ಅಭಿನಂದನೆಗಳು ದಯಾನಂದ್. ಶುಭವಾಗಲಿ

ದಯಾನಂದ್ ನಾ ಕಂಡಂತೆ

– ನಟರಾಜು ಎಸ್ ಎ೦

ದೂರದ ಕೊಲ್ಕತ್ತಾದಲ್ಲಿ ಕುಳಿತು ಕನ್ನಡ ಗುಂಪುಗಳನು ಗೂಗಲ್ ನಲ್ಲಿಯೂ ಮತ್ತು ಫೇಸ್ ಬುಕ್ ನಲ್ಲಿಯೂ ಹುಡುಕುತ್ತಿದ್ದಾಗ ಅಲ್ಲಿ ಮೊದಲಿಗೆ ಕಣ್ಣಿಗೆ ಬಿದ್ದದ್ದು ಒಬ್ಬ ಹುಡುಗ ಬರೆಯುತ್ತಿದ್ದ ಒಂದು ಕಾಲಂ. ಆ ಕಾಲಂ ಹೆಸರು ರಸ್ತೆ ನಕ್ಷತ್ರ.

“ನನ್ನೆಸರು ಮುನಿಯಮ್ಮ ಅಂತ.. ನಾನು ಹುಟ್ಟಿದ್ದು ಶ್ರೀರಾಂಪುರದಲ್ಲಿ. ನಮ್ಮಪ್ಪ ಅಮ್ಮ ಮೊದಲು ಅಲ್ಲೇ ಇದ್ರು.. ಅಲ್ಲಿ ಒಂದು ಇಸ್ಕೂಲ್ ಐತಲ್ಲ.. ಅಲ್ಲೇ ನಮ್ಮನೆ ಇತ್ತು. ನಮ್ಮಪ್ಪ ಅವಾಗ ಇಲ್ಲಿ ಆನಂದರಾವ್ ಸರ್ಕಲ್ ಹತ್ರ ಫುಟ್‌ಪಾತಲ್ಲಿ ಹಣ್ಣುಹಂಪಲು ಮಾರ‍್ತಾ ಇದ್ರು..” ಎಂದು ಶುರುವಾಗುವ ಲೇಖನವೊಂದರ ಶೀರ್ಷಿಕೆ “ದಯಾನಂದ ರಸ್ತೆ ನಕ್ಷತ್ರ: ಬೀದಿಪಾಲು ಮುನಿಯಮ್ಮನ ಮಾತುಗಳು” ಎಂದಿತ್ತು. ಯಾರು ಈ ದಯಾನಂದ ಈಪಾಟಿ ಚೆನ್ನಾಗಿ ಬರೀತಾನಲ್ಲ ಅಂತ ನೋಡಿದಾಗ “ಟಿ.ಕೆ. ದಯಾನಂದ, ಹುಟ್ಟಿದ್ದು ತುಮಕೂರಿನ ದೊಡ್ಡಹಟ್ಟಿ ಸ್ಲಂ. ಬಿಎ ವರೆಗೆ ತುಮಕೂರಿನಲ್ಲಿ ವ್ಯಾಸಂಗ. ಬೆಂಗಳೂರಿನಲ್ಲಿ ಸಮೂಹ ಸಂವಹನ ಸ್ನಾತಕೋತ್ತರ ಪದವಿ. ವಾರ್ತಾಭಾರತಿ ದಿನಪತ್ರಿಕೆಯಲ್ಲಿ ವರದಿಗಾರನಾಗಿ ಕಾರ್ಯನಿರ್ವಹಿಸಿದ ನಂತರ ನಗರ ಸಂಶೋಧಕನಾಗಿ ನಗರದ ಬಡಜನರ ಕುರಿತಂತೆ ಅಧ್ಯಯನ. ಓದುವುದು, ಸಿನೆಮಾ ಸಂಗ್ರಹಣೆ, ಬರವಣಿಗೆ ಮತ್ತು ಕಾಡು ತಿರುಗುವುದು ಹವ್ಯಾಸ.” ಎಂದು ಆತನ ಕಿರುಪರಿಚಯ ಕೆಂಡಸಂಪಿಗೆಯಲ್ಲಿತ್ತು. ಒಂದು ದಿನ ಫೇಸ್ ಬುಕ್ ನಲ್ಲಿ ಹೇಗೋ ಸಿಕ್ಕಿದ ಈ ದಯಾನಂದ್ ಎಂಬ ಹುಡುಗನಿಗೆ “hi how to use kannada in facebook” ಎಂದು ಮೆಸೇಜ್ ಕಳುಹಿಸಿದ್ದೆ. “ನುಡಿ ಆನ್ ಮಾಡಿ. ಮಾನಿಟರ್ ನ ರೈಟ್ ಸೈಡ್ ನುಡಿಯ ಐಕಾನ್ ಕರ್ನಾಟಕ ಮ್ಯಾಪ್ ಬರುತ್ತೆ. ಅದರ ಮೇಲೆ ರೈಟ್ ಬಟನ್ ಕ್ಲಿಕ್ ಮಾಡಿ ಯೂನಿಕೋಡ್ ಆಪ್ಷನ್ ಸೆಲೆಕ್ಟ್ ಮಾಡಿ. ಟೈಪಿಂಗ್ ಶುರು ಹಚ್ಕೊಳಿ.” ಅಂತ ಆ ಹುಡುಗ ನನಗೆ ಉತ್ತರಿಸಿದ್ದ. ಎಷ್ಟೋ ಹೊತ್ತಾದ ಮೇಲೆ “ತುಂಬಾ ಹೊತ್ತು ತೆಗೆದುಕೊಂಡಿತು. ಫೇಸ್ ಬುಕ್ ನಲ್ಲಿ ನನ್ನ ಮೊದಲ ಕನ್ನಡದ ಬರಹವನ್ನು ಬರೆದೆ. ಧನ್ಯವಾದಗಳು” ಎಂದು ಆ ಹುಡುಗನಿಗೆ ಉತ್ತರಿಸಿದ್ದೆ. ನಂತರದ ದಿನಗಳಲ್ಲಿ ಈತನ ಜೊತೆ ಆಗಾಗ ಚಾಟ್ ಮಾಡುತ್ತಿದ್ದೆ. ಒಂದು ದಿನ ಈ ಹುಡುಗನ ಲೇಖನಗಳ ಅಭಿಮಾನಿ ನಾನು ಎಂದು ಸಹ ಹೇಳಿಕೊಂಡಿದ್ದೆ. ಬಡವರು ಅಂದ್ರೆ ಕೇರ್ ಮಾಡದ ಅದರಲ್ಲೂ ಕೆಲವು ವರ್ಗದ ಜನರನ್ನು ಅಸಹ್ಯದಂತೆ ಕಾಣುವ ಈ ಸಮಾಜದೆದುರು “ಮುಂದಿನ ವಾರ ಇನ್ನೊಂದು ಲೈಫು” ಎನ್ನುತ್ತಾ ಕೆಲವು ಲೈಫ್ ಗಳ ಕುರಿತು ಈ ಹುಡುಗ ಬರೆಯುತ್ತಿದ್ದಾಗ ಓದಿ ಅಚ್ಚರಿಯಾಗುತ್ತಿತ್ತು. ಹೀಗೆ ಸಮಾಜದ ಅತಿ ಬಡವರ ಬದುಕನ್ನು ಹತ್ತಿರದಿಂದ ನೋಡುತ್ತಲೇ ತನ್ನ ಸಂಶೋಧನೆಗೆ ಒಂದು ಒಳ್ಳೆಯ ವಸ್ತುವೊಂದನು ಕಂಡುಕೊಂಡವನಂತೆ “ಅಲ್ಲಿ.. ಆ.. ನಾಲ್ಕನೆಯ ಹೆಣವೂ ಮಣ್ಣಾಯಿತು” ಎಂದು ಕೆಜಿಎಫ್ ನಲ್ಲಿ ಮಲದ ಗುಂಡಿ ಶುಚಿಗೊಳಿಸಲು ಹೋಗಿ ಅಸು ನೀಗಿದವರ ಕುರಿತ ಲೇಖನವೊಂದನು ಈ ಗೆಳೆಯ ಬರೆದಾಗ ಯಾಕೋ ಆ ಲೇಖನ ಓದಿ ಮನಸ್ಸು ಭಾರಗೊಂಡಿತ್ತು. ಆ ಲೇಖನ ಫೇಸ್ ಬುಕ್ ನಲ್ಲಿಯೂ, ಕೆಂಡಸಂಪಿಗೆ ಮತ್ತು ವರ್ತಮಾನ ಎಂಬ ಕನ್ನಡದ ವೆಬ್ ತಾಣಗಳಲ್ಲಿಯೂ ಪ್ರಕಟವಾಗಿತ್ತು. ಆ ನಂತರ ಕೇವಲ ಕೆಲವೇ ಮಂದಿ ಗೆಳೆಯರು ಸೇರಿ ಟೌನ್ ಹಾಲ್ ನ ಮುಂದೆ ಮಲ ಹೊರುವ ಪದ್ದತಿ ನಿಷೇದಿಸಿ ಎಂದು ಪ್ರತಿಭಟನೆ ನಡೆಸಿದ ಚಿತ್ರಗಳು ಫೇಸ್ ಬುಕ್ ನಲ್ಲಿ ಹರಿದಾಡಿದ್ದನ್ನು ನೋಡಿದ್ದ ನೆನಪು. ನಂತರ ಇಂತಹ ಪ್ರತಿಭಟನೆಗಳ ಫಲವಾಗಿ ಸರ್ಕಾರಕ್ಕೆ ಮತ್ತು ಕೆಲವು ಜಿಲ್ಲಾಧಿಕಾರಿಗಳಿಗೆ ಮಾನವ ಹಕ್ಕುಗಳ ಆಯೋಗ ನೋಟಿಸ್ ಜಾರಿಗೊಳಿಸಿದ್ದು ಈಗ ಇತಿಹಾಸ. ಒಮ್ಮೆ ಕನ್ನಡದ ವೆಬ್ ತಾಣ ವರ್ತಮಾನದಲ್ಲಿ ಕೆಜಿಎಫ್ ಸಂತ್ರಸ್ತರ ನೆರವಿಗಾಗಿ ನೀಡಿದ್ದ ಪ್ರಕಟಣೆಯೊಂದರ ತುಣುಕು ಹೀಗಿತ್ತು “ಒಪ್ಪತ್ತಿನ ಅನ್ನಕ್ಕಾಗಿ ಕಷ್ಟಪಡಿಸುತ್ತಿರುವವರಿಗೆ ನಾವು, ನೀವು ನೆರವಾಗೋಣ ಎಂಬುದು ನಮ್ಮ ಆಲೋಚನೆ. ಅವರಿಗೆ ಮುಖ್ಯವಾಗಿ ಈಗ ಬೇಕಿರುವುದು, ಅಕ್ಕಿ, ಬೇಳೆ ಹಾಗೂ ಅಡಿಗೆಗೆ ಬೇಕಾದ ಇತರೆ ಅಗತ್ಯ ಸಾಮಾಗ್ರಿಗಳು. ಸಂಗ್ರಹವಾಗುವ ಹಣದಲ್ಲಿ ಅಗತ್ಯ ವಸ್ತುಗಳನ್ನು ಕೊಂಡು ಅವರಿಗೆ ತಲುಪಿಸುವ ಹೊಣೆ ನಮ್ಮದು. ಸಂಗ್ರಹವಾಗುವ ಪ್ರತಿ ಪೈಸೆಗೂ ಲೆಕ್ಕ ಕೊಡುತ್ತೇವೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ತಾನೆ? ಅಂತೆಯೇ ನಮ್ಮ ಜೊತೆ ಕೈಜೋಡಿಸುವವರ ಹೆಸರನ್ನು ಪ್ರಕಟಿಸುತ್ತೇವೆ. ಜೊತೆಗೆ ಹಣ ನೀಡುತ್ತೇವೆ ಎಂದು ಭರವಸೆ ಕೊಡುವವರ ಹೆಸರನ್ನೂ ಮತ್ತೊಂದು ಪಟ್ಟಿಯಲ್ಲಿ ಪ್ರಕಟಿಸುತ್ತೇವೆ. ಅಂತಹವರು ತಮ್ಮ ಭರವಸೆಗಳನ್ನು ಮೇಲ್ ಮಾಡಬಹುದು”. ಹೀಗೆ ಸಾರ್ವಜನಿಕ ಅಂತರ್ಜಾಲ ತಾಣಗಳನ್ನು ಸದುಪಯೋಗಪಡಿಸಿಕೊಂಡು ಒಂದಷ್ಟು ಹಣ ಸಂಗ್ರಹಿಸಿ ಕೆಜಿಎಫ್ ನ ಸಂತ್ರಸ್ತರಿಗೆ ನೆರವಿನ ರೂಪದಲ್ಲಿ ಅಕ್ಕಿಯ ಮೂಟೆಗಳನ್ನು ನೀಡುವ ಫೋಟೋಗಳನ್ನು ವರ್ತಮಾನ ವೆಬ್ ತಾಣದಲ್ಲಿ ನೋಡಿದಾಗ ಖುಷಿಯಾಗಿತ್ತು. ಮತ್ತೊಂದು ಖುಷಿಯ ಸಂಗತಿ ಎಂದರೆ ಹಣ ಕಳುಹಿಸಲು ನೀಡಿದ್ದ ಅಕೌಂಟ್ ನಂಬರ್ ದಯಾನಂದ್ ಹೆಸರಿನಲ್ಲಿತ್ತು. ಹೀಗೆ ಒಂದೆಡೆ ಮಲ ಹೊರುವ ಪದ್ದತಿಯ ನಿರ್ಮೂಲನೆಗಾಗಿ ಈ ಹುಡುಗ ಹೋರಾಡುತ್ತಿರುವಾಗ ಈತನ ಲೇಖನಗಳು ನಮ್ಮ ರಾಜ್ಯದ ಪ್ರತಿಷ್ಟಿತ ಪತ್ರಿಕೆಗಳಲ್ಲೂ ಕಾಣಿಸಿಕೊಂಡಿವೆ ಎಂದು ಕೇಳಲ್ಪಟ್ಟಿದ್ದೆ. ಒಮ್ಮೊಮ್ಮೆ ಫೇಸ್ ಬುಕ್ ನಲ್ಲಿ ನೋಡಿದರೆ ಯಾವುದೋ ಕಾಡು