ದಮನಿತರ ಧ್ವನಿಯಾಗಿದ್ದ ಚಳವಳಿಗಾರ ಕೊಟ್ಟೂರು…

ಶಿವಾನಂದ ತಗಡೂರು

“ಶ್ಯಾರಿ ಗಂಜಿಗಾಗಿ
ಸೇರ ಬೆವರ ಸುರಿಸುತ್ತಾ
ಊರೂರ ತಿರುಗುವರು ಯಾರಯ್ಯ
ಈ ನಾಡ ಕಟ್ಟಿದವರು
ನಾವೆಲ್ಲಿ ಹೋಗಬೇಕು,
ಕೂಲಿಯವರು ನಾವು ಕೇಳಯ್ಯ”

ಈ ಹಾಡು ಅದೆಷ್ಟು ಬಾರಿ ಕೇಳಿದ್ದೇವೊ ಲೆಕ್ಕವಿಲ್ಲ. ಯಾವುದಾದರೂ ಕೇರಿಯಲ್ಲಿ ಹಾಡಿನ ಧ್ವನಿ ಕೇಳಿದರೂ ಸಾಕು, ಅಲ್ಲಿ ನಮ್ಮ ಕೊಟ್ಟೂರು ಶ್ರೀನಿವಾಸ್ ಕಂಜರ ಹಿಡಿದು ಈಗಲೂ ಹಾಡುತ್ತಿರಬೇಕು ಅನ್ನಿಸುತ್ತದೆ.

ಮೆಲು ಧ್ವನಿಯ ಕೊಟ್ಟೂರು ಹೃದಯದೊಳೊಗೆ ತಣ್ಣನೆ ಬಂಡಾಯಗಾರ ಅವಿತು ಕುಳಿತಿದ್ದ. ವ್ಯವಸ್ಥೆ ವಿರುದ್ದ ಸಿಡಿದೇಳುವ ಮನೋಭಾವದಿಂದ ಸದಾ ತುಡಿತದಲ್ಲಿರುತ್ತಿದ್ದ. ಓದು ಪ್ರಿಯ ಹಾಗರ ಬರವಣಿಗೆ, ಪುಸ್ತಕ ಲೋಕದಲ್ಲಿ ಮುಳುಗಿ ಹೋಗುವ ಸೂಕ್ಷ್ಮ ಮನಸ್ಸು ಅವನದು.

ಬರೋಬ್ಬರಿ ಮೂರು ದಶಕಗಳ ಸ್ನೇಹ ನಮ್ಮದು. ಹಾಸನದಲ್ಲಿ ಕೈಚೀಲ ಹೆಗಲಿಗೆ ಹಾಕಿಕೊಂಡು ಪತ್ರಿಕಾ ಕಚೇರಿಗಳಿಗೆ ಪ್ರೆಸ್ ನೋಟ್ ಹಿಡಿದು ಬರುತ್ತಿದ್ದ ಕೊಟ್ಟೂರು ಬರವಣಿಗೆ ನೋಡಲು ಚೆಂದ. ಅಷ್ಟು ಅಂದವಾಗಿ ಬರೆದು, ತಂದ ಪ್ರೆಸ್ ನೋಟ್ ಕಸದ ಬುಟ್ಟಿಗೆ ಹಾಕಲು ಮನಸ್ಸು ಬರುತ್ತಿರಲಿಲ್ಲ.

ಹೀಗೆ, ಮಾತು, ಕಾಫಿ ಹರಟೆ ಹೃದಯಾಳದ ಸ್ನೇಹಕ್ಕೆ ತಿರುಗಿತು. ಇನ್ನೆಂದೂ ಹಿಂತಿರುಗಿ ನೋಡಿದ್ದಿಲ್ಲ. ಒಂದು ದಿನವೂ ಜಗಳ ಕಾಯ್ದವರಲ್ಲ, ಮುನಿಸಿಕೊಳ್ಳಲಿಲ್ಲ, ಯಾವುದಕ್ಕೂ ಆರ್ಭಟಿಸಲಿಲ್ಲ. ಅಷ್ಟರ ಮಟ್ಟಿಗೆ ತಣ್ಣನೆಯ ಸ್ನೇಹ ನಮ್ಮದು.

ಯಾಕೊ, ಏನೋ ಅವನಿಗೆ ಹೆಜ್ಜೆ ಹೆಜ್ಜೆಗೂ ಕಾಡುತ್ತಿದ್ದ ಅನುಮಾನ, ಅವಮಾನಗಳ ನಡುವೆ ಆಗಾಗ್ಗೆ ಹಲವಾರು ಘಟನೆಗಳನ್ನು ಮೆಲುಕು ಹಾಕುತ್ತಿದ್ದ.

ದಲಿತ ಸಂಘರ್ಷ ಸಮಿತಿ ಮುಖಂಡ, ಹೋರಾಟಗಾರ ಚಂದ್ರಪ್ರಸಾದ್‌ ತ್ಯಾಗಿ ಜೊತೆಗೆ ಚರ್ಚೆಗೆ ಸಿಗುತ್ತಿದ್ದ ಕೊಟ್ಟೂರು ಸದಾ ವಿಭಿನ್ನವಾಗಿ ಗಮನ ಸೆಳೆಯುತ್ತಿದ್ದ. ಯಾವುದನ್ನು ಒಮ್ಮೆಗೆ ಒಪ್ಪುವ ಸ್ವಭಾವ ಅವನದಲ್ಲ.

ಸಾಕ್ಷರತಾ ಆಂದೋಲನ ಕಾಲಘಟ್ಟ. ಹಾಸನ ಪತ್ರಕರ್ತರ ಸಂಘದ ಚುನಾವಣೆಗೆ ನಿಲ್ಲಬೇಕು ಎಂದು ಹೊರಟ ನನ್ನನ್ನು, ಆರ್.ಪಿ.ವೆಂಕಟೇಶ್ ಮೂರ್ತಿ ಅವರು ಸಾಕ್ಷರತಾ ಆಂದೋಲನಕ್ಕೆ ಕರೆತಂದರು. ಆಗ ಜೊತೆಯಾದ ಕೊಟ್ಟೂರು ಜೊತೆಗೆ ನಾನು, ಶಾಡ್ರಾಕ್, ಎಚ್.ಆರ್.ಸ್ವಾಮಿ ಹಾಸನ ಜಿಲ್ಲೆಯ ಅದೆಷ್ಟು ಹಳ್ಳಿಗಳನ್ನು ಸುತ್ತಿದ್ದೇವೊ ಲೆಕ್ಕವಿಲ್ಲ. ಶಾಡ್ರಾಕ್, ಕೊಟ್ಟೂರು ಹಾಡುವಾಗ ನಾವು ಅವರಿಗೆ ಹಿಮ್ಮೇಳ ಧ್ವನಿ. ಅಪ್ಪಾಜಿಗೌಡ, ಸಣ್ಣೇಗೌಡ ಅವರ ನೇತೃತ್ವದಲ್ಲಿ ಬೀದಿ ನಾಟಕ ಪ್ರದರ್ಶನಕ್ಕೂ ಲೆಕ್ಕವಿಲ್ಲ.

ಹೊಳೆನರಸೀಪುರ ತಾಲೂಕಿನ ಒಂದು ಗ್ರಾಮದಲ್ಲಿ ಸಾಕ್ಷರತಾ ಆಂದೋಲನದ ಸಭೆ. ಸಾಕ್ಷರತಾ ಆಂದೋಲನ ಮುನ್ನೆಡೆಸಲು ಒಬ್ಬರು ಮುಂದೆ ಬಾರದಿದ್ದಾಗ ಆಕ್ರೋಶಗೊಂಡ ಕೊಟ್ಟೂರು, ಏನ್ರಿ ಇದು? ಮೈಗೆ ಬಾಂಬ್ ಕಟ್ಟಿಕೊಂಡು ಹುತಾತ್ಮರಾಗಲು (ರಾಜೀವ್ ಗಾಂಧಿ ಘಟನೆ ನೆನಪಿಸಿ) ಜನ ಬರ್ತಾರೆ. ನಿಮ್ಮಲ್ಲಿ ಅಕ್ಷರ ಕಲಿಸಲು ಬರೋದಿಲ್ಲ ಅಂದರೆ ಹೆಂಗ್ರಿ? ಎಂದು ಜೋರು ಮಾಡಿದಾಗ ಸಭೆ ಒಂದು ಕ್ಷಣ ಅವಕ್ಕಾಗಿ ಹೋದ ಘಟನೆ ಮರೆಯುವಂತಿಲ್ಲ…

ಹಾಸನದಲ್ಲಿ ಪ್ರಪ್ರಥಮವಾಗಿ ಪುಸ್ತಕದ ಅಂಗಡಿ ಪ್ರಾರಂಭಿಸಿದ ಸಾಹಸಿ. ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪುಸ್ತಕಗಳನ್ನು ಊರೂರಿಗೆ ಹೊತ್ತು ತಿರುಗಿದವ. ತೇಜಸ್ವಿ ಅವರ ಮಿಲೇನಿಯರ್ ಸೀರಿಸ್ ಪುಸ್ತಕಗಳನ್ನು ನಮ್ಮ ಮನೆಮನಗಳಿಗೆ ತಲುಪಿಸಿದ ಕೊಟ್ಟೂರುನನ್ನು ಹೇಗೆ ಮರೆಯಲಿ.

ರಂಗಸಿರಿಯಿಂದ ಆಯೋಜಿಸುತ್ತಿದ್ದ ನಾಟಕೋತ್ಸವಗಳು ಅವನಿಲ್ಲದೆ ಪರಿಪೂರ್ಣವಾಗಿದ್ದಿಲ್ಲ. ಯಾವುದಾದರೂ ಒಂದು ರೂಪದಲ್ಲಿ ಅವನ ಭಾಗವಹಿಸುವಿಕೆ ಇದ್ದೇ ಇರುತಿತ್ತು.

ಭಿತ್ತಿ ಪತ್ರ, ಕರಪತ್ರ, ಮನವಿ ಪತ್ರಗಳನ್ನು ಬರೆಯುವುದು ಅವನ ಬದುಕಿನ ಭಾಗವೇ ಆಗಿಹೋಗಿತ್ತು. ಅನ್ಯಾಯದ ವಿರುದ್ಧ ಅಲ್ಲೊಂದು ಕರಪತ್ರ, ಮನವಿ ಇದ್ದೇ ಇರುತಿತ್ತು. ಅಷ್ಟರ ಮಟ್ಟಿಗೆ ಅವನ ಚಳವಳಿ ಬದ್ದತೆ ಬಗ್ಗೆ ಎರಡು ಮಾತಿಲ್ಲ. ಚಳವಳಿ ಹಾಡುಗಳನ್ನು ಪುಸ್ತಕ ರೂಪದಲ್ಲಿ ತಂದ ಹೆಗ್ಗಳಿಕೆ ಅವನದೆ.

ರೈತ ಚಳವಳಿಗೆ ಕಾಲಿಟ್ಟ ಹೊಸದು. ನಾವೆಲ್ಲರೂ ಸೇರಿ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರನ್ನು ಹಾಸನಕ್ಕೆ ಕರೆಸಿ ನೀರಾವರಿ (ಕಾವೇರಿ ವಿವಾದ ಕಾವೇರಿದ್ದ ಕಾಲ) ವಿಷಯದ ಬಗ್ಗೆ ವಿಚಾರ ಸಂಕಿರಣ ಮಾಡಿದ್ದೆವು, ಆಗಲೂ ಅದೇ ತುಡಿತ. ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರಿಗೆ ಕೊಟ್ಟೂರು ಬಗ್ಗೆ ಅಭಿಮಾನ. ರೈತಸಂಘದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಬಳಗದಲ್ಲಿ ಗುರುತಿಸಿಕೊಂಡ ಕೊಟ್ಟೂರು ಕಡೆಗೆ ಪುಟ್ಟಣ್ಣಯ್ಯ ಬಣದ ಕಡೆಗೆ ಜಾರಿದ. ಅಲ್ಲಿಯೂ ಸಕ್ರೀಯನಾಗಿದ್ದ.

ಬಾಗೂರು ನವಿಲೆ ಸುರಂಗ ಹೋರಾಟದಲ್ಲಿ ನಮಗೆ ಸಾಥ್ ಕೊಟ್ಟ ಕೊಟ್ಟೂರು ಹೇಗೆ ಮರೆಯಲಿ? ಯಾವುದೇ ಜನಪರ, ಪ್ರಗತಿಪರ ಚಳವಳಿ ಅಂದರೆ, ಅಲ್ಲಿ ಕೊಟ್ಟೂರು ಹಾಜರ್. ಅವನಿಗೆ ಕರೆಯೋಲೆ ಬೇಕಿರಲಿಲ್ಲ. ಹಾಗೆ ಒಮ್ಮೊಮ್ಮೆ ಭಾರಿ ಉದಾಸೀನ ಮನುಷ್ಯ ನಡವಳಿಕೆ ಅವನೊಳಗಿತ್ತು.

ಒಂದಿಷ್ಟು ವರ್ಷ ಶಿವಮೊಗ್ಗ ಹೋದಾಗ, ನಾವೆಲ್ಲರೂ ಶಿವಮೊಗ್ಗದಲ್ಲಿ ಯಾಕೆ ಕಳೆದು ಹೋಗುತ್ತೀಯಾ? ಸುಮ್ಮನೆ ಹಾಸನಕ್ಕೆ ಬಂದು ಬಿಡು ಎಂದು ಒತ್ತಾಯಿಸಿದ ಕಾರಣಕ್ಕಾಗಿ ಮತ್ತೆ ಹಾಸನಕ್ಕೆ ಬಂದು ಸತ್ಯವಂಗಲ ಹೌಸಿಂಗ್ ಬೋರ್ಡ್ ಕಾಲೋನಿ ನಿವೇಶನದಲ್ಲಿ ಪರಿಸರ ಸ್ನೇಹಿ ಮನೆ ಕಟ್ಟಿಕೊಂಡು, ಅಲ್ಲಿಯೇ ಬದುಕು ರೂಪಿಸಿಕೊಂಡ. ಆ ಮನೆ ಕಟ್ಟಿದ ಅವನ ಸಾಹಸಗಳಿಗೆ ರಂಗಸಿರಿ ಬಳಗದ ಶಾಡ್ರಾಕ್ ಸೇರಿದಂತೆ ಎಲ್ಲರೂ ಸಾಕ್ಷಿ. ಅವರ ಪತ್ನಿ ಪ್ರಮೀಳಾ, ಮಗಳು ರುಚಿರಾ ಮನೆಯೊಳಗೆ ಹೋಗುವಷ್ಟರಲ್ಲಿ ಸಾಕು ಸಾಕಾಗಿ ಹೋಗಿದ್ದರು. ಅಷ್ಟು ಶ್ರಮ ಹಾಕಿ ವಿಶೇಷ ಕಾಳಜಿಯಿಂದ ಕಟ್ಟಿದ ಮನೆ ಅದು.

ಕೊಟ್ಟೂರು, ಯೋಗ ಮಾಡಿಸುವುದರಲ್ಲಿಯೂ ಎಕ್ಸಫರ್ಟ್. ಹಲವಾರು ಬಗೆಯ ಯೋಗ ಕರಗತ ಮಾಡಿಕೊಂಡಿದ್ದ. ಆದರೆ, ತನ್ನ ಆರೋಗ್ಯ ಕೈಕೊಡುತ್ತಿರುವುದು ಅವನಿಗೆ ತಿಳಿಯದೆ ಹೋಗಿದ್ದು ಮಾತ್ರ ದುರಂತ.

ಏನೇ ಇರಲಿ. ಕೊಟ್ಟೂರು ಶ್ರೀನಿವಾಸ್ ನಿಜವಾಗಿ ವಿಭಿನ್ನ ವ್ಯಕ್ತಿತ್ವದ ಜನಪರ, ಜೀವಪರ ಕಾಳಜಿ ಚಳವಳಿಗಾರ. ಇಷ್ಟು ಬೇಗ ಸಾವು ಅವನ ಅಪ್ಪಿಕೊಳ್ಳಬಾರದಿತ್ತು.

ಆಸ್ಪತ್ರೆ ಸೇರುವ ಮುನ್ನ ನಾನು, ನಮ್ಮ ಮನೆಯವಳು ಒಟ್ಟಿಗೆ ಹೋಗಿ ಮಾತನಾಡಿಸಿ, ಕಷಾಯ ಕುಡಿದು, ಧೈರ್ಯ ಹೇಳಿ ಬಂದಿದ್ದು ಕೊನೆ ಭೇಟಿಯಾಯಿತು.

ಮಂಗಳೂರು ಆಸ್ಪತ್ರೆಯಲ್ಲಿ ಪೋನ್ ಮೂಲಕ ಮಾತನಾಡಿದ ಕೊಟ್ಟೂರು, ಹಾಸನದಲ್ಲಿ ಆಗಿದ್ರೆ ನಾನು ಬದುಕುಳಿಯುತ್ತಿರಲಿಲ್ಲ. ಮಂಗಳೂರಿಗೆ ಬಂದಿದ್ದು ಒಳ್ಳೆಯದಾಯಿತು. ಡಯಲಿಸಿಸ್ ಆಗಿದ್ದು, ಈಗ ಆರಾಮಗಿದ್ದೇನೆ ಎಂದಾಗಲೂ ಅಲ್ಲಿಯೇ ಜವರಾಯ ಹೊಂಚು ಹಾಕಿ ಕುಳಿತಿದ್ದು ಅರಿವಿಗೆ ಬಾರದೆ ಹೋಗಿದ್ದು ವಿಧಿ ವಿಪರ್ಯಾಸ.

ಕೊಟ್ಟೂರು ಶ್ರೀನಿವಾಸ್ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ.

‍ಲೇಖಕರು Avadhi

November 18, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ದಿಲ್ಲಿ ಹೈ ದಿಲ್ ಹಿಂದೂಸ್ತಾನ್ ಕಾ – 2’

‘ದಿಲ್ಲಿ ಹೈ ದಿಲ್ ಹಿಂದೂಸ್ತಾನ್ ಕಾ – 2’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ |ಕಳೆದ ಸಂಚಿಕೆಯಿಂದ|...

೧ ಪ್ರತಿಕ್ರಿಯೆ

  1. T S SHRAVANA KUMARI

    ಉತ್ತಮ ವ್ಯಕ್ತಿಯ ಸಾರ್ಥಕ ಪರಿಚಯ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: