ದತ್ತ ಯಾತ್ರೆ ಮತ್ತು ಉದಾತ್ತ ಯಾತ್ರೆ

gali.gif“ಗಾಳಿ ಬೆಳಕು”

 

 

ನಟರಾಜ್ ಹುಳಿಯಾರ್

ಳೆದ ವರ್ಷ ಹಾಗೂ ಈ ವರ್ಷ ದತ್ತ ಯಾತ್ರೆಯ ಭೀಕರ ಚೀರಾಟ ಕಂಡ ಯಾವ ದೈವಭಕ್ತನಿಗಾದರೂ ಈ ದತ ರಾಜಕಾರ್‍ಅಣಿಗಳಿಗೂ ದೇವರಿಗೂ ಯಾವುದೇ ಸಂಬಂಧವಿಲ್ಲವೆಂಬುದು ಗೊತ್ತಿರುತ್ತದೆ. ಪ್ರತಿಯೊಂದು ಚೀರಾಟ ಹಾಗೂ ದ್ವೇಷದ ಮಾತುಗಳಿಂದ ತಮ್ಮ ವೋಟಿನ ಬಲ ಹೆಚ್ಚುತ್ತದೆ ಎಂಬ ದುರಾಸೆಯ ರಾಜಕಾರಣಿಗಳು ಎಲ್ಲ ಯಾತ್ರೆಗಳನ್ನೂ ಹಾಸ್ಯಾಸ್ಪದವಾಗಿಸಿದ್ದಾರೆ ಎಂಬುದೂ ಮುಗ್ಧ ಭಕ್ತರಿಗೆ ಗೊತ್ತಿರುತ್ತದೆ.

ಉಪವಾಸ, ಕಾಲ್ನಡಿಗೆ, ದಿಂಡುರುಳು, ಬೆಂಕಿಯ ಮೇಲಿನ ನಡಿಗೆ ಮುಂತಾದ ದೇಹ ದಂಡನೆಗಳ ಮೂಲಕ ದೇವರನ್ನು ತಲುಪುತ್ತೇವೆಂದು ಭ್ರಮಿಸಿದ ಹುಂಬ ಜನಸಮುದಾಯಗಳು ಭಾರತದುದ್ದಕ್ಕೂ ಇವೆ.ಇವರಲ್ಲಿ ಬಹುತೇಕರು ಬಗೆಬಗೆಯ ಭಯ ಹಾಗೂ ಬಯಕೆಗಳ ಈಡೇರಿಕೆಗಾಗಿ ಈ ಬಗೆಯ ತಾತ್ಕಾಲಿಕ ಯಾತನೆಗಳನ್ನು ಅನುಭವಿಸುತ್ತಿರುತ್ತಾರೆ. ಆದರೆ ಇವರಲ್ಲಿ ಇನ್ನೊಂದು ಧರ್ಮದ ಬಗ್ಗೆ ಸೇಡು ತೀರಿಸಿಕೊಳ್ಳುವ, ಇನ್ನೊಬ್ಬರ ವಿರುದ್ಧ ತಮ್ಮ ಧರ್ಮದ ಜನರನ್ನು ಎತ್ತಿ ಕಟ್ಟುವ ಮಸಲತ್ತು ಕಡಿಮೆ ಇರುತ್ತದೆ.ಈ ಜನರ ಜಗತ್ತು ನಂಬಿಕೆ, ಮೂಢನಂಬಿಕಗಳ ಘೋರ ಕತ್ತಲಿನಲ್ಲಿ ಮುಳುಗಿದ್ದರೂ ಈ ಯಾತ್ರೆಗಳನ್ನು ವೋಟುಗಳನ್ನಾಗಿ ಪರಿವರ್ತಿಸಲೆತ್ನಿಸುವ ರಾಜಕಾರಣಿಗಳಷ್ಟು ಇವರ ಮನಸ್ಸು ಕೆಟ್ಟಿರಲಾರದು.ಯಾಕೆಂದರೆ ಈ ವೋಟಿನ ರಾಜಕಾರಣಿಗಳ ವಿಕಾರಗಳು ಈ ಜನರು ನಂಬುವ ಬಸವಧರ್ಮದಲ್ಲಿಲ್ಲ. ಕನಕನ ಧರ್ಮದಲ್ಲಿಲ್ಲ. ಕೈವಾರ ನಾರಾಣಪ್ಪನ ಧರ್ಮದಲ್ಲಿಲ್ಲ ಅಥವಾ ಮಾರಿಹಬ್ಬದ ಆಚರಣೆಯಲ್ಲಿಲ್ಲ. ಆದರೆ ಈ ಬಗೆಯ ಮನಸ್ಸು ಈಚೆಗೆ ಸುಲಭವಾಗಿ ವಿಕಾರಕ್ಕೆ ಒಳಗಾಗುತ್ತಿರುವುದು ನೀಚ ರಾಜಕಾರಣಿಗಳ ಅಧಿಕಾರದ ಆಸೆಯಿಂದ ಎಂಬುದು ಎಲ್ಲರಿಗೂ ಗೊತ್ತಿದೆ.

ಈ ದತ್ತ ರಾಜಕೀಯ ಯಾತ್ರೆಯನ್ನು ನೋಡುತ್ತಿರುವಾಗ, ಇನ್ನೇನು ಈ ಚಳಿಗಾಲದಲ್ಲಿ ಶುರುವಾಗಲಿರುವ ಅಯ್ಯಪ್ಪ ಯಾತ್ರೆ ನೆನಪಾಗುತ್ತದೆ. ಅಯ್ಯಪ್ಪ ವ್ರತ ಹುಂಬ ಭಕ್ತಿಯ ಪರಾಕಾಷ್ಠೆಯಂತಿದ್ದರೂ, ಅದು ಮೇಲ್ಪದರದ ಸಾತ್ವಿಕತೆಯನ್ನಾದರೂ ಜನರಲ್ಲಿ ಹಬ್ಬಿಸುವಂತೆ ಕಾಣುತ್ತದೆ. ಲಕ್ಷಾಂತರ ಜನ ಅಯ್ಯಪ್ಪ ಭಕ್ತರು ತಿಂಗಳ ಕಾಲ ಕೊರೆವ ಚಳಿಯಲ್ಲಿ ತಣ್ಣೀರು ಹೊಯ್ದುಕೊಂಡು ತಮ್ಮ ಅನೇಕ ಬಗೆಯ ದೈಹಿಕ ಸುಖಗಳನ್ನು ಕೈಬಿಟ್ಟು ಮಾಲೆ ಧರಿಸುತ್ತಾರೆ. ಈ ವ್ರತದ ಕಾಲದಲ್ಲಿ ಮಾಡಿದ ಉಲ್ಲಂಘನೆಗಳಿಗೆ ತಪ್ಪುದಂಡ ನೀಡಿ, ಅದನ್ನು ಸರಿಪಡಿಸಿಕೊಳ್ಳುವ ಗೋಸುಂಬೆತನವೂ ಇಲ್ಲಿದೆ. ಜೊತೆಗೇ ನಿಜವಾದ ದೇಹದಂಡನೆ ಮಾಡಿಕೊಂಡು ಅದನ್ನು ವೈಭವೀಕರಿಸುವ ಭಕ್ತರೂ ಇದರೊಳಗಿದ್ದಾರೆ. ಎಲ್ಲರನ್ನೂ, ಎಲ್ಲವನ್ನೂ “ಸ್ವಾಮಿ” ಎಂದು ಸಂಬೋಧಿಸುವ ಇವರ ವರ್ತನೆ ನಮ್ಮಲ್ಲಿ ನಗೆ ಹುಟ್ಟಿಸುತ್ತದೆ. ಈ ವ್ರತದ ಕಾಲದಲ್ಲಿ ಕಾಮ, ಕ್ರೋಧಗಳನ್ನು ಗೆಲ್ಲುತ್ತೇವೆಂದು ನಂಬಿದ ಈ ಭಕ್ತರು, ಕೊನೆಯ ಪಕ್ಷ ಇನ್ನೊಬ್ಬರನ್ನು ಅನಗತ್ಯವಾಗಿ ಹಿಂಸಿಸುವ ಬರ್ಬರ ಕ್ರೋಧವನ್ನು ಹಿನ್ನೆಲೆಗೆ ಸರಿಸಲೆತ್ನಿಸುತ್ತಾರೆ. ಹೆಣ್ಣನ್ನು ಕುರಿತಂತೆ ಹಿಂದೂ ಮನಸ್ಸಿನ ಗೊಂದಲಮಯ ತಿಳುವಳಿಕೆ ಇವರಲ್ಲೂ ಇರುವುದರಿಂದ, ಈ ವ್ರತದ ಕಾಲದಲ್ಲಿ ಹೆಣ್ಣನ್ನು ಮುಟ್ಟದಿರುವ ಪ್ರತಿಜ್ಞೆಯನ್ನೂ ಇವರು ಮಾಡುತ್ತಾರೆ. ಈ ಗೊಂದಲದ ಬಗ್ಗೆ ವೈಚಾರಿಕರ ನಿಲುವು ಏನೇ ಇದ್ದರೂ, ಈ ಗಂಡಂದಿರ ಹಿಂಸೆಯಿಂದ ಪಾರಾಗುವ ಹೆಂಡತಿಯರು ಈ ಮಹನೀಯರು ವರ್ಷಗಟ್ಟಲೆ ಈ ವ್ರತ ಮುಂದುವರಿಸಿದರೆ ಚಂದ ಎಂದುಕೊಂಡರೆ ಆಶ್ಚರ್ಯವಿಲ್ಲ! ಹೆಂಡತಿಯರನ್ನು ಹೊಡೆಯುವ ಆಫ್ರಿಕನ್ ಬುಡಕಟ್ಟುಗಳಲ್ಲಿ “ಶಾಂತಿ ಸಪ್ತಾಹ” ಎನ್ನುವುದೊಂದಿದೆ. ಆಗ ಗಂಡಸು ಹೆಂಡತಿಯನ್ನು ಹೊಡೆಯುವಂತಿಲ್ಲ. ಅಯ್ಯಪ್ಪ ಭಕ್ತ ಗಂಡುಗಳು ತಮ್ಮ ವ್ರತದ ಕಾಲದಲ್ಲಿ ಮಾತ್ರ ಹೀಗಿರುತ್ತಾರಂತೆ. ಅದೇನೇ ಇರಲಿ, ಒಂದು ಬಗೆಯ ಸರಳ ಮಾಗುವಿಕೆಗಾಗಿಯಾದರೂ ಈ ಅಯ್ಯಪ್ಪ ಭಕ್ತರು ತುಡಿಯುತ್ತಿರುತ್ತಾರೆ ಎಂಬುದು ನಿಜ. ಇವೆಲ್ಲ ತಾತ್ಕಾಲಿಕ ಹಾಗೂ ತೋರಿಕೆಯ ಬದಲಾವಣೆಗಳಿರಬಹುದು. ವೈಚಾರಿಕನೆಂದುಕೊಳ್ಳುವ ವ್ಯಕ್ತಿಯಲ್ಲೂ ಅನೇಕ ಬಗೆಯ ಮಾಗುವಿಕೆಗಳು ತಾತ್ಕಾಲಿಕವಾಗಿರಬಲ್ಲವು. ಯಾಕೆಂದರೆ ಮನುಷ್ಯನಲ್ಲಿರುವ ಸಹಜ ಪ್ರಾಣಿತನ ಅವನೆಲ್ಲ ಕೃತಕ ವೈಚಾರಿಕತೆ ಹಾಗೂ ಕೃತಕ ಧಾರ್ಮಿಕತೆಗಳ ಜೊತೆಗೆ ಸಂಘರ್ಷಿಸಿ ಮೇಲುಗೈ ಪಡೆಯಲು ಯತ್ನಿಸುತ್ತಲೇ ಇರುತ್ತದೆ. ಆದರೂ ಈ ಪ್ರಾಣಿತನವನ್ನು ಕೆಲ ಕಾಲವಾದರೂ ಅದುಮಿಡುವ ಪ್ರೇರಣೆಯನ್ನು ಒಂದು ತಿಂಗಳ ಅಥವಾ ಒಂದು ವಾರದ ವ್ರತವೇ ಅಯ್ಯಪ್ಪ ಭಕ್ತರಿಗೆ ನೀಡುತ್ತದೆಂಬುದು ಬಹಳ ಮುಖ್ಯವಾದ ಅಂಶ. ಅದರ ಜೊತೆಗೇ ಒಂದು ತಿಂಗಳ ಈ ಮನಸ್ಥಿತಿಯ ಪ್ರಭಾವ ಇನ್ನೂ ಕೆಲವು ತಿಂಗಳು ಹಾಗೂ ಹೀಗೂ ಅವನಲ್ಲಿ ಉಳಿದಿರುವ ಸಾಧ್ಯತೆಯೂ ಇರುತ್ತದೆ.

ಆದರೆ, ಮುಸ್ಲಿಮರ ವಿರುದ್ಧ ಚೀರಲೆಂದೇ ದತ್ತ ಯಾತ್ರೆಗೆ ಇಳಿಯುವವರಿಗೆ ಧರ್ಮದಿಂದ ದೊರಕುವ ಈ ತಾತ್ಕಾಲಿಕ ಮಾಗುವಿಕೆ ಕೂಡ ದೊರಕಲಾರದು. ಅಕಸ್ಮಾತ್ ಈ ದತ್ತ ಯಾತ್ರೆಗೆ ವೃತ್ತಿರಾಜಕಾರಣಿಗಳ ದುಷ್ಟ ಸ್ವಾರ್ಥ ಸೋಕದಿದ್ದರೆ ಇದು ಕೂಡ ಅಯ್ಯಪ್ಪ ಯಾತ್ರೆಯಂತೆ ಒಂದು ಮಟ್ಟದ ಒಳ್ಳೆಯತನವನ್ನಾದರೂ ಉದ್ದೀಪಿಸುವ ಸಾಧ್ಯತೆಯಿತ್ತು. ಹಿಂದಿನಿಂದಲೂ ಸಂಪ್ರದಾಯವಾದಿ ಹಿರಿಯರು ಜಾತ್ರೆಗಳನ್ನಾಗಲಿ, ಯಾತ್ರೆಗಳನ್ನಾಗಲಿ ಎಲ್ಲರನ್ನೂ ಬೆಸೆಯುವ ವೇದಿಕೆಗಳನ್ನಾಗಿ ಪ್ರಯತ್ನಿಸುತ್ತಾ ಬಂದಿದ್ದಾರೆ. ಮಂಟೇಸ್ವಾಮಿ ಜಾತ್ರೆ, ನಾಯಕನಹಟ್ಟಿಯ ಜಾತ್ರೆ, ಅಥವಾ ಈ ಕಾಲದ ಅಯ್ಯಪ್ಪ ಯಾತ್ರೆಗಳು ಜಾತಿ, ಕುಲಗಳ ಗರ್ವವನ್ನು ತಾತ್ಕಾಲಿಕವಾಗಿಯಾದರೂ ಕಡಿಮೆ ಮಾಡುವ ಕೆಲಸ ಮಾಡುತ್ತಾ ಬಂದಿವೆ.

ಅದಕ್ಕಿಂತ ಮುಖ್ಯವಾದುದೆಂದರೆ, ಈ ಬಗೆಯ ಜಾತ್ರೆ ಅಥವಾ ಯಾತ್ರೆಗಳಲ್ಲಿ ಭಕ್ತರು ಅಥವಾ ಭಕ್ತರ ವೇಷದಲ್ಲಿರುವವರು ಹೆಚ್ಚು ಕಾಣಿಸುತ್ತಾರೆಯೇ ಹೊರತು ಪೊಲೀಸರು ಮತ್ತವರ ಬಂದೂಕುಗಳಲ್ಲ. ನೀವು ಚಿಕ್ಕಮಗಳೂರಿನಲ್ಲಿ ಮೊನ್ನೆ ಪೊಲೀಸರ ಕವಾಯತುಗಳನ್ನು ಟೆಲಿವಿಷನ್ ಗಳಲ್ಲಿ ನೋಡಿರಬಹುದು. ಇದನ್ನು ಕಂಡ ನಿಜವಾದ ಭಕ್ತರಿಗೆಲ್ಲ ದತ್ತ ಯಾತ್ರೆಯ ಮೂಲಕ ಹಿಂಸೆಯ ಪ್ರಚೋದನೆಯಾಗಲಿದೆ ಎಂಬ ಕಾರಣಕ್ಕಾಗೇ ಪೊಲೀಸರು ಅಲ್ಲಿದ್ದಾರೆ ಎಂಬುದು ಹೊಳೆದಿರುತ್ತದೆ. ಈ ಸತ್ಯ ಹೊಳೆದವರಾದರೂ ಈ ಬಗೆಯ ರಾಜಕೀಯ ಯಾತ್ರೆಗಳನ್ನು ತಿರಸ್ಕರಿಸಬೇಕು. ತಮಗೆ ಅಧಿಕಾರ ಸಿಕ್ಕಾಗ ಜನರಿಗೆ ಯಾವ ಸಹಾಯವನ್ನೂ ಮಾಡದೆ, ಕೋಟಿ ಕೋಟಿ ಬಾಚಿಕೊಂಡ ರಾಜಕಾರಣಿಗಳು ಈ ಥರದ ಯಾತ್ರೆಗಳ ಮೂಲಕ ಜನರನ್ನು ಮರುಳು ಮಾಡುತ್ತೇವೆಂದು ತಿಳಿದಿದ್ದರೆ ಅದು ಅವರ ಭ್ರಮೆಯಷ್ಟೆ. ಯಾಕೆಂದರೆ, ಸಾಮನ್ಯ ಜನರ ಸಹಜ ಧಾರ್ಮಿಕ ಚಟುವಟಿಕೆಗಳನ್ನೆಲ್ಲ ಭ್ರಷ್ಟಗೊಳಿಸುವ ಅವರ ಹುನ್ನಾರ ಜನರಿಗೆ ತಿಳಿಯುವುದು ಸ್ವಲ್ಪ ತಡವಾಗಬಹುದು. ಆದರೆ ಅದು ಇವತ್ತಲ್ಲ, ನಾಳೆ ಜನಕ್ಕೆ ತಿಳಿಯುತ್ತದೆ ಎಂಬುದನ್ನು ಉತ್ತರಪ್ರದೇಶದ ಜನ ಕಳೆದ ಹತ್ತು ವರ್ಷಗಳಲ್ಲಿ ತೀರಿಸಿಕೊಟ್ಟಿದ್ದಾರೆ. ಹಾಗೆ ತಿಳಿದಾಗ, ಜನ ಈ ರಾಜಕಾರಣಿಗಳನ್ನು ಕಸಕ್ಕಿಂತ ಕಡೆಯಾಗಿ ಕಾಣುವುದರ ಮಾದರಿಯನ್ನೂ ಅಲ್ಲಿನ ಜನ ಕೊಟ್ಟಿದ್ದಾರೆ.

ಆದ್ದರಿಂದ, ಧಾರ್ಮಿಕ ಯಾತ್ರೆಗಳಲ್ಲಿ ಕೊಂಚವಾದರೂ ಮಾಗುವ ಮನುಷ್ಯನ ಮೃಗತನವನ್ನು ಇನ್ನಷ್ಟು ಬಡಿದೆಬ್ಬಿಸಿ ಕ್ರೂರವಾಗಿಸುವ ನೀಚರ ಹುನ್ನಾರಕ್ಕೆ ಸಾಮಾನ್ಯ ಜನರು ಬಲಿಯಾಗದಂತೆ ನಮ್ಮ ಜವಾಬ್ದಾರಿಯುತ ಧಾರ್ಮಿಕ ನಾಯಕರು, ರಾಜಕಾರಣಿಗಳು, ಬರಹಗಾರರು, ಚಿಂತಕರು, ಜನನಾಯಕರು, ಕಲಾವಿದರು ನೋಡಿಕೊಳ್ಳಬೇಕಾಗಿದೆ. ಇಪ್ಪತ್ತೊಂದನೆಯ ಶತಮಾನದ ಕರ್ನಾಟಕವು ಹಿಂಸಾಯಾತ್ರೆಗಳ ಖಾಯಂ ತೀರ್ಥಕ್ಷೇತ್ರವಾಗದಂತೆ ತಡೆಯಲು ನಾವು ಕೈಗೊಳ್ಳಬೇಕಾದ ಮೊದಲ ಮುಖ್ಯ ಹೆಜ್ಜೆ ಇದು ಎನ್ನಿಸುತ್ತಿದೆ.

‍ಲೇಖಕರು avadhi

October 25, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಆ ತಾಯಿಯ ನೆನಪಲ್ಲಿ….

ಇವರು ಮಿಡ್ ಡೇ ಸಂಪಾದಕರಾದ ಎಸ್ ಆರ್ ರಾಮಕೃಷ್ಣ ಅವರ ತಾಯಿ ಇಂದಿರಾ ಸ್ವಾಮಿ ಎಂದು ಪರಿಚಯಿಸಿಕೊಟ್ಟರೆ ತಪ್ಪಾದೀತು. ಎಲ್ಲ ತಾಯಂದಿರನ್ನೂ...

ಬರಲಿರುವ ದುರಂತದ ಮುನ್ಸೂಚನೆ..

'ರೈತ, ದಲಿತ ಸಂಘಟನೆಗಳ ಜೊತೆ ಮತ್ತೆ ಹೊರಡೋಣ' ಗಾಳಿಬೆಳಕು -ನಟರಾಜ್ ಹುಳಿಯಾರ್ ನಾನು ಮತ್ತು ನನ್ನ ವಾರಗೆಯವರು ನಮ್ಮ ಹದಿಹರೆಯದಲ್ಲಿ ಕ್ಲಾಸ್...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This