ಸುತ್ತುತ್ತಲೋ, ಇಲ್ಲ ಕರ್ನಾಟಕದ ಯಾವುದೋ ಮೂಲೆಯಲ್ಲಿ ಮಲ ಹೊರುವ ಜನರ ಕಷ್ಟ ಸುಖ ವಿಚಾರಿಸುತ್ತಲೋ ಇರುತ್ತಿದ್ದ ಈ ಗೆಳೆಯ ಒಳ್ಳೆ ಜಾಲಿ ಮನುಷ್ಯ. ಫೇಸ್ ಬುಕ್ ನಲ್ಲಿ ಹುಟ್ಟು ತರಲೆಗಳ ಜಗತ್ತು ಎಂಬ ಗುಂಪಿನಲ್ಲಿ ಈತನ ಕೈ ಚಳಕದಿಂದ ಫೋಟೋ ಶಾಪ್ ಗೊಳಗಾದ ಗೆಳೆಯರ ಫೋಟೋಗಳು ನೋಡೋಕೆ ಸೂಪರ್ ಆಗಿರುತ್ತವೆ. ಇನ್ನು ಈತ ಬರೆಯುವ ಕವಿತೆಗಳು ವಿಭಿನ್ನ ರಚನೆಗಳು. ಯಾವುದೇ ರೀತಿಯ ನಮ್ಮ ರಾಜ್ಯದ ರಾಜಕೀಯ ವಿದ್ಯಮಾನಗಳನ್ನು ಕವಡೆ ಶಾಸ್ತ್ರದ ಚಿನ್ನಯ್ಯ ಎಂಬ ಹೆಸರಿನಲ್ಲಿ ಈತ ಹಾಕುವ ಫೇಸ್ ಬುಕ್ ಅಪ್ ಡೇಟ್ಸ್ ಕೆಲವರ ಮುಖದ ಮೇಲೆ ಹೊಡೆದ ಹಾಗಿರುತ್ತದೆ. ಇನ್ನೂ ಈತ ದಿನಕ್ಕೆ ಒಂದೆರಡು ಸಿನಿಮಾ ನೋಡದೆ ಮಲಗುವುದಿಲ್ಲ ಎಂದು ಈತನ ಗೆಳೆಯರು ಹೇಳಿದ್ದಿದೆ. ಕಳೆದೆರಡು ತಿಂಗಳ ಹಿಂದೆ ಬೆಂಗಳೂರಿಗೆ ಹೋದಾಗ ಈ ಗೆಳೆಯನನ್ನು ಮೀಟ್ ಮಾಡಿದಾಗ ಅದೇನೋ ವಿಡೀಯೋ ಎಡಿಟಿಂಗ್ ಮಾಡೋದರಲ್ಲಿ ಬ್ಯುಸಿ ಇದ್ದ. ಒಂದೆರಡು ಮಾತನಾಡಿದ ಹುಡುಗ ನಂತರ ಟೀ ಕುಡಿಯಲು ಹೋದಾಗ ಕೈಯಲ್ಲಿ ಟೀ ಗ್ಲಾಸ್ ಹಿಡಿದು ಸಿಗರೇಟು ಸೇದುತ್ತಾ ಮೊಬೈಲ್ ನಲ್ಲಿ ಬ್ಯುಸಿಯಾಗಿದ್ದ. ಯಾರ ಜೊತೆ ಅನ್ನೋದು ಮಾತ್ರ ಅವನ ಗೆಳೆಯರಿಗಷ್ಟೇ ಗೊತ್ತು. :)) ಇಂತಹ ಬಹುಮುಖ ಪ್ರತಿಭೆಯ ಹುಡುಗನನ್ನು ದೂರದಿಂದಲೇ ನೋಡುತ್ತಾ ಖುಷಿಪಡುತ್ತಿದ್ದ ನಾನು ಮೊನ್ನೆ ಯಾಕೋ ಇದ್ದಕ್ಕಿದ್ದ ಹಾಗೆ ಈತನ ಮೇಲೆ ಒಂಚೂರು ಹೊಟ್ಟೆಕಿಚ್ಚಿಗೆ ಬಿದ್ದಿದ್ದೆ. ಯಾಕೆಂದರೆ ಗೆಳೆಯ ರಾಘವೇಂದ್ರ ತೆಕ್ಕಾರ್ ಫೇಸ್ ಬುಕ್ ನಲ್ಲಿ ತನ್ನ ವಾಲ್ ಮೇಲೆ “ಮಲ ಹೊರುವ ಪದ್ದತಿಯ ವಿರುದ್ದ ಸುಧೀರ್ಘ ಹೋರಾಟವನ್ನು ನಡೆಸುತ್ತಾ ಬಂದಿರುವ ಗೆಳೆಯ ಪತ್ರಕರ್ತ ಸಂಶೋಧಕ ದಯಾನಂದ್ ಟಿ ಕೆ ಅವರು ಪ್ರತಿಷ್ಟಿತ ಪಿ.ಸಾಯಿನಾಥ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ” ಎಂದು ಸ್ಟೇಟಸ್ ಹಾಕಿಕೊಂಡಿದ್ದರು. ಒಂದಲ್ಲಾ ಒಂದಿನ ಈ ಹುಡುಗ ಯಾವುದಾದರೂ ಪ್ರಶಸ್ತಿ ಸಿಕ್ಕೇ ಸಿಗುತ್ತೆ ಎಂದು ನಾನು ಊಹಿಸಿದ್ದು ಈಗ ನಿಜವಾಗಿತ್ತು. ನನ್ನ ಹೊಟ್ಟೆಕಿಚ್ಚನ್ನು ಪಕ್ಕಕ್ಕಿಟ್ಟು ನನ್ನ ನೆಚ್ಚಿನ ಲೇಖಕರಲ್ಲೊಬ್ಬರಾದ ದಯಾನಂದ್ ಗೆ ಈ ಲೇಖನದ ಮೂಲಕ ಹೀಗೊಂದು ಅಭಿನಂದನೆಯನ್ನು ತಿಳಿಸಬೇಕೆನಿಸಿತು. ಅಭಿನಂದನೆಗಳು ದಯಾನಂದ್. ಶುಭವಾಗಲಿ. ಸಹೃದಯಿ ಗೆಳೆಯರೇ, ಗೆಳೆಯ ದಯಾನಂದರ ಕವಿತೆಗಳನ್ನು ನೀವು ಬಹುಶಃ ಓದಿರಲಾರಿರಿ.. ದಯಾನಂದ್ ರವರ ಅವ್ವ ಎಂಬ ಕವಿತೆಯನು ಈ ಕೆಳಗೆ ನೀಡಿರುವೆ. ಖುಷಿಯಾಗಿ ಓದಿಕೊಳ್ಳಿ. ಹಾಗೆಯೇ ಯಾರಿಗೂ ಹೆಚ್ಚು ಗೊತ್ತಿಲ್ಲದ ದಯಾನಂದ್ ರವರ ಬ್ಲಾಗಿನ ಲಿಂಕ್ ಸಹ ಕೆಳಗೆ ನೀಡಲಾಗಿದೆ. ಸಮಯವಿದ್ದಾಗ ಒಮ್ಮೆ ಕಣ್ಣಾಡಿಸಿ.. ಅವ್ವ. ಭೂಮಿಗೂ ಮೋಡಕೂ ನಡುವೆ ಹರಿದ ಸೆರಗನ್ನೇ ಇನ್ನೊಂದಷ್ಟು ತುಂಡರಿಸಿ ಪರದೆ ಕಟ್ಟಿದ ಜೀವ ಇವಳು. ನೇಗಿಲಿನ ನಾಲಿಗೆಗೆ ನೆಲ ಚೂರಾದ ಹೊತ್ತು ಒಡಲ ಬೀಜಗಳನ್ನೇ ನೆಲದೊಳಗೆ ಅವಿತಿಡುತ್ತ ಇನ್ನಾವಾಗಲೋ ಮೊಳೆಯುವ ಭತ್ತವನ್ನು ಧೇನಿಸಿದವಳು. ಎಲೆಯಡಿಕೆಯ ಚೀಲದೊಳಗೆ ಬದುಕನ್ನೇ ಮಡಚಿಟ್ಟ ಮಾಯದಂಥ ಜೀವದ ಹೊಗೆಸೊಪ್ಪಿನ ಘಾಟೂ, ಊದುವ ಒಲೆಯ ಹೊಗೆಯೂ ಏಕತ್ರಗೊಂಡ ಚಣದಲ್ಲೇ ಗಂಜಿ ಬೇಯಿಸುವ ಜೀವ. ಮೇಲೆ ರವರವನೆ ಉರಿಯೋ ಚೆಂಡನ್ನೇ ರೆಪ್ಪೆಯೊಳಗೆ ಅವಿತಿಟ್ಟ ಈ ಜೀವ.. ನನಗೆ ಕೊಟ್ಟಿದ್ದು ಹಿಡಿ ಉಸಿರಿನ ಸಾಲ, ಯಾವತ್ತೂ ಕರೆ ತಾಗದ ಈ ಅಬೋಧ ಜೀವಕ್ಕೆ ಬಣ್ಣಬಳಿದ ಮಾತುಗಳ್ಯಾವೂ ಬೇಕಿರದೆ ನನ್ನ ನೆದರಿಗೆ ಅಂಟಿಕೊಂಡಿದ್ದು ಎರಡೇ ಪದವು, ಹರವಿ ಹೇಳುವುದಾರೆ.. ಅವ್ವ.   ದಯಾನಂದರವರ ಬ್ಲಾಗಿನ ಲಿಂಕ್ ಈ ಕೆಳಗಿನಂತಿದೆ.. http://vishwapata.blogspot.in/  ]]>

‍ಲೇಖಕರು G

June 30, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

6 ಪ್ರತಿಕ್ರಿಯೆಗಳು

 1. ಪುಷ್ಪರಾಜ್ ಚೌಟ, ಬೆಂಗಳೂರು

  ಅಭಿನಂದನೆಗಳು ನಿಮಗೂ, ಹಾಗೂ ಪ್ರಶಸ್ತಿಗೆ ಭಾಜನರಾದ ಶ್ರೀಯುತ ದಯಾನಂದ ಟಿ.ಕೆ ಅವರಿಗೂ. ಅವರ ಹೋರಾಟ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ನಿರಂತರವಾಗಿರಲಿ ಎಂಬುದೇ ನಮ್ಮ ಆಶಯ.

  ಪ್ರತಿಕ್ರಿಯೆ
 2. Prasad V Murthy

  ಶುಭ ಕಾಮನೆಗಳು ದಯಾನಂದ.ಟಿ.ಕೆ. ಯವರಿಗೆ.. ಅವರ ಹೋರಾಟ ನಿರಂತರವಾಗಿರಲಿ ಎಂಬ ಆಶಯದೊಂದಿಗೆ..

  ಪ್ರತಿಕ್ರಿಯೆ
 3. ವಸಂತ

  ನಾನು ಕೂಡ ದಯಾನಂದರವರ ಲೇಖನಗಳನ್ನು ಕೆಂಡಸಂಪಿಗೆ ಮತ್ತು ಸಂಪಾದಕೀಯ ಬ್ಲಾಗ್ ಗಳಲ್ಲಿ ಓದಿ ಅವರ ಸೂಕ್ಷ್ಮ ಸಮಾಜಮುಖಿ ಚಿಂತನೆಗೆ ಮನಸೋತಿದ್ದೆನೆ. ಈ ಬಹುಮಾನ ಅಹ೵ರಿಗಿ ದೊರೆತಿದೆ.

  ಪ್ರತಿಕ್ರಿಯೆ
 4. ಎಚ್. ಸುಂದರ ರಾವ್

  ಪ್ರಶಸ್ತಿ ಬಂತ? ಎಚ್ಚರಿಕೆ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: