತ್ತವಾದ ಕಾಡು ಗುಡ್ಡಗಳು ನಾಶವಾಗಿರಲಿಲ್ಲ. ಊಟದ ಹಾಲ್ ಇರಬಹುದು ಅದೊಂದು ಬಿಲ್ಡಿಂಗ್ ನಿರ್ಮಾಣ ಹಂತದಲ್ಲಿತ್ತು. ಕೊಳದ ಸುತ್ತ ಗೇಟ್ ನಿರ್ಮಿಸಿದ್ದರು. ಅದಕ್ಕೆ ಕೊಳ ಕೂಡಲೇ ನನ್ನ ಕಣ್ಣಿಗೆ ಬಿದ್ದಿರಲಿಲ್ಲ.
ದೇವಸ್ಥಾನದ ಎದುರಿಗೆ ಇದ್ದ ಮಾವಿನಮರದ ತುಂಬಾ ಕಾಯಿಗಳು. ಇವನು ಹೊಸದೊಂದು ಸಾಹಸ ಮಾಡುವ ಉಮ್ಮೇದಿನಲ್ಲಿ ದೋಟಿ ಹುಡುಕಿ ಮಾವಿನ ಕಾಯಿ ಬೀಳಿಸಲು ಪ್ರಯತ್ನ ಮಾಡಿದ. ನಾನು ತಡಿ ಮಾರಾಯ ನಿಮ್ಮಮ್ಮನಿಗೆ ನೀನು ಮಾವಿನ ಕಾಯಿ ಕೆಡಗುತ್ತಿರುವ ಫೋಟೋ ತೋರಿಸಲೇ ಬೇಕು ಎಂದು ಕ್ಯಾಮರಾ ಹಿಡಿದು ಕ್ಲಿಕ್ಕಿಸತೊಡಗಿದೆ. ಏಕೆಂದರೆ ಇವರಮ್ಮ ದೋಟಿ ಹಿಡಿದು ನುಗ್ಗೆಕಾಯಿ ಕೊಯ್ಯುವಾಗ ಇವನು ನಿಂತು ನೋಡುತ್ತಿರುತ್ತಾನೆ. ಫೋಟೋಗೆ ಫೋಸ್ ಕೊಟ್ಟಿದ್ದಷ್ಟೆ ಬಂತು ಕೊನೆಗೂ ಉದುರಿಸಲು ಶಕ್ಯವಾಗಿದ್ದು ಒಂದೆ ಒಂದು ಮಾವಿನಕಾಯಿ. ಇನ್ನು ಮುಂದೆ ನುಗ್ಗೆಕಾಯಿ ಕೊಯ್ಯೋ ವಿಷಯದಲ್ಲಿ ಇವನನ್ನು ದೂರೋ ಹಾಗೆ ಇಲ್ಲ ಏಕೆಂದರೆ ಅತ್ತೆ ದೋಟಿ ಹಿಡಿದು ಒಮ್ಮೆ ಮರ ಕುಲಕಿಸಿದರೆ ಸಾಕು ಹತ್ತಾರು ನುಗ್ಗೆಕಾಯಿಗಳು ನೆಲಕ್ಕುದರುತ್ತವೆ.
ಅಮ್ಮನಘಟ್ಟದ ಬಂಡೆಯಡಿಯಲ್ಲಿ ಕೂತು ಎದುರಿದ್ದ ಪ್ರಕೃತಿ ಸೊಬಗಿಗೆ ಕಣ್ಣು ನೆಟ್ಟೆವು. ಮೌನದಲ್ಲೂ ಮನಸ್ಸು ತುಂಬಿಕೊಂಡಿತ್ತು. ಕುವೆಂಪು ಅವರ ಪ್ರಕೃತಿಗೀತೆಗಳು ಒಂದೊಂದಾಗಿ ನೆನಪಾದವು. ಈಡೇರಲಾರದು ಎಂದು ಗೊತ್ತಿದ್ದರೂ ಈ ಪ್ರಕೃತಿ ಸನ್ನಿಧಿ ಹೀಗೆ ಇರಲಿ ಎಂದು ಬೇಡಿದೆ. ಈಗ ಮನೆಗೆ ಬಂದು ಇವನು ತೆಗೆದ ಅಲ್ಲಿನ ಫೋಟೋಗಳನ್ನು ಕಂಪ್ಯೂಟರ್ಗೆ ಡೌನ್ ಲೋಡ್ ಮಾಡುವಾಗ `ಕ್ಷೇತ್ರದ ಅಭಿವೃದ್ದಿಗೆ ಸಹಕರಿಸಿ’ ಎಂಬ ದೇವಸ್ಥಾನದ ಗೋಡೆಯ ಮೇಲಿನ ದೊಡ್ಡ ಬೋರ್ಡ್ ಕಾಣಿಸಿತು. ಅಲ್ಲಿ ಎರಡ್ಮೂರು ಗಂಟೆ ಕಳೆದಿದ್ದರೂ ಈ ಬೋರ್ಡ್ ಕಣ್ಣಿಗೆ ಬಿದ್ದಿರಲಿಲ್ಲ ಹೇಗೆ?

‍ಲೇಖಕರು avadhi

April 21, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮೋಹನ ಮುರುಳಿಯ ಸೆಳೆತ.

ಮೋಹನ ಮುರುಳಿಯ ಸೆಳೆತ.

ಕಳೆದು ಹೋಗುವುದು ಎಚ್.ಆರ್. ರಮೇಶ ಇರುವುದರ ಮಹತ್ವವ ತಿಳಿಯದೆ ಇಲ್ಲದುದರ, ಕಳೆದು ಹೋದುದರ ಬಗ್ಗೆನೇ ಕೊರಗುತ್ತೇವೆ. ಕಳೆದು ಹೋದುದು ನಮ್ಮ...

ಅವರು ಮನಮೋಹನ್ ಅಂಕಲ್..

ಅವರು ಮನಮೋಹನ್ ಅಂಕಲ್..

ಶ್ಯಾಮಲಾ ಮಾಧವ ಮೊನ್ನೆ 'ಬಹುರೂಪಿ' ಜಂಗಲ್ ಡೈರಿ ಕೃತಿ ಪ್ರಕಟಿಸಿದೆ ಎಂದು ಗೊತ್ತಾಯಿತು. ಪತ್ರಕರ್ತ ವಿನೋದಕುಮಾರ್ ನಾಯ್ಕ್ ಬರೆದ ಪುಸ್ತಕವನ್ನು...

ಅವರು ಮನಮೋಹನ್ ಅಂಕಲ್..

ಅವರು ಮನಮೋಹನ್ ಅಂಕಲ್..

ಶ್ಯಾಮಲಾ ಮಾಧವ ಮೊನ್ನೆ 'ಬಹುರೂಪಿ' ಜಂಗಲ್ ಡೈರಿ ಕೃತಿ ಪ್ರಕಟಿಸಿದೆ ಎಂದು ಗೊತ್ತಾಯಿತು. ಪತ್ರಕರ್ತ ವಿನೋದಕುಮಾರ್ ನಾಯ್ಕ್ ಬರೆದ ಪುಸ್ತಕವನ್ನು...

2 ಪ್ರತಿಕ್ರಿಯೆಗಳು

 1. guru

  Akshata avare,
  Exactly location elli barutte anta heli, naanu omme hogi baruve. naanu shimogadavanu

  ಪ್ರತಿಕ್ರಿಯೆ
 2. avadhi

  ಅಕ್ಷತಾ ಉತ್ತರ:
  ಶಿವಮೊಗ್ಗದಿಂದ ಹೊಸನಗರಕ್ಕೆ ಹೋಗುವ ದಾರಿಯಲ್ಲಿ ಕೋಡೂರಿನಿಂದ ಎರಡು ಕಿಮೀ ಮುಂದೆ ಅಮ್ಮನಘಟ್ಟ ರಸ್ತೆ ಸಿಗುತ್ತದೆ. ಅಲ್ಲಿಂದ ಒಳ ರಸ್ತೆಯಲ್ಲಿ ಮೂರು ಕಿ.ಮೀ ಸಾಗಿದರೆ ಅಮ್ಮನಘಟ್ಟ ದೇವಸ್ಥಾನ ದೊರೆಯುತ್ತದೆ.
  ಶಿವಮೊಗ್ಗದಿಂದ ರಿಪ್ಪನ್ಪೇಟೆ ಮೂಲಕ ಹೊಸನಗರಕ್ಕೆ ಸಾಗುವ ಬಸ್ಗಳು ಅಮ್ಮನಘಟ್ಟ ರಸ್ತೆಯ ಮೂಲಕವೇ ಮುಂದೆ ಸಾಗುತ್ತವೆ. ಆದರೆ ಮುಖ್ಯರಸ್ತೆಯಿಂದ ದೇವಸ್ಥಾನಕ್ಕೆ ಯಾವುದೇ ಬಸ್ ಅಥವಾ ಇತರೆ ವಾಹನ ವ್ಯವಸ್ಥೆ ಇರುವುದಿಲ್ಲ. ಅಮ್ಮನಘಟ್ಟ ಮುಖ್ಯ ರಸ್ತೆಯಲ್ಲಿ ದೇವಸ್ಥಾನಕ್ಕೆ ಸಾಗುವ ದಾರಿ ಕುರಿತು ದೊಡ್ಡದಾದ ಬೋಡರ್್ ಇದೆ.
  ಮುಖ್ಯರಸ್ತೆಯಿಂದ ದೇವಸ್ಥಾನಕ್ಕೆ ಸಾಗಲು ಒಂದೆ ರಸ್ತೆ. ಈ ರಸ್ತೆ ಹಲವು ಕಡೆ ಕವಲೊಡೆದಿದ್ದು ಸಣ್ಣ ಸಣ್ಣ ದಾರಿಗಳಾಗಿವೆ. ಅಲ್ಲೆಲ್ಲೂ ಹೋಗಬೇಡಿ ನೇರವಾಗಿ ಒಂದೆ ರಸ್ತೆಯಲ್ಲಿ ಸಾಗಿ ಯಾಕೆಂದರೆ ನೀವು ದಾರಿ ತಪ್ಪಿದರೂ ಸರಿ ದಾರಿ ತೋರಿಸಲು ಒಬ್ಬಾನೊಬ್ಬರು ಸಿಗಲಾರದೇ ಹೋಗುವ ಸಂಭವವೇ ಹೆಚ್ಚು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: